Thursday, August 1, 2013

ಮಾರ್ಬಲ್ ಆರ್ಚ್ ಕೇವ್ಸ್ - ಗುಹಾಂತರಂಗದೊಳಗೊಂದು ದಿನ ಮನುಷ್ಯನ ತಣಿಯದ  ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ , ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ , ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡು ಜೊತೆಗೆ ನಿಂತು ಮಾತನಾಡುವುದು ಅಪರೂಪಕ್ಕೆ ಕಾಣಸಿಗುವ ದೃಶ್ಯ , ಅಂಥದ್ದೊಂದ್ದು ನಿಸರ್ಗ ದ ವಿಸ್ಮಯ ಮತ್ತು ಮಾನವನು ಅತಿ ಜತನದಿಂದ ಅದರ ಮೂಲರೂಪಕ್ಕೆ ಧಕ್ಕೆ ಬಾರದಂತೆ ಕಾದುಕೊಂಡಿರುವ ಅಪರೂಪದ ಸ್ಥಳವೇ  ನೋರ್ದರ್ನ್ ಐರ್ಲಾಂಡ್ ನ '' ಮಾರ್ಬಲ್ ಆರ್ಚ್ ಕೇವ ''

 ಭೂಮಿಯ ಮೆಲ್ಪದರಿನಲ್ಲಿ ರೂಪುಕೊಳ್ಳುವ ಅನೇಕರೀತಿಯ ಗುಹೆಗಳನ್ನು ತಜ್ಞರು ಗುರುತಿಸುತ್ತಾರೆ ಮತ್ತು ಅವುಗಳು ರೂಪುಗೊಂಡಿರುವ ರೀತಿ ವಿನ್ಯಾಸ ಲಕ್ಷಣ ಗಳನ್ನ ಗಮನಿಸಿ ಗುಹೆಗಳನ್ನು ಹಲವು ರೀತಿಯಲ್ಲಿ ವಿಂಗಡಿಸುತ್ತಾರೆ ಅವುಗಳಲ್ಲಿ ಕೆಲವು ಇಲ್ಲಿವೆ .
೧, ಸೊಲ್ಯುಶನ್ ಕೇವ್ಸ್
ಸುಣ್ಣದ ಕಲ್ಲು ಮತ್ತು ನೀರಿನ ನಿರಂತರ ಸಹಚರ್ಯ ರೂಪಿಸುವ ಗುಹೆಗಳು .

೨,ವೋಲ್ಕಾ ಕೇವ್ಸ್
ಭೂಮಿಯೊಳಗಿಂದ ಉಕ್ಕುವ ಲಾವಾ , ಜ್ವಾಲಾಮುಖಿಗಳು ತಣಿದು ಹೋದಮೇಲೆ ಉಂಟಾದ ಗುಹೆಗಳು

೩,ತಲುಸ್ ಕೇವ್ಸ್
ಎತ್ತರ ಪರ್ವತ ಪ್ರದೇಶದಿಂದ ನೈಸರ್ಗಿಕ ವೈಪರಿತ್ಯ ಗಳಿಂದ  ಕಲ್ಲುಗಳು ಉರುಳಿ ಪರ್ವತದ ಕೆಳಭಾಗದಲ್ಲಿ ಉಂಟುಮಾಡುವ ಗುಹೆಗಳು.

೪.ಸೀ ಕೇವ್ಸ್
ಸಮುದ್ರದ ನೀರು ಮತ್ತು ದಡ ದಲ್ಲಿರುವ ಕಲ್ಲುಬಂಡೆಗಳ ಘರ್ಷಣೆ ಮತ್ತು ಮರಳು ತೆರೆಯೊಂದಿಗೆ ಸ್ಥಳಾಂತರ ಗೊಳ್ಳುವಾಗ ಉಂಟಾಗುವ ಗುಹೆಗಳು

೫ ಗ್ಲಸಿಯರ್ ಕೇವ್ಸ್
ಗ್ಲಾಸಿಯರ್ ಹಿಮಬಂಡೆ ಗಳಿಂದ ಉಂಟಾಗುವ ಗುಹೆ , ಕಾಣಲು ಮಂಜಿನ ಮಹಲಿನಂತೆ ಕಂಡರೂ ವಾಸ್ತವದಲ್ಲಿ ಇದು ಸಶಕ್ತ ಗುಹೆಯಾಗಿರುತ್ತದೆ . ಇಂಥ ಗ್ಲಸಿಯರ್ ಹಿಮದ ನಡುವೆಯೇ ೪೦೦ ವರ್ಷಗಳ ಕಾಲ ನಮ್ಮ ಕೇದಾರನಾಥ್ ದೇವಸ್ತಾನ ಧ್ಯಾನ ಮಾಡುತಿತ್ತು  ಎಂಬುದು ತಜ್ಞರ ಅಂಬೋಣ

ಮಾರ್ಬಲ್ ಆರ್ಚ್ ಕೇವ್ಸ್
ನೋರ್ದರ್ನ್  ಐರ್ಲಾನ್ದ್  ನ  ಫರ್ಮಾನಾ  ಕೌಂಟಿ  ವ್ಯಾಪ್ತಿಯಲ್ಲಿ  ಬರುವ ಮಾರ್ಬಲ್ ಆರ್ಚ್ ಕೇವ ಸಂಶೋಧಿಸಿದ್ದು ಫ್ರಾನ್ಸ್ ನ ಸ್ಪೆಲಿಯೋಲೋಜಿಸ್ಟ್ (speleology-study of caves and other karts) ಎಡ್ವರ್ಡ್ ಅಲ್ಫ್ರೆಡ್ ಮಾರ್ಟೆಲ್ , ೧೮೯೫ರಲ್ಲಿ ಈತ ಮತ್ತು ಡಬ್ಲಿನ್ ವಾಸಿ ನಿಸರ್ಗ ತಜ್ಞ ಜೆಮೀ ಒಂದು ಕ್ಯಾನ್ವಾಸ್ ಬೋಟಿನಲ್ಲಿ ಆರಂಭ ದ್ವಾರದಿಂದ ಸುಮಾರು ೩೦೦ ಮೀಟರ್ ದೂರದ ಗುಹೆಯ ಮಾರ್ಗ ಕ್ರಮಿಸಿ ನಕ್ಷೆ ಮಾಡಿ ಇಟ್ಟರು . ನಂತರ ಕ್ರಮವಾಗಿ ಹಲವು ಆಸಕ್ತರು ಸೇರಿ ಸುಮಾರು ೪. ೫ ಕಿಲೋಮೀಟರ್ ಗಳಷ್ಟು ಉದ್ದದ ಈ ಗುಹೆಯನ್ನು ಎಲ್ಲರ ಗಮನಕ್ಕೆ ತಂದರು 
.
ಮಾರ್ಬಲ್ ಆರ್ಚ್ ಕೇವ  ಸುಣ್ಣದ ಕಲ್ಲುಗಳಿಂದ ಉಂಟಾದ ಗುಹೆ . ಈ ಗುಹೆಯ ಒಳಗೆ ಶೃ -ಕ್ರೋಪ್ಪ, ಅಗ್ಹಿಂರಾನ್ , ಒವೆನ್ಬ್ರಾನ್ ಹೆಸರಿನ   ೩ ನದಿಗಳ ಸಂಗಮವಾಗುತ್ತದೆ . ಮತ್ತು ಇಲ್ಲಿ ಉಂಟಾಗಿರುವ ಭೌಗೊಲಿಕ  ಬದಲಾವಣೆಗಳು ,ಕಲ್ಲು ಗಳ ಮೇಲಿನ ವಿನ್ಯಾಸಗಳು ಮಿಲಿಯನ  ವರ್ಷಗಳ ಕಾಲ  ಈ ಮೂರು ನದಿಗಳ ಏರಿಳಿತ ಮತ್ತು ಹರಿಯುವಿಕೆಯ ಪರಿಣಾಮಗಳೇ.
೨೦೦೮ರಲ್ಲಿ ಯುನೆಸ್ಕೋ  ಈ ಪ್ರದೇಶವನ್ನು ''ಗ್ಲೋಬಲ್ ಜಿಯೋ ಪಾರ್ಕ್ '' ಎಂದು ಘೋಷಿಸಿತು . ೧೯ನೇ  ಶತಮಾನದಿಂದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ ಈ ಸ್ಥಳ ೨೦೦೮ ರ ನಂತರ ಯೂರೋಪಿನ ಮುಖ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಬಂದಿತು.
ಐರ್ಲ್ಯಾಂಡ್ ಗೆ ಭೇಟಿ ಕೊಟ್ಟವರು ಇದನ್ನು ನೋಡದೆ ಮರಳಿದರೆ ಅವರ ಪ್ರವಾಸ ಅಪೂರ್ಣ ಎಂದೇ ಅರ್ಥ !!

ಸಾಂಪ್ರದಾಯಿಕ  ದ್ವಾರ ಹೊಕ್ಕಿದ ನಂತರ  ೧೫೦ ಮೆಟ್ಟಿಲು ಮತ್ತು ಒಂದೂವರೆ ತಾಸಿನ  ನಿರಂತರ ನಡಿಗೆ ,  ಗುಹೆಯೊಳಗೆ ಹರಿಯುವ ನದಿಯಲ್ಲಿ ೫ ನಿಮಿಷದ ದೋಣಿಯಾನ , ದೋಣಿಯಲ್ಲಿ ಕುಳಿತಾಗ ಕಲ್ಲಿನ ಕಮಾನುಗಳಿಂದ ಒಸರುವ ನೀರ ಒರತೆ , ಕಡಿದಾದ ಭಾಗದಲ್ಲಿ ನಡೆಯುತ್ತಿರುವಾಗ  ಪಟ್ಟನೆ ಎದುರಾಗುವ ಬಂಡೆಗಳು. ಅದೇನೇನೋ ವಿನ್ಯಾಸಗಳು ಅಲ್ಲೇಲ್ಲೊ ಹಿಮ ತುಂಬಿ ಕೊಂಡಂತೆ , ಮತ್ತೊಂದೆಡೆ ಹೂಕೋಸು ಅರಳಿದಂತೆ , ಒಮ್ಮೆ ಆಕಳ ಕೆಚ್ಚಲು , ಮತ್ತೊಮ್ಮೆ ಪುಟ್ಟ ಕುಟೀರ , ಅದೋ ಆ ಕಲ್ಲು ಆಕಳ ಕಿವಿಯನ್ತಿದೆ  ಅಂದು ಕೊಂಡು  ಈಚೆ ತಿರುಗಿದರೆ  ಭಯಂಕರ ರಾಕ್ಷಸ ಬಾಯಿ ತೆರೆದು ನಿಂತಂತೆ!!!   ಅದು ಭೂಮಿಯ ಪದರ  ಅಮ್ಮನ ಮಡಿಲಿನಂತೆ ತಂಪು ತಂಪು . ನೆಲ ಕಾಣುವ ನೀರು ಹಿತ ನೀಡಿದರೆ ಕೆಲವೊಂದೆಡೆ  ಕಪ್ಪಗಿನ ಕಂದಕ ಭಯ ಹುಟ್ಟಿಸುತ್ತವೆ ಸಧ್ಯಕ್ಕೆ ಈ ಗುಹೆಯ ೧ ಭಾಗ ಮಾತ್ರ ಪ್ರವಾಸಿಗರು ನೋಡಬಹುದು ಉಳಿದ ೩ ಭಾಗ ನೀರು ತುಂಬಿಕೊಂಡಿದೆ. ಚಳಿಗಾಲದಲ್ಲಿ ಈ ಸ್ಥಳ ಪೂರ್ತಿಯಾಗಿ ಮುಚ್ಚಿರುತ್ತದೆ , ಜೊತೆಗೆ  ತಾಪಮಾನ ಮತ್ತು ಏರಿಳಿತದ ದಾರಿಯ ಕಾರಣದಿಂದ ಅಸ್ತಮ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಈ ಗುಹೆಯನ್ನು ನೋಡುವುದು ಸ್ವಲ್ಪ ಕಷ್ಟಕರ ,

ಪೃಥೆ ಯ ಅಧ್ಭುತ ಅಂತರಾಳ ದಲ್ಲಿ  ಇದು ನನ್ನ ಎರಡನೇ ಪ್ರವಾಸ  , ನನ್ನ ಮಗ ನಾನು ಸ್ಪರ್ಧೆಗೆ ಬಿದ್ದವರಂತೆ ಅದು ನೋಡು , ಇದು ನೋಡು ಅಂದು ನನ್ನ ಪತಿದೇವರ ಪ್ರಾಣ ತಿಂದಿದ್ದೇವೆ ಜೊತೆಗೆ ಕರ್ನಾಟಕದ  ಸಂಗೀತ ಬಂದುಗಳು  ಅವರ ನಗೆ ಚಟಾಕಿಗಳು , ನಗುವಿನ ಪರಿಚಯವೇ ಇಲ್ಲದ ನಮ್ಮ ಗೈಡ್. ಪ್ರಯಾಣದಲ್ಲಿ ಮೆಟ್ಟಿಲುಗಳನ್ನು ಕಂಡ ಕೂಡಲೇ ನನಗೆ ಆಗುತ್ತಿದ್ದ ತಳಮಳ !! ಒಂದೂವರೆ ತಾಸಿನ ಈ ಪಯಣದ ನಂತರ ಹಸಿವಿನಿಂದ ಹೈರಾಣಾಗಿ ತಿಂದು ಮುಗಿಸಿದ ಒಂದು ಕುಕ್ಕರ್ ಫುಲ್ ಬಿಸಿಬೇಳೆ ಭಾತ್ ಮತ್ತು ಸ್ಯಾಂಡ್ವಿಚ್ ನಮ್ಮ ಪಾಲಿನ ಅಮೃತ ವಾಗಿದ್ದು ಪ್ರವಾಸದ ಎಡಿಶನಲ್  ವಿಷಯಗಳು .

ಅಲ್ಲಿ ನಾನು ಫೋಟೋ ಕ್ಲಿಕ್ಕಿಸಲು ಪರದಾಡಿದ್ದು ಮತ್ತೊಂದು ಕತೆ , ನನ್ನ  ಕಣ್ಣಿಗೆ ಕಂಡಷ್ಟು ನನ್ನ ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ  ಕತ್ತಲೆ  ಅನ್ನೋ ನೆವ ಹೇಳಿತು  ಆದರು ಒಂದಷ್ಟು ಚಿತ್ರಗಳಿವೆ ಇಲ್ಲಿ ನೋಡಿ