Tuesday, May 24, 2011

ಬಯಸಿದ್ದೆಲ್ಲ ನಮಗೇ ಸಿಗಬೇಕೆಂಬ ಹಠವಾದರೂ ಏಕೆ??


ಉಷಾ ಕಟ್ಟೆಮನೆ ಅವರ ಬ್ಲಾಗು ಓದುತ್ತಿದ್ದೆ ...ಪ್ರೆಮಿಸಿದವನ ಕಣ್ಣು ಕಿತ್ತ ಘಟನೆಯೊಂದರ ಕುರಿತಾದ ಬರಹವದು....ಅದನ್ನು ಓದುತ್ತ ಓದುತ್ತ ಹಸಿರಾದ ನೆನಪೊಂದನ್ನು ಅಕ್ಷರದಲ್ಲಿ ಬಂಧಿಸಿಡುವ ಪ್ರಯತ್ನ ಮಾಡುತ್ತಿರುವೆ...
ನಾನು  ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ದಿನಗಳವು...ನನ್ನೂರಿಂದ  ವಿಶ್ವವಿದ್ಯಾಲಯ ಸುಮಾರು ೭೪ ಕಿ ಮಿ ದೂರ..ದಿನ ಬೆಳಿಗ್ಗೆ ೮ ಕ್ಕೆ ನಾನು ಮನೆಯಿಂದ ಹೊರಡುತ್ತಿದ್ದೆ ..ಆ ಸಮಯದಲ್ಲಿ ಲಭ್ಯವಿದ್ದ ಬಸ್ಸುಗಳಲ್ಲಿ ವಿದ್ಯಾರ್ಥಿಗಳೇ ತುಂಬಿರುತ್ತಿದ್ದರು...ನಾ ಮುಂದು ನೀ ಮುಂದು ಎಂದು ಸೀಟು ಹಿಡಿಯೋದು...ಕಿಟಕಿಯಿಂದಲೇ ಕರ್ಚೀಪು ಎಸೆಯೋದು..ಹೇಗೋ ಒಂದು ಸೀಟು ಗಿಟ್ಟಿಸಿ ಕುಳಿತುಕೊಂಡರೆ ಹುಬ್ಬಳ್ಳಿ ತನಕ ಯಾವುದೊ ರಗಳೆ ಇಲ್ಲ....

ನಂತರ ಪುಟ್ಟ ಕಾಡು..ಬಿದಿರುಮೆಳೆ..ಬಾಚಣಿಕಿ ಡ್ಯಾಮ್ ..ಗಳನ್ನು ದಾಟಿದ ನಂತರ ಸಿಗುವುದು ತಡಸ್ ಎಂಬ ಪುಟ್ಟ ಊರು ..ಅಲ್ಲೊಂದಿಷ್ಟು ವಿದ್ಯಾರ್ಥಿಗಳು ತುಂಬುತ್ತಿದ್ದರು ...ಬಸ್ಸು ತುಂಬಿದ ಗರ್ಭಿಣಿಯಂತೆ..ಅಲ್ಲೇ ಸಿಗುತ್ತಿದ್ದಳಾಕೆ...ಕೃಷ್ಣನ ತಾಯಿಯ ಹೆಸರವಳದು...ಸ್ನೇಹಿತೆ ಅಂತ ಹೇಳಲಾರೆ...ಸುಮ್ಮನೆ ನಗುತ್ತಿದ್ದಳು..ಅಥವಾ ದೂರದಿಂದಲೇ ಕೈ ಬೀಸುತ್ತಿದ್ದಳು..ಆಕೆಗೆ ಯಾವತ್ತು ಸೀಟ್ ಸಿಗುತ್ತಿರಲಿಲ್ಲ...ನಿಂತ ವಿದ್ಯಾರ್ಥಿಗಳ ಬ್ಯಾಗು,ಪುಸ್ತಕ ಕುಳಿತವರ ಮಡಿಲಲ್ಲಿ ಆರಾಂ ಮಾಡುತ್ತಿದ್ದವು...ಹಾಗೆ...ಪ್ರತಿ ದಿನ ಅಲ್ಲದಿದ್ದರೂ..ಹೆಚ್ಚಿನ ಸಂಧರ್ಭದಲ್ಲಿ ಆಕೆ ಮತ್ತು ನಾನು ಬಸ್ ನಲ್ಲಿ ಭೇಟಿ ಆಗುತ್ತಿದ್ದೆವು...

ಚಂದದ ಹುಡುಗಿ...ಆಕೆಗೂ ಕನಸುಗಳಿದ್ದವು..ಮಧ್ಯಮವರ್ಗದ ಎಲ್ಲಾ ಹುಡುಗಿಯರಿಗೆ ಇರೋ  ಹಂಗೆ ಆಕೆಗೂ ಬಾನು ಮುಟ್ಟೋ ಕನಸಿತ್ತು...ಗಂಡ ಮನೇ ಮಕ್ಕಳ ಬಗ್ಗೆ ಸುಂದರ ಕಲ್ಪನೆಗಳಿದ್ದವು.ಇದೆಲ್ಲ ಇದ್ದ ಮೇಲೆ....ಹದಿವಯಸ್ಸಿಗೆ ಈ ಜಾಯಮಾನದಲ್ಲಿ ಕಂಪಲ್ಸರಿ ಅನ್ನೋ ಒಂದು ಅಫ್ಫೆರೂ ಇತ್ತು...ಹಾಗಂತ ಅವಳೇನು ನನ್ ಬಳಿ ಹೇಳಿರಲಿಲ್ಲ...ಗೆಳತಿಯರ ತಮಾಷೆ...,ಆಕೆಯ ಸುಖಾಸುಮ್ಮನೆ ನಗು..ಕಣ್ಣಂಚಿನ ತಿರುಚು .ಮೌನದಲ್ಲಿ ಮಾತು...ಇವೆಲ್ಲ ಅದಕ್ಕೆ ಪೂರಕವಾಗಿದ್ದವು...ಅದೇನು ಅಪರಾಧ ಅಲ್ಲ ಬಿಡಿ....

ಆದಿನ ಬೆಳಿಗ್ಗೆ ಕಪ್ಪು ಬಣ್ಣದ ಉಡುಗೆಯಲ್ಲಿ ಚಂದ ಕಾಣುತ್ತಿದ್ದಳು ...ಅದೇ ಹೂ ನಗು...ಹಾಯ್ !ಅನ್ನೋ ರೀತಿಯ ಒಂದು ಕೈ ಬೀಸೋ ಮೂಲಕ ಮಾತಿಲ್ಲದೆ ಮಾತಾಡಿದ್ದಳು ಹುಡುಗಿ....ಹುಬ್ಬಳ್ಳಿ ಬಂತು ಸೀಟು ಹಿಡಿಯುವಾಗ ಇರೋ ಅವಸರದ ಮೂರು ಪಟ್ಟು ಅವಸರ ಇಳಿಯುವಾಗ...ಮತ್ತೆ ಬೇರೆ ಬಸ್ಸ ಹಿಡಿಬೇಕಲ್ಲ..''ಕ್ಲಾಸಸ್ ತಪ್ಪುತ್ತೆ..''ಇವತ್ತು ಮುಗೀತು ಮತ್ತೆ ಗೈರು ನಾ ಕ್ಲಾಸ್ ಗೆ..ಅಂತ..ಎಲ್ಲರು ಮಾತಾಡ್ತಾ ದೂಡಾಟ ಮಾಡಿಕೊಂಡು  ಇಳಿದು ಹೋಗಿದ್ದೆವು ಎಂದಿನಂತೆ...
ನನಗದು ಮಾಮೂಲು ದಿನ..ತರಗತಿ ಮುಗಿಸಿಕೊಂಡು..ಪಾವಟೆ ನಗರ ಬಸ್ ನಲ್ಲಿ ಪುನ್ಹ್ಹ್ ವಾಪಾಸ್ ಹುಬ್ಬಳ್ಳಿಗೆ....

ಸಿರ್ಸಿ-ಹುಬ್ಬಳ್ಳಿ-ಸಿರ್ಸಿ ಬಸ್ಸಿನ ಗಾಜುಗಳ ಮೂಲಕ...ಕೆಳಗೆ ನಿಂತು ತಮ್ಮ ಗಮ್ಯ ತಲುಪುವ ತರತುರಿಯಲ್ಲಿರುವವರನ್ನು.ಗುಟ್ಕ ತಿಂದು ಹಲ್ಲಿನ ಸಂದಿಯಿಂದ ಛೀಎಂದು ಕೆಟ್ಟದಾಗಿ ಉಗುಳಿ ಹೀರೋ ಪೋಸ್ ಕೊಡೋರನ್ನ..ಮಂಗಳೂರು ಬಸ್ಸುಗಳನ್ನು ಕಾಯುವ ಪಕ್ಕಾ ಬಯಲುಸೀಮಿ ಬಾಂಡ್ ಸೀರೆ ಉಟ್ಟ  ಕುರಿ ಮಂದೆಯ ಯಜಮಾನಿಯನ್ನ ಬಸ್ಸು ಹೊರಡೋತನಕ..ನೋಡೋದು...ಏನೇನೋ..ಕಲ್ಪನೆಗಳಿಗೆ ಕಾವುಕೊಡೋದು...ಆ ಸಮಯಕ್ಕೆ ಸಂಜೆ ವಾಣಿ ಪೇಪರ್ ಮಾರೋ ಕನ್ನಡಕದ ಅಜ್ಜನಿಗೆ ಪರಿಚಯದ ನಗೆ ನಕ್ಕು ಇತ್ತ ತಿರುಗಿದರೆ ಅಷ್ಟೊತ್ತಿಗೆ ಡ್ರೈವರ್ ಬಂದಿರುತ್ತಾನೆ...

ಆದಿನ ಮಾತ್ರ ಅಜ್ಜನ ಮುಖದಿಂದ ದೃಷ್ಟಿ ಪೇಪರ್  ನತ್ತ ಹೊರಳಿತು...ಕಿವಿ ಅಜ್ಜನ ಮಾತುಗಳಿಗೆ ಶ್ರುತಿ ಯಾಗಿತ್ತು...
''ಹುಬ್ಬಳ್ಳಿ ಅಯೋಧ್ಯ ಹೋಟೆಲ್ ನಲ್ಲಿ ಯುವತಿ ಕೊಲೆ..ಬಿಸಿ ಬಿಸಿ ಸುದ್ದಿ.''.ಅಂದು ಅಜ್ಜ ಕೂಗಿ ಪೇಪರ್ ಮಾರುತ್ತಿದ್ದ....ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ದ ಎದುರಿಗೆ ದೃಷ್ಟಿ ಹಾಯಿಸಿದರೆ ಕಾಣೋದೆ ಅಯೋಧ್ಯ ಹೋಟೆಲು...ಅಲ್ಲಿ ಕೊಲೆ....ಛೇ...
ಕೂತುಹಲಕ್ಕೆ ಬಿದ್ದು ಪೇಪರ್ ತಗೊಂಡೆ...ಕೊಲೆಯಾದವಳ  ಫೋಟೋ ನೋಡಿ  ಕೈಕಾಲು ಒಮ್ಮೆ ತಣ್ಣಗಾಗಿ ಹೋಯಿತು...ಆಕೆ ನನ್ನ ಹೂ ನಗೆಯ ಹುಡುಗಿ...ಬಸ್ಸು ಊರು ತಲುಪಿದರೂ ನನಗೆ ಸಾವರಿಸಿಕೊಳ್ಳಲಾಗಲಿಲ್ಲ ...ಕೊಲೆ ಮಾಡಿದವ ಅವಳ ಪ್ರೀತಿ ಗೆ ಪಾತ್ರನಾದ ಹುಡುಗನೇ...ಯಾಕೋ ಆದಿನ ಮನೆಗೆ ಬಂದು ಯಾರೊಂದಿಗೂ ಏನು ಹೆಚಿಗೆ ಮಾತಾಡಲು ಆಗಲಿಲ್ಲ....

ಹುಡುಗ ಬಲು ಪೋಸ್ಸೇಸಿವ್ ...ಪ್ರೀತಿ ವಿಷಯ ಮನೆಯಲ್ಲಿ ತಿಳಿದಿದೆ..ಹಿರಿಯರು ಕಲಿಕೆ ಮುಗಿದು ಒಂದು ಹಂತಕ್ಕೆ ಬಂದ ಮೇಲೆ ಮದುವೆ ಮಾಡಲು ಒಪ್ಪಿದ್ದಾರೆ...ಅಷ್ಟರಲ್ಲಿ ಹುಡುಗ ಓದು ಅಲ್ಲಿಗಲ್ಲಿಗೆ ಅನ್ನೋವಂತೆ ಅಲಕ್ಷಿಸಿದ್ದಾನೆ ಅನಿಸುತ್ತೆ..ಹುಡುಗಿ ಹೊಸ ಕಾಲೇಜ್ ಸೇರಿ ಹೊಸ ಜಗಕ್ಕೆ ಮೊಗ ಮಾಡಿದ್ದಾಳೆ ಹೊಸ ಸ್ನೇಹಿತರು..ಹೊಸ ಪ್ರಪಂಚ...ಅಲ್ಲಿ ಕೆಲವೊಮ್ಮೆ ಇವನಿಗೆ ಸಮಯ ಕೊಡೋದು ಅಸಾಧ್ಯ..ಎನಿಸಿರಬೇಕು...ಆ ಪರಮ ಪೋಸ್ಸೇಸಿವ್ ಹುಡುಗ...ತನ್ನ ವಸ್ತು ಬೇರೆಯವರ ಒಡನಾಟದಲ್ಲಿ ಖುಷಿಯಾಗಿದ್ದನ್ನು ಸಹಿಸದೆ...ಆಕೆಯನ್ನು ಪೀಡಿಸಿ...ಪೀಡಿಸಿ..ಕೊನೆಗೆ ಈ ನಿರ್ಧಾರ ಮಾಡಿದ್ದಾನೆ....

ಕಾರಣ ಏನೇ ಇರಲಿ....ಪ್ರೀತಿಸಿದ ಪ್ರತಿ ವಸ್ತು ,ಜೀವ ನಮ್ಮ ಅಧೀನವಾಗಿರಬೇಕು ಅನ್ನೋ ಹಠವಾದರೂ ಏಕೆ???ಪ್ರೀತಿಸಿ ಪ್ರೀತಿ ನೀಡಿದ ಜೀವವನ್ನು ಅಷ್ಟು ನಿರ್ದಯತೆಯಿಂದ ಚಾಕು ಇರಿದು ಕೊಲ್ಲುವಾಗ ಅವನೆಂಥ ಅಮಾನುಷ ಸ್ತಿತಿಗೆ ತಲುಪಿರಬಹುದು???ಇಷ್ಟಕ್ಕೂ ಆ ವಯಸ್ಸಿನಲ್ಲಿ ಪ್ರೀತಿ ಎಂಬುದನ್ನು ಅವರಿಬ್ಬರು ಯಾವ ರೀತಿ ಅರ್ಥೈಸಿರಬಹುದು???ಪಾರ್ಕು,ಹೋಟೆಲ್ ,ಸುತ್ತಾಟ??? ಸಿನೆಮ ಟಾಕಿಸ್ ಕತ್ತಲಲ್ಲಿ ಬೆಚ್ಚಗೆ ಕೈ ಕೈ ಹಿಡಿದು ಕೂಡುವುದ????ಅಥವಾ..ಪ್ರೀತಿಸಿದವರು ಜೀತಕ್ಕೆ ಬಿದ್ದಂತೆ ಕೇವಲ ನಮ್ಮನ್ನಷ್ಟೇ ಗಮನಿಸಬೇಕು ಅನ್ನೋ ಹುಂಬತನವ???ಅಥವಾ ಸಮಾಜಕ್ಕೆ..ಅದರ ಕೆಡುತ್ತಿರುವ ಸ್ವಾಸ್ಥದ ಅರಿವು ಮೂಡಿಸಲು ಪ್ರಕೃತಿಯೇ ರೂಪಿಸಿದ ಸಂಚ???ಹೀಗೆ ಏನೇನೋ ಪ್ರಶ್ನೆಗಳು.....ನನ್ನ ಮನದಲ್ಲಿ ತೆರೆಗಳಂತೆ ಬಂದು ಬಂದು ಕಾಡಿದವು...

ಯಾವ ಧೈರ್ಯದಿಂದ ತಂದೆ ತಾಯಿ ಜೀವ ಬಸಿದು ಎದೆಯೆತ್ತರ ಬೆಳೆಸಿದ ಮಗುವನ್ನು ಕಲಿಕೆಗೋ,ಕೆಲಸಕ್ಕೋ ದೂರ ಕಳಿಸಿಯಾರು????ಬೆಳಿಗ್ಗೆ ತಿಂಡಿ ತಿಂದು ಹೋದ ಮಗಳು ರಾತ್ರಿ ಉಟಕ್ಕೆ ಬರುತ್ತಾಳೋ ಇಲ್ಲವೋ ಅನ್ನುವ ಆತಂಕ ಅಮ್ಮನ ಮನದ ತುಂಬಾ ....ಅಪ್ಪನ ದುಗುಡ ಮಾತ್ರ ಯಾರೊಂದಿಗೂ ಹೇಳುವಂಥದ್ದಲ್ಲ...ಆತ ಎಷ್ಟೆಂದರೂ ತಂದೆ....ತನ್ನ ಮಗು ಬೆಳೆದು ಏನಾದರು ಸಾಧನೆ ಮಾಡುತ್ತೆ...ಮನೆತನಕ್ಕೆ ಕೀರ್ತಿ ತರುತ್ತೆ ಅನ್ನೋ ಕನಸು ಕನಸೋ ತಂದೆ ತಾಯಿಗೆ ಬೆಳೆದ ಮಕ್ಕಳು ಕೊಡೊ ಬಹುಮಾನವಾದರು ಎಂಥದ್ದು...???

ಮರುದಿನ...ಆಕೆ ಮನೇ ಮುಂದೆ ಜನರ ಸಂತೆ...ಅಳು ಕೂಗು..ಕೇಳುತಿತ್ತು..ಸಂದಣಿ ಜಾಸ್ತಿ ಆಗಿ ಬಸ್ಸು ಕೂಡ ಹೋಗದಾಗಿತ್ತು...ಸುಮ್ಮನೆ ಕಣ್ಣನು ಮುಚ್ಹಿ ಕೊನೆ ಬಾರಿ ಆಕೆಯನ್ನು ನೋಡಿದಾಗ ಅಚ್ಚಾದ ಚಿತ್ರ..ಸ್ಮರಿಸಿದೆ...ಮಾತಾಡದೆ..ಯು ಸಾವಿರಾ ಮಾತುಗಳನ್ನು ಮನದಲ್ಲಿ ಬೆಳೆಸಿ ಹೊರಟು ಹೋಗಿದ್ದಳು ಹುಡುಗಿ...ಜನ ಎಲ್ಲವನ್ನು ಬೇಗ ಮರೆತು ಬಿಡುತ್ತಾರೆ...ಒಂದು ವಾರ ಹದಿನೈದು ದಿನ ..ಬರೀ ಅವೇ ಮಾತು..ನಂತರ ಮತ್ತೆ...ಬಸ್ಸಿನಲ್ಲಿ ಮೆತ್ತಗೆ ಹಾಡುಗಳು...ಹರಟೆಗಳು ಆರಂಬ ವಾದವು...ಎಂದಿನಂತೆ..ಜನ ಅದನ್ನು ಮರೆತರು ನಾನು ಕೂಡ...ಆದರೆ ಆಕೆ ಮನದಲ್ಲಿ ಹಸಿರಾಗೇ ಇದ್ದಾಳೆ..

ಆ ಹುಡುಗ ಎದುರಿಗೆ ಸಿಕ್ಕರೆ ನಾ ಕೇಳಲೇ ಬೇಕಾದ ಪ್ರಶ್ನೆಯೊಂದಿದೆ''ಪ್ರೀತಿಸಿದ ಪ್ರತಿ ವಸ್ತು ನಮ್ಮದಾಗಲೇಬೇಕೆಂಬ ಹಠವಾದರು ಏಕೆ???ಆಕೆ ಸತ್ತಳು ನೀ ಬದುಕಿದ್ದೀಯ???''ಪ್ರಶ್ನೆಗಳಿಗೆ ಪ್ರಜ್ಞೆ ಇದ್ದವರು ಉತ್ತರಿಸಿಯಾರು..ಸ್ವಯಂ ಪ್ರಜ್ಞೆ  ಇಲ್ಲದವನಿಗೆ ಶಾಸ್ತ್ರ-ನಿಯಮ ಗಳು ಕೂಡ ಬದಲಿಸಲಾರವು ..ಅಲ್ಲವೇ...???