ಶಿವರಾತ್ರಿ ಮುಗಿಯೇತೆಂದರೆ ಸಾಕು…ಪರೀಕ್ಷೆ ತಯಾರಿಗಳು ಆರಂಭ ವಾಗುತ್ತಿದ್ದವು ಮತ್ತೇನು ಬಂದೆ ಬಿಡ್ತು ಯುಗಾದಿ …ಕೆಲವೊಮ್ಮೆ ಎಪ್ರಿಲ್ ೧೦ ರ ನಂತರ ಕೆಲವೊಮ್ಮೆ ಅದಕ್ಕಿಂತ ಮುಂಚೆ…ಸರಿ ಈಗ ಅಜ್ಜಿ ಮನೆ ಪ್ರವಾಸಕಕ್ಕೆ ತಯಾರಿ ಶುರು…
ಅಜ್ಜಿ ಮನೆಯಲ್ಲಿ ಇಗ ಮರದ ತುಂಬಾ ಮಾವು ಹಲಸು,ಅಜ್ಜನ ಕಿಟಿಪಿಟಿ ಒಂದನ್ನು ಬಿಟ್ಟರೆ ….ಅಜ್ಜಿ ಮನೆ ಎಂಬುದು ಅಧ್ಭುತ ಮಾಯಾಲೋಕ…ನನ್ನ ಎಲ್ಲಾ ಅಕ್ಕ ಅಣ್ಣಂದಿರು…ಅಲ್ಲಿ ಬಂದಿರುತ್ತಿದ್ದರು…ಎಲ್ಲಾ ಸೇರಿ ಆ ಎರಡು ತಿಂಗಳು ..ಖುಷಿಯನ್ನು ಲೂಟಿ ಮಾಡುತ್ತಿದ್ದೆವು…ಅದೂ ಮೇ …..ತಿಂಗಳು ಮದುವೆ, ಮುಂಜಿ, ಚೌಲ ….ಒಂದೇ ಎರಡೇ…ಅಜ್ಜಿ ಜೊತೆಗೆ ಹೋಗಲು ನಾ ಮುಂದು ನೀ ಮುಂದು ಎಂದು ಲಡಾಯಿ..ಮಾಡುತ್ತಿದ್ದ ಆ ದಿನಗಳು…
ಅಜ್ಜನಿಗೆ ಮಕ್ಕಳೆಂದರೆ ಅಷ್ಟಕ್ಕಷ್ಟೇ…ಆತ ಯಾವತ್ತೂ ಮೊಮ್ಮೊಕ್ಕಳಿಗೆ ಸಲಿಗೆ ಕೊಟ್ಟಿರಲಿಲ್ಲ…ನಮಗೂ ಅವ ದೊಡ್ಡ ಪ್ರತಿಸ್ಪರ್ಧಿಯಂತೆ… ಭಾಸವಾಗುತ್ತಿದ್ದ …ಬೇಕಂತಲೇ ಅವನಿಗೆ ತೊಂದರೆ ಕೊಡುತ್ತಿದ್ದೆವು…ಆ ದಿನ ಬಾಯಿರಿಗಳ ಮನೆತನಕ ಶಾರ್ಟ್ ಕಟ್ನಲ್ಲಿ ಹೋಗಲು ಹೋಗಿ ಮರದ ಬೇರಿಗೆ ಎಡವಿ ಮೂತಿ ಚಚ್ಚಿ ಕೊಂಡು ಆಸ್ಪತ್ರೆ ಸೇರಿದ ಅಜ್ಜ…ಇನ್ನೆರಡು ದಿನ ಬಿಟ್ಟು ಬರಲಿ ಎಂದು ಆಶಿಸುತ್ತಿದ್ದ ಆ ದಿನಗಳು….
ಘಂಟೆ ಒಂದಾಯಿತು ….ಈಗ ಬಸವ ಅವನ ಉಷಾ ಐಸ್ ಕ್ರೀಮ್ ಡಬ್ಬಿ ತಳ್ಳಿಕೊಂಡು ಅಷ್ಟು ದೂರದ ಕುಂದಾಪುರದಿಂದ ಬರುವ ಸಮಯ,,,,ಬೆಲ್ಲದ ಕ್ಯಾಂಡಿಯ ಮೇಲಿನ ಶಾವಿಗೆಯನ್ನು ನೆನೆದು ಕುಳಿತಲ್ಲೇ ಕುಪ್ಪಳಿಸಿದ…ಆ ದಿನಗಳು…
ಅಜ್ಜಿ ಮನೆಯ ದನಗಳಿಗೂ ನಮಗೂ ಅವಿನಾಭಾವ ಸಂಬಂಧ…ವಾನರ ಸೇನೆಯೊಂದಿಗೆ ಮೇಯಲು ಹೊರಡುವ ಅವಕ್ಕೂ ಎಷ್ಟು ಉತ್ಸಾಹ…ನಮಗೆ ಅವಕ್ಕಿಂತ ಹೆಚ್ಚು ಖುಷಿ ಕಾರಣ ಅಲ್ಲಿ ಹೊಳೆಯಲ್ಲೂ ಮುಳುಗಿ ಮೀಯುವ ತುಡಿತ….ಹಾಗೆ ನೀರಾಟದಲ್ಲಿ ನಿರತರಾದಾಗ ದನಗಳು ಎಲ್ಲಿ ಹೋದವೆಂದು ತಿಳಿಯದೆ ಹುಡುಕುತ್ತಿದ್ದ …. ಆ ದಿನಗಳು….
ಕುಟುಂಬದ ಹಿರಿಯ ದಂಪತಿಗಳಾದ ಅಜ್ಜ ಅಜ್ಜಿಯರನ್ನು ಭೇಟಿಯಾಗಲು ಬರುತ್ತಿದ್ದ ದೂರದೂರಿನ ನೆಂಟರು..ಅವರು ಹೋಗುವಾಗ ಕೊಡುತ್ತಿದ್ದ ಆ ಕನಕಾಂಬರ ಬಣ್ಣದ ನೋಟು….ಅದನ್ನು ಉಳಿದವರಿಗೆ ತೋರಿಸಿ ಹೊಟ್ಟೆ ಉರಿಸುತ್ತಿದ್ದ ಆ ದಿನಗಳು….
ದೈವದ ಪೂಜೆಗೆ ಹೋದಾಗ ಭಟ್ಟರು ಕೊಡುತ್ತಿದ್ದ ಸಿಂಗಾರ ಹೂ ವನ್ನು ಲೆಕ್ಕಮಾಡಿ ಒಳ್ಳೆಯದೋ ಕೆಟ್ಟದ್ದೋ ….ಎಂದು ಭವ್ಯ ಭವಿಷ್ಯ ವನ್ನು ತಮ್ಮ,ತಂಗಿಯನ್ದಿರಿಗೆ ಹೇಳುವ ಆ ದಿನಗಳು….ನಾಗದೇವರ ದರ್ಶನ ಬಂದಾಗ …ಭವಿಷ್ಯ ನುಡಿಯುತ್ತಿದ್ದರು….ತಪ್ಪಾದರೆ ಹೇಳುತ್ತೀದ್ದರು…ಆಗೆಲ್ಲ ಏನೋ ಹೆದರಿಕೆ…ಎಲ್ಲ್ಲಿ ಪಾತ್ರಿ..ಮುಟ್ಟಾದವರನ್ನು ಮುಟ್ಟಿ ಸ್ನಾನ ಮಾಡದ ಹುಡುಗಿ ಇಲ್ಲಿದ್ದಾಳೆ ಎಂದು ಹೇಳಿ ಬಿಟ್ಟರೆ ಎಂದು ಅಂಜುತ್ತ …ದೇವರೇ ಕಾಯ್ಯಪ್ಪ ಎಂದು ಅದೇ ನಾಗದೇವರಿಗೆ ಬೇಡಿ ಕೊಳ್ಳುವ ಆ ದಿನಗಳು….
ಹಳೆ ಬೆಟ್ಟಿಗೆ ಹೋಗಿ ರಂಗೋಲಿ ಪುಡಿಯಂಥ ನುಣುಪಿನ ಮರಳನ್ನು ತುಂಬಿಕೊಂಡು ಬಂದು ಹಾಗೆ ಬರುವಾಗ ಹಾಡಿಗೆ ಹೊಕ್ಕು ಕಾಡು ದಾಲ್ಚೀನಿ ಎಲೆಗಳನ್ನು ಸೇರಿಸಿ ತಂದಾಗ…ಚಿಕ್ಕಿ ಹೇಳಿದ ಹಾಡಿ ದೆವ್ವದ ಕತೆ ಕೇಳಿ ಜ್ವರ ಬಂದು ಮಲಗಿದ ಆ ದಿನಗಳು…
ಆನೆಗುಡ್ಡೆ ಮೂದ್ಗಣಪತಿ ಗೆ ಒಡೆಸಿದ ಕಾಯನ್ನು ಒಣಗಿಸಿ ಎಣ್ಣೆ ಮಾಡಿ ತಂದಾಗ ….ಆ ಕೊಬ್ಬರಿ ಹಿಂಡಿಯನ್ನು ಕದ್ದು ಕದ್ದು ಮೆದ್ದು,,ಗಂಟಲು ನೋವು ಬರಿಸಿಕೊಂಡ ಆ ದಿನಗಳು….ಮರದಿಂದ ಬಿದ್ದು ಗದ್ದ ಒಡೆದುಕೊಂಡ ಅಣ್ಣನಿಗೆ ಏನಾಯಿತೋ ???ಅಂತ ಕೇಳದೆ ಹೆದರಿ ಓಡಿ ಬಂದ ಆ ದಿನಗಳು..
ಬೆಣಸು,ಮಡಕೆ ಹಣ್ಣು,ಪಿರಗಿ,ಚಿಪ್ಪಲ್ಗೆಂಡೆ ಅಂಥ ಅಪರೂಪದ ಕಾಡು ಹಣ್ಣುಗಳನ್ನು ಆಯಲು ಹೋಗಿ …ದಾರಿ ತಪ್ಪಿ ಕಾಡಲೆದ ದಿನಗಳು….ಚಿಕ್ಕಮ್ಮನ ಕತೆಗಳಿಗೆ ತಣ್ಣನೆ ತೆರೆದು ಕೊಳ್ಳುತ್ತಿದ್ದ ರಾತ್ರಿಗಳು…ಮತ್ತೆ ಗಂಜಿ ಊಟದೊಂದಿಗೆ ಮಾವಿನ ಹಿಂಡಿ,ತಂಗಳು ಕುಚ್ಚಲಕ್ಕಿ ಅನ್ನದೊಂದಿಗೆ ಅಪ್ಪೆ ಮಿಡಿ ಉಪ್ಪಿನಕಾಯಿಯ ಆ ಅವರ್ಣನೀಯ ರುಚಿಯನ್ನು ಮೊದಲಿಗೆ ಉಂಡ ಆ ದಿನಗಳು……
ಶಾಲೆ ಶುರುವಾಗುವ ಎರಡು ದಿನ ಮೊದಲು………………………………….
ಅಮ್ಮ ಬಂದು ಕರೆದು ಕೊಂಡು ಹೋಗುವಲ್ಲಿಗೆ ಮುಗಿಯುವ ನನ್ನ ಬಾಲ್ಯದ ವೈಶಾಕದ ದಿನಗಳು…..
ಎಲ್ಲಿ ಹೋದವು ಈ ವೈಶಾಖದ ದಿನಗಳು…
ಎಲ್ಲಿ ಹೋದವು ಈ ವೈಶಾಖದ ದಿನಗಳು…
ಈಗ ..ಏನಿಲ್ಲ ನಾವು ಅನುಭವಿಸಿದ ಖುಷಿಯನ್ನು ನೆನೆಪಿನ ಬುಟ್ಟಿಯಿಂದ ತೆಗೆದು ನೋಡಿ ನೋಡಿ ಮುತ್ತಿ ತಟ್ಟಿ ಮತ್ತೆ ಹಾಗೆ ಇತ್ತಿಡಬೇಕು..ಈಗಿನ ವೈಶಾಕಗಳು,,,,ವೆಕೇಶನ್ ಕ್ಲಾಸ್ ಗಳಲ್ಲೋ…ಮುಂಬರುವ ತರಗತಿಯ ಪಾಠಗಳನ್ನು ಕಲಿಯುವುದರಲ್ಲೋ …ಕಳೆದು ಹೋಗುತ್ತಿವೆ…ಅಜ್ಜಿ ,ಮತ್ತು ಅಜ್ಜಿ ಮನೆ ಎಂಬ ಎರಡು ಮಧುರ ಪದಗಳು ನಮ್ಮ ಮಕ್ಕಳ ವರ್ತಮಾನದಿಂದ ನಾವೇ ಅತಿ ನಿಷ್ಕರುಣೆಯಿಂದ ಎತ್ತಿಟ್ಟಿಬಿಟ್ಟಿದ್ದೇವೆ…
ದೂರದೂರಿನ ಪ್ರವಾಸ ಅಲ್ಲದಿದ್ದರೂ ಸರಿ ನಮ್ಮ ಮಕ್ಕಳಿಗೆ ನಾವು ಅನುಭವಿಸಿದ ಈ ಸುಮಧುರ ಸುಂದರ ವೈಶಾಖದ ದಿನಗಳನ್ನು ಅನುಭವಿಸಲು ಬಿಡೋಣ…ಅವರ ಬಾಲ್ಯದೊಂದಿಗೆ ನಾವು ಮತ್ತೆ ಮಕ್ಕಳಾಗೋಣ ….
ದೂರದೂರಿನ ಪ್ರವಾಸ ಅಲ್ಲದಿದ್ದರೂ ಸರಿ ನಮ್ಮ ಮಕ್ಕಳಿಗೆ ನಾವು ಅನುಭವಿಸಿದ ಈ ಸುಮಧುರ ಸುಂದರ ವೈಶಾಖದ ದಿನಗಳನ್ನು ಅನುಭವಿಸಲು ಬಿಡೋಣ…ಅವರ ಬಾಲ್ಯದೊಂದಿಗೆ ನಾವು ಮತ್ತೆ ಮಕ್ಕಳಾಗೋಣ ….