Monday, January 18, 2021

ನೂಲಿನ ತೇರು - ೨

 ಮಾತು ಮೌನದ ಸಂಕದ ಮೇಲೆ


ನೀವೇನು ಕೆಲಸ ಮಾಡೋದು ಅಲ್ಲಿ ? ಹೀಗೊಂದು ಪ್ರಶ್ನೆ ಅದೆಷ್ಟು ಜನ ಕೇಳಿದ್ದಾರೆ ಅಂತ ಲೆಕ್ಕ ಮಾಡಲು ಹೋಗಿಲ್ಲ , ಆದರೆ ಅವರು ಹಾಗೆ ಕೇಳಿದಾಗೆಲ್ಲ ನನಗೆ ನಾನೇ ಕೇಳಿಕೊಳ್ಳುತ್ತೇನೆ , ಹೌದು ''ನೀ ಏನು ಕೆಲಸ ಮಾಡುತ್ತಿ  ಅಮಿತಾ ?'' ವೃತ್ತಿ ಪ್ರವೃತ್ತಿ ಎರಡು ಒಂದೇ ಆಗಿರುವ ಒಂದಷ್ಟು ನಶೀಬ್ವಾನ್ ಜನರಲ್ಲಿ ನಾನು ಒಬ್ಬಳು ಅಂತ ನನಗೆ ನಾನು ಹೇಳಿಕೊಳ್ತೇನೆ. 


ಮೊದಲೆಲ್ಲ ಸಂಗೀತ ಕಲಾವಿದೆ ಅಂತ ಪರಿಚಯಿಸಿಕೊಳ್ಳುತ್ತಿದ್ದ  ನನ್ನನ್ನ ಕಲ್ಚರಲ್ ಫೆಸಿಲಿಟೇಟರ್ /ಕಲ್ಚರಲ್ ಅಂಬಾಸಿಡರ್ ಮಾಡಿದ್ದೂ ಈ ನಾರ್ದರ್ನ್ ಐರ್ಲೆಂಡ್ ಎಂಬ ದೇಶ. ನಾನು ಹವ್ಯಾಸ ಎಂದು ಕಲಿತ ಮದರಂಗಿ, ರಂಗೋಲಿ , ಸಾಂಜಿ  , ವರ್ಲಿ , ಹಸೆ , ಮಂಡಲ, ಭಾರತೀಯ ಸಾಂಪ್ರದಾಯಿಕ ಅಡುಗೆ ಹೀಗೆ ಎಲ್ಲವನ್ನು ಪ್ರೀತಿಯಿಂದ ನಾನು ಇಲ್ಲಿ ಜನರಿಗೆ ಅವಕಾಶ ಸಿಕ್ಕಾಗಲೆಲ್ಲ ಹೇಳಿ ಕೊಟ್ಟಿದ್ದೇನೆ , ಅವರು ಅಷ್ಟೇ ಆದರದಿಂದ ಅಕ್ಕರೆಯಿಂದ ಅಂಥ ಅವಕಾಶಗಳನ್ನ ಪದೇ ಪದೇ ಕೊಟ್ಟು ನನ್ನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. 


ಇದೊಂದು ಕಾರಣದಿಂದಲೇ ನಾನು ಈ ಪುಟ್ಟ ದೇಶದ ಮೂಲೆ ಮೂಲೆ ಸುತ್ತಿದ್ದೇನೆ ಈ ಸುತ್ತಾಟಗಳು ಅದೆಷ್ಟು ದೇಶ, ಭಾಷೆಯವರೊಂದಿಗೆ ಬೆರೆಯುವ , ಅಪರೂಪದ ಅನುಭವಗಳನ್ನ ಒದಗಿಸಿ, ಬದುಕಿನ ಬಗೆಗೆ ಭಿನ್ನ ದೃಷ್ಟಿಕೋನ ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡಿವೆ. 


ಭಾರತೀಯ ಸಂಸ್ಕೃತಿಯ ಬಗ್ಗೆ ಒಲವು ಹೆಮ್ಮೆ ತುಸು ಹೆಚ್ಚೆ ಇರುವ ನನಗೆ, ಇತರ ಸಂಸ್ಕೃತಿಗಳ ಬಗ್ಗೆಯೂ ಕುತೂಹಲ ,ಗೌರವ ಮೂಡಿಸುವಲ್ಲಿ ಈ ಕೆಲಸ ಸಹಾಯ ಮಾಡಿದ್ದಲ್ಲದೆ, ಕೆಲವೊಮ್ಮೆ ಮನಸಿನ್ನ ಸೂಕ್ಷ್ಮ ಭಾವಗಳನ್ನು ಕೆದಕಿ ಹಾಕಿದೆ, ಹೀಗ್ಯಾಕೆ ? ಅನ್ನುವ ಪ್ರಶ್ನೆಯನ್ನ ಪದೇ ಪದೇ ಕೇಳಿಕೊಳ್ಳುವಂತೆ ಮಾಡಿದೆ. 



ಅಂಥದ್ದೇ ಒಂದು ದಿನ,  ಮದರಂಗಿಯ ಕುರಿತು ಇದ್ದ workshop ನಲ್ಲಿ,  ಮೆಹಂದಿಯ ಇತಿಹಾಸ , ಅದರ ಔಷದೀಯ ಉಪಯೋಗ , ಅದು ಜನಪ್ರಿಯತೆ  ಪಡೆದ ಬಗೆ  ಹೀಗೆ ಎಲ್ಲವನ್ನ ವಿವರಿಸಿ , ಅಜ್ಜಿ ಮನೆಯಿಂದ ತಂದು ಲ್ಯಾಮಿನೇಟ್ ಮಾಡಿ ಇಟ್ಟುಕೊಂಡ ಒಂದಷ್ಟು ಮದರಂಗಿ ಎಲೆಗಳು , ಪುಡಿ , ಎಲ್ಲ ತೋರಿಸಿ , ಕೊನೆಯಲ್ಲಿ ಭಾಗವಹಿಸಿದ, ಜೊತೆಗೆ ಬಂದ ಎಲ್ಲರಿಗೂ ಮದರಂಗಿ ಹಾಕುವ ಕ್ರಮ.

ಕಾರ್ಯಾಗಾರದಲ್ಲಿ ಇದ್ದ ಇಪ್ಪತ್ತು ಜನ ಮೆಹಂದಿ ಹಾಕುವ ಸಮಯ ಬಂದಾಗ ಎಪ್ಪತ್ತು -ನೂರು ಆಗುವುದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 


 ಎಂದಿನಂತೆ ಸರತಿಯಲ್ಲಿ ನಿಂತ ಮಕ್ಕಳಿಗೆ ಪುಟ್ಟದೊಂದು ಚಿತ್ತಾರ ಬಿಡಿಸಿ ಕಳಿಸುತ್ತಿದ್ದೆ , ಏನು ಚಿತ್ರ ಬೇಕು ಅಂದಾಗ ಅವು ತಮ್ಮ ಮನೀಷೆಯನ್ನು ಹೊರ ಹಾಕುತ್ತವೆ , ಡ್ರಾಗನ್ ,ವೂಲ್ಫ್ ,ನಾಯಿ ,ಹಲ್ಲಿ  ಮೊಸಳೆ ..ಹೀಗೆ ಏನೇನೋ ,ಒಂದಷ್ಟು ಹೆಸರು ಬರೆಸಿಕೊಳ್ಳುತ್ತವೆ,  ಫುಟ್ಬಾಲ್ ತಂಡದ ಹೆಸರು , ಮೊದಲ ಪ್ರೇಮದಲ್ಲಿ ಬಿದ್ದ ಕೆಲ ಹುಡುಗರು ಚಿಕ್ಕದಾಗಿ ಹುಡುಗಿಯ ಹೆಸರಿನ ಮೊದಲಕ್ಷರ ಬಿಡಿಸಿಕೊಂಡು ಮುಖದ ತುಂಬಾ ಸಾರ್ಥಕ್ಯ ಹೊತ್ತು ಹೋಗುತ್ತವೆ , ಕೆಲವೊಂದಷ್ಟು ಬರಿ ವೈನ್ ಗ್ಲಾಸ್ , ಸಿಗರೇಟ್ ತಲೆಬುರುಡೆ ಚಿತ್ರ ಬಿಡಿಸು ಅಂದಾಗ ಬುರುಡೆಗೆ ಒಂದು ಮೊಟಕೋಣ ಅನಿಸೋದು ಸುಳ್ಳಲ್ಲ ಅದೇನೇನೋ ಪ್ರಶ್ನೆಗಳು, ಕೊಟ್ಟ ಉತ್ತರಕ್ಕೆ ಹುಟ್ಟುವ ಮತ್ತಷ್ಟು ಮಾತುಗಳು , ಬಹಳಷ್ಟು ಸಲ ನಾನು ತಲೆ ಎತ್ತುವಮೊದಲೇ ಇನ್ನೊಂದು ಕೈ ನನ್ನ ಮುಂದೆ ಸಿದ್ಧವಾಗಿರುತ್ತದೆ, ಮತ್ತವರ ಪ್ರಶ್ನೆಗಳು.


 ಹೀಗೆ ನಡೆಯುತ್ತಿರುವಾಗ  ಅದರಲ್ಲೊಬ್ಬ ಪುಟ್ಟ ಹುಡುಗ ಬಂದು ನನ್ನೆದುರಿಗೆ ಕುಳಿತುಕೊಂಡ, ಯಾವುದೇ ಮಾತು ಅವನಿಂದ ಬಾರದಿದ್ದಾಗ ,  ನಾನೇ ಮುಖವೆತ್ತಿ  ಏನು ಬಿಡಿಸಲಿ?ಎಂದು ಕೇಳಿದೆ   ..ಕೈಗಳ ಮೇಲೆ ರಂಗೋಲಿ ಚಿಕ್ಕಿ ಇಟ್ಟಂತೆ  ಮಾಡಿ ತೋರಿಸಿದ ,ಸ್ಟಾರ್ ಬಿಡಿಸಲ ಅಂತಾ ಕೇಳಿದ ಮೇಲೂ   ಆತನ ವರ್ತನೆಯಲ್ಲಿ ಏನು ಭಿನ್ನತೆ ಕಾಣಲಿಲ್ಲ. ಸುಮಾರು ಸರಿ ಕೇಳಿದ ಮೇಲೆ ನನ್ನ ಕಣ್ಣು ಗಳಲ್ಲಿ ಏನೋ ಹುಡುಕಿದಂತೆ ಅವುಗಳನ್ನೇ ನೋಡುತ್ತಿದ್ದ ,''ನನ್ನ ಮನಸ್ಸಿಗೆ ಬಂದಿದ್ದು ಬಿಡಿಸಲ ? ಅಂದೆ, ಉತ್ತರಿಸದೆ ಮತ್ತೆ ಕೈ ಮೇಲೆ ಚಿಕ್ಕಿ ಹಾಕುತ್ತಿದ್ದ ಅವನ ಕೈ ಮೇಲೆ ಮೂರು ನಕ್ಷತ್ರಗಳನ್ನು ಬಿಡಿಸಿ ಮುಗೀತು ಅನ್ನುವಂತೆ ನೋಡಿದೆ, ಚಿತ್ರ ಬಿಡಿಸಿಕೊಂಡ ಮಕ್ಕಳು ಖುಷಿಯಿಂದ Thankyou , you are the best lady in the world" ಅನ್ನುವ ಕಾಮನ್ ಡೈಲಾಗ್ ಕೇಳಲಿಕ್ಕೆ ಖುಷಿ ಆಗುತ್ತದೆ ಜೊತೆಗೆ  ಮದರಂಗಿ ಹಾಕಿಕೊಂಡ ಕೈಯ್ಯನ್ನ ಕಾಳಜಿಯಿಂದ ಎತ್ತಿಕೊಂಡು ಮತ್ತೆ ಮತ್ತೆ ಚಿತ್ತಾರ ನೋಡಿಕೊಳ್ಳುವುದನ್ನ ನೋಡಿದರೆ ನಗುವೂ ಬರುತ್ತದೆ.


 ಆದರೆ ಈ ಮಗು ಹಾಗೇನು ಹೇಳದೆ ಬರೀ ಖುಷಿ ಹೊತ್ತ ಕಣ್ಣುಗಳಿಂದ ನನ್ನ ನೋಡುತ್ತಿತ್ತು , ಅಷ್ಟರಲ್ಲಿ ಹಿಂದಿನಿಂದ ಬಂದ ಅವರಪ್ಪ'' ಥಾಂಕ್ ಯು ಹೇಳು '' ಅಂದ. ಮಗು ನಿಷ್ಕಲ್ಮಶ ನಗುವಿನೊಂದಿಗೆ ಖುಷಿ ತುಂಬಿಕೊಂಡ ಕಣ್ಣುಗಳನ್ನ ಅರಳಿಸುತ್ತ  ಥಾಂಕ್ ಯು ಹೇಳಿತು ಆದರೆ , ಅಲ್ಲಿ ಶಬ್ದಗಳೇ ಇರಲಿಲ್ಲ ,ಸನ್ನೆಯಷ್ಟೇ! ಆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಮೇಲೂ ನನಗೆ ಆ ಮಗುವಿನ ಖುಷಿ ತುಂಬಿದ ನೀಲಿ ಕಣ್ಣುಗಳು , ಮತ್ತು ಆ ಸನ್ನೆ ಪದೇ ಪದೇ ನೆನಪಾಗುತ್ತಿತ್ತು. 


 ಆ ಮಗುವಿಗೆ ಮಾತಾಡಲು ಬರುವುದಿಲ್ಲವ? ಅದೊಂದು ಭಾವವೇ ನನ್ನ ಪೂರ್ತಿ ಹಿಂಡಿ ಹಾಕಿತು , ಕಣ್ಣು  ತುಂಬಿ ಕೊಂಡವು , ಮತ್ತೆ ಆ ಮಗುವಿನ ಥಾಂಕ್ ಯು ಸಂಜ್ಞೆ ನೆನಪಾಗಿ ಏನೋ ಯಾತನೆ. ಹಾಗಂತ ಆ ಮಗು ನಾನು ನೋಡಿದ ಮೊದಲ ಮಾತುಬಾರದ ವ್ಯಕ್ತಿಯಲ್ಲ , ಆದರೆ ಅವ ನೆನಪಿಸಿದ್ದು ಮಾತ್ರ ಹಲವರನ್ನ , ಬಾಲ್ಯದಿಂದ ನಾ ಇಲ್ಲಿಗೆ ಬರುವ ತನಕ ನಾ ನೋಡಿದ ಎಲ್ಲ ಮಾತು ಬರದವರನ್ನ , ಕಣ್ಣಲ್ಲಿ ಸದಾ ಆಶಾವಾದ ಸೂಸುವವರನ್ನ ,   ಅವರೊಂದಿಗೆ ಬೆಸೆದುಕೊಂಡ ನನ್ನ ನೆನಪುಗಳನ್ನು.


 ನನ್ನ ಅಜ್ಜಿ ಮನೆಯ ಹತ್ತಿರದಲ್ಲಿದ್ದ ಗೀತ (ಮೂಕಿ ಅಂತಾನೆ ಅವಳ ನಿಕ್ ನೇಮ್), ಶಿರಸಿಯ ನೀಲೆಕಣಿ ಆಟೋ ಗ್ಯಾರೇಜನವರ  ಮಗಳು ವಿಭಾ , ನನ್ನ ತವರು ಮುಂಡಗೋಡಿನ ಆ ಬಿಳಿ ಧಿರಿಸು ,ಟೋಪಿ ತೊಟ್ಟುಕೊಂಡು, ಮಕ್ಕಳನ್ನ ಕಂಡರೆ ಉರಿದು ಬೀಳುತ್ತಿದ್ದ ಮತ್ತು ನಾನು ಹಾಡುತ್ತೇನೆ ಅನ್ನೋ ಒಂದೇ ಕಾರಣಕ್ಕೆ ನನ್ನತ್ತ ಒಂದು ವಿಶೇಷ ಕಳಕಳಿ ತೋರುತ್ತಿದ್ದ ಆದರೆ ನನ್ನ ಹಾಡನ್ನ ಒಮ್ಮೆಯೂ ಕೇಳದ ಆ ಮೂಗಪ್ಪ .  

ಬೆಳಗಾವಿಯ ಮಾರುತಿಗಲ್ಲಿಯ ಹನುಮಪ್ಪನ ಗುಡಿಯೊಳಗೆ ಶನಿವಾರಕ್ಕೊಮ್ಮೆ ಸೇರಿ ಮೀಟಿಂಗ್ ನಡೆಸುತ್ತ  ಮೌನದಲ್ಲೇ  ಗಂಭೀರ ಮಾತುಕತೆ ನಡೆಸುತ್ತ ತಮ್ಮ ಲೋಕದಲ್ಲಿ ಕಳೆದು ಹೋಗಿ..ನಮ್ಮಂಥವರಿಗೆ ಸೋಜಿಗವಾಗುತ್ತಿದ್ದ ಆ ಮೂಕರ ಗುಂಪು. ಮನಸ ಕಪಾಟಿನ ತಳದ ಅರಿಯಲ್ಲಿ ಬೆಚ್ಚಗೆ ಸೇರಿಕೊಂಡಿರುವ ಬರ್ಫಿ, ಖಾಮೋಶಿಯಂಥ  ಸಿನಿಮಾ ಪಾತ್ರಗಳು , ಯಾಕೋ ಇವೆಲ್ಲ ನೆನಪಾಗಿ ಮತ್ತೆ ಮತ್ತೆ ಕಣ್ಣು ತೇವತೇವ.


ಇದು ಕನಿಕರ ಅಥವಾ ಅನುಕಂಪ ಅಲ್ಲವೇ ಅಲ್ಲ! ಯಾಕೋ ಅನಿಸೋಕೆ ಶುರು ಆಗಿದೆ '' ನಾವ್ಯಾಕೆ  ಇಷ್ಟು ಮಾತಾಡ್ತೀವಿ .ಎಲ್ಲದ್ದಕ್ಕೂ ನನ್ನ ಅಭಿಪ್ರಾಯ ಕೊಡಲೇಬೇಕು ಅನ್ನುವ ಹಠ ಮಾಡುವ ಮನಸು, ಮಾತಾಡಲೇಬೇಕಾದ ಅನಿವಾರ್ಯತೆ ಇದ್ದಾಗ, ಯಾರೋ ನಾವಾಡುವ ಒಂದು ಒಳ್ಳೆ  ಮಾತಿಗೆ ಕಾಯುತ್ತಿರುವಾಗ, ಬೇಕಂತಲೇ ವಹಿಸುವ ಜಾಣ ಮೌನ ,  ನಾವ್ಯಾಕೆ ಇಷ್ಟು ಮಾತಾಡುತ್ತೇವೆ ಅವರ್ಯಾಕೆ ಅಷ್ಟು ಮೌನ???? ಮೌನದಲ್ಲೂ ಮಾತಾಡುವ ಅವರು  ಮಾತು ಮಾತಿನಲ್ಲೂ ಊನ ಹುಡುಕುವ ನಾವು.

(ಉದಯವಾಣಿ , ವಿಶೇಷ ಪುರವಣಿ ದೇಸಿಸ್ವರದಲ್ಲಿ ನೂಲಿನ ತೇರು ಎಂಬ ಅಂಕಣ ದಲ್ಲಿ ಪ್ರಕಟಿತ)

ನೂಲಿನ ತೇರು - ೧



ನಾನು ಇದ್ದದ್ದೇ ಹಾಗೆ ವೈದೇಹಿಯವರ ಕವನದ "ಅಡುಗೆ ಮನೆ ಹುಡುಗಿಯಂತೆ" , ನನ್ನ ಊರಿನಲ್ಲಿ ಅಪರೂಪಕ್ಕೆ ಆಕಾಶದಲ್ಲಿ ವಿಮಾನದ ಸದ್ದು  ಮೋಡದೊಳಗಿಂದ ಕೇಳಿಸಿದರೆ ಸಾಕು ಅದನ್ನು ನೋಡಲು ಅಂಗಳಕ್ಕೆ ಓಡಿಬಂದು ಅದಕ್ಕೆ ಕೈಬೀಸಿ ಅದು ಮರೆಯಾಗುವವರೆಗೂ ಕಣ್ಣು ತುಟಿ ಅರಳಿಸಿ ಬಾನಿಗೆ ಮೊಗಮಾಡಿ ನಿಲ್ಲುವ ಖುಷಿ,  ಮೊದಲ ಬಾರಿ ವಿಮಾನ ಹತ್ತಿ ಈ ದೇಶಕ್ಕೆ ಬರುವಾಗ ಇರಲೇ ಇಲ್ಲ ಎಂದರೆ ನೀವು ನಂಬಲೇ ಬೇಕು. 


ನೆಲದ ಪ್ರೀತಿ ಹಚ್ಚಿಕೊಂಡ ನನ್ನಂಥ ಅದೆಷ್ಟೋ ಅನಿವಾಸಿ ಭಾರತೀಯರು ಪ್ರತಿಬಾರಿ ಭಾರತಕ್ಕೆ ಬಂದು ಮರಳುವಾಗ ವರುಷಕ್ಕಾಗುವಷ್ಟು ಭಾವತಂತುಗಳನ್ನ ಹೊತ್ತು ತರುತ್ತಾರೆ , ನಾನು ನನ್ನ ಸ್ನೇಹಿತೆಯರು ಸೇರಿ ಇದಕ್ಕೆ 'ಇಂಧನ/fuel" ಎಂದು ಕರೆಯುವುದುಂಟು. ಯಾಕೆಂದರೆ ಇಲ್ಲಿ,  ನಮ್ಮದಲ್ಲದ ನೆಲದಲ್ಲಿ ಬದುಕಬಂಡಿ ನಡೆಸಲು ಈ ಇಂಧನ ವೇ ಜೀವಾಳ.


ಆದರೂ ಒಮ್ಮೊಮ್ಮೆ ತಾಯಿನಾಡು ಅದೆಷ್ಟು ನೆನಪಾಗುತ್ತದೆಂದರೆ ಮನಸು ಪುಟ್ಟ ಮಗುವಿನಂತಾಗಿ ಅಮ್ಮನ ಮಡಿಲನ್ನು ಬಯಸುತ್ತದೆ. ಇಲ್ಲಿ ಇರುವ ಎಷ್ಟೋ ಅಪರಿಚಿತ ಮುಖಗಳಲ್ಲಿ , ನಮ್ಮ ಆಪ್ತರ , ಮನಸಿಗೆ ಹತ್ತಿರದವರ ಛಾಯೆ ಅರಸುತ್ತದೆ, ಕೆಲವೊಮ್ಮೆ ಅಂಥ ಚಿಕ್ಕ ಖುಷಿ ದಕ್ಕಿಯೂ ಬಿಡುತ್ತದೆ.


ಬೆಲ್ಫಾಸ್ಟ್ ಅನ್ನುವ ಈ ಪುಟ್ಟ, ಸುಂದರ ನಗರಿಯಲ್ಲಿ ನನಗೆ ನನ್ನೂರಿನ ಯಾರನ್ನೋ ನೆನಪಿಸುವ ಹಲವಾರು ಮುಖ ಮನಸುಗಳಿವೆ, ಅಂಥವರಲ್ಲಿ ಒಬ್ಬ ಈ ಯೊಹಾನ್ , 


ಯುರೋಪಿಯನ್ ದೇಶಗಳಲ್ಲಿ ರಸ್ತೆಗಳ ಅಕ್ಕ ಪಕ್ಕ ಹಾಡು ಹೇಳುತ್ತಾ , ಗಿಟಾರ್ ನುಡಿಸುತ್ತ ,ಕಲಾಪ್ರದರ್ಶನ ಮಾಡುತ್ತಾ  ಕೆಲವರು ನಿಂತಿರುತ್ತಾರೆ ಇಂಥವರನ್ನ ''ಬಸ್ಕರ್'' ಎಂದು ಕರೆಯುತ್ತಾರೆ, ಇವರು ಹಾಡುವುದನ್ನ ನಿಂತು ಕೇಳಿ ಚಪ್ಪಾಳೆ ತಟ್ಟಿ  ಹಣ ಕೊಡುವ ಮಂದಿಯೂ ಇದ್ದಾರೆ, 


 ಒಮ್ಮೆ ಇರುವ ಕಲಾವಿದ ಮತ್ತೊಮ್ಮೆ ಅದೇ ಜಾಗೆಯಲ್ಲಿ ನಿಮಗೆ ಕಾಣ ಸಿಗುವುದಿಲ್ಲ, ಹಣ ಬಯಸುತ್ತಾರಾದರೂ ಇವರು ಭಿಕ್ಷುಕರಲ್ಲ, ಭಿಕ್ಷೆ ಬೇಡುವುದು ಇಲ್ಲಿ ಅಪರಾಧ ಆದರೆ "ಬಸ್ಕಿಂಗ್" ಮಾನ್ಯ! ಹದಿಹರೆಯದ ಮಕ್ಕಳಿಂದ  ಹಿಡಿದು  ಇಳಿವಯಸ್ಸಿನವರೂ ಬಸ್ಕಿಂಗ್  ಮಾಡುವುದು ಇಲ್ಲಿ ಸರ್ವೇ ಸಾಮಾನ್ಯ , ಕ್ರಿಸ್ಮಸ್ , ಈಸ್ಟರ್ , ಬೇಸಿಗೆ ರಜಗಳಲ್ಲಿ ಇದು ಇನ್ನೂ ಜಾಸ್ತಿ. ಸಂಗೀತಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇದು ಒಳ್ಳೆ ವೇದಿಕೆಯನ್ನೂ ಕಲ್ಪಿಸಿಕೊಡುತ್ತದೆ.


 ಆಗ ನಾನು ಬೆಲ್ಫಾಸ್ಟ್ ಗೆ ಬಂದ  ಹೊಸತು ನನಗೆ ಈ ಬಸ್ಕಿಂಗ್ ಮಾಡುವವರನ್ನ ನೋಡುವುದೆಂದರೆ ಅತೀ ಖುಷಿಯ ಸಂಗತಿಯಾಗಿತ್ತು, ಆ ದಿನ ಮಗುವನ್ನು ಶಾಲೆಗೆ ಬಿಟ್ಟು ಅಂಗಡಿಗೆ ಏನೋ ತರಲು ಹೋದವಳಿಗೆ ಕಣ್ಣಿಗೆ ಬಿದ್ದವನೇ ಈ ಯೊಹಾನ್ , ಕೈಯ್ಯಲ್ಲಿ ಅದೆಂಥದೋ ವಿಚಿತ್ರ ಇನ್ಸ್ಟ್ರುಮೆಂಟ್ ಹಿಡಿದು ಕೊಂಡು ಒಂದೇ ಸಮ ಅದೇನೋ ಟ್ಯೂನ್ ನುಡಿಸುತ್ತಿದ್ದ , 


ನನ್ನ ಅಜ್ಜನ ವಯಸ್ಸಿರಬಹುದು , ಎದುರಿಗೊಂದು ಗೊಂಬೆ ಮತ್ತು ಚಿಕ್ಕ ಪ್ಲಾಸ್ಟಿಕ್ ಬುಟ್ಟಿ ಇಟ್ಟುಕೊಂಡು ಹೋಗು ಬರುವವರಿಗೆಲ್ಲ  ಚಂದದ ನಗು ಒಂದನ್ನ ಕೊಡುತ್ತಿದ್ದ , ಅವನ ಆ ಬುಟ್ಟಿಗೆ ನಾಣ್ಯ ಎಸೆದವರಿಗೆ hornviolin ನಾದ ಹೊಮ್ಮಿಸುತ್ತಲೇ ತಲೆಬಾಗಿ ಗೌರವ ಸಲ್ಲಿಸುತ್ತಿದ್ದ , ಅದ್ಯಾಕೋ ಯೋಹಾನ್ ನಗು ನನಗೆ ತುಂಬಾ ಹಿತವೆನಿಸಿತು , ತುಂಬು ನಗು, ನಿಷ್ಕಲ್ಮಶ ನಗು, 

ಆ ದಿನದಿಂದ ನಾನು ಸಿಟಿ ಸೆಂಟರ್  ಹೋದಾಗಲೆಲ್ಲ, ಯೊಹಾನ್ ಇದ್ದಲ್ಲಿ ಹೋಗಿ ಅವನ ನಗುಮುಖ ನೋಡಿ ಅವನು  ಆ "ವಾಯಲಿನಪಿಟ್" (ವಾಯಲೀನ್+ಟ್ರಂಪೆಟ್) ಲ್ಲಿ ನುಡಿಸುವ ರಷ್ಯನ್ ಹೇಂಗೇರಿಯನ್ ಜನಪದ ಸಂಗೀತದ ತುಣುಕು ಕೇಳಿ ಬಂದರೆ ಅದೇನೋ ಹಿತ , ಕೋಟ್ ಕಿಸೆಯಲಿ ಸಂಗ್ರಹವಾದ ಪೆನ್ನಿಗಳನ್ನು ಅವನ ಬುಟ್ಟಿಗೆ ಹಾಕಿ ಅವನಿಂದ ಆ ಮುಗುಳ್ನಗೆ ಪಡೆಯುವುದೆಂದರೆ ನನಗೆ ಅತೀ ಇಷ್ಟದ ಕೆಲಸವಾಗಿಬಿಟ್ಟಿದೆ. 


ಯೊಹಾನ್ ಕಳೆದ ೮ ವರ್ಷಗಳಿಂದ ಒಂದೇ ಜಾಗೆಯಲ್ಲಿ ನಿಂತು ಬಸ್ಕಿಂಗ್ ಮಾಡುತ್ತಿದ್ದಾನೆ , ತನ್ನನು ಅಂತಾರಾಷ್ಟ್ರೀಯ ಸಂಗೀತ ಕಲಾವಿದ ಎಂದು ಕರೆದುಕೊಳ್ಳುವ ಇವನು  ಅದಕ್ಕೆ ಹೇಳುವ ಕಥೆಯೂ ಸ್ವಾರಸ್ಯಕರ,  ನಾನು ಮೂಲತಃ ರುಮೇನಿಯಾದವನು ಇಲ್ಲಿಗೆ ಬರುವ ಮೊದಲು ಯುಗೋಸ್ಲಾವಾಕಿಯ , ಹಂಗೇರಿ , ರಷ್ಯಾ ಗಳಲ್ಲಿ ಹೀಗೆ ಕಳೆದ ೩೦ ವರುಷಗಳಿಂದ ನಾನೇ ಸೃಷ್ಟಿಸಿದ ಈ ವಾದ್ಯ ನುಡಿಸಿದ್ದೇನೆ , ಜನರನ್ನ ರಂಜಿಸಿದ್ದೇನೆ, ಅದಕ್ಕೆ ನಾನು ವಿಶ್ವಕಲಾವಿದ ಎಂದು ತನ್ನ ಆ ನಗುವಿನಿಂದ ಎದುರಿನವರ ಮುಖದಲ್ಲೂ ನಗು ಹೊಮ್ಮಿಸುತ್ತಾನೆ . 

  

  ಬೆಳಿಗ್ಗೆ ಒಂಬತ್ತಕ್ಕೆ ಬಂದು ತನ್ನ ಕೆಲಸ ಶುರು ಮಾಡಿ ಸಂಜೆ ಆರಕ್ಕೆ ಮನೆಗೆ ಮರಳುತ್ತಾನೆ , ಇತ್ತೀಚಿಗೆ ಜನ ಸಾಮಾನ್ಯರೇ ಅವನನ್ನ '' Belfast music icon'' ಎಂದು ಕರೆಯುವದನ್ನ ನೋಡಿದರೆ ಅವನು ಅದೆಷ್ಟು ಜನರ ಪ್ರೀತಿ ಪಡೆದಿದ್ದಾನೆ ಎಂಬುದನ್ನ ವಿವರಿಸಿ ಹೇಳಬೇಕಿಲ್ಲ. ಒಂದು ದಿನ ಅವ ಆ ಜಾಗೆಯಲ್ಲಿ ಇಲ್ಲ ಎಂದರೆ ಮನಸಿಗೆ ಕಸಿವಿಸಿ ಆಗುವುದು ಸುಳ್ಳಲ್ಲ.


ಅವನನ್ನು ನೋಡಿದಾಗಲೆಲ್ಲ ನನಗೆ ನೆನಪಾಗುವುದು ಧಾರವಾಡ ದ ಗಜಾನನ ಮಹಾಲೆ (ಮಹಾಲೆ ಮಾಮ್) ಅವರ ನಗುವು ಹೀಗೆ ಇತ್ತು , ನನ್ನಂಥ ಅದೆಷ್ಟು ಚಿಕ್ಕ ಪುಟ್ಟ ಕಲಾವಿದರಿಗೆ ಸಹಾಯ ಮಾಡಿಲ್ಲ ಅವರು,  ಹಾರ್ಮೋನಿಯಂ ಸಾಥಿಗೆ ಬಂದರೂ ಒಮ್ಮೆಯೂ ಸಂಭಾವನೆ ಸ್ವೀಕರಿಸಿದವರಲ್ಲ , ''ಮುಂದ ನೀ ದೊಡ್ಡ ಹೆಸರು ಮಾಡ್ತಿಯಲ್ಲ ಆವಾಗ ಕೊಡು ಈಗ ಬ್ಯಾಡ '' ಅಂತ ಹೇಳಿ ತಲೆ ನೇವರಿಸಿ ಆಶೀರ್ವಾದ ಮಾಡುತ್ತಿದ್ದರು. ಗಾಯನದಲ್ಲಿ ತಪ್ಪುಗಳಾದರೆ ಕಾರ್ಯಕ್ರಮದ ನಂತರ ಬಂದು ಮೆತ್ತಗಿನ ಧ್ವನಿಯಲ್ಲಿ ಅದನ್ನು ತಿದ್ದಿ ಹೇಳಿಕೊಡುತ್ತಿದ್ದರು. ಎದುರು ಬದುರು ಸಿಕ್ಕಾಗ "ಆರಾಮ್ ಅದೀರಲ್ಲ" ಎಂದು ಮೆತ್ತಗೆ ಕೇಳಿ.. "ಆರಂ ಇರ್ರಿ" ಅನ್ನುವಾಗಿನ ಆ ಮಂದಸ್ಮಿತ ಇನ್ನೂ ಕಣ್ಣ ಮುಂದೇ ಇದೆ. 


ಯೊಹಾನ್ ಬೆಲ್ಫಾಸ್ಟ್ ಎಂದು ಹುಡುಕಿದರೆ ಅವನ ಹೆಸರಿನಲ್ಲಿ ಗೂಗಲ್ ಪೇಜ್ ತೆರೆದುಕೊಳ್ಳುತ್ತದೆ ,  ಮಹಾಲೆ ಮಾಮ ನನ್ನ ಮನಸಿನ ಪುಟಗಳಲ್ಲಿ....

ಬಂಗಾರದೆಲೆಯ ಸಿಂಗಾರ ನಮ್ಮ ಭೂಮಿತಾಯಿಗೆ

 ಶರದೃತುವಿನಾಕಾಶ ಬೆಳದಿಂಗಳಾ ಲಾಸ್ಯ 

ಮಂದಾಮಿಲನ ಹಾಸ ನೋಡೇ ಸಖಿ  ನೀ….


ಈ ಹಾಡನ್ನು ನಾನೇ ಅದೆಷ್ಟು ಬಾರಿ ಹಾಡಿಲ್ಲ ಆದರೆ ಶರದೃತು ಎಂದರೆ, ಚಳಿಗಾಲದ ಆರಂಭ ,ನವರಾತ್ರಿ , ಮೆತ್ತಗೆ ಒಡೆಯಲು  ಶುರುವಾಗುವ ಚರ್ಮ ಹಿಮ್ಮಡಿ , ಹಾಸಿಗೆ ಹೊದಿಕೆಗಳಿಗೆ ವ್ಯಾಸಲೀನ್, ಬೊರೋಲೀನ್ ಗಳ ಕಮಟು, ಇಷ್ಟು ಬಿಟ್ಟು ಬೇರಾವ ಭಾವ ನನ್ನ ಮನದಲ್ಲಿ ಸುಳಿಯುತ್ತಿರಲಿಲ್ಲ. 


ನಾನು ನಾರ್ದರ್ನ್ ಐರ್ಲೆಂಡ ಗೆ ಬಂದಿದ್ದು ಅಕ್ಟೋಬರ್ ತಿಂಗಳ ಕೊನೆಯದಿನ,  ಮೊದಲ ಮುಂಜಾವು ಕಿಟಕಿ ಪರದೆ ಸರಿಸಿ ನೋಡಿದರೆ ಎಲ್ಲ ಮರಗಳು ಅರಿಶಿನ ಕುಂಕುಮ ಹಿಡಿದು, "ಸ್ವಾಗತ ನಿನಗೆ ನಮ್ಮೂರಿಗೆ " ಎನ್ನುವಂತೆ ನಿಂತಿದ್ದವು. ಆ ಚಂದ ಇನ್ನು ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.


 ನಮ್ಮ ಶರದೃತು ಇಲ್ಲಿನ ಆಟಮ್ ಕಾಲ . ಚಿಕ್ಕ ಚೈತ್ರದಂತೆ ಭಾಸವಾಗುತ್ತದೆ. 

ಜೂನ್ ತಿಂಗಳಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಇರುವ ಬೇಸಿಗೆಯ ಬಿಸಿಯನ್ನೆಲ್ಲ ಈ ಎಲೆಗಳೇ ಹೀರಿಕೊಂಡವೇನೋ ಆ ಸೆಖೆ ತಾಳಲಾಗದೆ ಮರದಿಂದ ಹಣ್ಣು ಹಣ್ಣಾಗಿ ಬೀಳುತ್ತಿವೆ ಏನೋ ಎಂಬಂತೆ ಸಿಗಮೋರ್, ಮೇಪಲ್, ಮರದ ಎಲೆಗಳು ಬಣ್ಣ ಬದಲಿಸಿಕೊಂಡು ಒಂದೊಂದಾಗಿ ಉದುರಿ ದಾರಿ ಗುಂಟ ಬಣ್ಣದ ಗುಡಾರ ಹಾಸುತ್ತವೆ.


ನಾ ಇರುವ ಪ್ರದೇಶದಲ್ಲಿ ಮರಗಳ ಎಲೆಗಳು ಹಳದಿ ನವಿರುಗೆಂಪು ಬಣ್ಣಕ್ಕೆ ತಿರುಗಿ, ಉದುರುತ್ತವೆ, ಆದರೆ ಯುಕೆ ಯ ಇನ್ನು ಕೆಲವು ಭಾಗಗಳಲ್ಲಿ ಇವೆ ಜಾತಿಯ ಮರಗಳ ಎಲೆಗಳು ರಕ್ತಗೆಂಪು ಬಣ್ಣ ಹೊದ್ದು ಎಲೆ ಉದುರಿಸುತ್ತಾ ಬರಿದಾಗಿ ಚಳಿಗೆ ನಲುಗಲು  ಸಿದ್ಧವಾಗುತ್ತವೆ.. 


ಫಾಲ್ ಸೀಸನ್ ಎಂದು ಕರೆಯಲ್ಪಡುವ ಈ ಕಾಲ ಅದೆಷ್ಟೋ ಕವಿಗಳಿಗೆ ಸ್ಪೂರ್ತಿ ಕೊಟ್ಟು ತನ್ನ ಮೇಲೆ ಪದ್ಯ ಬರೆಯಲು ಪ್ರೇರೇಪಿಸಿದೆ , ಎಷ್ಟೇ ಒಳ್ಳೆಯ ಛಾಯಾಗ್ರಾಹಕರಾದರೂ, ಕಣ್ಣು ಗ್ರಹಿಸುವಷ್ಟು ಚಂದದ ಫಾಲ್ /ಆಟಮ್ ಚಿತ್ರಗಳನ್ನು ಕ್ಲಿಕ್ಕಿಸಲಾರರು ,ಆ ನೋಟವೇ ಅಂಥದ್ದು .



ಒಮ್ಮೊಮ್ಮೆ ಊರಿನಲ್ಲಿ ಬೇಸಿಗೆಗೆ ಅರಳುವ ಕಕ್ಕೆ ಹೂ, ಒಮ್ಮೊಮ್ಮೆ ಸೇವಂತಿಗೆ , ಕೆಲವೊಮ್ಮೆ ಚಿನ್ನದ ಎಲೆಗಳನ್ನೇ ಮರಕ್ಕೆ ಕಟ್ಟಿದ್ದಾರೇನೋ ಅನ್ನುವ ಭಾವ ಈ ಹಳದಿ ಮರಗಳನ್ನ ನೋಡಿದರೆ ಸ್ಪುರಿಸುತ್ತದೆ. 







ಅಂತರಂಗದ ಅಳಲು













ಹಾಗೆ ದಿನಕ್ಕೆಷ್ಟು ಬಾರಿ scroll 
ಮಾಡುತ್ತೇನೋ ಗೊತ್ತಿಲ್ಲ, 
ನೂರಾರು ಅಂಕಿಗಳು
ಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು.

ಅಲ್ಲಿ ಒಂದಾದರೂ
ಮನಸಿನ ತುಮುಲ ತಿಳಿಮಾಡುವ, 
ನೋವಾಗಿದೆ ಮನಸಿಗೆ ಎಂದರೆ , 
ನಾನಿಲ್ಲವೇ ನಿನಗೆ ಎಂದು ಅಕ್ಕರೆ ಒಸರುವ
ಆರ್ದ್ರ ದನಿ ಸಿಗುವುದಿಲ್ಲ.ಆದರೂ ಹೇಳಿಕೊಳ್ಳುತ್ತೇವೆ
ಅವರಿವರ ಮುಂದೆ.

ಎಲ್ಲರೂ ಕೇಳುತ್ತಾರೆ 
ಕೇಳುವವರಿಲ್ಲ ಎಂದಲ್ಲ
ಮತ್ತದೇ ಕೇಳುತ್ತಾರೆ, 
ಅವರಿಗೆ ಬೇಕನಿಸಿದ್ದು
ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ, 

ಸಾಧಾರಣ ಎಷ್ಟಿರಬಹುದು ಮನಸಿನ ಸ್ಟೋರೇಜ್ 
ಎಡಿಟ್ , ಡಿಲೀಟ್,ಆಡ್ ನ್ಯೂ ವರ್ಡ್
ಎಲ್ಲವೂ ಮನದಲ್ಲೇ, 
ಸಂದರ್ಭಕ್ಕೆ ತಕ್ಕಂತೆ, 
ಅನುಕೂಲ ಸಿಂಧು, ಸೀಮಾತೀತ ಮನಸು.

ಮನಸಿನ ಅದ್ಯಾವುದೋ
ಅಲೆಗಳ ಹೊಡೆತಕ್ಕೆ ಸಿಕ್ಕು
ಅರೆಜೀವ ಮಾತ(ನೊಂದು) 
ಹೇಳಿರುತ್ತೇವೆ, ಕೇಳುವವರಿದ್ದಾರೆಂದು.
ಮಾತಾಡಿ ಹಗುರಾಗಿ ಮರೆತೇ ಬಿಡುತ್ತೇವೆ.

ಅದಾರದೋ ಮನದ ಕಿನಾರೆಯಲ್ಲಿ
ಅಂದೆಂದೋ ಸತ್ತುಬಿದ್ದ ಆ ಮೀನಿನಂಥ 
ಚಂಚಲ, ಈಗ ನಿಶ್ಚಲ ಮಾತನ್ನ 
ಒಣಗಿಸಿ ಉಪ್ಪು ಸವರಿ ಅದೆಲ್ಲೋ ಹೊಗೆ ಸಂದಿಯಲ್ಲಿ ತೂಗು ಹಾಕುತ್ತಾರೆ.

ಆ ದಿನ ಅದ್ಯಾರೋ ಬರುತ್ತಾರೆ
ಮಾತಿನ ಭೋಜನ ಶುರುವಾಗುತ್ತದೆ
ಹೊಸ ಹೊಸ ಮಾತು, ಯಾರ ಅಂಗಳದ ಹಪ್ಪಳವೋ
ಯಾರ ಮಹಡಿಯಲ್ಲಿ ಒಣಗಿದ ಸಂಡಿಗೆಯೋ.
ಚಪ್ಪರಿಸುತ್ತಾರೆ. 

ಹಾ ಈಗ ಇವರ ಸರದಿ, 
ನೋಡಿ!ನೋಡಿ ಇಲ್ಲಿ
ನನ್ನಲ್ಲಿದೆ ಆ ಕೊಳೆತ ಮೀನು, ಅದೆಷ್ಟು ಜತನದಿಂದ ಕಾದಿರಿಸಿದ್ದೆ ಗೊತ್ತಾ? 
Just for you people!!

ವಾಸನೆ ಬರುತ್ತಿದೆ.
ಮೀನು ತಿನ್ನುವವರು ಆಹಾ ಎಂದರೆ, 
ತಿನ್ನದವರು ಮೂಗು ಮುಚ್ಚಿಕೊಂಡು
ಕಿವಿ, ಕಣ್ಣು, ಅರಳಿಸಿಕೊಂಡು
ಕೂತಿದ್ದಾರೆ. 
ಕೊಳೆತು ,ಒಣಗಿ, ಮಾತೆಂಬ ಆ ಮೀನು 
ಊರೆಲ್ಲ ಗುಲ್ಲೆಬ್ಬಿಸಿ 
ಇಲ್ಲದ ಬಾಲ ಸೇರಿಸಿಕೊಂಡು
ಬಣ್ಣಗಳನ್ನು ಹಚ್ಚಿಕೊಂಡು
ಮತ್ತೆ ನನ್ನ ಅಕ್ಕ ಪಕ್ಕ ಹೊಸ ಜೀವ ಪಡೆದು 
ಹರಿದಾಡುತ್ತಿದೆ

ನಂಬಬೇಕೆ?
ಮತ್ತೆ ಈ ಅಳಲ ಹೇಳಲು ಹೊಸ 
ಅಂಕಿಗಳನ್ನು 
ಹುಡುಕಬೇಕೆ? 

ಅಮಿತಾ ರವಿಕಿರಣ್

Thursday, September 24, 2020

ಅಡುಗೆ ಎಂಬ ದಿವ್ಯ ಧ್ಯಾನ


ಅಲ್ಲೆಲ್ಲೋ ದೂರದಲ್ಲಿ ಕೇಳುವ ಹಕ್ಕಿ ಚಿಲಿಪಿಲಿ ಕಿಟಕಿಯಿಂದ ಕದ್ದುಮುಚ್ಚಿ ಇಣುಕುವ ಸೂರ್ಯ ರಶ್ಮಿ,  ಆ ಸಮಯದಲ್ಲೇ ಆರಂಭವಾಗುತ್ತದೆ ಅವಳ ಅಡುಗೆಮನೆ ಎಂಬ ಆರ್ಕೆಸ್ಟ್ರಾ , ಕುದಿಯುವ ನೀರಿನಲ್ಲಿ ಬೀಳುವ ಆ ಎರಡು ಚಮಚ ಚಾ ಹುಡಿ, ಅದರ ಹಿಂದೆ ಹಿತ್ತಲ ಮೂಲೆಯಿಂದ ತಂದ ಮಜ್ಜಿಗೆ ಹುಲ್ಲು, ಶುಂಠಿ ಏಲಕ್ಕಿಯನ್ನು ಕುಟ್ಟಾಣಿಯಲ್ಲಿ ಜಜ್ಜಿದ ಮೆತ್ತನೆಯ ಸದ್ದು, ಇನ್ನೇನು ಚಹಾ ಘಮಕ್ಕೆ ಮನಸು ಹಾತೊರೆದು ಕಾಯುತ್ತಿರುವಾಗಲೇ ಅತ್ತ ಇಡ್ಲಿ ತಟ್ಟೆಗೆ ಹಿಟ್ಟು ತುಂಬಿ ಬೇಯಲು ಬಿಡಬೇಕು. ಮತ್ತೆ ತುರಿಮಣೆಯಮೇಲೆ ಬಿಳಿಯೊಡಲ ತೆಂಗಿನ ತಿರುಳು ಹಾಗೆ ನಾದ ಹೊಮ್ಮಿಸುತ್ತ ಬೀಳುತ್ತಿರುವಾಗಲೇ ಮನಸ್ಸು ಮುಂದಿನ ಕೆಲಸಗಳಬಗ್ಗೆ ಒಂದು ನಕ್ಷೆ ತಯಾರಿಸಿಬಿಡುತ್ತದೆ ಅಟ್ಟೆ ಯಿಂದ ಬಿಸಿಬಿಸಿ ಉಗಿ ಅಕ್ಕಿ ಉದ್ದಿನ ಘಮಲಿನೊಂದಿಗೆ ಮನೆತುಂಬ ಹೊಮ್ಮುವಾಗಲೇ , ಆ ಪುಟ್ಟ ಕಬ್ಬಿಣದ ಕಾವಲಿಯಲ್ಲಿ ಬಿಸಿಯಾದ ತೆಂಗಿನ ಎಣ್ಣೆಯಲ್ಲಿ  ಬಿದ್ದ ಪುಟ್ಟ ಸಾಸಿವೆಕಾಳುಗಳು ಚಟಪಟ ಸದ್ದುಮಾಡಿ ಇಂಗು, ಕರೀಬೇವು ಒಣಮೆಣಸಿನೊಂದಿಗೆ ರುಬ್ಬಿದ ಚಟ್ನಿಯನ್ನು ಚುಂಯ್ ಎನ್ನುತ್ತಾ ಅಪ್ಪಿಕೊಳ್ಳುವಲ್ಲಿಗೆ ಮುಂಜಾವು ಅಡುಗೆಮನೆಯಲ್ಲಿ ತೆರೆದುಕೊಳ್ಳುತ್ತದೆ. 


 ದಿನನಿತ್ಯದ ಅಡುಗೆ ಎಂಬ ದಿನಚರಿಯನ್ನು ಮುಗಿಯದ ಕೆಲಸ, ವಿರಾಮ ಕೊಡದ ದುಡಿಮೆ ಎಂದು ಗೊಣುಗುವವರು ಇದ್ದಾರೆ , ಆದರೆ ಸ್ವಲ್ಪ ಮಟ್ಟಿಗಿನ ಪ್ರಯತ್ನ ಮತ್ತು ತಯಾರಿ, ನಿಮ್ಮ ಈ ನಿಲುಮೆಯನ್ನು ಖಂಡಿತ ಬದಲಾಯಿಸುತ್ತದೆ ಎಂಬುದು ಅಡುಗೆಮನೆಯ ಯಶಸ್ವೀ ಒಡತಿಯರ ಅಂಬೋಣ. 

ಮಗುವಿಗೆ ಸಪ್ಪೆ ಅಡುಗೆ , ಗಂಡನಿಗೆ ಖಾರ ಜಾಸ್ತಿ , ತನಗೆ ಅವೆರಡರ ಮಧ್ಯದ ಒಂದು ರುಚಿ, ಒಂದೇ ಅಡುಗೆಯನ್ನು ಈ ಮೂರು ಸ್ಥರದಲ್ಲಿ ಬದಲಾಯಿಸುವ ಕಲೆ ಆಕೆಗೆ ಕಲಿಸಿದವರ್ಯಾರು? ಮನೆಯಲ್ಲಿ ಹತ್ತು ಜನರಿರಲಿ ಅಥವಾ ಇಬ್ಬರೇ ಇರಲಿ ಅವರವರ ಆದ್ಯತೆಗೆ ತಕ್ಕಂತೆ ಅಡಿಗಡಿಗೆ ಅಡುಗೆ ಮಾಡಿ ಮುಂದಿಟ್ಟು ಅದನ್ನು ತಿಂದಾಗ ಎದುರಿನವರ ಕಣ್ಣಲ್ಲಿ ಮೂಡುವ ಆ ಬೆಳಕನ್ನೇ , ಮೊಗದಲ್ಲಿ ಅರಳುವ ನಗುವನ್ನೇ ತನ್ನ ಬಹುಮಾನ ಎಂದು ಬೀಗುವ ಆಕೆ ಅಲ್ಪತೃಪ್ತೆ ಎಂದೇ ಹೆಸರುವಾಸಿ!! 


ಒಂದು ಅಡುಗೆ ಮಾಡೋದಕ್ಕೆಷ್ಟು ಮಾತಾಡ್ತಾಳೆ ಅನ್ನೋ ಉಡಾಫೆ ಮಾತಾಡುವ ಮಂದಿಯನ್ನು ನಾವು ಆಗಾಗ್ಗೆ ಕಾಣುತ್ತೇವೆ , ಅಡುಗೆ ಮಾಡುವುದೆಂದರೆ ರಂಗೋಲಿಗೆ ಬಣ್ಣ ಹೊಂದಿಸಿದಂತೆ,  ಕೆಲವೊಮ್ಮೆ ಬಣ್ಣ ಸಿಗದಿದ್ದರೂ ಬಿಳಿ ಎಳೆಗಳೊಂದಿಗೆ ಚಂದದ ಚಿತ್ತಾರ ಬಿಡಿಸಿದಂತೆ , ದಿನ ನಿತ್ಯದ ಅಡುಗೆಗೆ ಎಣ್ಣೆ ಪಸೆ ಜಾಸ್ತಿ ಇರಬಾರದು, ಮಸಾಲೆ ನುಣ್ಣಗಾಗಬೇಕು , ಅನ್ನ ಉದುರಾಗಬೇಕು, ಚಪಾತಿ ಮಿದುವಾಗಬೇಕು ,    ಯಾವ ತರಕಾರಿಯನ್ನು ಹೇಗೆ ಕತ್ತರಿಸಬೇಕು ಹುಳಿಗೆ ಹೋಳು ಪಲ್ಯಕ್ಕೆ ,ಕೊಚ್ಚಲು , ಆಯಾ ಪದಾರ್ಥಕ್ಕೆ ಹಾಗೆ ಅಷ್ಹ್ತಷ್ಟೆ ಖಾರ ಉಪ್ಪು ಸಿಹಿ ಸೇರಿಸಿ ಪ್ರತಿಬಾರಿಯೂ ಅದನ್ನು ಒಂದೇರೀತಿ ಇರುವಂತೆ ನೋಡಿಕೊಳ್ಳುವ ಆಕೆಯ ಏಕಾಗ್ರತೆಯ ವೈಖರಿ ಧ್ಯಾನಸ್ಥ ಯೋಗಿನಿಯಂತೆ. 


ಬರೀ ಮೂರೊತ್ತಿನ ಊಟಕ್ಕಷ್ಟೇ ಅಲ್ಲ , ಮಧ್ಯ ಮಧ್ಯ ಮೆಲ್ಲಲು ಬೇಕಾಗುವ ಚಕ್ಕುಲಿ, ಚುಡಾ, ಚುರುಮುರಿ ನಿಪ್ಪಟ್ಟು ,ಕೋಡುಬಳೆ ಮಾಡಿಡುವ ಈ ಅಡುಗೆ ಮನೆ ಅಧ್ಯಕ್ಷಿಣಿಗೆ ದಣಿವೆ ಇಲ್ಲ. ಹಬ್ಬ ಹರಿದಿನದ ಅಡುಗೆಗಳು ಅಷ್ಟಿಷ್ಟಲ್ಲ , ಸಂಕ್ರಾಂತಿ ಗೆ ಎಳ್ಳು , ಯುಗಾದಿಗೆ ಹಣ್ಣು , ರಾಮನವಮಿಗೆ ಕೋಸಂಬರಿ , ಕೃಷ್ಣನಿಗೆ ಉಂಡೆ , ಎಲ್ಲವನ್ನು ತಪ್ಪದೆ ಒಪ್ಪಿಸಿ ಬಿಡುತ್ತಾಳಾಕೆ,  ಅಷ್ಟಕ್ಕೂ ಈ ಅಡುಗೆ ಆಕೆಗೆ ಕೊಡಮಾಡುವ ಖುಷಿ ಎಂಥದ್ದು? ಒಮ್ಮೆ ಅಡುಗೆ ಮನೆಯ ಗುಂಗು ಹತ್ತಿತೆಂದರೆ ಅದರಿಂದ ಬಿಡಿಸಿಕೊಳ್ಳುವ ಮಾತೆ ಇಲ್ಲ , 



 

ಕೆಲವರಿಗೆ ಅಡುಗೆ ಮನೆಯೆಂದರೆ ಶಿಕ್ಷೆ , ಹಲವರಿಗೆ ಎಲ್ಲವನ್ನು ಮರೆಸಿ ಹೊಸ ಲೋಕವನ್ನು ತೆರೆದಿಡುವ ಮಾಯಾಲೋಕ , ಅಡುಗೆಮನೆ ಎಂಬುದು ಜಗತ್ತಿನ ಅತಿ ಪುರಾತನ ವಿಶ್ವವಿದ್ಯಾಲಯ , ಅಲ್ಲಿ ಪ್ರತಿಯೊಬ್ಬರೂ ವಿದ್ಯಾರ್ಥಿಯು ಹೌದು ವಿದ್ವಾಂಸರೂ ಹೌದು. ಅಡುಗೆ ಮನೆ ಎಂಬುದು ಎಲ್ಲರ ಪಾಲಿಗೂ ದಕ್ಕುವ ಸುಸಜ್ಜಿತ ಪ್ರಯೋಗಾಲಯ ,ಅದನ್ನು ಹೇಗೆ ನಮ್ಮ ವಿಕಾಸನಕ್ಕಾಗಿ ನಾವು ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಕ್ರಿಯಾಶೀಲತೆಯ ಮೇಲೆ ನಿರ್ದಾರವಾಗುತ್ತದೆ .  ನಿಮ್ಮ ಅಡುಗೆ ಮನೆ ಯಾ ಅಳತೆ ಎಷ್ಟಾದರೂ ಇರಲಿ ಆದರೆ ನೀವಲ್ಲಿ ಕಳೆದಷ್ಟು ಹೊತ್ತು ನಿಮ್ಮನು ನೀವು ಕಂಡುಕೊಳ್ಳುತ್ತಾ ಹೋಗುತ್ತೀರಿ. 


ಆರೋಗ್ಯ ಮತ್ತು ಅಡುಗೆಮನೆಗೆ ನೇರಾನೇರ ಸಂಬಂಧ ಹಿರಿಯರು ಮಾಡಿಟ್ಟ ಮಸಾಲೆ ಮರಿಗೆ ನಮ್ಮ ಫಸ್ಟ್ ಏಡ್ ಕಿಟ್ ಎಂದರೆ ತಪ್ಪಲ್ಲ, ಅಜೀರ್ಣಕ್ಕೆ ಜೀರಿಗೆ , ಏಲಕ್ಕಿ. ಹಲ್ಲು ನೋವಿಗೆ ಲವಂಗ , ಶೀತ ಜ್ವರಕ್ಕೆ ಶುಂಠಿ ದಾಲಚೀನಿ ಕಾಳುಮೆಣಸ ಗಳು  ಅಮೃತಸಮ ನೈಸರ್ಗಿಕ ಪರಿಹಾರೋಪಾಯಗಳು. ಈಗ ಅಡುಗೆಮನೆ ಫಾರ್ಮಸಿಯಾಗಿಯೂ ಬದಲಾಯಿತು ಅಲ್ಲವೇ? ಅಡುಗೆ ಮಾಡುವ ಮನಸ್ಸಿದ್ದರೆ ಅಡುಗೆ ಮನೆಯೇ ನಿಮಗೆ ದಾರಿ ತೋರುತ್ತದೆ ಎಂಬ ನುಡಿಯೊಂದಿದೆ , ಅಂತೆಯೇ ಅಡುಗೆಮನೆಯನ್ನು ಸಂಭಾಳಿಸಲು ಬಂದರೆ ಸಾಕು ಬದುಕು ತಂತಾನೇ  ಸುಧಾರಿಸುತ್ತದೆ ಎಂಬ ಗಾದೆಮಾತು ನಿತ್ಯ ಸತ್ಯ . 



 ದಿನನಿತ್ಯದ ಈ ಅಡುಗೆಮಾಡುವ ದಿನಚರಿ  ಖಿನ್ನತೆ ಯಿಂದ ಹೊರಬರಲು ಥೆರಪಿಯಂತೆ ಕೆಲಸ ಮಾಡಿ ನಮ್ಮ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು  ಸಹಾಯಮಾಡುತ್ತದೆ . ನೀವು ಮಾಡುವ ಅಡುಗೆಯನ್ನು ಒಪ್ಪವಾಗಿ ಜೋಡಿಸಿ ಒಂದು ಚಿತ್ರ ತೆಗೆದಿಟ್ಟುಕೊಂಡು ಸಂಗ್ರಹಿಸಿ , ಅದನ್ನು ಮಾಡುವ ಮೊದಲು ಮಾಡಿದ ನಂತರ ನಿಮ್ಮ ಆಲೋಚನೆಗಳನ್ನು ಬರೆದಿಡಿ. ಸಾಂಪ್ರದಾಯಿಕ ಅಡುಗೆಗಳು ಅವನ್ನು ನೀವು ಕಲಿತ ರೀತಿ , ಅವುಗಳ ಹಿಂದಿನ ಕಥೆಯನ್ನು ಬಂಧು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಖುಷಿಯನ್ನು ಇನ್ನು ಹೆಚ್ಚಿಸುತ್ತದೆ. ಎಷ್ಟೇ ಕ್ಲಿಷ್ಟ ಪಾಕ ವಿಧಾನಗಳನ್ನು ತಯಾರಿಸಿದರೂ ಅದರಲಿ ಒಂಚೂರು ಪ್ರೀತಿ ಹಾಕಲು ಮರೆಯಬೇಡಿ. ನೀವು ಇಂದು ಮಾಡುವ ಅಡುಗೆ , ಉಣಿಸುವ ಊಟ , ಮುಂದೆಂದೋ ಯಾರದೋ ಸವಿ ನೆನಪಾಗುವುದರಲ್ಲಿ ಸಂಶಯವಿಲ್ಲ. 


ನೀವು ದಿನವಿಡೀ ಅದೆಷ್ಟೇ ವ್ಯಸ್ತ ರಾಗಿದ್ದರೂ ಸಂಜೆ ಒಂದಷ್ಟು ಹೊತ್ತು ನಿಮ್ಮ ಅಡುಗೆ ಮನೆಯಲ್ಲಿ ಕಳೆಯಿರಿ , ಮಸಾಲೆ , ತರಕಾರಿ, ಧಾನ್ಯಗಳೊಂದಿಗೆ ಸ್ನೇಹ ಮಾಡಿಕೊಳ್ಳಿ , ಈ ಸ್ನೇಹ ಎಂದಿಗೂ ಬಿಡದ ನಂಟಾಗುತ್ತದೆ. ಇಲ್ಲಿ ಮಾತು ಹೆಚ್ಚು ,ಕಡಿಮೆಯಾಗಿ ಅಪಾರ್ಥವಾಗುವ ಸಾಧ್ಯತೆಗಳೇ ಇಲ್ಲ ಏನಿದ್ದರೂ ಮೌನ ಮತ್ತು ನಿಮ್ಮ ಮನೋಲ್ಲಾಸ ಮಾತ್ರ!!

Sunday, July 19, 2020

ವಿಕ್ಷಿಪ್ತ ರಾಗ ರಂಜನಿ

ಹೇಗಿರುತ್ತಿ ಹೀಗೆ ?

ಹೇ ಏಕತಾರಿ….

ಒಂಟಿ ಒಂಟಿ,  

ಕಂಟಿಗೆ ಕೊರಳ ಕಟ್ಟಿ ಬಿಗಿದು

ಖಾಲಿ  ಒಣ ಬಿರಡೆಯೊಳು ಬದುಕ ಸವೆಸಿ

ಯಾವಗಲೂ ಅದೇ ನಾದ ಸ್ವಲ್ಪ ಹೆಚ್ಚು ಚೂರು ಕಡಿಮೆ...

ಅಲ್ಪ ತೃಪ್ತೆ ನೀ 

ಹೇ ಏಕತಾರಿ…


ನೊಡಲ್ಲಿ

ಬಗೆ ಬಗೆಯ ವಿಧ ವಿಧದ

ನೂರು ನೂರು ತಂತಿ ವಾದ್ಯಗಳು‌.

ಯಾರೂ ಒಂಟಿ ಅಲ್ಲಾ ನಿನ್ನಂತೆ…


ಸಪ್ತ ಸ್ವರ,  ಗಮಕ , ಖಟ್ಕಾ ಮುರ್ಕಿ ಗಳ ಗುಂಗಲ್ಲಿ….

ದನಿಗೆ ದನಿಯಂತೆ ಬೆರೆಯಲು ತವಕಿಸುವ 

ವೀಣೇ  ಸಂತೂರ್ ಸಿತಾರು…


ನಾಲ್ಕೇ ತಂತಿ

ಅದಾಗ್ಯೂ

ಜೀರ್ ಹಿಡಿದಾಗ ಜುಂಯ್ಯೆಂದು ಸಾತ್ ಕೊಡುವ ತಂಬೂರಿಯ ಖರಜ್ ಷಡಜಗಳು..

ಮನಸ್ಸಿದ್ದರೆ, ಮನಸೋತರೆ ಒಂದು ತಂತಿ ಮೀಟಿದರೆ ಇನ್ನೊಂದು ನುಡಿಯುತ್ತದೆ.


ಗಿಟಾರು!!!! ಎಲ್ಲದ್ದಕ್ಕೂ ,


ಖುಶಿಗೂ ದುಖಃಕ್ಕೂ, 

ನೊಡು ಆ ಹಾರ್ಪ್ ಎನ್ನುವ ಬಿನ್ನಾಣಗಿತ್ತಿ

ಬೂಜುಕಿ ಯ ಬಾಜು ನನ್ನಮುಂದ್ಯಾರು ಎನ್ನುತ್ತ ದನಿ ಹೊಮ್ಮಿಸಿ ಅಲೆ ಅಲೆ ನಾದವಾಗಿದ್ದು…


ಇನ್ನೂ ಇವೆ ಅದೆಷ್ಟೋ ಮೊಹನ, ರುದ್ರ ವೀಣೆಗಳು ಸಣ್ಣನೆ ತಂತಿ ಮನಮೀಟಿ ಮಿಡಿಯುವ ತರಂಗಾಂತರಗಳ ಯುಗಾಂತರಕ್ಕೂ ಹರಡುವ ನಾದರೂಪಿಗಳು..


ನೀನ್ಯಾಕೆ ಅಷ್ಟು ಒಂಟಿ ಒಂಟಿ 

ಓ ಏಕತಾರಿ

ತಳಕು ಬಳುಕಿನ ಈ ಭ್ರಮಾಲೋಕದ

ನಡುವೆಯೆ ಅವ್ಯಹಾತ್  ಮಿಡಿಯುವ

ವಿಕ್ಷಿಪ್ತ ರಾಗರಂಜಿನಿ…

Wednesday, June 24, 2020

ಟೊಲಿಮೊರ ಪಾರ್ಕ್ ಉತ್ತರ ಐರ್ಲ್ಯಾಂಡ್ ನ ದೇವಿಮನೆ



ರಜೆಯಲ್ಲಿ ದೂರದ ಅಜ್ಜಿ ಮನೆಗೆ ಹೋಗುವಾಗ ಸಿಗುತ್ತಿದ್ದ ದೇವಿಮನೆ ಘಟ್ಟ...ಅದು ನಾ ನೋಡಿದ ಮೊದಲ ದಟ್ಟ ಅರಣ್ಯ...ಕತೆಯಲ್ಲಿ ಕೇಳುತ್ತಿದ್ದ ಕಾಡು ಎಂಬ ಪದದ ಕಲ್ಪನೆಗೆ ದೃಶ್ಯ ರೂಪ ಕೊಟ್ಟಿದ್ದೆ ದೇವಿಮನೆ ಘಟ್ಟ..ಜಿರ್ರ್ ಜಿರ್ರ್ ಎಂಬ ಸಂಗೀತ,ಕಾದುಹೂಗಳ ವಿಲಕ್ಷಣ ಘಮ..ಮೆತ್ತಗೆ ಹರಿಯುವ ಬೆಣ್ಣೆ ಹೊಳೆ ..ಮತ್ತು ನೆಲ ಕಾಣಿಸುವ ತಿಳಿನೀರು...ಎಲ್ಲಲ್ಲೂ ನೆರಳು ಅದೆಲ್ಲೋ ಒಂದಷ್ಟು ಬಿಸಿಲು...ಇಲ್ಲಿ ಯಾವ ದೇವಿ ಮನೇ ಮಾಡಿ ನಿಂತರು ಆಶ್ಚರ್ಯ ಪಡಬೇಕಿಲ್ಲ ಅಷ್ಟು ಹಸಿರು ಹಸಿರು ...ಇಂಥ ಕದನ್ನೊಮ್ಮೆ ಅಲೆದು ಬರಬೇಕು ಅದರ ಸನ್ನಿಧಿಯಲ್ಲಿ ಸಮಧಾನಿಸಬೇಕು ಎಂಬುದು ಬುಧಿ ಬಳಿಯುವ ಮುಂಚೆಯೇ ಬಲಿತ ಆಸೆ...ಭಾರತದಲ್ಲಿದ್ದಷ್ಟು ದಿನವೂಏನಾದರೊಂದು ಕಾರಣದಿಂದ ಅಂಥಹ ಅವಕಾಶ ಕೈ ತಪ್ಪಿ ಹೋಗುತ್ತಿತ್ತು...ಅಂತು ಇಂತೂ ಅದೊಂದು ಕನಸು ಕನಸಾಗಿ ಉಳಿದಿತ್ತು..ಗಣೇಶ ಚವತಿಗೆ ಮಂಟಪ ಸಿಂಗರಿಸಲು ಶತಾವರಿ ಗಿಡಗಳನ್ನು ಹುಡುಕಿಕೊಂಡು ಹೊಲದ ಬದುವಿನಲ್ಲಿದ್ದ ಪುಟ್ಟ ಕಾಡಿಗೆ ಹೋದಾಗ ,ಮುಂಡಗೋಡ-ಯಲ್ಲಾಪುರ ದ ನಡುವೆ ಪ್ರಯಾಣಿಸುವಾಗಲು  ಈ ಆಸೆ ಮತ್ತೆ ಮತ್ತೆ ಗರಿಗೆದರಿದ್ದುಂಟು ...  
.
ನೊರ್ದ್ರರ್ನ್ ಐರ್ಲೆಂಡ್  ಗೆ ಬಂದ ನಂತರ..ಎಲ್ಲೆಡೆ ಹಸಿರು ಶುದ್ಧ ಪರಿಸರ  ಕಾಣ ಸಿಗುತಿತ್ತು ಆದೆರೆ ...ಇಲ್ಲಿ ಅಷ್ಟು ದಟ್ಟ ಕಾಡು ಎಲ್ಲಿರುತ್ತೆ ಎಂಬ ಪ್ರಶ್ನೆ ಮನದಲ್ಲಿದ್ದುದು ಸುಳ್ಳಲ್ಲ...ಜುಲೈ ಅಗಸ್ಟ್ ತಿಂಗಳು ಇಲ್ಲಿ ಬೇಸಿಗೆ..ಎಲ್ಲರೂ  ತಿರುಗಾಟದ  ಮೂಡ್ನಲ್ಲಿರುತ್ತಾರೆ..ನಾವು ಎಲ್ಲಾದರೂ  ಹೋಗಬೇಕಲ್ಲ..ಅಂದು ಇಂಟರ್ನೆಟ್ ತಡಕಾಡಿ ಹುಡುಕಿ ತೆಗೆದಿದ್ದು ''ಟೊಲಿಮೊರ್ ಪಾರ್ಕ್''ಎಂಬ ಸ್ಥಳ ..ಹತ್ತಿರ ಇತ್ತಾದ್ದರಿಂದ ಒಂದೇ ದಿನದಲ್ಲಿ ಹಿಂದಿರುಗಲು ಅನುಕೂಲ ಎಂಬ ಕಾರಣದಿಂದ ನಾವು ಅಲ್ಲಿ ಹೊರಟಿದ್ದೆವು..ಪಾರ್ಕ್ ಎಂಬುದು ಕೇಳಿದ ಕೂಡಲೇ  ಮಕ್ಕಳು ಆಡುವಂತ ಸ್ಥಳ ಅಂದುಕೊಂಡಿದ್ದು ಆಗಿತ್ತೆನ್ನಿ...ಎಲ್ಲಾ ಪೂರ್ವಾಗ್ರಹದೊಂದಿಗೆ ನಾವು ಹೊರಟಿದ್ದು ನೊರ್ದ್ರರ್ನ್ ಐರ್ಲೆಂಡ್ ನಾ ಮೊದಲ ಅರಣ್ಯಉದ್ಯಾನ  ಟೊಲಿಮೊರ ಪಾರ್ಕ್ ಗೆ...

ಟೊಲಿಮೊರ ಪಾರ್ಕ್
ಕಲ್ಲಿನ ಮಾಹದ್ವಾರದ ಮೇಲೆ ಕೆತ್ತಿದ ೧೭೮೬ ಎಂಬುದನ್ನು ನೋಡಿಯೇ ಇದು ಬಹು ಪುರಾತನ ಐತಿಹಾಸಿಕ ಸ್ಥಳ ಎಂಬುದು ಮನದಟ್ಟಾಗಿತ್ತು.ದ್ವಾರದ ಒಳಗೆ ಹೆಜ್ಜೆ ಇಟ್ಟಂತೆ ನಾವು ಎಲ್ಲಿ ಇದ್ದಿವೆ ಅನ್ನೋದನ್ನು ಮರೆಸಿ ಬಿಡುವ ಪ್ರಕೃತಿ ಸಿರಿ..ಹಸಿರು..ತಿಳಿ ಹಸಿರು,ಕಡು ಹಸಿರು ಗಿಳಿ ಹಸಿರು,ಕೆಂಪು ಹಸಿರು ಹಸಿರು ಹಸಿರು........ಎದುರಿನಲ್ಲೇ ಅರಣ್ಯ ಇಲಾಖೆಯ ಪುಟ್ಟ ಕುಟೀರ ...ಅಲ್ಲಿ ಅರಣ್ಯದ ನಕ್ಷೆ ತೆಗೆದುಕೊಂಡು...ನಾವು ಹೊರಟೆವು...ನಿರ್ದಿಷ್ಟ ಪಡಿಸಿದ ಕೆಲವು ಜಾಗೆಗಳಲ್ಲಿ...ಅಲೆಮಾರಿಗಳು ಕಟ್ಟಿ ಕೊಳ್ಳುವಂಥ ಟೆಂಟ್.ಮತ್ತು ಕಾರವನ್ ಗಳು...ಆಹಾರ ಸಾಮಗ್ರಿ..ಪಾನೀಯ ಏನೊಂದು ಇಲ್ಲಿ ಸಿಗುವುದಿಲ್ಲವಾದ್ದರಿಂದ..ಎಲ್ಲರು ತಮ್ಮ ಅಡಿಗೆಗೆ ಬೇಕಾದ ಇಂಧನ ವನ್ನು  ಹೊತ್ತು ತಂದಿದ್ದು ಕಾಣುತ್ತಿತ್ತು....ಅದೆಷ್ಟು ಜನ..ಇದ್ದರು ಅಲ್ಲಿ ಆದರೂ ಒಂಚೂರು ಗದ್ದಲವಿಲ್ಲ...ಪ್ರಕೃತಿ ಮಾತೆಯ ಮಂಪರು  ಮಾಯವಾಗುವುದೋ ಅನ್ನುವ ಆತಂಕ ವೆ??..ಅಥವಾ ಆ ಮೌನದಲ್ಲೇ ಅವರು ಅಲ್ಲಿಯ ಆನಂದ ಸವಿಯುತ್ತಿದ್ದರೆ????ಗೊತ್ತಿಲ್ಲ..

ಇತಿಹಾಸ 
೧೬೧೧ ರಲ್ಲಿ ಮಗನ್ನಿಸ್ ಎಂಬ ಕುಟುಂಬದ ಒಡೆತನದಿಂದ ಇದರ ಇತಿಹಾಸ ಆರಂಭವಾಗುತ್ತದೆ ,ಇದು ೧೭೮೬ ರ ತನಕವೂ ದಾಯದಿಗಳಲ್ಲೇ  ಹಸ್ತಾನ್ತರಿಸಲ್ಪಡುತ್ತದೆ ,ನಾನು ಗಮನಿಸಿದ ಒಂದು ವಿಷಯವೆಂದರೆ ಯಾರೇ ಇದರ ಒಡೆತನಕ್ಕೆ ಬಂದಿರಲಿ ಒಂದೇ ಅವರು ಮದುವೆ ಆಗುವುದಿಲ್ಲ ,ಆದವರಿಗೆ ಮಕ್ಕಳಗುವುದಿಲ್ಲ ಮತ್ತು ಆಸ್ತಿ ಸೋದರಿಯ ಸಂತಾನಗಳಿಗೆ ಪರಾಭಾರೆ ಆಗುತ್ತದೆ ಇದು ಆ ಸ್ಥಳ ಮಹಿಮೆಯೋ ಏನೋ .
ಟೈಟಾನಿಕ್ ಹಡಗಿನ ಹೆಸರನ್ನು ಕೇಳದವರ್ಯಾರು ಆ ಹಡಗಿನ ನಿರ್ಮಾಣಕ್ಕೆ ಕಟ್ಟಿಗೆ ಒದಗಿಸಿದ್ದು ಇದೇ ಟೋಲೀಮೊರೆ ಅರಣ್ಯ,ಇಲ್ಲಿದ್ದ ಒಂದು ಅರಮನೆಯಲ್ಲಿ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ  ಅಮೇರಿಕನ್ ಸೈನಿಕರು ಉಳಿದು ಕೊಂಡಿದ್ದರು ಆದರೆ ಆ ಸುಂದರ ಕಟ್ಟಡ ಈಗ  ನೆಲಸಮ ಮಾಡಲಾಗಿದೆ , ೧೯೩೦ ರಲ್ಲಿ ಅರಣ್ಯ ಇಲಾಖೆಯವರಿಗೆ ಈ ಅರಣ್ಯದ  ಮೇಲ್ವಿಚಾರಣೆ ವಹಿಸಿದ ನಂತರ ನಿರಂತರ ಬೆಳವಣಿಗೆ ಕಂಡ  ಇದನ್ನು ೧೯೫೫ ರಲ್ಲಿ  ಐರ್ಲನ್ದ  ನ ಮೊದಲ ಅರನ್ಯೋದ್ಯಾನ ಎಂದು ಘೋಷಿಸಲಾಯಿತು 

ವಿಶೇಷ 
ಇದೊಂದೇ ಅರಣ್ಯ ಆದರೆ ಇಲ್ಲಿಂದ ಕಾಣುವ ದೃಶ್ಯಗಳು ಐದಾರು ಭಿನ್ನ ಭಿನ್ನ ಪ್ರದೇಶದ ಅನುಭವ ನೀಡುತ್ತವೆ.  ಶಿಮ್ನಾ  ಮತ್ತು ಸ್ಪಿಂಕ್ವೀ ನದಿಗಳು ಈ ಅರಣ್ಯದಲ್ಲಿ ಸಂಗಮ ಗೊಳ್ಳುತ್ತವೆ.ಮತ್ತು ಈ ನದಿಗಳು ಸಾಲಮನ್ ರುಚಿಯಾದ ಮೀನಿನ ಆಗರಗಳು ,ಕಾಡನ್ನು ಎರಡು ಭಾಗಗಳಾಗಿ ವಿಭಾಗಿಸಿದ ಈ ನದಿಗಳಿಂದಲೇ ಹುಟ್ಟಿಕೊಂಡ ಮತ್ತೊಂದು ಆಕರ್ಷಣೆ ಇಲ್ಲಿರುವ ಸೇತುವೆಗಳು ,ಅರಣ್ಯದಲ್ಲಿ ಒಟ್ಟು ೧೬ ಸೇತುವೆಗಳು ಒಂದೊಂದು ತಮ್ಮ ಹಿಂದೊಂದು ಕತೆಯನ್ನು ಹರವಿಕೊಂಡು ಕುಳಿತಿವೆ..ಕೆಲವು ಕಲ್ಲಿನ ಸೇತುವೆಗಳು ಕೆಲವು ತೂಗು ಸೇತುವೆ ,ಮತ್ತೆ ಕೆಲವು ಕಟ್ಟಿಗೆಯವು .

 ಹರ್ಮಿಟೆಜ್ ಇದರಲ್ಲಿ ಮುಖ್ಯವಾದುದು ಈ ಸೇತುವೆಯ ಪಕ್ಕ ಒಂದು ಸುಂದರ ಕಲ್ಲಿನ ಸೂರು ಇದೆ,ಆಗ ಇಲ್ಲಿ ವಾಸಿಸುತ್ತಿದ್ದ ಜೇಮ್ಸ್ ಹಮಿಲ್ತನ್ ವಿರಾಮಸಮಯದಲ್ಲಿ ಇಲ್ಲಿ ಮೀನು ಹಿಡಿಯಲು  ಬರುತ್ತಿದ್ದರು ಮತ್ತು ಅವರ ಪತ್ನಿ ಸ್ನೇಹಿತೆಯರು ಈ ಕಲ್ಲಿನ ಸೂರಿನಡಿಯಲ್ಲಿ ಕಸೂತಿ ಮಾಡುತ್ತ ,ಹರಟೆ ಹೊಡೆಯುತ್ತ ಪ್ರಕೃತಿ ಸೌಂದರ್ಯ ಆಸ್ವಾಧಿಸುತ್ತಿದ್ದರು,ಈ ಕಾರಣಕ್ಕೆ ಈ ಸೇತುವೆ ಈ ಕಲ್ಲಿನ ಸೂರನ್ನು ಕತ್ತಲಾಗಿತ್ತು ಎಂಬುದು ಇತಿಹಾಸದಿಂದ  ತಿಳಿದ ವಿಷಯ  ನಡು ನಡುವೆ ನದಿಯ ನಡುವೆ ಚಂದದ ಕಲ್ಲುಗಳನ್ನು ಜೋಡಿಸಿ ನೀರು ಕಡಿಮೆ  ಇದ್ದಕಡೆ ನಡಿಗೆಯಲ್ಲೇ ನದಿಯನ್ನು ದಾಟಬಹುದಾದ ಚಂದದ ವಿನ್ಯಾಸ ಕೂಡ , ನಮ್ಮದು ಭಾರತೀಯ ಮನಸ್ಸು ಆ ಸುಂದರ ತೀಳಿನೀರನ್ನು ಕಂಡ ಮೇಲೆ ಕೊನೆಪಕ್ಷ ಕಾಲು ಮುಳುಗಿಸಿ  ಸ್ವಲ್ಪ ಆಟ ಆಡಿ ಬರೋಣ ಅನ್ನಿಸಿತು..ನೀರಲ್ಲಿ ಕಾಲಿಟ್ಟರೆ ಅಲ್ಲೇ ಫ್ರೀಜ್ ಆಗಿ ಹೋದೇನೋ ಎಂಬ ಭಾವ ಬಂದಿದ್ದು ಸುಳ್ಳಲ್ಲ ಅಷ್ಟು  ತಂಪು..
ದ್ವಾರ ದಿಂದಲೇ ಕಾಣುವ  ಮೌರ್ನ್ ಪರ್ವತ ಶೃಂಗಗಳ ವಿಹಂಗಮ ನೋಟ , ಚಾರಣ ಮಾಡಿದರೆ ಪರ್ವತದ ತುದಿಯಿಂದ ಕಾಣುವ ಅಟ್ಲಾಂಟಿಕ್ ಸಾಗರ  ಸನ್ನಿಧಿ ,ಪರ್ವತವೇರಿದ ಆಯಾಸವನ್ನು ತಣಿಸುತ್ತದೆ ,
ಕಾಡಿನ ತುಂಬಾ ಹಲವು ಅಪರೂಪದ ಜೀವವೈವಿದ್ಯಗಳಿವೆ ಕೆಂಪು ಅಳಿಲು ಅವುಗಲ್ಲೊಂದು ,

ನಡೆದಷ್ಟು ಕಾಡು ,ನೋಡಿದಷ್ಟು ನೀರು ,ಮೌನ ದಲ್ಲಿ ಜೀಗುತ್ಟುವ ಹಲವು ಕೀಟಗಳ ಸಂಗೀತ..ಮುಗಿಲನ್ನು ಮುಟ್ಟುವ ಓಕ್ ಮರಗಳು , ಹಸಿವು ನೀರಡಿಕೆ ಎಲ್ಲವನ್ನು ಮರೆಸುತ್ತವೆ, ಪ್ರತಿ ರುತುವಿನಲ್ಲು ತನ್ನ ರೂಪವನ್ನು ಬದಲಿಸಿಕೊಳ್ಳುತ್ತದೆ ,ಒಮ್ಮೆ ಹಳದಿ ಎಲೆಗಳಿಂದ ಕೂಡಿದ ಕಾದು ಕಂಡರೆ ಮತ್ತೊಮ್ಮೆ ಬಾರಿ ಚಿಗುರು ಕೆಂಪು ,ತಿಳಿ ನೀರು ಅಲ್ಲಲ್ಲಿ ಪುಟ್ಟ ಪುಟ್ಟ ಜಲಪಾತ ನಿರ್ಮಿಸುತ್ತಾ ನಡೆಯುವ ಶಿಮ್ನಾ -ಸ್ಪಿಂಕ್ವೀ ನದಿಗಳು . ಎಷ್ಟೋ ವರ್ಷದ ಕನಸನ್ನು ನನಸು ಮಾಡಿದ ಶ್ರೇಯ ಈ ಟೊಲಿಮೊರ ಅರನ್ಯೋದ್ಯಾನಕ್ಕೆ .ನಿಮ್ಮ ಯುರೋಪ್ ಪ್ರವಾಸದಲ್ಲಿ ಇದನ್ನು ಸೇರಿಸಿಕೊಳ್ಳಲು ಮರೆಯಬೇಡಿ ,ಹತ್ತಿರದಲ್ಲೇ ಸೈಲೆಂಟ್ ವ್ಯಾಲಿ ,ಟೈಟಾನಿಕ್  ತಯಾರಾದ  ಊರು ಬೆಲ್ಫಾಸ್ಟ್ , ನ್ಯೂ ಕ್ಯಾಸಲ್ , ಜಗತ್ತಿನ ಅಧ್ಬುತಗಳಲ್ಲಿ ಒಂದಾದ ಜೈಂಟ್ಸ್ ಕ್ಯಾಸ್ ವೆ ಗಳಿವೆ ,ನನಗಾದ ಸಾರ್ಥಕ ಅನುಭವ ನಿಮಗೂ ಆಗಲಿ...

ಹುಡುಕಾಟ


ಸಿಟ್ಟು ಬಂದಿತ್ತು 
ಅದ್ಯಾರದೋ ಮೇಲೆ 
ಕೂಗುತ್ತಿದ್ದೆ ಚೀರುತ್ತಿದ್ದೆ 
ಅದೇನೋ ಸಿಟ್ಟು ಅದೇನೋ ಅಸಹನೆ 
ನನ್ನ ಆರ್ಭಟ ,ಆಟಾಟೋಪ ನೋಡಿ 
ಅಪ್ಪ ಹೇಳಿದರೊಂದು ಬುದ್ಧಿ ಮಾತ,
ಮಗಳೇ 
ಅವರಿವರು ನಿನಗಿಷ್ಟ ಬಂದಂತೆ ಇರಬೇಕೆಂದರೆ,
 ಅದು ಆಗದ ಮಾತು 
ಏನಿವೆಯೋ ಅವರ ಕಷ್ಟಗಳು , 
ಹಂಚಿಕೊಳ್ಳಲಾಗದ ದುಃಖ ದುಮ್ಮಾನಗಳು 
ಸಾಧ್ಯವಾದರೆ ಯೋಚಿಸು ,
ಅವರ ಸ್ಥಾನದಲ್ಲಿ ನಿನ್ನರಿಸಿ ನೋಡು ,
ಒಮ್ಮೆ ಅವರ ಚಪ್ಪಲಿಯಲ್ಲಿ ಕಾಲಿಟ್ಟು ನಡೆ 
ಅವರ ಹಾದಿಯ ಕಲ್ಲು ಮುಳ್ಳು ನಿನಗೂ ಕಂಡಾವು ,
ಅವರ ಅಸಮಾಧಾನಕ್ಕೆ ಕಾರಣ ಹೊಳೆದೀತು,

ಓಹ್ ಹೌದಲ್ಲ ,
ಆ ಗಳಿಗೆಯಿಂದ ನಾ ಹಾಗೆ ಮಾಡತೊಡಗಿದೆ 
ನನಗೆ ನೋವಾದಾಗೆಲ್ಲ , 
ನೋಯಿಸಿದವರ ಮನಸ್ಥಿತಿಯ ಬಗ್ಗೆ ಆಲೋಚಿಸಿದೆ 
ಸಿಟ್ಟಿನ ಬದಲು ನಿಟ್ಟುಸಿರು 
ಅಸಮಾಧಾನ ಅನುಕಂಪವಾಗಿ 
ಚಿಂತೆ ಚಿಂತನೆಯಾಯಿತು 
ಈಗ ನನಗೆ ಮತ್ತೆ ಮರಳಬೇಕಿದೆ 
ಅವರಿವರ ಚಪ್ಪಲಿಯಲ್ಲಿ ಕಾಲು ತೂರಿಸಿ 
ನೋವು ನುಂಗುತ್ತ 
ಅದೆಷ್ಟು ದೂರ ಬಂದಿದ್ದೇನೆಂದರೆ 
ನನಗೀಗ ನನ್ನ ಚಪ್ಪಲಿ ಸಿಗುತ್ತಲೇ ಇಲ್ಲ ,
ಅದೆಲ್ಲಿ ಬಿಟ್ಟೆ 
ಮರೆತೇ ಹೋಗಿದೆ ...
ಹುಡುಕುತ್ತಿರುವೆ 
ಹುಡುಕುತ್ತಲೇ ಇದ್ದೇನೆ

ಖಿನ್ನತೆ


ಹೇಗಾದರೂ ಮನಸು ಬಂದೀತು

ಅನ್ನುತ್ತೀರಿ ನೀವು,

ಹಾಗೆ ಉಸಿರಾಡುವ ಇಡೀ ಜೀವವನ್ನ 

ಒಂದು ಯಕಃಶಿತ್ ಹಗ್ಗದ ಸರಗಂಟಿಗೆ 

ತೂಗಿಬಿಡುವುದು.. 


ಕಷ್ಟವಿದೆ, 

ಅನುಭವಿಸಿದವರಿಗಷ್ಟೇ ಗೊತ್ತು..

ಖಿನ್ನತೆಯನ್ನ ನಿಭಾಯಿಸಿ ಅದರೊಟ್ಟಿಗೆ ಬದುಕುವುದು. 

ಅದೇ ಬದುಕಾಗುವುದು.


ಮಲಗಿದರೆ ಏಳಲು ಮನಸಾಗದು.. 

ಮಲಗಬೇಕೆಂದರೆ ನಿದ್ದೆಯೇಬರದು

ಕೆಲವೊಮ್ಮೆ ಹುಳುವಿನಂತೆ 

ಸುತ್ತಲೊಂದು ಕೋಶಕಟ್ಟಿಕೊಂಡು 

ಅದರಲ್ಲಿ ಕಾಲು ತೊಡೆಗೆ ಮುಖ ಆನಿಸಿಕೊಂಡು

ಸುಮ್ಮನೆ ಇದ್ದು ಬಿಡಬೇಕು ಅನಿಸುತ್ತದೆ 

ಯಾರಿಗೂ ಕಾಣದೆ. ಹೊರಗೂ ಬಾರದೆ,


ಕಷ್ಟವಿದೆ,

ಸಾವಿರಾರು ಅಂಕಿಗಳು

ಐದರ ಜೋಡು ಸಂಖ್ಯೆಗಳು. 

ನೂರಾರು ರಿಂಗ್ ಟೋನಗಳು,

ಒಂದೇ ಒಂದು ಲಯ 

ನನಗಾಗಿ ಮಿಡಿಯುವುದಿಲ್ಲ, 

ಒಂದೇ ಒಂದು ದನಿ ನನ್ನ 

ಕೇಳುವುದಿಲ್ಲ, 

ಹೇಗಿದ್ದಿ ? ಏನನಿಸುತ್ತದೆ ?

ಹಾಗ್ಯಾಕೆ ಅನಿಸುತ್ತದೆ? 

ನಾನಿಲ್ಲವೇ ನಿನಗೆ ಎಂದು 

ಯಾರೂ ಹೇಳುವುದಿಲ್ಲ ಒಂದೊಮ್ಮೆಯೂ,


ಕಷ್ಟವಿದೆ,

ನಾನರಿಗೂ ಬೇಡದ ಜೀವ

ಇದ್ದೇನುಮಾಡಲಿ? 

ಎಂಬ ಹುಕಿ ...

ಸುಲಭವಲ್ಲ ಖಿನ್ನನಾಗಿಯೂ 

ನಗುವಿನ ಮುಖವಾಡ ಹೊತ್ತು

ಈ ಸ್ವಾರ್ಥಿ ಜಗದಲ್ಲಿ 

ನಮ್ಮಕಾಲು ಠರಾಯಿಸುವಿದು.


ಕಷ್ಟವಿದೆ ಖಿನ್ನತೆಯೊಂದಿಗೆ

ಬದುಕುವುದು..

ಆದರೆ…..

ಬದುಕಿಗೆ ವಿದಾಯ ಹೇಳಿ ಹೋಗುವಷ್ಟಲ್ಲ!!!







ಪಯಣ

ಚಿತ್ರ -ಮೀರಾ ವಿನಯ್

ಪಯಣ

ಕಾಯುವುದಿಲ್ಲ ಸಮಯ 
ಕಾಯುತ್ತೇನೆ ನಾನು, 

ಬಿಳ್ಕೊಡುವ ಮುನ್ನವೇ
ಮತ್ತೆ ಸಿಗುವ ಕಾತರ , ಆತುರ

ನಾಲ್ಕು ಗಾಲಿಗಳು ಇನ್ನೊಂದೂ ಸುತ್ತು 
ತಿರುಗಿಲ್ಲ, 
ನಾಲ್ಕು ಯುಗಕ್ಕಿಂತ  ದೀರ್ಘ
 ಈ ಚಣಗಳು

ನಿನ್ನ ಕಣ್ಣನ್ನು ನೋಡಬೇಕೆಂದೇ ಹಣಕಿದೆ
ಹಿಂದಿನ ಗಾಜಿಗೆಲ್ಲ ಮಂಜು
ನಿನ್ನ ಕಣ್ಣೀರ ಊಗಿಯೇ ಇರಬೇಕು,

ಸರಿ ಹೊರಟು ಬಿಡು, 
ಮತ್ತೆ ನಿಲ್ಲಬೇಡ, 
ಈಗ ನೀ ಹೋದರೆ ತಾನೇ ಮತ್ತೆ ನಾವು ಸಿಗುವ 
ಲೆಕ್ಕ ಶುರುವಾಗುವುದು, 

ಮತ್ತೆ ಹಾಗೆ ಸಿಗೋಣ , 
ಅಪರಿಚಿತರಂತೆ, 
 ಅದ್ಯಾವುದೋ ಗೊತ್ತಿರದ ಓಣಿಯ ತಿರುವಿನಲ್ಲಿ.

ಮತ್ತೆ ನಗೋಣ , ಕೈ ಕೈ ಹಿಡಿದು 
ಕಳೆದು ಹೋಗೋಣ, 
ಮತ್ತೊಮ್ಮೆ ನೀ ಹೊರಟು ನಿಲ್ಲುವ ಮುನ್ನ,
ಈ ಬಾರಿ ಉಳಿದು ಹೋದ ಮಾತು, ಕಸಿವಿಸಿ ಕನವರಿಗೆ 
ಹಳದಿ ಹಾಳೆಯಲ್ಲಿ ಬರೆದು , ಒಣಗಿದ ಗುಲ್ಮೊಹರ್ ಅಂಟಿಸಿ 
ಸಂಚಿಯಲ್ಲಿ ತುಂಬಿ ಕೊಡುವೆ, 

ಈಗ ಹೊರಟು ಬಿಡು,
ಮತ್ತೆ ಸಿಗುವ

Tuesday, December 17, 2019

ಕನಸುಗಳು,



 ಕನಸುಗಳು
ಬೀಳುತ್ತವೆ ನಿದ್ದೆಯಲ್ಲಿದ್ದಾಗ

ಎದ್ದು ಕುಳಿತಾಗ 
ಕದ್ದು ಓಡುತ್ತವೆ
ಗಾಳಿಗೆ ಎಲ್ಲೆಂದರಲ್ಲಿ 
ಹರಿದಾಡುವ ಬೂರುಗದ ಅರಳೆಯಂತೆ.

ಕನಸುಗಳು ಹಗುರ,
ನವಿರು
ಮುಟ್ಟ ಹೋದರೆ ಕಮರುತ್ತವೆ
ಹರಡಿ ಹದಗೆಡುತ್ತವೆ ಮನೆಯಂಗಳದ ರಂಗೋಲಿಯ ಹಾಗೆ,



ಕನಸುಗಳು..
ಒಳ್ಳೆಯವು ,ಕೆಟ್ಟವು , ಅನಿಷ್ಟ
ಒಂದಷ್ಟು ದುಷ್ಟ 

ಕನಸು
ಕೆಲವು ನನ್ನವು ಕೆಲವು ಅವನವು
ಕೆಲವು "ನಮ್ಮವು" ಎನ್ನುವ ಭ್ರಮೆ ಹುಟ್ಟಿಸುವ ಮಾಯಾಮೃಗ,
ಆಗ ಇತ್ತು ಈಗ ಇಲ್ಲ.

ಕನಸುಗಳು
ಇವನ ತಕ್ಕೆಯಲ್ಲಿ ಮಲಗಿ ಗಾಢ ನಿದ್ರೆಯಲ್ಲಿರುವಾಗ, 
ಅವನ ರಂಗು ರಂಗಿನ ಚಿತ್ರ ತೊರಿಸುವ ವ್ಯಭಿಚಾರಿ

ಕನಸುಗಳು 
ಬರುವುದಾದರೂ ಏಕೆ?
ಏಕತಾರಿಯ ಒಂಟಿ ನಾದದಂತೆ

ಕನಸುಗಳು
ಕಣ್ಜೀರಿಗೆ ಹುಳದಂತೆ,
ನಿಸ್ಸಾರ ಬದುಕಿಗೆ ಜೀರಂಗಿ ಮೆರಗು ಕೊಡುವ ಜೀವನ್ಮುಖಿ ಕಿರಣದಂತೆ.
ಆದರೂ 
ಕನಸುಗಳು 
ನನಗಿಷ್ಟ 

ಅಲ್ಲಿ ನೀನು ಪೂರ್ತಿ ನನ್ನವನು.

ಕೇಳು,



ನನಗೆ ಕನಸ ಮಾರಲು ಬರಬೇಡ,
ನಿನಗೆ ಬಿಟ್ಟಿಯಾಗಿ ಕೊಡುವಷ್ಟು ರಾಶಿ ಕನಸಿವೆ ನನ್ನ ಹತ್ತಿರ
ಬೇಕೆಂದರೆ ಹೇಳು ಕಳಿಸಿ ಕೊಡುವೆ||

ನನಗೆ ಒಲವ ಮಾರಲು ಬರಬೇಡ,
ಒಲವಒರತೆಯಲೇ ಹಿತ್ತಲ ಮಲ್ಲಿಗೆ ಅರಳಿವೆ,
ಬೇಕಿದ್ದರೆ ಹೇಳು 
ದಂಡೆ ಹೆಣೆದು ಕಳಿಸುವೆ||

ನನಗೆ ಅನ್ನದ ಆಮಿಷ ಒಡ್ಡಬೇಡ,
ಬದುಕಬುತ್ತಿ ಹದವಾಗಿ ಕಲಸಿ ,
ಹಸಿದವರಿಗೆ ಉಣಬಡಿಸಿದ್ದೇನೆ, ಬೇಕೆಂದರೆ ಹೇಳು 
ಕೈತುತ್ತು ಕೊಡುವೆ||

ನನಗೆ ನೆರಳ ಕೊಡುವ ಮಾತಾಡಬೇಡ,
ಹೊಂಗೆಯ ತಂಪಲ್ಲೆ ಗುಡಿಸಲ ಕಟ್ಟಿದ್ದೇನೆ,
ನೆರಳ ಮಾತಾಡಿ ದಣಿವಾದರೆ ಹೇಳು , 
ಚಾಪೆ ಹಾಸಿ ಲಾಲಿಯೂ ಹಾಡುವೆ||

ನನಗೆ ನಗುವ ಹಂಚಲು ಬರಬೇಡ,
ಬತ್ತದ ಚೈತನ್ಯವನು ಬಳುವಳಿಯಾಗಿ ಪಡೆದಿದ್ದೇನೆ,
ಬೇಕಾದರೆ ಹೇಳು ಕೊಡುವೆ
ನಿನಗೂ ಒಂದುಷ್ಟು ನಗುವ ಸಾಲ,ಬಡ್ಡಿಯಿಲ್ಲದೆ||

ನನಗೆ ಬದುಕ ಪಾಠ ಹೇಳಿಕೊಡಲು ಬರಬೇಡ,
ನಾನೇ ಕಲಿಯುತ್ತೇನೆ|
ಬದುಕು ಕಲಿಸುತ್ತದೆ, ಏಳುತ್ತೇನೆ, 
ಬೀಳುತ್ತೇನೆ ಮತ್ತೆ ಕಲಿಯುತ್ತೇನೆ, ಅವರರವರ ಬದುಕು ,ಅವರವರ ಪಾತ್ರ 
ಅವರಿಗೇ ಬಿಟ್ಟು  ಬಿಡು,

ಬೆಳಯಲು ಬಿಡು, ಬೆಳಗಲು ಬಿಡು.

Sunday, January 21, 2018

ಮೊಗ್ಗಿನ ಜಡೆ ಇಂದಿರಾ

ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡಿ ಮೆಚ್ಚಿದ್ದಾಯ್ತು , ಹಿರಿಯರು ಮದುವೆಯ ಮಾತುಕತೆ ಶಾಸ್ತ್ರವನ್ನೂ ಪೂರೈಸಿದ್ದು ಆಯಿತು , ಬದುಕಿನ ಹೊಸ ಆರಂಭದ ಮುನ್ನುಡಿ ಬರೆಯುವ ದಿನ  ಮದುವೆಯ ದಿನ. ಈ ಒಂದು ದಿನಕ್ಕೆ ಬೇಕಾಗುವ ಪೂರ್ವತಯಾರಿ ಮಾಡಿದವರಿಗೇ ಗೊತ್ತು, ಛತ್ರ ದಿಂದ ಹಿಡಿದು ಅಡುಗೆಯವರ ತನಕ , ವಾಲಗದವರಿಂದ ಹಿಡಿದು ಪುರೋಹಿತರತನಕ  ಎಲ್ಲವನ್ನ ನಿಭಾಯಿಸುವಾಗ ಮನಸಲ್ಲಿರುವುದು ಅದೊಂದೇ ಭಾವ ‘’ಮದುವೆ ಒಂದು ಚನ್ನಾಗಿ ಆಗಿಬಿಟ್ಟರೆ ಅಷ್ಟೇ ಸಾಕು’’
ಅಪ್ಪ ಅಮ್ಮ ಮದುವೆಯ ಇತರ ಗಡಿಬಿಡಿಯಲ್ಲಿ ಮಗ್ನರಾಗಿರುವಾಗ ಮದುಮಗಳ ಕಸಿವಿಸಿ ಕೇಳಬೇಕೆ ? ಮದುವೆಯ ಕೇಂದ್ರ ಬಿಂದುವೇ ಆಕೆ , ಆಕೆ ಚನ್ನಾಗಿ ಕಾಣಬೇಕು , ಇನ್ನು ಶುರು ಬ್ಯೂಟಿಶಿಯನ್ ಹುಡುಕಾಟ, ಅತ್ತೆ ಮಗಳ ಮದುವೆಗೆ ಬಂದವಳನ್ನ ಕರೆಯೋದೇ? ದೊಡ್ಡಮ್ಮನ ಮಗಳ ಮದುವೆಗೆ ಬಂದಿದ್ದಳಲ್ಲ ಅವಳನ್ನ ಕರೆಯೋದೇ? ಹಾಗೊಮ್ಮೆ ಯಾರನ್ನ ಕರೆಯೋದು ಅನ್ನೋದು ನಿರ್ದಾರವಾದರೂ ಬಜೆಟ್ ಭೂತ ದಿಗ್ಗನೆ ಎದುರಿಗೆಬಂದು ನಿಲ್ಲುತ್ತದೆ ,
ಇತ್ತೀಚಿನ ದಿನಗಳಲ್ಲಿ ಮದುಮಗಳ ಸಿಂಗಾರಕ್ಕೆ ಹತ್ತು ಸಾವಿರದಿಂದ  ಒಂದು ಲಕ್ಷದವರೆಗೂ ಚಾರ್ಜ್ ಮಾಡುವ ಬ್ಯೂಟಿಶಿಯನ್ ಇದ್ದಾರೆ , ತರಹೇವಾರಿ ಪ್ಯಾಕೇಜ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಆದರೆ ಕೆಲವೊಂದು ಸಮುದಾಯದ ವಿಶಿಷ್ಟ ಮದುವೆ ಧಿರಿಸು ಮತ್ತು ವಧುವನ್ನು ಸಿಂಗರಿಸುವ ರೀತಿ ಎಲ್ಲ ಬ್ಯೂಟಿಶಿಯನ್ ಗಳಿಗೆ ತಿಳಿದಿರುವುದಿಲ್ಲ, ಅಂಥವರನ್ನೇ ಹುಡುಕಿ ಅವರು ಹೇಳಿದಷ್ಟು ಮೊತ್ತವನ್ನು ಕೊಟ್ಟು ಕರೆಯುವುದು ಅನಿವಾರ್ಯತೆಯೂ ಹೌದು , ಮೊದಲೆಲ್ಲ ಈ ಮದುಮಗಳನ್ನು ಸಿಂಗರಿಸುವ ಕೆಲಸ ಅವಳದೇ ಸಂಬಂಧಿಗಳಲ್ಲಿ ಯಾರೋ ಒಬ್ಬರು ಮಾಡಿ ಬಿಡುತ್ತಿದ್ದರು, ಆದರೆ ಈಗ ದಿನಮಾನ ಹಾಗಿಲ್ಲ ಹಣ ಕೊಟ್ಟರೂ ನೀರಿಕ್ಷಿಸಿದ ಸೇವೆ ಲಬ್ಯವಾಗುವುದು ಅಪರೂಪ.
ಇಂಥಹ ವ್ಯಾವಹಾರಿಕ ಪ್ರಪಂಚದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ ೨೫ ವರುಷಗಳ ಕಾಲ ಮದುವೆ ಹೆಣ್ಣನ್ನು ಸಿಂಗರಿಸಿ ಆಕೆಯ ಆ ವಿಶೇಷ ದಿನಕ್ಕೆ ಮೆರಗನ್ನು ತರುವ ಕಾರ್ಯವನ್ನು ತಮ್ಮ ಜವಾಬ್ದಾರಿಎಂಬಂತೆ ಮಾಡಿ ಎಲೆಮರೆಯಲ್ಲೇ ಮಾಗಿದ ಹಿರಿಯ ಜೀವದ ಪರಿಚಯ ಇಲ್ಲಿದೆ .
ಶ್ರೀಮತಿ ಇಂದಿರಾ ನರಸಿಂಹ ಶಾನಭಾಗ್ ಉಡುಪಿ ಜಿಲ್ಹೆಯ ಸಾಲಿಗ್ರಾಮದವರು. ಪ್ರಸ್ತುತ ಕೋಟ ಗ್ರಾಮ ನಿವಾಸಿ.
ತಮ್ಮ  ಹದಿನಾಲ್ಕನೇ ವಯಸ್ಸಿಗೆ ಹಸೆಮಣೆ ಏರಿದ ಇಂದಿರಾ ಅವರ ಅನುಭವಗಳನ್ನು ಅವರ ಮಾತಲ್ಲೇ ಕೇಳಿ,
‘’ ಅದು ೧೯೫೫ ರ ಸಮಯ , ಆಗಿನ ಮದುವೆಗಳು ಈಗಿನಂಥಲ್ಲ ಅದರ ಚಂದವೇ ಬೇರೆ , ಮದುವೆಯೆಂದರೆ ಸುಮ್ಮನೆಯೇ ? ಅದರ ಸುತ್ತ ಇರುವ ತಯಾರಿ ಸಂಭ್ರಮ, ಊಟತಿಂಡಿಯ ತಯಾರಿಗಳು ,ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡು ನಾಲ್ಕೈದು ದಿನದ ಮದುವೆಗಳು, ಬಂದವರಿಗೆ ಬೆಲ್ಲದ ನೀರು ಬಾಳೆಹಣ್ಣು , ವೀಳ್ಯ ಕೊಟ್ಟು ಉಪಚರಿಸಿದರೆ ಅದು ದೊಡ್ಡ ಮರ್ಯಾದೆ ಕೊಟ್ಟಂತೆ . ಬಂದವರು ಕುಳಿತುಕೊಳ್ಳಲು ಈಗಿನಂತೆ ತರಹೇವಾರಿ ಖುರ್ಚಿ ಗಳಿರಲಿಲ್ಲ ಒಣಹುಲ್ಲು ಹಾಸಿನಮೇಲೆ ಗೋಣಿಚೀಲ ಅದರ ಮೇಲೊಂದು ಪಂಚೆ ಹಾಸಿದರೆ ಅದೇ ಸುಖಾಸನ. ಅದೆಷ್ಟೇ ಅನುಕೂಲಸ್ತರಾಗಿದ್ದರೂ ಮದುವೆಗೆ ಗಂಜಿ ಊಟ ಹಾಕಿಸಲೇಬೇಕು. ವಧುವರರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ಕರೆತಂದರೆ ಅದು ವಿಜೃಂಭಣೆಯ ಮದುವೆ ,
ಇದೆಲ್ಲದರ ನಡುವೆ ವಧುವನ್ನು ಸಿಂಗರಿಸುವ ಗಮನ ಯಾರಿಗಿರುತ್ತಿತ್ತು , ಚಿಕ್ಕ ಪ್ರಾಯದ ಹುಡುಗಿಯರಿಗೆ ಸೀರೆ ಸುತ್ತಿ ನಿಲ್ಲಿಸುವುದೇ ದೊಡ್ಡ ಕೆಲಸವಾಗಿತ್ತೇನೋ.! ನನ್ನ ಮದುವೆಯಾದಾಗ ನನಗೆ ಹದಿನಾಲ್ಕು ವರ್ಷ, ಎಲ್ಲರಿಗೂ  ಗಡಿಬಿಡಿ, ಅವರಲ್ಲೇ ಒಬ್ಬರು ಅದ್ಹೇಗೋ ನನಗೆ ಸೀರೆ ಸುತ್ತಿ, ಮಂಟಪದಲ್ಲಿ ನಿಲ್ಲಿಸಿದ್ದರು. ಆಗ, ಆ ನಂತರ ಅದೆಷ್ಟೋ ಸಲ ಅನ್ನಿಸುತ್ತಿತ್ತು ಮದುವೆ ಬದುಕಿನ ಅತಿ ಸುಂದರ ಗಳಿಗೆ ಹುಡುಗಿಯೊಬ್ಬಳು  ಮದುಮಗಳರೂಪದಲ್ಲಿ ರೂಪಂತರವಾಗುವ ಆ ಗಳಿಗೆ, ಯಾವುದೇ ತಯಾರಿ ಇಲ್ಲದೆ  ಅದ್ಹೇಗೆ  ಮುಗಿಸಿಬಿಡುವುದು? ಈ ಸುಸಂದರ್ಭವನ್ನು ಅವಳನ್ನು ಇನ್ನು ಚಂದ ಮಾಡಿ ಆ ದಿನವನ್ನು ಇನ್ನೂ ವಿಶೇಷ ಮಾಡಬೇಕು , ನೆನಪಲ್ಲಿರುವಂತೆ ಮಾಡಬೇಕು ಎಂಬ ಕನಸಿನ ಬೀಜ ನನ್ನ ಮನದಲಿ ಮೊಳೆಯಿತು.
ಹದಿನಾಲ್ಕಕ್ಕೆ ಮದುವೆ ಹದಿನೈದು ಮುಗಿಯುವ ಮುನ್ನ ಮಗು ಹುಟ್ಟಿದ ಸಂಬ್ರಮ ಜೊತೆಗೆ ನನ್ನ ಕನಸುಗಳು ಆಗಾಗ ನನ್ನ ಕೈ ಎಳೆದು ಕರೆಯುತ್ತಲೇ ಇದ್ದವು, ಆದರೆ ಯಾರಲ್ಲೂ ಹೇಳುವ ಧೈರ್ಯ ಬರಲಿಲ್ಲ. ಅದೆಷ್ಟೋ ವರುಷಗಳ ನಂತರ ಪತಿಯೊಂದಿಗೆ ಇದನ್ನು ಹಂಚಿಕೊಂಡಾಗ ಅವರು ಸಂತಸದಿಂದ ಒಪ್ಪಿಕೊಂಡು ಪ್ರೋತ್ಸಾಹಿಸಿದರು ಆದರೆ ಈ ಕೆಲಸವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕು ಅನ್ನುವುದು ಅವರ ಆಶಯವಾಗಿತ್ತು , ಇಷ್ಟರಲ್ಲಿ  ಮಕ್ಕಳ ಮದುವೆಯೂ ಆಗಿತ್ತು, ಮಕ್ಕಳು ಸೊಸೆಯಂದಿರು ಕೂಡ ನನ್ನ ಈ ಬಹುದಿನದ ಆಸೆಗೆ ಒತ್ತಾಸೆ ಕೊಟ್ಟು ಸಹಕರಿಸಿದರು.  
ಹಾಗೆ ಶುರುವಾಯಿತು ನನ್ನ ಈ ನನಸಿನ ಪಯಣ,
ತಮ್ಮ ಮದರಾಸಿನಿಂದ ಆಭರಣದ ಸೆಟ್ಗಳನ್ನ ಒಳ್ಳೆಯ ಚವರಿಗಳನ್ನು ತಂದು ಉಡುಗೊರೆಯಾಗಿತ್ತು ನನ್ನ ಕೆಲಸಕ್ಕೆ ಮತ್ತಷ್ಟು ಸಕಾರಾತ್ಮಕ ಬೆಂಬಲ ನೀಡಿದ , ಸಾರಸ್ವತ ಸಮಾಜದ ಮದುವೆಗಳಲ್ಲಿ  ವಧುವಿಗೆ ಕಚ್ಚೆ ಸೀರೆ ಉಡಿಸುವ ಪದ್ಧತಿ ಇದೆ ಜೊತೆಗೆ ಧಾರೆಯ ಸಮಯದಲ್ಲಿ ಸೆರಗಿನ ಬದಲು ಬಿಳಿಯ ಪಟ್ಟಿಯನ್ನು ಬಳಸುತ್ತಾರೆ ಈ ಶೈಲಿಯ ಸೀರೆ ಉಡಿಸುವುದು ಎಲ್ಲರಿಗೂ ಬರುತ್ತಿರಲಿಲ್ಲ , ನನ್ನ ತಣಿಯದ ಕುತೂಹಲ ಆಸಕ್ತಿ ಯಿಂದ ನಾನು ಈ ವಿಧಾನವನ್ನು ಕರಗತ ಮಾಡಿಕೊಂಡಿದ್ದೆ , ಜೊತೆಗೆ ಮಂಗಳೂರು ಮಲ್ಲಿಗೆಯ ಜಡೆ ಹಾಕುವುದು ನನಗೆ ಸಿದ್ದಿಸಿತ್ತು , ಅದರೊಂದಿಗೆ ಸಿಂಗಾರ ಮಾಡಲು, ಬೇಕಾಗುವ ಎಲ್ಲ ಪೂರಕ ತಯಾರಿ, ಕೌಶಲ್ಯವು ಇತ್ತು , ಅದಕ್ಕೆ ನನ್ನಲ್ಲಿ ಆತ್ಮ ವಿಶ್ವಾಸಕ್ಕೆ ಕೊರತೆ ಇರಲಿಲ್ಲ ,  
ಒಳ್ಳೆಯ ಉದ್ದೇಶದಿಂದ ಶುರುಮಾಡಿದ ಕೆಲಸಕ್ಕೆ ದೈವಬಲ ಸಿಗದೇ ಇರುತ್ತದೆಯೇ.?ದಿನ ಕಳೆದಂತೆ ಸಿಂಗರಿಸುವ ಕೈಂಕರ್ಯಕ್ಕೆ ಕರೆಯುವವರ ಸಂಖ್ಯೆ ಹೆಚ್ಚಿತು ,   ಕೆಲವೊಮ್ಮೆ ಒಂದೇ ದಿನ ಎರಡೆರಡು ಮದುವೆಗೆ ನಿಮಂತ್ರಣ ಬಂದಿದ್ದೂ ಇದೆ ಹಾಗಾದಾಗ ಇಲ್ಲ ಅನ್ನಲು ಮನಸು ಬಾರದೇ ಮಗಳು, ಸೊಸೆ ಇಬ್ಬರಿಗೂ ತರಬೇತಿ ಕೊಟ್ಟು ಅವರನ್ನು ಕಳಿಸುತ್ತಿದ್ದೆ. ವರುಷಕ್ಕೊಮ್ಮೆ ಮನೆಯಲ್ಲೊಂದು ಚವಲ , ಉಪನಯನ, ಮದುವೆ ಇದ್ದೇ ಇರುತ್ತಿತ್ತು ಆಗಂತೂ ನನಗೆ ಇನ್ನು ಖುಷಿ.
ಕೆಲವೊಮ್ಮೆ ದೂರದೂರಿನಲ್ಲಿ ಮದುವೆಗಳು ಇರುತ್ತಿದ್ದವು. ಮೈಸೂರ , ಗೋವ , ಮುಂಬೈ ಬೆಂಗಳೂರು ಎಲ್ಲ ಕಡೆ ಮನೆಯ  ಜವಾಬ್ದಾರಿಯ ನಡುವೆಯೂ  ಆ ಮದುವೆಗೆ ಹೋಗಿ ನನ್ನ ಪಾಲಿಗೆ ಬಂದ ಸೇವಾಭಾಗ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೆ .

ಆಸಕ್ತಿ ಇರುವ ಹಲವರಿಗೆ ನಾನು ತರಬೇತಿ ಕೊಟ್ಟಿದ್ದೇನೆ . ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಹೊಸ ವಿಧಾನಗಳನ್ನು ಕಲಿಯಲು ನಾನು ಸದಾ ಉತ್ಸಾಹ ತೋರುತ್ತಿದ್ದೆ, ಕಲಿಕೆಗೆ ವಯಸ್ಸಿನ ಮಿತಿ ಇಲ್ಲವಲ್ಲ!! ಈ ಇಪ್ಪತೈದು ವರುಷಗಳ
(೧೯೮೩-೨೦೦೯)ಅನುಭವದಲ್ಲಿ  ನನ್ನ ಸಂಗ್ರಹದಿಂದ ಕಳೆದುಹೋದ ವಸ್ತುಗಳ ಪಟ್ಟಿ ದೊಡ್ಡದಿದೇ ಆದರೆ ಪಡೆದ ಆತ್ಮ ಸಂತೃಪ್ತಿಯಮುಂದೆ ಅದು ತೃಣ ಸಮಾನ.
ನಮ್ಮಲ್ಲಿ ಹಿರಿಯರು ಯಾವಾಗಲು ಹೇಳುತ್ತಿದ್ದರು ‘’ವಧುವರರು ಸಾಕ್ಷಾತ್ ಲಕ್ಷ್ಮಿ ನಾರಾಯಣನ ರೂಪ’’ ಎಂದು ಅದನ್ನೇ ನಾನು ಕೂಡ  ನಂಬುತ್ತೇನೆ ಶ್ರದ್ಧೆ ನಿಷ್ಠೆಯಿಂದ ನನ್ನ ಈ ಸೇವೆಯನ್ನು ಭಗವಂತನ ಕೆಲಸವೆಂದೇ ಮಾಡಿದ್ದೇನೆ ಅದಕ್ಕಿಂತ ಹೆಚ್ಚು ಏನು ಬೇಕು?
ಹೀಗೆಂದು ಕೇಳುವ ಇಂದಿರಾ ಅವರಿಗೆ ೭೫ ರ ಹರೆಯ , ಈಗಲೂ ಅವರು ಉತ್ಸಾಹದ ಬುಗ್ಗೆ , ಕಾದಂಬರಿಗಳನ್ನು ಓದುವುದು ಅವರಿಗೆ ಅಚ್ಚು ಮೆಚ್ಚು, ತಾವು ಓದಿದ್ದನ್ನ ಕಣ್ಣಿಗೆ ಕಟ್ಟುವಂತೆ ಇತರರಿಗೆ ಹೇಳುವ ಅಪ್ರತಿಮ ಅಭಿವ್ಯಕ್ತಿ  ಇವರಲ್ಲಿದೆ , ಕಲಾತ್ಮಕವಾಗಿ ಹೂಮಾಲೆ ಕಟ್ಟುವುದು , ಸಾಂಪ್ರದಾಯಿಕ ಅಡುಗೆ ಮಾಡುವುದು ಇವರ ಹವ್ಯಾಸ.
ಅದಲ್ಲದೆ ಹಲವು ಮರೆತೇ ಹೋದವು ಅನ್ನುವ ಜನಪದ ಕಥನ ಗೀತೆಗಳು ಇವರ ಸ್ಮ್ರುತಿಯಲ್ಲಿವೆ.  ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಅನುಭವಿಸಿ ಪ್ರೀತಿಯಿಂದ ಮಾಡುವುದು ಇವರ ಹೆಗ್ಗಳಿಕೆ . ಇಂಥಹ ಅಪರೂಪದ ಮನೋಭಾವದ ವ್ಯಕ್ತಿತ್ವ ಕಾಣಸಿಗುವುದು ವಿರಳ