Tuesday, June 5, 2012

ಊರ ಮಳೆ,,ಮತ್ತದರ ಸುತ್ತ...




ಈಗ ಅಲ್ಲಿ..
ಮಳೆ ಶುರುವಾಗಿದೆ .
ಇಲ್ಲಿ ನಾನು ನೆನಪುಗಳ ಕಂಬಳಿ ಹೊದ್ದು
ಮನಸ ಕಾಯುಸುತ್ತಿದ್ದೇನೆ 

ಸಂತೆಯಲ್ಲಿ  ೨೦ ರುಪಾಯಿಯ
ನೀಲಿ ಬೆಲ್ಟಿನ 
ಪ್ಯಾರಗನ್ ನಂತೆ ಕಾಣುತ್ತದೆಂದು ತೆಗೆದುಕೊಂಡ ಚಪ್ಪಲಿ
ಹಸಿರು ಬಣ್ಣದ ಯುನಿಫಾರ್ಮ್ ಮೇಲೆ 
ಫ್ರೀಯಾಗಿ ಇತ್ತ ಕೆಮ್ಮಣ್ಣಿನ ಸಂಡಿಗೆ..
ಮರೆಯಾಲಾದೀತೇ??

ಸೋಮವಾರಕ್ಕು ಈ ಮಳೆಗೂ ಅದೇನು ಅನ್ಯೋನ್ಯತೆ 
ಸಂತೆಯೆಲ್ಲ ಕಪ್ಪು ಬಣ್ಣದ ಪುಟ್ಟ ಪುಟ್ಟ ತೇರು
ಆ ತೇರ ಕೆಳಗೆ ಬದನೆ ,ಬಟಾಟೆ 
ಮಾರಲು ಕುಳಿತ ಆ ಯವ್ವನ ಗಲ್ಲದ ಮೇಲಿದ್ದ ಹನಿಗಳು 
ಮಳೆನೀರೋ ಕಣ್ಣೀರೋ ????
ಹಾಗೊಂದು ಪ್ರಶ್ನೆಗೆ ಉತ್ತರವಿರದು..

ಸಂತೆ ದಾರಿಯಲಿ  ಕುಳಿತ 
 ಬುಟ್ಟಿ ಯಿಂದ ಇಣುಕುವ 
ಮೆಣಸು,ಚವಳಿ ಅಗೆಗಳು..
ಕಬ್ಬಿಣ ಮಾರುವ ಹುಡುಗನ ಮೆತ್ತಗಿನ ನಜರು  ,
ಮಡಿಕೆ ಮಾರಲು ಕುಳಿತ ಆ ಪುಟ್ಟ ಹುಡುಗಿ ಮೇಲೆ

ಬೆನ್ನಿಗೆ ಹಾಕಿಪ ಪಾಟೀಚೀಲದಿಂದ
ಹೊಸ ಪಟ್ಟಿ ,ಪುಸ್ತಕ ತೊಯ್ದ ಘಮ ..
ಆಘ್ರಾನಿಸಿದಷ್ಟು ಹಿತ.

ಒಣಗದ ನೀರ್ಜೀವ ಬಟ್ಟೆಗಳ ಮೇಲೆ 
ಅಮ್ಮನ ಸಹಸ್ರಾರ್ಚನೆ..
ಅವು ನಮ್ಮಂತೆ..ಕೇಳಿ ಸುಮ್ಮನಿರುತ್ತವೆ..
ಒಣಗುವುದಿಲ್ಲ..

 ಡೇರೆ ಗಡ್ಡೆ  ಚಿಗುರದು,,,ಜವಳು ಬಂದಿದೆ ...
ಅರಶಿನ ಎಲೆಗಳು ಪಂಚಮಿ ಹಬ್ಬದೊಳಗೆ 
ಚಿಗುರಿದರೆ ಸಾಕು..
ಎದುರುಮನೆಯವರು ಅಣಬೆ ತಿಂದರೋ ಏನೋ..
ಈ ಬಾರಿ ಕಳಲೆ ಸಿಗುತ್ತೋ ಇಲ್ವೋ 
ಮರಕೆಸ ಹೋದಸಾರಿ ಇದ್ದ ಮರದಲ್ಲೇ ಚಿಗುರಿದ್ರೆ ಪುಣ್ಯ..
ಈ ಬಾರಿ ದಿನಸಿಗಿಂತ ಆಸ್ಪತ್ರೆ ಬಿಲ್ಲೆ ಹೆಚ್ಚು ಆಗುತ್ತೆ,,
ಈ ಥರ ಮಳೆಲಿ ನೆಂದು ಬಂದರೆ 
ಹಾಳಾದ್ ಮಳೆ..
ಮಕ್ಕಳು ಶಾಲೆಯಿಂದ ಬರೋವಾಗ್ಲೆ ಬರುತ್ತೆ..

ಯಾರೋ ಹೊಸ ಹುಡುಗಿ..
ಹಳದಿ ಬಣ್ಣದ ಲಂಗ 
ಮೇ ಫ್ಲವರ್ ಜೂನ್ ನಲ್ಲಿ ಅರಳಿದಂತಿದೆ.
ಇವಳೇ ಇರಬಹುದ ಆಕೆ??ನನ್ನ ಕನಸಿನ  ಹುಡುಗಿ ,,,
ಕಾಲೇಜ್ ಮೆಟ್ಟಿಲೇರಿದ 
ಜಸ್ಟ್ ಪಾಸು ಹುಡುಗನ ತಲೆಯಲ್ಲಿ 
ಹಳದಿ ಹಳದಿ..ಹೊರಗೆ ಹನಿಯುವ ಹೂ ಮಳೆ 

ಆಕೆ ,,
ಛೇ ಆ ಲೆಕ್ಚರರ್ರು ಅದ್ಯಾಕೆ ಅಷ್ಟು ಚಂದ..
ಬೇಕಂತಲೇ ಪೆನ್ನು ಮರೆತು ಬರ್ತಾಳೆ..
ಇರುವದ್ದಕ್ಕಿಂತ ಸ್ಮಾರ್ಟ್ ಆಗಲು ತುಡಿಯುತ್ತಾಳೆ
ಆಕೆ ಕೊಡೆ  ತರದ ದಿನ ,ಲೆಕ್ಚರರ್ ಕೊಡೆ ತಂದದಿನ 
ಅವ ತನ್ನ ಹಿಂದೆ ಬರುವಾಗ ಬರಬಾರದೇ ಈ ಮಳೆ ...
ಆ ದಿನ ..ಬರುತ್ತದೆ..ಮಳೆ..
ಆತ .. ಕರೆದು ಇರುತ್ತಾರೆ..
ಎಂದು ಇಲ್ಲದ ಮುದ್ದಿನಿಂದ ಅಪ್ಪ ಬೈಕ್ ತಂದು 
ಪಕ್ಕದಲ್ಲಿ ನಿಲ್ಲಿಸಿ , ಕೂತ್ಕೋ  ಅಂತಾರೆ..

ಹಸಿ ಮಣ್ಣ ವಾಸನೆ..
ಬಟ್ಟೆಗೂ ಹಸಿ ವಾಸನೆ..
ಬಾಡಿ ಸ್ಪ್ರೇ ಹೋಗಿ ರೂಂ ಪ್ರೆಷ್ನರ್,
ಹಾಕಿದರು ಹೋಗದು..
ದೇವರೇ ದಯವಿಟ್ಟು ಈ ತಿಂಗಳನ್ನು 
ಸ್ಕಿಪ್ಪ್ ಮಾಡು ಶಾಪ ಕೊಡಬೇಡ..
ಎಂದು ಬೇಡಿದಷ್ಟು 
ಬೇಗ ಬರುತ್ತದೆ ಅದು..ಅಭ್ಯಾಗತನಂತೆ...

...ನೆನಪು ಗಳು ನಿಲ್ಲುತ್ತಿಲ್ಲ..
ಇಲ್ಲಿನ ಮಳೆಗೆ ಊರಿನ ಮಳೆಯ ಚಲುವಿಲ್ಲ..
ಅಂದರೆ,, ಮಳೆಯಲ್ಲೂ ಎಂಥ ಚಲುವು ???
ಎಂದು ಕೀಟಲೆ  ಮಾಡಿ ನಗುವ ಇವರ 
ಕುರಿತು ಬರೆದ  ಅದೆಷ್ಟೋ ಪ್ರೇಮ ಪತ್ರಗಳು,
ಮಲ್ಹಾರ ರಾಗ ಬಳಗ 
ಹಳೆಮನೆಯ ಹಿತ್ತಲಲ್ಲಿ  ಕಹಿ ಕಂಚಿ ಹೂವಿನ ಕಂಪು
..ಬಚ್ಚಲ ಹಂಡೆಗೆ ಹಾಕಿದ ಹಸಿ ಸೌದೆ ..
ಗೆಣಸು,ಹಲಸ ಹಪ್ಪಳ ಸುಟ್ಟ ವಾಸನೆ..


ಹೀಗೇ ....
ನನ್ನ ನೆನಪುಗಳ ಪರಿಷೆ ಸಾಗುತ್ತಲೇ ಇರುತ್ತದೆ...


(ಚಿತ್ರ ಕೃಪೆ-ಇಂಟರ್ನೆಟ್ )

ಮದರಂಗಿಯಲ್ಲಿ .....




ಮದರಂಗಿ ಹೆಸರು ಕೇಳಿದ ತಕ್ಷಣವೆ ಹೆಂಗಳೆಯರ ಮೊಗದಲ್ಲೊಂದು ಕಿರುನಗೆ ಅರಳದೆ ಇರದು. ಕೈಗೆ ಮೆಹೆಂದಿ ಹಚ್ಹಿಕೊಂಡು ಮಲಗಿದ ರಾತ್ರಿ ಕನಸಿನಲ್ಲೆಲ್ಲ ಮದರಂಗಿಯ ಗುಂಗು..ಮದುಮಗಳ ಕೈಗೆ ಹಚ್ಚಿದ  ಮದರಂಗಿ ಬಣ್ಣ ಪಡೆದಷ್ಟು ಗಂಡನಿಗೆ ಹೆಂಡತಿಮೇಲೆ ಪ್ರೀತಿ ಹೆಚ್ಚಂತೆ ,ಅಕ್ಕ ಪಕ್ಕ ಕುಳಿತ ಗೆಳತಿಯರ ಈ ಮಾತು ಇನ್ನು ಟೆನ್ಶನ್ ಹೆಚ್ಚಿಸುತ್ತದೆ.ಬಣ್ಣ ಬರಲಿ ಅಂದು ಮನೆದೇವರಿಗೆ ಹರಕೆ ಹೊತ್ತ ವಧುಗಳು ಇದ್ದಾರೆ,ಅದ್ಹೇಗೆ ಹಾಕಿದರು ಸ್ವಲ್ಪವಾದರೂ ಸರಿ ತನ್ನ ಬಣ್ಣ ಬಿದಡದೆ ಉದುರದ ಮದರಂಗಿ ತನ್ನ ಒಣಗಿದ ಬದುಕಿನ ನಂತರವು ಬಣ್ಣ ಉಳಿಸಿಕೊಂಡು  ತಿಳಿಸುವ ಮೌಲ್ಯ ಅರಿತವರಿಗಷ್ಟೇ ಅರ್ಥ ವಾಗುತ್ತದೆ.ಅಂಥ ಮದರಂಗಿಯ ಕೆಂಪು ಕಂಪಿನೊಂದಿಗೆ ಕೆಲಕಾಲ ಕಳೆಯೋಣವೇ??

ನಮ್ಮದಲ್ಲ ಆದರೂ ನಮ್ಮದೇ..

ಲಾಸಾನಿಯ ಎನರ್ಮಿಸ್ ಎಂಬ  ಸಸ್ಯ  ಶಾಸ್ತ್ರೀಯ ಹೆಸರನ್ನು ಹೊಂದಿದ ಮದರಂಗಿ ಭಾರತದ ಕಲೆ ಎಂದೇ ಜಗತ್ತಿನಾದ್ಯಂತ ಹೆಸರು ಮಾಡಿದೆ,೫೦೦೦ ವರ್ಷ ಕ್ಕೂ ಹೆಚ್ಹಿನ ಇತಿಹಾಸ ಹೊಂದಿರುವ  ಮದರಂಗಿಯ ಮೂಲ ಆಫ್ರಿಕ ,ಮದರಂಗಿಯ ಬಳಕೆಯನ್ನು ಮೊದಲು ಮಾಡಿದ್ದು ಮಮ್ಮಿಗಳ ಮೇಲೆ,ಪುನರ್ಜನ್ಮ, ಮರಣ ನಂತರದ ಜೀವನದ ಬಗ್ಗೆ ಅತೀವ ವಿಶ್ವಾಸ ಹೊಂದಿದ್ದ ಎಜಿಪ್ತಿಯನ್ನರು ಮದರಂಗಿಯನ್ನು ಮಮ್ಮಿಗಳ ಉಗುರು ರಂಗಾಗಿ ಬಳಸುತ್ತಿದ್ದುದು ದಾಖಲೆಗಳಲ್ಲಿದೆ.

ಕಾಲಕ್ರಮೇಣ ಮದರಂಗಿ ಮಧ್ಯ ಪೂರ್ವ ಏಶಿಯ ,ಉತ್ತರ ಆಫ್ರಿಕ ದಂತಹ ಉಷ್ಣ ಹವಾಮಾನ ಹೊಂದಿದ ದೇಶಗಳಲ್ಲಿ ಪಸರಿಸಿತು ,ಕ್ರಿ ಶ ೭೧೨ ರ ಹೊತ್ತಿಗೆ ಫರ್ಶಿಯನ್ನರು ತಮ್ಮೊಂದಿಗೆ ಮದರಂಗಿಯನ್ನು ಹೊತ್ತು ತಂದು  ಭಾರತಕ್ಕೆ ಪರಿಚಯಿಸಿದರು .ಭಾರತದ ಶ್ರೇಷ್ಠ ಜ್ಞಾನ ಆಯುರ್ವೇದದಲ್ಲಿ ಮದರಂಗಿಯ ಔಷದೀಯ ಉಪಯೋಗಗಳನ್ನು ಹೇಳಲಾಗಿತ್ತಾದರೂ ಸೌಂದರ್ಯ ವರ್ಧಕವಾಗಿ  ಮದರಂಗಿ ನಮಗೆ ಪರಿಚಯಿಸಿದ್ದು ಪರ್ಷಿಯನ್ನರು .ಅದರ ಗುರುತಾಗಿ ಇಂದಿಗೂ ಮದರಂಗಿಯ ಚಿತ್ತಾರಗಳಲ್ಲಿ ಪಾಸ್ಲೆ ಎಂಬ ಪರ್ಷಿಯಾದ ಚಿತ್ತಾರ ಬಳಕೆಯಲ್ಲಿದೆ.. ಹೀಗೆ  ಜನಾನದಿಂದ  ಜನಸಾಮಾನ್ಯರ ತನಕ  ಮದರಂಗಿ ನಡೆದು ಬಂತು .
ಸುಮ್ಮನೆ  ಅಲ್ಲ ಎಲ್ಲದಕ್ಕೂ ಇದೆ ಅರ್ಥ

ಮೊದಲೆಲ್ಲ ಎಲ್ಲಿತ್ತು ಈ ಮೆಹೆಂದಿ ಕೊನ,ಮಾರ್ಕರ್ ಗಳು ?ಹಿಡಿಸೂಡಿಯ ತುದಿಯಲ್ಲಿ ಸವೆದು ಚೂಪಾದ ಕಡ್ಡಿಯೇ ಮದರಂಗಿ ಕುಂಚ,ನನ್ನ ಅಮ್ಮನ ಕಾಲದಲ್ಲಿ ಕೈಗೆ ಮದರಂಗಿ ಹಚ್ಚಿ  ಅದಕ್ಕೆ ಬಾಲೆ ಎಲೆ ಸುತ್ತಿ ಇಡುತ್ತಿದ್ದರು, ಎಂಬುದು ಅಜ್ಜಿಯ ಉವಾಚ ,ಆದರೆ ಮದರಂಗಿಯ ಚಿತ್ತಾರಗಳಿಗೂ   ಒಂದು ಆಶಯವಿದೆ.

ಮೊಗ್ಗು-ಹೊಸ ಬದುಕು,ಪ್ರೀತಿ
ಹೂವು - ಫಲವಂತಿಕೆಯ  ಸಂಕೇತ
ದೇವರು ಮತ್ತು ಧಾರ್ಮಿಕ ಚಿನ್ಹೆ ಸಂಕೇತಗಳು -ಆಯುರಾರೋಗ್ಯ ,ಕೆಟ್ಟ ದೃಷ್ಟಿಯಿಂದ ರಕ್ಷಣೆ  ಪಡೆಯಲು
ಮಂಡಲಗಳು -ಬುದ್ಧಿವಂತಿಕೆ ,ಅದ್ಯಾತ್ಮ,ತೆರೆದ ಮನದ ದ್ಯೋತಕ
ನವಿಲು ಮತ್ತಿತರ ಪ್ರಾಣಿ ಪಕ್ಷಿಗಳು - ನಿಸರ್ಗದೊಂದಿಗೆ ಮನುಷ್ಯನ ಸಾಮರಸ್ಯ ,ಮತ್ತು ಒಳಿತನ್ನು ಸೂಚಿಸುತ್ತವೆ.
ರಂಗಿನ ಗುಂಗು

ಮಳೆಗಾಲ ಶುರುಅಯ್ತು ಅಂದ ಕೂಡಲೇ ಚಿಗುರುವ ಕಡುಹಸಿರು ಎಲೆ ಗೆಂಪು ಮದರಂಗಿ ಚಿಗುರು ಎಲೆಗಳು ಉತ್ತಮ ಎಂಬುದು ಅನುಭವದ ಮಾತು,ಆ ಕಾರಣದಿಂದಲೇ ಅಷಾದ ಮಾಸದಲ್ಲಿ ,ಗೌರಿ ಹಬ್ಬದ ಸಂದರ್ಭದಲ್ಲಿ ಮದರಂಗಿಯನ್ನು ಹಾಕಿಕೊಳ್ಳುವ ಸಂಪ್ರದಾಯ ಇನ್ನು ಜಾರಿಯಲ್ಲಿರುವುದು,ಮದರಂಗಿ ವರ್ಷದಲ್ಲೆರಡು ಬಾರಿ ತನ್ನೆಲೆಗಳನ್ನು ಚಿಗುರಿಸಿಕೊಳ್ಳುತ್ತದೆ,ಇನ್ನು ಗೋರಂಟಿ ಎಲೆಗಳನ್ನು ಒಣಗಿಸಿ ಪುಡಿಮಾಡಿದ ನಂತರ ಅದಕ್ಕೆ ಕೆಲವು ವಸ್ತುಗಳನ್ನು ಜೊತೆ ಮಾಡಿದರೆ ಅದರ ಕೆಂಪು ಇನ್ನು ಉಜ್ವಲವಾಗುತ್ತದೆ,
ಸಾಮಾನ್ಯವಾಗಿ  ಚಹಾ ಪುಡಿ ,ನಿಂಬೆ ಹುಳಿ ,ಮಜ್ಜಿಗೆ ಮೊಸರು,ಹುಣಸೆಹಣ್ಣು,ದಾಳಿಂಬೆ ಸೀಪ್ಪೆಯ ಕಷಾಯ ಬೆಂಡೆಕಾಯಿ,ಗುಲಾಬಿ ಎಸಳು,ಕಿತ್ತಲೆಸಿಪ್ಪೆ ,ನೀಲಗಿರಿ ಎಣ್ಣೆ ,ಲವಂಗ ,ಸಾಸಿವೆ ಎಣ್ಣೆ,ಸಕ್ಕರೆ ನೀರು,ಮದರಂಗಿ ಸಂಗಾತಿಗಳು.

ಕೆಲ ಬುಡಕಟ್ಟಿನಲ್ಲಿ ಮದರಂಗಿ ರುಬ್ಬುವಾಗ ಎಂಬೆ ಎಂದು ಕರೆಯಲ್ಪಡುವ ಕೆಂಪು ಇರುವೆಯನ್ನು ಸೇರಿಸುತ್ತಾರೆ,ಆ ಇರುವೆಯಲ್ಲಿರುವ ರಾಸಾಯನಿಕ ಮದರಂಗಿಯ  ಬಣ್ಣವನ್ನು ಇನ್ನು ಹೆಚ್ಚಿಸುತ್ತದೆ,ಇದು ನೈಸರ್ಗಿಕ ನೆಲೆಯಲ್ಲಿ ಅವರು ಪ್ರಯೋಗಿಸಿದ ವಿಧಾನ ಆದರೆ ಇತ್ತೀಚಿಗೆ ಅದೇ ರಾಸಾಯನಿಕವನ್ನು ಮದರಂಗಿಯಲ್ಲಿ ಸೇರಿಸಿ ಕಡಿಮೆ ಸಮಯದಲ್ಲಿ ಹೆಚ್ಹು ರಂಗು ಬರುವಂತೆ ಸಿದ್ದ ಗೊಳಿಸಿದ ಕೊನ ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ
ಇದು ಭಾರತದ ರೀತಿ ಆದರೆ ಆಫ್ರಿಕ ಮತ್ತು ಮಧ್ಯ ಪೂರ್ವ ಎಷಿಯಗಳಲ್ಲಿ  ಯಾಕ ಅಥವಾ ಒಂಟೆಯ ಮೂತ್ರವನ್ನು ಸೇರಿಸುತ್ತಾರೆ.ಇದರಿಂದ ಮದರಂಗಿಯ ಬಣ್ಣ ಗಾಢ  ಗೊಳ್ಳುತ್ತದೆ ಎಂಬುದು ಅವರ ನಂಬಿಕೆ,ವೈಜ್ಞಾನಿಕ ನೆಲೆಯಲ್ಲಿ ಆಯಾ ವ್ಯಕ್ತಿಯ ದೇಹದ ತಾಪಮಾನಕ್ಕನುಗುನವಾಗಿ ಮದರಂಗಿ ತನ್ನ ಕಲೆಯನ್ನು ಉಳಿಸಿ ಬಿಡುತ್ತದೆ,ಉಷ್ಣ ದೇಹ ಪ್ರಕ್ರುತಿಯವರ ಕೈಯ್ಯಲ್ಲಿ ಮದರಂಗಿ ರಂಗು ರಂಗಾಗಿ ಕಂಗೊಳಿಸುತ್ತದೆ,
ಸಿಂಗಾರಕ್ಕಲ್ಲದೆ...

ಮದರಂಗಿ ಕೇವಲ ಪ್ರಸಾಧನ ವಾಗಿ  ಮಾತ್ರ ಹೆಚ್ಹು ಜನರಿಗೆ ಪರಿಚಿತ ,ಮದರಂಗಿಯನ್ನು ಚರ್ಮ ಉದ್ದಿಮೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ,ಜೊತೆಗೆ ಉಣ್ಣೆಗೆ ಬಣ್ಣ ಕೊಡಲು  ಬಳಸುವ ಕೆಲವೇ ನೈಸರ್ಗಿಕ ಬಣ್ಣಗಳಲ್ಲಿ ಮದರಂಗಿಯು ಒಂದು.
ಮದರಂಗಿ ಪ್ರತಿಯೊಬ್ಬರ ಹಿತ್ತಲಲ್ಲಿ ಇರಲೇಬೇಕಾದ ಔಷದೀಯ ಸಸ್ಯ , ಅಂಗೈ ,ಅಂಗಾಲು ಉರಿ ಇದ್ದಾಗ ಮದರಂಗಿಯ ಲೇಪವನ್ನು ಹಾಕಿ ಕೊಂಡರೆ ಬೇಗನೆ ಉಪಶಮನ ಕಾಣಬಹುದು,
ರಿಂಗ್ ವರ್ಮ ಎಂಬ ಚರ್ಮ ವ್ಯಾಧಿಯಲ್ಲೂ ಕೂಡ ಮದರಂಗಿಯ ಲೇಪ ಬಹುಪಯೋಗಿ,
ಕಣ್ಣುರಿ ಮತ್ತು ಬಿಸಿಲಿನಿಂದ ನೆತ್ತಿಯಲ್ಲಿ ಬಿಸಿ ಬಿಸಿ ಆದಂಥ ಅನುಭವ ಆದಾಗಲೂ  ಲೋಳೆಸರ ಮತ್ತು ಮದರಂಗಿಯನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಉಷ್ಣ ಕಡಿಮೆ ಆಗುವುದರೊಂದಿಗೆ ,ಕೂದಲು ಸೊಂಪಾಗಿ ಬೆಳೆಯುತ್ತದೆ.ಮತ್ತು ಇದು ನೈಸರ್ಗಿಕ ಕಂಡಿಷನರ್ ಕೂಡ, ಮಲೆನಾಡು ,ಕರಾವಳಿಯಲ್ಲಿ ಸಂಜೆ ಆಸರೆಗೆ ಮಾಡುವ ಕಶಾಯದಲ್ಲೂ ಸ್ವಲ್ಪ ಮದರಂಗಿ ಸೊಪ್ಪು ಸೇರಿಸುವುದುಂಟು.ತಿಂಗಳ ರಜೆ ಮುಂದೆ ಹೋಗಲು  ಇದರ ಕಷಾಯ ನೈಸರ್ಗಿಕ ಉಪಾಯ 

ಕವಿ ಮತ್ತು ಕೈಗೆಂಪು...

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..
ಹಾಗೆಂದು ಕವಿ ಸುಮ್ಮನೆ ಬರೆದಿಲ್ಲ...ಅದೆಷ್ಟು ಕವಿಗಳಿಗೆ ನಲ್ಲೆಯ ಕೈಗೆಂಪು ನಿದ್ದೆಗೆಡಿಸಿಲ್ಲ ಹೇಳಿ..ಪ್ರಿಯತಮೆಯ ಮದರಂಗಿಯ ಕೆಂಪಿನಲ್ಲಿ ಅದೆಷ್ಟು ಬಂದಿಶ್ ,ಗಜಲ  ಗಳು ಸ್ವರದಲ್ಲಿ ಬಂಧಿಯಾಗಿಲ್ಲ????
ಬಿಹಾಗ ರಾಗದಲ್ಲಿ ಹಾಡುವ ಬಂದಿಶ್ ಒಂದರ   ಶಬ್ಧಗಳು ಹೀಗಿವೆ 
.'' ಲಟ ಉಲಜೆ ಸುಲಜ ಜಾ ಬಾಲಮ
ಮೊರೆ ಹಾತ್ ಮೇ ಮೆಹೆಂದಿ ಲಾಗಿ ಹೈ..''
 ತನ್ನ ಮುಂಗುರುಳ ಸಿಕ್ಕು ಬಿಡಿಸುವ ನೆವದಲ್ಲಿ ನಲ್ಲನ ಸಾಂಗತ್ಯ ಬಯಸುವ  ಈಕೆಗೆ ಮೆಹೆಂದಿಯ ನೆವವೇ ಬೇಕಾಯಿತು..

ಚುರಾಕೆ ಮುಟ್ಟಿಮೆ ದಿಲ್ ಕೋ ಚುಪಾಕೆ ಬೈಟೆ ಹೈ 
ಬಹಾನ ಏ ಹೈ ಕಿ ಮೆಹೆಂದಿ ಲಗಕೆ ಬೈಟೆ  ಹೈ ..
 ಹೀಗೊಬ್ಬ ಶಾಯರ್ ಶಾಯರಿ ಮಾಡಿದರೆ..ಇನ್ನೊಬ್ಬ ತನ್ನ ಮಾಶುಕಳನ್ನು ನೆನಪಿಸಿದ ರೀತಿ ಯಾಕೋ ಭಾಳ ಇಷ್ಟವಾಗಿ ಬಿಡುತ್ತದೆ..

ನಾವ್ ಮೇ ಬೈಟಕೆ ಧೋಯೇಥೆ ಹಾತ್ ಕಭಿ ಉಸನೇ..
ಪೂರೇ ತಾಲಾಬ್ ಮೇ ಮೆಹೆಂದಿ ಕಿ ಮೆಹೆಕ್ ಆಜ್ ಭಿ ಹೈ ...

ಉದ್ಯೋಗವಾಗಿ ಮದರಂಗಿ 

ಮದರಂಗಿಯನ್ನು ಹಚ್ಚಲು ಯಾವುದೇ ಪ್ರಮಾಣಪತ್ರ ಪದವಿಗಳು ಬೇಕಿಲ್ಲ. ಕ್ರಿಯಾಶೀಲತೆ ಮತ್ತು ಸತತ ಅಭ್ಯಾಸ ಮದರಂಗಿ  ಕಲೆಯ ಮೂಲ ಮಂತ್ರಗಳು. ಚನ್ನೈ ನಲ್ಲಿ ನೆಲೆಸಿರುವ  ರಾಜೇಶ್ವರಿ ಮಹೇಶ್ ಎನ್ನುವ ಹೆನ್ನ ಕಲಾವಿದೆ ಹೇಳುವಂತೆ ,ಮದರಂಗಿ ಯ ಉದ್ಯೋಗ ಎಂಬುದು ಬಂಡವಾಳ ಇಲ್ಲದ ಸ್ವ ಉದ್ಯೋಗ ,ಪ್ರತಿ ಕೈಗೆ ಕನಿಷ್ಠ ೧೫೦ ರೂಪಾಯಿಗಳಿಂದ  ಮದುವೆ, ಪಾರ್ಟಿ ಮದರಂಗಿಗೆ  ೧೫,೦೦೦ ರೂಪಾಯಿಗಳ ತನಕ ಅವರು ಚಾರ್ಜ್ ಮಾಡುತ್ತಾರೆ.ಆರ್ಡರ್ ಇಲ್ಲದಾಗಲು ಮದರಂಗಿಯನ್ನು ಅಭ್ಯಾಸ ಮಾಡುತ್ತಿರಬೇಕು ಮತ್ತು ಹೊಸ ಹೊಸ ಆಲೋಚನೆಗಳನ್ನು ಮದರಂಗಿಯ ಮೂಲಕ ಕೈಗಳ ಮೇಲೆ ಚಿತ್ರಿಸಲು ಪ್ರಯತ್ನಿಸಬೇಕು ಎಂಬುದು ಅವರ ದೃಡವಾದ ಮಾತು.
ವಿದೇಶದಲ್ಲೂ ಈ ತಾತ್ಕಾಲಿಕ ಚಿತ್ತಾರ ಕಲೆ ಮದರಂಗಿಯನ್ನು ಬಹುವಾಗಿ ಮೆಚ್ಚುತ್ತಾರೆ ಆದರಿಂದ ,ಇದನ್ನು ಕಲಿತ ಹಲವು ಭಾರತೀಯ ಹೆಣ್ಣುಮಕ್ಕಳು ವಿದೇಶದಲ್ಲಿ ಸ್ವಾವಲಂಬಿ ಆಗಿ ತಮ್ಮ ಸ್ವ  ಉದ್ಯೋಗ  ಸ್ಥಾಪಿಸುವಲ್ಲಿ ಯಶಸ್ವೀ ಆಗಿದ್ದಾರೆ.

ಎಚ್ಚರಿಕೆ ,!!!!!!
ಮದರಂಗಿ ಎಂದಕೂಡಲೇ ಅದರ ಹಿಂದೆ  ಮತ್ತಷ್ಟು ಹೆಸರು ಕೇಳಿ ಬರುವುದುಂಟು,ಕಾಲಿ ಮೆಹೆಂದಿ,ಅನ್ನುವ  ತಲೆಕೂದಲಿಗೆ ಹಚ್ಚುವ ಬಣ್ಣ,ತತಕ್ಷಣ ಬಣ್ಣ ನೀಡುವ ಕೆಲವು ಮೆಹೆಂದಿಗಳು,ಆದರೆ ಇವನ್ನು ಬಳಸುವ ಮುನ್ನ ನೆನಪಿಡಲೇಬೇಕಾದ ಅಂಶವೆಂದರೆ ಮದರಂಗಿ ಎಂಬುದು ಕೇವಲ ಕೆಂಪು ಬಣ್ಣದ ಕಲೆಯನ್ನುಳಿಸುವ ಒಂದು ನೈಸರ್ಗಿಕ ಪ್ರಸಾಧನ , ಇದರಲ್ಲಿ ಬೇರ್ಯಾವ ಬಣ್ಣಗಳು ದೊರಕುವುದಿಲ್ಲ.ಕೃತಕವಾಗಿ ತಯಾರಿಸಲಾಗುವ ಕಾಲಿ ಮೆಹೆಂದಿ.ಬ್ಲಾಕ್ ಹೆನ್ನ ಎಂಬುವ ಪ್ರಸಾಧನದಲ್ಲಿ PPD ಎಂಬ  ರಾಸಾಯನಿಕ  ಇರುವದರಿಂದ ,ಇದರ ಬಳಕೆ ಚರ್ಮ ಸಂಬಂಧಿ ಖಾಯಿಲೆಗಳಿಗೆ ತೆರೆದ ಅಹ್ವಾನ ,ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಮದರಂಗಿಯನ್ನು ಆಯ್ಕೆ ಮಾಡಬೇಕಾದ್ದು ಅನಿವಾರ್ಯ,

ಬೇಲಿಯ ಬದಿಯಲ್ಲಿ ಸುಮ್ಮನೆ  ಹಸಿರು ಕೆಂಪು ಹೊದ್ದು ತನಗೀನು ಗೊತ್ತಿಲ್ಲ ಎಂಬಂತೆ ನಿಂತಿರುವ ಮದರಂಗಿಯ ತನ್ನ ಮುಟ್ಟಿದವರಿಗೆಲ್ಲ ತನ್ನ ಬಣ್ಣವನ್ನು ಕೊಡದೆ ಬಿಡದು.ನಿಸರ್ಗದಲ್ಲಿ ಅದೆಷ್ಟು ಮನಮೋಹಕ ಕೂತುಹಲದ ಸಂಗತಿಗಳಿವೆ..ಅದನ್ನು ಅರಿಯುವ ತವಕ ಹಂಬಲ ನಮಗೆ ಬೇಕಷ್ಟೇ.

Sunday, June 3, 2012

ತರಲೆ ತಮ್ಮನ ಜನುಮದಿನಕ್ಕೆ...



ಪ್ರೀತಿಯ ಆನ್ನು

೪/೦೬/೧೯೯೫ ,ರವಿವಾರ ಬೆಳಗಿನ ಜಾವ ನನಗೆ ಹಾಲ್ನಿದ್ದೆ ,,,ಕನಸಿನಲ್ಲಿ ಚಿಕನ್ ಬಂದಿತ್ತು ,ಏನೋ ಗಡಿಬಿಡಿ ಯಾರೋ ನನ್ನ ಎಬ್ಬಿಸಿ ಒಂದು ಚೀಲ ಕೈಗೆ ಕೊಟ್ಟು ಕಾರ್ ಮೇಲೆ ಕೂಡಿಸಿದದಷ್ಟೇ ಗೊತ್ತು .ಮಧ್ಯ ಅದೆಲ್ಲೋ ಒಂಚೂರು ಎಚ್ಹರ ಅಮ್ಮ ಪಕ್ಕದಲ್ಲಿ ಕುಳಿತಿದ್ದಳು ,ಪಪ್ಪ ಪದೇ ಪದೇ ಆರಾಮಿದ್ದೀಯಲ್ಲ ಅಂತ ಕೇಳುತ್ತಿದ್ದರು , ಆ ಮಾತು ಕೇಳಿ ನನ್ನ ನಿದ್ದೆ ಅದೆಲ್ಲೋ ಹಾರಿ ಹೋಗಿತ್ತು ,ನಾನೂ ಅಮ್ಮನೊಂದಿಗೆ ಆಸ್ಪತ್ರೆಗೆ ಹೊರಟಿದ್ದೆ ಅಮ್ಮನಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು ,ಕಾರು ಕುಂದಾಪುರದ ವಿನಯ ನರ್ಸಿಂಗ್ ಹೋಂ ಹತ್ತಿರ ನಿಲ್ಲುತ್ತಿದ್ದಂತೆ ಅಮ್ಮ ಮೆತ್ತಗೆ ಇಳಿದು  ಲೇಬರ್ ವಾರ್ಡ್ ತನಕ ಸುಮ್ಮನೆ ನಡೆದು ಹೋಗಿದ್ದಳು ಆಗ ಬೆಳಿಗ್ಗೆ ೫.೦೦ ಘಂಟೆ ,

ಪಪ್ಪ,ಆಚೀಚೇ ಓಡಾಡುತ್ತಿರೆ ನಾನೂ ದೊಡ್ಡ ಅನುಭವಸ್ತ ಹೆಂಗಸಿನಂತೆ ನನ್ನ ಕೈಗೆ ಕೊಟ್ಟ ಆ ಚೀಲದೊಂದಿಗೆ ಲೇಬರ್ ವಾರ್ಡಿನ ಬಾಗಿಲಲ್ಲೇ ನಿಂತಿದ್ದೆ.ನರ್ಸಮ್ಮ ಅಮ್ಮನ ಹೆಸರು ಕೂಗಿ ಬಟ್ಟೆ ಕೊಡಿ ಎಂದಾಗಲೆಲ್ಲ ನಾನು, ಹೊರಗೆಲ್ಲೋ ತಿರುಗಾಟಕ್ಕೆ ಹೋಗುವಾಗ ಬಟ್ಟೆ ಅಯ್ತ್ಕೆ ಮಾಡುವರಂತೆ ಅದೋ ಇದೋ ಎಂಬಂತೆ ನೋಡಿ ಅದರೊಲ್ಲೊಂದು ಸೆಲೆಕ್ಟ್ ಮಾಡಿ ಆಕೆ ಕೈಗೆ ಕೊಡುತಿದ್ದೆ,ಆಕೆಗೆ ಕೊನೆಗೊಮ್ಮೆ ರೇಗಿ ಯಾರು ದೊಡ್ಡೋರು ಬಂದಿಲ್ವಾ?ನೀನು ಯಾರು?? ಅಂದಾಗ ನಾನು ಅವರ ಮಗಳು ಎಂದಿದ್ದೆ ಅಷ್ಟೇ.ಯಾಕೋ ನನ್ನನ್ನು ಸಣ್ಣ ಹುಡುಗಿ ಎಂದಿದ್ದೇ  ನನ್ನ ಅಸಮಾಧಾನಕ್ಕೆ ಕಾರಣ ಆಗಿತ್ತು .

೫.೧೫ ಕ್ಕೆ ಅಮ್ಮನ ಹೆಸರನ್ನು ಮತ್ತೆ ಕೂಗಿದರು ನರ್ಸಮ್ಮ ,ಗಂಡು ಮಗು ಅಂದು ಆಕೆ ಒಂದು ನಗುವನ್ನು ಕೊಡದೆ ಮತ್ತೆ ಬಾಗಿಲು ಹಾಕಿಕೊಂಡಳು ,ನಗು ಕಾಣಬೇಕಿತ್ತು ನೀನು ಪಪ್ಪನ ಮುಖದಲ್ಲಿ ,ನನ್ನ ಮುಖದಲ್ಲಿ  ಅಮ್ಮನನ್ನು ಅಷ್ಟು ಬೇಗ ವಾರ್ಡಿಗೆ ತರುವಂತೆ ಇರಲಿಲ್ಲ ಆಕೆಯ ಸ್ಥಿತಿ ,ಶುಭ್ರ ಬಿಳಿ ಪಂಚೆ ತುಂಡನ್ನು ನಿನ್ನ ಸುತ್ತಲು ಕಟ್ಟಿ ಗೊಂಬೆಯಂತೆ ಮಾಡಿ ಪಪ್ಪನ ಕೈಗೆ ಕೊಟ್ಟಿದ್ದರು.ನಂತರ ಲೇಬರ್ ವಾರ್ಡಿನ ಎದುರಿಗಿದ್ದ ಒಂದು ಕೋಣೆಯ ತೊಟ್ಟಿಲಲ್ಲಿ ನಿನ್ನ ಮಲಗಿಸಿದ್ದರು.

ಅಮ್ಮನಿಗಿಂತ ಮೊದಲು ನಾನು ನಿನ್ನ ಎತ್ತಿ  ಕೊಂಡಿದ್ದೆ ,ನಿನ್ನ ತೊಟ್ಟಿಲ ಪಕ್ಕ ನಿಂತಿದ್ದೆ.ಇನ್ನು ಬೆಳಕು ಮೂಡಿರಲಿಲ್ಲ ,'ಅಜ್ಜಿ ರಾತ್ರಿ ಮಲಗುವಾಗ ಹೇಳುವ ಚೌಡಿ ಪಿಶಾಚಿಗಳ ಕಥೆಗಳು,ಅವು ನವಜಾತ ಶಿಶುವನ್ನು ತಿನ್ನಲು ಬರುವುದು ಅದೆಲ್ಲ ನೆನೆದು ನಿನ್ನ ತೊಟ್ಟಿಲ ಬಿಟ್ಟು ಆಚೀಚೆ ಸರಿದದಲಿಲ್ಲ..ಬಿಳಿ ಸೀರೆ ಉಟ್ಟ ಯಾವ ನರ್ಸಮ್ಮ ಬಂದರೂ ನಾನು ಅವರ ಕಾಲು ನೋಡುತಿದ್ದೆ..ಮನದಲ್ಲೇ ಮಂತ್ರ ಶುರು ವಾಗುತ್ತಿದ್ದವು,ನೀನು ನಗುತ್ತಿದ್ದಿ ಗೊತ್ತು ,,ಆದರೆ ಅಮ್ಮವಾರ್ಡಿಗೆ   ಬರುವ ತನಕ ನಿನ್ನ ಸಂಪೂರ್ಣ ಜವಾಬ್ದಾರಿ ನನ್ನಮೇಲಿತ್ತು,ಅಮ್ಮ ತಿಂದ ಎಲ್ಲಾ ಕಲ್ಲಂಗಡಿ ಹಣ್ಣುಗಳು ನಿನ್ನ ಗಲ್ಲ ಸೇರಿದ್ದವು ,ಅದೆಷ್ಟು ಕೆಂಪಗಿದ್ದೆ,,ನಮ್ಮ ಮನೆಯಲ್ಲಿ ಆ ವರೆಗೆ ಬೆಳ್ಳಗೆ ಎಂಬ ಕಾಪ್ಮ್ಲಿಮೆಂಟ್ ಸಿಗುತ್ತಿದ್ದುದು ನನಗೆ ಮಾತ್ರ, ಈಗ ನಿನ್ನ ಮುಂದೆ ನಾನು ಏನು ಅಲ್ಲ ,,ಸೇಬಿಸಂತೆ ಇದ್ದೆ ನೀನು,

ಬೆಳಕು ಹರಿಯುತ್ತಿದ್ದಂತೆ ,ಆ ಕೋಣೆಯಲ್ಲಿ ಆಚೀಚೇ ಓಡಾಡುವವರು ಜಾಸ್ತಿ ಆದರು,ನಿನ್ನನ್ನು ೨ ಘಂಟೆಗಳ  ಹಿಂದೆ ಜನಿಸಿದ ಕೂಸೆಂದು ಯಾರು ನಂಬುತ್ತಿರಲಿಲ್ಲ.ಅಷ್ಟು ಚಂದಗಿದ್ದೆ ನೀನು,ಅಮ್ಮ ವಾರ್ಡಿಗೆ ಬಂದಳು,ಅಮ್ಮನಿಗೆ ಪಕ್ಕದಲ್ಲಿದ್ದ ಉಷಾ ಹೋಟೆಲಿನ ಚಹಾ ,ಕಾಫಿ  ತಿಂಡಿ ತೀರ್ಥದ ಸಪ್ಲಾಯರ್ ನಾನೆ ಆದೆ,ನಿಜ ಹೇಳ್ತೀನಿ ಕೇಳು ಆ ಸಮಯವನ್ನು ಅದೆಷ್ಟು ಎಂಜಾಯ್ ಮಾಡಿದ್ದೆ ನಾನು,ಮೀನು ತಿನ್ನದ ಅಮ್ಮನಿಗಾಗಿ,ತರಕಾರಿ ಊಟ ಅಜ್ಜಿ ಕಳಿಸುತ್ತಿದ್ದರು ಸಾವಿರಾರು  ಪಥ್ಯ  ಬೇರೆ .ನಾನು ಪಕ್ಕದ ರೂಮಿನವರೊಂದಿಗೆ ಅದ್ಯಾವುದೇ ಮೀನು ಹೋಟೆಲಿನ ಊಟ ತಗೊಂಡು ಬಂದಿದ್ದೆ ಅದೇನೋ ಖುಷಿ ನೀನು ಹುಟ್ಟಿದ ಗಳಿಗೆಯಿಂದಲೇ ಆಸ್ಪತ್ರೆ ಅಂದರೆ ಪಿಕ್ನಿಕ್ ಸ್ಪಾಟ್ ಆಗಿತ್ತು. ಇನ್ನು ರಾಖಿ ಹಬ್ಬ ಬಂದಾಗ ನಾವು ಅನಾಥ    ಪ್ರಜ್ಞೆ ಅನುಭವಿಸಬೇಕಿಲ್ಲ  ನಮಗೂ ಪುಟ್ಟ ತಮ್ಮ ಬಂದಿದಾನೆ ಎಂಬ ಖುಷಿ ನಿನ್ನಿಬ್ಬರ ಅಕ್ಕಂದಿರದ್ದು ..

ನೀನು ಮನೆಗೆ ಬಂದೆ ,ಪಪ್ಪ ಕುಂದಾಪುರದ ಆ ವಿನಯ ನರ್ಸಿಂಗ್ ಹೋಂ ನಿಂದ ,ಹಳೆ ಬಸ್ ಸ್ಟ್ಯಾಂಡ್  ತನಕ ನಡೆಯುತ್ತಾ ನಡೆಯುತ್ತಾ ಚಂದದ ಹೆಸರೊಂದನ್ನು ಹುಡುಕಿದ್ದರು ''ಅಭಯ '' ನನ್ನ ನಾಲ್ಕು ಅಕಾರಾದಿ ನಾಮದ ಕುಟುಂಬಕ್ಕೆ ಪುಟ್ಟ ಸದಸ್ಯನ ಆಗಮನ,ನಿಜ ಹೇಳ್ತೀನಿ ಕೇಳು,,ಅಸ್ಪತೆಯಿಂದ ಮನೆಗೆ ಬಂದ ನಂತರ ನಿನ್ನೆಡೆಗೆ ದೃಷ್ಟಿ ಹೊರಳಿದ್ದೆ ಕಮ್ಮಿ ,ಕಾರಣ ನಮ್ಮ ಹತ್ತಿರವೇ ಬೆಳೆಯುತ್ತಲಿದ್ದ ಚಿಕ್ಕಮ್ಮನ ಮಗ ಚಂದೂ,,ಅವನಾಗ ತೊದಲು ನುಡಿಯುತ್ತಿದ್ದ ,ತೊಟ್ಟಿಲಲ್ಲಿ ಏನೊಂದು ಸದ್ದಿಲ್ಲದೇ ಸುಮ್ಮನೆ ಮಲಗುತ್ತಿದ್ದ ನಿನಗಿಂತ ನಮ್ಮ ಹಿಂದೆ ಅತ್ತಾ ಅತ್ತಾ (ಅಕ್ಕ ) ಅಂತ ಓಡಾಡುತ್ತಿದ್ದ ಅವನು ನಮ್ಮ ಕೈಗೊಂಬೆ ಆಗಿದ್ದ..

ಅದೆಷ್ಟು ದಿನ???? ,,ಚಿಕ್ಕಮ್ಮನಿಗೆ  ನೀ ಬಂದ ಮೇಲೆ ಚಂದುವನ್ನು ನಮ್ಮ ಹತ್ತಿರ ಬಿಡುವ ಮನಸಾಗಲಿಲ್ಲ ಆಕೆ ಅವನನ್ನು ಕರೆದುಕೊಂಡು ಹೊರಟೆ ಬಿಟ್ಟಳು..ಮತ್ತೆ ಅಳು..ಬೇಸರ,,ಆಗ ನೀನು ಆರೇಳು ತಿಂಗಳಿನವ,ಮತ್ತೆ ನಾನು ಅಕ್ಹಿಲಕ್ಕ,ನಿನ್ನ ಹಿಂದೆ ಮುಂದೆ ಓಡಾಡುವುದು ಶುರುವಾಗಿತ್ತು,ರಗಳೆಯಿಲ್ಲದ ಮಗು ನೀನು...ಎಪ್ರಿಲ್ ಮೇ  ಎಂದಿನಂತೆ ನಮ್ಮ ಅಜ್ಜಿ ಮನೇ ಟೆಂಟ್ ,,ನಿನ್ನನು ಎರಡು ತಿಂಗಳು ನೋಡಿರಲಿಲ್ಲ ಆ ದಿನ ಮೇ ೭-೧೯೯೬  ಅಮ್ಮ ನಿನ್ನ ಕರೆದುಕೊಂಡು ಅಜ್ಜಿಮನೆಗೆ ಬಂದಿದ್ದಳು ನೀನು ನಡೆಯ ತೊಡಗಿದ್ದೆ.ನನ್ನ ಬಾಯಿಂದ ಮಾತು ಹೊರಡಿರಲಿಲ್ಲ ,ಕಣ್ಣು ಖುಷಿಯಿಂದ ಹನಿಯಾಡಿತ್ತು,

ನಿನಗೆ ಅದೆಷ್ಟು ಬಾರಿ ಕೃಷ್ಣನ ವೇಷ ಹಾಕಿ ತೊಂದರೆ ಕೊಟ್ಟಿಲ್ಲ ಹೇಳು..??ನಿನಗೆ ಹುಡುಗಿ ಅಂಗಿ ಹಾಕಿ ಚಂದ ನೋಡುವುದು ,ಜುಟ್ಟು ಕಟ್ಟಿ ಹೂ ಮೂಡಿಸುವುದು ಎಂದರೆ   ನನಗೆ ಇನ್ನಿಲ್ಲದ ಉತ್ಸಾಹ , ಆದರೆ ನನಗೂ ನಿನಗೂ  ಧೀರ್ಘ ೧೨ ವರುಷಗಳ ಅಂತರವಿದೆಯಲ್ಲ ????ಅದೇ  ಕಾರಣದಿಂದ  ನಿನ್ನೊಂದಿಗೆ ನನಗಿಂತ ತಂಗಿಯೇ ಹೆಚ್ಹು ಆಪ್ತತೆ ಸಾಧಿಸಿದ್ದಳು,ನಿಮ್ಮಿಬ್ಬರ ಜಗಳವು ಅಷ್ಟೇ ಚಂದ,ಸಖ್ಯ ಇನ್ನು ಚಂದ .

ಅದು ನಿನ್ನ ಶಾಲಾ ಜೀವನದ ಮೊದಲದಿನ  ಅಖಿಳಕ್ಕನ ಜೊತೆಗೆ ಉಮೇದಿನಿಂದ  ಹೊರಡುತ್ತಿರುವಾಗಲೇ ಸರಗೊಲಿಗೆ ಎಡವಿ ಗಾಯ ಮಾಡಿಕೊಂಡಿದ್ದೆ..ಅಳುತ್ತ ಶಾಲೆಗೆ ಹೋಗಿದ್ದೆ ,ಆ ನಂತರ ದಿನ ಕಳೆಯುತ್ತಾ ಟೀಚರ್ ,ಸರ್ ಯಾರನ್ನೂ ನೀ ಅಳಿಸದೆ ಬಿಟ್ಟಿಲ್ಲ ಅನಿಸುತ್ತೆ ,ನನಗೆ ಮಗ ಹುಟ್ಟುವ ತನಕ ನಾವಿಬ್ಬರು ಒಂದು ಹಂತದಲ್ಲಿ ವೈರಿಗಳಂತೆ ಇದ್ದೆವು,ನೀ ನನ್ನ ರಾಕ್ಷಸಿ ಅಂತ ಕರೆದಿದ್ದೆ ನೆನಪಿದೆಯ ??
೨೦೦೮-೨೦೧೦ ಈ ಎರಡು ವರ್ಷಗಳು ನಮ್ಮಿಬ್ಬರ ಬಾಂಧವ್ಯದ ಇನ್ನೊಂದು ಪುಟವನ್ನು ತೆರೆದಿತ್ತವು.

ನೀನು ನನ್ನ ಬದುಕಲ್ಲಿ ನಾ ಕಂಡ ಆದ್ಭುತ ಟೀಚರ್ ಗಳಲ್ಲಿ ಒಬ್ಬ ,ನಿನ್ನಲ್ಲಿ ಅದೆಂಥ ನಿರಕ್ಷರಿಗೂ ಎಲ್ಲವನ್ನು ಕಲಿಸಿಬಿಡುವ ತಾಕತ್ತಿದೆ. ಪತಿದೇವನ ಯಾವುದೊ ಮಾತನ್ನು ಮನಸಿಗೆ ತಾಗಿಸಿಕೊಂಡು ನನ್ನ ಮಗು ಮೂರು ತಿಂಗಳಿರುವಾಗ ನನಗೆ ಸೈಕಲ್ ಕಲಿಯಬೇಕೆಂಬ ಹಠ ಬಂದಿತ್ತು ನೀನು ಕ್ವಿಂಟಾಲ್ ಗೆ  ಒಂದಷ್ಟು ಕಡಿಮೆ ಇದ್ದ ನನ್ನ ತೂಕವನ್ನು ಅದ್ಹೇಗೆ ಬ್ಯಾಲೆನ್ಸ್ ಮಾಡಿ ನನಗೆ ಸೈಕಲ್ ಕಲಿಸಿದ್ದೆ,
ಇವತ್ತು ನಾನಿಲ್ಲಿ ಕುಳಿತು ನಿನ್ನ ಕುರಿತು ಹೀಗೆ ಟೈಪ್ ಮಾಡುತ್ತಿದ್ದೀನಿ ಅಂದರೆ ಅದರ ಶ್ರೇಯ ನಿನಗೆ,ಕಂಪ್ಯೂಟರ್ ಚಿತ್ರದಲ್ಲಷ್ಟೇ  ನೋಡಿದ್ದ ನಂಗೆ ೯ ನೇ ಕ್ಲಾಸಿನಲ್ಲಿದ್ದ ನೀನು ಅದೆಷ್ಟು ಚಂದ ಮಾಡಿ ಕಲಿಸಿದ್ದೆ, ಅಚಾನಕ್ಕಾಗಿ ವಿದೇಶದ ದಾರಿ ಹಿಡಿದ ಇವರ ಮತ್ತು ನನ್ನ ಮೇಲ್ ಗಳ ಜಿಗಿದಾಟ ನಡೆದಿದ್ದು ನಿನ್ನಿಂದಲೇ ಅಲ್ಲವೇ??ನೀ ಸೃಷ್ಟಿಸಿ ಕೊಟ್ಟ   ಇಮೇಲ್ ವಿಳಾಸ ಎಂಬ ಸೆಂಟಿ ನನಗೆ.

ಇದೆಲ್ಲ ಬಿಡು..ಮೊನ್ನೆ ಮೊನ್ನೆ ಊರಿಗೆ ಬಂದಾಗ ಏನಾದರು ಎಂಜಾಯ್ ಮಾಡಿದ್ದೇನೆ ಎಂದಾದರೆ ಅದು ನಿನ್ನ ಮಾತುಗಳನ್ನ,ಅದೆಲ್ಲಿಂದ ಕಲಿತೆ ಇಷ್ಟು ಮಾತಾಡೋದನ್ನ??ಮಾತಾಡಿದರೆ ನಗು ಉಕ್ಕುತ್ತೆ, ಅಕ್ಕನ ಮದುವೆಯಲ್ಲಿ ಅದೆಷ್ಟು ಓಡಾಡಿದೆ ನೀನು..ಪಕ್ಕ ತಮ್ಮ  ಬಿಡು..(ನನ್ನ ಮದುವೆಯಲ್ಲಿ ನಿನಗೆ ಮದುಮಗಳ ತಮ್ಮ ಎಂಬ ಗೌರವ ಸಿಕ್ಕಿಲ್ಲ ಎಂಬ ಆಪಾದನೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿರಬೇಕಲ್ಲ??)..ನಿನ್ನ ಮತ್ತೊಂದಿಷ್ಟು ತರಲೆಗಳ ಬಗ್ಗೆ ಬರೋಯೋಣ ಅಂದು ಕೊಂಡೆ..ಬೇಡ ನಿನಗೂ ಒಂದು ಇಮೇಜಿದೆ ಕಾಲೇಜ್ ನಲ್ಲಿ ಸುಖಾ ಸುಮ್ಮನೆ ಯಾಕ ಅದನ್ನು ಹಾಳ್ ಮಾಡಲಿ???

ಮುಖ್ಯ ವಿಷಯ ಹೇಳುತ್ತೇನೆ ಕೇಳು.ಮೊನ್ನೆ ಮೊಪೆಡ್ಡಿನ ಮೇಲೆ ನಾನು ನೀನು ಹೋಗುವಾಗ ನೀನೊಂದು ಮಾತು ಹೇಳಿದಿಯಲ್ಲ,''ಅಮಿತಕ್ಕ ಇನ್ನು ೩ ವರ್ಷ  ನನ್ನ ಡಿಗ್ರಿ ಮುಗಿಯುತ್ತಲೇ ನನಗೆ ಜಾಬ್ ಸಿಕ್ಕ ಕಡೆ ಪಪ್ಪ ಅಮ್ಮ ನನ್ನು ನನ್ನೊಂದಿಗೆ ಕರೆದೊಯ್ಯುತ್ತೇನೆ ,ನೀನು ಬೇಜಾರ್ ಮಾಡಬೇಡ ಅಂತ ,ಯಾಕೋ ಕಣ್ಣು ತುಂಬಿ ಬಂತು ಮುಂದೆ ಏನೋ ಹೇಗೋ ದೇವರೇ ಬಲ್ಲ ಆ ಕ್ಷಣದ ಮಾತು ಇದೆಯಲ್ಲ ನನ್ನ ಎಷ್ಟೋ ಕಿರಿ ಕಿರಿ ,ಟೆನ್ಶನ್ ದೂರ ಮಾಡಿತ್ತು,ಅದೆಷ್ಟು ಬೇಗ ಬೆಳೆದೆ ನೀನು,,,ಅಡಿಕೆ ಮರದಂತೆ, ನಿನ್ನ ಬುದ್ದಿ ಕೂಡ..ಮನಸ್ಸು ಕೂಡ. ಸ್ವಸ್ಥ ಮನಸ್ಸು ಬುದ್ಧಿ ಹಾಗೆ ಇರಲಿ ಎಂಬುದೊಂದೇ ಆ ದೇವರಲ್ಲಿ ಪ್ರಾರ್ಥನೆ.

೧೬ ಮುಗಿಯಿತು..ಅಲ್ವೇ???ರಾತ್ರಿ ೧೨ ಕ್ಕೆ ಫೋನ್ ಮಾಡೋಣ ಅಂದುಕೊಂಡೆ.ಬೇಡ ಇದನ್ನೇ ಕಳಿಸಿದರಾಯಿತು ಅಂದು ಬರೆಯುತ್ತ ಕುಳಿತೆ..ನಿನ್ನ ಜನುಮದಿನಕ್ಕೆ ಬೇರೆನು ಗಿಫ್ಟ್ ಕೊಡಲಾಗುತ್ತಿಲ್ಲ ,ಹಾರೈಕೆಯ ಹೊರತು ,ನೆಕ್ಷ್ತ ಟೈಮ್ ಮೋಸ್ಟ್ಲಿ ನಿನ್ನ ಬರ್ತ್ ಡೇ ಗೆ ನಾನು ಅಲ್ಲಿರುತ್ತೆನೇ ಎಂಬ ಆಶಯ ನನ್ನದು..

ಹ್ಯಾಪಿ ಬರ್ತ್ ಡೇ .ಡಿಯರ್ ತಮ್ಮ ..
ನೀನು ಕಂಡ ಕನಸೆಲ್ಲ ನನಸಾಗಲಿ.
ಲವ್ ಯು 
ನಿನ್ನ 
ಅಮಿತಕ್ಕ 

Sunday, May 20, 2012

ಪಾತ್ರಾ ಪರಿಣಯ



ಜೋರ್ ನಗು ಬಂತು ಸೋದರತ್ತೆ, ಕಾರವಾರದಲ್ಲಿ ಕೆಸುವಿನೆಲೆಯನ್ನು ಮಾರುತ್ತಾರೆ ಅಂದಾಗ ,ಆಗ  ನಾನ್ ಅಂದುಕೊಂಡಿದ್ದೆ ಹಳ್ಳಿಯ ಜೀವನ ಅದೆಷ್ಟು ಸುಖ ಅದೂ ಮಲೆನಾಡ ಹಳ್ಳಿಗಳು  ಸಂತೆಗೆ ಹೋಗದಿದ್ದರೂ ೧೫ ದಿನಗಳತನಕ ರೀಪೀಟ್ ಆಗದಂತೆ ಸೊಪ್ಪು ಸದೆ, ಚಿಗುರು ದಂಟು ಏನಾದ್ರು ಒಂದು ಸಿಕ್ಕೆ ಸಿಗುತ್ತೆ..ಗೊಜ್ಜು ಹಸಿಗಳಿಗೆ ತರಕಾರಿ ಸಿಪ್ಪೆಗಳನ್ನು ಬಳಸಿದರಾಯಿತು ಅಂದಿನ ಅಡುಗೆ,ಊಟ ಮುಗಿದಂತೆ..
ನಾನೂ ಕೂಡ ಮುಂಡಗೋಡ ದಿಂದ ಕುಂದಾಪುರದ ತನಕವಷ್ಟೇ ಕನಸಿದ್ದು..ವೈದೇಹಿಯವರ ಅಡುಗೆಮನೆ ಹುಡುಗಿಯಂತೆ,!

ನನ್ನ ಬದುಕಲ್ಲಿ ಪದೇ ಪದೇ ಹೊಸ ಆರಂಭಗಳು ಅಂಥದೇ ಒಂದು ಆರಂಭ, ಮದುವೆಯ ನಂತರ ಪಶ್ಚಿಮದ ಈ ನಾಡಿಗೆ ವಲಸೆ ಬರುವದರೊಂದಿಗೆ ಮತ್ತೊಮ್ಮೆ ಮರುಕಳಿಸಿತು.ಅಡುಗೆ ಮನೇ ಅದು ನನ್ನ ಪ್ರಯೋಗಶಾಲೆ.ಇಲ್ಲಿಗೆ  ನಂತರ ನನ್ನ ಅಡುಗೆಮನೆಗೆ ತರಕಾರಿಗಳು ಅಂತ ಸಿಗುತ್ತಿದ್ದುದು ಹೂ ಕೋಸು ,ಕ್ಯಾಬೇಜು ,ಬಿಟ್ಟರೆ ಅಪರೂಪಕ್ಕೆ ಬದನೆಯಂಥ ಒಬರ್ಜಿನ್ , ಅವರಿವರು ಬೆಲ್ಫಾಸ್ಟ್ ಸಿಟಿ ಗೆ ಹೋದಾಗ ತಂದು ಕೊಡುತ್ತಿದ್ದ ಬೆಂಡೆ ಕಾಯಿ  ಇವತ್ತು ಬೇಡ ನಾಳೆ ನಾಳೆ ಬೇಡ ನಾಡಿದ್ದು ಅಂದು ಫ್ರಿಡ್ಜ್ ನಲ್ಲಿಟ್ಟು ಅರ್ಧ ಕೊಳೆಸಿ ಅರ್ಧ ಉಳಿಸಿ ಪೌಂಡುಗಳನ್ನು ರೂಪಾಯಿಗೆ ಕನ್ವರ್ಟ್ ಮಾಡಿ .ಅಯ್ಯೋ ಇಷ್ಟು ಹಣವನ್ನು ಬಿನ್ ಗೆ ಹಾಕಿದೆ ಅಂದು ಅನ್ನಪೂರ್ಣೆ ,ಮಾತೇ ಲಕ್ಶ್ಮಿ ಯರಲ್ಲಿ ಕ್ಷಮೆ ಬೇಡುತ್ತಾ ಮತ್ತೆ ಬ್ರೋಕೊಲಿ , ಬೆಲ್ ಪೆಪ್ಪರ್ ಗಳ ಮೊರೆ ಹೋಗುತ್ತಿದ್ದೆ.

ಊರ ತಿಂಡಿ ತಿನಿಸುಗಳ ಬಗ್ಗೆ ಖಯಾಲಿ ಇಲ್ಲದೇ ಹೋಗಿದ್ದರೆ ಇಲ್ಲಿನ ಬರ್ಗರ್ ಪಿಜ್ಜಾಗಳು ,ಪೀಟಾ ಬ್ರೆಡ್ಡು ಗಳು ಮನಸಿಗೆ ಹಿತ ಕೊಡುತ್ತಿದ್ದವೋ ಏನೋ..ನನ್ನದೋ ಪಂಡಿತರ ಮನೇ.ಜ್ವರ ಬಂದರೂ ಅಡುಗೆಯಲ್ಲೇ ಔಷದಿ ಕೊಟ್ಟು ಗುಣಮಾಡುವ ವಾತವರಣದಲ್ಲಿ ಬೆಳೆದ ನಾನು ನಮ್ಮೂರ ತರಕಾರಿಗಳಿಲ್ಲದೆ ಇಲ್ಲಿಯ ತರಕಾರಿಗಳಲ್ಲಿ ಅಲ್ಲಿನ ಅಡುಗೆ ಮಾಡಿ ಆ ರುಚಿ ಕಾಣಲು ತಹ ತಹಿಸಿದೆ..ಈ ಅಡುಗೆಮನೆ ನಂಟು ಒಮ್ಮೆ ಬೆಸೆಯಿತು ಅಂದ್ರೆ ಮುಗೀತು ಏನು ಇಲ್ಲ ಅಂತ ಗೊತ್ತಿದ್ದರು ಪದೇ ಪದೇ  ಫೇಸ್ ಬುಕ್ ಚೆಕ್ ಮಾಡಿದಂತೆ ,ಗುಡ್ ನೈಟ್  ಹೇಳಿದಮೇಲು ಮತ್ತೊಂದು ಎಸ್ಸೆಮ್ಮೆಸ್ಸು ಕಳಿಸಿದಂತೆ,ಯಾಕೋ ಸಮಾಧಾನ ಆಗಲ್ಲ..ಮತ್ತೇನಾದ್ರು ಹೊಸದು ,ಹಾಗಂತ ಮನಸು ಕೇಳುತ್ತಲೇ ಇರುತ್ತೆ.

ನಮ್ಮ ನೀಲ ಸುಂದರಿ(ನಮ್ಮ ಕಾರು ) ಬಂದಾಗಿನಿಂದ ನನ್ನ್ನ ಈ ರಗಳೆಗೆ ಅಲ್ಪವಿರಾಮ  ಸಿಕ್ಕಿದೆ ನನಗೆ ಶನಿವಾರ ಭಾನುವಾರಗಳಂದು ವರ್ಕ್ ಶಾಪ್ ,ಪ್ರೊಗ್ರಾಮ್ ಗಳು ಇರುತ್ತವೆ ಅದೇ ಕಾರಣಕ್ಕೆ ನಾವು ಬೆಲ್ಫಾಸ್ಟ್* ಗೆ ಪ್ರತಿವಾರ ಹೋಗುತ್ತೇವೆ ,ಹಾಗೊಂದು ದಿನ  ಒಮ್ಮೆ ಎಷಿಯನ್ ಫ್ಲೇವರ್ಸ್ ಗೆ ಹೋಗಿ ಬರೋಣ ಎಂದು ಪೋಸ್ಟ್ ಕೊಡ  ಹುಡುಕಿ  ಹೋದದ್ದಾಯಿತು , ಅಲ್ಲಿ ಪೂರ್ತಿ ಊರೇ ಇದೆ ಸುವರ್ಣ ಗಡ್ಡೆ ,ಅವರೆಕಾಯಿ ಮೂಲಂಗಿ,ತೊಂಡೆಕಾಯಿ ಅಯ್ಯೋ ಅಲ್ಲಿ ನೋಡಿ!! ಇದು ನೋಡಿ!! ಅನ್ನೋ ನನ್ನ ಸುಪರ್ ಉತ್ಸಾಹಕ್ಕೆ ಮನೆಯವರ ತಣ್ಣಗಿನ ನಗುವಷ್ಟೇ ಉತ್ತರ.ಸರಿ ಸುಮಾರು ೧ ವರ್ಷದ ನಂತರ  ಭಾರತದ ಅದು ಉರಾಲ್ಲಿ ಸಿಗುವ ತರಕಾರಿ ರಾಶಿ ಕಂಡು,ಪುಟ್ಟ ಹುಡುಗಿ ಚಾಕಲೇಟ್ ರಾಹಿ ನೋಡಿದ ಹಾಗೆ ಆಡುತ್ತಿದ್ದೆ...ಮಧ್ಯದಲ್ಲಿ   ಅಲ್ಲೇನೋ ಹಸಿರು ಬಣ್ಣದ ಕಟ್ಟು ಅದೇನು ಎಂದು ನೋಡುತ್ತಲೇ... ಅಯ್ಯೋ ಕೆಸುವಿನೆಲೆ...ಈಗೇನು ನಿನ್ನ ಮಾತು ಕಡಿಮೆನ ???ಕೆಸುವಿನೆಲೆ ಯಾಕೆ ಮಾರೈತಿ????ಅನ್ನೋ ಇವರ ಮಾತು ಕೇಳಿಸಿದರು ಕೇಳದಂತೆ..ಅದರ ಬೆಲೆ ಕೂಡ ನೋಡದೆ ತಗೊಂಡು ಬಂದೆ..ಕೆಸುವಿನೆಲೆ ಸಿಕ್ಕ ಖುಷಿ ಒಂದುಬದಿಯಾದರೆ ಅದರ ಪತ್ರೋಡೆಯನ್ನು,ಮಾಡಿ ಯಾರನ್ನ ಕರಿಬೇಕು ಅನ್ನೋ ಮಹದಾಲೋಚನೆ ಕೂಡ ತಲೆಯಲ್ಲಿ ,ಮತ್ತೆ  ನಾನೆಂದು ಮಾಡಿರದ ಮಾಡಲಾರೆ ಅಂದುಕೊಂಡ ''ಹಣ ಕೊಟ್ಟು ತಗೊಂಡ್ ಬಂದ ಕೆಸುವಿನೆಲೆ ಯ ಪತ್ರೊಡೆ.

ಲೆಕ್ಕಮಾಡಿ ೨೫ ಎಲೆಗಳು ,ಅದರಲ್ಲೂ ಇಲ್ಲದ ಆಸೆ ನನಗೆ  ಒಂದು ಗೊಜ್ಜು ,ಸ್ವಲ್ಪ ಅಳವತಿ ಮಾಡಿದರೆ ಹೀಗೆ ಅನ್ನೋ ಯೋಚನೆ..ಪತ್ರೊಡೆ ಮಾಡಲು ಸ್ವಲ್ಪ ಪೂರ್ವತಯಾರಿ ಬೇಕೇ ಬೇಕು ಅಕ್ಕಿ +ತೊಗರಿಬೇಳೆ ನೆನೆ ಹಾಕಬೇಕು ,ಮೆಣಸು ಕೊತ್ತಂಬರಿ ಇಂಗು ಹುರಿಯಬೇಕು ಕೊಬ್ಬರಿ ಮಸಾಲೆ ..ಇದು ಆಗಲು ಇನ್ನೊಂದು ದಿನ ಅದ್ರು ನಾನೂ ಕಾಯಲೇಬೇಕು..ಎದುರಿಗೆ ಎಲೆ ನೋಡಿ ನಾನು ಕಾಯೋದು ಅಂದ್ರೆ ..ಇಲ್ಲ ಅದೆಲ್ಲ ಆಗಲ್ಲ..ಪತ್ರೊಡೆ ಅಲ್ಲದಿದ್ದರೆ ಅದರ ತಂಗಿ ಪಾತ್ರ !!

ಪಾತ್ರ ಕೆಸುವಿನೆಲೆಯಿಂದ ಮಾಡುವ ಪದಾರ್ಥ ,ಪತ್ರೋಡೆಯದೆ ರೂಪ, ಅಂತರಂಗ ಮಾತ್ರ ಬೇರೆ, ಅಕ್ಕಿ, ಬೇಳೆ, ಮೆಣಸಿನ ಮಸಾಲೆ ಬದಲು ಕಡಲೆ ಹಿಟ್ಟು +ಬೆಳ್ಳುಳ್ಳಿ+ಶುಂಟಿ+ಕೊತ್ತಂಬರಿ ಸೊಪ್ಪು+ಮೆಣಸಿನ ಪುಡಿ +ಜೀರಿಗೆ +ಹುಳಿರಸ ಹಾಕಿ ಮಾಡುವ ಸರಳ ಅಡುಗೆ..ಮೂಲತ ಇದು ಗುಜರಾತಿಗಳ ಪಾಕವಿಧಾನ,ಅದಕ್ಕೆ ಮತ್ತಷ್ಟು ಸಾಮಗ್ರಿ ಗಳನ್ನು ಸೇರಿಸಿ ನಮ್ಮ ಕ್ರಿಯಾಶೀಲತೆಯ ಪ್ರದರ್ಶನಕ್ಕೂ ಅವಕಾಶ ಇರುವ ಅಡುಗೆ ಇದು.
ಆಲೋಚನೆ ಬಂದ ಮೇಲೆ ನನ್ನ ಮತ್ತು ಕೆಸುವಿನೆಲೆ ಮಧ್ಯ ಯಾರು ಬರಲಿಲ್ಲ..

ಕಡಲೆಹಿಟ್ಟಿನ ಮಸಾಲೆ ತಯಾರಾಯಿತು ,೧೫ ಎಲೆಗಳನ್ನು ಹಾಕಿ ಪಾತ್ರಾ ಸುತ್ತಿದ್ದು ಆಯಿತು ,ಅದನ್ನು ಚಂದ ಮಾಡಿ ಎತ್ತಿ ಬೇಯಿಸಲು ಹಾಕಿದ್ದು ಆಯಿತು.ಏನೋ ಒಂಥರಾ ಖುಷಿ.ಮಳೆಗಾಲದಲ್ಲಿ ಮೊದಲ ಬಾರಿ ಕಳಲೆ ತಿನ್ನುವ ಸಡಗರ,ಎಲ್ಳುರಿಗೆ  ಸೊಪ್ಪಿನ ತಂಬಳಿ,ಅಣಬೆ ಅದನ್ನೇಗೆ ಮರೆಯಲಿ..ಇವನ್ನೆಲ್ಲ ಪ್ರತಿವರ್ಷ ಸವಿದರೂ ಮತ್ತೊಂದು ವರ್ಷ ಮೊದಲು ಸವಿಯುವಾಗ ಅದೇನೋ ಖುಷಿ..ಅಪ್ಪೆ ಮಿಡಿ ಉಪ್ಪಿನಕಾಯಿಯಂತೆ, ಅಜ್ಜಿಮನೆ ಹಿತ್ತಲಿನ ಮಲಗೊವ ಮಾವಿನಂತೆ,,

ಓಹ್ ..ನನ್ನ ಪತ್ರಾ ಉಗಿಯಲ್ಲಿ ಬೆಂದು ಸಿದ್ಧವಾಗಿತ್ತು ,ಸ್ವಲ್ಪ ತಣಿದ ಮೇಲೆ ಗೊಲಕಾರಕ್ಕೆ ಕತ್ತರಿಸಿ ಬಿಳಿ ಎಳ್ಳು ಸಿಂಪಡಿಸಿ ಗರಿ ಗರಿ ಮಾಡಿ ಎಣ್ಣೆಯಲ್ಲಿ  ಕರಿದಿದ್ದು ಆಯ್ತು..ಅದೇ ಸಮಯಕ್ಕೆ ನನ್ನ ಗೆಳತಿ ಸುರ್ಯಪ್ರಭ ಹಾಜರಿ ಇತ್ತಳು, ಅಕೆನೆ ಪಾತ್ರಾ ದ ರುಚಿ ಮೊದಲು  ನೋಡಿ  ಆಹಾ ಅಂದಿದ್ದು..ನನಗೆ ಅದೇನೋ ಸಮಾಧಾನ.''ಅಮಿತಾ ನೀವು ನಿಸರ್ಗದೊಂದಿಗೆ ಅದೆಷ್ಟು ಹೊಂದಿಕೊಂಡಿದ್ದೀರಿ ಯಾವ ಸೊಪ್ಪು ,ಸಿಪ್ಪೆ ಚಿಗುರು ಅದನ್ನೆಲ್ಲ ಅಡುಗೆ ಮಾಡುವ ಆರ್ಟ್ ಅದೆಷ್ಟು ಚಂದ .ಅದಕ್ಕೆ ನಿಮಗೇ ದೇವರು ಇಷ್ಟು ಸಂವೇದನೆ ,ಸೂಕ್ಸ್ಮತೆ ಕೊಟ್ಟಿದಾನೆ.''ಅಂತೆಲ್ಲ ಆಕೆ ಮಾತಾಡುತ್ತಲೇ ಇದ್ದಳು,ಮನಸು ಮಲೆನಾಡು ,ಕರಾವಳಿ ಬಯಲುಸೀಮೆ ಯ ಹದವಾದ ಮಿಶ್ರಣದ ನನ್ನ ನಾಡನ್ನು ನೆನೆಸಿಕೊಂಡಿತ್ತು , ಕಣ್ಣು ಉಳಿದ ೧೦ ಕೆಸುವಿನೆಲೆಯ ಕರ್ಕಲಿ 
ಮಾಡುವ ಕನಸು ಕಾಣುತಿತ್ತು

Friday, February 3, 2012

ಆಡುತ ಹಾಡುತ ಬೆಳವಣಿಗೆ -ರೈಮ್ ಟೈಮ್

 
ನಿಮಗ ಬಾಲವಾಡಿ ಹಾಡುಗಳು ನೆನಪಿವೆಯೇ???  ಇ ಪ್ರಶ್ನೆಗೆ ಇಲ್ಲ ಅಂತ ಉತ್ತರ ಬರೋದಿಲ್ಲ ಎಂಬ ಪೂರ್ಣ ಭರವಸೆ ಇದೆ.ಯಾಕೆಂದರೆ ಆ ಹಾಡುಗಳಿಗೆ ಅಂತಹ ಒಂದು ಅಪೂರ್ವ ಶಕ್ತಿ ಇದೆ.ಜೀವದಷ್ಟು ಪ್ರೀತಿಸಿದ  ಕವಿಯ ಹಾಡುಗಳು ಕಾಲಕ್ರಮೇಣ ಮರೆತು ಹೋಗಬಹುದು..ಭಾಳ ಇಷ್ಟಾ ಆದ ಸಿನಿಮಾ ಹಾಡು ನೆನಪ ತಕ್ಕೆಯಿದ ಜಾರಿ ಹೋಗಿರಲು ಬಹುದು.ಆದರೆ ಈ ಬಾಲವಾಡಿ ಹಾಡುಗಳು ಹಾಗಲ್ಲ.ಎಷ್ಟು ವರ್ಷದ ನಂತರ ನಿದ್ದೆಯಲ್ಲಿ ಎಬ್ಬಿಸಿ ಕೇಳಿದರು ಪಟ ಪಟ ನೇ ತುಟಿಯಾಚೆ ಪರೇಡು ಹೊರಡುತ್ತವೆ,ಏಕೆಂದರೆ ನಾವು ಅಚ್ಚರಿಯಿಂದ ನೋಡುವ ಈ ಬಣ್ಣದ ಜಗತ್ತಿಗೆ ಮತ್ತು ನಮ್ಮ ಮನಸಿಗೆ ಒಂದು ಸುಗಮ ,ಕಲ್ಪನಾಶೀಲ ,ಸುಂದರ  ದಾರಿಯನ್ನು ಈ ಪುಟಾಣಿ ಪದ್ಯಗಳು ನಿರ್ಮಿಸುತ್ತವೆ.

ಉದಾಹರಣೆಗೆ ;-ಚುಕು ಬುಕು ಚುಕುಬುಕು ಉಗಿಯ ಬಂಡಿ
ಹೊಗೆಯ ತೆರೆಗಳು ಮೇಲೆ ಹೋಗಿ
 ಓಡುವ ಗಿಡಗಳ ನೋಡೋಣ` ಮಾವನ ಊರಿಗೆ ಹೋಗೋಣ ........

ಇಲ್ಲಿ ಮಗು ವಿನ ಮನಸು ಉಗಿಬಂಡಿ-ಅದೂ ಮಾಡುವ ಶಬ್ದ -ಅದೂ ಉಗುಳುವ ಹೊಗೆ -ಕಿಟಕಿಯಿಂದ ನೋಡಿದರೆ ಓಡುವ ಗಿಡ ಹೀಗೆ ಎಷ್ಟೊಂದು ಘಟನೆಯನ್ನು ತನ್ನ ಕಲ್ಪನೆಯಲ್ಲಿ ತಂದು ಕೊಳ್ಳುತ್ತದೆ ಮತ್ತು ಅದು ಮಗುವಿನ ಹಸಿ ಗೋಡೆಯಂತ ಮನಸಿನಲ್ಲಿ ಅಚ್ಚಾಗಿ ಉಳಿಯುತ್ತದೆ.
ಅದಕ್ಕೆ  ಏನು ಮರೆತರು ಈ ಹಾಡುಗಳು ನಮ್ಮ ಸ್ಮೃತಿಯಿಂದ ಅದಷ್ಟು ಸುಲಭವಾಗಿ ಮಾಸಲಾರವು.
ಆದ ಕಾರಣ ಮಕ್ಕಳ  ಕಲಿಕೆಯ ಆರಂಭಿಕ  ಹಂತದಲ್ಲಿ ಈ ಪುಟ್ಟ ಪುಟ್ಟ ಸರಳ ಧಾಟಿಯ ಪದ್ಯಗಳು ಕಲಿಕೆಯ ಬಹುಮುಖ್ಯ ಮಾಧ್ಯಮವಾಗಿ ಪರಿಣಮಿಸುತ್ತವೆ.

೫೦ ವರ್ಷ ಗಳ ಹಿಂದೆ ಕಲಿತ ಈ ಹಾಡುಗಳು ಈಗಲೂ ಅಷ್ಟೇ ಉಮೇದಿನಿಂದ ಹಾಡುವವರಿದ್ದಾರೆ ,ಸಮಸ್ಯೆ ಎಂದರೆ ಈಗಿನ ಮಕ್ಕಳಿಗೆ ಹಿಂದಿನ ತರಗತಿಯಲ್ಲಿ ಕಲಿತ ಪದ್ಯಗಳು ನೆನಪಿರುವುದಿಲ್ಲ.ಇದಕ್ಕೆ ಪುಷ್ಟಿಯಾಗಿ  ನ್ಯೂಯಾರ್ಕ್ ನ ಮುನ್ದೋ ಪಬ್ಲಿಕೇಶನ್ ನ  ಟೋನಿ ಸ್ಟೀಡ್ ಅವರು ಮಾಡಿದ ಸಂಶೋಧನೆಯ ಪ್ರಕಾರ ೧೯೪೫ ರ ಹೊತ್ತಿಗೆ ಪ್ರಾಥಮಿಕ ಶಾಲೆಯ ಮಕ್ಕಳ ಶಬ್ದ ಸಂಪತ್ತು ಸುಮಾರು ೧೦,೦೦೦  ಮತ್ತು ಈಗಿನ ಮಕ್ಕಳ  ಶಭ್ಧ ಕೋಶದಲ್ಲಿರುವುದು ಸರಿ ಸುಮಾರು ೨,೫೦೦ ಪದಗಳು.ಈ ಅನಾರೋಗ್ಯಕರ ಬೆಳವಣಿಗೆಗೆ ಟೋನಿ  ಕೊಡುವ ಮುಖ್ಯ ಕಾರಣ ಪಾಲಕರು ಮಕ್ಕಳೊಂದಿಗೆ ಮಾತಾಡುತ್ತಿಲ್ಲ ಮತ್ತು ಮಕ್ಕಳ ಮನಸ್ಸನು ಓದುವ ತಾಳ್ಮೆ ತೋರುತ್ತಿಲ್ಲ .ಮತ್ತು ಅವರಿಗೆ ರೈಮ್  ಗಳ ಪರಿಚಯ ಸರಿಯಾಗಿ ಮಾಡಿಕೊಡುತ್ತಿಲ್ಲ.ಎಂಬುದು
ಹಿಂದೆ ಕೂಡು ಕುಟುಂಬದಲ್ಲಿ ಪುಟ್ಟ ಮಕ್ಕಳು ಅಜ್ಜಿ ತಾತನೊಂದಿಗೆ ಬೆಳೆಯುತ್ತಿದ್ದವಾದ್ದರಿಂದ..ತಮ್ಮ ಬೆರಳುಗಳ ಚಲನೆಯಿಂದ ಶುರುಮಾಡಿ ನಡಿಗೆ, ಮಾತು ,ಆಟ, ಊಟ ಎಲ್ಲದಕ್ಕೂ ಅವರಿಗೊಂದು ಪದ್ಯ ,ಮತ್ತು ಹಿತವಾದ ಮಾತು ಆಧಾರ ವಾಗುತಿತ್ತು. ಮತ್ತು ಮಕ್ಕಳು ಹಿರಿಯರಿಂದ ಕೇಳಿದ ಪದ್ಯದ ಶಬ್ಧಗಳಿಗೂ ತಾವು ನೋಡುತ್ತಿರುವ ದೃಶ್ಯಕ್ಕೂ ತಾಳೆ ಹಾಕುತ್ತಿದ್ದವು.

ಒಂದು ಪಕ್ಷ ಪದ್ಯದಲ್ಲಿರುವ ವಸ್ತುಗಳು ಮಕ್ಕಳ  ಎದುರಿಗೆ ಇಲ್ಲವಾದಲ್ಲಿ ಅವುಗಳ ಕಲ್ಪನೆ ಮಾಡಿ ದೃಶ್ಯ ಚಿತ್ರಣವನ್ನು ತಮ್ಮ ಮನದ ಕೆನ್ವಾಸ್  ಮೇಲೆ ಬಿಡಿಸಿದುತ್ತಿದ್ದವು,ದಿನ ಕಳೆದಂತೆ ಹಾಡುಗಳು ಕಡಿಮೆ ಆದವು ಮಾತುಗಳು ನಿಂತು ಹೋದವು ಟೀವಿ ಎಂಬುದು ತಿಂಡಿ ಊಟ  ಮತ್ತು ನಿದ್ದೆಯನ್ನು ಆಳ ತೊಡಗಿತು .ಈಗ ಮಕ್ಕಳು ಯೋಚಿಸುತ್ತವೇನೋ ನಿಜ ಆದರೆ ಕಾರ್ಟೂನ್ ತೋರಿಸಿದ್ದನ್ನು.ಹಾಗೆಂದು ಕಾರ್ಟೂನ್ ಗಳು ಮಕ್ಕಳ ಸೃಜನಶೀಲತೆ ಹಾಳು ಮಾಡುತ್ತಿವೆ ಎಂಬರ್ಥವಲ್ಲ .ಆದರೆ ಎಲ್ಲೋ ಒಂದು ಕಡೆ ಅವರ ಬೆಳವಣಿಗೆ ಕುಂಟಿತ ಕೊಳ್ಳುತ್ತಿದೆ. ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಾವು ಪಾಲಕರೇ ಕಾರಣವಾಗುತ್ತಿದ್ದೇವೆ, ವೃತ್ತಿ ಮತ್ತು ಕುಟುಂಬದ ಸ್ವಾಸ್ಥದ ನಡುವೆ ಸಮಾನತೆ ಹಿಡಿತ ಸಾಧಿಸುವಲ್ಲಿ ಅದೆಷ್ಟು ಬ್ಯುಸಿ ಆಗಿಬಿಡುತ್ತೇವೆ .ಮತ್ತು ಗೊತ್ತಿಲ್ಲದೇ ಮಗುವಿನ ಭವಿಷ್ಯದ ಅಡಿಗಲ್ಲಗಬೇಕಾಗಿರುವ ಸಮಯವನ್ನು ನಿರ್ಲಕ್ಷಿಸಿ ,ಅವರ ಭವಿತವ್ಯದ ಬೃಹತ್ ಬಂಗಲೆಯ ಕಾಮಗಾರಿ ಶುರುಮಾಡಿ ಬಿಡುತ್ತೇವೆ.ಈ ಪುಟ್ಟ ತಪ್ಪು ಮಗುವಿನ ಸಂಪೂರ್ಣ ಬದುಕಿನ ಸ್ವಸ್ಥ ಕೆಡಿಸುತ್ತದೆ,ಎಂಬುದು ತಜ್ಞರ ಅಂಬೋಣ.

ಮಗುವಿನ ಮೊದಲ ಕೆಲವು ವರ್ಷಗಳು ನಮ್ಮ ಮಾತನ್ನು ಅವುಗಳು ಆಲಿಸುವಂತೆ ,ಪ್ರೇರೇಪಿಸಬೇಕು,ಇಲ್ಲಿ  ಮಾತಿಗಿಂತ ಮುಖ್ಯವಾದುದ್ದು ಅವೆ ಬಾಲ ಗೀತೆಗಳು. ಮಕ್ಕಳು ಅನುಭವಿಸಿ ಕುಣಿಯುವ  ರೈಮ್  ಎಂಬ ಪುಟ್ಟ ಹಾಡು ಅದೆಷ್ಟು ಪ್ರಯೋಜನಕಾರಿ  ಎಂಬುದನ್ನ ಈ ಕೆಳಗಿನ ಅಂಶಗಳಿಂದ ಮನಗಾಣ ಬಹುದು.

  •   ಬಾಲವಾಡಿ ಹಾಡುಗಳು ಮಗುವನ್ನು ಮಾತನಾಡಲು ಪ್ರೇರೇಪಿಸುತ್ತವೆ.

  •   ಧ್ವನಿಯ ಹಿತವಾದ ಬಳಕೆ ಮತ್ತು ಅದರ ಅಂದವನ್ನು  ಗ್ರಹಿಸುವಲ್ಲಿ ಮಗುವಿಗೆ  ಸಹಕರಿಸುತ್ತವೆ.
ಮಕ್ಕಳ ಉಚ್ಚಾರ ಸ್ಪಷ್ಟತೆಗೆ ಸಹಾಯಕ ,


  • ಕಲಿತ ಹೊಸ ಹಾಡನ್ನು ಮನೇ ಮಂದಿ ,ಸ್ನೇಹಿತರು , ಬಂಧುಗಳ ಮುಂದೆ ಹಾಡುವ ರೂಡಿಯಿಂದ ಮಕ್ಕಳು ಸಭಾ ಕಂಪನ ,ಭಯ,ಗಳಿಗೆ ಒಳಗಾಗುವುದಿಲ್ಲ ಅವರಲ್ಲಿ ಆತ್ಮವಿಶ್ವಾಸ ಹೆಚುತ್ತದೆ.
  • ಹಿಂದಿನ ಕಾಲದಲ್ಲಿ ಧಾರ್ಮಿಕ ,ಸಾಮಾಜಿಕ ಮೌಲ್ಯಗಳನ್ನು ಮತ್ತು ನಮ್ಮ ಆಚರಣೆಗಳನ್ನು ಮಗುವಿನ ಮನಸ್ಸಲ್ಲಿ ಬಿಂಬಿಸಲು ಹಿರಿಯರು ಈ ಹಾಡಿನ ಸಹಾಯ ಪಡೆಯುತ್ತಿದ್ದರು ,

ಉದಾ ;-ಗಣೇಶ ಬಂದ ಕಾಯಿ ಕಡಬು ತಿಂದ
            ಹೊಟ್ಟಿ ಮ್ಯಾಲೆ ಗಂಧ
            ಬಾವ್ಯಾಗ ಬಿದ್ದ  ಮುಳುಗಿ ಮುಳುಗಿ ಎದ್ದ ,ಈ ಹಾಡಿನಲ್ಲಿ ಗಣೇಶ ಚತುರ್ಥಿಯ ಸಂಪೂರ್ಣ ಕಥೆಯೇ ಇದೆ.ಇದಲ್ಲದೆ ಇಂಗ್ಲೀಷ್ ರೈಮ್ ಗಳಲ್ಲಿ ಕ್ರಿಸ್ಮಸ್ ,ಸಂತಾ,ಸ್ನೌ ಮನ್ ,ಹಲೋವಿನ್ ಗೆ ಸಂಬಂಧಿಸಿದ ಹಲವು ಗೀತೆಗಳಿವೆ.
  • ಮಕ್ಕಳ ಜ್ಞಾಪಕ ಶಕ್ತಿ ವೃದ್ಹಿಸುತ್ತದೆ.
  • ಸರಳ ವಾಖ್ಯಾ ಗಳು .ಮತ್ತು ವಾಕ್ಯವನ್ನು ರಚಿಸುವ ವಿಧಾನ ಈ  ಹಾಡುಗಳು ಮಕ್ಕಳಿಗೆ ಹೇಳಿಕೊಡುತ್ತವೆ
  • ಮಗುವಿನ ಶಭ್ದ ಸಂಪತ್ತು ಬೆಳೆಯುತ್ತದೆ.
  • ಮಗುವು ವಿವಿಧ ಧ್ವನಿಗಳನ್ನು ಗ್ರಹಿಸಿ,ಗುರುತಿಸಲು ಕಲಿಯುತ್ತದೆ.
  • ಈ ಸರಳ ಹಾಡುಗಳಲ್ಲೂ ಹಲವು ಟಂಗ್ ಟ್ವಿಸ್ಟೆರ್ ಗಳಿರುವುದರಿಂದ ಮಗುವಿನ ಮುಖ ಮತ್ತು ಗಂಟಲು ,ಬಾಯಿಗೆ ಅಗತ್ಯವಿರುವ ವ್ಯಾಯಾಮ  ಲಭಿಸುತ್ತದೆ 
  • ಅಭಿನಯ ಗೀತೆಗಳಲ್ಲಿ ಮಗುವಿನ ನಟನಾ ಸಮರ್ಥ ಅದರ ಅಭಿನಯ ಕೌಶಲ ಗಳನ್ನು ಗುರುತಿಸಿ ಅದರ ಆಸಕ್ತಿಯನ್ನು ಗುರುತಿಸಲು ಸುಲಭವಾಗುತ್ತದೆ.
  • ಈ ಗೀತೆಗಳು ಮಕ್ಕಳಲ್ಲಿ ಹಾಸ್ಯ  ಪ್ರಜ್ಞೆಯನ್ನು ಬೆಳೆಸುತ್ತವೆ.
  • ಹಾಡುವಾಗ ಪಾಲಕರೊಂದಿಗೆ ತಟ್ಟುವ ಚಪ್ಪಾಳೆ, ಅಪ್ಪುಗೆ ,ಮುದ್ದು ಮಗುವನ್ನು ಹೊಸದನ್ನು ಕಲಿಯಲು ,ಹುಮ್ಮಸ್ಸು ಕೊಡುತ್ತದೆ.
  • ಖುಷಿ, ದುಃಖ ,ಸಹಾಯ ದಯೆ,ಕರುಣೆ ಮಮತೆ ಗಳಂತ ಹಲವು ಭಾವನೆ ಗಳನ್ನು ರೈಮ್  ಗಳು ಹುಟ್ಟು ಹಾಕುತ್ತವೆ,ಅವು ಅನುಭವಿಸಿದ್ದನ್ನು ಶಬ್ದ ರೂಪದಲ್ಲಿ ವಿವರಿಸಲು ಕಲಿಯುತ್ತವೆ.

ಮಗು ೮ ವರ್ಷಗಳ ತನಕ ತನ್ನ ಸುತ್ತಮುತ್ತಲಿನ ಎಲ್ಲಾ ಕಲಿಯ ಬಲ್ಲ ವಿಷಯವನ್ನು ಸ್ಪಂಜಿನಂತೆ ಹೀರಿ ಕೊಳ್ಳುತ್ತದೆ ನಂತರದಲ್ಲಿ ಕಲಿತಿದ್ದನು  ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಲು ನೋಡುತ್ತವೆ.ಆ ಕಾರಣದಿಂದಲೇ ಮಗುವಿನ ಈ ಮೊದಲ ೮ ವರ್ಷಗಳನ್ನು ಗಂಟು ಕಾದಂತೆ ಕಾದು 
ಅದಕ್ಕೆ ಸುಭದ್ರ ಬುನಾದಿ ಹಾಕುವ ಜವಾಬ್ದಾರಿ ನಮ್ಮ ಮೇಲಿದೆ .

ಅಂತ ಜವಾಬ್ದಾರಿಯುತ ಕೆಲಸದಲ್ಲಿ ಪುಟ್ಟ ಪುಟ್ಟ ಪದ್ಯ ಗಳು ನಮ್ಮ ಅರ್ಧ ಕೆಲಸವನ್ನು ಸುಲಭ ಗೊಳಿಸುವುದೇ ಒಂದು ಅಚ್ಚರಿಯ ವಿಷಯ.
ಆ ಕಾರಣದಿಂದಲೇ ಪಶ್ಚಿಮದ ದೇಶಗಳಲ್ಲಿ ಹುಟ್ಟಿದ ೩ ವಾರದ ಮಗುವಿನಿಂದ ಹಿಡಿದು ಅವು ಒಂದನೇ ತರಗತಿಗೆ ಹೊಗುವ ತನಕ ರೈಮ್  ಟೈಮ್ ಎಂಬ ವಿಶೇಷ  ತರಗತಿಗಳನ್ನು ನಡೆಸಲಾಗುತ್ತದೆ. ನಮ್ಮ ನಾಡಿನಲ್ಲಿ ತರಗತಿಯ ಅಗತ್ಯವಿಲ್ಲವೇನೋ.ನಮ್ಮ ಅಮ್ಮ,ಅಜ್ಜಿ ಹೇಳಿಕೊಟ್ಟ ಹಾಡುಗಳನ್ನು ಅವರ ಮುಂದೆ ಹೇಳುತ್ತಾ ಹೋದರು ಸಾಕು.






ನಾವು ಮಾಡಬೇಕಾದ್ದೇನು ??
  • ಮಗುವಿನೊಂದಿಗೆ ಮಾತಾಡಿ. ಮತ್ತು ಪುಟ್ಟ ಪುಟ್ಟ ಹಾಡುಗಳನ್ನು ಕೇಳಿಸುವ ಅಭ್ಯಾಸ ಮಾಡಿಕೊಳ್ಳಿ,
  • ನಿಮ್ಮ ಆಡುನುಡಿಯೊಂದಿಗೆ,ಮಗು ಬೆಳೆಯುವ ಪರಿಸರದಲ್ಲಿ ಬಳಕೆಯಾಗುವ ಭಾಷೆಯ ಶಿಸು ಗೀತೆಗಳು ನಿಮ್ಮ ಸಂಗ್ರಹದಲ್ಲಿ ಸೇರಿರಲಿ.
  • ಎಣಿಕೆ,ಅಕ್ಷರಗಳನ್ನು ಆದಷ್ಟು ಹಾಡಿನೊಂದಿಗೆ ಪರಿಚಯಿಸಲು ಯತ್ನಿಸಿ.(ಉದಾಹರಣೆಗೆ ಕನ್ನಡದ ೧ ..೨....ಬಾಳೆ ಎಲೆ ಹರಡು ..೩..೪...ಅನ್ನ ಹಾಕು. ಇಂಗ್ಲೀಷ್  ನಾ ೧,,೨ ೩,,೪..೫..then i cought  a fish  alive..ಎಂಬಂತ ಎಣಿಕೆ ಹಾಡುಗಳು .)
  • ಕೇವಲ ಹಾಡುವುದಷ್ಟೇ ಅಲ್ಲ ,ಹಾಡಿನ ಸಾಹಿತ್ಯಕ್ಕನುಗುಣವಾಗಿ ಧ್ವನಿಯನ್ನು  ಬದಲಾಯಿಸಿ ,ಉದಾಹರಣೆಗೆ ,ಪ್ರಾಣಿ ಪಕ್ಷಿಗಳ ಪದ್ಯಗಲಿದ್ದರೆ ಅವುಗಳ ಧ್ವನಿಯನ್ನು ಅನುಕರಿಸಿ ಇದು ಮಗುವಿಗೆ ಮನರಂಜನೆ ನೀಡುತ್ತದೆ.
  • ಇಗ ಮೊದಲಿನಂತೆ ಹಾಡುಗಳನ್ನು ಬರೆದಿಡಬೇಕು ಬಾಯಿಪಾಠ ಮಾಡಬೇಕು ಎಂಬ ಅಗತ್ಯವಿಲ್ಲ.ನಿಮ್ಮ ಸಂಭಂಧಿಗಳಲ್ಲಿ,ಮನೆಯ ಹಿರಿಯರಲ್ಲಿ ಯಾರಿಗಾದರೂ ಇಂತಹ ಪದ್ಯಗಳು ಬಂದ್ರೆ ನಿಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡರು ಆದೀತು.
  • ಮಗುವನ್ನು ಮಲಗಿಸೋ ಮುಂಚೆ ಈ ಹಾಡುಗಳನ್ನು ಒಮ್ಮೆ ಹಾಡಿದರು ಸಾಕು,ಮತ್ತು ಇದು ದಿನದ ರೂಡಿಯಾಗಲಿ.
  • ಮಗು ತಾನು ಕೇಳಿದ್ದ\ನ್ನು ಕೆಲವೊಮ್ಮೆ ಬರೆಯಲು ಚಿತ್ರಿಸಲು ಯತ್ನಿಸುತ್ತದೆ.ಅದರ ಪ್ರಯತ್ನದಲ್ಲಿ ಎಂದು ನೀವು ಹಸ್ತಕ್ಷೇಪ ಮಾಡಬೇಡಿ.ಅದೂ ಬರೆದಿದ್ದನ್ನು ಶ್ಲಾಘಿಸಿ  ಮುದ್ದಿಸುವುದಷ್ಟೇ ಕೆಲಸ.
  • ದಿನ ಕಥೆ ಹೇಳುವ ರೂಡಿ ಇದ್ದರೆ ಕೆಲವೊಮ್ಮೆ ಮಗುವನ್ನು ಕಥೆ ಹೇಳಲು ಪ್ರೇರೇಪಿಸಿ.ಮತ್ತು ರೈಮ್ ಗಳನ್ನು ನೀನೆ ನನಗೆ ಹೇಳಿಕೊಡು ಎಂಬಂತೆ ಒತ್ತಾಯಿಸಿ.
ಇಂತಹ ಕೆಲವು ಪುಟ್ಟ ಪುಟ್ಟ ರೂಡಿಯಿಂದ ಮಗುವಿಗೆ ಕೇಳುವಿಕೆ ,ಆಲಿಸುವಿಕೆ ,ಅಭ್ಯಾಸವಾಗುತ್ತದೆ,ಅವು ನಿಮ್ಮ ಮಾತಿಗೆ ಕಿವಿ ಯಾಗುತ್ತವೆ .ಇದೊಂದು ರೀತಿಯ ವ್ರತ ವಿದ್ದಂತೆ ಮತ್ತು ಅದರ ಫಲವನ್ನು ನಾವು ಎದುರಿಗೆ ಕೂತು ಕಾಣಬಹುದು ,ಅನುಭವಿಸಬಹುದು ನಿಮ್ಮ  ಪ್ರಯತ್ನ  ದಲ್ಲಿ  ಸಹಕಾರಿಯಗುವಂಥ  ಕೆಲವು  ವೆಬ್ ಸೈಟ್ ಗಳು ಇಲ್ಲಿವೆ  .ಮತ್ತೇಕೆ ತಡ ಶುರುವಾಗಲಿ ನಿಮ್ಮ ರೈಮ್ ಟೈಮ್ .ಗುಡ್ ಲಕ್

Wednesday, January 11, 2012

ಅಮ್ಮ ಮಾಡಿದ ಕೇಕು




ಜಗತ್ತಿಗೆಲ್ಲ ಜನೆವರಿ ೧ ಹೊಸ ವರ್ಷದ ಆರಂಭ ಆದ್ರೆ..ನನಗೆ ಮಾತ್ರ ಜನೆವರಿ ೩ ಹೊಸ ವರ್ಷ ಅದ್ಯಾಕೆ ಅನ್ನೋ ಪ್ರಶ್ನೆ ಹುಟ್ಟೋ ಮೊದಲೇ ಉತ್ತರ ಹೇಳೋ ಕಾತರ ನನಗೆ...ಈ ದಿನವೇ ನನಗೆ ಜಗತ್ತಿನ ಅತ್ಯುನ್ನತ ಹುದ್ದೆ ಸಿಕ್ಕಿದ್ದು,ಹೊಸ ಬದುಕಿಗೆ ಹೊಸ ಜೀವನ ಶೈಲಿಗೆ ,ಹೊಸ ಪದವಿಗೆ ನನ್ನ ಪರಿಚಯ ಆದದ್ದು..ನಾ ಅಮ್ಮ ಎಂಬ ಟೈಟಲ್ ಪಡೆದಿದ್ದು...ಬದುಕಿನ ಪ್ರತಿ ಬದಲಾವಣೆಯನ್ನು ಮನಸ್ಪೂರ್ತಿ ಸ್ವಾಗತಿಸಿ ನೋವನ್ನು ಕೂಡ  ಒಂದು ಖುಷಿಯಿಂದ ಅನುಭವಿಸುವ ನನಗೆ ಇದು ಅವರ್ಣನೀಯ ಅನುಭವ.ಆಸ್ಪತ್ರೆಗೆ ದಾಖಲಾಗಿ,ಹೊಟ್ಟೆನೋವ ಭರದಲ್ಲಿ ನನ್ನ ತಲೆಯಲ್ಲಿ ಅಚ್ಚಾಗಿದ್ದ ಅಷ್ಟು ಹಾಡುಗಳನ್ನು ಹಾಡಿ  ಬರಿದು ಮಾಡಿ ಸಂಕಟದಲ್ಲೂ ಸಂತಸ ವನ್ನು ತುಂಬಿ ಕೊಟ್ಟ ರಾತ್ರಿಯದು...

ಮುಂಜಾನೆ ಮೊದಲ ಪ್ರಹರಕ್ಕೆ ಪ್ರಥಮ್ ನನ್ನ ಪಕ್ಕ ದಲ್ಲಿ .ಹಾಯಾಗಿ ನಿದ್ರಿಸುತ್ತಿದ್ದ. ಇದೆಲ್ಲ ಮೊನ್ನೆ ಮೊನ್ನೆಯಂತಿದೆ ಅದಾಗಲೇ ಪ್ರಥಮನಿಗೆ ೫ ತುಂಬಿತು .ಕಳೆದ ನಾಲ್ಕು ವರ್ಷದ ಜನುಮದಿನದ ಆಚರಣೆಯನ್ನು ನಮಗಿಷ್ಟ ಬಂದಂತೆ ಆಚರಿಸಿದ್ದು ಆಯ್ತು. ಇಗ ಅವನು ತನ್ನ ಅನಿಸಿಕೆ ಇಚ್ಹೆ ವ್ಯಕ್ತ ಪಡಿಸಲು ಶುರು ಮಾಡಿದಾನೆ ಅದಕ್ಕೆ ಅವನನ್ನೇ ಕೇಳಿದೆ ಹೇಗೆ ಆಚರಿಸೋಣ ನಿನ್ನ ಬರ್ತ್ ಡೇ???ಯಾರನ್ನ ಕರಿಬೇಕು ??ನಿನಗೇನು ಗಿಫ್ಟ್ ಬೇಕು?? 
                                                                                                                               
ಕೇಳೋದನ್ನೇ ಕಾಯುತ್ತಿದ್ದ ಅನಿಸುತ್ತೆ .''ಅಮ್ಮ ನನಗೆ ದೊಡ್ಡ ಕೇಕ್ ಬೇಕು''  ಮಗ ಅವನ ಇಚ್ಛೆ ಹೇಳಿದ ಕೂಡಲೇ ನನಗ್ಯಾಕೋ ಅಂಗಡಿಯಿಂದ ತರುವ ಮನಸ್ಸಾಗಲಿಲ್ಲ ,ನಾನೇ ಯಾಕೆ ಕೇಕ್ ಮಾಡಬಾರದು ಅನ್ನೋ ಉಮೇದು ತಲೆಯನ್ನು ಹೊಕ್ಕಿ ಇಂಟರ್ನೆಟ್ ತುಂಬಾ ಕೇಕ್ ರೆಸಿಪಿ ತಡಕಾಡಿದೆ.೨-೩ ಪ್ರಯೋಗಗಳನ್ನು ಮಾಡಿದೆ ,ಓಕೆ ಈಗೊಂದಿಷ್ಟು ಕಾನ್ಫಿಡೆನ್ಸು ಬಂದಿತ್ತು ನಾನೂ ಕೇಕ್ ಮಾಡಬಲ್ಲೆ...

ಇವರಿಗ್ಯಾಕೋ ನನ್ನ ಮೇಲೆ ನಂಬಿಕೆ ಇಲ್ಲ ಬೇರೆ ಎಲ್ಲಾ ಸರಿ ನಾಲ್ಕು ಮಂದಿ ಬರೊವಾಗ ನಿನ್ನ ಪ್ರಯೋಗಪಶು ಅವರಾಗೋದು ಬೇಡ..ನೀ ಕೇಕ್ ಮಾಡು ಆದ್ರೆ ಅದನ್ನ ನಾವು ಮನೆಮಟ್ಟಿಗೆ ಕಟ್  ಮಾಡೋಣ ಬರ್ತ್ ಡೇ  ಫಂಕ್ಷನ್  ಗೆ ಹೊರಗಿಂದ ನೇ ತಂದರಾಯಿತು.ಈಗ ಇದು ನನ್ನ ಮರ್ಯಾದೆ ಪ್ರಶ್ನೆ.೨ ನೇ ತಾರೀಖಿನ ಸಂಜೆ ನನ್ನ ಆಪರೇಶನ್ ಕೇಕ್ ಆರಂಭ ಆಯ್ತು ಇದು ಸರಿ ಆಗದಿದ್ದರೆ ಅವರು ಹೇಳಿದಂತೆ ಮರುದಿನ ಬೆಳಿಗ್ಗೆ ಹೋಗಿ ಕೇಕ್ ತಂದರಾಯಿತು ಅನ್ನೋ ಮುಂದಾಲೋಚನೆ ನನ್ನದು..

 ಬ್ಲ್ಯಾಕ್ ಫಾರೆಸ್ಟ್ ಕೇಕ್ ,ಕೇಕ್ ನ ಬೇಸ್ ಸರಿ ಆಯಿತು ಅಂದ್ರೆ ಉಳಿದಿದ್ದೆಲ್ಲ ಕರಗತ .ಆ ಸಮಯದಲ್ಲಿ ನಾ ಹರಕೆ ಹೊತ್ತಷ್ಟು ಚವತಿ ಚಕ್ಕುಲಿ ಮಾಡುವಾಗ ಎದುರುಮನೆ ಆಯಿ ಕೂಡ ಹೊತ್ತಿರಲಾರರು .ಒವ್ವೆನ್  ನ ಟೈಮರ್ ನನ್ನು ದಿಟ್ಟಿಸಿದಷ್ಟು ಇವರ ಮುಖವನ್ನು ದಿಟ್ಟಿಸಿರಲಿಕ್ಕಿಲ್ಲ ನಾ .ಬೇಕಿಂಗ್ ಟ್ರೇಯಿಂದ ಕೇಕ್ ತೆಗೆಯುವಾಗ ಮತ್ತೊಮ್ಮೆ ೨೦೦೭ ರ ಜನವರಿ ೩ ನೆನಪಾಗಿತ್ತು .ಆಹಾ ಆದಷ್ಟು ಚನ್ನಾಗಿ ಬಂದಿತ್ತು ಪತಿದೇವ ಮಧ್ಯ ಮಧ್ಯ ಬಂದು ಹಾಗ ಮಾಡು ಹೀಗ್ ಮಾಡು ಅನ್ನೋ ಫ್ರೀ ಸಲಹೆ ಕೊಡುತ್ತಿದ್ದರು ಮತ್ತೆರಡು ಘಂಟೆಯಲ್ಲಿ ನನ್ನ ಡ್ರೀಮ್ , ಬ್ಲಾಕ್ ಫಾರೆಸ್ಟ್ ಕೇಕ್ ತಯಾರಾಗಿತ್ತು ,

ಪತಿದೇವ ,ಮಗರಾಯ ಇಬ್ಬರೂ ಅದನ್ನು ನೋಡೋದ್ರಲ್ಲೇ ತಲ್ಲೀನ ,ಮಗ ''ಅಮ್ಮ ನೀ ಗುಡ್ ಗರ್ಲ್ ಅಮ್ಮ  ''ಅಂದು ನನ್ನ ಬೆರಳುಗಳಿಗೆ ಮುತ್ತು ಕೊಟ್ಟಿದ್ದ ...ಇನ್ನೇನು ಬೇಕು..ನಾನೂ ಹರುಷದ ಹೊಳೆಯಾಗಿದ್ದೆ. ಅವನ ಬರ್ತ್ ಡೇ ಗಿಫ್ಟು ನನಗೆ ಸಿಕ್ಕಂತಿತ್ತು ನನ್ನ ಖುಷಿ.ಮರುದಿನ ಮಾಡಿದ ಕ್ಯಾರೆಟ್ ಹಲ್ವಾ ,ಎಪ್ಪಲ್ ಖೀರು  ಎಲ್ಲವು ಸುಮ್ಮನೆ ಮುಚ್ಚಳ  ಹೊದ್ದು ಮಲಗಿದ್ದವು ಎಲ್ಲರು ಕೇಕ್ ಹೊಗಳಿ ಅದನ್ನೇ ಬಯಸಿದರು ಮಕ್ಕಳು ಅದರ ರೂಪ ಕಂಡು ತನ್ಮಯರಾಗಿದ್ದರು.ಕೆಲವರು ನನ್ನ ಮಗನ ಬರ್ತ್ ಡೇ ಗೆ ನೀನೆ ಕೇಕ್ ಮಾಡು ಅಂದ್ರು ,ಯಪ್ಪಾ...೨೦೧೨ ಕ್ಕೆ ಇಷ್ಟು ಸಾಕು ಅನ್ನೋಷ್ಟು ಮೆಚ್ಹುಗೆ..ಸಿಕ್ಕಿತ್ತು ನಾ ಮಾಡಿದ ಕೇಕ್ ಗೆ ...

ಇನ್ನು ನನ್ನ ಸರದಿ ನಾ ಮಾಡಿದ್ದನ್ನು  ಟೇಸ್ಟ್(ಟೆಸ್ಟ್ ) ಮಾಡಬೇಡವೆ...ಸುಮ್ಮನೆ ಒಂದು ಚೂರು ತೆಗೆದು ಬಾಯಲ್ಲಿಟ್ಟೆ,ಯಾಕೋ ಅಮ್ಮ ನೆನಪಾದಳು , ಅದರ ಹಿಂದೆ ನೆನಪುಗಳ ತೇರು..ನಮ್ಮ ಜನುಮದಿನಕ್ಕೆ ಅಮ್ಮ ತಯಾರಿಸುತ್ತಿದ್ದ ಕೇಕು ..ಅದರ ರುಚಿ ...ಯಾಕೋ ಗೊತ್ತಿಲ್ಲ ಅಷ್ಟರ ತನಕ ನಾ ಅನುಭವಿಸಿದ ಎಲ್ಲಾ ಹೆಮ್ಮೆ ,ಖುಷಿ  ,ಮಾಯ ,
ಅಮ್ಮನಿಗೆ ತನ್ನ ಮಕ್ಕಳ ಬರ್ತ್ ಡೇ ಕೂಡ ಇತರ ಮಕ್ಕಳಂತೆ ಕೇಕ್ ತಂದು ಹ್ಯಾಪಿ ಬರ್ತ್ ಡೇ ಅಂದು ಹಾಡಿ,ಅವರಿವರನ್ನು ಕರೆದು ಆಚರಿಸಬೇಕು ಅನ್ನೋ ಆಸೆ..ನನ್ನ ಪಪ್ಪ ..ಅದರ ಸರಿ ವಿರುಧ ದಿಕ್ಕು.ಅವರಿಗೆ ಬರ್ತ್ ಡೇ ಅನ್ನೋದು ಪಾಶ್ಚಿಮಾತ್ಯ ರ ಅನುಕರಣೆ ,ಶೋಕಿ ಮತ್ತಿನ್ನೇನೋ ......ಕೇಕು ತನ್ನಿ ಅಂದಾಗಲೇ ಅಲ್ಲೊಂದು ವಾಗ್ಯುದ್ಧ ಚಾಲು.

ಇದಕ್ಕೊಂದು ಬ್ರೇಕ್ ಹಾಕಲಿಕ್ಕೆ  ಅಮ್ಮ ಮನಸ್ಸಲ್ಲೇ ನಿರ್ಧರಿಸಿದಳು ಅನಿಸುತ್ತೆ,  ಅದು ನನ್ನ ೧೦ ನೇ ವರ್ಷ ದ ಜನುಮದಿನ ,ಅಮ್ಮ ಅದೆಲ್ಲಿಂದಲೋ ಸಿಮಂಟು ಚೀಲದ ತುಂಬಾ ಉಸುಕು ಹೊತ್ತು ತಂದಿದ್ದಳು ,  ಮೊದಲೆರಡು ವಾರದ ಬೆಣ್ಣೆಯನ್ನು ಜೋಪಾನ ಮಾಡಿಟ್ಟಿದ್ದಳು. ಸಾಮಾನ್ಯದಂತೆ ರವೆಲಾಡು ಮಾಡಿದ ನಂತರ ಮೈದಾ,ಮೊಟ್ಟೆ  ಮತ್ತಿನ್ನೇನೋ ಎಲ್ಲಾ ಸೇರಿಸಿ  ಒಂದು ಸಿಹಿ ಹಿಟ್ಟು ತಯಾರಿಸಿದ್ದಳು(ಆಕೆಯ ಎಲ್ಲಾ ಅಡಿಗೆ ಯನ್ನುಮೊದಲಿಗೆ  ಸವಿದು ಉಪ್ಪುಖಾರ ರುಚಿ   ಹೇಳುವುದು ನಾನೇ) ದೊಡ್ಡ ಪಾತ್ರೆಯಲ್ಲಿ ಉಸುಕು ಸುರಿದು ಕಟ್ಟಿಗೆ ಉರಿ ಮೇಲೆ ಇಟ್ಟು ಸಿಹಿ ಹಿಟ್ಟಿನ ಡಬ್ಬಿಗೆ ಮುಚ್ಚಳ ಬಿಗಿದು ಅದರ ಮೇಲಿತ್ತು ಮತ್ತೊಂದಿಷ್ಟು ಉಸುಕು ಅದರ ಮೇಲೆ ಸುರಿದಳು ,ನನಗೆ ಆಕೆಯ ಯೋಜನೆ ಏನು ಎಂಬುದೇ ಅರ್ಥ ಆಗಲಿಲ್ಲ..ರವೆ ಲಾಡು ರುಚಿಯಾಗಿತ್ತು ಸೊ ,ನಾನು ಅದರಲ್ಲೇ ಬ್ಯುಸಿ ಇದ್ದೆ , ಓಲೆ ಮುಂದೆ  ಕೂತು ಉರಿ 
ಒಂದೇ ರೀತಿ ಇರುವಂತೆ ಮೆಂಟೈನ್  ಮಾಡೋದ್ರಲ್ಲಿ ಮಗ್ನ ನನ್ನಮ್ಮ ,


ಅದೊಂದಿಷ್ಟು ಹೊತ್ತಿನ ನಂತರ ''ಅಮಿತಾ ಬಾ ಇಲ್ಲಿ  ನೋಡು ಅಂದು ಕರೆದಾಗ ನಾನು ರವೆಲಾಡು ಮೆದ್ದು ಮೆದ್ದು ಅಂಟು ಅಂಟು  ಮುಖ ಒರೆಸುತ್ತಾ  ಹೋಗಿದ್ದೆ ,ಅಲ್ಲಿ ಆಕೆ ಪಪ್ಪ ಊಟ ಮಾಡುವ ಅಗಲ ತಾಟಿನಲ್ಲಿ ಡಬ್ಬಿ ದಬ್ಬು ಹಾಕಿದ್ದಳು ,ಮತ್ತು ಮೆತ್ತಗೆ ಅದನ್ನು ಮೇಲೆತ್ತಿದಳು ,ಅಲ್ಲಿತ್ತು ನನ್ನ ಬರ್ತ್ ಡೇ ಗಿಫ್ಟು...ಅದು ಅಮ್ಮ ತನ್ನ ಕೈಯ್ಯಾರೆ ಮಾಡಿದ ಕೇಕು .ಹೆಸರು ಗಿಸರು ಬರೆಯೋಕಗಲ್ಲ ಹಾಗೆ ಚಾಕು ತಗೊಂಡು ಕತ್ತರಿಸು..ಅಂದು ತಂಗಿ ಮತ್ತು ನಾನು ಜೊತೆಗೆ ಆಕೆಯ ಮಾಸ್ಟರ್ ಪೀಸೆ ನ  ಪೀಸ್  ಮಾಡಿ ತಿಂದೆವು.ಅದೊಂಥರ ರುಚಿ...ಅದನ್ನು ವರ್ಣಿಸಲಾಗದು ,ತಳದಲ್ಲಿ ಸ್ವಲ್ಪ ಸೀದು ಹೋಗಿತ್ತು ಸೀದು ಹೋದ ಕೇಕು ಇನ್ನು ರುಚಿ..

ಕಣ್ಣು ತೊಯುತ್ತವೆ ಅದನ್ನು ನೆನೆಸಿಕೊಂಡರೆ ,ಅಮ್ಮ ಅಂದರೆ ಹಾಗೇ ...ಆಕೆ ಒಂದು ಅಧ್ಭುತ.ಆಕೆ ಮುಂದೆ ನಾವು ಏನು ಅಲ್ಲ . ನನ್ನ ಕೈಯ್ಯಲ್ಲಿ ಸೆಲ್ಫ್ ರೈಸಿಂಗ್ ಮೈದಾ ,ಓವೆನ್ . ಇವೆನ್ ತಾಪಮಾನ, ವೆನಿಲ್ಲಾ ಎಸ್ಸೇನ್ಸು ಎಲ್ಲವು  ಇದೆ.ಸ್ವಲ್ಪ ಗಮನ ಕೊಟ್ಟರೆ ಸಾಕು..ಆದರೆ ಆಕೆ ಆಕೆಗದೆಷ್ಟು ತಾಳ್ಮೆ..ಕಟ್ಟಿಗೆ ಉರಿಯಲ್ಲಿ ಆಕೆಯದೇ ತಂತ್ರಗಾರಿಕೆಯಲ್ಲಿ ಯಾಲಕ್ಕಿ ಹಾಕಿಯಾದರು ಸರಿ ಆಕೆ ಕೇಕ್ ಮಾಡಿದ್ದಳು.ಆಗ ಬೇಕರಿ ಇಲ್ಲವೇ???ಇತ್ತಲ್ಲ ೧೫ ರುಪಾಯಿಗೆ ೧/೪ ಕೆ ಜಿ ತೂಕದ ಕೇಕು ಆರಾಮಾಗಿ ಸಿಗುತಿತ್ತು,ಆದರೂ ಆಕೆ ನಮಗೆಂದು ಅದೆಷ್ಟು ಆಸ್ಥೆಯಿಂದ ಅದೆಲ್ಲ ಮಾಡಿದ್ದಳು..ನನಗೊಂದಿಷ್ಟು ಅಡಿಗೆ ಮೇಲೆ ಪ್ರೀತಿ ಬಂದಿದೆ ಅಂದ್ರೆ ಆಕೆಯ ಉಡುಗೊರೆ ಅದು ನನಗೆ ,ಈಗಲೂ ಆಕೆಗೊಂದು ಕನಸು ಆಕೆ ಒಮ್ಮೆ ಆದರೂ  ಆ ಅಡುಗೆ ಶೋ ಗಳಲ್ಲಿ ಭಾಗವಹಿಸಬೇಕು..ಅಂತಾನೆ ಇರ್ತಾಳೆ  ಚಂದ ಮಾಡಿ ರೆಸಿಪೆ ಬರೆದು ಕೊಡು ಅಮಿತಾ ಅಂದು..ನಾವು ಊರ ಸುದ್ದಿ ಎಲ್ಲಾ ಬರಿತೇವೆ  ಆಕೆಗೆ ಬರೆದು ಕೊಡಲು ಆಲಸ್ಯ ,ಈ ಬಾರಿ ಊರಿಗೆ ಹೋದಾಗ ಮಾತ್ರ ಆ ಕೆಲಸ ಮಾಡಲೇ ಬೇಕು ಅಂದು ಕೊಂಡೆ,


ಈ ಪಪ್ಪನಿಗೆ ಅಸಲಿಗಿಂತ ಬಡ್ಡಿ ಯ ಮೇಲೆ ಪ್ರೀತಿ  ಜಾಸ್ತಿ, ಮಕ್ಕಳ ಬರ್ತ್ ಡೇ ಗೆ ಯಾವತ್ತು ವಿರೋಧಿಸಿಯೇ ಗುರುತಿಸಿಕೊಂಡ ಪಪ್ಪ ನನ್ನ ಮಗನ ಮೊದಲ ಎರಡನೇ ಮೂರನೇ ಜನುಮದಿನಕ್ಕೆ ಓಡಾಡಿದ್ದೆ ಓಡಾಡಿದ್ದು ,,,,ನನ್ನದು ಸುಮ್ಮನಿರುವ ಬಾಯಲ್ಲ ನಾ ಹೇಳದೆ ಬಿಟ್ಟೆನೆಯೇ??ಪಪ್ಪ  ಆಗ ತನ್ನ ಮೂಗಿಗಿಳಿದ ಕನ್ನಡಕವನ್ನು ಮೇಲೇರಿಸಿ ಒಂದು ಸ್ಮೈಲ್ ಕೊಟ್ಟು '' ಅದು ಹಂಗವಾ ದಿನಮಾನ ಬದಲಿ ಆಗ್ಯಾವ  ನಾವು ಬದಲಿ ಆಗಬೇಕು ..''ಅಂತಾನೆ ಆದರೂ ಮಕ್ಕಳ ವಿಷಯಕ್ಕೆ ಬಂದರೆ ಮತ್ತೆ ಅದೇ ಕತೆ .

ಯಾಕೋ ಗೊತ್ತಿಲ್ಲ ಅಮ್ಮ ಮಾಡಿದ ಕೇಕು ಮತ್ತೆ ಮತ್ತೆ ನೆನಪಾಗುತ್ತಿದೆ..ಅಮ್ಮ ನಿನಗೊಂದು ಸಿಹಿ ಸಿಹಿ ಉಮ್ಮಾ ...

Friday, October 28, 2011

'ನಾಳೆ ಬಾ'' ಅನ್ನೊಂಗಿಲ್ಲ ಇದು ಹಲೋವಿನ್

ಪ್ರತಿ ಸೋಮವಾರ ಮಗನ ಶಾಲೆಯಲ್ಲಿ ವಾರಪೂರ್ತಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ,ನಾವು ಕಲಿಸಬೇಕಾದ್ದು ಅವರಿಂದ ಹೇಳಿಸುವುದು...ಮತ್ತಿತರ ವಿಷಯಗಳ ಬಗ್ಗೆ ಒಂದು ನ್ಯೂಸ್ ಲೆಟರ್ ಕೊಡಲಾಗುತ್ತದೆ ಈ ಬಾರಿಯ ಲೆಟರ್ ನಲ್ಲಿದ್ದಿದ್ದು  ಹೆಲ್ಲೋವಿನ (Halloween) ಎಂಬ ಆಚರಣೆ ಮತ್ತು ಅದರ ಕುರಿತಾದ ಚಟುವಟಿಕೆಗಳ ಬಗ್ಗೆ , ಹೋದ ವರ್ಷ ನಾನೂ ಹಲ್ಲೋವಿನ್ ದಿನವೇ ಈ ದೇಶಕ್ಕೆ  ಬಂದಿದ್ದೆ ಆದ್ದರಿಂದ ಅದರ ಆಚರಣೆ,ಅದರ ಕುರಿತಾದ ಯಾವುದೇ ವಿಷಯ ನನಗೆ ಗೊತ್ತಿರಲಿಲ್ಲ. ಎಂ ಎ ಮೊದಲ ವರ್ಷದಲ್ಲಿ ಜಾಗತಿಕ ಜಾನಪದ ಇತಿಹಾಸ ಓದುವಾಗ ಅಲ್ಲಿ ಈ ಶಬ್ದ ಕೇಳಿದ ನೆನಪು ಬಿಟ್ಟರೆ ಇದರ ಬಗ್ಗೆ ಬೇರೆನೂ ಗೊತ್ತಿರದ ನಾನು ಬರುವ ಶುಕ್ರವಾರ ಹಲೋವಿನ್ ಫ್ಯಾನ್ಸಿ ಡ್ರೆಸ್ ಪಾರ್ಟಿ ಇದೆ ಮಗುವನ್ನು ಸಿದ್ದ ಮಾಡಿ ಕಳಿಸಿ ಎಂದಾಗ , ಏನು ಮಾಡೋದು ಎಂಬ ಗೊಂದಲದಲ್ಲಿದ್ದೆ. ಮಗನ ಟೀಚರ್ ಗೆ ಕೇಳಿದಾಗ ಯಾವುದೇ ಆದೀತು ರಾಕ್ಷಸ ,ಮಾಟಗಾರ,ಸ್ಕೆಲಿಟನ್...ಆಕೆಯ ಲಿಸ್ಟ್ ಮುಂದುವರೆದಿತ್ತು..ನನಗೆ ತಲೆ ಚಕ್ರ ಬರುತಿತ್ತು..ಮಕ್ಕಳಿಗೆ ಸಿಂಗಾರ ಮಾಡುವುದೆಂದರೆ ನನಗೆ ಮೊದಲಿಂದಲೂ ಅದೇನೋ ವೀಪರೀತ  ಆಸಕ್ತಿ, ಓಣಿಯ ಮಕ್ಕಳು ಬಂಧುಗಳ  ಮಕ್ಕಳು ಮನೇ  ಪಕ್ಕದ ಖಾಲಿ ಜಾಗೆಯಲ್ಲಿ..ಟೆಂಟ ಕಟ್ಟಿಕೊಂಡ ಅಲೆಮಾರಿಗಳ ಮಕ್ಕಳು ಯಾರಾದರೂ ಆದೀತು..ಅವರನ್ನು ಕರೆದು ತರ ತರದ ವೇಷ ಮಾಡಿ ಫೋಟೋ ತೆಗೆದಿಡುತ್ತಿದ್ದೆ,
 ನನ್ನ ಮಗನಿಗೂ ಇವನ್ನೆಲ್ಲ ಪ್ರಯೋಗಿಸಿದ್ದೆನಾದರು..ಕೃಷ್ಣ , ಬುದ್ಹ, ರಾಮ, ಶಕುಂತಲೆ.ಶಂಕರಾಚಾರ್ಯ ಬಿಟ್ಟರೆ , ದೆವ್ವದ ವೇಷ ಹಾಕುವ ಧೈರ್ಯ ಮಾಡಿರಲಿಲ್ಲ.  ..ಈಗ ಶಾಲೆಯಲ್ಲೇ ಹೇಳಿದ್ದಾರೆ ಅಂದ ಮೇಲೆ ಮಾಡಲೇಬೇಕಲ್ಲ ಸರಿ ಆದರೆ ಇವರು ಬೇರೆಲ್ಲ ಬಿಟ್ಟು ಭಯಾನಕ ವೇಷಗಳನ್ನು ಈ ಹಬ್ಬದಲ್ಲಿ ಹಾಕೊದ್ಯಾಕೆ ಅನ್ನೋದು ನನ್ನ ಪ್ರಶ್ನೆ ಆಗಿತ್ತು ಮತ್ತೆ ಕೇಳಬೇಕೆ..???ಶುರು ಆಯ್ತು..ತನಿಖೆ ಹಲೋವಿನ ಬಗ್ಗೆ 

ಹಲ್ಲೋವಿನ್ ಎಂಬುದು ಮೂಲತ ಸ್ಕಾಟಿಷ್ ,ಮತ್ತು ಐರಿಶ್ ನಾಡಿನ ಆಚರಣೆ ( ಸೆಲ್ಟಿಕ್ ) ಇಲ್ಲಿಯ ಜನರು ವಿಶ್ವದ ವಿವಿಧ ಭಾಗಗಳಿಗೆ ವಲಸೆ ಹೋದಂತೆ ಹಲೋವಿನ್ ಅಮೇರಿಕ ,ಕೆನಡಾ , ಆಸ್ಟ್ರೇಲಿಯ ದೇಶಗಳಿಗೂ ಪಸರಿಸಿ  ಅಲ್ಲಿಯದೇ ಆಚರಣೆಯಾಗಿ ಹೋಯಿತು .
ಸೆಲ್ಟಿಕ್ ಸಂಸ್ಕೃತಿಯಲ್ಲಿ ಹಲ್ಲೋವಿನ್ ಅನ್ನು ಸಃ-ವಿನ್  ಎಂದು ಕರೆಯಲಾಗಿದೆ.ಪುರಾತನ ಕಾಲದಲ್ಲಿ ಸಃ- ವಿನ್ ಹಬ್ಬವನ್ನು ಚಳಿಗಾಲದ ಆಗಮನ ಮತ್ತು ಆಟಂ ತಿಂಗಳ ಅಂತ್ಯ, ಮತ್ತು ಚಳಿಗಾಲಕ್ಕೆ ಬೇಕಾಗುವ ಎಲ್ಲಾ ಥರದ ವಸ್ತುಗಳನ್ನು ಸಂಗ್ರಹಿಸಿಡುವ ಪ್ರಕ್ರಿಯೆಯ ದ್ಯೋತಕವಾಗಿ ಆಚರಿಸಲಾಗುತ್ತಿತ್ತು.  ಇದೆ ಸಂದರ್ಭದಲ್ಲಿ ಸತ್ತುಹೊದವರ ಆತ್ಮಗಳು ಮತ್ತೆ ಭೂಮಿಗೆ ಬರುತ್ತವೆ ಎಂಬ ನಂಬಿಕೆ ಇದೆ ಇವರಲ್ಲಿ ಇದೆ  (ನಮ್ಮಲ್ಲಿನ ಪಿತೃ ಪಕ್ಷ  ಮಹಾಲಯ ಅಮಾವಾಸ್ಯೆಯಂತೆ)..ಆ ಕಾರಣಕ್ಕೆ..ಭಯಾನಕ ವೇಷಗಳನ್ನು ಧರಿಸಿ..ಅವುಗಳನ್ನು  ಅಣಕಿಸುವ ಮತ್ತು  ಪಟಾಕಿ ಸಿಡಿಸುವ ಮೂಲಕ ಬೆಳಕನ್ನು ಹೊಮ್ಮಿಸಿ ಅವನ್ನು ಆಕರ್ಷಿಸುವ , ಅವು ಯಾರಿಗೂ  ತೊಂದರೆ ಮಾಡದೆ ಮತ್ತೆ ತಮ್ಮ ಲೋಕಕ್ಕೆ ಮರಳಲಿ ಎಂಬ ಆಶಯ ಈ ಆಚರಣೆಯ ಹಿನ್ನೆಲೆಯಲ್ಲಿದೆ

 ಜೊತೆಗೆ  ಅಕ್ಟೋಬರ್ ತಿಂಗಳ ಕೊನೆ ದಿನ ವಿಚಿತ್ರ ವೇಷ ತೊಟ್ಟ ಮಕ್ಕಳು..ಮನೆಯಿಂದ ಮನೆಗೆ ಭೇಟಿ ಕೊಡುತ್ತವೆ(ಸಂಕ್ರಮಣದ ಎಳ್ಳು ಹಂಚೋಕೆ ಮನೆಮನೆಗೆ ಹೋಗುವಂತೆ ...)..ಮತ್ತು ಮನೆಯ ಯಜಮಾನನಿಗೆ '' ಟ್ರಿಕ್  ಆರ್ ಟ್ರೀಟ್ ''ಎನ್ನುತ್ತವೆ , ಮನೆಯವರು ಅವರಿಗೆ ಯಾವುದೇ ಸಿಹಿ ಅಥವಾ ತಿಂಡಿ ಕೊಡುತ್ತಾರೆ..ಆಗ ಮಕ್ಕಳು ಅವರ ಮುಂದೆ ಒಂದು ಕಥೆಯನ್ನೋ ಹಾಡನ್ನೂ ಹೇಳಿ..ತಮ್ಮ ಟ್ರೀಟ್ ಪಡೆದು ಕೊಳ್ಳುತ್ತವೆ.. ಕೊಡದಿದ್ದರೆ ಅವರಿಗೆ ಸಂಬಂಧ ಪಟ್ಟ ಯಾವುದೇ ವಸ್ತುವನ್ನು ಅವರು ಹಾನಿ ಗೊಳಿಸುವ ಅಥವ  ತೊಂದರೆ ಕೊಡುವ ಟ್ರಿಕ್  ಮಾಡುತ್ತಾರೆ ಇಲ್ಲಿಯ ಎಲ್ಲರಿಗು ಈ ಆಚರಣೆ ತಿಳಿದಿರುವುದರಿಂದ ಯಾರು ಟ್ರಿಕ್ ಗೆ ಗುರಿ ಆಗುವುದಿಲ್ಲ  ಅವಕ್ಕೆಲ್ಲ ನಾವಿದ್ದೇವಲ್ಲ!!!!!!ನಾನು ಇಲ್ಲಿ ಬಂದ ದಿನವೇ ಹಲೋವಿನ್ ಆ ದಿನ ನಮ್ಮ ಮನೆಯ ಕಿಟಕಿಯ ಮೇಲೆ ಮೊಟ್ಟೆ ಹೊಡೆದು..ಪೋಸ್ಟ್ ಬಾಕ್ಸ್ ನಲ್ಲಿ ಪಟಾಕಿ ಸಿಡಿಸಿ..ಸುಮಾರು ತೊಂದ್ರೆ ಕೊಟ್ಟಿದ್ದವು ಮಕ್ಕಳು..

ಈ ದಿನದ ಮತ್ತೊಂದು ವಿಶೇಷ ನಮ್ಮಲ್ಲಿ ದೀಪಾವಳಿಗೆ ನಕ್ಷತ್ರ ಬುಟ್ಟಿ ತೂಗು ಹಾಕುವಂತೆ..ಕುಂಬಳ ಕಾಯಿಗೆ ಕಾರ್ವಿಂಗ್ ಮಾಡಿ ಮನೇ ಮುಂದೆ ಇಡಲಾಗುತ್ತದೆ..ಜೊತೆಗೆ ಮನೆಯ ಕಿಟಕಿ ಮೇಲೆ..ಬಾಗಿಲ ಮೇಲೆ haunted ಎದು ಬರೆಯಲಾಗುತ್ತದೆ ನಾವು ಗದ್ದೆ ಯಲ್ಲಿ ಬೇರ್ಚು ನಿಲ್ಲಿಸುವಂತೆ ಇಲ್ಲಿ ಕೂಡ ಮನೆಯ ಮಾಡಿಗೆ ದೆವ್ವದ ಮುಖವಿರುವ ಒಂದು ಗೊಂಬೆ ತೂಗಿ ಬಿಡುತ್ತಾರೆ(. ನನಗೆ ಇದನ್ನು ನೋಡಿದಾಗ ನೆನಪಾಗಿದ್ದು, ಯಾವುದೊ ಒಂದು ಕಥೆ ಕೇಳಿ ಒಂದಷ್ಟು ದಿನಗಳ ಕಾಲ ನಮ್ಮ ಬಾಗಿಲುಗಳ ಮೇಲೆ ''ನಾಳೆ ಬಾ ''ಅಂದು ಬರೆದು ರಾತ್ರಿ ದೆವ್ವದ ಹಾದಿ ನೋಡಿದ್ದು , ನೆನೆಸಿ ಕೊಂಡರೆ ಇಗಲೂ ನಗು ಬರುತ್ತದೆ)

.ಮತ್ತು ಈ ದಿನ ಮಕ್ಕಳಿಗೆ ಹಲವಾರು  ಆಟಗಳನ್ನು..ಛದ್ಮವೇಷ  ಸ್ಪರ್ಧೆಗಳನ್ನು ಆಯೋಜಿಸಿರುತ್ತಾರೆ. ಆಪಲ್ ಬಬ್ಲಿಂಗ್ ಎಂಬ ಆಟ ವಿಶೇಷವಾದದ್ದು. ಹಲ್ಲೋವಿನ ಕುರಿತಾದ  ಹಲವು  ಚಟುವಟಿಕೆಗಳನ್ನು ವಾರಪೂರ್ತಿ ಶಾಲೆಗಳಲ್ಲಿ ಮಾಡಿಸಲಾಗುತ್ತದೆ..
ಜೊತೆಗೆ ಈದಿನ ಅವಿವಾಹಿತ ಯುವತಿ ರಾತ್ರಿ ಕತ್ತಲಲ್ಲಿ ಮೇಣದ ಬತ್ತಿಯೊಂದಿಗೆ ಕನ್ನಡಿಯ ಮುಂದೆ ನಿಂತರೆ ಅವಳಿಗೆ ತನ್ನ ವರನ ಮುಖ ಗೋಚರವಾಗುತ್ತದೆ ಎಂಬ ವಿಚಿತ್ರ ನಂಬಿಕೆಯೂ ಈ ಮಂದಿಯಲ್ಲಿದೆ.


ಹಲ್ಲೋವಿನ್ ಸಂದರ್ಭದಲ್ಲಿ  ವಿಶೇಷವಾಗಿ ತಯಾರಿಸುವ ಸಿಹಿ...'' ಕ್ಯಾಂಡಿ ಆಪಲ್'' .ಸೇಬನ್ನು ಚಾಕಲೇಟ್ ಪಾಕದಲ್ಲಿ ಅದ್ದಿ ಅದಕ್ಕೊಂದಿಷ್ಟು ಸಕ್ಕತೆಯ ಹರಳು  ಹಾಕಿ ಅಥವಾ ಸಕ್ಕರೆಯ ಪಾಕದಲ್ಲಿ ಅದ್ದಿ ಮಾಡಿದ ಸಿಹಿ ಯೇ ಕ್ಯಾಂಡಿ ಆಪಲ್ .
ಇದನ್ನು ಪ್ರತಿ ಶಾಲೆಯಲ್ಲಿ ಪುಟ್ಟ ಮಕ್ಕಳ ಕೈಯ್ಯಲ್ಲೂ ಮಾಡಿಸುತ್ತಾರೆ..ನನಗೆ ತುಂಬಾ ಇಷ್ಟವಾದ ಸಂಗತಿಯೆಂದರೆ ಇಲ್ಲಿನ ಪ್ರತಿ ಜಾನಪದ ಆಚರಣೆ..ಮತ್ತು ಅದರ ಅರ್ಥ ಅದರ ಹಿನ್ನೆಲೆಯನ್ನು ಮಕ್ಕಳಿಗೆ ಶಾಲೆಯಲ್ಲಿ ವಿವರಿಸಿ ಅದನ್ನು ಮುಂದುವರಿಸಿಕೊಂಡು ಹೋಗಲು  ಪ್ರೇರೇಪಿಸಲಾಗುತ್ತದೆ .ಅದರ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸ ತುಂಬು ಮನದಿಂದ ಮಾಡುವ ಶಿಕ್ಷಕ ವೃಂದ ಅಭಿನಂದನೀಯ . ಸಂಸ್ಕೃತಿ ಯಾವುದಾದರೇನು ಅಲ್ಲಿಯ ಒಳಿತುಗಳನ್ನು ಅರಿತುಕೊಳ್ಳುವ ಮತ್ತು ಸ್ವಾಗತಿಸುವ, ಜೊತೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಒಲುಮೆ ಉಳಿಸಿಕೊಂಡು ಅದನ್ನು ಶ್ರದ್ಹೆಯಿಂದ ಆಚರಿಸುವ ಮನಸ್ಸು ಎಲ್ಲರಲ್ಲಿರಬೇಕು .

ನನ್ನ ಮಗ ಇವತ್ತು ದೆವ್ವದ ವೇಷ ತೊಟ್ಟು ಶಾಲೆಗೆ ಹೋದ..ನನಗೆ ಒಳಗೊಳಗೇ ನಗು.ನಕ್ಕರೆ ಅವ ತಾನು  ಇದನ್ನು ತೊಡಲ್ಲ ಅಂತಾನೆ  ಅಂತ ಗೊತ್ತಿದ್ದಕ್ಕೆ  ಸುಮ್ಮನೆ '' ಭಾಳ ಚಂದ ಕಾಂತೀಯ ಗುಂಡ'' ..ಅಂದು ಕಳಿಸಿದೆ..ಇವನ ಫ್ಯಾನ್ಸಿ ಡ್ರೆಸ್ ಡೇ ನಿಮಿತ್ಯ ,ಅದೆಷ್ಟು ಚಂದದ,,ಜನಪದ ಆಚರಣೆಯೊಂದನ್ನು ತಿಳಿಯುವಂತಾಯಿತು..ಥ್ಯಾಂಕ್ಸ್ ಟು..ಪ್ರಥಮ್.
೨೦೧೫ ರ  ಹಲೋವೀನ್ ಉಡುಗೆ .



Thursday, October 13, 2011

ಬಂದೈತಿ ಶೀಗಿ ಹುಣ್ನಿಮಿ........





'
''ಅನ್ನ ಕುಮಾರನ ಬಸರಿ ಅದಾಳ
ನಮ್ಮ ಭೂಮಿತಾಯಿ
ಬಯಕೀ ಊಟ ಉಣಿಸ ಬೇಕ
ಬಂದೈತಿ ಶೀಗಿ ಹುಣ್ಣಿಮಿ''

ಹೀಗೆಂದು ಅಪ್ಪಟ ಜನಪದಮಿಡಿತದ ಗೀತೆ ಬರೆದವರು ಆನಂದ ಕಂದರು.....
ಭೂಮಿಯು ತನ್ನ ಗರ್ಭದಲ್ಲಿ ಅನ್ನ ಕುಮಾರನನ್ನು ಹೊತ್ತುಕೊಂಡು ಮೂಡುಗಾಳಿಗೆ ತೊನೆಯುತ್ತಿದ್ದರೆ, ಬಸುರಿ ಹೆಣ್ಣುಮಗಳು ಸೆರಗಿನಿಂದ ಬೆವರೊರೆಸಿಕೊಳ್ಳುತ್ತ ಉಸ್ಸಪ್ಪ ಅನ್ನುತ್ತಿದ್ದರೂ ಆಕೆಯ ಮನದ ಅವೇದ್ಯ ಸಂವೇದನೆಗಳು ಸುಖದ ಭಾವಗಳು ಅನಾವರಣಗೊಂಡಂತೆ ಅನಿಸುತ್ತದೆ.
ದಸರೆಯ ನಂತರ ಬರುವ ಹುಣ್ಣಿಮೆಯೇ ಈ ಬಸುರಿ ಭೂಮಿತಾಯಿಗೆ ಮಡಿಲು ತುಂಬುವ ದಿನ ಅದೇ ಶೀಗಿ ಹುಣ್ಣಿಮೆ.


''ಹತ್ತಿಯ ಎಳಿಬೆಳಿ ಹಚ್ಚ ಹಸುರಿನ ಪತ್ತಲ ನೇಯ್ದಾವ
ಎಳ್ಳುಪುಂಡಿ ಹೂ ಮಗ್ಗಿ ಹೆಣೆದಾ ಕಸೂತಿ ತೆಗೆದಾದ
ಕುಸುಬಿ ಗೋದಿ ಸಸಿ ಬಸರಿಗೊಪ್ಪವಾಕುಪ್ಪಸ ಹೆಣದಾವ
ಸುತ್ತನ ಬನದಾಗ ಹಕ್ಕಿ ಹಸೆಯ ಹಾಡ್ಯಾವ ಟೂವಿ ಟುವಿ''

ಇದು ಪ್ರಕೃತಿಮಾತೆ ತನ್ನ ಮಗಳಿಗೆ ಉಡಿ ತುಂಬುವ ಸಂಭ್ರಮಕ್ಕೆ ಅಣಿಯಾಗುವ ರೀತಿ ಇದಾದರೆ ಬಸುರಿ ಹುಡುಗಿಗೆ ಮಡಿಲು ತುಂಬುವಂತೆಯೇ ಜನಪದರು ಹಸಿರು ಸೀರೆ ಕುಪ್ಪಸತಂದು ಆಕೆಗೆ ಉಡಿಸಿ ನಂತರ ಅ ಸೀರೆಯನ್ನು ಮನೆ ಮಗಳಿಗೆ ಕೊಡುವ ಪದ್ದತಿ ಇದೆ.
ಪಾಂಡವರ ಪೂಜೆ:- ಶಮೀ ವೃಕ್ಷದಲ್ಲಿ ಆಯುಧಗಳನ್ನು ಪಡೆದು ಯುದ್ಧಕ್ಕೆ ಸನ್ನದ್ಧರಾದ ಪಾಂಡವರನ್ನ ನೆನೆದು ಅವರ ಪ್ರತೀಕವಾಗಿ ಐದುಕಲ್ಲುಗಳನ್ನಿಟ್ಟು ಅವಕ್ಕೆ ಗಂಧ ಕುಂಕುಮ ಧೂಪ ದೀಪದೊಂದಿಗೆಪೂಜಿಸಿ. ಎಡೆ ತೋರಿಸಲಗುತ್ತದೆ. ಈ ಎಡೆಯನ್ನು ಪುರುಷರು ಯಾರೊಂದಿಗೂ ಮಾತನಾಡದೆ ಉಣುವ ಪದ್ದತಿ ಇದೆ.
ಇಲ್ಲಿ ಇನ್ನೊಂದು ವಿಶೇಷ ಎಂದರೆ ಪಾಂಡವರರ ಪೂಜೆಯೊಂದಿಗೆ,ಕಳ್ಳಪೂಜೆ ಎಂಬುದೊಂದು ವಿಚಿತ್ರ ಆಚರಣೆ ಇದೆ ಕುಡುಗೋಲು ಒಂದಕ್ಕೆ ಪುಜೆ ಮಾಡಿ ಅದಕ್ಕೆ ತೋರಿಸಿದ ನೈವೇದ್ಯವನ್ನು ಅದೇ ಕುಡುಗೋಲಿನಿಂದ ಭೂಮಿಯನ್ನು ಅಗೆದು ಅದನ್ನು ಅಲ್ಲೇ ಮುಚ್ಚಬಿಡುತ್ತಾರೆ.

''ಮುಂಗಾರಿನ ನೆಲೆ ಹೊಂದೆಂನಿಟಿನ ಹಂದರ ಹಾಕಯ್ತೆ
ಹೆಸರು ಹುರುಳಿ ಅಲಸಂದಿ ಅವರಿಬಳ್ಳಿ ತ್ಪಾರಣ ಬಿಗಿದೈತೆ
ಹುಚ್ಚೆಳ್ಳಿನ ಹೊಲ ಹೂಗಳ ಅರೆಳಸಿ ಕುಚ್ಚನು ಕಟ್ಟೈತೆ
ಉಡಿಯ ತುಂಬಾಲಕ ಮಾಗಿ ನಿಂತಾವ ನೋಡ ನವಣಿ ಸಾವಿ!''

ಇಷ್ಟು ಸಿಂಗಾರದ ನಡುವೆ ಕುಳಿತ ಭೂಮಿ ತಾಯಿಗೆ ವಿಧವಿಧದ ಅಡುಗೆಯನ್ನು ಮಾಡೀ ಬಡಿಸಿ ಬಯಕೀ ಊಟದ ಸಂಭ್ರಮವನ್ನು ಜನಪದರೂ ಅಸ್ಪಾದಿಸುತ್ತಾರೆ...
ಹೀರಿಕಯಿ ಬದನಿಕಾಯಿ ಕುಂಳಕಾಯಿ ಮಡ್ಕಿ ಹೆಸ್ರುಕಾಳು ಕಡತಿ ಕಾಳುಗಳ ಪ್ರತ್ಯೇಕ ಪಲ್ಯ ಕುಚ್ಚದ ಕಾಯಿ, ಉಂಡ್ಡಡುಬು ಕಸುಬಿ ಹುಗ್ಗಿ ಗರಿಗೆ ಪುಂಡಿಪಲ್ಯೆ ಅಗಸೀ ಎಳ್ಳು ಕರೆಳ್ಳು ಶೇಂಗ ಪುಠಾಣಿ ಚಟ್ನಿಗಳು ರೊಟ್ಟಿ ಚಪಾತಿ ಕಟ್ಟಿನ ಸಾರು.
ಶೇಂಗಾ ಹೋಳಿಗೆ,ಎಳ್ಳುಹೋಳಿಗೆ ಸುರಳಿಹೋಳಿಗೆ.....ಈ ಪಟ್ಟಿ ಮುಗಿಯುವಂಥದ್ದಲ್ಲ ಗರ್ಭಿಣಿಗೆ ಪೌಷ್ಟಿಕ ಮತ್ತು ನಾಲಿಗೆಯ ರುಚಿ ಹೆಚ್ಚಿಸುವ ಆಹಾರವನ್ನು ತಯಾರಿಸಿ, ಅದರೊಂದಿಗೆ, ಚಿಗಳಿ, ಉಪ್ಪಿನಕಾಯಿ, ಕರಿಂಡಿಯನ್ನು ಎಡೆ ಇಡುತ್ತಾರೆ. ಎಳೆ ಸವತೆ ಹೆಸುರಬೇಳೆ ಉಳ್ಳಾಗಡ್ಡಿಯ ಕೊಸಂಬರಿಯೊಂದಿಗೆ ಹೊಲದ ಮರದೊಂದರ ನೆರಳಿನಲ್ಲಿ ಕುಳಿತು ತೊನೆಯುವ ಭತ್ತದ ಹಾಲ್ತೆನೆಯನ್ನು ನೋಡುತ್ತ,ಉಣ್ಣುವ ಸುಖ ಉಂಡವನೇ ಬಲ್ಲ....
ಮುಂಗಾರಿನ ಆರಂಭದಿಂದಲೂ ಬೆವರನ್ನು ಕಾಳಿಯೊಂದಿಗೆ ಬಿತ್ತಿದ ರೈತನು ಫಸಲನ್ನು ನೋಡುತ್ತಾ, ಬಂದ ಬೆಳೆ ಕ್ಷೇಮವಾಗಿ ಮನೆಗೆ ಬರಲಿ ಎಂದು ಆಶಿಸಿ ಆ ತಾಯಿಯನ್ನು ಬೇಡುವಾಗ ಚೊಚ್ಚಲ ಬಸುರಿಯ ಬಾಣಂತನ ಸುಗಮವಾಗಿ ಮುಗಿದು ಕ್ಷೇಮಕರವಾಗಿ ಗಂಡನ ಮನೆಗೆ ಸೇರಿದರೆ ಸಾಕು. ಎಂದು ದೇವರಲ್ಲಿ ಹರಕೆಯಲ್ಲಿ ಕಟ್ಟಿ ಹಾಕುವ ಬಸುರಿಯ ತಾಯಿಯನ್ನು ಕಂಡಂತೆ ಆಗುವುದಂತೂ ನಿಜ....
ಜನಪದರ ಆಚರಣೆಗಳೇ ಹಾಗೆ ಅವುಗಳಲ್ಲಿ ಸಮಷ್ಟಿ ಪ್ರಜ್ಞೆ, ಪ್ರಕೃತಿಯೆಡೆಗೆ ಅಪರಿಮಿತ ಪ್ರೀತಿ ಕಾಣುತ್ತದೆ. ಶೀಗಿ ಹುಣ್ಣಿಮೆ ಅಂಥ ಆಚರಣೆಗಳಲ್ಲೊಂದು, ನೀವೂ ಈ ಶೀಗಿ ಹುಣ್ಣಿಮೆಯನ್ನು ಆಸ್ಪಾದಿಸಿದ್ದರೆ, ಸರಿ ಇಲ್ಲದಿದ್ದರೆ ಆನಂದಕಂದರ ಶೀಗಿ ಹುಣ್ಣಿಮೆ ಗೀತೆಯನ್ನೊಮ್ಮೆ ಖಂಡಿತ ಓದಿ


Sunday, September 25, 2011

ಎಲ್ಲರಿಗೊಪ್ಪೋ ...ಹರಿವೆ ಸೊಪ್ಪು


ಈ ದಿನ ಅಡುಗೆಮನೆಯಿಂದ ಚರ ಚರ ಸಪ್ಪಳ ಅಮ್ಮ ಇಳಿಗೆಮಣೆ ಮೇಲೆ  ಕುಳಿತು ದಾಸರಪದ ಗುನುಗುನಿಸುತ್ತ ಹರಿವೆ ಸೊಪ್ಪು ಹೆಚ್ಚುತ್ತಿದ್ದಳು..ಹಿತ್ತಲಲ್ಲಿ ಬೇಕಾದಅಷ್ಟು ಜಾಗೆ ಅದರಲ್ಲಿ ಆಕೆಯೇ ನೆಟ್ಟು ಬೆಳೆಸಿದ ಹರಿವೆ ಸೊಪ್ಪು...ಇವತ್ತು ಮನೆಮಂದಿ ಎಲ್ಲರು ಎರಡು ತುತ್ತು ಹೆಚ್ಚು ತಿನ್ನುವುದಂತು  ಗ್ಯಾರಂಟಿ  ,,,ಹರಿವೆ ಸೊಪ್ಪಿನ ರುಚಿಯೇ ಅಂಥದ್ದು...
ಹರಿವೆ ಸೊಪ್ಪನ್ನು ನಮ್ಮ ನೆಲದಲ್ಲಿ ಆಹಾರವಾಗಿ ಬಳಸಲು ಯಾರು ಆರಂಭಿಸಿದರೋ ತಿಳಿಯದಾದರು..ಅವರಿಗೊಂದು ಫುಲ್ ನಮಸ್ಕಾರ ಹಾಕಲೇ ಬೇಕು..ಯಾಕಂದ್ರೆ ಮಧ್ಯನಕ್ಕೊಂದು ಪಲ್ಯ ರಾತ್ರಿಗೊಂದು ಸಾರು ,ಸಾಸಿವೆಅಂತೆಲ್ಲ ಬಳಸಲ್ಪಡುವ ಈ ಹರಿವೆ ಸೊಪ್ಪಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕಂಶಗಳಿವೆ ..ಹಲವಾರು ಬಾರಿ ನಮಗೆ ಗೊತ್ತಿಲ್ಲದೇ ಹರಿವೆ  ಆಹಾರ್ ರೂಪದ ವೈದ್ಯನಾಗುವುದು ಉಂಟು ,,

ಹರವಿ,ಹರ್ಗಿ,ದಂಟಿನ ಸೊಪ್ಪು ,ಕೀರೇ ಸೊಪ್ಪು,ರಾಜಗೀರ್,ಕಿರ್ಕಸಾಲಿ ಅಂತೆಲ್ಲ ಕರೆಯಲ್ಪಡುವ ಹರಿವೆ ಸೊಪ್ಪಿನ ವೈಜ್ಞಾನಿಕ  ಹೆಸರು amarantus gengetics.ಇದನ್ನು ಚೈನಾ ಸ್ಪಿನಾಶ್ .ಎಂದೂ ಕರೆಯುವುದುಂಟು ಭಾರತ,ಮಲೇಶಿಯಾ ,ತೈವಾನ್ ,ಸೌತ್ ಫೆಸಿಪಿಕ್ಗಳಲ್ಲಿ ಕಾಣಸಿಗುವ ಈ ಹಸಿರು ಕೆಂಪು  ಹರಿವೆಯ ಮೂಲ ಮಾತ್ರ ದಕ್ಷಿಣ ಅಮೇರಿಕ/ಮೆಕ್ಷಿಕೊ ದಲ್ಲಿದೆ ಇದನ್ನು ವಾರ್ಷಿಕ ಬೆಳೆಯಾಗಿಯು ಬೆಳೆಸಲಾಗುತ್ತದೆ.ಹಲವಾರು ಪ್ರಭೇದಗಳಿದ್ದರು  ಮುಖ್ಯವಾಗಿ ೬ ರೀತಿಯ ಹರಿವೆಸೋಪ್ಪಿನ ಪ್ರಭೇದಗಳನ್ನು ಗುರುತಿಸಬಹುದು.

ಔಷದಿಯಾಗಿ ಹರಿವೆ...
 
''ಹಿತ್ತಲದಾಗವರತ್ತಿ ಕರೆದು ಕಳ್ಳ ದನಿಲೆ ಕೇಳತಾಳ

ಹಚ್ಚನ್ನ ಹರವಿ ಸೊಪ್ಪು ತಿನ್ನಂಗಾಗೈತೆ ,ಬಾಲನ ಬವಕಿಯ ಬಯಸಂಗಗೈತೆ....'....''

ಹೀಗೆಂದು ಹಾಡಿದ್ದು ಜನಪದರು...ಗರ್ಭಿಣಿ ಮತ್ತು ಬಾಣಂತಿಯರಿಗೆ ಹರಿವೆಸೊಪ್ಪಿನ ಮಹತ್ವವನ್ನು ಅವರಿಗಿಂತ ಹೆಚ್ಚಿಗೆ ಬಲ್ಲವರ್ಯಾರು??ಗರ್ಭಿಣಿಯರು ಹರಿವೆ ಸೊಪ್ಪನ್ನು ಆಹಾರದಲ್ಲಿ ಬಳಸುವುದಲ್ಲದೆ ಬಟ್ಟಲು ಹರಿವೆ ರಸಕ್ಕೆ ಚಿಟಿಕೆ ಯಾಲಕ್ಕಿ ಪುಡಿ ಮತ್ತು ಜೇನು ಬೆರೆಸಿ ಕುಡಿಯುವುದರಿಂದ ಮಗುವಿನ ಬೆಳವಣಿಗೆಗೆ ಪೂರಕವಾಗುತ್ತದೆ.ಮತ್ತು ಬಾಣಂತಿಯರಿಗೆ ಇದನ್ನು ಕೊಡುವುದರಿಂದ ಎದೆಹಾಲು ವೃದ್ಹಿಸುತ್ತದೆ.ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಸಟ್ಟಿ ಪೂಜೆಯಂದೇ ಬಾಣಂತಿಯರಿಗೆ  ಹರಿವೆ ಸೊಪ್ಪಿನ ಪಲ್ಯವನ್ನು ನೀಡಲಾಗುತ್ತದೆ.

  • ಕುಂಟಿತ ಬೆಳವಣಿಗೆ ಹೊಂದಿರುವ ಮಕ್ಕಳಿಗೆ ಪ್ರತಿದಿನ ಚಮಚದಷ್ಟು ಹರಿವೆ ಸೊಪ್ಪಿನ ರಸ ಮತ್ತು ನಿಂಬೆರಸವನ್ನು ಬೆರೆಸಿ ಕೊಡುವುದರಿಂದ ಪುಷ್ಟಿ ದೊರಕುವುದು.
  • ಮಲಬದ್ಧತೆ ಬಾಧಿಸುವಾಗ ಹರಿವೆ ಸೊಪ್ಪನ್ನು ಆಹಾರ ರೂಪದಲ್ಲಿ ಸೇವಿಸಿದರೆ ಪರಿಹಾರ ದೊರಕುವುದು.
  • ಗಾಯ,ಮತ್ತು ಬಾವು ಗಳಲ್ಲೂ ಹರಿವೆ ಸೊಪ್ಪಿನ ಲೇಪನ ಮಾಡಿದರೆ ಗುಣ ಕಾಣುತ್ತದೆ 
  • ಹರಿವೆ ಸೊಪ್ಪಿನ ಬಳಕೆ ಹೆಚ್ಹು ಹೆಚ್ಹು ಮಾಡುವುದರಿಂದ ಡಯೇರಿಯ,ಮತ್ತು ಅಜೀರ್ಣಕಾರಕ ಭೆದಿಯನ್ನು ಬಹುಮಟ್ಟಿಗೆ ತಡೆಯಬಹುದು.
  • ಕೀರೇ ಸೊಪ್ಪಿನ ರಸ ನ್ಮತ್ತು ನಿಂಬೆ ರಸವನ್ನು ತಲ್ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ತಲೆಹೊತ್ತಿನ ಸಮಸ್ಯೆ ಕಡಿಮೆಯಾಗಿ ,ಕೂದಲು ಸೊಂಪಾಗಿ ಬೆಳೆಯುವುದು.
  • ಹರಿವೆಸೊಪ್ಪಿಗೆ ರಕ್ತ ಸ್ರಾವವನ್ನು ತಡೆಗಟ್ಟುವ ಶಕ್ತಿಯು ಇದೆ..
  • ಮುಳ್ಳುಹರಿವೆ ಗದ್ದೆ ಬದುಗಳಲ್ಲಿ ಸಾಕಷ್ಟು ಸಿಗುತ್ತದೆ ಇದನ್ನು ಆಹಾರದಲ್ಲಿ ಬಳಸುವುದರಿಂದ ಬೆನ್ನು ,ಕಾಲು ಸೆಳೆತದಿಂದ ಮುಕ್ತಿ ಪಡೆಯಬಹುದು.
  • ಬೇಸಿಗೆಯಲ್ಲಿ ಹರಿವೆ ಸೊಪ್ಪನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ.
  • ಬಾಯಿ ಹುಣ್ಣು ಮತ್ತು ಗಂಟಲ ಕಿರಿಕಿರಿಯಲ್ಲಿ ಹರಿವೆಸೋಪ್ಪನ್ನು ಬೇಯಿಸಿದ ನೀರಿನಿಂದ ಗಾರ್ಗಲ್ ಮಾಡಿದರೆ ಬೇಗ ಗುಣ ಕಾಣುವುದು .
  • ಇದರ ಬೀಜವನ್ನು ಧನ್ಯದನ್ತೆಯು ಬಳಸಲಾಗುತ್ತದೆ ಇದರ ಹಿಟ್ಟಿನಿಂದ ಮಾಡಿದ ಖಾದ್ಯವನ್ನು ಉಪವಾಸಗಳಳಲ್ಲಿ ಸೇವಿಸಲಾಗುತ್ತದೆ,ಇದರಿಂದ ಹಪ್ಪಳ,ರೊಟ್ಟಿಗಳನ್ನು ವಿಶೇಷವಾಗಿ ತಯಾರಿಸುತ್ತಾರೆ.
  •  ಅನಿಮಿಯ ,ರಕ್ತ ದೋಷ ಉಳ್ಳವರು ಅಗತ್ಯವಾಗಿ ಇದನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ .
ಹರಿವೆ ಸೊಪ್ಪಿನಲ್ಲಿ ವಿಟಮಿನ್ ,ಐರನ್.ಕ್ಯಾಲ್ಷಿಯಂ ಗಳು ಹೇರಳವಾಗಿರುವುದರಿಂದ ಪ್ರತಿಯೊಬ್ಬರೂ ಇದನ್ನು ಸೇವಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.ನಿಮ್ಮ ಹಿತ್ತಲಿನಲ್ಲಿ  ಸ್ವಲ್ಪ ಜಾಗೆ ಇದ್ದರು ನೀವೇ ಬೆಳೆಸಬಹುದು.ಮತ್ಯಾಕೆ ತಡ ಹರಿವೆಯಾ ಹಿರಿಮೆಯನ್ನು ನೀವು ಅನುಭವಿಸಿ..ಬಾಯಿ ರುಚಿಯೊಂದಿಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ..

Monday, September 12, 2011

ಪಾತ್ರ ಅದಲು- ಬದಲು

 ಮಳೆ ಜೋರಾಗುತ್ತಿದೆ...ಬೇಗ್ ಬೇಗ ಬಾ...ಹಾಗೆನ್ನುತ್ತ ಮಗುವಿನ ಕೈ ಹಿಡಿದುಕೊಂಡು ಓಟದ ನಡಿಗೆ ನಡೆಯುತ್ತಿದ್ದೆ....ಆತನೋ ಅಲ್ಲಿ ನಿಂತ ನೀರಲ್ಲಿ ಪಟ್ಟನೆ ಜಿಗಿದು ಪಚ್ಚ್ಹ್ ಅಂತ ಶಬ್ದ ಮಾಡಿ..ಮೈ ತುಂಬಾ ನೀರು ಮಾಡಿಕೊಳ್ಳುತ್ತಿದ್ದ....ಆತನೊಂದಿಗೆ ನಾನು ತೊಯ್ಯುತ್ತಿದ್ದೆ...ಹಾಗ ಮಾಡಬೇಡ...!ಸುಮ್ನೆ ಬರೋಕಗಲ್ವಾ????ಹಾಗಂತ ಮತ್ತೆ ನಾ ನಡೆಯುತ್ತಿದ್ದೆ...ಮತ್ತೆ ಅವನದು ಅದೇ ಕಥೆ...ತಲೆಯ ಮೇಲೊಂದು ಮೊಟಕಿದೆ...ಬೇಗ ಬಾ ಅಂದ್ರೆ ತರ್ಲೆ..ಅದು ಮಳೆಲಿ...ನಾಳೆ ನೆಗಡಿ ಆಗುತ್ತೆ ಆಗಲೋ ನಾನೆ ಬೈಸ್ಕೊಬೇಕು ನಿನ್ ಪಪ್ಪ ನಾ ಹತ್ರ...ಅಮ್ಮನ್ನಿಗೆ ಯಾಕ ಹೀಗ್ ತೊಂದ್ರೆ ಕೊಡ್ತೀಯ???ಹಾಗಂತ ಕೇಳಿದೆ...ಮಗು ತಲೆಕೆಳಹಾಕಿ ಸುಮ್ಮನೆ ನಡೆಯ ತೊಡಗಿತು.....
ಮಳೆ ಜೋರಾಯಿತು..ನಡೆಯೋಕೆ ಆಗ್ತಿಲ್ಲ..ಅಲ್ಲೇ ಒಂದು ಕಂಪೌಂಡಿನ ಪಕ್ಕದ ಮಾಡಿಗೆ ಆಸರೆಯಂತಿದ್ದ ಮರದ ಕೆಳಗೆ ನಿಂತು ಕೊಂಡ್ವಿ.....

ಮರದ ಮೇಲೆ ಬಿದ್ದ ಮಳೆಹನಿಗಳು...ಎಲೆಗಳ ತುದಿಯಿಂದ ಒಂದಂದಾಗಿ ಉದುರುತ್ತಿದ್ದವು..ಬೀಳು ವ ಮಳೆ ಹನಿಗಳತ್ತ ನಿರಾಯಾಸವಾಗಿ ಕೈ ಚಾಚಿದೆ...ಪ್ರತಿ ಹನಿಯು ಕೈಮೇಲೆ ಬಿದ್ದು ಸಿಡಿಯುತ್ತಿತ್ತು..ಅದನ್ನು ಅನಂದಿಸ ತೊಡಗಿದೆ...ಮನಸು ಹಿಂದೆ ಓಡಿತು...ಮುಂಚೆ ಮಳೆಗಾಲ..ಎಂಬುದು...ಚೈತನ್ಯ ದಾಯಿ.ಸಮಯ..ಆಗಲೇ ಅಲ್ವೇ ಶ್ರಾವಣದ ಸಂಭ್ರಮ..ಅರಿಶಿನ ಕುಂಕುಮ ಪೂಜೆ ಎಂದು ಅಮ್ಮಂದಿರೆಲ್ಲ ಬ್ಯುಸಿ ಯೋ ಬ್ಯುಸಿ..ನಾನೂ ಅವರೊಂದಿಗೆ ಹೋಗುತ್ತಿದ್ದೆ...ರಸ್ತೆಯ ಹೊಂಡಗಳಲ್ಲಿ  ಮಳೆ ನೀರಲ್ಲಿ ಮಾಡಿದ ಚಹಾ ಬಣ್ಣದ ನೀರು...ಕಾಲು ತಡೆಯುವುದೇ ಇಲ್ಲ.. ಒಮ್ಮೆ ಜಿಗಿದು ಬಿಡೋಣ ಅನಿಸಿ ಅದರಲ್ಲಿ ಆತ ಆಡಿದಾಗೆಲ್ಲ  ಅಮ್ಮ ತಲೆಗೊಂದು ಮೊಟಕುತ್ತಿದ್ದಳು...ಯಾವಾಗ್ ಬುದ್ಧಿ ಬರುತ್ತೋ...ಹುಶಾರಿಲ್ದೇ  ಮಲ್ಕೋ...ಶಾಲೆಗೆ  ಮತ್ತೆ ರಜೆ ಹಾಕು ..ಮತ್ತೆ ನೀ ನರಳೋದು...ಇರೋ ಕೆಲಸ ಏನ್ ಕಮ್ಮಿನ ಮತ್ತೆ ನೀ ಇದನ್ನೊಂದು ತಗಲಿಹಾಕಿಕೊಂಡು......ಅಪ್ಪನ ಹತ್ರ ನಾ ಬೈಸ್ಕೊಬೇಕು....''ಅಮ್ಮನ ಸಹಸ್ರಾರ್ಚನೆ ಮುಂದುವರಿಯುತ್ತದೆ......

ಆಗೆಲ್ಲ ನಾ ಅಂದುಕೊಳ್ಳೋದಿತ್ತು ನಾ ಅಮ್ಮ ಆದಾಗ ನನ್ ಮಗು ನಾನು ಇಬ್ಬರು ಮಳೆ ನೀರಲ್ಲಿ ಆಟ ಆಡ್ತೀವಿ..ನಾ ಯಾವತ್ತು ಅಮ್ಮನಂತೆ ನನ್ನ ಮಗುನ ಬೈಯ್ಯಲ್ಲ..ಬರೀ ಮುದ್ದು ಮುದ್ದು ಮುದ್ದು ಅಷ್ಟೇ.. ಇಷ್ಟಕ್ಕೂ ಅಮ್ಮ ಯಾಕೆ ಹೀಗ್ ಆಡ್ತಾಳೆ ಅಂತ ಆಲೋಚಿಸುವಷ್ಟು ಬುದ್ಧಿ  ಬಲಿತಿರಲಿಲ್ಲ....ಬಾಲ್ಯ ದಾಟಿತು...ಅಂದುಕೊಂಡ ಮಾತುಗಳು ಮಾತ್ರ ಮನಸಲ್ಲೇ ಉಳಿದಿದ್ದವು.
 
.ಈಗ ನಾನು ಅಮ್ಮ.... ನಾನೂ ಅಮ್ಮ ನಂತೆ ವರ್ತಿಸಿದೆ....ಪಾತ್ರಗಳು ಅದಲು- ಬದಲಾದಂತೆ ಮನುಷ್ಯನ ಬುದ್ಧಿ  ಮಾತು,ಆಲೋಚನೆ ಎಲ್ಲವು ಬದಲಾಗುತ್ತ????ನಾವ್ಯಾಕೆ ಅಷ್ಟು ಬೇಗ ಬದಲಾಗ್ತೀವಿ????ನಾವು ದೊಡ್ಡೋರು ಅನ್ನೋ ಒಂದು ಅಹಮ್ಮಿನಲ್ಲಿ ಮನಸಿನ ಒಂದು ಮೂಲೆಯಲ್ಲಿ ಅಡಗಿ ಕುಳಿತಿರೋ..ಪುಟ್ಟ ಮಗುವನ್ನು ಹೊರಬರಲು ಬಿಡುವುದೇ ಇಲ್ಲ...ಅಂತರಂಗದಲ್ಲಿ ಬಾಲ್ಯದ ಒರತೆ ಅದೆಲ್ಲೋ ಮುಚ್ಚಿ ಹಾಕಿಬಿಡುತ್ತೇವೆ..ನಮ್ಮ ಕನಸುಗಳು..ನಮ್ಮ ಆಲೋಚನೆಗಳು..ಮೆಟ್ಟಿದ ಮನೆಯ ಅಚ್ಚಲ್ಲಿ ಅಚ್ಹಾಗಿ ಬಿಡುತ್ತವೆ...ನಾವೂ ಅಮ್ಮ ಆಗಿಬಿಡುತ್ತೇವೆ....ಹೊರಗಿನ ಮಳೆಯೊಂದಿಗೆ ಮನಸು ಒದ್ದೆ ಒದ್ದೆ.......

ಅಮ್ಮನಿಗೆ ಒಮ್ಮೆ sorry ಹೇಳ್ಬೇಕು ಅನ್ಕೊಂಡೆ...ಮಳೆ ಕೊಂಚ್ ನಿಂತಂತಾಯಿತು...ಮಗ ಇನ್ನೂ ಗಲ್ಲ ಉಬ್ಬಿಸಿಕೊಂಡೆ ಇದ್ದ ...ಮನೆಗೆ ಬಂದೊಡನೆ ಪುಟ್ಟ  ಪುಟ್ಟ  ಕಾಗದದ ದೋಣಿಗಳೊಂದಿಗೆ ರಸ್ತೆಯಲ್ಲಿ ಹರಿದು ಬರುತ್ತಿದ್ದ ನೀರಲ್ಲಿ ನಮ್ಮ ದೋಣಿಯಾನ ಆರಂಭವಾಯಿತು.. ಮಗು ಸಿಟ್ಟು ಮರೆತು ಮನಸ್ಪೂರ್ತಿ ಆಡ ತೊಡಗಿತ್ತು......ಆಗ ನೆನಪಾದ ಹಾಡುಗಳೆಷ್ಟೋ...ಕವನಗಳೆಷ್ಟೋ.... ಮಗ ''ಅಮ್ಮ  ನೀನು ಗುಡ್ ಗರ್ಲ್ ''ಅಂತ ಸರ್ಟಿಫಿಕೆಟ್ ಬೇರೆ ಕೊಟ್ಟ. ಬಾಲ್ಯದುದ್ಯಾನದಲಿ ಹೂತು ಹೋಗಿದ್ದ.. ಕನಸ ಬೀಜಕ್ಕೆ.ಒಲವಿನೊರತೆಯ ಸಿಂಚನ... ಮನದಲ್ಲಿ ಮಾತ್ರ ಅವೆ ಪ್ರಶ್ನೆಗಳ ಮಹಾಪೂರ ..


(www.vijayanextepaper.com ವಿಜಯನೆಕ್ಷ್ತವಾರಪತ್ರಿಕೆಯ ಅವಳ ಡೈರಿ ಅಂಕಣದಲ್ಲಿ ಪ್ರಕಟಿತ )

Monday, August 29, 2011

ಜನರ ಸಂತೆಯಲ್ಲಿ ಹಕ್ಕಿಗಳೊಂದಿಗೆ... ನಾನು


                                                                                               


ಇಂಥವೆಲ್ಲ ನನ್ನ ಕಣ್ಣಿಗೆ ಯಾಕೆ ಬಿಳುತ್ತವೆಯೋ ಗೊತ್ತಿಲ್ಲ, ದೇಶ ಬಿಟ್ಟು ನನ್ನದಲ್ಲದ ನಾಡಿಗೆ ಬಂದು ನೆಲೆಸಿದರು ಈ ನಂಟು ನನ್ನ ಬಿಡಲೊಲ್ಲದು, ಮದುವೆಯ ನಂತರ ಮೊದಲು ಸಂಸಾರದ ಬಂಡಿ ಹೂಡಿದ್ದು ಬೆಳಗಾವಿಯಲ್ಲಿ, ೨ ನೇ ಅಂತಸ್ತಿನಲ್ಲಿ ನನ್ನ ಪುಟ್ಟ ಗೂಡು , ಅಡಿಗೆ ಮನೆಯ ಕಿಟಕಿ ತೆರೆದ ಕೂಡಲೇ ಕಾಣುತ್ತಿತ್ತು ಅವರ ಬಳಗ. ಹತ್ತಿರದ ಅಂಗಡಿಯ ಬಾಗಿಲಲ್ಲಿ ಅವರು ಎಸೆಯುತ್ತಿದ್ದ ಅಕ್ಕಿಯ ಕಾಳ್ ಆಸೆ ಪಟ್ಟು ಎದುರಿನ ವಿದ್ಯುತ್ ತಂತಿಯ ಮೇಲೆ ಮದುವೆ ಉಟಕ್ಕೆ ಕುಳಿತ ಪಂಕ್ತಿಯಂತೆ ಕೂಡುತ್ತಿದ್ದ ಮುದ್ದು ಮುಖದ ಗುಬ್ಬಿಗಳು.

ನನ್ನ ಕೆಲಸ ಮುಗಿಯಿತೆಂದ ಕೂಡಲೇ, ನಾನು ಅವನ್ನು ನೋಡುತ್ತಾ ಕುಳಿತು ಬಿಡುತ್ತಿದ್ದೆ. ನೋಡಲು ಒಂದೇ ರೀತಿ ಕಂಡರೂ ಅವುಗಳ ಆಕಾರ, ಗಾತ್ರ,ಅವುಗಳ ಚರ್ಯೆ ಬೇರೆಯೇ ಆಗಿರುತ್ತದೆ. ಹತ್ತಿರದಿಂದ ನೋಡಲು ಸಿಗುತ್ತಿದ್ದರಿಂದ ನಾನು ಅವನ್ನು ಗುರುತಿಸ ತೊಡಗಿದ್ದೆ. ಹಾಗೊಂದ್ ದಿನ ನಾನೂ ಕಿಟಕಿಯ ಹೊರಗಿನ ಪುಟ್ಟ ಜಾಗೆಯಲ್ಲೇ ಒಂದಷ್ಟು ಅಕ್ಕಿ ನುಚ್ಚು ಎಸೆದು ಅವಕ್ಕಾಗಿ ಕಾಯುತ್ತ ಕುಳಿತೆ..ಹಾಗೆ ಬಂದೇ ಬಿಡುತ್ತವೆಯೇ ಅವು..?????ಕಾಯಿಸಿದವು..ನಾನೂ ಕಾದೆ ೧..೨..೩...೪...ಹೀಗೆ ದಿನ ಕಳೆದರು ಅವು ಬರಲಿಲ್ಲ. ಅದೊಂದು ದಿನ ಪುಟ್ಟ ಮರಿ ಗುಬ್ಬಿ ನನ್ನ ಕಿಟಕಿಯ ಮೇಲೆಸೆದ  ನುಚ್ಚಿನ ರುಚಿ ನೋಡಲು ಬಂದಿತ್ತು.

ಮೊದಲು ಅದಕ್ಕೂ ಹೆದರಿಕೆ! ಆಮೇಲೆ ಅದು ತನ್ನ ಪರಿವಾರದೊಂದಿಗೆ ಬರ ತೊಡಗಿತು. ಆಮೇಲೆ ದಿನಾಲೂ . ಸಂಖ್ಯೆ ಹೆಚ್ಹಾಗ ತೊಡಗಿದಂತೆ ಒಮ್ಮೆ ಹಾಕಿದರೆ ಸಾಕಾಗದು ಮತ್ತೆ ಮತ್ತೆ ಹಾಕು ಎಂಬಂತೆ ಜಗಳವಾಡುತ್ತಿದ್ದವು. ಅವುಗಳೊಂದಿಗೆ ಒಂದು ಘಟ್ಟಿ ಬಾಂಧವ್ಯ ಬೆಳೆಯತೊಡಗಿತ್ತು. ಇಲ್ಲಿ ಮಾತಾಡಿ ಹಾಳಾಗುವ,ಮಾತಿನ ಇನ್ನೊಂದು ಅರ್ಥ ಹುಡುಕುವ ಪ್ರಮೇಯ ಇರಲಿಲ್ಲ..ಚೀಕ್ ಚಿಕ್ ..ಚೆಂವ್ವ್...ಎಂಬುದನ್ನು ನಾನೂ ನನಗೆ ಬೇಕಾದಂತೆ ಅರ್ಥೈಸ ತೊಡಗಿದ್ದೆ..ಅವುಗಳೊಂದಿಗೆ ಮಾತಾಡುತ್ತಿದ್ದೆ. ಜಗಳ ಮಾಡುತ್ತಿದ್ದೆ   ವಿಚಿತ್ರ ಎಂದರೆ ಅವು ನನ್ನ ಮಾತಿಗೆ ಪ್ರತಿಕ್ರಿಯಿಸುತ್ತಿದ್ದವು ಇದನೆಲ್ಲಾ ನನ್ನ ಪಪ್ಪನಿಗೆ ಫೋನ್ ಮಾಡಿ ಸಂತಸ ಪಡುತ್ತಿದ್ದೆ..ಭಾವುಕ ಜೀವಿಗೆ ಇದೊಂದು ಅಪೂರ್ವ ಅನುಭವ. ವಾಸ್ತವ ವಾದಿ ನನ್ನ ಪತಿ ಕೂಡ ಇದನ್ನು ಆನಂದಿಸ  ತೊಡಗಿದ್ದರು.ಆದಿನ ಕಿಟಕಿಯ ಬಾಗಿಲು ತೆರೆದಿತ್ತು ನಾವು ನಮ್ಮ ಕೋಣೆಯಲ್ಲಿದ್ದೆವು, ಏನೋ ಸದ್ದು ಎರಡು ಗುಬ್ಬಿಗಳು!!!ಸೀದಾ ಒಳಬಂದು ಹಾರಡ ತೊಡಗಿದ್ದವು..ಆದಿನ ನಾ ಅನುಭವಿಸಿದ್ದ ಆ ಸಂತಸ ಅದೆಷ್ಟು ಮಧುರ...

ಅದೆಷ್ಟು ಬೇಗ ಸಮಯ ಸರಿಯಿತು ತಿಳಿಯಲೇ ಇಲ್ಲ. ನಾನೂ‌ ಬಾಣಂತನಕ್ಕೆ ಅಮ್ಮನ ಮನೆಗೆ ಹೊರಟು ನಿಂತೆ. ಅವಕ್ಕೂ ಟಾಟ ಹೇಳಿದ್ದೆ. ಆಮೇಲೆ ನಾ ಬಂದಿದ್ದು ೭ ತಿಂಗಳ ನಂತರ. ಅಲ್ಲಿ ತನಕ ಸ್ಥಗಿತ ವಾಗಿದ್ದ, ನಮ್ಮ ಮಾತುಕತೆ ಮತ್ತೆ ಪ್ರಾರಂಭವಾಗಿತ್ತು .
ನಮಗೂ ಗೊತ್ತಾಗದಷ್ಟು ವೇಗದಲ್ಲಿ ನಮ್ಮ ನೆಲೆ ಬದಲಿಸಬೇಕಾಗಿ ಬಂತು.‌ಮತ್ತೆ ಅವುಗಳಿಂದ ದೂರವಾಗಿದ್ದೆ. ಅಷ್ಟೊತ್ತಿಗಾಗಲೇ ಗುಬ್ಬಿಗಳೊಂದಿಗೆ ಕಾಡು ಪಾರಿವಾಳಗಳು ಜೊತೆಯಾಗಿದ್ದವು...ಅವುಗಳನ್ನು ಬಿಟ್ಟು ಬರುವಾಗ ಆದ ಸಂಕಟ ಯಾರೊಂದಿಗೂ ನಾ ಹಂಚಿ ಕೊಳ್ಳಲಿಲ್ಲ  ಹೇಳಲು ಏನಿತ್ತು???..ಸಾಕಿದ ಹಕ್ಕಿಗಳಲ್ಲ ನನ್ನ ನಂಬೇ ಬಂದವುಗಳಲ್ಲ ಆದರೂ ನನ್ನ ಏಕತಾನತೆಗೆ ಸಂಗಾತಿ ಯಾಗಿ ಒಲುಮೆಯ ಬಾಂಧವ್ಯ ಬೆಸೆದಿದ್ದವು. ಮಾತು ಬರುವ ಮನುಷ್ಯರಿಗಿಂತ ಮಾತು ಬರದ ಈ ಜೀವಿಗಳೇ ಸಾವಿರಪಾಲು ಲೇಸು ಎನಿಸಿದ್ದು ಸುಳ್ಳಲ್ಲ..

ನಂತರ ಮತ್ತೊಂದು ಹಕ್ಕಿಯ ಜೊತೆ ಒಡನಾಟ ಆಯ್ತು. ಆ ಹಕ್ಕಿಯ  ಹೆಸರು ನನಗೆ ಗೊತ್ತಿಲ್ಲ. ಕನ್ನಡಿಯಲ್ಲಿ ತನ್ನ ಬಿಂಬ ಕಂಡು ಅದನ್ನು ಕುಕ್ಕುತ್ತ ಕುಳಿತು ಕೊಳ್ಳುತಿತ್ತು.ಮನೆಯ ಜಗಲಿಯಲ್ಲಿ ನೇತು ಹಾಕಿದ ಒಂದು ಪ್ರಕೃತಿಯ         ಚಿತ್ರಕ್ಕೆ ಬಂದು ಏನೋ ಹುಡುಕುತಿತ್ತು...ಅದೇ ಹಕ್ಕಿ..ಗೊರಟ್ಟಿಗೆ ಗಿಡಕ್ಕೆ ಗೂಡು ಕಟ್ಟಿ ಸಂಸಾರ ಹೂಡಿತ್ತು(..ಅದರ ಕುರಿತು ಬರೆದ ಬರಹ http://bhavanaloka.blogspot.com/2010/12/blog-post_9354.ಹ್ತ್ಮ್ಲ್ ಇಲ್ಲಿ ಓದಬಹುದು..)

ನಂತರ ಈ ನಾಡಿನಲ್ಲಿ(Northern Ireland)
ನಾ ಬಂದ ದಿನದಿಂದಲೇ ಇಲ್ಲಿ ಸ್ನೌಫಾಲ್  ಮೆತ್ತಗೆ ಆರಂಭ ಗೊಂಡಿತ್ತು‌ ಆಗೆಲ್ಲ ಹಾರಾಡುತ್ತಿದ್ದ ಹಕ್ಕಿ ಕಂಡು ಅಂದು ಕೊಳ್ಳುತ್ತಿದ್ದೆ ಅದೆಷ್ಟು ಛಳಿ ಆಗುತ್ತಿರಬಹುದು ಇವಕ್ಕೆ..????ಈ ಸಮಯದಲ್ಲೇ ಅಲ್ಲವೇ ಅವು ಸಾವಿರಾರು ಮೈಲಿ..ವಲಸೆ ಹೋಗುವುದು..ನನ್ನೂರ ಹತ್ತಿರ ಇರುವ ಅತ್ತಿವೆರಿ  ಪಕ್ಷಿ ಧಾಮಕ್ಕೆ ಬಂದು ಗೂಡು ಕಟ್ಟಿ ಸಂಸಾರ ಮಾಡಿದ ಹಕ್ಕಿಗಳು ಇಲ್ಲೂ ಇರಬಹುದ????ಹಾಗೆ ಏನೇನೋ ಆಲೋಚನೆಗಳು.ಮತ್ತು ಇಲ್ಲಿ ಯಾವ ಪಕ್ಷಿಯೊಂದಿಗೆ ನನ್ನ ಬಂಧ ಬೆಳೆಯಲಿದೆಯೋ????ಮನಸ್ಸು ಯಾವಾಗಲಾದರೊಮ್ಮೆ ಕೇಳಿದ್ದು ಸುಳ್ಳಲ್ಲ...

ಹಾಗೆ ಕೇಳಿಕೊಂಡ ಕೊಂಚ ದಿನಕ್ಕೆ ಹಿತ್ತಲಲ್ಲಿ ಪಕ್ಷಿಗಳ ಇಂಚರ..ಆದರೂ ನಾ ಗಮನಿಸಲಿಲ್ಲ..ಗೂಡು ಕಟ್ಟಲು ಮರವು ಇಲ್ಲ‌ ಮತ್ಯಾವ ರೀತಿಯಲ್ಲೂ ಸೂಕ್ತವಲ್ಲದ ಯಮಗಾತ್ರದ  ಸಿಮೆಂಟು ಗೋಡೆಗಳು, ಅಲ್ಲಿ ಹೇಗೆ ಗೂಡು ಕಟ್ಟಿಯಾವು????
ನನ್ನ ಸಂದೇಹ ಮರುದಿನವೇ ಮಾಯಾ. ಅಲ್ಲೊಂದು ಗೂಡು ಅದೂ ಮಣ್ಣಿನ ಗೂಡು. ಹಕ್ಕಿಗಳು ಮಣ್ಣಿನಿಂದ ಗೂಡು ಕಟ್ಟುತ್ತವೆಯೇ????ನಾನು ಹಕ್ಕಿಗಳ ಬಗ್ಗೆ ಅಷ್ಟೇನೂ ಓದಿಕೊಂಡಿಲ್ಲ ಆಗ ಆ ಗೂಡ್ನಲ್ಲಿ ಪುಟ್ಟ ಪುಟ್ಟ ನಾಲ್ಕು ಮರಿಗಳು..ತುಂಬಾ ಆಯಕಟ್ಟಿನ ಸ್ಥಳದಲ್ಲಿ ಗೂಡು ಇದ್ದಿದ್ದ ರಿಂದ ಮರಿಗಳ ಫೋಟೋ ತೆಗೆಯಲು ಹೋಗಿ ಪ್ರತಿಬಾರಿ ಸೋತು ಹೋಗುತ್ತಿದ್ದೆ.ಹಕ್ಕಿಗಳು  ಹೆದರುತ್ತಿದ್ದವು..ಅಧ್ಯೇಗೋ ಮಾಡಿ ಒಂದು ಚಿತ್ರದಲ್ಲಿ ಈ ಹಕ್ಕಿ ಮರಿಗಳು ಸೆರೆಯಾದವು.

ಸ್ವಲ್ಪ ದಿನದ ನಂತರ ಹಾರಾಡಲು ಕಲಿಸುತ್ತಿದ್ದ ಅಮ್ಮ..ಕಲಿಯುತ್ತಿದ್ದ ವಿಧೇಯ ಮರಿಗಳು. ಅವು ಹಾರಿ ಹೋಗಲು ತಯಾರಿ ನಡೆಸಿದ್ದವು. ಯಾಕೋ ಆದಿನ ಭಾಳ ಬೇಜಾರಾಗಿತ್ತು.ಒಂದು ವಾರ ಕಳೆದಿತ್ತಷ್ಟೆ ಮತ್ತೆ ಗೋಡೆಗೆ ಗೂಡು. ಹಸಿ ಮಣ್ಣಿನ ಸುವಾಸನೆ, ಮತ್ತೊಂದು ಮಗದೊಂದು ಗೂಡು. ಮೊಟ್ಟೆ, ಆದರೆ ಆ ಹಕ್ಕಿ ಇನ್ನೂ ನನಗೆ ಅಪರಿಚಿತ ಗೂಡಿನ ಚಿತ್ರ ತೆಗೆದು ಫೆಸ್ಬುಕ್ ನಲ್ಲಿ ಹಾಕಿದೆ. ಬೆಂಗಳೂರಿನ  ಅಂಜಲಿ ರಾಮಣ್ಣ, ೨ ನಿಮಿಷಕ್ಕೆ  ಪ್ರತಿಕ್ರಿಯಿಸಿದರು..THE BARN SWALLOW. ಸರಿ ಕನ್ನಡದ ಹೆಸರೇನು???ಆಗ ಮತ್ತೊಂದು ಪ್ರತಿಕ್ರಿಯೆ. ಧಾರವಾಡದ ಹರ್ಷವರ್ಧನ್ ಶೀಲವಂತ್ ಅವರು ಆ ಹಕ್ಕಿಯ  ಕನ್ನಡದ ಅದೆಷ್ಟು ಚಂದದ ಹೆಸರು ಬರೆದಿದ್ದರು..''ಅಂಬರ ಗುಬ್ಬಿ''ಹೆಸರು ಕೇಳಿಯೇ ರೋಮಾಂಚನ ಆಗಿತ್ತು..ಗೆಳತಿ ಅಂಜಲಿ‌ ಬಾಣಂತನ ಕ್ಕೆ ಅಂಟಿನ್ಉಂಡೆ  ಕಳಿಸಲ ಅಂದ್ರು.

ಇಲ್ಲಿಯ ಹೆಣ್ಣುಮಕ್ಕಳು ಹೆರಿಗೆಯ ನಂತರ ಮಗುವನ್ನು ಬಾಸ್ಕೆಟ್ ನಲ್ಲಿ ಹಾಕಿಕೊಂಡು‌ ಡ್ರೈವ್ ಮಾಡುತ್ತಾರೆ ಹಕ್ಕಿಗಳ ಕತೆ ಏನೋ ಯಾರಿಗ್ಗೊತ್ತು ಅಂದೆ.ಆಗ ಹೇಳಿದ ಮಾತು ಮಾತ್ರ ಮನ ತಟ್ಟಿತ್ತು..''ಏನೇ ಹೇಳಿ ಅಮಿತಾ ಗೂಡು ಕಟ್ಟಿ ಮರಿ ಮಾಡಿ ಮಾತೃತ್ವ ಪಡೆಯುವ ಆ ಆನಂದದ ಮುಂದೆ ಬೇರೆಲ್ಲವನ್ನೂ ನಿವಾಳಿಸಿ ಎಸೆಯಬೇಕು..''ನಿಜ ಅಲ್ಲವೇ? ಬೇರೆಲ್ಲ ವಿಷಯದಲ್ಲಿ ಮನುಷ್ಯ ಸಾಕಷ್ಟು  ತನ್ನದನ್ನು ಸಾಧಿಸಿರಬಹುದು.ಆದರೆ ಮನೇ ,ಮಗು ಮತ್ತು ಅವುಗಳ ಆರೈಕೆ ಬೆಳವಣಿಗೆಯ ವಿಷಯದಲ್ಲಿ ಮಾತ್ರ ಹಕ್ಕಿಯ ಜಾಡನ್ನೇ ಹಿಡಿದ.‌ಆತ ಮಾಡಿದ ಒಂದೇ ಒಂದು ಹೆಚ್ಚುಗಾರಿಕೆ ಎಂದರೆ , ಮಕ್ಕಳನ್ನು ಬೆಳೆಸಿ ಅವುಗಳಿಂದಲೂ ಅದೇ ತೆರನಾದ ಪ್ರೀತಿ ಮಮತೆ ಬಯಸಿದ. ಆದರೆ ಹಕ್ಕಿ ಮಾತ್ರ ತನ್ನ ಕರ್ತವ್ಯ ಮಾಡಿ ತನ್ನಷ್ಟಕ್ಕೆ ಸುಮ್ಮನಾಯಿತು..

ಅದ್ಯಾಕೆ ಇಂತದ್ದೆಲ್ಲ ನನ್ನ ಕಣ್ಣಿಗೆ ಬೀಳುತ್ತೆ ????ಒಂದು ಪುಟ್ಟ ಹಕ್ಕಿ ಮನಸಿನಲ್ಲಿ ಮೂಡಿಸುವ ಭಾವಗಳು ಸಾವಿರ.ಭಾವಗಳನ್ನು ಬೆಳೆಸಲೆಂದೇ ಬಾಂಧವ್ಯ ಬೆಳೆಯುತ್ತವೆಯ???ಸಾವಿರ ಆಲೋಚನೆಗಳ ಇಂಚರ. ಸಧ್ಯಕ್ಕೆ ನಾನು ಅಂಬರ ಗುಬ್ಬಿಯ ಮರಿಗಳೊಂದಿಗೆ ಬ್ಯುಸಿಯೋ ಬ್ಯುಸಿ. ನೀವು ಒಮ್ಮೆ ನಿಮ್ಮ ಅಕ್ಕ ಪಕ್ಕ ಕಣ್ಣು  ಹೊರಳಿಸಿ..ಅಲ್ಲೊಂದು ಪುಟ್ಟ ಮೂಕ ಜೀವಿ ನಿಮ್ಮ ಒತ್ತಡಗಳಿಗೆ  ಮಾತಿಲ್ಲದೆ ಸಾವಿರ ಸಮಾಧಾನ ಹೇಳಬಹುದು. ಒಮ್ಮೆ ಪ್ರಯತ್ನಿಸಿರಿ..ನನ್ನ ಅಂಬರ ಗುಬ್ಬಿಗಳಿಗೆ ನಿಮ್ಮ ಒಲುಮೆ ಹಾರೈಸಿ...

( ೨೮/೦೮/೨೦೧೧ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆ ಪುರವಣಿಯಲ್ಲಿ ಪ್ರಕಟಿತ )