ಮಾತು ಮೌನದ ಸಂಕದ ಮೇಲೆ
ನೀವೇನು ಕೆಲಸ ಮಾಡೋದು ಅಲ್ಲಿ ? ಹೀಗೊಂದು ಪ್ರಶ್ನೆ ಅದೆಷ್ಟು ಜನ ಕೇಳಿದ್ದಾರೆ ಅಂತ ಲೆಕ್ಕ ಮಾಡಲು ಹೋಗಿಲ್ಲ , ಆದರೆ ಅವರು ಹಾಗೆ ಕೇಳಿದಾಗೆಲ್ಲ ನನಗೆ ನಾನೇ ಕೇಳಿಕೊಳ್ಳುತ್ತೇನೆ , ಹೌದು ''ನೀ ಏನು ಕೆಲಸ ಮಾಡುತ್ತಿ ಅಮಿತಾ ?'' ವೃತ್ತಿ ಪ್ರವೃತ್ತಿ ಎರಡು ಒಂದೇ ಆಗಿರುವ ಒಂದಷ್ಟು ನಶೀಬ್ವಾನ್ ಜನರಲ್ಲಿ ನಾನು ಒಬ್ಬಳು ಅಂತ ನನಗೆ ನಾನು ಹೇಳಿಕೊಳ್ತೇನೆ.
ಮೊದಲೆಲ್ಲ ಸಂಗೀತ ಕಲಾವಿದೆ ಅಂತ ಪರಿಚಯಿಸಿಕೊಳ್ಳುತ್ತಿದ್ದ ನನ್ನನ್ನ ಕಲ್ಚರಲ್ ಫೆಸಿಲಿಟೇಟರ್ /ಕಲ್ಚರಲ್ ಅಂಬಾಸಿಡರ್ ಮಾಡಿದ್ದೂ ಈ ನಾರ್ದರ್ನ್ ಐರ್ಲೆಂಡ್ ಎಂಬ ದೇಶ. ನಾನು ಹವ್ಯಾಸ ಎಂದು ಕಲಿತ ಮದರಂಗಿ, ರಂಗೋಲಿ , ಸಾಂಜಿ , ವರ್ಲಿ , ಹಸೆ , ಮಂಡಲ, ಭಾರತೀಯ ಸಾಂಪ್ರದಾಯಿಕ ಅಡುಗೆ ಹೀಗೆ ಎಲ್ಲವನ್ನು ಪ್ರೀತಿಯಿಂದ ನಾನು ಇಲ್ಲಿ ಜನರಿಗೆ ಅವಕಾಶ ಸಿಕ್ಕಾಗಲೆಲ್ಲ ಹೇಳಿ ಕೊಟ್ಟಿದ್ದೇನೆ , ಅವರು ಅಷ್ಟೇ ಆದರದಿಂದ ಅಕ್ಕರೆಯಿಂದ ಅಂಥ ಅವಕಾಶಗಳನ್ನ ಪದೇ ಪದೇ ಕೊಟ್ಟು ನನ್ನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.
ಇದೊಂದು ಕಾರಣದಿಂದಲೇ ನಾನು ಈ ಪುಟ್ಟ ದೇಶದ ಮೂಲೆ ಮೂಲೆ ಸುತ್ತಿದ್ದೇನೆ ಈ ಸುತ್ತಾಟಗಳು ಅದೆಷ್ಟು ದೇಶ, ಭಾಷೆಯವರೊಂದಿಗೆ ಬೆರೆಯುವ , ಅಪರೂಪದ ಅನುಭವಗಳನ್ನ ಒದಗಿಸಿ, ಬದುಕಿನ ಬಗೆಗೆ ಭಿನ್ನ ದೃಷ್ಟಿಕೋನ ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡಿವೆ.
ಭಾರತೀಯ ಸಂಸ್ಕೃತಿಯ ಬಗ್ಗೆ ಒಲವು ಹೆಮ್ಮೆ ತುಸು ಹೆಚ್ಚೆ ಇರುವ ನನಗೆ, ಇತರ ಸಂಸ್ಕೃತಿಗಳ ಬಗ್ಗೆಯೂ ಕುತೂಹಲ ,ಗೌರವ ಮೂಡಿಸುವಲ್ಲಿ ಈ ಕೆಲಸ ಸಹಾಯ ಮಾಡಿದ್ದಲ್ಲದೆ, ಕೆಲವೊಮ್ಮೆ ಮನಸಿನ್ನ ಸೂಕ್ಷ್ಮ ಭಾವಗಳನ್ನು ಕೆದಕಿ ಹಾಕಿದೆ, ಹೀಗ್ಯಾಕೆ ? ಅನ್ನುವ ಪ್ರಶ್ನೆಯನ್ನ ಪದೇ ಪದೇ ಕೇಳಿಕೊಳ್ಳುವಂತೆ ಮಾಡಿದೆ.
ಅಂಥದ್ದೇ ಒಂದು ದಿನ, ಮದರಂಗಿಯ ಕುರಿತು ಇದ್ದ workshop ನಲ್ಲಿ, ಮೆಹಂದಿಯ ಇತಿಹಾಸ , ಅದರ ಔಷದೀಯ ಉಪಯೋಗ , ಅದು ಜನಪ್ರಿಯತೆ ಪಡೆದ ಬಗೆ ಹೀಗೆ ಎಲ್ಲವನ್ನ ವಿವರಿಸಿ , ಅಜ್ಜಿ ಮನೆಯಿಂದ ತಂದು ಲ್ಯಾಮಿನೇಟ್ ಮಾಡಿ ಇಟ್ಟುಕೊಂಡ ಒಂದಷ್ಟು ಮದರಂಗಿ ಎಲೆಗಳು , ಪುಡಿ , ಎಲ್ಲ ತೋರಿಸಿ , ಕೊನೆಯಲ್ಲಿ ಭಾಗವಹಿಸಿದ, ಜೊತೆಗೆ ಬಂದ ಎಲ್ಲರಿಗೂ ಮದರಂಗಿ ಹಾಕುವ ಕ್ರಮ.
ಕಾರ್ಯಾಗಾರದಲ್ಲಿ ಇದ್ದ ಇಪ್ಪತ್ತು ಜನ ಮೆಹಂದಿ ಹಾಕುವ ಸಮಯ ಬಂದಾಗ ಎಪ್ಪತ್ತು -ನೂರು ಆಗುವುದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಎಂದಿನಂತೆ ಸರತಿಯಲ್ಲಿ ನಿಂತ ಮಕ್ಕಳಿಗೆ ಪುಟ್ಟದೊಂದು ಚಿತ್ತಾರ ಬಿಡಿಸಿ ಕಳಿಸುತ್ತಿದ್ದೆ , ಏನು ಚಿತ್ರ ಬೇಕು ಅಂದಾಗ ಅವು ತಮ್ಮ ಮನೀಷೆಯನ್ನು ಹೊರ ಹಾಕುತ್ತವೆ , ಡ್ರಾಗನ್ ,ವೂಲ್ಫ್ ,ನಾಯಿ ,ಹಲ್ಲಿ ಮೊಸಳೆ ..ಹೀಗೆ ಏನೇನೋ ,ಒಂದಷ್ಟು ಹೆಸರು ಬರೆಸಿಕೊಳ್ಳುತ್ತವೆ, ಫುಟ್ಬಾಲ್ ತಂಡದ ಹೆಸರು , ಮೊದಲ ಪ್ರೇಮದಲ್ಲಿ ಬಿದ್ದ ಕೆಲ ಹುಡುಗರು ಚಿಕ್ಕದಾಗಿ ಹುಡುಗಿಯ ಹೆಸರಿನ ಮೊದಲಕ್ಷರ ಬಿಡಿಸಿಕೊಂಡು ಮುಖದ ತುಂಬಾ ಸಾರ್ಥಕ್ಯ ಹೊತ್ತು ಹೋಗುತ್ತವೆ , ಕೆಲವೊಂದಷ್ಟು ಬರಿ ವೈನ್ ಗ್ಲಾಸ್ , ಸಿಗರೇಟ್ ತಲೆಬುರುಡೆ ಚಿತ್ರ ಬಿಡಿಸು ಅಂದಾಗ ಬುರುಡೆಗೆ ಒಂದು ಮೊಟಕೋಣ ಅನಿಸೋದು ಸುಳ್ಳಲ್ಲ ಅದೇನೇನೋ ಪ್ರಶ್ನೆಗಳು, ಕೊಟ್ಟ ಉತ್ತರಕ್ಕೆ ಹುಟ್ಟುವ ಮತ್ತಷ್ಟು ಮಾತುಗಳು , ಬಹಳಷ್ಟು ಸಲ ನಾನು ತಲೆ ಎತ್ತುವಮೊದಲೇ ಇನ್ನೊಂದು ಕೈ ನನ್ನ ಮುಂದೆ ಸಿದ್ಧವಾಗಿರುತ್ತದೆ, ಮತ್ತವರ ಪ್ರಶ್ನೆಗಳು.
ಹೀಗೆ ನಡೆಯುತ್ತಿರುವಾಗ ಅದರಲ್ಲೊಬ್ಬ ಪುಟ್ಟ ಹುಡುಗ ಬಂದು ನನ್ನೆದುರಿಗೆ ಕುಳಿತುಕೊಂಡ, ಯಾವುದೇ ಮಾತು ಅವನಿಂದ ಬಾರದಿದ್ದಾಗ , ನಾನೇ ಮುಖವೆತ್ತಿ ಏನು ಬಿಡಿಸಲಿ?ಎಂದು ಕೇಳಿದೆ ..ಕೈಗಳ ಮೇಲೆ ರಂಗೋಲಿ ಚಿಕ್ಕಿ ಇಟ್ಟಂತೆ ಮಾಡಿ ತೋರಿಸಿದ ,ಸ್ಟಾರ್ ಬಿಡಿಸಲ ಅಂತಾ ಕೇಳಿದ ಮೇಲೂ ಆತನ ವರ್ತನೆಯಲ್ಲಿ ಏನು ಭಿನ್ನತೆ ಕಾಣಲಿಲ್ಲ. ಸುಮಾರು ಸರಿ ಕೇಳಿದ ಮೇಲೆ ನನ್ನ ಕಣ್ಣು ಗಳಲ್ಲಿ ಏನೋ ಹುಡುಕಿದಂತೆ ಅವುಗಳನ್ನೇ ನೋಡುತ್ತಿದ್ದ ,''ನನ್ನ ಮನಸ್ಸಿಗೆ ಬಂದಿದ್ದು ಬಿಡಿಸಲ ? ಅಂದೆ, ಉತ್ತರಿಸದೆ ಮತ್ತೆ ಕೈ ಮೇಲೆ ಚಿಕ್ಕಿ ಹಾಕುತ್ತಿದ್ದ ಅವನ ಕೈ ಮೇಲೆ ಮೂರು ನಕ್ಷತ್ರಗಳನ್ನು ಬಿಡಿಸಿ ಮುಗೀತು ಅನ್ನುವಂತೆ ನೋಡಿದೆ, ಚಿತ್ರ ಬಿಡಿಸಿಕೊಂಡ ಮಕ್ಕಳು ಖುಷಿಯಿಂದ Thankyou , you are the best lady in the world" ಅನ್ನುವ ಕಾಮನ್ ಡೈಲಾಗ್ ಕೇಳಲಿಕ್ಕೆ ಖುಷಿ ಆಗುತ್ತದೆ ಜೊತೆಗೆ ಮದರಂಗಿ ಹಾಕಿಕೊಂಡ ಕೈಯ್ಯನ್ನ ಕಾಳಜಿಯಿಂದ ಎತ್ತಿಕೊಂಡು ಮತ್ತೆ ಮತ್ತೆ ಚಿತ್ತಾರ ನೋಡಿಕೊಳ್ಳುವುದನ್ನ ನೋಡಿದರೆ ನಗುವೂ ಬರುತ್ತದೆ.
ಆದರೆ ಈ ಮಗು ಹಾಗೇನು ಹೇಳದೆ ಬರೀ ಖುಷಿ ಹೊತ್ತ ಕಣ್ಣುಗಳಿಂದ ನನ್ನ ನೋಡುತ್ತಿತ್ತು , ಅಷ್ಟರಲ್ಲಿ ಹಿಂದಿನಿಂದ ಬಂದ ಅವರಪ್ಪ'' ಥಾಂಕ್ ಯು ಹೇಳು '' ಅಂದ. ಮಗು ನಿಷ್ಕಲ್ಮಶ ನಗುವಿನೊಂದಿಗೆ ಖುಷಿ ತುಂಬಿಕೊಂಡ ಕಣ್ಣುಗಳನ್ನ ಅರಳಿಸುತ್ತ ಥಾಂಕ್ ಯು ಹೇಳಿತು ಆದರೆ , ಅಲ್ಲಿ ಶಬ್ದಗಳೇ ಇರಲಿಲ್ಲ ,ಸನ್ನೆಯಷ್ಟೇ! ಆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಮೇಲೂ ನನಗೆ ಆ ಮಗುವಿನ ಖುಷಿ ತುಂಬಿದ ನೀಲಿ ಕಣ್ಣುಗಳು , ಮತ್ತು ಆ ಸನ್ನೆ ಪದೇ ಪದೇ ನೆನಪಾಗುತ್ತಿತ್ತು.
ಆ ಮಗುವಿಗೆ ಮಾತಾಡಲು ಬರುವುದಿಲ್ಲವ? ಅದೊಂದು ಭಾವವೇ ನನ್ನ ಪೂರ್ತಿ ಹಿಂಡಿ ಹಾಕಿತು , ಕಣ್ಣು ತುಂಬಿ ಕೊಂಡವು , ಮತ್ತೆ ಆ ಮಗುವಿನ ಥಾಂಕ್ ಯು ಸಂಜ್ಞೆ ನೆನಪಾಗಿ ಏನೋ ಯಾತನೆ. ಹಾಗಂತ ಆ ಮಗು ನಾನು ನೋಡಿದ ಮೊದಲ ಮಾತುಬಾರದ ವ್ಯಕ್ತಿಯಲ್ಲ , ಆದರೆ ಅವ ನೆನಪಿಸಿದ್ದು ಮಾತ್ರ ಹಲವರನ್ನ , ಬಾಲ್ಯದಿಂದ ನಾ ಇಲ್ಲಿಗೆ ಬರುವ ತನಕ ನಾ ನೋಡಿದ ಎಲ್ಲ ಮಾತು ಬರದವರನ್ನ , ಕಣ್ಣಲ್ಲಿ ಸದಾ ಆಶಾವಾದ ಸೂಸುವವರನ್ನ , ಅವರೊಂದಿಗೆ ಬೆಸೆದುಕೊಂಡ ನನ್ನ ನೆನಪುಗಳನ್ನು.
ನನ್ನ ಅಜ್ಜಿ ಮನೆಯ ಹತ್ತಿರದಲ್ಲಿದ್ದ ಗೀತ (ಮೂಕಿ ಅಂತಾನೆ ಅವಳ ನಿಕ್ ನೇಮ್), ಶಿರಸಿಯ ನೀಲೆಕಣಿ ಆಟೋ ಗ್ಯಾರೇಜನವರ ಮಗಳು ವಿಭಾ , ನನ್ನ ತವರು ಮುಂಡಗೋಡಿನ ಆ ಬಿಳಿ ಧಿರಿಸು ,ಟೋಪಿ ತೊಟ್ಟುಕೊಂಡು, ಮಕ್ಕಳನ್ನ ಕಂಡರೆ ಉರಿದು ಬೀಳುತ್ತಿದ್ದ ಮತ್ತು ನಾನು ಹಾಡುತ್ತೇನೆ ಅನ್ನೋ ಒಂದೇ ಕಾರಣಕ್ಕೆ ನನ್ನತ್ತ ಒಂದು ವಿಶೇಷ ಕಳಕಳಿ ತೋರುತ್ತಿದ್ದ ಆದರೆ ನನ್ನ ಹಾಡನ್ನ ಒಮ್ಮೆಯೂ ಕೇಳದ ಆ ಮೂಗಪ್ಪ .
ಬೆಳಗಾವಿಯ ಮಾರುತಿಗಲ್ಲಿಯ ಹನುಮಪ್ಪನ ಗುಡಿಯೊಳಗೆ ಶನಿವಾರಕ್ಕೊಮ್ಮೆ ಸೇರಿ ಮೀಟಿಂಗ್ ನಡೆಸುತ್ತ ಮೌನದಲ್ಲೇ ಗಂಭೀರ ಮಾತುಕತೆ ನಡೆಸುತ್ತ ತಮ್ಮ ಲೋಕದಲ್ಲಿ ಕಳೆದು ಹೋಗಿ..ನಮ್ಮಂಥವರಿಗೆ ಸೋಜಿಗವಾಗುತ್ತಿದ್ದ ಆ ಮೂಕರ ಗುಂಪು. ಮನಸ ಕಪಾಟಿನ ತಳದ ಅರಿಯಲ್ಲಿ ಬೆಚ್ಚಗೆ ಸೇರಿಕೊಂಡಿರುವ ಬರ್ಫಿ, ಖಾಮೋಶಿಯಂಥ ಸಿನಿಮಾ ಪಾತ್ರಗಳು , ಯಾಕೋ ಇವೆಲ್ಲ ನೆನಪಾಗಿ ಮತ್ತೆ ಮತ್ತೆ ಕಣ್ಣು ತೇವತೇವ.
ಇದು ಕನಿಕರ ಅಥವಾ ಅನುಕಂಪ ಅಲ್ಲವೇ ಅಲ್ಲ! ಯಾಕೋ ಅನಿಸೋಕೆ ಶುರು ಆಗಿದೆ '' ನಾವ್ಯಾಕೆ ಇಷ್ಟು ಮಾತಾಡ್ತೀವಿ .ಎಲ್ಲದ್ದಕ್ಕೂ ನನ್ನ ಅಭಿಪ್ರಾಯ ಕೊಡಲೇಬೇಕು ಅನ್ನುವ ಹಠ ಮಾಡುವ ಮನಸು, ಮಾತಾಡಲೇಬೇಕಾದ ಅನಿವಾರ್ಯತೆ ಇದ್ದಾಗ, ಯಾರೋ ನಾವಾಡುವ ಒಂದು ಒಳ್ಳೆ ಮಾತಿಗೆ ಕಾಯುತ್ತಿರುವಾಗ, ಬೇಕಂತಲೇ ವಹಿಸುವ ಜಾಣ ಮೌನ , ನಾವ್ಯಾಕೆ ಇಷ್ಟು ಮಾತಾಡುತ್ತೇವೆ ಅವರ್ಯಾಕೆ ಅಷ್ಟು ಮೌನ???? ಮೌನದಲ್ಲೂ ಮಾತಾಡುವ ಅವರು ಮಾತು ಮಾತಿನಲ್ಲೂ ಊನ ಹುಡುಕುವ ನಾವು.
(ಉದಯವಾಣಿ , ವಿಶೇಷ ಪುರವಣಿ ದೇಸಿಸ್ವರದಲ್ಲಿ ನೂಲಿನ ತೇರು ಎಂಬ ಅಂಕಣ ದಲ್ಲಿ ಪ್ರಕಟಿತ)
No comments:
Post a Comment