Tuesday, June 5, 2012

ಊರ ಮಳೆ,,ಮತ್ತದರ ಸುತ್ತ...




ಈಗ ಅಲ್ಲಿ..
ಮಳೆ ಶುರುವಾಗಿದೆ .
ಇಲ್ಲಿ ನಾನು ನೆನಪುಗಳ ಕಂಬಳಿ ಹೊದ್ದು
ಮನಸ ಕಾಯುಸುತ್ತಿದ್ದೇನೆ 

ಸಂತೆಯಲ್ಲಿ  ೨೦ ರುಪಾಯಿಯ
ನೀಲಿ ಬೆಲ್ಟಿನ 
ಪ್ಯಾರಗನ್ ನಂತೆ ಕಾಣುತ್ತದೆಂದು ತೆಗೆದುಕೊಂಡ ಚಪ್ಪಲಿ
ಹಸಿರು ಬಣ್ಣದ ಯುನಿಫಾರ್ಮ್ ಮೇಲೆ 
ಫ್ರೀಯಾಗಿ ಇತ್ತ ಕೆಮ್ಮಣ್ಣಿನ ಸಂಡಿಗೆ..
ಮರೆಯಾಲಾದೀತೇ??

ಸೋಮವಾರಕ್ಕು ಈ ಮಳೆಗೂ ಅದೇನು ಅನ್ಯೋನ್ಯತೆ 
ಸಂತೆಯೆಲ್ಲ ಕಪ್ಪು ಬಣ್ಣದ ಪುಟ್ಟ ಪುಟ್ಟ ತೇರು
ಆ ತೇರ ಕೆಳಗೆ ಬದನೆ ,ಬಟಾಟೆ 
ಮಾರಲು ಕುಳಿತ ಆ ಯವ್ವನ ಗಲ್ಲದ ಮೇಲಿದ್ದ ಹನಿಗಳು 
ಮಳೆನೀರೋ ಕಣ್ಣೀರೋ ????
ಹಾಗೊಂದು ಪ್ರಶ್ನೆಗೆ ಉತ್ತರವಿರದು..

ಸಂತೆ ದಾರಿಯಲಿ  ಕುಳಿತ 
 ಬುಟ್ಟಿ ಯಿಂದ ಇಣುಕುವ 
ಮೆಣಸು,ಚವಳಿ ಅಗೆಗಳು..
ಕಬ್ಬಿಣ ಮಾರುವ ಹುಡುಗನ ಮೆತ್ತಗಿನ ನಜರು  ,
ಮಡಿಕೆ ಮಾರಲು ಕುಳಿತ ಆ ಪುಟ್ಟ ಹುಡುಗಿ ಮೇಲೆ

ಬೆನ್ನಿಗೆ ಹಾಕಿಪ ಪಾಟೀಚೀಲದಿಂದ
ಹೊಸ ಪಟ್ಟಿ ,ಪುಸ್ತಕ ತೊಯ್ದ ಘಮ ..
ಆಘ್ರಾನಿಸಿದಷ್ಟು ಹಿತ.

ಒಣಗದ ನೀರ್ಜೀವ ಬಟ್ಟೆಗಳ ಮೇಲೆ 
ಅಮ್ಮನ ಸಹಸ್ರಾರ್ಚನೆ..
ಅವು ನಮ್ಮಂತೆ..ಕೇಳಿ ಸುಮ್ಮನಿರುತ್ತವೆ..
ಒಣಗುವುದಿಲ್ಲ..

 ಡೇರೆ ಗಡ್ಡೆ  ಚಿಗುರದು,,,ಜವಳು ಬಂದಿದೆ ...
ಅರಶಿನ ಎಲೆಗಳು ಪಂಚಮಿ ಹಬ್ಬದೊಳಗೆ 
ಚಿಗುರಿದರೆ ಸಾಕು..
ಎದುರುಮನೆಯವರು ಅಣಬೆ ತಿಂದರೋ ಏನೋ..
ಈ ಬಾರಿ ಕಳಲೆ ಸಿಗುತ್ತೋ ಇಲ್ವೋ 
ಮರಕೆಸ ಹೋದಸಾರಿ ಇದ್ದ ಮರದಲ್ಲೇ ಚಿಗುರಿದ್ರೆ ಪುಣ್ಯ..
ಈ ಬಾರಿ ದಿನಸಿಗಿಂತ ಆಸ್ಪತ್ರೆ ಬಿಲ್ಲೆ ಹೆಚ್ಚು ಆಗುತ್ತೆ,,
ಈ ಥರ ಮಳೆಲಿ ನೆಂದು ಬಂದರೆ 
ಹಾಳಾದ್ ಮಳೆ..
ಮಕ್ಕಳು ಶಾಲೆಯಿಂದ ಬರೋವಾಗ್ಲೆ ಬರುತ್ತೆ..

ಯಾರೋ ಹೊಸ ಹುಡುಗಿ..
ಹಳದಿ ಬಣ್ಣದ ಲಂಗ 
ಮೇ ಫ್ಲವರ್ ಜೂನ್ ನಲ್ಲಿ ಅರಳಿದಂತಿದೆ.
ಇವಳೇ ಇರಬಹುದ ಆಕೆ??ನನ್ನ ಕನಸಿನ  ಹುಡುಗಿ ,,,
ಕಾಲೇಜ್ ಮೆಟ್ಟಿಲೇರಿದ 
ಜಸ್ಟ್ ಪಾಸು ಹುಡುಗನ ತಲೆಯಲ್ಲಿ 
ಹಳದಿ ಹಳದಿ..ಹೊರಗೆ ಹನಿಯುವ ಹೂ ಮಳೆ 

ಆಕೆ ,,
ಛೇ ಆ ಲೆಕ್ಚರರ್ರು ಅದ್ಯಾಕೆ ಅಷ್ಟು ಚಂದ..
ಬೇಕಂತಲೇ ಪೆನ್ನು ಮರೆತು ಬರ್ತಾಳೆ..
ಇರುವದ್ದಕ್ಕಿಂತ ಸ್ಮಾರ್ಟ್ ಆಗಲು ತುಡಿಯುತ್ತಾಳೆ
ಆಕೆ ಕೊಡೆ  ತರದ ದಿನ ,ಲೆಕ್ಚರರ್ ಕೊಡೆ ತಂದದಿನ 
ಅವ ತನ್ನ ಹಿಂದೆ ಬರುವಾಗ ಬರಬಾರದೇ ಈ ಮಳೆ ...
ಆ ದಿನ ..ಬರುತ್ತದೆ..ಮಳೆ..
ಆತ .. ಕರೆದು ಇರುತ್ತಾರೆ..
ಎಂದು ಇಲ್ಲದ ಮುದ್ದಿನಿಂದ ಅಪ್ಪ ಬೈಕ್ ತಂದು 
ಪಕ್ಕದಲ್ಲಿ ನಿಲ್ಲಿಸಿ , ಕೂತ್ಕೋ  ಅಂತಾರೆ..

ಹಸಿ ಮಣ್ಣ ವಾಸನೆ..
ಬಟ್ಟೆಗೂ ಹಸಿ ವಾಸನೆ..
ಬಾಡಿ ಸ್ಪ್ರೇ ಹೋಗಿ ರೂಂ ಪ್ರೆಷ್ನರ್,
ಹಾಕಿದರು ಹೋಗದು..
ದೇವರೇ ದಯವಿಟ್ಟು ಈ ತಿಂಗಳನ್ನು 
ಸ್ಕಿಪ್ಪ್ ಮಾಡು ಶಾಪ ಕೊಡಬೇಡ..
ಎಂದು ಬೇಡಿದಷ್ಟು 
ಬೇಗ ಬರುತ್ತದೆ ಅದು..ಅಭ್ಯಾಗತನಂತೆ...

...ನೆನಪು ಗಳು ನಿಲ್ಲುತ್ತಿಲ್ಲ..
ಇಲ್ಲಿನ ಮಳೆಗೆ ಊರಿನ ಮಳೆಯ ಚಲುವಿಲ್ಲ..
ಅಂದರೆ,, ಮಳೆಯಲ್ಲೂ ಎಂಥ ಚಲುವು ???
ಎಂದು ಕೀಟಲೆ  ಮಾಡಿ ನಗುವ ಇವರ 
ಕುರಿತು ಬರೆದ  ಅದೆಷ್ಟೋ ಪ್ರೇಮ ಪತ್ರಗಳು,
ಮಲ್ಹಾರ ರಾಗ ಬಳಗ 
ಹಳೆಮನೆಯ ಹಿತ್ತಲಲ್ಲಿ  ಕಹಿ ಕಂಚಿ ಹೂವಿನ ಕಂಪು
..ಬಚ್ಚಲ ಹಂಡೆಗೆ ಹಾಕಿದ ಹಸಿ ಸೌದೆ ..
ಗೆಣಸು,ಹಲಸ ಹಪ್ಪಳ ಸುಟ್ಟ ವಾಸನೆ..


ಹೀಗೇ ....
ನನ್ನ ನೆನಪುಗಳ ಪರಿಷೆ ಸಾಗುತ್ತಲೇ ಇರುತ್ತದೆ...


(ಚಿತ್ರ ಕೃಪೆ-ಇಂಟರ್ನೆಟ್ )

ಮದರಂಗಿಯಲ್ಲಿ .....




ಮದರಂಗಿ ಹೆಸರು ಕೇಳಿದ ತಕ್ಷಣವೆ ಹೆಂಗಳೆಯರ ಮೊಗದಲ್ಲೊಂದು ಕಿರುನಗೆ ಅರಳದೆ ಇರದು. ಕೈಗೆ ಮೆಹೆಂದಿ ಹಚ್ಹಿಕೊಂಡು ಮಲಗಿದ ರಾತ್ರಿ ಕನಸಿನಲ್ಲೆಲ್ಲ ಮದರಂಗಿಯ ಗುಂಗು..ಮದುಮಗಳ ಕೈಗೆ ಹಚ್ಚಿದ  ಮದರಂಗಿ ಬಣ್ಣ ಪಡೆದಷ್ಟು ಗಂಡನಿಗೆ ಹೆಂಡತಿಮೇಲೆ ಪ್ರೀತಿ ಹೆಚ್ಚಂತೆ ,ಅಕ್ಕ ಪಕ್ಕ ಕುಳಿತ ಗೆಳತಿಯರ ಈ ಮಾತು ಇನ್ನು ಟೆನ್ಶನ್ ಹೆಚ್ಚಿಸುತ್ತದೆ.ಬಣ್ಣ ಬರಲಿ ಅಂದು ಮನೆದೇವರಿಗೆ ಹರಕೆ ಹೊತ್ತ ವಧುಗಳು ಇದ್ದಾರೆ,ಅದ್ಹೇಗೆ ಹಾಕಿದರು ಸ್ವಲ್ಪವಾದರೂ ಸರಿ ತನ್ನ ಬಣ್ಣ ಬಿದಡದೆ ಉದುರದ ಮದರಂಗಿ ತನ್ನ ಒಣಗಿದ ಬದುಕಿನ ನಂತರವು ಬಣ್ಣ ಉಳಿಸಿಕೊಂಡು  ತಿಳಿಸುವ ಮೌಲ್ಯ ಅರಿತವರಿಗಷ್ಟೇ ಅರ್ಥ ವಾಗುತ್ತದೆ.ಅಂಥ ಮದರಂಗಿಯ ಕೆಂಪು ಕಂಪಿನೊಂದಿಗೆ ಕೆಲಕಾಲ ಕಳೆಯೋಣವೇ??

ನಮ್ಮದಲ್ಲ ಆದರೂ ನಮ್ಮದೇ..

ಲಾಸಾನಿಯ ಎನರ್ಮಿಸ್ ಎಂಬ  ಸಸ್ಯ  ಶಾಸ್ತ್ರೀಯ ಹೆಸರನ್ನು ಹೊಂದಿದ ಮದರಂಗಿ ಭಾರತದ ಕಲೆ ಎಂದೇ ಜಗತ್ತಿನಾದ್ಯಂತ ಹೆಸರು ಮಾಡಿದೆ,೫೦೦೦ ವರ್ಷ ಕ್ಕೂ ಹೆಚ್ಹಿನ ಇತಿಹಾಸ ಹೊಂದಿರುವ  ಮದರಂಗಿಯ ಮೂಲ ಆಫ್ರಿಕ ,ಮದರಂಗಿಯ ಬಳಕೆಯನ್ನು ಮೊದಲು ಮಾಡಿದ್ದು ಮಮ್ಮಿಗಳ ಮೇಲೆ,ಪುನರ್ಜನ್ಮ, ಮರಣ ನಂತರದ ಜೀವನದ ಬಗ್ಗೆ ಅತೀವ ವಿಶ್ವಾಸ ಹೊಂದಿದ್ದ ಎಜಿಪ್ತಿಯನ್ನರು ಮದರಂಗಿಯನ್ನು ಮಮ್ಮಿಗಳ ಉಗುರು ರಂಗಾಗಿ ಬಳಸುತ್ತಿದ್ದುದು ದಾಖಲೆಗಳಲ್ಲಿದೆ.

ಕಾಲಕ್ರಮೇಣ ಮದರಂಗಿ ಮಧ್ಯ ಪೂರ್ವ ಏಶಿಯ ,ಉತ್ತರ ಆಫ್ರಿಕ ದಂತಹ ಉಷ್ಣ ಹವಾಮಾನ ಹೊಂದಿದ ದೇಶಗಳಲ್ಲಿ ಪಸರಿಸಿತು ,ಕ್ರಿ ಶ ೭೧೨ ರ ಹೊತ್ತಿಗೆ ಫರ್ಶಿಯನ್ನರು ತಮ್ಮೊಂದಿಗೆ ಮದರಂಗಿಯನ್ನು ಹೊತ್ತು ತಂದು  ಭಾರತಕ್ಕೆ ಪರಿಚಯಿಸಿದರು .ಭಾರತದ ಶ್ರೇಷ್ಠ ಜ್ಞಾನ ಆಯುರ್ವೇದದಲ್ಲಿ ಮದರಂಗಿಯ ಔಷದೀಯ ಉಪಯೋಗಗಳನ್ನು ಹೇಳಲಾಗಿತ್ತಾದರೂ ಸೌಂದರ್ಯ ವರ್ಧಕವಾಗಿ  ಮದರಂಗಿ ನಮಗೆ ಪರಿಚಯಿಸಿದ್ದು ಪರ್ಷಿಯನ್ನರು .ಅದರ ಗುರುತಾಗಿ ಇಂದಿಗೂ ಮದರಂಗಿಯ ಚಿತ್ತಾರಗಳಲ್ಲಿ ಪಾಸ್ಲೆ ಎಂಬ ಪರ್ಷಿಯಾದ ಚಿತ್ತಾರ ಬಳಕೆಯಲ್ಲಿದೆ.. ಹೀಗೆ  ಜನಾನದಿಂದ  ಜನಸಾಮಾನ್ಯರ ತನಕ  ಮದರಂಗಿ ನಡೆದು ಬಂತು .
ಸುಮ್ಮನೆ  ಅಲ್ಲ ಎಲ್ಲದಕ್ಕೂ ಇದೆ ಅರ್ಥ

ಮೊದಲೆಲ್ಲ ಎಲ್ಲಿತ್ತು ಈ ಮೆಹೆಂದಿ ಕೊನ,ಮಾರ್ಕರ್ ಗಳು ?ಹಿಡಿಸೂಡಿಯ ತುದಿಯಲ್ಲಿ ಸವೆದು ಚೂಪಾದ ಕಡ್ಡಿಯೇ ಮದರಂಗಿ ಕುಂಚ,ನನ್ನ ಅಮ್ಮನ ಕಾಲದಲ್ಲಿ ಕೈಗೆ ಮದರಂಗಿ ಹಚ್ಚಿ  ಅದಕ್ಕೆ ಬಾಲೆ ಎಲೆ ಸುತ್ತಿ ಇಡುತ್ತಿದ್ದರು, ಎಂಬುದು ಅಜ್ಜಿಯ ಉವಾಚ ,ಆದರೆ ಮದರಂಗಿಯ ಚಿತ್ತಾರಗಳಿಗೂ   ಒಂದು ಆಶಯವಿದೆ.

ಮೊಗ್ಗು-ಹೊಸ ಬದುಕು,ಪ್ರೀತಿ
ಹೂವು - ಫಲವಂತಿಕೆಯ  ಸಂಕೇತ
ದೇವರು ಮತ್ತು ಧಾರ್ಮಿಕ ಚಿನ್ಹೆ ಸಂಕೇತಗಳು -ಆಯುರಾರೋಗ್ಯ ,ಕೆಟ್ಟ ದೃಷ್ಟಿಯಿಂದ ರಕ್ಷಣೆ  ಪಡೆಯಲು
ಮಂಡಲಗಳು -ಬುದ್ಧಿವಂತಿಕೆ ,ಅದ್ಯಾತ್ಮ,ತೆರೆದ ಮನದ ದ್ಯೋತಕ
ನವಿಲು ಮತ್ತಿತರ ಪ್ರಾಣಿ ಪಕ್ಷಿಗಳು - ನಿಸರ್ಗದೊಂದಿಗೆ ಮನುಷ್ಯನ ಸಾಮರಸ್ಯ ,ಮತ್ತು ಒಳಿತನ್ನು ಸೂಚಿಸುತ್ತವೆ.
ರಂಗಿನ ಗುಂಗು

ಮಳೆಗಾಲ ಶುರುಅಯ್ತು ಅಂದ ಕೂಡಲೇ ಚಿಗುರುವ ಕಡುಹಸಿರು ಎಲೆ ಗೆಂಪು ಮದರಂಗಿ ಚಿಗುರು ಎಲೆಗಳು ಉತ್ತಮ ಎಂಬುದು ಅನುಭವದ ಮಾತು,ಆ ಕಾರಣದಿಂದಲೇ ಅಷಾದ ಮಾಸದಲ್ಲಿ ,ಗೌರಿ ಹಬ್ಬದ ಸಂದರ್ಭದಲ್ಲಿ ಮದರಂಗಿಯನ್ನು ಹಾಕಿಕೊಳ್ಳುವ ಸಂಪ್ರದಾಯ ಇನ್ನು ಜಾರಿಯಲ್ಲಿರುವುದು,ಮದರಂಗಿ ವರ್ಷದಲ್ಲೆರಡು ಬಾರಿ ತನ್ನೆಲೆಗಳನ್ನು ಚಿಗುರಿಸಿಕೊಳ್ಳುತ್ತದೆ,ಇನ್ನು ಗೋರಂಟಿ ಎಲೆಗಳನ್ನು ಒಣಗಿಸಿ ಪುಡಿಮಾಡಿದ ನಂತರ ಅದಕ್ಕೆ ಕೆಲವು ವಸ್ತುಗಳನ್ನು ಜೊತೆ ಮಾಡಿದರೆ ಅದರ ಕೆಂಪು ಇನ್ನು ಉಜ್ವಲವಾಗುತ್ತದೆ,
ಸಾಮಾನ್ಯವಾಗಿ  ಚಹಾ ಪುಡಿ ,ನಿಂಬೆ ಹುಳಿ ,ಮಜ್ಜಿಗೆ ಮೊಸರು,ಹುಣಸೆಹಣ್ಣು,ದಾಳಿಂಬೆ ಸೀಪ್ಪೆಯ ಕಷಾಯ ಬೆಂಡೆಕಾಯಿ,ಗುಲಾಬಿ ಎಸಳು,ಕಿತ್ತಲೆಸಿಪ್ಪೆ ,ನೀಲಗಿರಿ ಎಣ್ಣೆ ,ಲವಂಗ ,ಸಾಸಿವೆ ಎಣ್ಣೆ,ಸಕ್ಕರೆ ನೀರು,ಮದರಂಗಿ ಸಂಗಾತಿಗಳು.

ಕೆಲ ಬುಡಕಟ್ಟಿನಲ್ಲಿ ಮದರಂಗಿ ರುಬ್ಬುವಾಗ ಎಂಬೆ ಎಂದು ಕರೆಯಲ್ಪಡುವ ಕೆಂಪು ಇರುವೆಯನ್ನು ಸೇರಿಸುತ್ತಾರೆ,ಆ ಇರುವೆಯಲ್ಲಿರುವ ರಾಸಾಯನಿಕ ಮದರಂಗಿಯ  ಬಣ್ಣವನ್ನು ಇನ್ನು ಹೆಚ್ಚಿಸುತ್ತದೆ,ಇದು ನೈಸರ್ಗಿಕ ನೆಲೆಯಲ್ಲಿ ಅವರು ಪ್ರಯೋಗಿಸಿದ ವಿಧಾನ ಆದರೆ ಇತ್ತೀಚಿಗೆ ಅದೇ ರಾಸಾಯನಿಕವನ್ನು ಮದರಂಗಿಯಲ್ಲಿ ಸೇರಿಸಿ ಕಡಿಮೆ ಸಮಯದಲ್ಲಿ ಹೆಚ್ಹು ರಂಗು ಬರುವಂತೆ ಸಿದ್ದ ಗೊಳಿಸಿದ ಕೊನ ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ
ಇದು ಭಾರತದ ರೀತಿ ಆದರೆ ಆಫ್ರಿಕ ಮತ್ತು ಮಧ್ಯ ಪೂರ್ವ ಎಷಿಯಗಳಲ್ಲಿ  ಯಾಕ ಅಥವಾ ಒಂಟೆಯ ಮೂತ್ರವನ್ನು ಸೇರಿಸುತ್ತಾರೆ.ಇದರಿಂದ ಮದರಂಗಿಯ ಬಣ್ಣ ಗಾಢ  ಗೊಳ್ಳುತ್ತದೆ ಎಂಬುದು ಅವರ ನಂಬಿಕೆ,ವೈಜ್ಞಾನಿಕ ನೆಲೆಯಲ್ಲಿ ಆಯಾ ವ್ಯಕ್ತಿಯ ದೇಹದ ತಾಪಮಾನಕ್ಕನುಗುನವಾಗಿ ಮದರಂಗಿ ತನ್ನ ಕಲೆಯನ್ನು ಉಳಿಸಿ ಬಿಡುತ್ತದೆ,ಉಷ್ಣ ದೇಹ ಪ್ರಕ್ರುತಿಯವರ ಕೈಯ್ಯಲ್ಲಿ ಮದರಂಗಿ ರಂಗು ರಂಗಾಗಿ ಕಂಗೊಳಿಸುತ್ತದೆ,
ಸಿಂಗಾರಕ್ಕಲ್ಲದೆ...

ಮದರಂಗಿ ಕೇವಲ ಪ್ರಸಾಧನ ವಾಗಿ  ಮಾತ್ರ ಹೆಚ್ಹು ಜನರಿಗೆ ಪರಿಚಿತ ,ಮದರಂಗಿಯನ್ನು ಚರ್ಮ ಉದ್ದಿಮೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ,ಜೊತೆಗೆ ಉಣ್ಣೆಗೆ ಬಣ್ಣ ಕೊಡಲು  ಬಳಸುವ ಕೆಲವೇ ನೈಸರ್ಗಿಕ ಬಣ್ಣಗಳಲ್ಲಿ ಮದರಂಗಿಯು ಒಂದು.
ಮದರಂಗಿ ಪ್ರತಿಯೊಬ್ಬರ ಹಿತ್ತಲಲ್ಲಿ ಇರಲೇಬೇಕಾದ ಔಷದೀಯ ಸಸ್ಯ , ಅಂಗೈ ,ಅಂಗಾಲು ಉರಿ ಇದ್ದಾಗ ಮದರಂಗಿಯ ಲೇಪವನ್ನು ಹಾಕಿ ಕೊಂಡರೆ ಬೇಗನೆ ಉಪಶಮನ ಕಾಣಬಹುದು,
ರಿಂಗ್ ವರ್ಮ ಎಂಬ ಚರ್ಮ ವ್ಯಾಧಿಯಲ್ಲೂ ಕೂಡ ಮದರಂಗಿಯ ಲೇಪ ಬಹುಪಯೋಗಿ,
ಕಣ್ಣುರಿ ಮತ್ತು ಬಿಸಿಲಿನಿಂದ ನೆತ್ತಿಯಲ್ಲಿ ಬಿಸಿ ಬಿಸಿ ಆದಂಥ ಅನುಭವ ಆದಾಗಲೂ  ಲೋಳೆಸರ ಮತ್ತು ಮದರಂಗಿಯನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಉಷ್ಣ ಕಡಿಮೆ ಆಗುವುದರೊಂದಿಗೆ ,ಕೂದಲು ಸೊಂಪಾಗಿ ಬೆಳೆಯುತ್ತದೆ.ಮತ್ತು ಇದು ನೈಸರ್ಗಿಕ ಕಂಡಿಷನರ್ ಕೂಡ, ಮಲೆನಾಡು ,ಕರಾವಳಿಯಲ್ಲಿ ಸಂಜೆ ಆಸರೆಗೆ ಮಾಡುವ ಕಶಾಯದಲ್ಲೂ ಸ್ವಲ್ಪ ಮದರಂಗಿ ಸೊಪ್ಪು ಸೇರಿಸುವುದುಂಟು.ತಿಂಗಳ ರಜೆ ಮುಂದೆ ಹೋಗಲು  ಇದರ ಕಷಾಯ ನೈಸರ್ಗಿಕ ಉಪಾಯ 

ಕವಿ ಮತ್ತು ಕೈಗೆಂಪು...

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..
ಹಾಗೆಂದು ಕವಿ ಸುಮ್ಮನೆ ಬರೆದಿಲ್ಲ...ಅದೆಷ್ಟು ಕವಿಗಳಿಗೆ ನಲ್ಲೆಯ ಕೈಗೆಂಪು ನಿದ್ದೆಗೆಡಿಸಿಲ್ಲ ಹೇಳಿ..ಪ್ರಿಯತಮೆಯ ಮದರಂಗಿಯ ಕೆಂಪಿನಲ್ಲಿ ಅದೆಷ್ಟು ಬಂದಿಶ್ ,ಗಜಲ  ಗಳು ಸ್ವರದಲ್ಲಿ ಬಂಧಿಯಾಗಿಲ್ಲ????
ಬಿಹಾಗ ರಾಗದಲ್ಲಿ ಹಾಡುವ ಬಂದಿಶ್ ಒಂದರ   ಶಬ್ಧಗಳು ಹೀಗಿವೆ 
.'' ಲಟ ಉಲಜೆ ಸುಲಜ ಜಾ ಬಾಲಮ
ಮೊರೆ ಹಾತ್ ಮೇ ಮೆಹೆಂದಿ ಲಾಗಿ ಹೈ..''
 ತನ್ನ ಮುಂಗುರುಳ ಸಿಕ್ಕು ಬಿಡಿಸುವ ನೆವದಲ್ಲಿ ನಲ್ಲನ ಸಾಂಗತ್ಯ ಬಯಸುವ  ಈಕೆಗೆ ಮೆಹೆಂದಿಯ ನೆವವೇ ಬೇಕಾಯಿತು..

ಚುರಾಕೆ ಮುಟ್ಟಿಮೆ ದಿಲ್ ಕೋ ಚುಪಾಕೆ ಬೈಟೆ ಹೈ 
ಬಹಾನ ಏ ಹೈ ಕಿ ಮೆಹೆಂದಿ ಲಗಕೆ ಬೈಟೆ  ಹೈ ..
 ಹೀಗೊಬ್ಬ ಶಾಯರ್ ಶಾಯರಿ ಮಾಡಿದರೆ..ಇನ್ನೊಬ್ಬ ತನ್ನ ಮಾಶುಕಳನ್ನು ನೆನಪಿಸಿದ ರೀತಿ ಯಾಕೋ ಭಾಳ ಇಷ್ಟವಾಗಿ ಬಿಡುತ್ತದೆ..

ನಾವ್ ಮೇ ಬೈಟಕೆ ಧೋಯೇಥೆ ಹಾತ್ ಕಭಿ ಉಸನೇ..
ಪೂರೇ ತಾಲಾಬ್ ಮೇ ಮೆಹೆಂದಿ ಕಿ ಮೆಹೆಕ್ ಆಜ್ ಭಿ ಹೈ ...

ಉದ್ಯೋಗವಾಗಿ ಮದರಂಗಿ 

ಮದರಂಗಿಯನ್ನು ಹಚ್ಚಲು ಯಾವುದೇ ಪ್ರಮಾಣಪತ್ರ ಪದವಿಗಳು ಬೇಕಿಲ್ಲ. ಕ್ರಿಯಾಶೀಲತೆ ಮತ್ತು ಸತತ ಅಭ್ಯಾಸ ಮದರಂಗಿ  ಕಲೆಯ ಮೂಲ ಮಂತ್ರಗಳು. ಚನ್ನೈ ನಲ್ಲಿ ನೆಲೆಸಿರುವ  ರಾಜೇಶ್ವರಿ ಮಹೇಶ್ ಎನ್ನುವ ಹೆನ್ನ ಕಲಾವಿದೆ ಹೇಳುವಂತೆ ,ಮದರಂಗಿ ಯ ಉದ್ಯೋಗ ಎಂಬುದು ಬಂಡವಾಳ ಇಲ್ಲದ ಸ್ವ ಉದ್ಯೋಗ ,ಪ್ರತಿ ಕೈಗೆ ಕನಿಷ್ಠ ೧೫೦ ರೂಪಾಯಿಗಳಿಂದ  ಮದುವೆ, ಪಾರ್ಟಿ ಮದರಂಗಿಗೆ  ೧೫,೦೦೦ ರೂಪಾಯಿಗಳ ತನಕ ಅವರು ಚಾರ್ಜ್ ಮಾಡುತ್ತಾರೆ.ಆರ್ಡರ್ ಇಲ್ಲದಾಗಲು ಮದರಂಗಿಯನ್ನು ಅಭ್ಯಾಸ ಮಾಡುತ್ತಿರಬೇಕು ಮತ್ತು ಹೊಸ ಹೊಸ ಆಲೋಚನೆಗಳನ್ನು ಮದರಂಗಿಯ ಮೂಲಕ ಕೈಗಳ ಮೇಲೆ ಚಿತ್ರಿಸಲು ಪ್ರಯತ್ನಿಸಬೇಕು ಎಂಬುದು ಅವರ ದೃಡವಾದ ಮಾತು.
ವಿದೇಶದಲ್ಲೂ ಈ ತಾತ್ಕಾಲಿಕ ಚಿತ್ತಾರ ಕಲೆ ಮದರಂಗಿಯನ್ನು ಬಹುವಾಗಿ ಮೆಚ್ಚುತ್ತಾರೆ ಆದರಿಂದ ,ಇದನ್ನು ಕಲಿತ ಹಲವು ಭಾರತೀಯ ಹೆಣ್ಣುಮಕ್ಕಳು ವಿದೇಶದಲ್ಲಿ ಸ್ವಾವಲಂಬಿ ಆಗಿ ತಮ್ಮ ಸ್ವ  ಉದ್ಯೋಗ  ಸ್ಥಾಪಿಸುವಲ್ಲಿ ಯಶಸ್ವೀ ಆಗಿದ್ದಾರೆ.

ಎಚ್ಚರಿಕೆ ,!!!!!!
ಮದರಂಗಿ ಎಂದಕೂಡಲೇ ಅದರ ಹಿಂದೆ  ಮತ್ತಷ್ಟು ಹೆಸರು ಕೇಳಿ ಬರುವುದುಂಟು,ಕಾಲಿ ಮೆಹೆಂದಿ,ಅನ್ನುವ  ತಲೆಕೂದಲಿಗೆ ಹಚ್ಚುವ ಬಣ್ಣ,ತತಕ್ಷಣ ಬಣ್ಣ ನೀಡುವ ಕೆಲವು ಮೆಹೆಂದಿಗಳು,ಆದರೆ ಇವನ್ನು ಬಳಸುವ ಮುನ್ನ ನೆನಪಿಡಲೇಬೇಕಾದ ಅಂಶವೆಂದರೆ ಮದರಂಗಿ ಎಂಬುದು ಕೇವಲ ಕೆಂಪು ಬಣ್ಣದ ಕಲೆಯನ್ನುಳಿಸುವ ಒಂದು ನೈಸರ್ಗಿಕ ಪ್ರಸಾಧನ , ಇದರಲ್ಲಿ ಬೇರ್ಯಾವ ಬಣ್ಣಗಳು ದೊರಕುವುದಿಲ್ಲ.ಕೃತಕವಾಗಿ ತಯಾರಿಸಲಾಗುವ ಕಾಲಿ ಮೆಹೆಂದಿ.ಬ್ಲಾಕ್ ಹೆನ್ನ ಎಂಬುವ ಪ್ರಸಾಧನದಲ್ಲಿ PPD ಎಂಬ  ರಾಸಾಯನಿಕ  ಇರುವದರಿಂದ ,ಇದರ ಬಳಕೆ ಚರ್ಮ ಸಂಬಂಧಿ ಖಾಯಿಲೆಗಳಿಗೆ ತೆರೆದ ಅಹ್ವಾನ ,ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಮದರಂಗಿಯನ್ನು ಆಯ್ಕೆ ಮಾಡಬೇಕಾದ್ದು ಅನಿವಾರ್ಯ,

ಬೇಲಿಯ ಬದಿಯಲ್ಲಿ ಸುಮ್ಮನೆ  ಹಸಿರು ಕೆಂಪು ಹೊದ್ದು ತನಗೀನು ಗೊತ್ತಿಲ್ಲ ಎಂಬಂತೆ ನಿಂತಿರುವ ಮದರಂಗಿಯ ತನ್ನ ಮುಟ್ಟಿದವರಿಗೆಲ್ಲ ತನ್ನ ಬಣ್ಣವನ್ನು ಕೊಡದೆ ಬಿಡದು.ನಿಸರ್ಗದಲ್ಲಿ ಅದೆಷ್ಟು ಮನಮೋಹಕ ಕೂತುಹಲದ ಸಂಗತಿಗಳಿವೆ..ಅದನ್ನು ಅರಿಯುವ ತವಕ ಹಂಬಲ ನಮಗೆ ಬೇಕಷ್ಟೇ.

Sunday, June 3, 2012

ತರಲೆ ತಮ್ಮನ ಜನುಮದಿನಕ್ಕೆ...



ಪ್ರೀತಿಯ ಆನ್ನು

೪/೦೬/೧೯೯೫ ,ರವಿವಾರ ಬೆಳಗಿನ ಜಾವ ನನಗೆ ಹಾಲ್ನಿದ್ದೆ ,,,ಕನಸಿನಲ್ಲಿ ಚಿಕನ್ ಬಂದಿತ್ತು ,ಏನೋ ಗಡಿಬಿಡಿ ಯಾರೋ ನನ್ನ ಎಬ್ಬಿಸಿ ಒಂದು ಚೀಲ ಕೈಗೆ ಕೊಟ್ಟು ಕಾರ್ ಮೇಲೆ ಕೂಡಿಸಿದದಷ್ಟೇ ಗೊತ್ತು .ಮಧ್ಯ ಅದೆಲ್ಲೋ ಒಂಚೂರು ಎಚ್ಹರ ಅಮ್ಮ ಪಕ್ಕದಲ್ಲಿ ಕುಳಿತಿದ್ದಳು ,ಪಪ್ಪ ಪದೇ ಪದೇ ಆರಾಮಿದ್ದೀಯಲ್ಲ ಅಂತ ಕೇಳುತ್ತಿದ್ದರು , ಆ ಮಾತು ಕೇಳಿ ನನ್ನ ನಿದ್ದೆ ಅದೆಲ್ಲೋ ಹಾರಿ ಹೋಗಿತ್ತು ,ನಾನೂ ಅಮ್ಮನೊಂದಿಗೆ ಆಸ್ಪತ್ರೆಗೆ ಹೊರಟಿದ್ದೆ ಅಮ್ಮನಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು ,ಕಾರು ಕುಂದಾಪುರದ ವಿನಯ ನರ್ಸಿಂಗ್ ಹೋಂ ಹತ್ತಿರ ನಿಲ್ಲುತ್ತಿದ್ದಂತೆ ಅಮ್ಮ ಮೆತ್ತಗೆ ಇಳಿದು  ಲೇಬರ್ ವಾರ್ಡ್ ತನಕ ಸುಮ್ಮನೆ ನಡೆದು ಹೋಗಿದ್ದಳು ಆಗ ಬೆಳಿಗ್ಗೆ ೫.೦೦ ಘಂಟೆ ,

ಪಪ್ಪ,ಆಚೀಚೇ ಓಡಾಡುತ್ತಿರೆ ನಾನೂ ದೊಡ್ಡ ಅನುಭವಸ್ತ ಹೆಂಗಸಿನಂತೆ ನನ್ನ ಕೈಗೆ ಕೊಟ್ಟ ಆ ಚೀಲದೊಂದಿಗೆ ಲೇಬರ್ ವಾರ್ಡಿನ ಬಾಗಿಲಲ್ಲೇ ನಿಂತಿದ್ದೆ.ನರ್ಸಮ್ಮ ಅಮ್ಮನ ಹೆಸರು ಕೂಗಿ ಬಟ್ಟೆ ಕೊಡಿ ಎಂದಾಗಲೆಲ್ಲ ನಾನು, ಹೊರಗೆಲ್ಲೋ ತಿರುಗಾಟಕ್ಕೆ ಹೋಗುವಾಗ ಬಟ್ಟೆ ಅಯ್ತ್ಕೆ ಮಾಡುವರಂತೆ ಅದೋ ಇದೋ ಎಂಬಂತೆ ನೋಡಿ ಅದರೊಲ್ಲೊಂದು ಸೆಲೆಕ್ಟ್ ಮಾಡಿ ಆಕೆ ಕೈಗೆ ಕೊಡುತಿದ್ದೆ,ಆಕೆಗೆ ಕೊನೆಗೊಮ್ಮೆ ರೇಗಿ ಯಾರು ದೊಡ್ಡೋರು ಬಂದಿಲ್ವಾ?ನೀನು ಯಾರು?? ಅಂದಾಗ ನಾನು ಅವರ ಮಗಳು ಎಂದಿದ್ದೆ ಅಷ್ಟೇ.ಯಾಕೋ ನನ್ನನ್ನು ಸಣ್ಣ ಹುಡುಗಿ ಎಂದಿದ್ದೇ  ನನ್ನ ಅಸಮಾಧಾನಕ್ಕೆ ಕಾರಣ ಆಗಿತ್ತು .

೫.೧೫ ಕ್ಕೆ ಅಮ್ಮನ ಹೆಸರನ್ನು ಮತ್ತೆ ಕೂಗಿದರು ನರ್ಸಮ್ಮ ,ಗಂಡು ಮಗು ಅಂದು ಆಕೆ ಒಂದು ನಗುವನ್ನು ಕೊಡದೆ ಮತ್ತೆ ಬಾಗಿಲು ಹಾಕಿಕೊಂಡಳು ,ನಗು ಕಾಣಬೇಕಿತ್ತು ನೀನು ಪಪ್ಪನ ಮುಖದಲ್ಲಿ ,ನನ್ನ ಮುಖದಲ್ಲಿ  ಅಮ್ಮನನ್ನು ಅಷ್ಟು ಬೇಗ ವಾರ್ಡಿಗೆ ತರುವಂತೆ ಇರಲಿಲ್ಲ ಆಕೆಯ ಸ್ಥಿತಿ ,ಶುಭ್ರ ಬಿಳಿ ಪಂಚೆ ತುಂಡನ್ನು ನಿನ್ನ ಸುತ್ತಲು ಕಟ್ಟಿ ಗೊಂಬೆಯಂತೆ ಮಾಡಿ ಪಪ್ಪನ ಕೈಗೆ ಕೊಟ್ಟಿದ್ದರು.ನಂತರ ಲೇಬರ್ ವಾರ್ಡಿನ ಎದುರಿಗಿದ್ದ ಒಂದು ಕೋಣೆಯ ತೊಟ್ಟಿಲಲ್ಲಿ ನಿನ್ನ ಮಲಗಿಸಿದ್ದರು.

ಅಮ್ಮನಿಗಿಂತ ಮೊದಲು ನಾನು ನಿನ್ನ ಎತ್ತಿ  ಕೊಂಡಿದ್ದೆ ,ನಿನ್ನ ತೊಟ್ಟಿಲ ಪಕ್ಕ ನಿಂತಿದ್ದೆ.ಇನ್ನು ಬೆಳಕು ಮೂಡಿರಲಿಲ್ಲ ,'ಅಜ್ಜಿ ರಾತ್ರಿ ಮಲಗುವಾಗ ಹೇಳುವ ಚೌಡಿ ಪಿಶಾಚಿಗಳ ಕಥೆಗಳು,ಅವು ನವಜಾತ ಶಿಶುವನ್ನು ತಿನ್ನಲು ಬರುವುದು ಅದೆಲ್ಲ ನೆನೆದು ನಿನ್ನ ತೊಟ್ಟಿಲ ಬಿಟ್ಟು ಆಚೀಚೆ ಸರಿದದಲಿಲ್ಲ..ಬಿಳಿ ಸೀರೆ ಉಟ್ಟ ಯಾವ ನರ್ಸಮ್ಮ ಬಂದರೂ ನಾನು ಅವರ ಕಾಲು ನೋಡುತಿದ್ದೆ..ಮನದಲ್ಲೇ ಮಂತ್ರ ಶುರು ವಾಗುತ್ತಿದ್ದವು,ನೀನು ನಗುತ್ತಿದ್ದಿ ಗೊತ್ತು ,,ಆದರೆ ಅಮ್ಮವಾರ್ಡಿಗೆ   ಬರುವ ತನಕ ನಿನ್ನ ಸಂಪೂರ್ಣ ಜವಾಬ್ದಾರಿ ನನ್ನಮೇಲಿತ್ತು,ಅಮ್ಮ ತಿಂದ ಎಲ್ಲಾ ಕಲ್ಲಂಗಡಿ ಹಣ್ಣುಗಳು ನಿನ್ನ ಗಲ್ಲ ಸೇರಿದ್ದವು ,ಅದೆಷ್ಟು ಕೆಂಪಗಿದ್ದೆ,,ನಮ್ಮ ಮನೆಯಲ್ಲಿ ಆ ವರೆಗೆ ಬೆಳ್ಳಗೆ ಎಂಬ ಕಾಪ್ಮ್ಲಿಮೆಂಟ್ ಸಿಗುತ್ತಿದ್ದುದು ನನಗೆ ಮಾತ್ರ, ಈಗ ನಿನ್ನ ಮುಂದೆ ನಾನು ಏನು ಅಲ್ಲ ,,ಸೇಬಿಸಂತೆ ಇದ್ದೆ ನೀನು,

ಬೆಳಕು ಹರಿಯುತ್ತಿದ್ದಂತೆ ,ಆ ಕೋಣೆಯಲ್ಲಿ ಆಚೀಚೇ ಓಡಾಡುವವರು ಜಾಸ್ತಿ ಆದರು,ನಿನ್ನನ್ನು ೨ ಘಂಟೆಗಳ  ಹಿಂದೆ ಜನಿಸಿದ ಕೂಸೆಂದು ಯಾರು ನಂಬುತ್ತಿರಲಿಲ್ಲ.ಅಷ್ಟು ಚಂದಗಿದ್ದೆ ನೀನು,ಅಮ್ಮ ವಾರ್ಡಿಗೆ ಬಂದಳು,ಅಮ್ಮನಿಗೆ ಪಕ್ಕದಲ್ಲಿದ್ದ ಉಷಾ ಹೋಟೆಲಿನ ಚಹಾ ,ಕಾಫಿ  ತಿಂಡಿ ತೀರ್ಥದ ಸಪ್ಲಾಯರ್ ನಾನೆ ಆದೆ,ನಿಜ ಹೇಳ್ತೀನಿ ಕೇಳು ಆ ಸಮಯವನ್ನು ಅದೆಷ್ಟು ಎಂಜಾಯ್ ಮಾಡಿದ್ದೆ ನಾನು,ಮೀನು ತಿನ್ನದ ಅಮ್ಮನಿಗಾಗಿ,ತರಕಾರಿ ಊಟ ಅಜ್ಜಿ ಕಳಿಸುತ್ತಿದ್ದರು ಸಾವಿರಾರು  ಪಥ್ಯ  ಬೇರೆ .ನಾನು ಪಕ್ಕದ ರೂಮಿನವರೊಂದಿಗೆ ಅದ್ಯಾವುದೇ ಮೀನು ಹೋಟೆಲಿನ ಊಟ ತಗೊಂಡು ಬಂದಿದ್ದೆ ಅದೇನೋ ಖುಷಿ ನೀನು ಹುಟ್ಟಿದ ಗಳಿಗೆಯಿಂದಲೇ ಆಸ್ಪತ್ರೆ ಅಂದರೆ ಪಿಕ್ನಿಕ್ ಸ್ಪಾಟ್ ಆಗಿತ್ತು. ಇನ್ನು ರಾಖಿ ಹಬ್ಬ ಬಂದಾಗ ನಾವು ಅನಾಥ    ಪ್ರಜ್ಞೆ ಅನುಭವಿಸಬೇಕಿಲ್ಲ  ನಮಗೂ ಪುಟ್ಟ ತಮ್ಮ ಬಂದಿದಾನೆ ಎಂಬ ಖುಷಿ ನಿನ್ನಿಬ್ಬರ ಅಕ್ಕಂದಿರದ್ದು ..

ನೀನು ಮನೆಗೆ ಬಂದೆ ,ಪಪ್ಪ ಕುಂದಾಪುರದ ಆ ವಿನಯ ನರ್ಸಿಂಗ್ ಹೋಂ ನಿಂದ ,ಹಳೆ ಬಸ್ ಸ್ಟ್ಯಾಂಡ್  ತನಕ ನಡೆಯುತ್ತಾ ನಡೆಯುತ್ತಾ ಚಂದದ ಹೆಸರೊಂದನ್ನು ಹುಡುಕಿದ್ದರು ''ಅಭಯ '' ನನ್ನ ನಾಲ್ಕು ಅಕಾರಾದಿ ನಾಮದ ಕುಟುಂಬಕ್ಕೆ ಪುಟ್ಟ ಸದಸ್ಯನ ಆಗಮನ,ನಿಜ ಹೇಳ್ತೀನಿ ಕೇಳು,,ಅಸ್ಪತೆಯಿಂದ ಮನೆಗೆ ಬಂದ ನಂತರ ನಿನ್ನೆಡೆಗೆ ದೃಷ್ಟಿ ಹೊರಳಿದ್ದೆ ಕಮ್ಮಿ ,ಕಾರಣ ನಮ್ಮ ಹತ್ತಿರವೇ ಬೆಳೆಯುತ್ತಲಿದ್ದ ಚಿಕ್ಕಮ್ಮನ ಮಗ ಚಂದೂ,,ಅವನಾಗ ತೊದಲು ನುಡಿಯುತ್ತಿದ್ದ ,ತೊಟ್ಟಿಲಲ್ಲಿ ಏನೊಂದು ಸದ್ದಿಲ್ಲದೇ ಸುಮ್ಮನೆ ಮಲಗುತ್ತಿದ್ದ ನಿನಗಿಂತ ನಮ್ಮ ಹಿಂದೆ ಅತ್ತಾ ಅತ್ತಾ (ಅಕ್ಕ ) ಅಂತ ಓಡಾಡುತ್ತಿದ್ದ ಅವನು ನಮ್ಮ ಕೈಗೊಂಬೆ ಆಗಿದ್ದ..

ಅದೆಷ್ಟು ದಿನ???? ,,ಚಿಕ್ಕಮ್ಮನಿಗೆ  ನೀ ಬಂದ ಮೇಲೆ ಚಂದುವನ್ನು ನಮ್ಮ ಹತ್ತಿರ ಬಿಡುವ ಮನಸಾಗಲಿಲ್ಲ ಆಕೆ ಅವನನ್ನು ಕರೆದುಕೊಂಡು ಹೊರಟೆ ಬಿಟ್ಟಳು..ಮತ್ತೆ ಅಳು..ಬೇಸರ,,ಆಗ ನೀನು ಆರೇಳು ತಿಂಗಳಿನವ,ಮತ್ತೆ ನಾನು ಅಕ್ಹಿಲಕ್ಕ,ನಿನ್ನ ಹಿಂದೆ ಮುಂದೆ ಓಡಾಡುವುದು ಶುರುವಾಗಿತ್ತು,ರಗಳೆಯಿಲ್ಲದ ಮಗು ನೀನು...ಎಪ್ರಿಲ್ ಮೇ  ಎಂದಿನಂತೆ ನಮ್ಮ ಅಜ್ಜಿ ಮನೇ ಟೆಂಟ್ ,,ನಿನ್ನನು ಎರಡು ತಿಂಗಳು ನೋಡಿರಲಿಲ್ಲ ಆ ದಿನ ಮೇ ೭-೧೯೯೬  ಅಮ್ಮ ನಿನ್ನ ಕರೆದುಕೊಂಡು ಅಜ್ಜಿಮನೆಗೆ ಬಂದಿದ್ದಳು ನೀನು ನಡೆಯ ತೊಡಗಿದ್ದೆ.ನನ್ನ ಬಾಯಿಂದ ಮಾತು ಹೊರಡಿರಲಿಲ್ಲ ,ಕಣ್ಣು ಖುಷಿಯಿಂದ ಹನಿಯಾಡಿತ್ತು,

ನಿನಗೆ ಅದೆಷ್ಟು ಬಾರಿ ಕೃಷ್ಣನ ವೇಷ ಹಾಕಿ ತೊಂದರೆ ಕೊಟ್ಟಿಲ್ಲ ಹೇಳು..??ನಿನಗೆ ಹುಡುಗಿ ಅಂಗಿ ಹಾಕಿ ಚಂದ ನೋಡುವುದು ,ಜುಟ್ಟು ಕಟ್ಟಿ ಹೂ ಮೂಡಿಸುವುದು ಎಂದರೆ   ನನಗೆ ಇನ್ನಿಲ್ಲದ ಉತ್ಸಾಹ , ಆದರೆ ನನಗೂ ನಿನಗೂ  ಧೀರ್ಘ ೧೨ ವರುಷಗಳ ಅಂತರವಿದೆಯಲ್ಲ ????ಅದೇ  ಕಾರಣದಿಂದ  ನಿನ್ನೊಂದಿಗೆ ನನಗಿಂತ ತಂಗಿಯೇ ಹೆಚ್ಹು ಆಪ್ತತೆ ಸಾಧಿಸಿದ್ದಳು,ನಿಮ್ಮಿಬ್ಬರ ಜಗಳವು ಅಷ್ಟೇ ಚಂದ,ಸಖ್ಯ ಇನ್ನು ಚಂದ .

ಅದು ನಿನ್ನ ಶಾಲಾ ಜೀವನದ ಮೊದಲದಿನ  ಅಖಿಳಕ್ಕನ ಜೊತೆಗೆ ಉಮೇದಿನಿಂದ  ಹೊರಡುತ್ತಿರುವಾಗಲೇ ಸರಗೊಲಿಗೆ ಎಡವಿ ಗಾಯ ಮಾಡಿಕೊಂಡಿದ್ದೆ..ಅಳುತ್ತ ಶಾಲೆಗೆ ಹೋಗಿದ್ದೆ ,ಆ ನಂತರ ದಿನ ಕಳೆಯುತ್ತಾ ಟೀಚರ್ ,ಸರ್ ಯಾರನ್ನೂ ನೀ ಅಳಿಸದೆ ಬಿಟ್ಟಿಲ್ಲ ಅನಿಸುತ್ತೆ ,ನನಗೆ ಮಗ ಹುಟ್ಟುವ ತನಕ ನಾವಿಬ್ಬರು ಒಂದು ಹಂತದಲ್ಲಿ ವೈರಿಗಳಂತೆ ಇದ್ದೆವು,ನೀ ನನ್ನ ರಾಕ್ಷಸಿ ಅಂತ ಕರೆದಿದ್ದೆ ನೆನಪಿದೆಯ ??
೨೦೦೮-೨೦೧೦ ಈ ಎರಡು ವರ್ಷಗಳು ನಮ್ಮಿಬ್ಬರ ಬಾಂಧವ್ಯದ ಇನ್ನೊಂದು ಪುಟವನ್ನು ತೆರೆದಿತ್ತವು.

ನೀನು ನನ್ನ ಬದುಕಲ್ಲಿ ನಾ ಕಂಡ ಆದ್ಭುತ ಟೀಚರ್ ಗಳಲ್ಲಿ ಒಬ್ಬ ,ನಿನ್ನಲ್ಲಿ ಅದೆಂಥ ನಿರಕ್ಷರಿಗೂ ಎಲ್ಲವನ್ನು ಕಲಿಸಿಬಿಡುವ ತಾಕತ್ತಿದೆ. ಪತಿದೇವನ ಯಾವುದೊ ಮಾತನ್ನು ಮನಸಿಗೆ ತಾಗಿಸಿಕೊಂಡು ನನ್ನ ಮಗು ಮೂರು ತಿಂಗಳಿರುವಾಗ ನನಗೆ ಸೈಕಲ್ ಕಲಿಯಬೇಕೆಂಬ ಹಠ ಬಂದಿತ್ತು ನೀನು ಕ್ವಿಂಟಾಲ್ ಗೆ  ಒಂದಷ್ಟು ಕಡಿಮೆ ಇದ್ದ ನನ್ನ ತೂಕವನ್ನು ಅದ್ಹೇಗೆ ಬ್ಯಾಲೆನ್ಸ್ ಮಾಡಿ ನನಗೆ ಸೈಕಲ್ ಕಲಿಸಿದ್ದೆ,
ಇವತ್ತು ನಾನಿಲ್ಲಿ ಕುಳಿತು ನಿನ್ನ ಕುರಿತು ಹೀಗೆ ಟೈಪ್ ಮಾಡುತ್ತಿದ್ದೀನಿ ಅಂದರೆ ಅದರ ಶ್ರೇಯ ನಿನಗೆ,ಕಂಪ್ಯೂಟರ್ ಚಿತ್ರದಲ್ಲಷ್ಟೇ  ನೋಡಿದ್ದ ನಂಗೆ ೯ ನೇ ಕ್ಲಾಸಿನಲ್ಲಿದ್ದ ನೀನು ಅದೆಷ್ಟು ಚಂದ ಮಾಡಿ ಕಲಿಸಿದ್ದೆ, ಅಚಾನಕ್ಕಾಗಿ ವಿದೇಶದ ದಾರಿ ಹಿಡಿದ ಇವರ ಮತ್ತು ನನ್ನ ಮೇಲ್ ಗಳ ಜಿಗಿದಾಟ ನಡೆದಿದ್ದು ನಿನ್ನಿಂದಲೇ ಅಲ್ಲವೇ??ನೀ ಸೃಷ್ಟಿಸಿ ಕೊಟ್ಟ   ಇಮೇಲ್ ವಿಳಾಸ ಎಂಬ ಸೆಂಟಿ ನನಗೆ.

ಇದೆಲ್ಲ ಬಿಡು..ಮೊನ್ನೆ ಮೊನ್ನೆ ಊರಿಗೆ ಬಂದಾಗ ಏನಾದರು ಎಂಜಾಯ್ ಮಾಡಿದ್ದೇನೆ ಎಂದಾದರೆ ಅದು ನಿನ್ನ ಮಾತುಗಳನ್ನ,ಅದೆಲ್ಲಿಂದ ಕಲಿತೆ ಇಷ್ಟು ಮಾತಾಡೋದನ್ನ??ಮಾತಾಡಿದರೆ ನಗು ಉಕ್ಕುತ್ತೆ, ಅಕ್ಕನ ಮದುವೆಯಲ್ಲಿ ಅದೆಷ್ಟು ಓಡಾಡಿದೆ ನೀನು..ಪಕ್ಕ ತಮ್ಮ  ಬಿಡು..(ನನ್ನ ಮದುವೆಯಲ್ಲಿ ನಿನಗೆ ಮದುಮಗಳ ತಮ್ಮ ಎಂಬ ಗೌರವ ಸಿಕ್ಕಿಲ್ಲ ಎಂಬ ಆಪಾದನೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿರಬೇಕಲ್ಲ??)..ನಿನ್ನ ಮತ್ತೊಂದಿಷ್ಟು ತರಲೆಗಳ ಬಗ್ಗೆ ಬರೋಯೋಣ ಅಂದು ಕೊಂಡೆ..ಬೇಡ ನಿನಗೂ ಒಂದು ಇಮೇಜಿದೆ ಕಾಲೇಜ್ ನಲ್ಲಿ ಸುಖಾ ಸುಮ್ಮನೆ ಯಾಕ ಅದನ್ನು ಹಾಳ್ ಮಾಡಲಿ???

ಮುಖ್ಯ ವಿಷಯ ಹೇಳುತ್ತೇನೆ ಕೇಳು.ಮೊನ್ನೆ ಮೊಪೆಡ್ಡಿನ ಮೇಲೆ ನಾನು ನೀನು ಹೋಗುವಾಗ ನೀನೊಂದು ಮಾತು ಹೇಳಿದಿಯಲ್ಲ,''ಅಮಿತಕ್ಕ ಇನ್ನು ೩ ವರ್ಷ  ನನ್ನ ಡಿಗ್ರಿ ಮುಗಿಯುತ್ತಲೇ ನನಗೆ ಜಾಬ್ ಸಿಕ್ಕ ಕಡೆ ಪಪ್ಪ ಅಮ್ಮ ನನ್ನು ನನ್ನೊಂದಿಗೆ ಕರೆದೊಯ್ಯುತ್ತೇನೆ ,ನೀನು ಬೇಜಾರ್ ಮಾಡಬೇಡ ಅಂತ ,ಯಾಕೋ ಕಣ್ಣು ತುಂಬಿ ಬಂತು ಮುಂದೆ ಏನೋ ಹೇಗೋ ದೇವರೇ ಬಲ್ಲ ಆ ಕ್ಷಣದ ಮಾತು ಇದೆಯಲ್ಲ ನನ್ನ ಎಷ್ಟೋ ಕಿರಿ ಕಿರಿ ,ಟೆನ್ಶನ್ ದೂರ ಮಾಡಿತ್ತು,ಅದೆಷ್ಟು ಬೇಗ ಬೆಳೆದೆ ನೀನು,,,ಅಡಿಕೆ ಮರದಂತೆ, ನಿನ್ನ ಬುದ್ದಿ ಕೂಡ..ಮನಸ್ಸು ಕೂಡ. ಸ್ವಸ್ಥ ಮನಸ್ಸು ಬುದ್ಧಿ ಹಾಗೆ ಇರಲಿ ಎಂಬುದೊಂದೇ ಆ ದೇವರಲ್ಲಿ ಪ್ರಾರ್ಥನೆ.

೧೬ ಮುಗಿಯಿತು..ಅಲ್ವೇ???ರಾತ್ರಿ ೧೨ ಕ್ಕೆ ಫೋನ್ ಮಾಡೋಣ ಅಂದುಕೊಂಡೆ.ಬೇಡ ಇದನ್ನೇ ಕಳಿಸಿದರಾಯಿತು ಅಂದು ಬರೆಯುತ್ತ ಕುಳಿತೆ..ನಿನ್ನ ಜನುಮದಿನಕ್ಕೆ ಬೇರೆನು ಗಿಫ್ಟ್ ಕೊಡಲಾಗುತ್ತಿಲ್ಲ ,ಹಾರೈಕೆಯ ಹೊರತು ,ನೆಕ್ಷ್ತ ಟೈಮ್ ಮೋಸ್ಟ್ಲಿ ನಿನ್ನ ಬರ್ತ್ ಡೇ ಗೆ ನಾನು ಅಲ್ಲಿರುತ್ತೆನೇ ಎಂಬ ಆಶಯ ನನ್ನದು..

ಹ್ಯಾಪಿ ಬರ್ತ್ ಡೇ .ಡಿಯರ್ ತಮ್ಮ ..
ನೀನು ಕಂಡ ಕನಸೆಲ್ಲ ನನಸಾಗಲಿ.
ಲವ್ ಯು 
ನಿನ್ನ 
ಅಮಿತಕ್ಕ