Saturday, April 30, 2011

ಎಲ್ಲಿ ಹೋದವು ಆ ವೈಶಾಖದ ದಿನಗಳು …..

ಶಿವರಾತ್ರಿ ಮುಗಿಯೇತೆಂದರೆ ಸಾಕು…ಪರೀಕ್ಷೆ ತಯಾರಿಗಳು ಆರಂಭ ವಾಗುತ್ತಿದ್ದವು ಮತ್ತೇನು ಬಂದೆ ಬಿಡ್ತು ಯುಗಾದಿ …ಕೆಲವೊಮ್ಮೆ ಎಪ್ರಿಲ್  ೧೦ ರ ನಂತರ ಕೆಲವೊಮ್ಮೆ ಅದಕ್ಕಿಂತ ಮುಂಚೆ…ಸರಿ ಈಗ ಅಜ್ಜಿ ಮನೆ ಪ್ರವಾಸಕಕ್ಕೆ ತಯಾರಿ ಶುರು…
ಅಜ್ಜಿ ಮನೆಯಲ್ಲಿ ಇಗ ಮರದ ತುಂಬಾ ಮಾವು ಹಲಸು,ಅಜ್ಜನ ಕಿಟಿಪಿಟಿ ಒಂದನ್ನು ಬಿಟ್ಟರೆ ….ಅಜ್ಜಿ ಮನೆ ಎಂಬುದು ಅಧ್ಭುತ ಮಾಯಾಲೋಕ…ನನ್ನ ಎಲ್ಲಾ ಅಕ್ಕ ಅಣ್ಣಂದಿರು…ಅಲ್ಲಿ ಬಂದಿರುತ್ತಿದ್ದರು…ಎಲ್ಲಾ ಸೇರಿ ಆ ಎರಡು ತಿಂಗಳು ..ಖುಷಿಯನ್ನು ಲೂಟಿ ಮಾಡುತ್ತಿದ್ದೆವು…ಅದೂ ಮೇ …..ತಿಂಗಳು ಮದುವೆ, ಮುಂಜಿ, ಚೌಲ ….ಒಂದೇ ಎರಡೇ…ಅಜ್ಜಿ ಜೊತೆಗೆ ಹೋಗಲು ನಾ ಮುಂದು ನೀ ಮುಂದು ಎಂದು ಲಡಾಯಿ..ಮಾಡುತ್ತಿದ್ದ ಆ ದಿನಗಳು…
ಅಜ್ಜನಿಗೆ ಮಕ್ಕಳೆಂದರೆ ಅಷ್ಟಕ್ಕಷ್ಟೇ…ಆತ ಯಾವತ್ತೂ ಮೊಮ್ಮೊಕ್ಕಳಿಗೆ ಸಲಿಗೆ ಕೊಟ್ಟಿರಲಿಲ್ಲ…ನಮಗೂ ಅವ ದೊಡ್ಡ ಪ್ರತಿಸ್ಪರ್ಧಿಯಂತೆ… ಭಾಸವಾಗುತ್ತಿದ್ದ …ಬೇಕಂತಲೇ ಅವನಿಗೆ ತೊಂದರೆ ಕೊಡುತ್ತಿದ್ದೆವು…ಆ ದಿನ ಬಾಯಿರಿಗಳ ಮನೆತನಕ ಶಾರ್ಟ್ ಕಟ್ನಲ್ಲಿ ಹೋಗಲು ಹೋಗಿ ಮರದ ಬೇರಿಗೆ ಎಡವಿ ಮೂತಿ ಚಚ್ಚಿ ಕೊಂಡು ಆಸ್ಪತ್ರೆ ಸೇರಿದ ಅಜ್ಜ…ಇನ್ನೆರಡು ದಿನ ಬಿಟ್ಟು ಬರಲಿ ಎಂದು ಆಶಿಸುತ್ತಿದ್ದ ಆ ದಿನಗಳು….
ಘಂಟೆ ಒಂದಾಯಿತು ….ಈಗ ಬಸವ ಅವನ ಉಷಾ ಐಸ್ ಕ್ರೀಮ್ ಡಬ್ಬಿ ತಳ್ಳಿಕೊಂಡು ಅಷ್ಟು ದೂರದ ಕುಂದಾಪುರದಿಂದ ಬರುವ ಸಮಯ,,,,ಬೆಲ್ಲದ ಕ್ಯಾಂಡಿಯ ಮೇಲಿನ ಶಾವಿಗೆಯನ್ನು ನೆನೆದು ಕುಳಿತಲ್ಲೇ ಕುಪ್ಪಳಿಸಿದ…ಆ ದಿನಗಳು…
ಅಜ್ಜಿ ಮನೆಯ ದನಗಳಿಗೂ ನಮಗೂ ಅವಿನಾಭಾವ ಸಂಬಂಧ…ವಾನರ ಸೇನೆಯೊಂದಿಗೆ ಮೇಯಲು ಹೊರಡುವ ಅವಕ್ಕೂ ಎಷ್ಟು ಉತ್ಸಾಹ…ನಮಗೆ ಅವಕ್ಕಿಂತ ಹೆಚ್ಚು ಖುಷಿ ಕಾರಣ ಅಲ್ಲಿ ಹೊಳೆಯಲ್ಲೂ ಮುಳುಗಿ ಮೀಯುವ ತುಡಿತ….ಹಾಗೆ ನೀರಾಟದಲ್ಲಿ ನಿರತರಾದಾಗ ದನಗಳು ಎಲ್ಲಿ ಹೋದವೆಂದು ತಿಳಿಯದೆ ಹುಡುಕುತ್ತಿದ್ದ …. ಆ ದಿನಗಳು….
ಕುಟುಂಬದ ಹಿರಿಯ ದಂಪತಿಗಳಾದ ಅಜ್ಜ ಅಜ್ಜಿಯರನ್ನು ಭೇಟಿಯಾಗಲು ಬರುತ್ತಿದ್ದ ದೂರದೂರಿನ ನೆಂಟರು..ಅವರು ಹೋಗುವಾಗ ಕೊಡುತ್ತಿದ್ದ ಆ ಕನಕಾಂಬರ ಬಣ್ಣದ ನೋಟು….ಅದನ್ನು ಉಳಿದವರಿಗೆ ತೋರಿಸಿ ಹೊಟ್ಟೆ ಉರಿಸುತ್ತಿದ್ದ ಆ ದಿನಗಳು….
ದೈವದ ಪೂಜೆಗೆ ಹೋದಾಗ ಭಟ್ಟರು ಕೊಡುತ್ತಿದ್ದ ಸಿಂಗಾರ ಹೂ ವನ್ನು ಲೆಕ್ಕಮಾಡಿ ಒಳ್ಳೆಯದೋ ಕೆಟ್ಟದ್ದೋ ….ಎಂದು ಭವ್ಯ ಭವಿಷ್ಯ ವನ್ನು ತಮ್ಮ,ತಂಗಿಯನ್ದಿರಿಗೆ ಹೇಳುವ ಆ ದಿನಗಳು….ನಾಗದೇವರ ದರ್ಶನ ಬಂದಾಗ …ಭವಿಷ್ಯ ನುಡಿಯುತ್ತಿದ್ದರು….ತಪ್ಪಾದರೆ ಹೇಳುತ್ತೀದ್ದರು…ಆಗೆಲ್ಲ ಏನೋ ಹೆದರಿಕೆ…ಎಲ್ಲ್ಲಿ ಪಾತ್ರಿ..ಮುಟ್ಟಾದವರನ್ನು  ಮುಟ್ಟಿ ಸ್ನಾನ ಮಾಡದ ಹುಡುಗಿ ಇಲ್ಲಿದ್ದಾಳೆ ಎಂದು ಹೇಳಿ ಬಿಟ್ಟರೆ ಎಂದು ಅಂಜುತ್ತ …ದೇವರೇ ಕಾಯ್ಯಪ್ಪ ಎಂದು ಅದೇ ನಾಗದೇವರಿಗೆ ಬೇಡಿ ಕೊಳ್ಳುವ ಆ ದಿನಗಳು….
ಹಳೆ ಬೆಟ್ಟಿಗೆ ಹೋಗಿ ರಂಗೋಲಿ ಪುಡಿಯಂಥ ನುಣುಪಿನ ಮರಳನ್ನು ತುಂಬಿಕೊಂಡು ಬಂದು ಹಾಗೆ ಬರುವಾಗ ಹಾಡಿಗೆ ಹೊಕ್ಕು ಕಾಡು ದಾಲ್ಚೀನಿ ಎಲೆಗಳನ್ನು ಸೇರಿಸಿ ತಂದಾಗ…ಚಿಕ್ಕಿ ಹೇಳಿದ ಹಾಡಿ ದೆವ್ವದ ಕತೆ ಕೇಳಿ ಜ್ವರ ಬಂದು ಮಲಗಿದ ಆ ದಿನಗಳು…
ಆನೆಗುಡ್ಡೆ ಮೂದ್ಗಣಪತಿ ಗೆ ಒಡೆಸಿದ ಕಾಯನ್ನು ಒಣಗಿಸಿ ಎಣ್ಣೆ ಮಾಡಿ ತಂದಾಗ ….ಆ ಕೊಬ್ಬರಿ ಹಿಂಡಿಯನ್ನು ಕದ್ದು ಕದ್ದು ಮೆದ್ದು,,ಗಂಟಲು ನೋವು ಬರಿಸಿಕೊಂಡ ಆ ದಿನಗಳು….ಮರದಿಂದ ಬಿದ್ದು ಗದ್ದ ಒಡೆದುಕೊಂಡ ಅಣ್ಣನಿಗೆ  ಏನಾಯಿತೋ ???ಅಂತ ಕೇಳದೆ ಹೆದರಿ ಓಡಿ ಬಂದ ಆ ದಿನಗಳು..
ಬೆಣಸು,ಮಡಕೆ ಹಣ್ಣು,ಪಿರಗಿ,ಚಿಪ್ಪಲ್ಗೆಂಡೆ ಅಂಥ ಅಪರೂಪದ ಕಾಡು ಹಣ್ಣುಗಳನ್ನು ಆಯಲು ಹೋಗಿ …ದಾರಿ ತಪ್ಪಿ ಕಾಡಲೆದ ದಿನಗಳು….ಚಿಕ್ಕಮ್ಮನ ಕತೆಗಳಿಗೆ ತಣ್ಣನೆ ತೆರೆದು ಕೊಳ್ಳುತ್ತಿದ್ದ ರಾತ್ರಿಗಳು…ಮತ್ತೆ ಗಂಜಿ ಊಟದೊಂದಿಗೆ  ಮಾವಿನ ಹಿಂಡಿ,ತಂಗಳು ಕುಚ್ಚಲಕ್ಕಿ ಅನ್ನದೊಂದಿಗೆ ಅಪ್ಪೆ ಮಿಡಿ ಉಪ್ಪಿನಕಾಯಿಯ ಆ ಅವರ್ಣನೀಯ ರುಚಿಯನ್ನು ಮೊದಲಿಗೆ ಉಂಡ ಆ ದಿನಗಳು……
ಶಾಲೆ ಶುರುವಾಗುವ ಎರಡು ದಿನ ಮೊದಲು………………………………….
ಅಮ್ಮ ಬಂದು ಕರೆದು ಕೊಂಡು ಹೋಗುವಲ್ಲಿಗೆ ಮುಗಿಯುವ ನನ್ನ ಬಾಲ್ಯದ ವೈಶಾಕದ ದಿನಗಳು…..
ಎಲ್ಲಿ ಹೋದವು ಈ ವೈಶಾಖದ ದಿನಗಳು…
ಈಗ ..ಏನಿಲ್ಲ ನಾವು ಅನುಭವಿಸಿದ ಖುಷಿಯನ್ನು ನೆನೆಪಿನ ಬುಟ್ಟಿಯಿಂದ ತೆಗೆದು ನೋಡಿ ನೋಡಿ ಮುತ್ತಿ ತಟ್ಟಿ ಮತ್ತೆ ಹಾಗೆ ಇತ್ತಿಡಬೇಕು..ಈಗಿನ ವೈಶಾಕಗಳು,,,,ವೆಕೇಶನ್ ಕ್ಲಾಸ್ ಗಳಲ್ಲೋ…ಮುಂಬರುವ ತರಗತಿಯ ಪಾಠಗಳನ್ನು ಕಲಿಯುವುದರಲ್ಲೋ …ಕಳೆದು ಹೋಗುತ್ತಿವೆ…ಅಜ್ಜಿ ,ಮತ್ತು ಅಜ್ಜಿ ಮನೆ ಎಂಬ ಎರಡು ಮಧುರ ಪದಗಳು ನಮ್ಮ ಮಕ್ಕಳ ವರ್ತಮಾನದಿಂದ ನಾವೇ ಅತಿ ನಿಷ್ಕರುಣೆಯಿಂದ ಎತ್ತಿಟ್ಟಿಬಿಟ್ಟಿದ್ದೇವೆ…
ದೂರದೂರಿನ ಪ್ರವಾಸ ಅಲ್ಲದಿದ್ದರೂ ಸರಿ ನಮ್ಮ ಮಕ್ಕಳಿಗೆ ನಾವು ಅನುಭವಿಸಿದ ಈ ಸುಮಧುರ ಸುಂದರ ವೈಶಾಖದ ದಿನಗಳನ್ನು ಅನುಭವಿಸಲು ಬಿಡೋಣ…ಅವರ ಬಾಲ್ಯದೊಂದಿಗೆ  ನಾವು ಮತ್ತೆ ಮಕ್ಕಳಾಗೋಣ ….

Sunday, April 17, 2011

ಬಂಗಾರ ಯಾಕ ಬೇಕ??ನಾವ್ ಚಂದ್ ಕಾಣಾಕ

ಲಮಾಣಿ ಜಿಲ್ ಝಿಲ್ ಝಿಲ್ 
ನಾನು ಬರ್ತೆನ್ ನಿಲ್ ನಿಲ್ 
ಕಟ್ಟ್ಗಿ ಹೊರಿ ಚಲ್ ಚಲ್ 
ಹೀಗೆಂದು ಬಾಲವಾಡಿ ಅಕ್ಕವರು ರಾಗವಾಗಿ ಹೇಳಿಕೊಡುತ್ತಿದ್ದರೆ ನಮ್ಮ ಪುಟ್ಟ ಕಂಗಳಿಗೆ ಕಾಣುತ್ತಿದ್ದುದು ತಲೆಯ ಮೇಲೆ ಭಾರವಾದ  ಕಟ್ಟಿಗೆ ಹೊರೆಯನ್ನಿತ್ತು ಕೊಂಡು ಆ ಭಾರವನ್ನು ಬ್ಯಾಲೆನ್ಸ್ ಮಾಡಲು ಸೊಂಟವನ್ನು ಅತ್ತ ಇತ್ತ ತಿರುಗಿಸುತ್ತಾ ವೇಗವಾಗಿ ನಡೆಯುತ್ತಾ ಬರುತ್ತಿದ್ದ ತೆಳು ಕಾಯದ  ಲಂಬಾಣಿ ಮಹಿಳೆಯರು .ಅಪರಿಮಿತ ದೈಹಿಕ ಶ್ರಮ ಅವರಿಗೆ ಈ ಸುಂದರ ಮತ್ತು ಮಟ್ಟಸವಾದ ದೇಹವನ್ನು ವರವಾಗಿ ಕೊಟ್ಟಿರಬೇಕು .
ಲಂಬಾಣಿ ಮಹಿಳೆಯರು ಕಲಾತ್ಮಕತೆಯ ಪ್ರತ್ಯಕ್ಷ ರೂಪ.ಕರಕುಶಲ ದೇವಿಯರು ಮೈದಾಳಿ  ನಿಂತಂತೆ ಭಾಸವಾಗುತ್ತಾರೆ ಇತ್ತೀಚಿಗೆ ಕರಕುಶಲ ಕಲೆಗಳು ಮತ್ತು ಕಸೂತಿ ಗಳ ಬಗ್ಗೆ ಪಟ್ಟಣದ ಜನರಲ್ಲಿ ಆಸಕ್ತಿ ಹೆಚ್ಚಾಗಿದ್ದು ಎಷ್ಟು ಬೆಲೆಯಾದರೂ ಅದನ್ನು ಕೊಂಡು ತಂದು ತೊಟ್ಟು ಖುಷಿ ಪಡುತ್ತಾರೆ ಕೆಲವೊಮ್ಮೆ ಡಿಸೈನರ್ ಮೊರೆ ಹೋಗುವುದು ಉಂಟು. ಆದರೆ ಲಂಬಾಣಿ ಮಹಿಳೆಯರು  ತಮ್ಮ ಉಡುಪನ್ನು ತಾವೇ ಡಿಸೈನ್ ಮಾಡಿಕೊಳ್ಳುತ್ತಾರೆ ,ಹಳೆಯ ಬಟ್ಟೆಗಳನ್ನು ರಂಗು ರಂಗಿನ ದಾರದಲ್ಲಿ ಬಂದಿಸಿ .ಕನ್ನಡಿ ಯನ್ನು ಪೋಣಿಸಿ ಮಣಿಗಳನ್ನು ಜೋಡಿಸಿ ಅದ್ಭುತ ರೂಪವನ್ನು ಕೊಡುತ್ತಾರೆ ..ಇವರ ಈ ಉಡುಪಿನ ವಿಭಿನ್ನತೆ ಅವರ ಬುಡಕಟ್ಟಿಗೆ ವಿಶಿಷ್ಟ ಮೆರಗನ್ನು ತಂದಿತ್ತಿದೆ...
ಈಗಿನ ಚನಿಯ ಚೋಲಿ ,ಘಾಗರ ಇವೆಲ್ಲ ಇವರ ಉಡುಪಿನ ಪರಿಷ್ಕೃತ ರೂಪಗಳು.ನಾವು ಹಬ್ಬ ಹರಿದಿನ ಗಳಲ್ಲಿ ಮದುವೆ ಸಮಾರಂಭಗಳಲ್ಲಿ ಮನ ಬಂಗಾರ ಹೇರಿಕೊಂಡು ಸಿಂಗಾರ ಗೊಂದರೆ ಇವರು ಮಾತ್ರ ಸದಾಭರಣ ಸುಂದರಿಯರು.ವಿಶೇಷ ಸಂದರ್ಭ ಗಳಲ್ಲಿ ಇವರ ಆ ಸೌಂದರ್ಯ ಪ್ರಜ್ಞೆ ಇನ್ನು ಹೆಚ್ಹು ಪ್ರಕಟ ಗೊಳ್ಳುತ್ತದೆ.
ಬಾಲ್ಯದಿಂದಲೂ ಇವರೊಂದಿಗಿದ್ದ ನಿಕಟತೆ ಆತ್ಮೀಯತೆ ಅವರ ಜೀವನ ಶೈಲಿಯ ಬಗ್ಗೆ ಸಹಜ ವಾಗಿಯೇ ಕುತೂಹಲ ಹುಟ್ಟಿಸಿದ್ದವು ಪ್ರಸ್ತುತ ಅವರ ಆಭರಣ ಗಳಬಗ್ಗೆ ಅವರ ಮಾತುಗಳಲ್ಲೇ ವಿವರಿಸುವ ಪ್ರಯತ್ನ ನನ್ನದು..

ಲಂಬಾಣಿ ಮಹಿಳೆರ ಆಭರಣಗಳು ತಾಮ್ರ ಬೆಳ್ಳಿ ,ಹಿತ್ತಾಳೆ ,ಅಲುಮಿನಿಯಂ ಗಳಿಂದ ಮಾಡಲ್ಪಟ್ಟಿವೆ .ಕಾಡಿನಲ್ಲಿ ಅಲೆಯುತ್ತ ಯಾವುದೊ ಸಂದರ್ಭದಲ್ಲಿ ನಾಡಲ್ಲಿ ನೆಲೆಸಿದ್ದರೂ ಕಾಡಿನ ನೆನಪಲ್ಲೇ ಇರುವಂತೆ ಇವರ ಆಭರಣಗಳಲ್ಲಿ  ಪ್ರಾಣಿ ಜನ್ಯ ಸಸ್ಯ ಜನ್ಯ ವಸ್ತುಗಳು ಕಾಣಲು ಸಿಗುತ್ತವೆ .(ಉದಾ ;ದಂತ ,ಉಣ್ಣೆ,ಕವಡೆ )ಚಿನ್ನದ ಬಳಕೆ  ಇವರಲ್ಲಿ  ತೀರ  ಕಡಿಮೆ  ,ಆಧುನಿಕತೆಗೆ ತೆರೆದುಕೊಂಡ ಕೆಲವು ಪರಿವಾರಗಳು ಸಮಾಜದ ಇತರ ಸಮುದಾಯದೊಂದಿಗೆ  ಸಮಾನತೆಯ ಗುಂಗಿಗೆ ಬಿದ್ದು ಚಿನ್ನದ ಆಭರಣ ಮಾಡಿಸುವುದುಂಟು .ಆದರೆ  ಅವರ  ಪಾರಂಪರಿಕ  ಆಭರಣದ  ಎದುರಿಗೆ  ಇದರ ಚಂದ ನಿಲ್ಲುವುದಿಲ್ಲ..
ಭೂರಿಯ ನಸುನಗೆಯ ಮುಖದ ಲಂಬಾಣಿ ಸ್ತ್ರೀ ಯಾ ನಸಭಾರಣ ಈ ಭೂರಿಯ ಸೂಕ್ಷ್ಮ ಕುಸುರಿಯ ಗೋಲಾಕಾರದ ಮೂಗುತಿಯನ್ನು ತೊಡುತ್ತಾರೆ ಇದು ಸುಮಂಗಲಿಯ ಸಂಕೇತ ಮದುವೆಯಲ್ಲಿ ಕನ್ಯೆ ತನ್ನ ತಾಯಿಯಿಂದ ಬಳುವಳಿಯ ರೂಪದಲ್ಲಿ ಪಡೆಯುವ ಆಭರನ ಇದು.ಇದರೊಂದಿಗೆ ಚೋಟ್ಲ ,ಚುಡೋ,ಘುಗರಿ ,ಅಂಕಡಾ ಇವುಗಳು ಸುಮಂಗಲಿಯ ಆಭರಣಗಳು ಇವು ತಾಳಿಗೆ ಸಮವಾದವುಗಳು..ಆಟಿ,ಮಾಟ್ಲಿ ಎಂಬ ಆಭರಣಗಳು ಇವರ ಸಂಗ್ರಹದಲ್ಲಿವೆ .
ಕಾಂಚಲಿ
ಇದು ಉಡುಗೆ ಆಗಿದ್ದರು ಆಭರಣ ಪಟ್ಟಿಗೆ ಸೇರಿಸುವುದು ಸೂಕ್ತ ಎಂಬುದು ನನ್ನ ಅನಿಸಿಕೆ..ಕಾರಣ ಕಾನ್ಚಲಿ ಎಂಬ ಈ ಕುಪ್ಪಸ ರೂಪದ ಉಡುಗೆ ಗೆ ಅಪೂರ್ವ ಕಸೂತಿಗಳಿವೆ ಗಾಜಿನ ಚೂರುಗಳ ಸಿಂಗಾರ,ಕವಡೆಯ ಅಲಂಕಾರವಿದೆ ಬೆನ್ನಿನ ಭಾಗ ತೆರೆದಿರುತ್ತದೆ ಭುಜದ ಮೇಲೆ ಮತ್ತು ಸೊಂಟದ ಹತ್ತಿರ ಎರಡು  ಲಾಡಿಗಳನ್ನು  ಜೋಡಿಸಿ  ಮೈಕಟ್ಟಿಗೆ  ತಕ್ಕಂತೆ ಅದನ್ನು ಹೊಂದಿಸಿಕೊಳ್ಳುತ್ತಾರೆ .ಇದಕ್ಕೆ ಚಾಟಿಯ ಎಂಬ ಗಾಜಿನ ಪಟ್ಟಿ ಇರುತ್ತದೆ ತಮಗೆ ಬೇಕಾದ ಬಣ್ಣದ ದಾರಗಳಿಂದ ಅವರಿಗೆ ಬೇಕಾದ ವಿನ್ಯಾಸದಲ್ಲಿ ಸ್ವತ್ ತಾವೇ ಅದನ್ನು ಹೊಲಿದು ಕೊಳ್ಳುತ್ತಾರೆ
ಘಾಗರಾ 
ಇದು ಲಂಗ .ಮೊದಲು ಎರಡು ಅಂಗೈಗಲದ ಕಸೂತಿ ಪಟ್ಟಿಗೆ ನೆರಿಗೆಗೆಳನ್ನು ಜೋಡಿಸಿ ವಿಸ್ತಾರವಾದ ಲಂಗ ಹೊಲಿದುಕೊಲ್ಲುತ್ತಾರೆ ನೆರಿಗೆಯ ಅಂಚಿಗೂ ಕಸೂತಿಯ ಕರಾಮತ್ತು ಕಾಣುತ್ತದೆ...ಘಗಾರವನ್ನು ಮೊದಲು ೫ ಭಾಗಗಳಾಗಿ ಪ್ರತ್ಯೇಕವಾಗಿ  ಹೊಲಿದು ಏಕತ್ರ ವಾಗಿಸುವುದು ಇದರ ವಿಶೇಷ ಇದರಲ್ಲಿ .ನಾಯಿ ಉಗುರು ,ಚಿಗಣಿ ,ಗಾಳಿಯ ಪೆಟ್ತ್ಯ,ಟೆಕ ,ಲೆಪೋ ,ಎಂಬ ಹೆಸರಿಸ ಕಸೂತಿಗಳನ್ನು ತೆಗೆದಿರುತ್ತಾರೆ,
ಚಾಟಿಯ
ಚಾಟಿಯ ಎಂಬುದು ದಾವಣಿ ಇದರ ಅಂಚಿಗೆ ಕನ್ನಡಿಯ ಕಸೂತಿ ಇದ್ದು ,ಪೈಸೆಗಳನ್ನು ಮಟ್ಟಸವಾಗಿ ಜೋಡಿಸಿರುತ್ತಾರೆ ಇದನ್ನು ghunghat ಎನ್ನುತ್ತಾರೆ .ಚಾಟಿಯಾದ ಮೇಲೆ ಚಂದದ ಕಸೂತಿಗಳು ನೋಡುಗರ ಕಣ್ಮನ ಸೆಳೆಯುತ್ತವೆ.


ವಾಂಕಿಯ 
ಇದು ಬೆಳ್ಳಿಯ ಆಭರಣ ಚಂದ್ರಾಕಾರದ ಬಿಲ್ಲೆಗೆ ನಾಣ್ಯ ಮತ್ತು ಗಿಲಕಿಗಳನ್ನು ಜೋಡಿಸಿದ ಸರ ಇದು ,ಇದರೊಂದಿಗೆ ನಮ್ಮ ಕಾಸಿನ ಸರದಂತೆ ಕಾಣುವ ರಪಿಯ ಹಾರ,ವಿಭಿನ್ನ ವಿನ್ಯಾಸದ ಹಾನ್ಸಲಿ ಗಳನ್ನೂ ತೊಡುವುದೆಂದರೆ..ಇವರಿಗೆ ಬಲು ಪ್ರೀತಿ..ಈ ಸರಗಳ ಜೊತೆ ಬಣ್ಣ ಬಣ್ಣದ ಮಣಿ ಸರಗಳನ್ನು ಇವರು ತೊಡುತ್ತಾರೆ ಇದನ್ನು ಲಾಲ್ಡಿ ಎಂದು ಕರೆಯುತ್ತಾರೆ .ಇವುಗಳಲ್ಲೂ ಹಲವು ವಿಧಗಳುಂಟು.ಲಾಲ್ಡಿ ಹಾರ ಪರಿಹಾರ ,ಪಟಿಯಾ(ಕತ್ತಿಗೆ ಒತ್ತಿಕೊಂಡಿರುವ ಮಣಿ ಸರ )ಇವುಗಳನ್ನು ಸಂಗ್ರಹಿಸಿತ್ತುಕೊಂಡು ಅವರೇ ಹೆಣೆದು ಕೊಂಡು ಧರಿಸುವುದು ಉಂಟು.
ಖಣ ಖಣ ಕಂಕಣ
ಬಂಜಾರ ಹೆಂಗಳೆಯರನ್ನು ನೋಡಿದ ಕೂಡಲೇ ಕಣ್ಮನ ಸೆಳೆಯುವುದು ಅವರ ಕೈ ಬಳೆಗಳು ಕೈ ಮಧ್ಯ ಭಾಗ ದಿಂದ ಪೂರ್ತಿ ತೋಳುಗಳಲ್ಲಿ ಈ ಬಳೆಗಳು ರಾರಾಜಿಸುತ್ತವೆ ,,ಬಿಳಿ ಬಿಳಿ ಬಣ್ಣದ ದಂತಿ ಚೂಡಿ ಗಳೆಂದರೆ ಇವರ ಮೆಚ್ಹಿನ ಆಭರಣಗಳು .ಇವಲ್ಲದೆ ಪತ್ಲಿ.ಬೋದ್ಲು ,ಮತ್ತು ಗಾಜಿನ ಬಾಳೆಗಳು ಕೂಡ ಇವರು ಇಷ್ಟ ಪಟ್ಟು ಧರಿಸುತ್ತಾರೆ
ಇದರೊಂದಿಗೆ ಕಸೂಟಿಯ ಎಂಬ ತೋಳಬಂದಿ ಮತ್ತೊಂದು  ಆಕರ್ಷಣೆ.ಕಸೂಟಿಯ ದ ಮೇಲ್ಭಾಗದಲ್ಲಿ ಕಾನ್ಚಲಿಯ ಕವಡೆಗಳು ಬರುವುದರಿಂದ ಅದರ ಮೆರಗು ಮತ್ತಷ್ಟು ಹೆಚುತ್ತದೆ... 
ಇನ್ನುಳಿದಂತೆ ಅನುಕೂಲ ಇದ್ದವರು ಡಾಬು ತೊಡುವುದುಂಟು..ಕಿವಿಗೆ ಕನಿಯಕಾಲಿಗೆ ತಾಮ್ರದ ವಂಕಿಯ ಝಾಂಜರ ,ಫೂಲಿ ಗಳನ್ನೂ ತೊಡುತ್ತಾರೆ...ಇಷ್ಟೇ ಅಲ್ಲದೆ ಇನ್ನು ಹಲವು ವಿಶಿಷ್ಟ ಆಭರಣಗಳು ಇವರ ಸಂಗ್ರಹದಲ್ಲಿವೆ...ivannu ಕೂತಲಿ ಎಂಬ ತಮ್ಮ ಉಡುಪು ಮತ್ತು ಆಭರಣ ಸಂಗ್ರಹಿಸುವ ಚೀಲದಲ್ಲಿ ಕತ್ತಿದುತ್ತಾರೆ ಹಬ್ಬ ಮದುವೆ ಸಂಭ್ರಮದಲ್ಲಿ ನಿತ್ಯಕ್ಕಿಂತ ಹೆಚ್ಹು ಶೃಂಗಾರ ಗೊಳ್ಳುವುದು ರೂಡಿ ,
ಕಾಂತನಿಲ್ಲದ ಮೇಲೆ ....
ಸಿಂಗಾರ ಎಂಬುದು ಹೆಣ್ಣಿನ ಹಕ್ಕಾದರೂ ಮದುವೆ ಆದನಂತರ ಅದಕ್ಕೆ ವಿಶೇಷ ಮೆರಗು ಸೇರಿಕೊಳ್ಳುವುದು ಸಹಜ.ಪತಿ ಮರಳಿ ಬಾರದಲ್ಲಿಗೆ ಹೋದನೆಂದರೆ ಸಿಂಗಾರದ ಬಯಕೆ ಮನದ ಮೂಲೆ ಸೇರುತ್ತದೆ ..ಮನ ಬಯಸಿದರೂ ಕೆಲವೊಮ್ಮೆ ಸಮಾಜದ ಹೆದರಿಕೆ ಕಾಡುವುದುಂಟು..ಆದರೆ ಈ ವಿಷಯದಲ್ಲಿ ಲಂಬಾಣಿ ಮಹಿಳೆ ತನ್ನ ಸ್ವಾತಂತ್ರಇನ್ನು ಉಳಿಸಿಕೊಂಡಿದ್ದಾಳೆ.ಭೂರಿಯ ಮತ್ತೆ ಕೆಲವು ಸೌಭಾಗ್ಯದ ಸಂಕೇತ ಎಂದು ನಂಬುವ ಆಭರಣ ಬಿಟ್ಟು ಮತ್ತೆಲ್ಲ ವನ್ನು ಆಕೆ ಧರಿಸಿ ಸಿಂಗಾರ ಗೊಳ್ಳಬಹುದು..
ವೈಧವ್ಯ ಬಂದಾಗ ಲಂಬಾಣಿ ಮಹಿಳೆಯರ ಮೈ ಮೇಲಿಂದ ಬುತ್ತಿ ಆಭರಣವನ್ನು ತೆಗೆದಿಡುತ್ತಾರೆ ಎಂದು ಮಾತು ಮಾತಲ್ಲಿ ನಾನು ಸಂದರ್ಶಿಸಿದ ಭೀಮವ್ವ ಚವ್ಹಾನ್ ಹೇಳಿದರು.
ಲಂಬಾಣಿಗರು ತಮ್ಮ ಬಟ್ಟೆಯಲ್ಲಿ ಕಾಜಿನ ಬಿಲ್ಲೆಗಳನ್ನು ಹೆಚ್ಹಾಗಿ ಬಳಸುತ್ತಾರೆ ಕಾರಣ ಅವರ ಅಲೆಮಾರಿ ಬದುಕು.ಕಾಡಿನಲ್ಲಿ ಅಲೆಯುವಾಗ ಪ್ರಾಣಿಗಳಿಂದ ಬಚಾವಾಗಲು ಪ್ರತಿಫಲಿಸುವ ಕನ್ನಡಿಯ ಸಹಾಯ ಪಡೆದಿರಬಹುದು ಆಗಿನ ಉಪಾಯ ಈಗ ಸಂಸ್ಕೃತಿಯ ಒಂದು ವಿಶಿಷ್ಟ್ ಭಾಗವಾಗಿ ರೂಪು ಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಲಂಬಾಣಿ ಯುವತಿಯರು ಅವರ ಸಾಂಪ್ರದಾಯಿಕ ಉಡುಪುಗಳನ್ನು ತೊದುವುದರಲ್ಲಿ ಆಸಕ್ತಿ ತೋರುತ್ತಿಲ್ಲ .ಹಳೆ ಮಂದಿಯ ಆಭರಣ ಅಟ್ಟ ಸೇರಿವೆ...ಅನ್ನುವ ಕೊರಗು ಹಿರಿಯರದು...
 ತನ್ನ ಮನೆಯ ಆರ್ಥಿಕ ಪರಿಸ್ತಿತಿಯ ಸುಧಾರಣೆಗೆ ತನ್ನಲ್ಲಿರುವ ಎಲ್ಲ ಚಿನ್ನವನ್ನು ಮಾರಿ .ಕೊನೆಗೆ ಏನು ಇಲ್ಲದಾಗ ಪ್ರಕೃತಿ ಮೂಲದ ಸದಾ ತನ್ನ ಬಳಿಯೇ ಇರುವಂಥ ಕೃತಕ ಆಭರಣದ ಮೊರೆಹೊಗಿರಬಹುದೇನೋ.ಅದಕ್ಕೆ ಕವಡೆಯನ್ನು ಅವರು ಚಿನ್ನ ಭಾಗ್ಯ ದಾಯಕ ಎಂದು ಇವರು ನಂಬುತ್ತಾರೆ .ಇವರ ವಿಶಿಷ ವಿನ್ಯಾಸದ ಆಭರಣವನ್ನು ತಯಾರಿಸಿ ಕರ್ನಾಟಕದ ಹಲವೆಡೆ ಚದುರಿ ನೆಲೆನಿಂತಿರುವ ಇವರಿಗೆ ಪೂರೈಸುವ ವ್ಯಕ್ತಿಗೆ ರಾಂಗ್ ಎಂದು ಇವರು ಕರೆಯುತ್ತಾರೆ .
ಲಂಬಾಣಿ ಮಹಿಳೆಯರು ಪೀತಾಂಬರದ ನಡುವೆ ಜರಿ ಎಳೆಗಳಂತೆ......ಎಂದು ಮಾಜಿ ಪ್ರಧಾನಿ ದಿ .ಇಂದಿರಾ ಗಾಂಧಿ ಹೇಳಿದ್ದನ್ನು ಡಾ.ಹರಿಲಾಲ್ ಪವಾರ್ ತಮ್ಮ ಬರಹ ಒಂದರಲ್ಲಿ ಉಲ್ಲೇಖಿಸಿದ್ದಾರೆ ...ಇವರ ವರ್ಣಮಯ ಬದುಕನ್ನು ನೋಡಿದಾಗ ಇದು ನಿಜ ಎನಿಸುತ್ತದೆ ...ಬಡತನ ,ಎಂಬುದು ಅವರ ನಗುವನ್ನು ಕಸಿಯುತ್ತಿದೆ..ಆದರು ಇವರ ಶ್ರೀಮಂತ ಸಂಸ್ಕೃತಿ ಜಾನಪದ ಲೋಕಕ್ಕೆ ಕಳಸ ಪ್ರಾಯ.
(ಎಪ್ರಿಲ್ ೧೫ ,೨೦೧೦  ಸಖಿ  ಪಾಕ್ಷಿಕದಲ್ಲಿ ಪ್ರಕಟಿತ )