Tuesday, December 17, 2019

ಕನಸುಗಳು, ಕನಸುಗಳು
ಬೀಳುತ್ತವೆ ನಿದ್ದೆಯಲ್ಲಿದ್ದಾಗ

ಎದ್ದು ಕುಳಿತಾಗ 
ಕದ್ದು ಓಡುತ್ತವೆ
ಗಾಳಿಗೆ ಎಲ್ಲೆಂದರಲ್ಲಿ 
ಹರಿದಾಡುವ ಬೂರುಗದ ಅರಳೆಯಂತೆ.

ಕನಸುಗಳು ಹಗುರ,
ನವಿರು
ಮುಟ್ಟ ಹೋದರೆ ಕಮರುತ್ತವೆ
ಹರಡಿ ಹದಗೆಡುತ್ತವೆ ಮನೆಯಂಗಳದ ರಂಗೋಲಿಯ ಹಾಗೆ,ಕನಸುಗಳು..
ಒಳ್ಳೆಯವು ,ಕೆಟ್ಟವು , ಅನಿಷ್ಟ
ಒಂದಷ್ಟು ದುಷ್ಟ 

ಕನಸು
ಕೆಲವು ನನ್ನವು ಕೆಲವು ಅವನವು
ಕೆಲವು "ನಮ್ಮವು" ಎನ್ನುವ ಭ್ರಮೆ ಹುಟ್ಟಿಸುವ ಮಾಯಾಮೃಗ,
ಆಗ ಇತ್ತು ಈಗ ಇಲ್ಲ.

ಕನಸುಗಳು
ಇವನ ತಕ್ಕೆಯಲ್ಲಿ ಮಲಗಿ ಗಾಢ ನಿದ್ರೆಯಲ್ಲಿರುವಾಗ, 
ಅವನ ರಂಗು ರಂಗಿನ ಚಿತ್ರ ತೊರಿಸುವ ವ್ಯಭಿಚಾರಿ

ಕನಸುಗಳು 
ಬರುವುದಾದರೂ ಏಕೆ?
ಏಕತಾರಿಯ ಒಂಟಿ ನಾದದಂತೆ

ಕನಸುಗಳು
ಕಣ್ಜೀರಿಗೆ ಹುಳದಂತೆ,
ನಿಸ್ಸಾರ ಬದುಕಿಗೆ ಜೀರಂಗಿ ಮೆರಗು ಕೊಡುವ ಜೀವನ್ಮುಖಿ ಕಿರಣದಂತೆ.
ಆದರೂ 
ಕನಸುಗಳು 
ನನಗಿಷ್ಟ 

ಅಲ್ಲಿ ನೀನು ಪೂರ್ತಿ ನನ್ನವನು.

ಕೇಳು,ನನಗೆ ಕನಸ ಮಾರಲು ಬರಬೇಡ,
ನಿನಗೆ ಬಿಟ್ಟಿಯಾಗಿ ಕೊಡುವಷ್ಟು ರಾಶಿ ಕನಸಿವೆ ನನ್ನ ಹತ್ತಿರ
ಬೇಕೆಂದರೆ ಹೇಳು ಕಳಿಸಿ ಕೊಡುವೆ||

ನನಗೆ ಒಲವ ಮಾರಲು ಬರಬೇಡ,
ಒಲವಒರತೆಯಲೇ ಹಿತ್ತಲ ಮಲ್ಲಿಗೆ ಅರಳಿವೆ,
ಬೇಕಿದ್ದರೆ ಹೇಳು 
ದಂಡೆ ಹೆಣೆದು ಕಳಿಸುವೆ||

ನನಗೆ ಅನ್ನದ ಆಮಿಷ ಒಡ್ಡಬೇಡ,
ಬದುಕಬುತ್ತಿ ಹದವಾಗಿ ಕಲಸಿ ,
ಹಸಿದವರಿಗೆ ಉಣಬಡಿಸಿದ್ದೇನೆ, ಬೇಕೆಂದರೆ ಹೇಳು 
ಕೈತುತ್ತು ಕೊಡುವೆ||

ನನಗೆ ನೆರಳ ಕೊಡುವ ಮಾತಾಡಬೇಡ,
ಹೊಂಗೆಯ ತಂಪಲ್ಲೆ ಗುಡಿಸಲ ಕಟ್ಟಿದ್ದೇನೆ,
ನೆರಳ ಮಾತಾಡಿ ದಣಿವಾದರೆ ಹೇಳು , 
ಚಾಪೆ ಹಾಸಿ ಲಾಲಿಯೂ ಹಾಡುವೆ||

ನನಗೆ ನಗುವ ಹಂಚಲು ಬರಬೇಡ,
ಬತ್ತದ ಚೈತನ್ಯವನು ಬಳುವಳಿಯಾಗಿ ಪಡೆದಿದ್ದೇನೆ,
ಬೇಕಾದರೆ ಹೇಳು ಕೊಡುವೆ
ನಿನಗೂ ಒಂದುಷ್ಟು ನಗುವ ಸಾಲ,ಬಡ್ಡಿಯಿಲ್ಲದೆ||

ನನಗೆ ಬದುಕ ಪಾಠ ಹೇಳಿಕೊಡಲು ಬರಬೇಡ,
ನಾನೇ ಕಲಿಯುತ್ತೇನೆ|
ಬದುಕು ಕಲಿಸುತ್ತದೆ, ಏಳುತ್ತೇನೆ, 
ಬೀಳುತ್ತೇನೆ ಮತ್ತೆ ಕಲಿಯುತ್ತೇನೆ, ಅವರರವರ ಬದುಕು ,ಅವರವರ ಪಾತ್ರ 
ಅವರಿಗೇ ಬಿಟ್ಟು  ಬಿಡು,

ಬೆಳಯಲು ಬಿಡು, ಬೆಳಗಲು ಬಿಡು.

Sunday, January 21, 2018

ಮೊಗ್ಗಿನ ಜಡೆ ಇಂದಿರಾ

ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡಿ ಮೆಚ್ಚಿದ್ದಾಯ್ತು , ಹಿರಿಯರು ಮದುವೆಯ ಮಾತುಕತೆ ಶಾಸ್ತ್ರವನ್ನೂ ಪೂರೈಸಿದ್ದು ಆಯಿತು , ಬದುಕಿನ ಹೊಸ ಆರಂಭದ ಮುನ್ನುಡಿ ಬರೆಯುವ ದಿನ  ಮದುವೆಯ ದಿನ. ಈ ಒಂದು ದಿನಕ್ಕೆ ಬೇಕಾಗುವ ಪೂರ್ವತಯಾರಿ ಮಾಡಿದವರಿಗೇ ಗೊತ್ತು, ಛತ್ರ ದಿಂದ ಹಿಡಿದು ಅಡುಗೆಯವರ ತನಕ , ವಾಲಗದವರಿಂದ ಹಿಡಿದು ಪುರೋಹಿತರತನಕ  ಎಲ್ಲವನ್ನ ನಿಭಾಯಿಸುವಾಗ ಮನಸಲ್ಲಿರುವುದು ಅದೊಂದೇ ಭಾವ ‘’ಮದುವೆ ಒಂದು ಚನ್ನಾಗಿ ಆಗಿಬಿಟ್ಟರೆ ಅಷ್ಟೇ ಸಾಕು’’
ಅಪ್ಪ ಅಮ್ಮ ಮದುವೆಯ ಇತರ ಗಡಿಬಿಡಿಯಲ್ಲಿ ಮಗ್ನರಾಗಿರುವಾಗ ಮದುಮಗಳ ಕಸಿವಿಸಿ ಕೇಳಬೇಕೆ ? ಮದುವೆಯ ಕೇಂದ್ರ ಬಿಂದುವೇ ಆಕೆ , ಆಕೆ ಚನ್ನಾಗಿ ಕಾಣಬೇಕು , ಇನ್ನು ಶುರು ಬ್ಯೂಟಿಶಿಯನ್ ಹುಡುಕಾಟ, ಅತ್ತೆ ಮಗಳ ಮದುವೆಗೆ ಬಂದವಳನ್ನ ಕರೆಯೋದೇ? ದೊಡ್ಡಮ್ಮನ ಮಗಳ ಮದುವೆಗೆ ಬಂದಿದ್ದಳಲ್ಲ ಅವಳನ್ನ ಕರೆಯೋದೇ? ಹಾಗೊಮ್ಮೆ ಯಾರನ್ನ ಕರೆಯೋದು ಅನ್ನೋದು ನಿರ್ದಾರವಾದರೂ ಬಜೆಟ್ ಭೂತ ದಿಗ್ಗನೆ ಎದುರಿಗೆಬಂದು ನಿಲ್ಲುತ್ತದೆ ,
ಇತ್ತೀಚಿನ ದಿನಗಳಲ್ಲಿ ಮದುಮಗಳ ಸಿಂಗಾರಕ್ಕೆ ಹತ್ತು ಸಾವಿರದಿಂದ  ಒಂದು ಲಕ್ಷದವರೆಗೂ ಚಾರ್ಜ್ ಮಾಡುವ ಬ್ಯೂಟಿಶಿಯನ್ ಇದ್ದಾರೆ , ತರಹೇವಾರಿ ಪ್ಯಾಕೇಜ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಆದರೆ ಕೆಲವೊಂದು ಸಮುದಾಯದ ವಿಶಿಷ್ಟ ಮದುವೆ ಧಿರಿಸು ಮತ್ತು ವಧುವನ್ನು ಸಿಂಗರಿಸುವ ರೀತಿ ಎಲ್ಲ ಬ್ಯೂಟಿಶಿಯನ್ ಗಳಿಗೆ ತಿಳಿದಿರುವುದಿಲ್ಲ, ಅಂಥವರನ್ನೇ ಹುಡುಕಿ ಅವರು ಹೇಳಿದಷ್ಟು ಮೊತ್ತವನ್ನು ಕೊಟ್ಟು ಕರೆಯುವುದು ಅನಿವಾರ್ಯತೆಯೂ ಹೌದು , ಮೊದಲೆಲ್ಲ ಈ ಮದುಮಗಳನ್ನು ಸಿಂಗರಿಸುವ ಕೆಲಸ ಅವಳದೇ ಸಂಬಂಧಿಗಳಲ್ಲಿ ಯಾರೋ ಒಬ್ಬರು ಮಾಡಿ ಬಿಡುತ್ತಿದ್ದರು, ಆದರೆ ಈಗ ದಿನಮಾನ ಹಾಗಿಲ್ಲ ಹಣ ಕೊಟ್ಟರೂ ನೀರಿಕ್ಷಿಸಿದ ಸೇವೆ ಲಬ್ಯವಾಗುವುದು ಅಪರೂಪ.
ಇಂಥಹ ವ್ಯಾವಹಾರಿಕ ಪ್ರಪಂಚದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ ೨೫ ವರುಷಗಳ ಕಾಲ ಮದುವೆ ಹೆಣ್ಣನ್ನು ಸಿಂಗರಿಸಿ ಆಕೆಯ ಆ ವಿಶೇಷ ದಿನಕ್ಕೆ ಮೆರಗನ್ನು ತರುವ ಕಾರ್ಯವನ್ನು ತಮ್ಮ ಜವಾಬ್ದಾರಿಎಂಬಂತೆ ಮಾಡಿ ಎಲೆಮರೆಯಲ್ಲೇ ಮಾಗಿದ ಹಿರಿಯ ಜೀವದ ಪರಿಚಯ ಇಲ್ಲಿದೆ .
ಶ್ರೀಮತಿ ಇಂದಿರಾ ನರಸಿಂಹ ಶಾನಭಾಗ್ ಉಡುಪಿ ಜಿಲ್ಹೆಯ ಸಾಲಿಗ್ರಾಮದವರು. ಪ್ರಸ್ತುತ ಕೋಟ ಗ್ರಾಮ ನಿವಾಸಿ.
ತಮ್ಮ  ಹದಿನಾಲ್ಕನೇ ವಯಸ್ಸಿಗೆ ಹಸೆಮಣೆ ಏರಿದ ಇಂದಿರಾ ಅವರ ಅನುಭವಗಳನ್ನು ಅವರ ಮಾತಲ್ಲೇ ಕೇಳಿ,
‘’ ಅದು ೧೯೫೫ ರ ಸಮಯ , ಆಗಿನ ಮದುವೆಗಳು ಈಗಿನಂಥಲ್ಲ ಅದರ ಚಂದವೇ ಬೇರೆ , ಮದುವೆಯೆಂದರೆ ಸುಮ್ಮನೆಯೇ ? ಅದರ ಸುತ್ತ ಇರುವ ತಯಾರಿ ಸಂಭ್ರಮ, ಊಟತಿಂಡಿಯ ತಯಾರಿಗಳು ,ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡು ನಾಲ್ಕೈದು ದಿನದ ಮದುವೆಗಳು, ಬಂದವರಿಗೆ ಬೆಲ್ಲದ ನೀರು ಬಾಳೆಹಣ್ಣು , ವೀಳ್ಯ ಕೊಟ್ಟು ಉಪಚರಿಸಿದರೆ ಅದು ದೊಡ್ಡ ಮರ್ಯಾದೆ ಕೊಟ್ಟಂತೆ . ಬಂದವರು ಕುಳಿತುಕೊಳ್ಳಲು ಈಗಿನಂತೆ ತರಹೇವಾರಿ ಖುರ್ಚಿ ಗಳಿರಲಿಲ್ಲ ಒಣಹುಲ್ಲು ಹಾಸಿನಮೇಲೆ ಗೋಣಿಚೀಲ ಅದರ ಮೇಲೊಂದು ಪಂಚೆ ಹಾಸಿದರೆ ಅದೇ ಸುಖಾಸನ. ಅದೆಷ್ಟೇ ಅನುಕೂಲಸ್ತರಾಗಿದ್ದರೂ ಮದುವೆಗೆ ಗಂಜಿ ಊಟ ಹಾಕಿಸಲೇಬೇಕು. ವಧುವರರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ಕರೆತಂದರೆ ಅದು ವಿಜೃಂಭಣೆಯ ಮದುವೆ ,
ಇದೆಲ್ಲದರ ನಡುವೆ ವಧುವನ್ನು ಸಿಂಗರಿಸುವ ಗಮನ ಯಾರಿಗಿರುತ್ತಿತ್ತು , ಚಿಕ್ಕ ಪ್ರಾಯದ ಹುಡುಗಿಯರಿಗೆ ಸೀರೆ ಸುತ್ತಿ ನಿಲ್ಲಿಸುವುದೇ ದೊಡ್ಡ ಕೆಲಸವಾಗಿತ್ತೇನೋ.! ನನ್ನ ಮದುವೆಯಾದಾಗ ನನಗೆ ಹದಿನಾಲ್ಕು ವರ್ಷ, ಎಲ್ಲರಿಗೂ  ಗಡಿಬಿಡಿ, ಅವರಲ್ಲೇ ಒಬ್ಬರು ಅದ್ಹೇಗೋ ನನಗೆ ಸೀರೆ ಸುತ್ತಿ, ಮಂಟಪದಲ್ಲಿ ನಿಲ್ಲಿಸಿದ್ದರು. ಆಗ, ಆ ನಂತರ ಅದೆಷ್ಟೋ ಸಲ ಅನ್ನಿಸುತ್ತಿತ್ತು ಮದುವೆ ಬದುಕಿನ ಅತಿ ಸುಂದರ ಗಳಿಗೆ ಹುಡುಗಿಯೊಬ್ಬಳು  ಮದುಮಗಳರೂಪದಲ್ಲಿ ರೂಪಂತರವಾಗುವ ಆ ಗಳಿಗೆ, ಯಾವುದೇ ತಯಾರಿ ಇಲ್ಲದೆ  ಅದ್ಹೇಗೆ  ಮುಗಿಸಿಬಿಡುವುದು? ಈ ಸುಸಂದರ್ಭವನ್ನು ಅವಳನ್ನು ಇನ್ನು ಚಂದ ಮಾಡಿ ಆ ದಿನವನ್ನು ಇನ್ನೂ ವಿಶೇಷ ಮಾಡಬೇಕು , ನೆನಪಲ್ಲಿರುವಂತೆ ಮಾಡಬೇಕು ಎಂಬ ಕನಸಿನ ಬೀಜ ನನ್ನ ಮನದಲಿ ಮೊಳೆಯಿತು.
ಹದಿನಾಲ್ಕಕ್ಕೆ ಮದುವೆ ಹದಿನೈದು ಮುಗಿಯುವ ಮುನ್ನ ಮಗು ಹುಟ್ಟಿದ ಸಂಬ್ರಮ ಜೊತೆಗೆ ನನ್ನ ಕನಸುಗಳು ಆಗಾಗ ನನ್ನ ಕೈ ಎಳೆದು ಕರೆಯುತ್ತಲೇ ಇದ್ದವು, ಆದರೆ ಯಾರಲ್ಲೂ ಹೇಳುವ ಧೈರ್ಯ ಬರಲಿಲ್ಲ. ಅದೆಷ್ಟೋ ವರುಷಗಳ ನಂತರ ಪತಿಯೊಂದಿಗೆ ಇದನ್ನು ಹಂಚಿಕೊಂಡಾಗ ಅವರು ಸಂತಸದಿಂದ ಒಪ್ಪಿಕೊಂಡು ಪ್ರೋತ್ಸಾಹಿಸಿದರು ಆದರೆ ಈ ಕೆಲಸವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕು ಅನ್ನುವುದು ಅವರ ಆಶಯವಾಗಿತ್ತು , ಇಷ್ಟರಲ್ಲಿ  ಮಕ್ಕಳ ಮದುವೆಯೂ ಆಗಿತ್ತು, ಮಕ್ಕಳು ಸೊಸೆಯಂದಿರು ಕೂಡ ನನ್ನ ಈ ಬಹುದಿನದ ಆಸೆಗೆ ಒತ್ತಾಸೆ ಕೊಟ್ಟು ಸಹಕರಿಸಿದರು.  
ಹಾಗೆ ಶುರುವಾಯಿತು ನನ್ನ ಈ ನನಸಿನ ಪಯಣ,
ತಮ್ಮ ಮದರಾಸಿನಿಂದ ಆಭರಣದ ಸೆಟ್ಗಳನ್ನ ಒಳ್ಳೆಯ ಚವರಿಗಳನ್ನು ತಂದು ಉಡುಗೊರೆಯಾಗಿತ್ತು ನನ್ನ ಕೆಲಸಕ್ಕೆ ಮತ್ತಷ್ಟು ಸಕಾರಾತ್ಮಕ ಬೆಂಬಲ ನೀಡಿದ , ಸಾರಸ್ವತ ಸಮಾಜದ ಮದುವೆಗಳಲ್ಲಿ  ವಧುವಿಗೆ ಕಚ್ಚೆ ಸೀರೆ ಉಡಿಸುವ ಪದ್ಧತಿ ಇದೆ ಜೊತೆಗೆ ಧಾರೆಯ ಸಮಯದಲ್ಲಿ ಸೆರಗಿನ ಬದಲು ಬಿಳಿಯ ಪಟ್ಟಿಯನ್ನು ಬಳಸುತ್ತಾರೆ ಈ ಶೈಲಿಯ ಸೀರೆ ಉಡಿಸುವುದು ಎಲ್ಲರಿಗೂ ಬರುತ್ತಿರಲಿಲ್ಲ , ನನ್ನ ತಣಿಯದ ಕುತೂಹಲ ಆಸಕ್ತಿ ಯಿಂದ ನಾನು ಈ ವಿಧಾನವನ್ನು ಕರಗತ ಮಾಡಿಕೊಂಡಿದ್ದೆ , ಜೊತೆಗೆ ಮಂಗಳೂರು ಮಲ್ಲಿಗೆಯ ಜಡೆ ಹಾಕುವುದು ನನಗೆ ಸಿದ್ದಿಸಿತ್ತು , ಅದರೊಂದಿಗೆ ಸಿಂಗಾರ ಮಾಡಲು, ಬೇಕಾಗುವ ಎಲ್ಲ ಪೂರಕ ತಯಾರಿ, ಕೌಶಲ್ಯವು ಇತ್ತು , ಅದಕ್ಕೆ ನನ್ನಲ್ಲಿ ಆತ್ಮ ವಿಶ್ವಾಸಕ್ಕೆ ಕೊರತೆ ಇರಲಿಲ್ಲ ,  
ಒಳ್ಳೆಯ ಉದ್ದೇಶದಿಂದ ಶುರುಮಾಡಿದ ಕೆಲಸಕ್ಕೆ ದೈವಬಲ ಸಿಗದೇ ಇರುತ್ತದೆಯೇ.?ದಿನ ಕಳೆದಂತೆ ಸಿಂಗರಿಸುವ ಕೈಂಕರ್ಯಕ್ಕೆ ಕರೆಯುವವರ ಸಂಖ್ಯೆ ಹೆಚ್ಚಿತು ,   ಕೆಲವೊಮ್ಮೆ ಒಂದೇ ದಿನ ಎರಡೆರಡು ಮದುವೆಗೆ ನಿಮಂತ್ರಣ ಬಂದಿದ್ದೂ ಇದೆ ಹಾಗಾದಾಗ ಇಲ್ಲ ಅನ್ನಲು ಮನಸು ಬಾರದೇ ಮಗಳು, ಸೊಸೆ ಇಬ್ಬರಿಗೂ ತರಬೇತಿ ಕೊಟ್ಟು ಅವರನ್ನು ಕಳಿಸುತ್ತಿದ್ದೆ. ವರುಷಕ್ಕೊಮ್ಮೆ ಮನೆಯಲ್ಲೊಂದು ಚವಲ , ಉಪನಯನ, ಮದುವೆ ಇದ್ದೇ ಇರುತ್ತಿತ್ತು ಆಗಂತೂ ನನಗೆ ಇನ್ನು ಖುಷಿ.
ಕೆಲವೊಮ್ಮೆ ದೂರದೂರಿನಲ್ಲಿ ಮದುವೆಗಳು ಇರುತ್ತಿದ್ದವು. ಮೈಸೂರ , ಗೋವ , ಮುಂಬೈ ಬೆಂಗಳೂರು ಎಲ್ಲ ಕಡೆ ಮನೆಯ  ಜವಾಬ್ದಾರಿಯ ನಡುವೆಯೂ  ಆ ಮದುವೆಗೆ ಹೋಗಿ ನನ್ನ ಪಾಲಿಗೆ ಬಂದ ಸೇವಾಭಾಗ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೆ .

ಆಸಕ್ತಿ ಇರುವ ಹಲವರಿಗೆ ನಾನು ತರಬೇತಿ ಕೊಟ್ಟಿದ್ದೇನೆ . ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಹೊಸ ವಿಧಾನಗಳನ್ನು ಕಲಿಯಲು ನಾನು ಸದಾ ಉತ್ಸಾಹ ತೋರುತ್ತಿದ್ದೆ, ಕಲಿಕೆಗೆ ವಯಸ್ಸಿನ ಮಿತಿ ಇಲ್ಲವಲ್ಲ!! ಈ ಇಪ್ಪತೈದು ವರುಷಗಳ
(೧೯೮೩-೨೦೦೯)ಅನುಭವದಲ್ಲಿ  ನನ್ನ ಸಂಗ್ರಹದಿಂದ ಕಳೆದುಹೋದ ವಸ್ತುಗಳ ಪಟ್ಟಿ ದೊಡ್ಡದಿದೇ ಆದರೆ ಪಡೆದ ಆತ್ಮ ಸಂತೃಪ್ತಿಯಮುಂದೆ ಅದು ತೃಣ ಸಮಾನ.
ನಮ್ಮಲ್ಲಿ ಹಿರಿಯರು ಯಾವಾಗಲು ಹೇಳುತ್ತಿದ್ದರು ‘’ವಧುವರರು ಸಾಕ್ಷಾತ್ ಲಕ್ಷ್ಮಿ ನಾರಾಯಣನ ರೂಪ’’ ಎಂದು ಅದನ್ನೇ ನಾನು ಕೂಡ  ನಂಬುತ್ತೇನೆ ಶ್ರದ್ಧೆ ನಿಷ್ಠೆಯಿಂದ ನನ್ನ ಈ ಸೇವೆಯನ್ನು ಭಗವಂತನ ಕೆಲಸವೆಂದೇ ಮಾಡಿದ್ದೇನೆ ಅದಕ್ಕಿಂತ ಹೆಚ್ಚು ಏನು ಬೇಕು?
ಹೀಗೆಂದು ಕೇಳುವ ಇಂದಿರಾ ಅವರಿಗೆ ೭೫ ರ ಹರೆಯ , ಈಗಲೂ ಅವರು ಉತ್ಸಾಹದ ಬುಗ್ಗೆ , ಕಾದಂಬರಿಗಳನ್ನು ಓದುವುದು ಅವರಿಗೆ ಅಚ್ಚು ಮೆಚ್ಚು, ತಾವು ಓದಿದ್ದನ್ನ ಕಣ್ಣಿಗೆ ಕಟ್ಟುವಂತೆ ಇತರರಿಗೆ ಹೇಳುವ ಅಪ್ರತಿಮ ಅಭಿವ್ಯಕ್ತಿ  ಇವರಲ್ಲಿದೆ , ಕಲಾತ್ಮಕವಾಗಿ ಹೂಮಾಲೆ ಕಟ್ಟುವುದು , ಸಾಂಪ್ರದಾಯಿಕ ಅಡುಗೆ ಮಾಡುವುದು ಇವರ ಹವ್ಯಾಸ.
ಅದಲ್ಲದೆ ಹಲವು ಮರೆತೇ ಹೋದವು ಅನ್ನುವ ಜನಪದ ಕಥನ ಗೀತೆಗಳು ಇವರ ಸ್ಮ್ರುತಿಯಲ್ಲಿವೆ.  ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಅನುಭವಿಸಿ ಪ್ರೀತಿಯಿಂದ ಮಾಡುವುದು ಇವರ ಹೆಗ್ಗಳಿಕೆ . ಇಂಥಹ ಅಪರೂಪದ ಮನೋಭಾವದ ವ್ಯಕ್ತಿತ್ವ ಕಾಣಸಿಗುವುದು ವಿರಳ

Sunday, June 15, 2014

ಹಿಂಗ್ಯಾಕೆ ಹಿಂಗ್ಯಾಕೆ...ಇದು ಮಿಡ್ ಲೈಫ್ ಕ್ರೈಸಿಸ್ ..                                                                     
ಯಾಕೋ ಈ ನಡುವೆ ಮನಸು ಯಾವಾಗಲು ವಿಷಾದದ ನಡುಗಡ್ಡೆ. ಎಲ್ಲರೊಂದಿಗೆ ನಗುತ್ತ ಇರುತ್ತೇನೆ ಆದರೂ ಮನಸು ಮುಸು ಮುಸು  ಅಳುತ್ತದೆ. 

 ಏನೋ ಕಳೆದುಕೊಂಡ ಭಾವ ಹಾಗಂತ ನನಗ್ಯಾರು ಇಲ್ಲ ಅಂತಲ್ಲ ,ತುಂಬು ಕುಟುಂಬ ಪತಿ ಮಕ್ಕಳು ಎಲ್ಲರು ಇದ್ದಾರೆ  ನನ್ನ ಸುತ್ತ ಆದರೆ 

ನನ್ನೊಳಗಿಲ್ಲಾ  ,ನನ್ನ ಜೊತೆಗಿದ್ದವರೆಲ್ಲ ಅದೆಲ್ಲೋ ಮುಟ್ಟಿದ್ದಾರೆ ನಾನು ಇಲ್ಲೇ ನಿಂತು ಅವರನ್ನು ಬೆರಗುಗಣ್ಣಿಂದ ನೋಡುತ್ತೇನೆ ತುಳಸಿ ದೀಪ ಹಚ್ಚಿಟ್ಟು

 ಬರುವಾಗ ಸುಮ್ಮನೆ ತಾರೆಗಳನ್ನೊಮ್ಮೆ ನೋಡಿದಂತೆ ,ಅವರಿಗೆ ಆಗಿದ್ದು ನನಗೇಕೆ ಆಗಲಿಲ್ಲ ????ಬಹುಷಃ ನನ್ನ ಬದುಕಿನ ಆರಂಭವೇ ಸರಿ 

ಇರಲಿಕ್ಕಿಲ್ಲ..ನಾ ಹಲವು ವಿಷಯಗಳಲ್ಲಿ ತಪ್ಪು ನಿರ್ಧಾರ ಮಾಡಿದ್ದೆ ಅನಿಸುತ್ತೆ...ಇಂತಹ ನಿರರ್ಥಕ ಯೋಚನೆಗಳು ನಿಲ್ಲೋದೇ ಇಲ್ಲ . ಇಲ್ಲದ ಪ್ರಶ್ನೆಗಳು

 ಹುಟ್ಟುತ್ತಿವೆ  ಉತ್ತರ ಕೊಡುವವರು ಯಾರು ?ಎಲ್ಲರು ತಮ್ಮ ತಮ್ಮ ಬದುಕಲ್ಲಿ ಬ್ಯುಸಿ ,''ಅಮ್ಮ ನೀನಿಲ್ಲದೆ ಊಟವೇ  ಸೇರಲ್ಲ ಅನ್ನುತ್ತಿದ್ದ ಮಗ ಈಗೀಗ

 ''ಅಮ್ಮ ಏನಂತ ಅಡುಗೆ ಮಾಡ್ತೀಯ'' ಅಂತಾನೆ..'' ಮಗಳು ಮೊನ್ನೆ ಮೊನ್ನೆ ತಾನೆ ನೀ ಜಡೆ ಹಾಕಿದರೆ ಸರಿ ಆಗೋದು ಅಂದು ಜಗಳಕ್ಕೆ ಕೂಡೋಳು

 ಇತ್ತೀಚಿಗೆ ಕೂದಲತ್ತ ಕೈ ಚಾಚಿದರೆ ಕಿಲೋಮೀಟರ್ ದೂರ ಹೋಗುತ್ತಾಳೆ..ನಿನಗೆನ್ ಗೊತ್ತು ???ಸುಮ್ಮನಿರಮ್ಮ ನಿಂಗ್ ಗೊತ್ತಾಗಲ್ಲ ಹಾಗೆಂದೇ

 ಇಬ್ಬರ ಮಾತುಗಳು ಆರಂಭವಾಗುತ್ತೆ , ಮತ್ತೆ ಇವರು ಅವರ ಜಗದಲ್ಲಿ ಕಳೆದುಹೋಗಿದ್ದಾರೆ ಮನೇ ನೋಡಲು ನಾನಿದ್ದೇನೆ ಅನ್ನೋ ಧೈರ್ಯದಲ್ಲಿ.ಒಮ್ಮೆ

 ಆ ಮನೆಕಯುವವಳ ಸ್ಥಿತಿ ಏನಾಗಿದೆ ಅಂತ ಕೂಡ ನೋಡದೆ ಹಾಯಾಗಿದ್ದಾರೆ  ಇತ್ತೀಚಿಗೆ ಇವರು ಟಿವ ನೋಡುತ್ತಾ ಒಂದು ಕಪ್ ಕಾಫಿ ಕೇಳಿದರು

 ಇಲ್ಲದ ಸಿಟ್ಟು ಬರುತ್ತೆ , ನಿಜ ಜಗತ್ತು ಓಡುತ್ತಿದೆ ನಾನು ಅದರ ವೇಗಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಆದರೆ ಮನಸು ರಚ್ಚೆ ಹಿಡಿದು

 ಅಳುವ ಮಗುವಾಗಿದೆ ನಾ ಒಂಟಿ ಅನ್ನೋ ವರಾತ  ಶುರು ಮಾಡುತ್ತೆ ಪದೇ ಪದೇ ...ಆಯುಷ್ಯ ಕಳೆಯುತ್ತಿದೆ , ಸೌಂದರ್ಯ ಕುಂದುತ್ತಿದೆ , ಕೆಲವೊಮ್ಮೆ

 ಗುರುತಿಲ್ಲದ ಜನರ ನಡುವೆ ಹೋಗಿ ಉಳಿದು ಬಿಡಲ?..ಯಾರಿಗೂ ಹೇಳದಂತೆ ಎಲ್ಲಿಗಾದರೂ ಹೋಗಿಬಿಡಲ ?? ಅನ್ನೋ ಆಲೋಚನೆಗಳು

 ....ಬದುಕನ್ನು ಮತ್ತೆ ಎಲ್ಲಿಂದ್ ಆರಂಭಿಸಲಿ  ನನ್ನನು ನಾ ಎಲ್ಲಿಂದ ಮತ್ತೆ ತಂದು ಕೊಂಡು ನನ್ನೊಳಗೆ ಸ್ಥಾಪಿಸಿಕೊಳ್ಳಲಿ ?? ಕೆಲವೊಮ್ಮೆ ನಾ ಬಹಳ

 ಸ್ವಾರ್ಥಿ ಆಗುತ್ತಿದ್ದೆನೇನೋ ಅನಿಸುತ್ತೆ , ಮತ್ತೊಮ್ಮೆ ಇಷ್ಟುದಿನ ನಾ ಇವರೆಲ್ಲರಿಗಾಗಿ ಬದುಕಿದೆ ಈಗ ನನಗಾಗಿ ಬದುಕುವ ಸಮಯ

 ಅನಿಸುತ್ತೆ..ಅನಿಸಿದ್ದಷ್ಟೇ ಕ್ಷಣ ಮತ್ತೆ ಅದೇ ವಿಷಾದ ಸುತ್ತಿಕೊಳ್ಳುತ್ತೆ .

೪೦ ರ ಹರೆಯದ ನನ್ನ ಪರಿಚಿತರೊಬ್ಬರು ತಮ್ಮ ಮನಸ್ಸನ್ನು ಹೀಗೆ ಎಳೆ ಎಳೆ ಯಾಗಿ ಬಿಚ್ಚಿಡುತ್ತಲೇ ಹೋದರು, ನಾನೂ ಸುಮ್ಮನೆ ಕೇಳುತ್ತಿದ್ದೆ ,ಅದಕ್ಕೆ ಸರಿಯಾಗಿ ಸಾಮಾಜಿಕ ಜಾಲ ತಾಣದಲ್ಲಿ  ನಾವೇ ಸೃಷ್ಟಿಸಿಕೊಂಡಿರುವ ಪುಟ್ಟ ಗುಂಪು  ಇದೆ ಅಲ್ಲಿ ಗೆಳತಿಯೊಬ್ಬಳು  ಇದೆ ವಿಷಯವನ್ನು ಪ್ರಸ್ತಾಪಿಸಿದ್ದಳು ಎಲ್ಲರ ಪ್ರತಿಕ್ರಿಯೆಗಳು ಒಂದೊಂದು ಬಣ್ಣದ ಗರಿಗಳಂತೆ  ಉತ್ತರಿಸಿದವರು ಎಲ್ಲರು ೪೦ರ ಆಸುಪಾಸಿನವರು ,ಬಹುತೇಕರು ಉದ್ಯೋಗಸ್ತರು ಸಮಾಜದ ಮುಖ್ಯವಾಹಿಸಿಯಲ್ಲಿರುವವರು ಅವರಿಗೆ ನಡುವಯಸ್ಸು ಮತ್ತು ಅದರ ಕಿರಿ ಕಿರಿಗಳು ಅಷ್ಟಾಗಿ ಕಾಡಿಸಿಲ್ಲ, ಅದರ ಕಾಟ ಯಾರಿಗೂ ತಪ್ಪಿಲ್ಲ ಆದರೂ ಅದರಿಂದ ಅವರು ತಮ್ಮಲ್ಲಿರುವ ಸೃಜನಶೀಲತೆ ,ವೃತ್ತಿಪರತೆ ಮತ್ತು ಆತ್ಮವಿಶ್ವಾಸದಿಂದ ಹೊರಬಂದಿದ್ದಾರೆ ಆದರೆ ಸಮಾಜದಲ್ಲಿರುವ  ಪ್ರತಿಯೊಬ್ಬ ಮಹಿಳೆಯ ದೃಷ್ಟಿಕೋನ ಭಿನ್ನ ಅವರು ಬದುಕು ನಡೆಸಿಕೊಂಡು ಬಂದ ರೀತಿ ಭಿನ್ನ ಬದುಕುತ್ತಿರುವ ರೀತಿ ಭಿನ್ನ  ಕೆಲವರನ್ನು ಈ ಸಮಯ ಅತಿಯಾಗಿ ಕಾಡುತ್ತದೆ,ಕೆಲವರಿಗೆ ತಮಗೆನಾಗುತ್ತಿದೆ ಅನ್ನುವ ಅರಿವೇ ಇಲ್ಲದಂತೆ ಜೊತೆಗಿರುವವರನ್ನು ಸಮಸ್ಯೆಗೆ ಸಿಲುಕಿಸುತ್ತಾರೆ..

ಏನಿದು ಮಿಡ್ ಲೈಫ್ ಕ್ರೈಸಿಸ್ ???
೪೦ ರ ಆಸುಪಾಸು ..ಇದು ಬದುಕಿನ ಸಂಧಿ ಕಾಲ , ಜವಾಬ್ದಾರಿಗಳನ್ನು ನಿಭಾಯಿಸುತ್ತಾ  ಬದುಕನ್ನು ಏಳುತ್ತಾ ಬೀಳುತ್ತಾ ಬದುಕುತ್ತ ಬಂದಾಗ  ಈ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಉದ್ಯೋಗ ,ಸಂಸಾರ , ಭವಿತವ್ಯ ಎಲ್ಲದರ ಬಗ್ಗೆ ಒಂದು ಪ್ರಶ್ನೆ ಸಂಶಯ ಮತ್ತು ಅದರ ಸಾರ್ಥಕತೆಯ ಬಗ್ಗೆ ಪ್ರಶ್ನೆಗಳು ಹುಟ್ಟಲು ಆರಂಭವಾಗುತ್ತವೆ,,ಸ್ತ್ರೀ ಜೀವನದ ಬಹುಮುಖ್ಯ ಕಾಲಘಟ್ಟ ಇದು ಅವಳ ಮೆನೋಪಾಸ್ ಸಮಯವೂ ಹೌದು ,
ದೇಹದಲ್ಲಾಗುವ ಹಾರ್ಮೋನು ಬದಲಾವಣೆಗಳು ಮನಸಿನಲ್ಲಿ ಹಲವು ಗೊಂದಲ ಪ್ರಶ್ನೆ ಹುಟ್ಟಿಸಿ ಬದುಕಿನಲ್ಲಿ ಒಂದು ಬಗೆಯ ವಿಷಣ್ಣತೆ ತಂದಿಡುತ್ತದೆ. ಕೆಲವೊಮ್ಮೆ ಅತೀರೆಕದ ವರ್ತನೆ ಕಂದು ಬಂದರೆ ಕೆಲವರು ಮಂಜುಗಡ್ಡೆಯಂತೆ ಹೊರಗೆ ತಂಪು ಒಳಗೆ ಬೆಂಕಿಯಾಗುತ್ತಾರ , ಭಾರತದ ಕುಟುಂಬ ಪಧತಿ  ಹೆಂಡತಿಮೆಲೆಯೇ ಅವಲಂಬಿಸಿರುವ ಗಂಡ ಮತ್ತವರ ಕೆಲ ಅಭ್ಯಾಸಗಳು ಹೆಂಡತಿಗೆ ಕಟ್ಟಿ ಹಾಕಿದಂತ ಅನುಭವ ನೀಡುತ್ತದೆ    ಈ ನಡುವಯಸ್ಸು ತಂದಿಡುವ ಮಾನಸಿಕ ತುಮುಲಗಳು ಅವುಗಳಿಂದಾಗಿ ಹೊರಬರುವ ವೈಪರಿತ್ಯಗಳ ಕೆಲವು ಸಾಮಾನ್ಯ ಲಕ್ಷಣಗಳು ಇಂತಿವೆ.
 • ಉದ್ಯೋಗ ಬಿಟ್ಟು ಬಿಡುವ ಮನಸ್ಸು 
 • ಹಿಂದೆ ಅತಿ ಪ್ರೀತಿಯಿಂದ ಮಾಡುತ್ತಿದ್ದ ಕೆಲಸಗಳ ಬಗ್ಗೆ ಅಸಡ್ಡೆ .
 • ಯಾವ ಕೆಲಸವನ್ನು ಪೂರ್ತಿ ಮಾಡುವತ್ತ ತಗ್ಗುತ್ತಿರುವ ಗಮನ ,ಕುಂದುತ್ತಿರುವ ಏಕಾಗ್ರತೆ 
 • ವಿನಾಕಾರಣ ಕೋಪ ,ಮತ್ತು ಅಸಹನೆ 
 • ಇಷ್ಟು ದಿನ ಇಲ್ಲದ ಕೆಲವು ಸಾಹಸ ಪ್ರವೃತ್ತಿಗೆ ಇಳಿಯಲು ಹಪ ಹಪಿಸುವುದು (ಬೈಕ್ ಓಡಿಸುವುದು ,ಸ್ಪೋರ್ಟ್ಸ್ ಕಾರ್ ಖರೀದಿಸುವುದು,ಸಿಗರತೆ,ಮಧ್ಯ ಸೇವನೆ ,ಕ್ರೀಡೆ  ಹೊಸ ಬಗೆಯ ಸಂಗೀತ ಸಂಗೀತೊಪಕರಣ ನುಡಿಸುವ  ಮನಸು  ಟ್ರೆಕ್ಕಿಂಗ್ , ಮೊದರ್ನ್ ಡ್ರೆಸ್ಸಿಂಗ್ ಸೆನ್ಸ್  ..)
 • ನಿದ್ರಾ ಹೀನತೆ 
 • ಶಿಸ್ತು ರಹಿತ ಆಹಾರ ಕ್ರಮ 
 • ಸಾವಿನ ಕುರಿತು ಅತೀವ ಕೂತುಹಲ 
 • ಖಿನ್ನತೆ 
 • ಹೊಸದನ್ನೇನೋ ಮಾಡುವ ಉಮೇದಿ ಮತ್ತು ಅಷ್ಟೇ ಬೇಗ ಅದರಿಂದ ಹೊರ ಬರುವ ಮನಸ್ಸು..
 • ವಿವಾಹ ಬಾಹಿರ ಸಂಬಂಧಗಳ ಕುರಿತು ಆಸಕ್ತಿ 
 • ಇಷ್ಟುದಿನ ಪ್ರೀತಿಸಿದ ಕುಟುಂಬ  ಒಮ್ಮೆಲೇ ಬಂಧನ ಅನಿಸಲು ಆರಂಬಿಸುವುದು
 • ಪದೇ ಪದೇ ಕಾಡುವ ಒಂಟಿತನ 
 • ಕ್ಷಣ ಕ್ಷಣ ಬದಲಾಗುವ ಆಸಕ್ತಿಗಳು 
 • ಸಂಶಯ ಪ್ರವೃತ್ತಿ 
ಇವಷ್ಟೇ ಅಲ್ಲದೆ ಇನ್ನು ಹಲವು ಲಕ್ಷಣಗಳನ್ನು ಗುರುತಿಸಬಹುದು. ಇದನ್ನೆಲ್ಲಾ  ನೋಡುವಾಗ ಹಳೆಯ ದಿನ ಮಾನಗಳಲ್ಲಿ ಈ ವೈಪರೀತ್ಯ ಇರಲಿಲ್ಲವೇ?? ಎಂಬ ಪ್ರಶ್ನೆ ಮೂಡುವುದು ಸಹಜ.  ಆ ಸಮಯದ ಸಾಮಾಜಿಕ ಪರಿಸರ ಮತ್ತು ಬೆಳೆದು ಬಂದ ರೀತಿಯೇ ಅವರನ್ನು ಈ ಮಾನಸಿಕ ಸ್ತಿತ್ಯಂತರದಿಂದ ಪಾರು ಮಾಡುತ್ತಿದ್ದು , ಮತ್ತು ಆಕೆಗೆ ಆಯ್ಕೆ ಮಾಡುವ ಸ್ವಾತಂತ್ರ ಇದ್ದಿದ್ದು ಕೂಡ ಕಡಿಮೆಯೇ.

ಈ ಶತಮಾನದಲ್ಲಿ  ಶಿಕ್ಷಣ ,ವಿಜ್ಞಾನ  ಗಂಡು ಹೆಣ್ಣಿನ ಬದ್ಧತೆಯಲ್ಲಿ ಕಾಣುತ್ತಿರುವ ಕ್ರಾಂತಿಕಾರಕ ಬದಲಾವಣೆಗಳು , ಅಣು ಕುಟುಂಬ ಪದ್ಧತಿ ,ಇವೆಲ್ಲ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಬೆಳೆದು ಬಂದ ಸಾಮಾನ್ಯ ಮತ್ತು ಮನಶ್ರೀಮಂತಿಕೆ ಹೊಂದಿದ ಮಹಿಳೆಗೆ ನುಂಗಲಾರದ ತುತ್ತಾಗಿವೆ , ಇಷ್ಟವಾಗದ್ದನ್ನು ಕಷ್ಟ ಪಟ್ಟು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆ , ಮನೆ  ಮತ್ತು ಮನೆಯ ಸರ್ವತೋಮುಖ ಅಭಿವೃದ್ಧಿಯೇ ಜೀವನದ ಧ್ಯೇಯ ಎಂಬ ಆಲೋಚನೆಯೇ ತಲೆಯಲ್ಲಿತ್ತುಕೊಂಡ ಮಹಿಳೆಗೆ ಈ ಬದಲಾಗುವ ವಾತಾವರಣ ಅಬಧ್ರತೆ ತಂದಿಡುತ್ತದೆ . ಮತ್ತು ಅವಳ ಅಸ್ತಿತ್ವದ ಬಗ್ಗೆ ಪ್ರಶೆಗಳನ್ನು ಬಿತ್ತುತ್ತದೆ.
 ಅವಳಿಗರಿವಿಲ್ಲದಂತೆ ಅವಳ ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರಲು ಆರಂಭಿಸುತ್ತದೆ , ವಯಸ್ಸು ತಂದಿಡುವ ಬೊಜ್ಜು ,ಸಕ್ಕರೆಕಾಯಿಲೆ ,ಮಂಡಿನೋವು , ಮತ್ತಿತರ  ದೈಹಿಕ ತೊಂದರೆಗಳು ಮಾನಸಿಕ ಸ್ಥೈರ್ಯವನ್ನು ಕುಂದಿಸಿ ಬಿಡುತ್ತವೆ. ಹೆಚ್ಚುತ್ತಿರುವ ಖರ್ಚು , ಮನೇ ನಿಭಾಯಿಸುವ ಹೊರೆ ,ತಗ್ಗುತ್ತಿರುವ ಆಯುಷ್ಯ, ಸಿಗದ ಆನಂದ , ಬೆಳೆದು ತನ್ನ ಅಂಕೆಯಿಂದ ಹೊರ ಹೋಗುತ್ತಿರುವ ಮಕ್ಕಳು , ತಾನು ಯಾರಿಗೂ ಬೇಡವಾದವಳು ಎಂಬ ಮನೋಭಾವನೆ ಬೇಡ ಬೇಡವೆಂದರೂ ಮನದಲ್ಲಿ ಬೆಳೆಯತೊದಗುತ್ತದೆ. ವೃತ್ತಿನಿರತ ಮಹಿಳೆಯರಲ್ಲಿ ಕೆಲವೊಮ್ಮೆ ತಮ್ಮ ಜೊತೆಗಾರರು ಸಹೋದ್ಯೋಗಿಗಳು ಮೇಲ್ಮಟ್ಟಕ್ಕೆ ಹೋಗುತ್ತಿರುವುದು ಯೋಗ್ಯತೆ ಇದ್ಯಾಗ್ಯು ನಾವು ನಿಂತಲ್ಲೇ ನಿಂತು ಹೋಗಿದ್ದು ಅತೀವ ನೋವು ತರುತ್ತದೆ. ಅದರೊಂದಿಗೆ ಈ ಮುಂದಿನ ಕಾರಣಗಳು ಸೇರಿಕೊಳ್ಳುತ್ತವೆ 

ಸ್ವಂತಿಕೆ ಕಳೆದುಕೊಳ್ಳುವ ಭಯ 
೪೦ -೫೦ ರ ನಡುವಿನ ಹೆಂಗಳೆಯರ ಮನಸ್ಸಲ್ಲಿ ಪದೇ ಪದೇ ತಮ್ಮ ಅಸ್ತಿತ್ವದ ಬಗ್ಗೆ ಪ್ರಶ್ನೆಗಳೇಳುತ್ತವೆ ,ತಮ್ಮ ಜೀವನದ ಉದ್ದೇಶವಾದರು ಏನು ಎನ್ನುವ ಬಗ್ಗೆ ನಿರರ್ಥಕ ಆಲೋಚನೆ ಗಳು ಹುಟ್ಟಿಕೊಳ್ಳುತ್ತವೆ ಮಕ್ಕಳು ಬೆಳೆಯುತ್ತಿದ್ದಾರೆ,ಅವಳು ಹಿಂದೊಮ್ಮೆ ಅಂದುಕೊಂಡಂತೆ ಅವರವರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ,ಪತಿ ತನ್ನ ಕೋಟೆ ಕಟ್ಟುವ ಕೆಲಸದಲ್ಲಿ ನಿರತ ಆದರೆ ಇಷ್ಟುವರ್ಷದಿಂದ ರೂಡಿಸಿಕೊಂಡು ಬಂದ ಜೀವನಶೈಲಿ,ಮಾಡಿಕೊಂಡು ಬಂದ ಕೆಲಸಗಳಿಂದ ಹಟಾತ್ತನೆ ನಿವೃತ್ತಿ ಸಿಕ್ಕಿರುವುದು ಕೆಲವೊಮ್ಮೆ ಅತೀವ ಮಾನಸಿಕ ನೋವು ಕೊಡುತ್ತದೆ 

ಪತಿಯೂ  ಅಷ್ಟೇ ಪಾಲುದಾರ 
ಪತಿಯೇ ಪರದೈವ ಎಂದು ನಂಬುವ ನಾರೀಮಣಿ ಗಳ ಮನಸಲ್ಲಿ ಪತಿ ಒಬ್ಬ ಒಳ್ಳೆ ಸ್ನೇಹಿತನು ಆಗಬಲ್ಲ ಎಂಬವಿಚಾರವನ್ನು ಬೆಳೆಯಲು ಬಿಡದಂತೆ ಗಂಡಸರು ವರ್ತಿಸುತ್ತಾರೆ , ಕೆಲವೊಮ್ಮೆ ಇದೆ ಸಂದರ್ಭದಲ್ಲಿ ಪತಿಯ ನಡುವಯಸ್ಸಿನ ಹುಚ್ಚಾಟಗಳನ್ನು ಕಣ್ಣೆದುರೇ ಕಾಣುವ ಆಕೆಗ್ ಸಂಬಂಧದ ಮೇಲಿನ ವಿಶ್ವಾಸ ಸಡಿಲ ಗೊಳ್ಳುತ್ತದೆ 
                   ಈ ಕಾರಣಕ್ಕೆ ಹಲವಾರು ಬಾರಿ ವಿವಾಹ ಬಾಹಿರ ಸಂಬಂಧಕ್ಕೆ ಒಂದು ನಿಷ್ಕಲ್ಮಶ ಸ್ನೇಹಕ್ಕೆ ಹೆಣ್ಣು ಜೀವ ಹಾತೊರೆಯುತ್ತದೆ , ಅಲ್ಲಿ ದೈಹಿಕ ಸುಖಕ್ಕಿಂತ ತನ್ನ ಮಾತನ್ನು ಯಾರದ್ರೂ ಕೇಳಲಿ ನನ್ನೋಳಗನ್ನು ಅರಿಯಲಿ ಎಂಬ ತವಕ ಹೆಚ್ಚಿನದ್ದು ಎಂಬುದನ್ನು ಸಂಶೋಧನೆಗಳು ಪುಷ್ಟೀಕರಿಸಿವೆ. ಮಹಿಳೆಯ ಈ ಭಾವನೆಯ ಜೀಕು ಜೋಕಾಲಿಯ ಪಯಣದಲ್ಲಿ ಪತಿ , ಮಕ್ಕಳು  ಕುಟುಂಬದವರ  ಸಹಕಾರ ಅಗತ್ಯ . ಹಾಗೆಂದು ಇದು ಕೇವಲ ವಿವಾಹಿತ ಹೆಣ್ಣುಮಕ್ಕಳ ತೊಂದರೆ ಅಲ್ಲ , ಹೆಚ್ಚೋ ಕಡಿಮೆಯೋ ಈ ವಯಸ್ಸಿನ ಎಲ್ಲಾ ಹೆಂಗಳೆಯರು ಈ ಭಾವ ಬದಲಾವಣೆಯ ಹೊಸ್ತಿಲನ್ನು ದಾಟಿ ಹೋಗಲೇಬೇಕು. ಸಂಶೋದನೆಯ ಪ್ರಕಾರ ಹೆಂಗಸರು ಸರಿಸುಮಾರು ೪೬ನೆ ವಯಸಿಗೆ ಈ ನಡುವಯಸ್ಸಿನ ಕಿರಿಕಿರಿಗೆ ತುತ್ತಾಗುತ್ತಾರೆ ಮತ್ತು ಈ ಅವಧಿ ೨-೫ ವರ್ಷ , ಪುರುಷರಲ್ಲಿ ಇದು ೩-೧೦ ವರ್ಷಗಳಕಾಲ ಮನೆಮಾಡಿರುತ್ತದೆ

ಏನು ಮಾಡಬಹುದು ??
 • ನಿಮ್ಮ ವೈದ್ಯರನ್ನು ಭೇಟಿಮಾಡಿ 
 ಮೊದಲೇ ಹೇಳಿದಂತೆ ಈ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆ ನಡುವಳಿಕೆಯಲ್ಲಿ ಬದಲಾವಣೆ ತಂದಿಡುತ್ತದೆ.ಈ ನಿಟ್ಟಿನಲ್ಲಿ ತಿಳಿದವರ ಮಾರ್ಗದರ್ಶನ ಮನಸಿಗೆ ಎಷ್ಟೋ ನೆಮ್ಮದಿ ನೀಡುತ್ತದೆ ಜೊತೆಗೆ ಆಗುವ ಹಲವಾರು ದೈಹಿಕ ತೊಂದರೆಗಳು ಕೂಡ ಕಿರಿ ಕಿರಿ ತಂದೊಡ್ಡಬಹುದು ,ನಿಮ್ಮ ವೈದ್ಯರು ಇದಕ್ಕೆ ಪರಿಹಾರ ಸೂಚಿಸಿ ನಿಮ್ಮ ಕಳವಳ ಕಡಿಮೆ ಮಾಡುತ್ತಾರೆ , ತಕ್ಕುದಾದ ವೈದ್ಯಕೀಯ ಸಲಹೆ ಔಷದೊಪಚರ ಕೂಡ ನೀಡಬಹುದು,ಆದರೆ ಯಾವುದೇ ಕಾರಣಕ್ಕೆ ಸ್ವ ವೈದ್ಯರಾಗಬೇಡಿ ನೋವಿಗೊಂದು ಮಾತ್ರೆ ನಿದ್ದೆಗೊಂದು ಮಾತ್ರೆ ಎಂಬಂತೆ ತೆಗೆದುಕೊಳ್ಳುತ್ತಾ ಹೋದರೆ ನಿಮ್ಮ ನಗು ವಾಪಾಸ್ ತಂದು ಕೊಡಲು ನೇಮ್ಮಡಿ ಮರಳಿ ತರಲು ಮಾರುಕಟ್ಟೆಯಲ್ಲಿ ಯಾವ ಮಾತ್ರೆಗಳು ಇಲ್ಲ ಎಂಬುದು ನೆನಪಿರಲಿ.ಕೊನೆಯ ಪಕ್ಷ ನಿಮ್ಮ ಜನುಮದಿನದಂದು ನಿಮ್ಮ ರುಟೀನ್  ಹೆಲ್ತ್ ಚೆಕಪ್ ಮಾಡಿಸ್ಕೊಳ್ಳಿ, ಈ ಸಮಯದಲ್ಲಿ ಸ್ತನ ಕಾನ್ಸೆರ್, ಗರ್ಭಕೋಶ ದ ಸ್ಮಿಯರ್ ಟೆಸ್ಟ್ , ಕೊಲೆಸ್ಟ್ರಾಲ್ ,ಥೈರಾಯಿಡ್  ಪರೀಕ್ಷೆಗಳು ನಿಮ್ಮ ಚೆಕಪ್ ನಲ್ಲಿ ಸೇರಿಕೊಂಡಿರಲಿ  
 • ನಿಮ್ಮ ದೈಹಿಕ ಸ್ವಾಸ್ಥ ಕಾಪಾಡಿಕೊಳ್ಳಿ 
''೧೬ ವರುಷದಲ್ಲಿ ನಿಮಗಿರುವ ಸೌಂದರ್ಯ ದೇವರು ನಿಮಗಿತ್ತ ಉಡುಗೊರೆ , ೬೧ ರಲ್ಲಿ ನಿಮಗಿರುವ ಚಲುವು ಏನಿದ್ದರು ಅದೂ ನಿಮ್ಮ ಗಳಿಕೆ ,'' ಹೀಗೊಂದು ಮಾತಿದೆ ಮನೆಯ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುವ ನಾವು ನಮ್ಮ ದೇಹದ ಬಗ್ಗೆ ಅತಿಯಾದ ನಿಷ್ಕಾಳಜಿ ವಹಿಸುತ್ತೇವೆ, ಒಡೆದ ಹಿಂಗಾಲಿನಿಂದ ಹಿಡಿದು  ನೆರೆತ ಕೂದಲ ತನಕ ಯಾವುದನ್ನೂ ಅಷ್ಟಾಗಿ ಗಮನಿಸುವುದೇ ಇಲ್ಲ ,ಯಾಕೆ ,,ಇನ್ನಾರಿಗೆ ಮೆಚಿಸಲು ಮಾಡಲಿ ಎಂಬ ಉದಫೆಯೊಂದು ನಮ್ಮ ಆಲೋಚನೆಗಳಲ್ಲಿ ಹೊಕ್ಕಿರುತ್ತದೆ ,ಸೌಂದರ್ಯ ಮತ್ತು ಸ್ವಾಸ್ಥ ಹೆಣ್ಣಿನ ಜೀವನದ ಅವಿಭಾಜ್ಯ ಅಂಗಗಳು. ವಯಸ್ಸು ಯಾವತ್ತಿಗೂ ಅದಕೆ ಅಡ್ದಿ ಅಲ್ಲ ಆಕರ್ಷಣೀಯವಾಗಿ ಕಾಣುವುದು ನಿಮ್ಮ ಅಧಿಕಾರ ಮತ್ತು ಹಕ್ಕು.
ಪೌಷ್ಟಿಕ ಆಹಾರ ,ಒಳ್ಳೆಯ ನಿದ್ದೆ , ನಿಮ್ಮ ದೇಹದೊಂದಿಗೆ ಮನಸ್ಸನ್ನು ಸ್ವಸ್ಥ ಇಡಬಲ್ಲುದು 
 • ಹಂಚಿಕೊಳ್ಳಿ
 ಎಷ್ಟೇ ದೃಡ ಮನಸು ಕಠಿಣ ಮನಸ್ಸು ಹೊಂದಿದವರು ಕೆಲವು ಸಂದರ್ಭದಲ್ಲಿ ತುಂಬಾ ಮಾನಸಿಕ ದುರ್ಬಲತೆ ಅನುಭವಿಸುತ್ತಾರೆ , ಮನಸು ಸ್ಪ್ರಿಂಗ್ ಇದ್ದಂತೆ ಅದರ ಮೇಲೆ ಅದೆಷ್ಟು ಒತ್ತಡ ಹಾಕುತ್ತೆವೋ ಅದೂ ಅಷ್ಟೇ ಜೋರಾಗಿ ಹಾರುತ್ತದೆ ,
ಆ ಕಾರಣದಿಂದ ನಿಮಗೇನನಿಸುತ್ತದೆ ಎಂಬುದನ್ನು ನಿಮ್ಮ ನಂಬಿಗೆಯ ವ್ಯಕ್ತಿಯೊಡನೆ ಹಂಚಿಕೊಳ್ಳಿ , ಈಗ ಇಂಟರ್ನೆಟ್ನಲ್ಲಿ ಇಂತಹ ಸಮಸ್ಯೆಗಳ ಬಗ್ಗೆ ಸಮಾನ ಮನಸ್ಕರು ಫೋರಮ್ ಮಾಡಿಕೊಂಡು ಒಳ್ಳೆಯ ಚರ್ಚೆ ನಡೆಸುತ್ತಾರೆ ಅದರಲ್ಲೂ ಭಾಗಿಆಗಬಹುದು ,ಸಮಸ್ಯೆ ಇರುವುದು ನನಗಷ್ಟೇ ಅಲ್ಲ  ನನ್ನಂಥ ಎಲ್ಲಾ ಹೆಣ್ಣು ಮಕ್ಕಳಿಗೆ ಎಂಬುದು ನಮ್ಮ ಚಿತ್ತದಲ್ಲಿ ಮೂಡಬೇಕು.ಅಸಲಿಗೆ ಇದೊಂದು ಸಮಸ್ಯೆ ಅಲ್ಲ ಮನಸು ,ದೇಹ  ತನ್ನ ಕೊಲೆಯನ್ನು ಕೊಡವಿಕೊಳ್ಳುವ ಹೊತ್ತು ಅನ್ನುವ ಪಾಸಿಟಿವ್  ಆಲೋಚನೆ ಇರಲಿ.
 • ಮತ್ತಷ್ಟು ಕನಸು ಹೊಸೆಯಿರಿ 
ಒಮ್ಮೆ ನೀವು ಹೊಸೆದ ಕನಸಿಗೆ ನನಸಿನ ರಂಗು ಬಳಿದು ಸುಂದರ ಮಾಡಿದ್ದೀರಿ ,ಈಗ ನಿಮ್ಮ ಜೀವನದ ಸಂಧಿ ಕಾಲ ಹೊಸ ಕನಸು ಹೊಸೆಯಿರಿ ,ಹೊಸ ಕಲಿಕೆ ಆರಂಭವಾಗಲಿ , ಹತ್ತಿರವಾದರು ಸರಿಯೇ ಪುಟ್ಟ  ಪುಟ್ಟ ಪ್ರವಾಸ ಮಾಡುತ್ತಿರಿ ,ಏಕತಾನತೆಯ ಜೀವನದಿಂದ ಹೊರಬರಲು ದಿನಚರಿಯಲ್ಲಿ ಸ್ವಲ್ಪ ಟ್ವಿಸ್ಟ್ ತನ್ನಿ ,ತೋಟದಲ್ಲೊಂದು ಊಟ ,ಟೆರೆಸ್ ಮೇಲೆ ತಾರೆಗಳನ್ನು ನೋಡುತ್ತಾ ಒಂದಷ್ಟು ಘಂಟೆ ನಿದ್ದೆ. ನಿಮ್ಮ ಬಾಲ್ಯಕಾಲದಲ್ಲಿ ರೂಡಿಸಿಕೊಂಡ ಹವ್ಯಾಸಗಳು ,ಪುಟ್ಟ ಮಕ್ಕಳೊಂದಿಗೆ ಅಡುಗೆ ಆಟವೋ ಕುಂಟ ಬೀಲ್ಲೆಯನ್ನೋ ಒಮ್ಮೆ ಟ್ರೈ ಮಾಡಿ 
ಹೊಸದನ್ನು ಮನಸ್ಪೂರ್ತಿ ಆಸ್ವಾದಿಸಿ ,ಮಕ್ಕಳಿಗೂ  ಪತಿಗೂ  ಕುಟುಂಬದ ಎಲ್ಲಾ ಸದಸ್ಯರಿಗೆ ನಿಮ್ಮ ಹೊಸ ರೂಪ ವಿಚಿತ್ರ ಎನ್ನಿಸಿದರೂ ನಿಮ್ಮ ಮಾನಸ ಚೈತನ್ಯಕ್ಕೆ ಇದು ಅಗತ್ಯ ಎಂಬುದನ್ನು ಮರೆಯದಿರಿ 
 • ಸಕಾರಾತ್ಮಕ ಚಿಂತನೆ 
ನೀವೆಷ್ಟು ಭಾಗ್ಯಶಾಲಿಗಳು  ಅಂದು ನಿಮಗನಿಸಿದ ಆ ಎಲ್ಲಾ ಧನ್ಯತೆಯ ಕ್ಷಣಗಳನ್ನು ಪಟ್ಟಿ ಮಾಡಿ ಮತ್ತು ಪದೇ ಪದೇ ಅದನ್ನು ಮನನ ಮಾಡಿ ,ನಿಮ್ಮ ಹಾಜರಿ ಅಗತ್ಯ ನಿವಿಲ್ಲದೆ ಹೋಗಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ ಎಂಬಂಥ ಸಂದರ್ಭಗಳನ್ನು ಬರೆದಿಡಿ. ನಾನು ನಿರ್ಲಕ್ಷಿಸಲ್ಪತ್ತಿದ್ದೇನೆ ಎಂಬ ಭಾವ ತನ್ನಿಂದ ತಾನೇ ಮಾಯವಾಗ ತೊಡಗುತ್ತದೆ .ಅಗತ್ಯ ಬಿದ್ದರೆ ಯಾವ ಕೌನ್ಸಿಲರ್ ಜೊತೆಗೆ ಮುಕ್ತ ಮಾತುಕತೆ ಮಾಡಲು ಹಿಂಜರಿಯಬೇಡಿ , ಸಂಗೀತ ,ಧ್ಯಾನ  ,ಯೋಗ ಪ್ರಾಣಯಾಮಗಳು ಈ ನಿಟ್ಟಿನಲ್ಲಿ ತುಂಬಾ ಸಹಕಾರಿ.ಸೃಜನಶೀಲ ಕೆಲಸದಲ್ಲಿ ತೊಡಗಿಕೊಳ್ಳಿ ಮನಸಿಗನಿಸಿದ್ದನ್ನು ಬರೆದಿಡಿ ,ಬರವಣಿಗೆ ಮಾನಸಿಕ ಒತ್ತಡ ಕಡಿಮೆ ಮಾಡಬಲ್ಲದು,
 • ನಿಮ್ಮ ಸಂಗಾತಿಯೊಡನೆ ಮಾತಾಡಿ 
ಹಲವಾರು ಸಲ ನಾವು  ಮಾತಾಡುವುದೇ ಇಲ್ಲ ,ಈ ಕಾರಣದಿಂದ ನಮ್ಮ ಸಮಸ್ಯೆಗಳು ಒತ್ತಡಗಳು ಮತ್ತು ಅಸಮಧಾನ ಗಳನ್ನು ಜೀವನ ಸಂಗಾತಿಯೊಂದಿಗೆ ಹಂಚಿಕೊಳ್ಳುವುದರಲ್ಲಿ ನಾವು ಹಿಂದೆಬೀಳುತ್ತೇವೆ. ನಿಮ್ಮ ಸಂಗಾತಿಯೊಡನೆ ಕಳೆದ ಮಧುರ ಕ್ಷಣಗಳು , ನೀವು ಅವರ ಬಗ್ಗೆ ಏನೆಂದು ಆಲೋಚಿಸುವಿರಿ ಎಂಬಲ್ಲ ವಿಷಯಗಳನ್ನು ಅರಿಯುವ -ತಿಳಿಸುವ ತವಕ ಅವರಲ್ಲಿ ನೀವೇ ಮೂಡಿಸಬೇಕಿದೆ ,ಮತ್ತು ನಿಮ್ಮ ಯಶಸ್ವೀ ದಾಂಪತ್ಯದ ನಂತರವೂ ಕೆಲವೊಮ್ಮೆ'' ಇವಳು ಇಷ್ಟೇ ''ಎನ್ನುವ ಭಾವ ಸಂಗಾತಿಯ ಮನದಲ್ಲಿ ಬರುವುದುಂಟು ಅದನ್ನು ಮೀರಿಯೂ ನೀವು ಬೆಳೆಯಲು ಯತ್ನಿಸಿ , ನಿಮ್ಮ ಅಂತರಂಗದಲ್ಲಿ ಬಚ್ಚಿಟ್ಟ ನಿಮ್ಮ ಚೈತನ್ಯವನ್ನು ಹೊರತರಲು ಯತ್ನಿಸಿ ,

ಬದುಕು ಇಷ್ಟೇನಾ ??? ಎಂಬ ಪ್ರಶ್ನೆಯನ್ನು  ''ಅರೆ ಏನೇನೆಲ್ಲ ಇದೆ ಈ ಲೈಫ್ ನಲ್ಲಿ ..ಎಷ್ಟೆಲ್ಲಾ ಇದೆ ಇನ್ನು ..''  ಎಂದು ಬದಲಾಯಿಸಿಕೊಳ್ಳಿ . ಜೀವನ್ಮುಖಿ ಭಾವ ಜೀವನದ ಪ್ರತಿ ಹಂತದಲ್ಲೂ ಅಗತ್ಯ ,ಮತ್ತು ಯಾವುದೇ ರೀತಿಯ ಸಮಸ್ಯೆ ಅಸಮಧಾನ ,ಅತಿರೇಕಗಳಿಗೆ ಸಲಹೆ ಸೂಚನೆಗಳನ್ನು ಯಾರು ಬೇಕಾದರೂ ಕೊಡಬಹುದು ಆದರೆ ಅದನ್ನು ಪಾಲಿಸಬೇಕಾದವರು  ನಾವೇ . ಆದರಿಂದ ಜೀವನದ ಪ್ರತಿ ಸಮಸ್ಯೆಗೆ ಉತ್ತರವೊಂದಿದೆ ..ಅದನ್ನು ಹುಡುಕುವ ಯತ್ನ ಸದಾ ಜಾರಿಯಲ್ಲಿಡಬೇಕಿದೆ ಹಾಗಿದ್ದಾಗ ಮಾತ್ರ ಈ ಮಿಡ್ ಲೈಫ್  ಕ್ರೈಸಿಸ್ ಎಂಬ ಸುಳಿಯಿಂದ ಹೊರ ಬಂದು. ನಮ್ಮ ಅನುಭವ ರಸ ಸಾರದ ರುಚಿ ಹೆಚ್ಚಿಸಲು ಸಾಧ್ಯ .

Tuesday, November 26, 2013

ಅಣ್ಣ...ನಿನಗೆ ಶುಭಾಶಯ

ಆಗ ನನಗೆ ಸರಿಯಾಗಿ ಇಂಟರ್ನೆಟ ಕಂಪ್ಯೂಟರ್ ಬಳಕೆ ಬರುತ್ತಿರಲಿಲ್ಲ ದೂರದೇಶದಲ್ಲಿದ್ದ ಇವರೊಂದಿಗೆ ಈಡಿ ದಿನ ಫೋನ್ ನಲ್ಲಿ ಮಾತಾಡಲು ಆಗುತ್ತಿರಲಿಲ್ಲ ಅದಕ್ಕೆ ಅನಿವಾರ್ಯತೆಯ ದೆಸೆಯಿಂದ ನಾನು ದಿನ ಕರ್ನಾಟಕ ವಿಶ್ವವಿದ್ಯಾಲಯದ ಕಂಪ್ಯೂಟರ್ ಲ್ಯಾಬಿಗೆ ಕನಿಷ್ಠ ಒಂದು ಘಂಟೆ ಹೋಗಿ ಅಕ್ಕ ಪಕ್ಕದವರನ್ನು ಕೇಳಿ ಸ್ವಲ್ಪ ಸ್ವಲ್ಪ  ಕಂಪ್ಯೂಟರ್ ಕಲಿಯತೊಡಗಿದ್ದೆ.

ಹಾಗೊಂದುದಿನ  ಯಾರೋ ಲಾಗ್ ಆಫ ಮಾಡದೆ ಬಿಟ್ಟು ಹೋದ ಸಿಸ್ಟಂ ಮುಂದೆ ಕುಳಿತಾಗ ಕನ್ನಡ ಅಕ್ಷರಗಳು ಕಂಡಿದ್ದವು
ಅದರಿಂದ ಇನ್ನೊಂದು ಮತ್ತೊಂದು ಪುಟ ತೆರೆಯುತ್ತಲೇ ಹೋದವು ಹಾಗೆ ಸಿಕ್ಕಿದ್ದು ಅವ ನಂಗೆ . ಆತ ನಗುವ ಚಂದಿರನ ಬಗ್ಗೆ ಬರೆದಿದ್ದ (ಆಗ ನಕ್ಷತ್ರ  ಗಳು ಚಂದ್ರನ ಕಣ್ಣುಗಳಂತೆ ಚಂದ್ರ ನಕ್ಕಂತೆ ಬಾಂದಳ ಚಿತ್ತಾರ ಬರೆದಿತ್ತು ) ಹಾಗೆ ಒಂದೊಂದೇ ಬರಹ ಓದುತ್ತ ಹೋಗಿ ಅಲ್ಲೇ ಇದ್ದ ಅವನ ಮಿಂಚಂಚೆ ವಿಳಾಸಕ್ಕೆ ಒಂದು ಪುಟ್ಟ ಪತ್ರ ಬರೆದಿದ್ದೆ  (ಈ ಬರಹಗಳಿದ್ದ ಇ-ಪುಟಗಳನ್ನ ಬ್ಲಾಗ್ ಅಂತಾರೆ ಅಂತ ತಿಳಿದಿದ್ದು ಸ್ವಲ್ಪ ತಡವಾಗಿ) ನಗುವ ಚಂದಿರನ ಉಳಿದ ಫೋಟೋ ಗಳನ್ನು ಕಳಿಸಲಾದೀತೇ ??? ಎಂದು . ಮರುದಿನ ಅವನ ಉತ್ತರ ಬಂದಿತ್ತು ಹಾಗಾಗಿತ್ತು ನಮ್ಮಿಬ್ಬರ ಪರಿಚಯ ಅವನ ಇಮೇಲ್ ವಿಳಾಸದಲಿದ್ದ ಸಂಖ್ಯೆ ಅವ ಜನಿಸಿದ ಇಸವಿ ಮತ್ತು ಅವ ನನಗಿಂತ ದೊಡ್ಡವನು ಅನ್ನೋದು ನನ್ನ  ಊಹೆ ನಿಜವಾಗಿತ್ತು.  ಅವನ ಬರಹಗಳನ್ನ ಓದುತ್ತ ಓದುತ್ತ ಪದೇ ಪದೇ ಮನಸಿಗೆ ಬರುತ್ತಿದ್ದ ಭಾವ ಎಂದರೆ ‘’ ಹಿಂದೊಮ್ಮೆ ನಾನು ಹೀಗೆ ಬರೆಯುತ್ತಿದ್ದೆ ಅದೇ ಧಾಟಿಯಲ್ಲಿ ‘’ ಈಗ್ಯಾಕೆ ಆಗ್ತಿಲ್ಲ ..... ಯಾಕೋ ಅವನ ಮೇಲೆ ಹೊಟ್ಟೆಕಿಚ್ಚು ಶುರುಆಗಿತ್ತು ...

ಹಾಗೆ ಒಂದು ದಿನ ಹುಬ್ಬಳ್ಳಿಯ ಹಳೆ  ಬಸ್ಸ ನಿಲ್ದಾಣದ  ಹತ್ತಿರ ಒಂದು ಪುಸ್ತಕದಂಗಡಿಯಲ್ಲಿ ಸಖಿ ಎಂಬ ಪತ್ರಿಕೆ ನೋಡಿದ್ದೆ  ಅದರಲ್ಲೂ ಈ ನಗುವ ಚಂದಿರ ಕಳುಹಿಸಿದವನ ಅನುವಾದಿತ ಕತೆ ಬರುತ್ತಿದ್ದವು. ಅವನ ಮೇಲೆ ಹೊಟ್ಟೆಕಿಚ್ಚು ಜಾಸ್ತಿ ಆಗಿತ್ತು
ಹಾಗೆ ನೋಡಿದರೆ ಅದೆಷ್ಟು ಲೇಖನಗಳು ಅದೆಷ್ಟು ಹೊಸ ವಿಚಾರಗಳು ,ಹೊಸ ಹೆಸರುಗಳು ಆದರೆ ನನಗೆ ಹೊಟ್ಟೆಕಿಚ್ಚು ಆಗುತ್ತಿದ್ದುದು ಇವನ ಮೇಲೆ ಯಾಕೋ ಗೊತ್ತಿಲ್ಲ , ಸ್ಪೂರ್ತಿ ಯೋ ಹಠವೋ ಒಟ್ಟಿನಲ್ಲಿ ೪ ವರುಷಗಳ ನಂತರ ನಾನು ಒಂದು ಪುಟ್ಟ ಬರಹವನ್ನ ಸಖಿಗೆ ಕಳಿಸಿದ್ದೆ , ಅದನ್ನು ಮೆಚ್ಚಿ ಅವರ ಕಡೆಯಿಂದ ನನಗೆ ಫೋನ್ ಬಂತು ಮತ್ತೆ ಬರೆಯುತ್ತೀರಾ ಎಂದು ?? ಮನಸ್ಸು ಹೊಸ ರೀತಿಯಲ್ಲಿ ಆಲೋಚಿಸ ತೊಡಗಿತ್ತು ಪ್ರತಿ ಘಟನೆಯನ್ನು ಭಿನ್ನ ದೃಷ್ಟಿಕೋನದಲ್ಲಿ ಅವಲೋಕಿಸತೊಡಗಿದ್ದೆ
ಸಖಿ ಪತ್ರಿಕೆಯ ದೆಸೆಯಿಂದ ನನಗೆ ಅದೆಷ್ಟು ಒಳ್ಳೆಯ ಸ್ನೇಹಿತರು ಮಾರ್ಗದರ್ಶಕರು ದೊರೆತರು ಅವರೆಲ್ಲರ ಕುರಿತು ಮತ್ತೊಮ್ಮೆ ಬರೆಯುತ್ತೇನೆ , ಹಾಗೆ ನನ್ನ ಬರವಣಿಗೆ ಮತ್ತೆ ನನ್ನ ಕೈಗೆ ದೊರಕಿದಾಗ ಅವನ ಮೇಲಿದ್ದ ಒಂಥರ ಹೊಟ್ಟೆಕಿಚ್ಚು, ಅದೆಂಥದೋ ಮಮಕಾರ , ಆರಾಧನೆಯಲ್ಲಿ ಬದಲಾಗಿತ್ತು. ಅದೊಂದು ಸಾರಿ ನಾನು ಅವನು ಬರೆದ ಲೇಖನ ಅಕ್ಕ ಪಕ್ಕದ ಪುಟಗಳಲ್ಲಿ ಪ್ರಕಟ ವಾಗಿತ್ತು   ಅದೆಷ್ಟು ಸಂಭ್ರಮ ಅನುಭವಿಸಿದ್ದೆ ನಾನು , ಆತ ಮಾತ್ರ ಯಾವತ್ತು ನನ್ನನ್ನ ಹೊಗಳಲಿಲ್ಲ  . ಎಲ್ಲವನ್ನೂ ಸುಮ್ಮನೆ ಗಮನಿಸುತ್ತಿದ್ದನೇನೋ!!!

ಆಮೇಲೆಲ್ಲ ಏನು ಬರೆದರೂ ಅವನಿಗೆ  ಇಮೇಲ್ ಮಾಡೋದು ರೂಡಿ , ಒಂದುಸಾರಿ ಇಮೇಲ್ ಮಾಡುವಾಗ ಸಬ್ಜೆಕ್ಟ್ ನಲ್ಲಿ ಕಾಮೆಂಟ್ಸ್ ಪ್ಲೀಸ್  ಅಂದು ಬರೆದಿದ್ದೆ  ಲೇಖನ ಓದುವ ಮುನ್ನ ಅವನ ಉತ್ತರ ಬಂದಿತ್ತು ‘’ ಬರಹಗಳನ್ನೂ ಓದೋಕೆ ಅಂತ ಬರೀ ಪ್ರಶಂಸೆ ಪಡೆಯೋಕೆ ಅಲ್ಲ !! ‘’ ಹೀಗೆ ಪ್ರತಿ ಘಟ್ಟದಲ್ಲೂ ಅವ ನನ್ನ ಕಿವಿ ಹಿಂಡಿದ ದೂರ ಇದ್ದೇ  ನನ್ನ ತಿದ್ದಿದ , ಅತಿ ಭಾವುಕಿ ನಾನು ತೀರ ಪ್ರಾಕ್ಟಿಕಲ್ ಅನ್ನಿಸುವ ಅವನು ...

ಆ ತನಕ ನಮ್ಮ ಬಾಂಧವ್ಯ ಇಮೇಲ್ ಮತ್ತು ಮೊಬೈಲ ಮೆಸೇಜ್ ಗಳಿಗೆ ಸೀಮಿತವಾಗಿತ್ತು, ಒಂದು ಭಾನುವಾರ ನಾ ಅವನಿಗೆ ಫೋನ್ ಮಾಡಿ ಮಾತಾಡಿದೆ. ಆಮೇಲೆ ಸಮಯ ಸಿಕ್ಕಾಗಲೆಲ್ಲ , ಅವನಿಗೆ ಪುರುಸೊತ್ತಿದ್ದಾಗ ಸುಮ್ಮನೆ ಅವನ ತಲೆ ತಿಂತಿದ್ದೆ ಇಷ್ಟಾದರೂ ಅವನ ನನ್ನ ಬಾಂಧವ್ಯಕ್ಕೆ ಸ್ನೇಹ ಅನ್ನುವ ಹೆಸರೇ ಇತ್ತು .

ಆ ವರುಷದ  ರಕ್ಷಾ ಬಂಧನದಂದು ಅವನ ಹತ್ತಿರ ಕಾಡಿ ಬೇಡಿ ಅವನ ವಿಳಾಸ ತಗೊಂಡು ಅವನಿಗೊಂದು ರಾಖಿ ಕಳಿಸಿದೆ.ಅವತ್ತಿಗಾಗಲೇ ನಾನು ಯಾರನ್ನು ಅಣ್ಣ ಅಂತ ಕರೆಯದೆ ವರುಷಗಳೇ ಕಳೆದಿದ್ದವು. ಬಾಲ್ಯದಿಂದಲೂ ನಾನು ಬಯಸಿದ್ದ ಅಣ್ಣ ಎಂಬ ಕಂಫರ್ಟ್ ಜೊನ ನನಗ್ಯಾವತ್ತು ಸಿಕ್ಕಿರಲಿಲ್ಲ , ಅತಿಯಾಗಿ  ಗೌರವಿಸಿದ್ದವರು ನನ್ನ ಸ್ವಾಭಿಮಾನ ಕ್ಕೆ ಪೆಟ್ಟು ಕೊಟ್ಟಿದ್ದರು , ಅವತ್ತಿಂದ ನಾನು ಯಾರನ್ನು ಅಣ್ಣ ಅಂತ ಕರೆಯುತ್ತಲೇ ಇರಲಿಲ್ಲ ಅಷ್ಟಕ್ಕೂ ಹುಡುಗಿ ಹುಡುಗ ಪ್ರೀತಿಯಿಂದ ಇರೋಕೆ ಅಕ್ಕರೆ ತೋರಿಸೋಕೆ ಒಂದು ನಿರ್ದಿಷ್ಟ ಸಂಬಂಧ ಅಗತ್ಯವಿದೆ ಎಂದು ಯಾವತ್ತು ನನಗೆ ಅನಿಸಿರಲಿಲ್ಲ ಅದನ್ನೆಲ್ಲ ಮೀರಿ ಇವನಿಗೆ ರಾಖಿ ಕಳಿಸುವ ಮನಸ್ಸಾಗಿತ್ತು ಅವ ಅದನ್ನು ಕಟ್ಟಿ ಕೊಂಡನೋ ಹಾಗೆ ಇಟ್ಟನೊ ಗೊತ್ತಿಲ್ಲ ಅವತ್ತಿಂದ ಅವ ನನಗೆ ಅಣ್ಣ ಆಗಿದ್ದ ಮೊದಲಿಂದಲೂ ಅಣ್ಣ ನೆ ಆಗಿದ್ದವನನ್ನ ಅವತ್ತು ಅಣ್ಣ ಅಂತ ಕರೆದಿದ್ದೆ  ಅಷ್ಟೇ !!
ನನ್ನ ಪಾಸ್ಪೋರ್ಟ್ ಕೆಲಸಕ್ಕೆ ಬೆಂಗಳೂರಿಗೆಹೋದಾಗ ಅವ ನನ್ನ ಭೇಟಿ ಆಗೋಗೆ ಬಂದಿದ್ದ ಜೋತೆಗೊಂದು ಡೈರಿ ಮಿಲ್ಕ್
ನನ್ನ ಬಸ್ಸ ಬಿಡುವವರೆಗೂ ನನ್ನ ಪಕ್ಕ ಕುಳಿತು ‘’ ಕೆರ್ಫುಲ್ಲಾಗಿ ಹೋಗು ಹುಷಾರು ‘’ ಅಂದು ಬಿಳ್ಕೊದುವಾಗ ಅದೆಷ್ಟು ಅಕ್ಕರೆ ಇತ್ತು ಅವನ ದನಿಯಲ್ಲಿ. ಎಷ್ಟೋ ವಿಘ್ನಗಳ ನಂತರ ನಾನು ಬಂದು ಯುಕೆ ಸೇರಿಕೊಂಡೆ ನಂತರವೂ ಅವ ಹಾಗೆ ಇದ್ದ ಯಾರು ಇಲ್ಲ ಅಂದು ಬಿಕ್ಕುವಾಗ ಯಾಕೆ ನಾನಿಲ್ಲವ ಅನ್ನುವ ದನಿಯಾಗಿ . ಈ ನಡುವೆ ಅವ ಒಮ್ಮೆ ಅಮೆರಿಕೆಗೆ ಹೋಗಿ ಬಂದ ಅಲ್ಲಿಯೂ ನಾವು ಸ್ಕೈಪ್ ನ ದಯೆಯಿಂದ ಮಾತಾಡುತ್ತಲೇ ಇದ್ದೆವು ...

ಬಂದು ಒಂದೂವರೆ ವರುಷಕ್ಕೆ ಊರಿಗೆ ಹೋಗಿದ್ದೆ  ವಾಪಾಸು ಬರುವ ಮೊದಲು ಅವನನು ನೋಡಬೇಕೆನಿಸಿತ್ತು. ಬಾ ಎಂದಿದ್ದೆ ನನಗಾಗಿ ೧.೦೦ ಘಂಟೆ ಕನ್ನಡಭವನದ ಮುಂದೆ ಕಾದಿದ್ದ , ಅದೆಷ್ಟು ಹೊತ್ತು ಮಾತಾಡಿದ್ದೆವು ಏನು ಅಂತ ಕೇಳಿದರೆ ಇಬ್ಬರಿಗೂ ನೆನಪಿಲ್ಲ !! ಮಾತಾಡಿ ಸುಸ್ತಾದ ಅವನಿಗೆ ಇರುವೆ ಹತ್ತಿದ ಪರಾಟ ತಿನ್ನಿಸಿದ್ದೆ  ಬೈದು ಬೈದು ತಿಂದಿದ್ದ . ವಾಪಸು  ಬರುವ ಮುನ್ನ ಅಲ್ಲೇ ಕ್ಯಾಂಟೀನಿನಲ್ಲಿ ಚಾ ಕುಡಿಯಲು ಹೋದೆವು ಖಾಲಿಯಾದ ಛಾಯಾ ಕಪ್ಪನ್ನು ಸೋರ್ರ್ರ್ ಎಂದು ಶಬ್ದ ಮಾಡುತ್ತ ಕುಡಿಯುತ್ತಲಿದ್ದ ಅವನನ್ನು ನೋಡಿ  ಅವ ಪಕ್ಕಾ ನನ್ನ ಅಣ್ಣನೆ ಎಂದು ಅನಿಸಿತ್ತು. ಯಾವುದೇ ತೋರಿಕೆ , ಗರ್ವ ಇಲ್ಲದ ಸರಳ ಜೀವಿ .

ನಾ ಅಷ್ಟು ಮೆಚ್ಚುವ ಅಣ್ಣನಿಂದ ಒಂದೇ ಒಂದು ಹೊಗಳಿಕೆ ಮೆಚ್ಚಿಗೆ ಪಡೆಯಲು  ನಾನು  ಹವಣಿಸಿದ್ದೇನೆ ಬಹಳ ಕಾದಿದ್ದೇನೆ ,
ತುಂಬಾ ಕಂಜೂಸು ಮನುಷ್ಯ , ಅಪ್ಪಿ ತಪ್ಪಿಯೂ ಒಳ್ಳೆ ಮಾತು ಹೇಳಲ್ಲ  ಏನೇ ಬರೆದರೂ ಏನೇ ಹೇಳಿದರು ಅದಕ್ಕೆ ಅವನ ತಕರಾರು ಇರುತ್ತೆ , ಏನಾದರು ಹೇಳಿಕೊಡು ಅಂದಾಗ ‘’ ನಾ ಯಾಕ ಹೇಳಿ ಕೊಡಲಿ ನೀ ಕಲಿ’’ ರಿಸರ್ಚ್ ಅಂಡ್ ಡೆವಲೋಪ್ಮೆಂಟ್’’ ಮಾಡು ಆಗಷ್ಟೇ ನೀ ಬೆಳಿತೀಯ ಅಂತಾನೆ . ನನ್ನ ಫೆಸ್ಬೂಕ್  ನ ಯಾವುದೇ ಸ್ಟೇಟಸ್ ಗೆ ಕಂಮೆಂಟ್ ಕೊಡಲು ನೆನಪಿರದಿದ್ದರು ನಾನು ಸ್ವಲ್ಪ ಜಾಸ್ತಿ ಆಕ್ಟಿವ್ ಆದಾಗ ‘’ ಭಾಳ ಆಯ್ತು ನಿಂದು’’ ಅಂತ ಒಂದು ಮೆಸೇಜ್ ನಿಂದ ಮೊಟಕುತ್ತಾನೆ.

ಅವನ ಬಗ್ಗೆ ಬರೆಯೋಕೆ ಸಾಕಷ್ಟಿದೆ........  ಎಂದು ಇಲ್ಲದ್ದು ಈವತ್ಯಾಕೆ ಅಂತೀರಾ? ನನ್ನ ಅಣ್ಣ ಮದುವೆ ಅಗ್ತಿದ್ದಾನೆ . ಅತ್ತಿಗೆ ಬಂದಮೇಲೆ ಹೇಗೋ ಏನೋ ? (ತಂಗಿಯ ಸಹಜ ಕಳವಳ ) ನಮ್ಮ ಮನೆಯ ಚಿಕ್ಕಪ್ಪಂದಿರು ಮದುವೆ ಆಗುವಾಗ ನಾನು ಅಳುತ್ತಿದ್ದೆ  ಇನ್ನು ಅವರು ನನಗೆ ಮುದ್ದು ಮಾಡುವುದಿಲ್ಲ ಎಂದು , ಈಗ ಹಾಗೆ ಮನಸು ಒಂದೆಡೆ ಖುಷಿ ಮತ್ತೊಂದೆಡೆ ದುಗುಡ ಅನುಭವಿಸ್ತಿದೆ , ಅಣ್ಣ ತಂಗಿ ಆಗಲು ಒಡಹುಟ್ಟಿದವರಾಗಬೇಕಿಲ್ಲ , ಒಡಹುಟ್ಟಿದ ಅಣ್ಣ ಇಷ್ಟು ಮುದ್ದಿಸಬೇಕೆನ್ನುವ ಕಾನೂನು ಇಲ್ಲ ಎಲ್ಲ ನಸೀಬಿನ ಮಾತು .
ಈ ಅಣ್ಣ ತಂಗಿ ಬಾಂಧವ್ಯದ ಬಗ್ಗೆ  ನಂಬಿಕೆಯೇ ಇಲ್ಲದ ಹೊತ್ತಲ್ಲಿ ನನಗೆ ದೇವರು ಕರುಣಿಸಿದ ವರ ಅವನು..
ಅವನ ಪ್ರೀತಿ ನನ್ನ ಮೇಲೆ ಯಾವತ್ತಿಗೂ ಹೀಗೆ ಇರಲಿ ಅತ್ತಿಗೆ ಬಂದ ಮೇಲೂ.ಪ್ರೀತಿಯ ಅಣ್ಣ .
ಮದುವೆಯ ದಿನದ ಹಾರ್ದಿಕ ಶುಭಾಶಯಗಳು
 ಇಬ್ಬರೂ ಖುಷಿಯಾಗಿರಿ ಯಾವತ್ತು !!
ನಿನ್ನ ಮದುವೆಗೆ ಬರಲಾಗುತ್ತಿಲ್ಲ , ಅದಕ್ಕೆ ಮುಂದಿನ ಸಾರಿ ಬಂದಾಗ ನಾ ಹೇಳಿದ
ಹೋಟೆಲಿಗೆ ಉಟಕ್ಕೆ ಕರ್ಕೊಂಡು  ಹೋಗು ,
ನಿನ್ನ ಮದುವೆಗೆ ಎರಡು ದಿನ ಮೊದಲು ಬಂದು
ಮದುವೆ ಮುನ್ನಾದಿನ  ಸಂಗೀತ ಕಚೇರಿ ಮಾಡ್ತೀನಿ ಅಂತ ಹೇಳಿದ್ದೆ ನಿನಗೆ ನೆನಪಿದೆಯೋ ಇಲ್ಲವೋ
ಆದರೆ ಎಲ್ಲ ಮಿಸ್ ಮಾಡ್ತಾ ಇದ್ದೀನಿ.. ನನ್ನ ಲೆಕ್ಕದ ಸೀರೆ ತೆಗೆದಿಡು  ...
ಪ್ರೀತಿಯಿಂದ
ನಿನ್ನ

ಅಮಿತಿ 

Thursday, August 1, 2013

ಮಾರ್ಬಲ್ ಆರ್ಚ್ ಕೇವ್ಸ್ - ಗುಹಾಂತರಂಗದೊಳಗೊಂದು ದಿನ ಮನುಷ್ಯನ ತಣಿಯದ  ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ , ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ , ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡು ಜೊತೆಗೆ ನಿಂತು ಮಾತನಾಡುವುದು ಅಪರೂಪಕ್ಕೆ ಕಾಣಸಿಗುವ ದೃಶ್ಯ , ಅಂಥದ್ದೊಂದ್ದು ನಿಸರ್ಗ ದ ವಿಸ್ಮಯ ಮತ್ತು ಮಾನವನು ಅತಿ ಜತನದಿಂದ ಅದರ ಮೂಲರೂಪಕ್ಕೆ ಧಕ್ಕೆ ಬಾರದಂತೆ ಕಾದುಕೊಂಡಿರುವ ಅಪರೂಪದ ಸ್ಥಳವೇ  ನೋರ್ದರ್ನ್ ಐರ್ಲಾಂಡ್ ನ '' ಮಾರ್ಬಲ್ ಆರ್ಚ್ ಕೇವ ''

 ಭೂಮಿಯ ಮೆಲ್ಪದರಿನಲ್ಲಿ ರೂಪುಕೊಳ್ಳುವ ಅನೇಕರೀತಿಯ ಗುಹೆಗಳನ್ನು ತಜ್ಞರು ಗುರುತಿಸುತ್ತಾರೆ ಮತ್ತು ಅವುಗಳು ರೂಪುಗೊಂಡಿರುವ ರೀತಿ ವಿನ್ಯಾಸ ಲಕ್ಷಣ ಗಳನ್ನ ಗಮನಿಸಿ ಗುಹೆಗಳನ್ನು ಹಲವು ರೀತಿಯಲ್ಲಿ ವಿಂಗಡಿಸುತ್ತಾರೆ ಅವುಗಳಲ್ಲಿ ಕೆಲವು ಇಲ್ಲಿವೆ .
೧, ಸೊಲ್ಯುಶನ್ ಕೇವ್ಸ್
ಸುಣ್ಣದ ಕಲ್ಲು ಮತ್ತು ನೀರಿನ ನಿರಂತರ ಸಹಚರ್ಯ ರೂಪಿಸುವ ಗುಹೆಗಳು .

೨,ವೋಲ್ಕಾ ಕೇವ್ಸ್
ಭೂಮಿಯೊಳಗಿಂದ ಉಕ್ಕುವ ಲಾವಾ , ಜ್ವಾಲಾಮುಖಿಗಳು ತಣಿದು ಹೋದಮೇಲೆ ಉಂಟಾದ ಗುಹೆಗಳು

೩,ತಲುಸ್ ಕೇವ್ಸ್
ಎತ್ತರ ಪರ್ವತ ಪ್ರದೇಶದಿಂದ ನೈಸರ್ಗಿಕ ವೈಪರಿತ್ಯ ಗಳಿಂದ  ಕಲ್ಲುಗಳು ಉರುಳಿ ಪರ್ವತದ ಕೆಳಭಾಗದಲ್ಲಿ ಉಂಟುಮಾಡುವ ಗುಹೆಗಳು.

೪.ಸೀ ಕೇವ್ಸ್
ಸಮುದ್ರದ ನೀರು ಮತ್ತು ದಡ ದಲ್ಲಿರುವ ಕಲ್ಲುಬಂಡೆಗಳ ಘರ್ಷಣೆ ಮತ್ತು ಮರಳು ತೆರೆಯೊಂದಿಗೆ ಸ್ಥಳಾಂತರ ಗೊಳ್ಳುವಾಗ ಉಂಟಾಗುವ ಗುಹೆಗಳು

೫ ಗ್ಲಸಿಯರ್ ಕೇವ್ಸ್
ಗ್ಲಾಸಿಯರ್ ಹಿಮಬಂಡೆ ಗಳಿಂದ ಉಂಟಾಗುವ ಗುಹೆ , ಕಾಣಲು ಮಂಜಿನ ಮಹಲಿನಂತೆ ಕಂಡರೂ ವಾಸ್ತವದಲ್ಲಿ ಇದು ಸಶಕ್ತ ಗುಹೆಯಾಗಿರುತ್ತದೆ . ಇಂಥ ಗ್ಲಸಿಯರ್ ಹಿಮದ ನಡುವೆಯೇ ೪೦೦ ವರ್ಷಗಳ ಕಾಲ ನಮ್ಮ ಕೇದಾರನಾಥ್ ದೇವಸ್ತಾನ ಧ್ಯಾನ ಮಾಡುತಿತ್ತು  ಎಂಬುದು ತಜ್ಞರ ಅಂಬೋಣ

ಮಾರ್ಬಲ್ ಆರ್ಚ್ ಕೇವ್ಸ್
ನೋರ್ದರ್ನ್  ಐರ್ಲಾನ್ದ್  ನ  ಫರ್ಮಾನಾ  ಕೌಂಟಿ  ವ್ಯಾಪ್ತಿಯಲ್ಲಿ  ಬರುವ ಮಾರ್ಬಲ್ ಆರ್ಚ್ ಕೇವ ಸಂಶೋಧಿಸಿದ್ದು ಫ್ರಾನ್ಸ್ ನ ಸ್ಪೆಲಿಯೋಲೋಜಿಸ್ಟ್ (speleology-study of caves and other karts) ಎಡ್ವರ್ಡ್ ಅಲ್ಫ್ರೆಡ್ ಮಾರ್ಟೆಲ್ , ೧೮೯೫ರಲ್ಲಿ ಈತ ಮತ್ತು ಡಬ್ಲಿನ್ ವಾಸಿ ನಿಸರ್ಗ ತಜ್ಞ ಜೆಮೀ ಒಂದು ಕ್ಯಾನ್ವಾಸ್ ಬೋಟಿನಲ್ಲಿ ಆರಂಭ ದ್ವಾರದಿಂದ ಸುಮಾರು ೩೦೦ ಮೀಟರ್ ದೂರದ ಗುಹೆಯ ಮಾರ್ಗ ಕ್ರಮಿಸಿ ನಕ್ಷೆ ಮಾಡಿ ಇಟ್ಟರು . ನಂತರ ಕ್ರಮವಾಗಿ ಹಲವು ಆಸಕ್ತರು ಸೇರಿ ಸುಮಾರು ೪. ೫ ಕಿಲೋಮೀಟರ್ ಗಳಷ್ಟು ಉದ್ದದ ಈ ಗುಹೆಯನ್ನು ಎಲ್ಲರ ಗಮನಕ್ಕೆ ತಂದರು 
.
ಮಾರ್ಬಲ್ ಆರ್ಚ್ ಕೇವ  ಸುಣ್ಣದ ಕಲ್ಲುಗಳಿಂದ ಉಂಟಾದ ಗುಹೆ . ಈ ಗುಹೆಯ ಒಳಗೆ ಶೃ -ಕ್ರೋಪ್ಪ, ಅಗ್ಹಿಂರಾನ್ , ಒವೆನ್ಬ್ರಾನ್ ಹೆಸರಿನ   ೩ ನದಿಗಳ ಸಂಗಮವಾಗುತ್ತದೆ . ಮತ್ತು ಇಲ್ಲಿ ಉಂಟಾಗಿರುವ ಭೌಗೊಲಿಕ  ಬದಲಾವಣೆಗಳು ,ಕಲ್ಲು ಗಳ ಮೇಲಿನ ವಿನ್ಯಾಸಗಳು ಮಿಲಿಯನ  ವರ್ಷಗಳ ಕಾಲ  ಈ ಮೂರು ನದಿಗಳ ಏರಿಳಿತ ಮತ್ತು ಹರಿಯುವಿಕೆಯ ಪರಿಣಾಮಗಳೇ.
೨೦೦೮ರಲ್ಲಿ ಯುನೆಸ್ಕೋ  ಈ ಪ್ರದೇಶವನ್ನು ''ಗ್ಲೋಬಲ್ ಜಿಯೋ ಪಾರ್ಕ್ '' ಎಂದು ಘೋಷಿಸಿತು . ೧೯ನೇ  ಶತಮಾನದಿಂದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ ಈ ಸ್ಥಳ ೨೦೦೮ ರ ನಂತರ ಯೂರೋಪಿನ ಮುಖ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಬಂದಿತು.
ಐರ್ಲ್ಯಾಂಡ್ ಗೆ ಭೇಟಿ ಕೊಟ್ಟವರು ಇದನ್ನು ನೋಡದೆ ಮರಳಿದರೆ ಅವರ ಪ್ರವಾಸ ಅಪೂರ್ಣ ಎಂದೇ ಅರ್ಥ !!

ಸಾಂಪ್ರದಾಯಿಕ  ದ್ವಾರ ಹೊಕ್ಕಿದ ನಂತರ  ೧೫೦ ಮೆಟ್ಟಿಲು ಮತ್ತು ಒಂದೂವರೆ ತಾಸಿನ  ನಿರಂತರ ನಡಿಗೆ ,  ಗುಹೆಯೊಳಗೆ ಹರಿಯುವ ನದಿಯಲ್ಲಿ ೫ ನಿಮಿಷದ ದೋಣಿಯಾನ , ದೋಣಿಯಲ್ಲಿ ಕುಳಿತಾಗ ಕಲ್ಲಿನ ಕಮಾನುಗಳಿಂದ ಒಸರುವ ನೀರ ಒರತೆ , ಕಡಿದಾದ ಭಾಗದಲ್ಲಿ ನಡೆಯುತ್ತಿರುವಾಗ  ಪಟ್ಟನೆ ಎದುರಾಗುವ ಬಂಡೆಗಳು. ಅದೇನೇನೋ ವಿನ್ಯಾಸಗಳು ಅಲ್ಲೇಲ್ಲೊ ಹಿಮ ತುಂಬಿ ಕೊಂಡಂತೆ , ಮತ್ತೊಂದೆಡೆ ಹೂಕೋಸು ಅರಳಿದಂತೆ , ಒಮ್ಮೆ ಆಕಳ ಕೆಚ್ಚಲು , ಮತ್ತೊಮ್ಮೆ ಪುಟ್ಟ ಕುಟೀರ , ಅದೋ ಆ ಕಲ್ಲು ಆಕಳ ಕಿವಿಯನ್ತಿದೆ  ಅಂದು ಕೊಂಡು  ಈಚೆ ತಿರುಗಿದರೆ  ಭಯಂಕರ ರಾಕ್ಷಸ ಬಾಯಿ ತೆರೆದು ನಿಂತಂತೆ!!!   ಅದು ಭೂಮಿಯ ಪದರ  ಅಮ್ಮನ ಮಡಿಲಿನಂತೆ ತಂಪು ತಂಪು . ನೆಲ ಕಾಣುವ ನೀರು ಹಿತ ನೀಡಿದರೆ ಕೆಲವೊಂದೆಡೆ  ಕಪ್ಪಗಿನ ಕಂದಕ ಭಯ ಹುಟ್ಟಿಸುತ್ತವೆ ಸಧ್ಯಕ್ಕೆ ಈ ಗುಹೆಯ ೧ ಭಾಗ ಮಾತ್ರ ಪ್ರವಾಸಿಗರು ನೋಡಬಹುದು ಉಳಿದ ೩ ಭಾಗ ನೀರು ತುಂಬಿಕೊಂಡಿದೆ. ಚಳಿಗಾಲದಲ್ಲಿ ಈ ಸ್ಥಳ ಪೂರ್ತಿಯಾಗಿ ಮುಚ್ಚಿರುತ್ತದೆ , ಜೊತೆಗೆ  ತಾಪಮಾನ ಮತ್ತು ಏರಿಳಿತದ ದಾರಿಯ ಕಾರಣದಿಂದ ಅಸ್ತಮ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಈ ಗುಹೆಯನ್ನು ನೋಡುವುದು ಸ್ವಲ್ಪ ಕಷ್ಟಕರ ,

ಪೃಥೆ ಯ ಅಧ್ಭುತ ಅಂತರಾಳ ದಲ್ಲಿ  ಇದು ನನ್ನ ಎರಡನೇ ಪ್ರವಾಸ  , ನನ್ನ ಮಗ ನಾನು ಸ್ಪರ್ಧೆಗೆ ಬಿದ್ದವರಂತೆ ಅದು ನೋಡು , ಇದು ನೋಡು ಅಂದು ನನ್ನ ಪತಿದೇವರ ಪ್ರಾಣ ತಿಂದಿದ್ದೇವೆ ಜೊತೆಗೆ ಕರ್ನಾಟಕದ  ಸಂಗೀತ ಬಂದುಗಳು  ಅವರ ನಗೆ ಚಟಾಕಿಗಳು , ನಗುವಿನ ಪರಿಚಯವೇ ಇಲ್ಲದ ನಮ್ಮ ಗೈಡ್. ಪ್ರಯಾಣದಲ್ಲಿ ಮೆಟ್ಟಿಲುಗಳನ್ನು ಕಂಡ ಕೂಡಲೇ ನನಗೆ ಆಗುತ್ತಿದ್ದ ತಳಮಳ !! ಒಂದೂವರೆ ತಾಸಿನ ಈ ಪಯಣದ ನಂತರ ಹಸಿವಿನಿಂದ ಹೈರಾಣಾಗಿ ತಿಂದು ಮುಗಿಸಿದ ಒಂದು ಕುಕ್ಕರ್ ಫುಲ್ ಬಿಸಿಬೇಳೆ ಭಾತ್ ಮತ್ತು ಸ್ಯಾಂಡ್ವಿಚ್ ನಮ್ಮ ಪಾಲಿನ ಅಮೃತ ವಾಗಿದ್ದು ಪ್ರವಾಸದ ಎಡಿಶನಲ್  ವಿಷಯಗಳು .

ಅಲ್ಲಿ ನಾನು ಫೋಟೋ ಕ್ಲಿಕ್ಕಿಸಲು ಪರದಾಡಿದ್ದು ಮತ್ತೊಂದು ಕತೆ , ನನ್ನ  ಕಣ್ಣಿಗೆ ಕಂಡಷ್ಟು ನನ್ನ ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ  ಕತ್ತಲೆ  ಅನ್ನೋ ನೆವ ಹೇಳಿತು  ಆದರು ಒಂದಷ್ಟು ಚಿತ್ರಗಳಿವೆ ಇಲ್ಲಿ ನೋಡಿ
Tuesday, November 6, 2012

ಮತ್ತಿದು ಹೀಗೆ ನಡೆಯುತ್ತದೆ

ಪ್ರತಿ ಹೃದಯದಲ್ಲೊಂದು ಪುಟ್ಟ ಕೊಣೆ ,
ಅದೊಂದು ಧಾಮ ಸುಬಧ್ರ  ಸಶಕ್ತ 
ಭಗ್ನ ಪ್ರೇಮದಿಂದ ಘಾಸಿಗೊಂಡ 
ಹೃದಯಕ್ಕೊಂದಿಷ್ಟು ನೆಮ್ಮದಿ ಕೊಡಲು ,
ಕನಿಷ್ಠ ಪಕ್ಷ ಮತ್ತೊಬ್ಬರು ಆ ಸ್ಥಾನ ತುಂಬುವ ತನಕ 

ಪ್ರತಿಬಾರಿ ನಿನ್ನೊಂದಿಗೆ ಮಾತಾಡಿದೆ 
ಹಲವು ಸ್ಥಾಯಿಗಳಲಿ ನಿನ್ನ ಮೆಚ್ಚಿಸಲು ಯತ್ನಿಸಿದೆ ,
ನೀನು ನಟನೆ ಇಲ್ಲದೆಯೇ ಉತ್ತರಿಸಿದೆ ,
ನಾ ತುಂಬಾ ಮಾತನಾಡುತ್ತೇನೆ ಎಂದೆ ,
ಆದರೆ ನಾ ವಹಿಸಿದ  ಮೌನ
 ನನ್ನ ಸ್ವ-ರಕ್ಷಣೆಯ  ತಂತ್ರ ಎಂದು 
 ನೀ ತಿಳಿಯದೆ ಹೋದೆ 

ಪ್ರತಿಬಾರಿ ಗುಲಾಬಿಯನ್ನು ತಂದೆ ,
ಪ್ರತಿಬಾರಿ  ನನ್ನ ಗುಲಾಬಿಯೇ ಎಸೆಯಲ್ಪಟ್ಟಿದ್ದೇಕೆ ?
ಮತ್ತಿದು  ಹೀಗೆ  ನಡೆಯುತ್ತದೆ ಎಂದು ಗೊತ್ತಿದ್ದೂ ನಾನಿನ್ನ ಪ್ರೀತಿಸುತ್ತಿರುವುದಾದ್ರು ಏಕೆ ??

ಕೆಲವೊಮ್ಮೆ ಅನಿಸಿದ್ದು ಉಂಟು ,
ನನ್ನ ಮೌನ ವೆ ಎಲ್ಲಕ್ಕೂ ಕಾರಣವೇನೋ  ಎಂದು ,
ಅದಕ್ಕೆ ನನ್ನ ಹೃದಯದ ಆ ಪುಟ್ಟ ಕೋಣೆಯನ್ನು 
ನಿನ್ನೊಂದಿಗೆ ಹಂಚಿಕೊಳ್ಳುತ್ತಿರುವೆ ,
ಇದನ್ನು ಚೂರು ಮಾಡುವ ಸಂಪೂರ್ಣ ಹಕ್ಕು ನಿನ್ನದೇ .

ಈಗ ನನ್ನ ಕಣ್ಣುಗಳು ಸುಮ್ಮನೆ ಮುಚ್ಚಿಕೊಂಡಿವೆ 
ಅವು ನೋಡುವುದು ನೀ ನೋಡಿದ್ದನ್ನು , ನೀ ತೋರಿಸಿದ್ದನ್ನು 
ಮತ್ತಿದು ಹೀಗೆ ನಡೆಯುತ್ತದೆ ...ನಡೆಯುತ್ತಲೇ ಇರುತ್ತದೆ ....

ನನ್ನ ಆಯ್ಕೆ ಮಾತ್ರ ನೀನೇ 
ನಿನಗೂ ಕೊಟ್ಟಿದ್ದೇನೆ ನಿರ್ಧರಿಸುವ ಹಕ್ಕು 
ನನ್ನ ಆಯ್ಕೆ ಮಾತ್ರ ನೀನೆ....
ಮತ್ತೆ ನೀ  ಮತ್ತು ನನ್ನ ಹೃದಯ 
ಚೂರು ಚೂರು  ಮಾಡಿ ಅದರ ಮೇಲೇ  
ನಡೆದು ಮತ್ತೊಬ್ಬನ ತಕ್ಕೆ ಸೇರಲು..

ಮತ್ತಿದು ಹೀಗೆ ನಡೆಯುತ್ತದೆ ,
ಹೃದಯದ ಮೂಲೆಯಲ್ಲೊಂದು ಕೋಣೆ  ಇದೆ ..

ಮತ್ತಿದು ಹೀಗೆ ನಡೆಯುತ್ತದೆ 

 (ಇಂಗ್ಲಿಶ್  ಹಾಡೊಂದರ  ಭಾವಾನುವಾದ )


Thursday, September 27, 2012

ಚಕ್ಕುಲಿ ಚರಿತ್ರೆ .
ನನ್ನಿಂದ ಈ ಬರಹ ಬರೆಸ್ತಿರೋದು ವಿಜಯಕ್ಕನ ಬ್ಲಾಗ್ ಪೋಸ್ಟು , ಗರಿ ಗರಿ ಕರುಂ ಕುರುಂ ಚಕ್ಕುಲಿ ಬಗ್ಗೆ ಅವರು ಕೊಟ್ಟ ಚಂದದ ನಿರೂಪಣೆ. ಅದೆಷ್ಟು ಅಡುಗೆ ಫೋಟೋ ತೆಗೆದಿಟ್ಟಿದ್ದೇನೆ ಒಂದರ ಕುರಿತು ಹತ್ತು ಕತೆಗಳು ಆದರೆ  ಒಂದಕ್ಷರವನ್ನು ಇತ್ತೀಚಿಗೆ ಬರೆಯಲಾಗುತ್ತಿಲ್ಲ ,ಯಾಕೆ ಅನ್ನೋದು ಗೊತ್ತಿಲ್ಲ ಕಷ್ಟ ಪಟ್ಟು ಅವರಿವರು ಬರೆಯುತ್ತಿದ್ದಾರೆ  ಅನ್ನೋ ಹಪಹಪಿಗೆ  ಬರೆಯುವ ಮನಸ್ಸು ಕೂಡ ಇಲ್ಲ ,ಇವತ್ಯಾಕೋ ಈ ಚಕ್ಕುಲಿ ನನ್ನ ಮನಸ್ಸನ್ನು ಆವರಿಸಿದೆ.ವಿಜಯಕ್ಕನ ಚಕ್ಕುಲಿ ಗಳು ಅದೆಷ್ಟು ಶಕ್ತಿಶಾಲಿ ನೋಡಿ ???

ಚಕ್ಕುಲಿ ಮತ್ತು ಹೊಳಿಗೆ  (ಪೂರನ ಪೂಳಿ) ಇವೆರಡು ತಿಂಡಿಗಳಿಗೆ ನಾವು ಹಬ್ಬಗಳನ್ನೂ ಬ್ರಾಂಡ್ ಮಾಡಿದ್ದೇವೆ ,ಅಮ್ಮ ಚವತಿಗೆ ಚಕ್ಕುಲಿ ಯುಗಾದಿಗೆ ಹೊಳಿಗೇ ಮಾಡೋದು ವಾಡಿಕೆ ,ಆದರೆ ಆ ಚಕ್ಕುಲಿಯ ಕತೆಗಳು ಸಿಕ್ಕಾಪಟ್ಟೆ ರಸವತ್ತು ,ನಮ್ಮ ಹಳೆ ಮನೆ ಮುಂದೆ ಸಾರಸ್ವತ ಕುಟುಂಬವೊಂದು ನೆಲೆಸಿತ್ತು ಅವರ ಮನೆ ಯನ್ನ ನಾವು ಎದುರುಮನೆ ಅನ್ನೋದೇ ರೂಡಿ ,ಅವರ ಮಕ್ಕಳು ಕರೆದಂತೆ ಅವರನ್ನು ಆಯಿ ಪಪ್ಪಾ ಅಂತಲೇ ನಾವು ಕರೆಯೋದು ನಮ್ಮಲ್ಲಿ ಗಣಪತಿ ಇಲ್ಲದ ಕಾರಣ ಚವತಿಯ ಸಕಲ ಸಂಭ್ರಮ ನಾನು ಕಂಡಿದ್ದು ಅವರ ಮನೆಯಲ್ಲಿ ಚವತಿಗೆ ಚಕ್ಕುಲಿ ಮಾಡುತ್ತಿದ್ದಾಗ ಅವರು ಹರಕೆ ಹೊರುತಿದ್ದರು, ಅದು  ಸರಿಆಗದಿದ್ದರೆ ''ಯಾವಳ್  ಹಾಳಾದ ಕಣ್ಣೋ ......'' ಅಂತ ಬೈಯ್ಯೋಕ್ ಶುರು ಮಾಡಿದ್ರೆ ಕೂತ ಗಣಪ್ಪ ಎದ್ದು ಓಡಿಹೋಗಿ ಮತ್ತೆರಡು ವರ್ಷ ಬರಬಾರದು ಹ್ಯಾಂಗ್ ವಟ ವಟ ಮಾಡೋರು ,

ಇನ್ನೊಂದು ಚಕ್ಕುಲಿ ಕತೆ ನನ್ನ ಸಂಗೀತಕ್ಕೊರ್ ಮನೇದು ,ಅವರು ರುಚಿ ನೋಡೋಕಷ್ಟೇ ಚಕ್ಕುಲಿ  ಕೊಡೋದು.ಮತ್ತೆ ಆ ರುಚಿ ಕಾಣಬೇಕೆಂದರೆ ಒಂದ್ ವರ್ಷ ಕಾಯಬೇಕು..ಕಾಯುವಿಕೆಯ ಸುಖಕ್ಕೆಂದು ಸಿಗುವುದು ಮತ್ತೆರೆಡೆ ಚಕ್ಕುಲಿ ,

ನಾನು ತಿಂದ ಸುಪರ ಡ್ಯೂಪರ ಚಕ್ಕುಲಿ ಅಂದರೆ ನನ್ನ ಪಪ್ಪನ ಆತ್ಮೀಯ ಸ್ನೇಹಿತ ವಾಮನ್ ಮಾಮನ ಮನೇದು ಅದೇನು ಹಾಕ್ತಿದ್ರೋ, ಬಾಯಲ್ಲಿಟ್ಟರೆ ನೀರು ಆಗೋದು ಚವತಿಯಲ್ಲಿ ಗಣಪ್ಪನಿಗಿಂತ ನಾನು ತಂಗಿ ಅವರ ಮನೇ ಚಕ್ಕಲಿ ಬರೋದೆ ಕಾಯುತ್ತಿದ್ದೆವು ,
 ಮತ್ತೊಂದು ಚಕ್ಕುಲಿ ನೆನಪು ನನ್ನ ಮಮ್ಮಮ್ಮ (ಅಮ್ಮಮ್ಮ ) ನದು ಆಕೆ ಚಕ್ಕುಲಿಗಿಂತ ತಿನ್ಗೊಳಲು ಅನ್ನೋ ಚಕ್ಕುಲಿಯ ಸೋದರ ಸಂಬಂಧಿಯನ್ನು ಜಾಸ್ತಿ ತಯಾರಿಸೋಳು , ಅಕ್ಕಿ ನೆನೆಸಿಟ್ಟು ಮಾಡುವ ಈ ತಿಂಡಿಯನ್ನು ಆ ಬಾವಿ ಬಾಯಿಯ ಒರಳಲ್ಲಿ ರುಬ್ಬಿ ರುಬ್ಬಿಯೇ ಇರಬೇಕು ನನ್ನ ಮಮ್ಮಮ್ಮ ೧೨ ಹೆತ್ತರೂ  ಆಕೆಯ ಹೊಟ್ಟೆ ಸಪಾಟು ,

 ಈ ಚಕ್ಕುಲಿ ಬಗೆಗೆ ತೀರದ ಆಕರ್ಷಣೆ ಹುಟ್ಟಿಸಿದ್ದು ಅವರಿವರ ಬಯಕೆಊಟದ ಆರತಿಗೆಂದು ಮಾಡುತ್ತಿದ್ದ ೫/೭/೯ ಸುತ್ತಿನ ಚಕ್ಕುಲಿಗಳು ಒಮ್ಮೆ ಅಷ್ಟು ದೊಡ್ಡ ಚಕ್ಕುಲಿ ಮಾಡಿ ತಿನ್ನಬೇಕು ಅನ್ನೋ ಕನಸು ಇನ್ನು ನನಸಾಗಿಲ್ಲ 
ಇನ್ನು ನನ್ನ ಅಮ್ಮನ ಚಕ್ಕುಲಿ ತಯಾರಿಬಗ್ಗೆ ಹೇಳದಿದ್ದರೆ ನನ್ನ ಬರಹ ಅಪೂರ್ಣ ,ಅಮ್ಮ ಚವತಿಗೆ ಒಂದು ವಾರ ಮೊದಲು ಅಕ್ಕಿ ,ಹುರಿದ ಉದ್ದಿನಬೇಳೆ ಸ್ವಲ್ಪ ಪುಟಾಣಿ ಸೇರಿಸಿ ಸ್ಟೀಲಿನ ಡಬ್ಬಿಯಲ್ಲಿ ಹಾಕಿ ಗಿರಣಿಗೆ  ಒಯ್ಯಲು  ಆಜ್ಞೆ ಮಾಡುತ್ತಿದ್ದಳು ,  ಅದರೊಂದಿಗೆ ಇನ್ನು ಕೆಲವು ಕಂಡಿಶನ್ ಇರುತ್ತಿದ್ದವು 
 • ಆ ಡಬ್ಬಿಯನ್ನು ನಮ್ಮ ಪಟಾಲಂ ನ ಯಾರು ಮುಟ್ಟಬಾರದು ,
 • ಆ ಚಕ್ಕುಲಿ ಹಿಟ್ಟು ಬೀಸುವ ಮೊದಲು ನಮ್ಮದೇ ಮನೆಯ ಅಕ್ಕಿ ಅಥವಾ ಗೋದಿ ಬೀಸಬೇಕು ,
 • ತಪ್ಪಿಯೂ ಕೂಡ ಅದರಲ್ಲಿನ ಅಕ್ಕಿಗೂ ನಮ್ಮ ಬಾಯಿಗೂ ಯಾವುದೇ ಮುಖಾ ಮುಖಿ ಆಗಬಾರದು .
 • ಚಕ್ಕುಲಿ ಸರಿಯಾಗದಿದ್ದರೆ  ಸಿದ್ದ ಮಾಡಿದ ಹಿಟ್ತಾದರು ಸರಿ ಅದನ್ನ ಗಿರಣಿಯವನ  ತಲೆಗೆ ತಂದು ತಿಕ್ಕುತ್ತೇವೆ ಎಂದು ಹೇಳು! (ಹೇಳ ಗೀಳೀಯ ಜಾಗ್ರತೆ )
ಆ ಮೂರು ಆಜ್ಞೆಯಲ್ಲಿ ಒಂದನ್ನು ಮಾತ್ರ ನಾವು ಪಾಲಿಸುತ್ತಿದ್ದುದು , ಕೆಲ ವರ್ಷ ಅದು ತಪ್ಪಿದ್ದಿದೆ ಹುರಿದ ಅಕ್ಕಿಯೊಂದಿಗೆ ಹುರಿದ ಉದ್ದಿನಬೇಳೆ ಬರಿ ಬಾಯಲ್ಲಿ ಎಂದಾದರೂ ತಿಂದಿದ್ದೀರಾ ?? ಅದೊಂಥರ ಸಿನಿಮ ನೋಡ್ತಾ ಕಡಲೆ ಬೀಜ ತಿಂದಂತ ಅನುಭವ ಕೊಡುತ್ತೆ ,ಗಿರಣಿಯಲ್ಲಿ ನಮ್ಮ ಸರದಿ ಬರೊ ತನಕ ನಾವು ಅದನ್ನು ಅಷ್ಟೇ ಅಪ್ಯಾಯಮಾನವಾಗಿ ಸವಿಯುತ್ತಿದ್ದೆವು,ಕೊನೆಯದು ಅಮ್ಮನ ಬಾಯಲ್ಲಿ ಕೇಳಲಷ್ಟೇ ಚಂದ ,ಕೊನೆಯಲ್ಲಿ ಜಾಗ್ರತೆ ಅನ್ನೋದು ಇನ್ನು ಚಂದ ,,, ಈಗ ಪಾಪ ನನ್ನ ಪಪ್ಪಾ ಇದರ ಫಲಾನುಭವಿ ,
ಇದು ಚಕ್ಕುಲಿ ತಯಾರಾಗುವ ಕತೆ ತಯಾರಾದ ಮೇಲೆ ಅದರ ನಿಜವಾದ ಮಜ ಅಲ್ವೇ??

ಚಕ್ಕುಲಿ ಯಾವತ್ತು ಬಿಸಿ ಬಿಸಿ ತಿನ್ನಬಾರದು ,ರವೆ ಉಂಡೆ ಕಡಬು ಕರ್ಚಿ ಕಾಯಿ ,ಚಕ್ಕುಲಿ ಹಿಟ್ತಲ್ಲಿ ಮಾಡಿದ ಪೈಸ ವಡೆ ಎಲ್ಲವು ಖಾಲಿ ಆಗುತ್ತಿದ್ದಾಗ ,ಮಾತ್ರ ಆ ಚಕ್ಕುಲಿಯ ನಿಜ ರುಚಿ ಅರಿವಾಗೋದು ,ಡಬ್ಬಿ ತಳ, ಪಾತಾಳ ರಸಾತಳ ಅನ್ನೋ ಶಬ್ಧಗಳ ಮೂರ್ತ ರೂಪ ,
ಇನ್ನು ಚಕ್ಕುಲಿಯನ್ನು ಹೇಗೆ ತಿನ್ನಬಹುದು (''ಬಾಯಿಂದ'' ಅನ್ನೋ ಫನ್ನಿ ಉತ್ತರದ ನಂತರ ...ಇದನ್ನು ಓದಿಕೊಳ್ಳಿ ) ಹಸಿ ಕ್ಹೊಬ್ಬರಿ ತುರಿಯೊಂದಿಗೆ ಮೊದಲ ಪ್ರಯೋಗ ,ಅಮ್ಮ ಸಾರಿಗೆ ಅಂತ ತುರಿದಿಟ್ಟ ಕ್ಹೊಬ್ಬರಿ ಇಟ್ಟಲ್ಲೇ ಮಾಯಾ ,
ನಂತರ ಆ ದಿನದ ಸಾಂಬಾರ್ ಜೊತೆಗೆ ಅದ್ದಿ  ತಿನ್ನದಿದ್ದರೆ ಅದನ್ನು ಚಕ್ಕುಲಿ ಸೀಸನ್ ಅನ್ನೋದೇ ಇಲ್ಲ ಬಿಡಿ ,

ಚಕ್ಕುಲಿ ಘಟ್ಟಿ ಇದ್ದರು  ನುರಿ ನುರಿ ಆಗಿ ಬಾಯಲ್ಲೇ ನೀರಾಗುತ್ತಿದ್ದರೂ  ಯಾವುದೇ ಭೇದವಿಲ್ಲದೆ ಪ್ರಯೋಗಿಸಬಹುದಾದ ರುಚಿ ಚಹಾ ಕಪ್ಪಿನಲ್ಲಿ ಚಕ್ಕುಲಿ ಹಾಕಿ ೨ ನಿಮಿಷ ವಿರಮಿಸಲು ಬಿಟ್ಟು ಚಹಾ  ಕುಡಿಯುತ್ತಲೇ ಅದರಲ್ಲೇ ನೆನೆದ ಚಕ್ಕುಲಿ ತಿನ್ನುವುದು ,ವಿಚಿತ್ರ ಅನ್ನಿಸಿದರೂ ಇದರ ರುಚಿ ಸವಿದವನಿಗೆ ಈಗಾಗಲೇ ಚಕ್ಕುಲಿ ಚಹಾ ಕೈಬೀಸಿ ಕರೆದಿರುತ್ತದೆ ,
ಇನ್ನು ನನ್ನ ಅಜ್ಜಿಗೆ ಹಲ್ಲಿಲ್ಲ ಆದರವಳು ನನ್ನಜ್ಜಿ , ಅವಳ ನಾಲಿಗೆಗೂ ಅಮಿತ ರುಚಿಯ ಚಪಲ ,ಬಾವಿ ಮುಖದ ಅಷ್ಟೇ ಆಳದ ಆ ರುಬ್ಬುಗುಂಡಿನ  ಮೇಲೆ ಇಟ್ಟಿರುವ ಪುಟ್ಟ ಗುಂಡಕಲ್ಲನ್ನು   ಉರುಟುರೂಟು ಚಕ್ಕುಲಿಮೇಲೆ  ನಿರ್ದಯತೆಯಿಂದ ಜಜ್ಜಿ ಅದರ ಪುಡಿ ತಿಂದು ಆಸ್ವಾಧಿಸುತ್ತಾಳೆ  , ಮತ್ತೆ ಕಾಮೆಂಟ್ ಗೆ  ಕಡಿಮೆ ಇಲ್ಲ .

ಇನ್ನು ನಾನು ಚಕ್ಕುಲಿ ಮಾಡಿದ ಕಥೆ ಇಂತಿದೆ , ಹೋದ ಸಾರಿ ಚವತಿಗೆ ಒಂದಷ್ಟು ಜನರನ್ನು ಊಟಕ್ಕೆ ಕರೆದಿದ್ದೆವು ಚವತಿ ಅಂದ ಮೇಲೆ ಚಕ್ಕುಲಿ ಇಲ್ಲದಿದ್ದರೆ??? ಅಂದು ಏನೇನೋ ಮಾಡಿ ಚಕ್ಕುಲಿ ಹಿಟ್ಟು ರೆಡಿ ಮಾಡಿದೆ ,  ಚಕ್ಕುಲಿ ಅಚ್ಚು ,ಒತ್ತು ಎರಡು ಇರಲಿಲ್ಲ ಅದಕ್ಕೇನಂತೆ ಅನ್ನೋ ಉಡಾಫೆಯಲ್ಲಿ ಕೇಕ್ ಡೆಕೊರೆಟ ಮಾಡುವ ಪೈಪಿಂಗ್ ಬ್ಯಾಗ್ ನಲ್ಲಿ ಚಕ್ಕುಲಿ ಹಿಟ್ಟು ಹಾಕಿ ಕೊನೆಪಕ್ಷ ಚಕ್ಕುಲಿಯನ್ತದ್ದು ಏನಾದರೊಂದು ಮಾಡೋಣ ಅಂತ ಪ್ರಯತ್ನಿಸಿದೆ , ಅದೂ ಜಲೆಬಿಯಂತೆ ಕಾಣುತಿತ್ತು ,ಚಕ್ಕುಲಿ ಪ್ರಯೋಗ ಜಲೇಬಿ ಆಗಿದ್ದಕ್ಕೆ ಖೇದವಿತ್ತು ,
ಅದಕ್ಕೆ ಹೋದ ತಿಂಗಳು ಏನಾದರಾಗಲಿ ಅಂದು ಈ ಸಾರಿ ಭಾರತಕ್ಕೆ ಹೋದಾಗ ತಂದ ಚಕ್ಕುಲಿ ಅಚ್ಚಿನಲ್ಲಿ  ಬೋಣಿ ಮಾಡಿ ಬಿಡೋಣ ಅನ್ನಿಸಿತು ,ಆಗ ಮಾತ್ರ ಚಕ್ಕುಲಿ ಚಕ್ಕುಲಿಯಂತೆಯೇ ಕಂಡು ರುಚಿಯು ಅದರಂತೆ ಇತ್ತು. 

ನಮ್ಮ ನೀಲ ಸುಂದರಿ (ನಂ ಕಾರು )ಗೇರ್ ಸಂದಿಯಲ್ಲ್ಲಿ ಹೊಂದಿಕೊಳ್ಳುವಂತ ಡಬ್ಬದಲ್ಲಿ ಪೂರ್ತಿ ಚಕ್ಕುಲಿ ತುಂಬಿಕೊಂಡು ನನ್ನ ಕಾರ್ಯಕ್ರಮ ದ ಪೂರ್ವತಯಾರಿಗೆಂದು  ನಾನು ,ಪತಿದೇವ ಬೆಲ್ಫಾಸ್ಟ್  ಹೊರಟೆವು ಆದಿನ ಆ ಡಬ್ಬಿಯಲ್ಲಿ ಕೈಯ್ಯಾಡಿಸಿದಷ್ಟು ಮದುವೆ ದಿನ ಓಕುಳಿ ನೀರಿನಲ್ಲಿ ಚಿನ್ನದುಂಗುರಕ್ಕು ನಾವಿಬ್ಬರು ತಡಕಾಡಿರಲಿಲ್ಲ, ಶತಮಾನಗಳಿಂದ ಹಸಿದಿರುವರಂತೆ ವರ್ತಿಸುವ ನಮ್ಮಿಬ್ಬರ ಮುಖ ನೋಡುತ್ತಿದ್ದ ನನ್ನ ಮಗ '' R u really hungry ? shall we go to KFC ?'' ಅನ್ನೋ ಪ್ರಸ್ತಾಪ ಮುಂದಿಟ್ಟಿದ್ದ .
ಉಪಸಂಹಾರ 
ಇದೆಲ್ಲ ಸರಿ ನಾನು ಮಾಡಿದ ಆ ಅಧ್ಬುತ (?)ರುಚಿಯ ಚಕ್ಕುಲಿ ಯ ಸರಳ ಸರಳ ರೆಸಿಪಿ ಇಲ್ಲಿದೆ ನೋಡಿ , ಇದನ್ನು ಒಮ್ಮೆ ಟ್ರೈ ಮಾಡಿದ ಮೇಲೆ ಚಕ್ಕುಲಿ ಕೇವಲ ಹಬ್ಬದ ತಿಂಡಿಯಾಗಿ ಉಳಿಯಲ್ಲ ಅನ್ನೋದು ಗ್ಯಾರಂಟಿ .
೨ ಕಪ್  ಅಕ್ಕಿ  
೧ ೧/೨  ಉದ್ದಿನಬೇಳೆ 
೪ ಚಮಚ ಪುಟಾಣಿ (ಹುರಿಗಡಲೆ)
ಹಸಿಕ್ಹೊಬ್ಬರಿ ತುರಿ ಸ್ವಲ್ಪ 
ಬಿಳಿ ಎಳ್ಳು, ಜೀರಿಗೆ ಒಂದೊಂದು ಚಮಚ 
ತಿಂಗೊಳಲು  -ಚಕ್ಕಲಿ ಸೋದರ ಸಂಬಂಧಿ 
ಉಪ್ಪು ರುಚಿಗೆ ,
optional - ಶುಂಟಿ ಬೆಳ್ಳುಳ್ಳಿ ಕರಿಬೇವು ಹಸಿಮೆಣಸು ಜೀರಿಗೆ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಂಡ್ ಮಸಾಲೆ .
 ೧,ಅಕ್ಕಿಯನ್ನು ೪-೫ ಘಂಟೆಗಳ ಕಾಲ ನೆನೆಸಿ , ಮತ್ತು ಕ್ಹೊಬ್ಬರಿ ತುರಿಯೊಂದಿಗೆ  ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಕೊಳ್ಳಿ 
೨,ಉದ್ದಿನಬೇಳೆ  ಘಮ ಬರುವಂತೆ ಕೆಂಪಗೆ ಹುರಿದುಕೊಳ್ಳಿ 
೩.ಹುರಿದ ಉದ್ದಿನಬೇಳೆಯನ್ನು ಹುರಿಗಡಲೆಯೊಂದಿಗೆ ಮಿಕ್ಷಿಯಲ್ಲಿ ಪುಡಿಮಾಡಿಕೊಳ್ಳಿ 
೪ ,ರುಬ್ಬಿದ ಅಕ್ಕಿ ಹಿಟ್ಟಿಗೆ ಈ ಪುಡಿ ಸೇರಿಸಿ, ಇದೆ ಸಂದರ್ಭದಲ್ಲಿ ರುಬ್ಬಿಕೊಂಡ ಮಸಾಲೆ ,ಬಿಳಿ ಎಳ್ಳು  ಜೀರಿಗೆ ಉಪ್ಪು ಸೇರಿಸಿಕೊಳ್ಳಬೇಕು 
೫ ಚನ್ನಾಗಿ ಕಲಿಸಿಕೊಳ್ಳಿ ,ಈಗ ಮಿದುವಾದ ಹಿಟ್ಟು ಸಿದ್ಹವಾಗುತ್ತದೆ,ಅಷ್ಟು ಉದ್ದಿನ ಹಿಟ್ಟು ಬೇಕಾಗದೆಯೂ ಇರಬಹುದು ಅಕ್ಕಿ ಹಿಟ್ಟು ಎಷ್ಟು ನೀರು ಒಳಗೊಂಡಿದೆ ಅನ್ನೋದರ ಮೇಲೆ ಇದರ ಪ್ರಮಾಣ ನಿಶ್ಚಯ ವಾಗುತ್ತದೆ 
೬  ಈಗ ಚಕ್ಕುಲಿ ಒತ್ತಲ್ಲಿ  ಈ ಹಿಟ್ಟನ್ನು ಹಾಕಿ ಚಕ್ಕುಲಿ ಮಾಡಿ ಗರಿ ಗರಿಯಾಗಿ ಕರಿದು ಸವಿಯಿರಿ .

ಇದು ನನ್ನ ಅಮ್ಮಮ್ಮ ನ ರೆಸಿಪಿ , ಈ ಬರಹ ಓದಿದ ಮೇಲೆ ನಾನು ಅದೆಷ್ಟು ಭೂಕಿ ಪ್ಯಾಸಿ ,ಅನ್ನೋದು ನಿಮಗೇ ಗೊತ್ತಾಗಿರುತ್ತದೆ ಇನ್ನುಮೇಲೆ ಯಾರಾದರು ತಮ್ಮ ಮನೆಗೆ ಕರೆಯುವ ಮುನ್ನ ನೂರು ಬಾರಿ ಯೋಚಿಸೋದಂತು ಖಂಡಿತ ಆದರೂ ನನ್ನಂಥ ಮನಸವರು ಇರ್ತಾರೆ ಅನ್ನೋ ಭರವಸೆ ಮೇಲೆ ಈ ಬರಹ ಪೋಸ್ಟ್ ಮಾಡ್ತಿದ್ದೇನೆ ಮತ್ತೊಮ್ಮೆ ವಿಜಯೇಶ್ವರಿಗೆ ಧನ್ಯವಾದ ,ಕಮೆಂಟುಗಳಿಗೆ ಸ್ವಾಗತ