Monday, January 17, 2011

ಮೋಂಬತ್ತಿಯ ಬೆಳಕಲ್ಲಿ...

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ ಮನ ವಿಭ್ರಾಂತ....
ಸುಮ್ಮನೆ ಗುನುಗಿಕೊಳ್ಳುತ್ತಾ..ಹೊಸ್ತಿಲ ಮೇಲೆ ನಿಂತಿದ್ದೆ...ತುಳಸಿ ಕಟ್ಟೆಯ ಮೇಲೆ ಹಚ್ಚಿದ ದೀಪ.ಗಾಳಿಯೊಂದಿಗೆ ''ನಾನೂ ಸರಸಿ ನೀನು ಅರಸ,,'' ಎಂದು ಹಾಡಿಕೊಳ್ಳುತ್ತಿರಬಹುದ???ಅನ್ನೋ ಯೋಚನೆ...ಮನೆಯೊಳಗೇ ಗವ್ವೆನ್ನುವ ಮೌನ...ಹೊರಗೆ ...ಗಾಳಿಯ ಸದ್ದಾದರೂ ಇದೆಯಲ್ಲ....ಹೆಚ್ಹು ಹೊತ್ತು ಹೊಸ್ತಿಲ ಮೇಲೆ ಹೆಣ್ಣುಮಕ್ಕಳು ನಿಲ್ಲುವಂತಿಲ್ಲ..ಮುಸ್ಸಂಜೆಯಲ್ಲಿ....ಹಾಗೆಂದು ಅಜ್ಜಿ ಹೇಳಿದ್ದು...ನಡುಮನೆಯ ಗೋಡೆಗಡಿಯಾರ ೧೨ ಹೊಡೆದಾಗ ಬಡಿದುಕೊಳ್ಳುವಂತೆ ನನ್ ಮನಸಲ್ಲೂ ಸದ್ದು....
ಒಳಗೆ ಬಂದೆ...ಮುಸ್ಸಂಜೆ ಸಮಯ ಕದವನ್ನು ಹಾಕುವಂತಿಲ್ಲ...ಲಕ್ಸ್ಖ್ಮಿ ಒಳಬರುವ ಹೊತ್ತು...
''ಯಾಕೆ ಅಲ್ಲೇ  ನಿಂತಿದ್ದಿ ಒಳಬಂದು ನನ್ನೊಂದಿಗಾದ್ರು  ಮಾತಾಡಬಾರದ'''???
ಯಾರು??ಯಾರದು,,??
''ನಾನು ಮೊಂಬತ್ತಿ..''
ನನ್ನ ಏಕಾಂತ ನೋಡಿ ಅದಕ್ಕೂ ಕಿರಿ ಕಿರಿ ಆಗಿರಬೇಕು...''ನಿನ್ನೊಂದಿಗೇನು ಮಾತು??''ಅನ್ನುವ ಧಿಮಾಕು ನನ್ನದು...
''ನಿನ್ನ ಒಳದಳಲ ನಾನಲ್ಲದೇ ಇನ್ಯಾರು ತಿಳಿದಾರು ಹುಡುಗಿ ಬಾ ನಿನಗೆ ಸಮಾಧಾನ ಹೇಳುವೆ..''
''ನಿನ್ನ ಹತ್ತಿರ ಏನು ಹಂಚಿ ಕೊಳ್ಳಲಿ..??ಇನ್ನೆರಡು ಘಂಟೆ ಅಷ್ಟೇ ನಿನ್ನ ಆಯಸ್ಸು ..ನಂತರ ಮತ್ತೆ ನಾನೊಬ್ಬಳೆ ನನ್ನ ಏಕಾಂತದೊಡನೆ...''
''ನಿನೋಬ್ಬಳೆ???ನಿನ್ನ ಏಕಾಂತದೊಂದಿಗೆ??ಏಕಾಂತದೊಡನೆ  ಸಖ್ಯ ಎಲ್ಲರಿಗು ಸಾಧ್ಯವಾಗದು ಹುಡುಗಿ.ಏಕಾಂತ ನಿನ್ನೊಂದಿಗೆ ಇರುವಾಗ  ನೀ ಹೇಗೆ ಒಬ್ಬಳೇ ಆದಿಯ??ನಿನ್ನೊಂದಿಗೆ ನಿನ್ನ ದಿವ್ಯ ಏಕಾಂತವಿದೆ...''
ಆದರೆ ಅದಕ್ಕೆ ಜೀವವಿಲ್ಲ..ಅದು ನನ್ನೊಡನೆ ಮಾತಾಡುವುದಿಲ್ಲ...ನನಗೇ ಮಾತಾಡಬೇಕು..ಮೌನದ ಸಿಂಪಿಯಿಂದ ಮಾತೆಂಬ ಮುತ್ತುಗಳನ್ನು  ಚಲ್ಲಬೇಕು..ಅದನ್ನಾರಿಸುವ ಒಬ್ಬ ಸಂಗಾತಿ ಬೇಕು..ಅದನ್ನು ಸುರಿದು..ಪೋಣಿಸುವ ಜೊತೆಗಾರ ಬೇಕು...ನಿನ್ನ ಏಕಾಂತಕ್ಕಿದು ಸಾಧ್ಯವೇ??
''ಸಾಧ್ಯ...ಆದರೆ ಏಕಾಂತದ ದಿವ್ಯ ಮೌನದ ಮಧುರ ನಾದವನ್ನು ಆಲಿಸಲು ನಿನಗೆ ಸಾಧ್ಯವೇ ಹುಡುಗಿ??''
ಮೌನದ ನಾದ??ಅದು ಮೌನ ಅದನ್ನಾಲಿಸುವುದು  ಹೇಗೆ ??
ಮೊಂಬತ್ತಿಯ ಮೌನ .....
ಯಾಕೆ ಮೌನ...ಏನಾದ್ರು ಮಾತಾಡು... ಈಗಾದ್ರು ಸಮಾಧಾನ ಎಂದೆ. ಮತ್ತೆ ಮಾತಾಡದೆ..ಸುಮ್ಮನ್ನಿದ್ದಿ...ನೋಡು ಹೇಳಬೇಕಾದ್ದನ್ನು ಹೇಳಿಬಿಡು...ನಿನ್ನರ್ಧ ಜೀವ ಕರಗಿ ಹೋಗಿದೆ...ನೀ ಪೂರ್ತಿ ಮುಗಿದು ಹೋಗುವ ಮುನ್ನ ನನ್ನ ಮತ್ತು ಈ ಏಕಾಂತದ  ಸಖ್ಯ ಮಾಡಿಸಿ ಹೋಗು...ಕೇಳುತ್ತಿರುವೆಯ????ಏ ಮೊಂಬತ್ತಿ...
ಹ್ಮ್ಮ್ಮ್...ಕೇಳಿಸಿಕೊಂಡೆ...ನೋಡು ನನ್ನ ಮೌನವನ್ನ ನೀನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು..???
ಹಾಗೆಂದರೆ ಏನರ್ಥ...??
ಕತ್ತಲೆ..ಮತ್ತು ಬೆಳಕಿಗಿರುವುದು ನಿನ್ನ ಕಣ್ಣು ರೆಪ್ಪೆಯ ಅಂತರ..ಅಷ್ಟೇ...ರೆಪ್ಪೆ ಮುಚ್ಚಿತ್ತಿದ್ದಿ ಅಂದರೆ..ಜಗವೆಲ್ಲ ಜಗಮಗಿಸುತ್ತಿದ್ದರು..ನಿನ್ನ ಕಣ್ಣಲ್ಲಿ ಬರಿ ಕತ್ತಲೆ....ರೆಪ್ಪೆ ತೆರೆದರೆ ಮತ್ತೆ ನೀ ಆ ಬೆಳಕಿಗೆ..
ಬೆಳಕೆಂದರೆ ಬರಿ ಕಣ್ಣಿಗೆ ಕಾಣುವ ಬೆಳಕಲ್ಲ...ನಿನ್ನಾತ್ಮದ  ಬೆಳಕು...ಕೇಳು ಹುಡುಗಿ ನಿನ್ನೊಳಗಿನ ಆ ದಿವ್ಯ ಏಕಾಂತದ ಬೆಳಕು...ಅದನ್ನು ಹುಡುಕು...ಆ ಏಕಾಂತದೊಡನೆ ಮಾತಾಡು..ಅಲ್ಲಿ ಪ್ರಶ್ನೆಯು ನೀನೆ ಉತ್ತರವೂ ನೀನೆ...ಮತ್ತೇಕೆ ಸಂಗಾತಿಯ ಹಂಬಲ...????
ನಿನ್ನೊಳಗಿನ ನೀನು ನಿನಗೆ ಸಿಗುವತನಕ...ಈ ಸಂಜೆಗಳ ಇಳಿಗತ್ತಲೆಯು ನಿನ್ನ ಪಾಲಿನ ಬೆಳದಿಂಗಳಗುವತನಕ.....ಮ...ತ್ತೆ.......

ಕಣ್ಣು ಮುಚ್ಚಿ ಮೋಂಬತ್ತಿಯ ಮಾತನ್ನು ಆಲಿಸುತ್ತಿದ್ದ ನನಗೇ..ಮತ್ತೆ ಏಕಾಂತ..ಕಣ್ಣು ತೆರೆದರೆ ಕತ್ತಲೆ...ಬತ್ತಿ ಆರಿಹೋದ ವಾಸನೆ....ಮತ್ತೆ ನಾ ಕೊರಗಲಿಲ್ಲ...ಮೊಂಬತ್ತಿ ನನ್ನ ಬಿಟ್ಟು ಹೋಗಿದ್ದಕ್ಕೆ...ನನ್ನೊಳಗಿನ ನಾನು ನನಗೇ ಸಿಗುವ ತನಕ....
ಈಗ...ಕುವೆಂಪು ಬರೆದ ಗೀತೆ...ನನ್ನ ಏಕಾಂತವನ್ನಳುತ್ತಿತ್ತು..
ಅಂತರತಮ ನೀ ಗುರು ..ನೀ  ಆತ್ಮ ತಮೋಹಾರಿ ....
ಹೀಗಿತ್ತು ಮೊಂಬತ್ತಿ ಒಡನೊಂದು ಏಕಾಂತದ ಸಂಜೆ...

Wednesday, January 12, 2011

ಉತ್ಸಾಹದ ಮೂಟೆ ಹೊತ್ತು ತರುವ ಹಬ್ಬಗಳೆಲ್ಲಿ ಹೋದವು???

ನಾಳೆ ಅಲ್ಲ ನಾಡಿದ್ದು ಮಕರ ಸಂಕ್ರಮಣ....ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ ಅಂತ ಕುಸುರೆಳ್ಳನ್ನು ಕೊಟ್ಟು ಹಿರಿಯರಿಗೆ ಕಾಲಿಗೊಂದು ಉದ್ದಂಡ ನಮಸ್ಕಾರ ಹಾಕಿ ಹೊಸ ಬಟ್ಟೆ ಯಾ ಜರ ಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ  ಸಂಕ್ರಮಣಗಳು ,ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು...ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ...ಅವರಿವರ ವಿಷಯ ಯಾಕೆ ??ನಾನೆ  ಅಮ್ಮನ ರೇಷ್ಮೆ ಸೀರೆ ಹರಿದು ಅದನ್ನು ಲಂಗ ಮಾಡಿ   ಅದಕ್ಕೊಂದು ಪುಟ್ಟ ಸೀರೆ ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು...ಮನೆ ಮನೆಗೆ ಎಳ್ಳು ಹಂಚೋಕೆ ಹೋಗುವ ಸಂಭ್ರಮವನ್ನ ಮನಸ್ಪೂರ್ತಿ ಅನುಭವಿಸಿದ್ದೇನೆ...


ಸಂಕ್ರಾಂತಿ  ಹಬ್ಬ  ಬರುವ ೨ ತಿಂಗಳು ಮುಂಚಿನಿಂದಲೇ  ನಮ್ಮ ತಯಾರಿ ಶುರು ...ಅಂಥದ್ದೇನು  ತಯಾರಿ ಅಂದಿರಾ????ಆಗ ನಾವು ಮಾರುಕಟ್ಟೆಯಲ್ಲಿ ಸಿಗುವ  ಸಕ್ಕರೆ ಗುಳಿಗೆಗಳನ್ನು ತರುತ್ತಿರಲಿಲ್ಲ...ಮನೆಯಲ್ಲೇ  ಎಳ್ಳು ತಯಾರಿಸುತ್ತಿದ್ದೆವು...ಸಕ್ಕರೆಪಾಕ ವನ್ನು ೭ ಬಾರಿ ಸೋಸಿ -ಕಾಸಿ  ಅದಕ್ಕೆ ನಿಂಬೆ ಹಣ್ಣು ಹಿಂಡಿ ಸುಧಾರಸ ಎಂಬ ಪಾಕ ತಯಾರಿಸಿ...ಎಳ್ಳು,ಗೋಡಂಬಿ ಬೀಜ,ಕುಂಬಳ ಬೀಜದ ಒಳತಿರುಳು,ಜೀರಿಗೆ,ಬಡೆಸೋಪು,ಲವಂಗ ,ಶೇಂಗ,ಪುಟಾಣಿ.ಹೀಗೆ ಎಲ್ಲವನ್ನು ಒಂದು ಹರಿವಾಣದಲ್ಲಿ ಹಾಕಿ  ಕೆಂಡ ಹಾಕಿದ ಶೇಗಡಿ ಮೇಲೆ ಆ ಹರಿವಾಣ ಇಟ್ಟು,,,ಒಂದೆರಡು ಚಮಚ ಸುಧಾರಸ ಹಾಕಿ ...ಮೆತ್ತಗೆ ಕೈ ಆಡಿಸಬೇಕು...ಅದು ನಸುಕಿನಲ್ಲಿ ಎದ್ದು..ಏಕೆಂದರೆ ಛಳಿ ಬಿದ್ದಷ್ಟು ಎಳ್ಳಿನ ಮೇಲೆ ಸಕ್ಕರೆ ಮುಳ್ಳುಗಳು ಏಳುತ್ತವೆ...ಅದಕ್ಕೆ ಸೂರ್ಯನ ದರ್ಶನ ಆಗಬರದಂತೆ......


ಇನ್ನೇನು ಜನೆವರಿ ತಿಂಗಳ ೧೫ ಬಂದೆ ಬಿಡ್ತು ....ಅನ್ನೋ ಹೊತ್ತಿಗೆ ಈ ಎಳ್ಳುಗಳು ಬಿಳಿ ಬಿಳಿ ಅರಳು ಮಲ್ಲಿಗೆಯ ನಗುವನ್ನು ಶೆಗಡಿಯ ಬಿಸಿಯಲ್ಲೇ  ನಗುತ್ತವೆ...ನಂತರದ್ದು ಅದನ್ನು ಎಲ್ಲಾ ಬಂಧು ಬಾಂಧವರಿಗೆ  ಕಳಿಸುವ ಕಾರ್ಯಕ್ರಮ..ಕಾಮತ್ ಮಾಮನ ಅಂಗಡಿಗೆ ಹೋಗಿ...ಚಂದದ ಗ್ರೀಟಿಂಗ್ ತಂದು ಅಥವಾ ಎಷ್ಟೋ ದಿನಗಳಿಂದ ಪುಸ್ತಕದಲ್ಲಿ ಒಣಗಿಸಿಟ್ಟ ಗುಲ್ಮೊಹರ್ ,ಹೂವು ,ಎಳೆಗಳು ಗುಲಾಬಿ ಪಕಳೆಗಳನ್ನು ಬಳಸಿ ಆಸ್ಥೆ ಯಿಂದ ಗ್ರೀಟಿಂಗ್ ತಯಾರಿಸಿ...ಅಲ್ಲಿ  ಇಲ್ಲಿಂದ ಕದ್ದು ಕೆಲ ಸಾಲುಗಳನ್ನು ಬರೆದು...ತಯಾರಿಸಿದ ಎಳ್ಳು ಹಾಕಿ...ಅಂಚೆ ಪೆಟ್ಟಿಗೆಗೆ ಹಾಕಿದರೆ ಏನೋ ಒಂದು ದೊಡ್ಡ ಸಮಾಧಾನ...ಕೆಲವೊಮ್ಮೆ ಸ್ಟಾಂಪ್ ಮರೆತು ಗ್ರೀಟಿಂಗ್ಸ್ ನನಗೇ ವಾಪಾಸ್ ಸಿಕ್ಕಿದ್ದೂ ಉಂಟು...
ಸಂಕ್ರಾಂತಿಯದಿನ ಅದು ನಮ್ಮದೇ ದಿನ...ಆ ದಿನ ಆಬ್ಲಿಗೆ...ಅಂದರೆ ಕನಕಾಂಬರ ಹೂ ಮುಡಿಯಲೆಬೇಕಂತೆ,,,ಅದು ಆ ಹೊತ್ತಿಗೆ ಅರಳುವ ಹೂವು...ನಮ್ಮಕಡೆ ಪ್ರತಿ ಮನೆಯಲ್ಲೂ ಮಾರು..ಅಲ್ಲದಿದ್ದರೂ ಮೊಳ  ಅಬ್ಬಲಿಗೆ  ಸಿಕ್ಕೆಸಿಗುತ್ತೆ...ಅದಲ್ಲದಿದ್ದರು...ಆಡುಸೋಗೆ  ಹೂವು ಅಬ್ಬಲಿಗೆಯಂತೆ ಕಾಣುವ ಬಿಳಿ ಹೂ ..ಅದನ್ನು ನನ್ನ ಸೋದರತ್ತೆ ಅಕ್ಕರೆಯಿಂದ ದಂಡೆ ಕಟ್ಟಿ ನನ್ನ ನಾಗರ ಜಡೆಗೆ  ಮುಡಿಸಿ...ಸಿಂಗಾರ 
ಮಾಡುತ್ತಿದ್ದನ್ನು ಮರೆಯಲಾದೀತೇ..??ನಂತರ ಮನೆ ಮನೆ ತಿರುಗಾಡಿ ...ಪುಟ್ಟ ಸ್ಟೀಲ್ ಡಬ್ಬಿ ಖಾಲಿ ಆಗುತ್ತೇನೋ ಅನ್ನೋ ಭಯದಲ್ಲೇ..ನಾಲ್ಕೇ ಕಾಳು  ಕೊಟ್ಟು ನನ್ನ ಡಬ್ಬಿ ,ನಿನ್ನ ಡಬ್ಬಿ ಅಂತ ತಂಗಿ ನಾನೂ ಜಗಳ ಮಾಡುತ್ತ ..ರಸ್ತೆಲೇ ಮಾತು ಬಿಟ್ಟು...ಮತ್ತು ದೋಸ್ತಿ ನೂ ಆಗಿ ಮನೆಗೆ ಮರಳುತ್ತಿದ್ದ ದೃಶ್ಯ...ಇವತ್ತಿಗೂ ನಿಚ್ಚಳ .......
ಮತ್ತೊಂದು ವಿಶೇಷ  ಅಂದ್ರೆ ಸಂಕ್ರಾಂತಿಯ ಜಾತ್ರೆಗಳು....ನಮ್ಮೂರಿಂದ  ೫-೬ ಮೈಲಿ ದೂರ ಇರೋ ಸಾಲಗಾಂವಿ ಯಲ್ಲಿ ಬಾಣನ್ತೆವ್ವ ದೇವಿ ಯಾ ಜಾತ್ರೆ,ದನಗಳ ಸಂತೆ  ಆಗುತ್ತೆ ...ಅಲ್ಲಿ ಮಾವಿನ ತೋಪಿನ ನಡುವೆ  ಅಂಗಡಿ ಗಳು ...ಎಷ್ಟ್ ಚಂದ...ಅಲ್ಲೇ ಊಟ ಕಟ್ಟಿಕೊಂಡು ಹೆಗೆಡೆರ್ ಅಡಿಕೆ ತೋಟದಲ್ಲಿ  ಕೂತು ಊಟ ಮುಗಿಸಿ...ಜೋಕಾಲಿ..ಮಿರ್ಚಿ ಭಜಿ ,,,ಕಬ್ಬಿನಹಾಲು ,,,ಮಂಡಕ್ಕಿ ಖಾರದಾಣಿ. ತಂದು ಒಂದಷ್ಟನ್ನು ಕಟ್ಟಿಸಿ ಕೊಂಡು ಬಂದರೆ...ಇನ್ನೊಂದ್ ಜಾತ್ರೆ ಬರೋತನ್ಕ ಅದರ ಉಮೇದಿ ಜಾರಿಯಲ್ಲಿರುತ್ತೆ,,,,ಮತ್ತು ಎಷ್ಟೋ ''ಚಾಳಿ ಟೂ ''ಗಳು ಮತ್ತೆ ಗೆಳೆತನ ವಾಗಿ ಮಾರ್ಪಡುವ ಸದವಕಾಶ ಈ ಹಬ್ಬದಲ್ಲಿ  ಬಹಳ ....
ಹೈಸ್ಕೂಲು ಮುಗಿಯೋ ಹೊತ್ತಿಗೆ  ಈ ಜಾತ್ರೆ ಗೆ ಹೋಗೋ ಉತ್ಸಾಹ  ಕಡಿಮೆ ಆಗುತ್ತ  ಬಂತು ..ಅದಕ್ಕೆ ಕಾರಣ ..ಮತ್ತೆ ಯಾವತ್ತಾದ್ರು ವಿವರಿಸ್ತೀನಿ..........ಕಾಲೇಜ್ ಗಳಲ್ಲಂತು ಇಲ್ಲವೇ ಇಲ್ಲ ಅನ್ನೋಷ್ಟು ಕಡಿಮೆ ಎಳ್ಳು,ಕಡಿಮೆ ತಿರುಗಾಟ ,,ಅಬ್ಬಲಿಗೆ  ಮುಡಿದದ್ದು ಕಡಿಮೆಯೇ...
ಹಾ ಮರೆತೇ  ಬೆಳಗಾವಿ,,,ಸೋಲ್ಹಪುರ್  ಗಳಲ್ಲಿ ಮಕ್ಕಳಿಗೆ ಬೊರೆ ಹಣ್ಣು ಮಂಡಕ್ಕಿಯ ಸ್ನಾನ ಮಾಡಿಸಲಾಗುತ್ತೆ...ಸಂಜೆಗೆ ಆರತಿ ಮಾಡುವುದು ಇದೆಯಂತೆ...ಇದು ನನ್ನ ಅತ್ತೆಯ ತವರುಮನೆಯ ನೆನಪಿಂದ ಹೆಕ್ಕಿದ್ದು...
ಆದರೆ ಈಗ ಈ ಉತ್ಸಾಹ ಇಲ್ಲ....ನನಗೇ ಇಲ್ಲವೋ??ನನ್ನ ವಾರಗೆಯವರೆಲ್ಲರಿಗೆ ಹೀಗೆಯೋ??ಅಥವಾ ಈಗಿನ ದಿನಮಾನದ ಮಕ್ಕಳಲ್ಲಿ ಈ ಹಬ್ಬಗಳ ಬಗ್ಗೆ ಆಕರ್ಷಣೆ ಕಡಿಮೆ ಆಗಿದೆಯೋ ಗೊತ್ತಿಲ್ಲ...ಒಟ್ಟಿನಲ್ಲಿ ಸಂಕ್ರಮಣ ವೆ ಏಕೆ ಯಾವ ಹಬ್ಬಗಳಲ್ಲೂ ಮೊದಲಿನ ಸ್ವಾರಸ್ಯ ಇಲ್ಲ ಅನಿಸುತ್ತೆ ..ನಾವು ದೊಡ್ಡವರಾಗಿ ಬಿಟ್ವ???ಅಥವ ನಮ್ಮ ಮಕ್ಕಳಿಗೆ ಈ ಹಬ್ಬಗಳ  ನಿಜವಾದ ರುಚಿಯನ್ನು ಉಣಿಸಲು ವಿಫಲವಾದೆವ  ಗೊತ್ತಿಲ್ಲ...ಯಾಕೋ ನೀರಸ  ಅನ್ನೋ ವಂಥ ವಾತಾವರಣ...
ನನಗನಿಸಿದ ಮಟ್ಟಿಗೆ ..ಶಹರದ ಗಾಳಿ ಬಹು ಜೋರಾಗೆ ಬೀಸಿದೆ...ಮೊದಲಿನವರ ತಾಳ್ಮೆ,ಸಹನೆ ,ಇರದು ನಮ್ಮಲ್ಲಿಲ್ಲ...ಹಬ್ಬಗಳೆಂದರೆ ನಮ್ಮ ಮನಸಿಗೆ ಬರುವುದು ಎರಡೇ ವಿಷಯ,,,೧)ಹಬ್ಬ ಯಾವ ವಾರ ಬಂದಿದೆ...(ಇದು ಸರದಿ ರಜೆಗಾಗಿ )....೨)ಈ ಬಾರಿಯ ರಜೆಯಲ್ಲಿ ಯಾವ ಬಾಕಿ ಕೆಲಸ ಪೂರೈಸ ಬಹುದು ಅಥವಾ ಎಷ್ಟು ವಿರಮಿಸ ಬಹುದು...
ಹೀಗೆ  ಮುಂದುವರಿದರೆ...ಒಂದು ದಿನ  ನಮ್ಮ ಹಬ್ಬಗಳು ಕೇವಲ ಕ್ಯಾಲೆಂಡರ್  ನಲ್ಲಿ ಕೆಂಪು ಅಕ್ಷರವಾಗಿ ಉಳಿದು ಹೋಗುತ್ತೇನೋ...ಅಲ್ಲವೆ??.....ಹೊಸವರ್ಷದ ಮೊದಲ ಪೋಸ್ಟ್ ಇದು...೧೨ ದಿನಗಳ ನಂತರ ..ಈ ಬಾರಿಯಾದರೂ ಆಲಸ್ಯದ ಸೂತಕ ತೊಳೆದು ಹೋಗಿದೆ ಅನ್ಕೋತೀನಿ....
ಬ್ಲಾಗ್  ಸ್ನೇಹಿತರೆಲ್ಲರಿಗೂ ಸಂಕ್ರಮಣದ  ಶುಭಾಶಯಗಳು,,,,