Monday, January 18, 2021

ನೂಲಿನ ತೇರು - ೨

 ಮಾತು ಮೌನದ ಸಂಕದ ಮೇಲೆ


ನೀವೇನು ಕೆಲಸ ಮಾಡೋದು ಅಲ್ಲಿ ? ಹೀಗೊಂದು ಪ್ರಶ್ನೆ ಅದೆಷ್ಟು ಜನ ಕೇಳಿದ್ದಾರೆ ಅಂತ ಲೆಕ್ಕ ಮಾಡಲು ಹೋಗಿಲ್ಲ , ಆದರೆ ಅವರು ಹಾಗೆ ಕೇಳಿದಾಗೆಲ್ಲ ನನಗೆ ನಾನೇ ಕೇಳಿಕೊಳ್ಳುತ್ತೇನೆ , ಹೌದು ''ನೀ ಏನು ಕೆಲಸ ಮಾಡುತ್ತಿ  ಅಮಿತಾ ?'' ವೃತ್ತಿ ಪ್ರವೃತ್ತಿ ಎರಡು ಒಂದೇ ಆಗಿರುವ ಒಂದಷ್ಟು ನಶೀಬ್ವಾನ್ ಜನರಲ್ಲಿ ನಾನು ಒಬ್ಬಳು ಅಂತ ನನಗೆ ನಾನು ಹೇಳಿಕೊಳ್ತೇನೆ. 


ಮೊದಲೆಲ್ಲ ಸಂಗೀತ ಕಲಾವಿದೆ ಅಂತ ಪರಿಚಯಿಸಿಕೊಳ್ಳುತ್ತಿದ್ದ  ನನ್ನನ್ನ ಕಲ್ಚರಲ್ ಫೆಸಿಲಿಟೇಟರ್ /ಕಲ್ಚರಲ್ ಅಂಬಾಸಿಡರ್ ಮಾಡಿದ್ದೂ ಈ ನಾರ್ದರ್ನ್ ಐರ್ಲೆಂಡ್ ಎಂಬ ದೇಶ. ನಾನು ಹವ್ಯಾಸ ಎಂದು ಕಲಿತ ಮದರಂಗಿ, ರಂಗೋಲಿ , ಸಾಂಜಿ  , ವರ್ಲಿ , ಹಸೆ , ಮಂಡಲ, ಭಾರತೀಯ ಸಾಂಪ್ರದಾಯಿಕ ಅಡುಗೆ ಹೀಗೆ ಎಲ್ಲವನ್ನು ಪ್ರೀತಿಯಿಂದ ನಾನು ಇಲ್ಲಿ ಜನರಿಗೆ ಅವಕಾಶ ಸಿಕ್ಕಾಗಲೆಲ್ಲ ಹೇಳಿ ಕೊಟ್ಟಿದ್ದೇನೆ , ಅವರು ಅಷ್ಟೇ ಆದರದಿಂದ ಅಕ್ಕರೆಯಿಂದ ಅಂಥ ಅವಕಾಶಗಳನ್ನ ಪದೇ ಪದೇ ಕೊಟ್ಟು ನನ್ನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. 


ಇದೊಂದು ಕಾರಣದಿಂದಲೇ ನಾನು ಈ ಪುಟ್ಟ ದೇಶದ ಮೂಲೆ ಮೂಲೆ ಸುತ್ತಿದ್ದೇನೆ ಈ ಸುತ್ತಾಟಗಳು ಅದೆಷ್ಟು ದೇಶ, ಭಾಷೆಯವರೊಂದಿಗೆ ಬೆರೆಯುವ , ಅಪರೂಪದ ಅನುಭವಗಳನ್ನ ಒದಗಿಸಿ, ಬದುಕಿನ ಬಗೆಗೆ ಭಿನ್ನ ದೃಷ್ಟಿಕೋನ ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡಿವೆ. 


ಭಾರತೀಯ ಸಂಸ್ಕೃತಿಯ ಬಗ್ಗೆ ಒಲವು ಹೆಮ್ಮೆ ತುಸು ಹೆಚ್ಚೆ ಇರುವ ನನಗೆ, ಇತರ ಸಂಸ್ಕೃತಿಗಳ ಬಗ್ಗೆಯೂ ಕುತೂಹಲ ,ಗೌರವ ಮೂಡಿಸುವಲ್ಲಿ ಈ ಕೆಲಸ ಸಹಾಯ ಮಾಡಿದ್ದಲ್ಲದೆ, ಕೆಲವೊಮ್ಮೆ ಮನಸಿನ್ನ ಸೂಕ್ಷ್ಮ ಭಾವಗಳನ್ನು ಕೆದಕಿ ಹಾಕಿದೆ, ಹೀಗ್ಯಾಕೆ ? ಅನ್ನುವ ಪ್ರಶ್ನೆಯನ್ನ ಪದೇ ಪದೇ ಕೇಳಿಕೊಳ್ಳುವಂತೆ ಮಾಡಿದೆ. 



ಅಂಥದ್ದೇ ಒಂದು ದಿನ,  ಮದರಂಗಿಯ ಕುರಿತು ಇದ್ದ workshop ನಲ್ಲಿ,  ಮೆಹಂದಿಯ ಇತಿಹಾಸ , ಅದರ ಔಷದೀಯ ಉಪಯೋಗ , ಅದು ಜನಪ್ರಿಯತೆ  ಪಡೆದ ಬಗೆ  ಹೀಗೆ ಎಲ್ಲವನ್ನ ವಿವರಿಸಿ , ಅಜ್ಜಿ ಮನೆಯಿಂದ ತಂದು ಲ್ಯಾಮಿನೇಟ್ ಮಾಡಿ ಇಟ್ಟುಕೊಂಡ ಒಂದಷ್ಟು ಮದರಂಗಿ ಎಲೆಗಳು , ಪುಡಿ , ಎಲ್ಲ ತೋರಿಸಿ , ಕೊನೆಯಲ್ಲಿ ಭಾಗವಹಿಸಿದ, ಜೊತೆಗೆ ಬಂದ ಎಲ್ಲರಿಗೂ ಮದರಂಗಿ ಹಾಕುವ ಕ್ರಮ.

ಕಾರ್ಯಾಗಾರದಲ್ಲಿ ಇದ್ದ ಇಪ್ಪತ್ತು ಜನ ಮೆಹಂದಿ ಹಾಕುವ ಸಮಯ ಬಂದಾಗ ಎಪ್ಪತ್ತು -ನೂರು ಆಗುವುದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 


 ಎಂದಿನಂತೆ ಸರತಿಯಲ್ಲಿ ನಿಂತ ಮಕ್ಕಳಿಗೆ ಪುಟ್ಟದೊಂದು ಚಿತ್ತಾರ ಬಿಡಿಸಿ ಕಳಿಸುತ್ತಿದ್ದೆ , ಏನು ಚಿತ್ರ ಬೇಕು ಅಂದಾಗ ಅವು ತಮ್ಮ ಮನೀಷೆಯನ್ನು ಹೊರ ಹಾಕುತ್ತವೆ , ಡ್ರಾಗನ್ ,ವೂಲ್ಫ್ ,ನಾಯಿ ,ಹಲ್ಲಿ  ಮೊಸಳೆ ..ಹೀಗೆ ಏನೇನೋ ,ಒಂದಷ್ಟು ಹೆಸರು ಬರೆಸಿಕೊಳ್ಳುತ್ತವೆ,  ಫುಟ್ಬಾಲ್ ತಂಡದ ಹೆಸರು , ಮೊದಲ ಪ್ರೇಮದಲ್ಲಿ ಬಿದ್ದ ಕೆಲ ಹುಡುಗರು ಚಿಕ್ಕದಾಗಿ ಹುಡುಗಿಯ ಹೆಸರಿನ ಮೊದಲಕ್ಷರ ಬಿಡಿಸಿಕೊಂಡು ಮುಖದ ತುಂಬಾ ಸಾರ್ಥಕ್ಯ ಹೊತ್ತು ಹೋಗುತ್ತವೆ , ಕೆಲವೊಂದಷ್ಟು ಬರಿ ವೈನ್ ಗ್ಲಾಸ್ , ಸಿಗರೇಟ್ ತಲೆಬುರುಡೆ ಚಿತ್ರ ಬಿಡಿಸು ಅಂದಾಗ ಬುರುಡೆಗೆ ಒಂದು ಮೊಟಕೋಣ ಅನಿಸೋದು ಸುಳ್ಳಲ್ಲ ಅದೇನೇನೋ ಪ್ರಶ್ನೆಗಳು, ಕೊಟ್ಟ ಉತ್ತರಕ್ಕೆ ಹುಟ್ಟುವ ಮತ್ತಷ್ಟು ಮಾತುಗಳು , ಬಹಳಷ್ಟು ಸಲ ನಾನು ತಲೆ ಎತ್ತುವಮೊದಲೇ ಇನ್ನೊಂದು ಕೈ ನನ್ನ ಮುಂದೆ ಸಿದ್ಧವಾಗಿರುತ್ತದೆ, ಮತ್ತವರ ಪ್ರಶ್ನೆಗಳು.


 ಹೀಗೆ ನಡೆಯುತ್ತಿರುವಾಗ  ಅದರಲ್ಲೊಬ್ಬ ಪುಟ್ಟ ಹುಡುಗ ಬಂದು ನನ್ನೆದುರಿಗೆ ಕುಳಿತುಕೊಂಡ, ಯಾವುದೇ ಮಾತು ಅವನಿಂದ ಬಾರದಿದ್ದಾಗ ,  ನಾನೇ ಮುಖವೆತ್ತಿ  ಏನು ಬಿಡಿಸಲಿ?ಎಂದು ಕೇಳಿದೆ   ..ಕೈಗಳ ಮೇಲೆ ರಂಗೋಲಿ ಚಿಕ್ಕಿ ಇಟ್ಟಂತೆ  ಮಾಡಿ ತೋರಿಸಿದ ,ಸ್ಟಾರ್ ಬಿಡಿಸಲ ಅಂತಾ ಕೇಳಿದ ಮೇಲೂ   ಆತನ ವರ್ತನೆಯಲ್ಲಿ ಏನು ಭಿನ್ನತೆ ಕಾಣಲಿಲ್ಲ. ಸುಮಾರು ಸರಿ ಕೇಳಿದ ಮೇಲೆ ನನ್ನ ಕಣ್ಣು ಗಳಲ್ಲಿ ಏನೋ ಹುಡುಕಿದಂತೆ ಅವುಗಳನ್ನೇ ನೋಡುತ್ತಿದ್ದ ,''ನನ್ನ ಮನಸ್ಸಿಗೆ ಬಂದಿದ್ದು ಬಿಡಿಸಲ ? ಅಂದೆ, ಉತ್ತರಿಸದೆ ಮತ್ತೆ ಕೈ ಮೇಲೆ ಚಿಕ್ಕಿ ಹಾಕುತ್ತಿದ್ದ ಅವನ ಕೈ ಮೇಲೆ ಮೂರು ನಕ್ಷತ್ರಗಳನ್ನು ಬಿಡಿಸಿ ಮುಗೀತು ಅನ್ನುವಂತೆ ನೋಡಿದೆ, ಚಿತ್ರ ಬಿಡಿಸಿಕೊಂಡ ಮಕ್ಕಳು ಖುಷಿಯಿಂದ Thankyou , you are the best lady in the world" ಅನ್ನುವ ಕಾಮನ್ ಡೈಲಾಗ್ ಕೇಳಲಿಕ್ಕೆ ಖುಷಿ ಆಗುತ್ತದೆ ಜೊತೆಗೆ  ಮದರಂಗಿ ಹಾಕಿಕೊಂಡ ಕೈಯ್ಯನ್ನ ಕಾಳಜಿಯಿಂದ ಎತ್ತಿಕೊಂಡು ಮತ್ತೆ ಮತ್ತೆ ಚಿತ್ತಾರ ನೋಡಿಕೊಳ್ಳುವುದನ್ನ ನೋಡಿದರೆ ನಗುವೂ ಬರುತ್ತದೆ.


 ಆದರೆ ಈ ಮಗು ಹಾಗೇನು ಹೇಳದೆ ಬರೀ ಖುಷಿ ಹೊತ್ತ ಕಣ್ಣುಗಳಿಂದ ನನ್ನ ನೋಡುತ್ತಿತ್ತು , ಅಷ್ಟರಲ್ಲಿ ಹಿಂದಿನಿಂದ ಬಂದ ಅವರಪ್ಪ'' ಥಾಂಕ್ ಯು ಹೇಳು '' ಅಂದ. ಮಗು ನಿಷ್ಕಲ್ಮಶ ನಗುವಿನೊಂದಿಗೆ ಖುಷಿ ತುಂಬಿಕೊಂಡ ಕಣ್ಣುಗಳನ್ನ ಅರಳಿಸುತ್ತ  ಥಾಂಕ್ ಯು ಹೇಳಿತು ಆದರೆ , ಅಲ್ಲಿ ಶಬ್ದಗಳೇ ಇರಲಿಲ್ಲ ,ಸನ್ನೆಯಷ್ಟೇ! ಆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಮೇಲೂ ನನಗೆ ಆ ಮಗುವಿನ ಖುಷಿ ತುಂಬಿದ ನೀಲಿ ಕಣ್ಣುಗಳು , ಮತ್ತು ಆ ಸನ್ನೆ ಪದೇ ಪದೇ ನೆನಪಾಗುತ್ತಿತ್ತು. 


 ಆ ಮಗುವಿಗೆ ಮಾತಾಡಲು ಬರುವುದಿಲ್ಲವ? ಅದೊಂದು ಭಾವವೇ ನನ್ನ ಪೂರ್ತಿ ಹಿಂಡಿ ಹಾಕಿತು , ಕಣ್ಣು  ತುಂಬಿ ಕೊಂಡವು , ಮತ್ತೆ ಆ ಮಗುವಿನ ಥಾಂಕ್ ಯು ಸಂಜ್ಞೆ ನೆನಪಾಗಿ ಏನೋ ಯಾತನೆ. ಹಾಗಂತ ಆ ಮಗು ನಾನು ನೋಡಿದ ಮೊದಲ ಮಾತುಬಾರದ ವ್ಯಕ್ತಿಯಲ್ಲ , ಆದರೆ ಅವ ನೆನಪಿಸಿದ್ದು ಮಾತ್ರ ಹಲವರನ್ನ , ಬಾಲ್ಯದಿಂದ ನಾ ಇಲ್ಲಿಗೆ ಬರುವ ತನಕ ನಾ ನೋಡಿದ ಎಲ್ಲ ಮಾತು ಬರದವರನ್ನ , ಕಣ್ಣಲ್ಲಿ ಸದಾ ಆಶಾವಾದ ಸೂಸುವವರನ್ನ ,   ಅವರೊಂದಿಗೆ ಬೆಸೆದುಕೊಂಡ ನನ್ನ ನೆನಪುಗಳನ್ನು.


 ನನ್ನ ಅಜ್ಜಿ ಮನೆಯ ಹತ್ತಿರದಲ್ಲಿದ್ದ ಗೀತ (ಮೂಕಿ ಅಂತಾನೆ ಅವಳ ನಿಕ್ ನೇಮ್), ಶಿರಸಿಯ ನೀಲೆಕಣಿ ಆಟೋ ಗ್ಯಾರೇಜನವರ  ಮಗಳು ವಿಭಾ , ನನ್ನ ತವರು ಮುಂಡಗೋಡಿನ ಆ ಬಿಳಿ ಧಿರಿಸು ,ಟೋಪಿ ತೊಟ್ಟುಕೊಂಡು, ಮಕ್ಕಳನ್ನ ಕಂಡರೆ ಉರಿದು ಬೀಳುತ್ತಿದ್ದ ಮತ್ತು ನಾನು ಹಾಡುತ್ತೇನೆ ಅನ್ನೋ ಒಂದೇ ಕಾರಣಕ್ಕೆ ನನ್ನತ್ತ ಒಂದು ವಿಶೇಷ ಕಳಕಳಿ ತೋರುತ್ತಿದ್ದ ಆದರೆ ನನ್ನ ಹಾಡನ್ನ ಒಮ್ಮೆಯೂ ಕೇಳದ ಆ ಮೂಗಪ್ಪ .  

ಬೆಳಗಾವಿಯ ಮಾರುತಿಗಲ್ಲಿಯ ಹನುಮಪ್ಪನ ಗುಡಿಯೊಳಗೆ ಶನಿವಾರಕ್ಕೊಮ್ಮೆ ಸೇರಿ ಮೀಟಿಂಗ್ ನಡೆಸುತ್ತ  ಮೌನದಲ್ಲೇ  ಗಂಭೀರ ಮಾತುಕತೆ ನಡೆಸುತ್ತ ತಮ್ಮ ಲೋಕದಲ್ಲಿ ಕಳೆದು ಹೋಗಿ..ನಮ್ಮಂಥವರಿಗೆ ಸೋಜಿಗವಾಗುತ್ತಿದ್ದ ಆ ಮೂಕರ ಗುಂಪು. ಮನಸ ಕಪಾಟಿನ ತಳದ ಅರಿಯಲ್ಲಿ ಬೆಚ್ಚಗೆ ಸೇರಿಕೊಂಡಿರುವ ಬರ್ಫಿ, ಖಾಮೋಶಿಯಂಥ  ಸಿನಿಮಾ ಪಾತ್ರಗಳು , ಯಾಕೋ ಇವೆಲ್ಲ ನೆನಪಾಗಿ ಮತ್ತೆ ಮತ್ತೆ ಕಣ್ಣು ತೇವತೇವ.


ಇದು ಕನಿಕರ ಅಥವಾ ಅನುಕಂಪ ಅಲ್ಲವೇ ಅಲ್ಲ! ಯಾಕೋ ಅನಿಸೋಕೆ ಶುರು ಆಗಿದೆ '' ನಾವ್ಯಾಕೆ  ಇಷ್ಟು ಮಾತಾಡ್ತೀವಿ .ಎಲ್ಲದ್ದಕ್ಕೂ ನನ್ನ ಅಭಿಪ್ರಾಯ ಕೊಡಲೇಬೇಕು ಅನ್ನುವ ಹಠ ಮಾಡುವ ಮನಸು, ಮಾತಾಡಲೇಬೇಕಾದ ಅನಿವಾರ್ಯತೆ ಇದ್ದಾಗ, ಯಾರೋ ನಾವಾಡುವ ಒಂದು ಒಳ್ಳೆ  ಮಾತಿಗೆ ಕಾಯುತ್ತಿರುವಾಗ, ಬೇಕಂತಲೇ ವಹಿಸುವ ಜಾಣ ಮೌನ ,  ನಾವ್ಯಾಕೆ ಇಷ್ಟು ಮಾತಾಡುತ್ತೇವೆ ಅವರ್ಯಾಕೆ ಅಷ್ಟು ಮೌನ???? ಮೌನದಲ್ಲೂ ಮಾತಾಡುವ ಅವರು  ಮಾತು ಮಾತಿನಲ್ಲೂ ಊನ ಹುಡುಕುವ ನಾವು.

(ಉದಯವಾಣಿ , ವಿಶೇಷ ಪುರವಣಿ ದೇಸಿಸ್ವರದಲ್ಲಿ ನೂಲಿನ ತೇರು ಎಂಬ ಅಂಕಣ ದಲ್ಲಿ ಪ್ರಕಟಿತ)

ನೂಲಿನ ತೇರು - ೧



ನಾನು ಇದ್ದದ್ದೇ ಹಾಗೆ ವೈದೇಹಿಯವರ ಕವನದ "ಅಡುಗೆ ಮನೆ ಹುಡುಗಿಯಂತೆ" , ನನ್ನ ಊರಿನಲ್ಲಿ ಅಪರೂಪಕ್ಕೆ ಆಕಾಶದಲ್ಲಿ ವಿಮಾನದ ಸದ್ದು  ಮೋಡದೊಳಗಿಂದ ಕೇಳಿಸಿದರೆ ಸಾಕು ಅದನ್ನು ನೋಡಲು ಅಂಗಳಕ್ಕೆ ಓಡಿಬಂದು ಅದಕ್ಕೆ ಕೈಬೀಸಿ ಅದು ಮರೆಯಾಗುವವರೆಗೂ ಕಣ್ಣು ತುಟಿ ಅರಳಿಸಿ ಬಾನಿಗೆ ಮೊಗಮಾಡಿ ನಿಲ್ಲುವ ಖುಷಿ,  ಮೊದಲ ಬಾರಿ ವಿಮಾನ ಹತ್ತಿ ಈ ದೇಶಕ್ಕೆ ಬರುವಾಗ ಇರಲೇ ಇಲ್ಲ ಎಂದರೆ ನೀವು ನಂಬಲೇ ಬೇಕು. 


ನೆಲದ ಪ್ರೀತಿ ಹಚ್ಚಿಕೊಂಡ ನನ್ನಂಥ ಅದೆಷ್ಟೋ ಅನಿವಾಸಿ ಭಾರತೀಯರು ಪ್ರತಿಬಾರಿ ಭಾರತಕ್ಕೆ ಬಂದು ಮರಳುವಾಗ ವರುಷಕ್ಕಾಗುವಷ್ಟು ಭಾವತಂತುಗಳನ್ನ ಹೊತ್ತು ತರುತ್ತಾರೆ , ನಾನು ನನ್ನ ಸ್ನೇಹಿತೆಯರು ಸೇರಿ ಇದಕ್ಕೆ 'ಇಂಧನ/fuel" ಎಂದು ಕರೆಯುವುದುಂಟು. ಯಾಕೆಂದರೆ ಇಲ್ಲಿ,  ನಮ್ಮದಲ್ಲದ ನೆಲದಲ್ಲಿ ಬದುಕಬಂಡಿ ನಡೆಸಲು ಈ ಇಂಧನ ವೇ ಜೀವಾಳ.


ಆದರೂ ಒಮ್ಮೊಮ್ಮೆ ತಾಯಿನಾಡು ಅದೆಷ್ಟು ನೆನಪಾಗುತ್ತದೆಂದರೆ ಮನಸು ಪುಟ್ಟ ಮಗುವಿನಂತಾಗಿ ಅಮ್ಮನ ಮಡಿಲನ್ನು ಬಯಸುತ್ತದೆ. ಇಲ್ಲಿ ಇರುವ ಎಷ್ಟೋ ಅಪರಿಚಿತ ಮುಖಗಳಲ್ಲಿ , ನಮ್ಮ ಆಪ್ತರ , ಮನಸಿಗೆ ಹತ್ತಿರದವರ ಛಾಯೆ ಅರಸುತ್ತದೆ, ಕೆಲವೊಮ್ಮೆ ಅಂಥ ಚಿಕ್ಕ ಖುಷಿ ದಕ್ಕಿಯೂ ಬಿಡುತ್ತದೆ.


ಬೆಲ್ಫಾಸ್ಟ್ ಅನ್ನುವ ಈ ಪುಟ್ಟ, ಸುಂದರ ನಗರಿಯಲ್ಲಿ ನನಗೆ ನನ್ನೂರಿನ ಯಾರನ್ನೋ ನೆನಪಿಸುವ ಹಲವಾರು ಮುಖ ಮನಸುಗಳಿವೆ, ಅಂಥವರಲ್ಲಿ ಒಬ್ಬ ಈ ಯೊಹಾನ್ , 


ಯುರೋಪಿಯನ್ ದೇಶಗಳಲ್ಲಿ ರಸ್ತೆಗಳ ಅಕ್ಕ ಪಕ್ಕ ಹಾಡು ಹೇಳುತ್ತಾ , ಗಿಟಾರ್ ನುಡಿಸುತ್ತ ,ಕಲಾಪ್ರದರ್ಶನ ಮಾಡುತ್ತಾ  ಕೆಲವರು ನಿಂತಿರುತ್ತಾರೆ ಇಂಥವರನ್ನ ''ಬಸ್ಕರ್'' ಎಂದು ಕರೆಯುತ್ತಾರೆ, ಇವರು ಹಾಡುವುದನ್ನ ನಿಂತು ಕೇಳಿ ಚಪ್ಪಾಳೆ ತಟ್ಟಿ  ಹಣ ಕೊಡುವ ಮಂದಿಯೂ ಇದ್ದಾರೆ, 


 ಒಮ್ಮೆ ಇರುವ ಕಲಾವಿದ ಮತ್ತೊಮ್ಮೆ ಅದೇ ಜಾಗೆಯಲ್ಲಿ ನಿಮಗೆ ಕಾಣ ಸಿಗುವುದಿಲ್ಲ, ಹಣ ಬಯಸುತ್ತಾರಾದರೂ ಇವರು ಭಿಕ್ಷುಕರಲ್ಲ, ಭಿಕ್ಷೆ ಬೇಡುವುದು ಇಲ್ಲಿ ಅಪರಾಧ ಆದರೆ "ಬಸ್ಕಿಂಗ್" ಮಾನ್ಯ! ಹದಿಹರೆಯದ ಮಕ್ಕಳಿಂದ  ಹಿಡಿದು  ಇಳಿವಯಸ್ಸಿನವರೂ ಬಸ್ಕಿಂಗ್  ಮಾಡುವುದು ಇಲ್ಲಿ ಸರ್ವೇ ಸಾಮಾನ್ಯ , ಕ್ರಿಸ್ಮಸ್ , ಈಸ್ಟರ್ , ಬೇಸಿಗೆ ರಜಗಳಲ್ಲಿ ಇದು ಇನ್ನೂ ಜಾಸ್ತಿ. ಸಂಗೀತಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇದು ಒಳ್ಳೆ ವೇದಿಕೆಯನ್ನೂ ಕಲ್ಪಿಸಿಕೊಡುತ್ತದೆ.


 ಆಗ ನಾನು ಬೆಲ್ಫಾಸ್ಟ್ ಗೆ ಬಂದ  ಹೊಸತು ನನಗೆ ಈ ಬಸ್ಕಿಂಗ್ ಮಾಡುವವರನ್ನ ನೋಡುವುದೆಂದರೆ ಅತೀ ಖುಷಿಯ ಸಂಗತಿಯಾಗಿತ್ತು, ಆ ದಿನ ಮಗುವನ್ನು ಶಾಲೆಗೆ ಬಿಟ್ಟು ಅಂಗಡಿಗೆ ಏನೋ ತರಲು ಹೋದವಳಿಗೆ ಕಣ್ಣಿಗೆ ಬಿದ್ದವನೇ ಈ ಯೊಹಾನ್ , ಕೈಯ್ಯಲ್ಲಿ ಅದೆಂಥದೋ ವಿಚಿತ್ರ ಇನ್ಸ್ಟ್ರುಮೆಂಟ್ ಹಿಡಿದು ಕೊಂಡು ಒಂದೇ ಸಮ ಅದೇನೋ ಟ್ಯೂನ್ ನುಡಿಸುತ್ತಿದ್ದ , 


ನನ್ನ ಅಜ್ಜನ ವಯಸ್ಸಿರಬಹುದು , ಎದುರಿಗೊಂದು ಗೊಂಬೆ ಮತ್ತು ಚಿಕ್ಕ ಪ್ಲಾಸ್ಟಿಕ್ ಬುಟ್ಟಿ ಇಟ್ಟುಕೊಂಡು ಹೋಗು ಬರುವವರಿಗೆಲ್ಲ  ಚಂದದ ನಗು ಒಂದನ್ನ ಕೊಡುತ್ತಿದ್ದ , ಅವನ ಆ ಬುಟ್ಟಿಗೆ ನಾಣ್ಯ ಎಸೆದವರಿಗೆ hornviolin ನಾದ ಹೊಮ್ಮಿಸುತ್ತಲೇ ತಲೆಬಾಗಿ ಗೌರವ ಸಲ್ಲಿಸುತ್ತಿದ್ದ , ಅದ್ಯಾಕೋ ಯೋಹಾನ್ ನಗು ನನಗೆ ತುಂಬಾ ಹಿತವೆನಿಸಿತು , ತುಂಬು ನಗು, ನಿಷ್ಕಲ್ಮಶ ನಗು, 

ಆ ದಿನದಿಂದ ನಾನು ಸಿಟಿ ಸೆಂಟರ್  ಹೋದಾಗಲೆಲ್ಲ, ಯೊಹಾನ್ ಇದ್ದಲ್ಲಿ ಹೋಗಿ ಅವನ ನಗುಮುಖ ನೋಡಿ ಅವನು  ಆ "ವಾಯಲಿನಪಿಟ್" (ವಾಯಲೀನ್+ಟ್ರಂಪೆಟ್) ಲ್ಲಿ ನುಡಿಸುವ ರಷ್ಯನ್ ಹೇಂಗೇರಿಯನ್ ಜನಪದ ಸಂಗೀತದ ತುಣುಕು ಕೇಳಿ ಬಂದರೆ ಅದೇನೋ ಹಿತ , ಕೋಟ್ ಕಿಸೆಯಲಿ ಸಂಗ್ರಹವಾದ ಪೆನ್ನಿಗಳನ್ನು ಅವನ ಬುಟ್ಟಿಗೆ ಹಾಕಿ ಅವನಿಂದ ಆ ಮುಗುಳ್ನಗೆ ಪಡೆಯುವುದೆಂದರೆ ನನಗೆ ಅತೀ ಇಷ್ಟದ ಕೆಲಸವಾಗಿಬಿಟ್ಟಿದೆ. 


ಯೊಹಾನ್ ಕಳೆದ ೮ ವರ್ಷಗಳಿಂದ ಒಂದೇ ಜಾಗೆಯಲ್ಲಿ ನಿಂತು ಬಸ್ಕಿಂಗ್ ಮಾಡುತ್ತಿದ್ದಾನೆ , ತನ್ನನು ಅಂತಾರಾಷ್ಟ್ರೀಯ ಸಂಗೀತ ಕಲಾವಿದ ಎಂದು ಕರೆದುಕೊಳ್ಳುವ ಇವನು  ಅದಕ್ಕೆ ಹೇಳುವ ಕಥೆಯೂ ಸ್ವಾರಸ್ಯಕರ,  ನಾನು ಮೂಲತಃ ರುಮೇನಿಯಾದವನು ಇಲ್ಲಿಗೆ ಬರುವ ಮೊದಲು ಯುಗೋಸ್ಲಾವಾಕಿಯ , ಹಂಗೇರಿ , ರಷ್ಯಾ ಗಳಲ್ಲಿ ಹೀಗೆ ಕಳೆದ ೩೦ ವರುಷಗಳಿಂದ ನಾನೇ ಸೃಷ್ಟಿಸಿದ ಈ ವಾದ್ಯ ನುಡಿಸಿದ್ದೇನೆ , ಜನರನ್ನ ರಂಜಿಸಿದ್ದೇನೆ, ಅದಕ್ಕೆ ನಾನು ವಿಶ್ವಕಲಾವಿದ ಎಂದು ತನ್ನ ಆ ನಗುವಿನಿಂದ ಎದುರಿನವರ ಮುಖದಲ್ಲೂ ನಗು ಹೊಮ್ಮಿಸುತ್ತಾನೆ . 

  

  ಬೆಳಿಗ್ಗೆ ಒಂಬತ್ತಕ್ಕೆ ಬಂದು ತನ್ನ ಕೆಲಸ ಶುರು ಮಾಡಿ ಸಂಜೆ ಆರಕ್ಕೆ ಮನೆಗೆ ಮರಳುತ್ತಾನೆ , ಇತ್ತೀಚಿಗೆ ಜನ ಸಾಮಾನ್ಯರೇ ಅವನನ್ನ '' Belfast music icon'' ಎಂದು ಕರೆಯುವದನ್ನ ನೋಡಿದರೆ ಅವನು ಅದೆಷ್ಟು ಜನರ ಪ್ರೀತಿ ಪಡೆದಿದ್ದಾನೆ ಎಂಬುದನ್ನ ವಿವರಿಸಿ ಹೇಳಬೇಕಿಲ್ಲ. ಒಂದು ದಿನ ಅವ ಆ ಜಾಗೆಯಲ್ಲಿ ಇಲ್ಲ ಎಂದರೆ ಮನಸಿಗೆ ಕಸಿವಿಸಿ ಆಗುವುದು ಸುಳ್ಳಲ್ಲ.


ಅವನನ್ನು ನೋಡಿದಾಗಲೆಲ್ಲ ನನಗೆ ನೆನಪಾಗುವುದು ಧಾರವಾಡ ದ ಗಜಾನನ ಮಹಾಲೆ (ಮಹಾಲೆ ಮಾಮ್) ಅವರ ನಗುವು ಹೀಗೆ ಇತ್ತು , ನನ್ನಂಥ ಅದೆಷ್ಟು ಚಿಕ್ಕ ಪುಟ್ಟ ಕಲಾವಿದರಿಗೆ ಸಹಾಯ ಮಾಡಿಲ್ಲ ಅವರು,  ಹಾರ್ಮೋನಿಯಂ ಸಾಥಿಗೆ ಬಂದರೂ ಒಮ್ಮೆಯೂ ಸಂಭಾವನೆ ಸ್ವೀಕರಿಸಿದವರಲ್ಲ , ''ಮುಂದ ನೀ ದೊಡ್ಡ ಹೆಸರು ಮಾಡ್ತಿಯಲ್ಲ ಆವಾಗ ಕೊಡು ಈಗ ಬ್ಯಾಡ '' ಅಂತ ಹೇಳಿ ತಲೆ ನೇವರಿಸಿ ಆಶೀರ್ವಾದ ಮಾಡುತ್ತಿದ್ದರು. ಗಾಯನದಲ್ಲಿ ತಪ್ಪುಗಳಾದರೆ ಕಾರ್ಯಕ್ರಮದ ನಂತರ ಬಂದು ಮೆತ್ತಗಿನ ಧ್ವನಿಯಲ್ಲಿ ಅದನ್ನು ತಿದ್ದಿ ಹೇಳಿಕೊಡುತ್ತಿದ್ದರು. ಎದುರು ಬದುರು ಸಿಕ್ಕಾಗ "ಆರಾಮ್ ಅದೀರಲ್ಲ" ಎಂದು ಮೆತ್ತಗೆ ಕೇಳಿ.. "ಆರಂ ಇರ್ರಿ" ಅನ್ನುವಾಗಿನ ಆ ಮಂದಸ್ಮಿತ ಇನ್ನೂ ಕಣ್ಣ ಮುಂದೇ ಇದೆ. 


ಯೊಹಾನ್ ಬೆಲ್ಫಾಸ್ಟ್ ಎಂದು ಹುಡುಕಿದರೆ ಅವನ ಹೆಸರಿನಲ್ಲಿ ಗೂಗಲ್ ಪೇಜ್ ತೆರೆದುಕೊಳ್ಳುತ್ತದೆ ,  ಮಹಾಲೆ ಮಾಮ ನನ್ನ ಮನಸಿನ ಪುಟಗಳಲ್ಲಿ....

ಬಂಗಾರದೆಲೆಯ ಸಿಂಗಾರ ನಮ್ಮ ಭೂಮಿತಾಯಿಗೆ

 ಶರದೃತುವಿನಾಕಾಶ ಬೆಳದಿಂಗಳಾ ಲಾಸ್ಯ 

ಮಂದಾಮಿಲನ ಹಾಸ ನೋಡೇ ಸಖಿ  ನೀ….


ಈ ಹಾಡನ್ನು ನಾನೇ ಅದೆಷ್ಟು ಬಾರಿ ಹಾಡಿಲ್ಲ ಆದರೆ ಶರದೃತು ಎಂದರೆ, ಚಳಿಗಾಲದ ಆರಂಭ ,ನವರಾತ್ರಿ , ಮೆತ್ತಗೆ ಒಡೆಯಲು  ಶುರುವಾಗುವ ಚರ್ಮ ಹಿಮ್ಮಡಿ , ಹಾಸಿಗೆ ಹೊದಿಕೆಗಳಿಗೆ ವ್ಯಾಸಲೀನ್, ಬೊರೋಲೀನ್ ಗಳ ಕಮಟು, ಇಷ್ಟು ಬಿಟ್ಟು ಬೇರಾವ ಭಾವ ನನ್ನ ಮನದಲ್ಲಿ ಸುಳಿಯುತ್ತಿರಲಿಲ್ಲ. 


ನಾನು ನಾರ್ದರ್ನ್ ಐರ್ಲೆಂಡ ಗೆ ಬಂದಿದ್ದು ಅಕ್ಟೋಬರ್ ತಿಂಗಳ ಕೊನೆಯದಿನ,  ಮೊದಲ ಮುಂಜಾವು ಕಿಟಕಿ ಪರದೆ ಸರಿಸಿ ನೋಡಿದರೆ ಎಲ್ಲ ಮರಗಳು ಅರಿಶಿನ ಕುಂಕುಮ ಹಿಡಿದು, "ಸ್ವಾಗತ ನಿನಗೆ ನಮ್ಮೂರಿಗೆ " ಎನ್ನುವಂತೆ ನಿಂತಿದ್ದವು. ಆ ಚಂದ ಇನ್ನು ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.


 ನಮ್ಮ ಶರದೃತು ಇಲ್ಲಿನ ಆಟಮ್ ಕಾಲ . ಚಿಕ್ಕ ಚೈತ್ರದಂತೆ ಭಾಸವಾಗುತ್ತದೆ. 

ಜೂನ್ ತಿಂಗಳಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಇರುವ ಬೇಸಿಗೆಯ ಬಿಸಿಯನ್ನೆಲ್ಲ ಈ ಎಲೆಗಳೇ ಹೀರಿಕೊಂಡವೇನೋ ಆ ಸೆಖೆ ತಾಳಲಾಗದೆ ಮರದಿಂದ ಹಣ್ಣು ಹಣ್ಣಾಗಿ ಬೀಳುತ್ತಿವೆ ಏನೋ ಎಂಬಂತೆ ಸಿಗಮೋರ್, ಮೇಪಲ್, ಮರದ ಎಲೆಗಳು ಬಣ್ಣ ಬದಲಿಸಿಕೊಂಡು ಒಂದೊಂದಾಗಿ ಉದುರಿ ದಾರಿ ಗುಂಟ ಬಣ್ಣದ ಗುಡಾರ ಹಾಸುತ್ತವೆ.


ನಾ ಇರುವ ಪ್ರದೇಶದಲ್ಲಿ ಮರಗಳ ಎಲೆಗಳು ಹಳದಿ ನವಿರುಗೆಂಪು ಬಣ್ಣಕ್ಕೆ ತಿರುಗಿ, ಉದುರುತ್ತವೆ, ಆದರೆ ಯುಕೆ ಯ ಇನ್ನು ಕೆಲವು ಭಾಗಗಳಲ್ಲಿ ಇವೆ ಜಾತಿಯ ಮರಗಳ ಎಲೆಗಳು ರಕ್ತಗೆಂಪು ಬಣ್ಣ ಹೊದ್ದು ಎಲೆ ಉದುರಿಸುತ್ತಾ ಬರಿದಾಗಿ ಚಳಿಗೆ ನಲುಗಲು  ಸಿದ್ಧವಾಗುತ್ತವೆ.. 


ಫಾಲ್ ಸೀಸನ್ ಎಂದು ಕರೆಯಲ್ಪಡುವ ಈ ಕಾಲ ಅದೆಷ್ಟೋ ಕವಿಗಳಿಗೆ ಸ್ಪೂರ್ತಿ ಕೊಟ್ಟು ತನ್ನ ಮೇಲೆ ಪದ್ಯ ಬರೆಯಲು ಪ್ರೇರೇಪಿಸಿದೆ , ಎಷ್ಟೇ ಒಳ್ಳೆಯ ಛಾಯಾಗ್ರಾಹಕರಾದರೂ, ಕಣ್ಣು ಗ್ರಹಿಸುವಷ್ಟು ಚಂದದ ಫಾಲ್ /ಆಟಮ್ ಚಿತ್ರಗಳನ್ನು ಕ್ಲಿಕ್ಕಿಸಲಾರರು ,ಆ ನೋಟವೇ ಅಂಥದ್ದು .



ಒಮ್ಮೊಮ್ಮೆ ಊರಿನಲ್ಲಿ ಬೇಸಿಗೆಗೆ ಅರಳುವ ಕಕ್ಕೆ ಹೂ, ಒಮ್ಮೊಮ್ಮೆ ಸೇವಂತಿಗೆ , ಕೆಲವೊಮ್ಮೆ ಚಿನ್ನದ ಎಲೆಗಳನ್ನೇ ಮರಕ್ಕೆ ಕಟ್ಟಿದ್ದಾರೇನೋ ಅನ್ನುವ ಭಾವ ಈ ಹಳದಿ ಮರಗಳನ್ನ ನೋಡಿದರೆ ಸ್ಪುರಿಸುತ್ತದೆ. 







ಅಂತರಂಗದ ಅಳಲು













ಹಾಗೆ ದಿನಕ್ಕೆಷ್ಟು ಬಾರಿ scroll 
ಮಾಡುತ್ತೇನೋ ಗೊತ್ತಿಲ್ಲ, 
ನೂರಾರು ಅಂಕಿಗಳು
ಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು.

ಅಲ್ಲಿ ಒಂದಾದರೂ
ಮನಸಿನ ತುಮುಲ ತಿಳಿಮಾಡುವ, 
ನೋವಾಗಿದೆ ಮನಸಿಗೆ ಎಂದರೆ , 
ನಾನಿಲ್ಲವೇ ನಿನಗೆ ಎಂದು ಅಕ್ಕರೆ ಒಸರುವ
ಆರ್ದ್ರ ದನಿ ಸಿಗುವುದಿಲ್ಲ.ಆದರೂ ಹೇಳಿಕೊಳ್ಳುತ್ತೇವೆ
ಅವರಿವರ ಮುಂದೆ.

ಎಲ್ಲರೂ ಕೇಳುತ್ತಾರೆ 
ಕೇಳುವವರಿಲ್ಲ ಎಂದಲ್ಲ
ಮತ್ತದೇ ಕೇಳುತ್ತಾರೆ, 
ಅವರಿಗೆ ಬೇಕನಿಸಿದ್ದು
ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ, 

ಸಾಧಾರಣ ಎಷ್ಟಿರಬಹುದು ಮನಸಿನ ಸ್ಟೋರೇಜ್ 
ಎಡಿಟ್ , ಡಿಲೀಟ್,ಆಡ್ ನ್ಯೂ ವರ್ಡ್
ಎಲ್ಲವೂ ಮನದಲ್ಲೇ, 
ಸಂದರ್ಭಕ್ಕೆ ತಕ್ಕಂತೆ, 
ಅನುಕೂಲ ಸಿಂಧು, ಸೀಮಾತೀತ ಮನಸು.

ಮನಸಿನ ಅದ್ಯಾವುದೋ
ಅಲೆಗಳ ಹೊಡೆತಕ್ಕೆ ಸಿಕ್ಕು
ಅರೆಜೀವ ಮಾತ(ನೊಂದು) 
ಹೇಳಿರುತ್ತೇವೆ, ಕೇಳುವವರಿದ್ದಾರೆಂದು.
ಮಾತಾಡಿ ಹಗುರಾಗಿ ಮರೆತೇ ಬಿಡುತ್ತೇವೆ.

ಅದಾರದೋ ಮನದ ಕಿನಾರೆಯಲ್ಲಿ
ಅಂದೆಂದೋ ಸತ್ತುಬಿದ್ದ ಆ ಮೀನಿನಂಥ 
ಚಂಚಲ, ಈಗ ನಿಶ್ಚಲ ಮಾತನ್ನ 
ಒಣಗಿಸಿ ಉಪ್ಪು ಸವರಿ ಅದೆಲ್ಲೋ ಹೊಗೆ ಸಂದಿಯಲ್ಲಿ ತೂಗು ಹಾಕುತ್ತಾರೆ.

ಆ ದಿನ ಅದ್ಯಾರೋ ಬರುತ್ತಾರೆ
ಮಾತಿನ ಭೋಜನ ಶುರುವಾಗುತ್ತದೆ
ಹೊಸ ಹೊಸ ಮಾತು, ಯಾರ ಅಂಗಳದ ಹಪ್ಪಳವೋ
ಯಾರ ಮಹಡಿಯಲ್ಲಿ ಒಣಗಿದ ಸಂಡಿಗೆಯೋ.
ಚಪ್ಪರಿಸುತ್ತಾರೆ. 

ಹಾ ಈಗ ಇವರ ಸರದಿ, 
ನೋಡಿ!ನೋಡಿ ಇಲ್ಲಿ
ನನ್ನಲ್ಲಿದೆ ಆ ಕೊಳೆತ ಮೀನು, ಅದೆಷ್ಟು ಜತನದಿಂದ ಕಾದಿರಿಸಿದ್ದೆ ಗೊತ್ತಾ? 
Just for you people!!

ವಾಸನೆ ಬರುತ್ತಿದೆ.
ಮೀನು ತಿನ್ನುವವರು ಆಹಾ ಎಂದರೆ, 
ತಿನ್ನದವರು ಮೂಗು ಮುಚ್ಚಿಕೊಂಡು
ಕಿವಿ, ಕಣ್ಣು, ಅರಳಿಸಿಕೊಂಡು
ಕೂತಿದ್ದಾರೆ. 
ಕೊಳೆತು ,ಒಣಗಿ, ಮಾತೆಂಬ ಆ ಮೀನು 
ಊರೆಲ್ಲ ಗುಲ್ಲೆಬ್ಬಿಸಿ 
ಇಲ್ಲದ ಬಾಲ ಸೇರಿಸಿಕೊಂಡು
ಬಣ್ಣಗಳನ್ನು ಹಚ್ಚಿಕೊಂಡು
ಮತ್ತೆ ನನ್ನ ಅಕ್ಕ ಪಕ್ಕ ಹೊಸ ಜೀವ ಪಡೆದು 
ಹರಿದಾಡುತ್ತಿದೆ

ನಂಬಬೇಕೆ?
ಮತ್ತೆ ಈ ಅಳಲ ಹೇಳಲು ಹೊಸ 
ಅಂಕಿಗಳನ್ನು 
ಹುಡುಕಬೇಕೆ? 

ಅಮಿತಾ ರವಿಕಿರಣ್