Saturday, December 18, 2010

ಹಕ್ಕಿ,ಹಾವು ಮತ್ತು ನಾವು

ಅಮ್ಮ ಬೆಳಿಗ್ಗೆ ನೇ ಹೇಳಿದ್ರು ...ಗೊರಟ್ಟಿಗೆ ಗಿಡಕ್ಕೆ ಒಂದು ಹಕ್ಕಿ ಗೂಡು ಕಟ್ಟಿದೆ ಅಂತ, ನನಗೆ ಅದನ್ನ ನೋಡೋ ತನಕ ಸಮಾಧಾನ ಇಲ್ಲ ...ಜಿಟಿ ಜಿಟಿ ಮಳೆ. ನಮ್ಮೂರಲ್ಲಿ ಮಳೆ ಬಂತು ಅಂದ್ರೆ ಕಾಲು ಹುಗಿದು ಹೋಗೋ ಕೆಸರು ಗುಂಡಿ...ಆದ್ರೂ ಅದನ್ನ ತೋರಿಸು ಅಂತ ಅಮ್ಮನ ಹಿಂದೆ ಹೋದೆ ...ಅಮ್ಮ ಪುಟ್ಟ ಗೊರಟ್ಟಿಗೆ ಗಿಡದಲ್ಲಿ ಅದರಷ್ಟೇ ಪುಟ್ಟ ಗೂಡೊಂದನ್ನು ತೋರಿಸಿದರು..ಆ ದಿನ ಖಾಲಿ ಇತ್ತು ಹಕ್ಕಿ ಯಾವುದು  ಅಂತ ನೋಡಬೇಕಲ್ಲ...?
ಮರುದಿನ ಮುಂಜಾನೆ ಮತ್ತೆ ನಮ್ಮ ವೀಕ್ಷಣೆ ಆರಂಭ ಆಯಿತು...ಅಮ್ಮ ನನಗಿಂತ ಮುಂಚೆ ಏಳ್ತಾಳೆ ಅದಕ್ಕೆ ಮುಂದಿನ ಯಾವ ಸುದ್ದಿ ಇದ್ದರು ಆಕೆ ಕಡೆ ಇಂದಾನೆ ಸಿಗೋದು ನನಗೆ...ಆ ದಿನದಿಂದ ಅದು ನಮ್ಮ ದಿನಚರಿ ಆಯ್ತು..
ಒಂದು ವಾರದೊಳಗೆ ಅಲ್ಲಿ ಬಂದು ಹೋಗೋ ಪುಟ್ಟ ಹಳದಿ ಹೊಟ್ಟೆಯ ಕಂದು ಮೈ ಬಣ್ಣದ ಹಕ್ಕಿ ದಂಪತಿಗಳು ನಮ್ಮ ಕಣ್ಣಿಗೆ ಕಾಣಿಸಿ ಕೊಂಡವು.ಮತ್ತೆರಡು ದಿನ ಬಿಟ್ಟು ಅಮ್ಮ ಮಲಗಿದ ನನ್ನ ಎಬ್ಬಿಸಿ ''ಎರಡು ಮೊಟ್ಟೆ ಹಾಕಿದೆ ನೋಡು ಬಾ,,'' ಅಂದ್ರು ನಾನೂ ಓಡಿದೆ ಪುಟಾಣಿ ಮೊಟ್ಟೆಗಳು ಅವು ಕೂಡ ಕಂದು ಬಣ್ಣದ್ದು...ಆ ದಿನದಿಂದ ದಿನಾಲೂ ಅವುಗಳದ್ದೊಂದು ಫೋಟೋ ತೆಗೆಡಿದುತ್ತಿದ್ದೆ..೨ ರಿಂದ ೩.೪ ಮೊಟ್ಟೆಗಳ ತನಕ ....ಇಗ ಮೊಟ್ಟೆ ಯಾವಾಗ ಒಡೆದು ಪುಟ್ಟ ಮರಿಗಳು ಹೊರ ಬರುತ್ತವೆ ಅನ್ನೋ ಕಾತರ...
ಅದಾದ ಮತ್ತೊಂದು ವಾರ ಮೊಟ್ಟೆಗಳು ಸುಮ್ಮನೆ ಗೂಡಿನಲ್ಲಿ ಮಲಗಿದ್ದವು..ಹಕ್ಕಿಗಳು ನಾವು ಬಂದ ಕೂಡಲೇ ಓಡಿ ಹೊಗ್ತಿದ್ವು...ನಾವು ಇತ್ತ ಬಂದ ಕೂಡಲೇ..ಮತ್ತೆ ಮೊಟ್ಟೆಗೆ ಕಾವಲು...
ಆದಿನ ಮೊದಲ ೨ ಮೊಟ್ಟೆ ಬಿರುಕು ಬಿಟ್ಟಿದ್ದನ್ನು ನೋಡಿ ಏನೋ ಉಲ್ಲಾಸ...ಆದ್ರೆ ಪಪ್ಪಾ ಮತ್ತು ಅಮ್ಮ ಇಬ್ಬರು ಬೈದರು'' ಮನುಷ್ಯರ ವಾಸನೆ ಬಂತು ಅಂದ್ರೆ ಅವು ಮೊಟ್ಟೆ ಮುಟ್ಟಲ್ಲ ಹತ್ತಿರ ಹೋಗಬೇಡಿ ''ಸರಿ ಆ ದಿನ ಫೋಟೋ ಇಲ್ಲ .....ಆದ್ರೆ ಮರುದಿನ ಯಾರಿಗೂ ಗೊತ್ತಿಲ್ಲದಂತೆ ಗೂಡಿನ ಹತ್ತಿರ ಹೋದರೆ ೩ ಮರಿಗಳು...
ಇನ್ನೊಂದು ದಿನ ದ ಅಂತರ ದಲ್ಲಿ ೪ ಮರಿಗಳು ಹೊರ ಬಂದವು.....ಆಹಾರಕ್ಕೆ ಬಾಯಿ ತೆರೆದರೆ ಪುಟ್ಟ ಹೂವುಗಳು ಅರಳಿದಂತೆ ಅನಿಸ್ತಿತ್ತು...
ಎಷ್ಟ್ ಬೇಗ ಅವಕ್ಕೆ ರೋಮ ಮೂದಿದವೆಂದರೆ ಮೊದಲಿನ ರೂಪ ನೆನೆಪಿಸಿ ಕೊಳ್ಳಲು ಮೊದಲಿನ ಫೋಟೋ ನೋಡಬೇಕಿತ್ತು...
ಇನ್ನೇನು ಮತ್ತೊಂದು ವಾರದಲ್ಲಿ ಅವು ಬಾನಿಗೆ ....ಈ ಅನುಭವ ನನಗೆ ಪೂರ್ಣಚಂದ್ರ ತೇಜಸ್ವಿ ಅವರ ಸುಸ್ಮಿತ ಮತ್ತು ಹಕ್ಕಿ ಮರಿ ಪಾಠ ನೆನಪಿಸ್ತಿತ್ತು..
ಎಷ್ಟು ಬೇಗ ಬೆಳೆದವು ಒಂದು ತಿಂಗಳಲ್ಲಿ .....ಅವುಗಳು ಕನಸುತ್ತಿರಬೇಕು..ನಾವು ಹಾರ್ತೀವಿ ಅಮ್ಮ ಅಪ್ಪನಿಗಿಂತ ಮೆಲ್ಸ್ತರ ದಲ್ಲಿ ....ಆದರೆ ಅಂದು ಕೊಂಡಿದ್ದೆಲ್ಲ ಆಗುತ್ತ???
ಆದಿನ ನಾ ಇರಲಿಲ್ಲ...ತಂಗಿ ಫೋನ್ ನಲ್ಲಿ ಹಕ್ಕಿ ಮರಿಗಳನ್ನು ಹಾವು ತಿಂತಿದೆ ...ನಮಗೂ ಏನು ಮಾಡೋಕೆ ಆಗ್ತಿಲ್ಲ ..ಅಪ್ಪ ಅಮ್ಮ ಹಕ್ಕಿಗಳು ಕೆಟ್ಟದಾಗಿ ಚೀರ್ತಿವೆ ಅಂದಳು ..ನಂಗೆ ಈಡಿ ದಿನ ಅದೇ ತಲೆಯಲ್ಲಿ...ಛೇ ಏನಾಯಿತು ಇದು ....
ಹಕ್ಕಿಗಿಂತ ಹಾವು ಬಲಶಾಲಿ ನಿಜ ಆದ್ರೆ ಹಾವಿಗಿಂತ ನಾವು ಮಿಗಿಲಲ್ಲವೇ??
ನಾವು ಉಳಿಸಬಹುದಿತ್ತು ಅದನ್ನ ....ಅದಕ್ಕೆ ಪಪ್ಪಾ ಹೇಳಿದ್ರು''ಜೀವ ಸಂಕುಲಕ್ಕೆ ಅವದ್ದೆ ಒಂದು ನಿಯಮ ಇದೆ...ನೀ ಇಲ್ಲಿ ಹಾವನ್ನು ಹೊಡೆದು ಹಕ್ಕಿ ಮರಿಯನ್ನ ಉಳಿಸಿದರೆ ಅಲ್ಲಿ ಹಾವಿನ ಮರಿಯು ಇರಬಹುದೇನೋ ಅಲ್ವೇ??''ಹಾವಿನ ಮರಿ ಅವುಗಳ ಜೊತೆ ಇರಲ್ಲ..ನಾನೆಂದೆ...''ಇದು ಉದಾಹರಣೆ..ಅಷ್ಟೇ..ನಿನಗೆ ಅದರೊದಿಗೆ ಭಾವನಾತ್ಮಕ ಸಂಭಂಧ ...ಹಾವಿಗೆ ತನ್ನ ಆಹಾರ..''

ಪಪ್ಪ್ ನ ತರ್ಕ ನನಗೇಕೋ ಇಷ್ಟಾ ಆಗ್ಲಿಲ್ಲ...ಬೇಜಾರು ಕೆಲದಿನಗಳಲ್ಲಿ ಕಡಿಮೆ ಆಗುತ್ತ ಬಂತು..ಮತ್ತೊಂದು ಹೊಸ ಮುಂಜಾನೆ ..''ಅಮಿತಾ  ಮತ್ತೆ ಪೇರಳೆ ಮರಕ್ಕೆ ಗೂಡು.''ಅಂತ ಅಮ್ಮ ಕೂಗಿದರು..ಆದ್ರೆ ಆದಿನ ನಾನೆ ನನ್ನ ಗೂಡು ಅರಸಿಕೊಂಡು ಸಾವಿರಾರು ಮೈಲಿ ದೂರ ಹಾರಲಿದ್ದೆ...

ಕಾಡುವ ಘಮಗಳು -೨

  • ಮಧ್ಯಾನ್ಹ ಹೊತ್ತು ಆಕಾಶವಾಣಿ ಬಿತ್ತರಿಸುವ ೮೦ ರ ದಶಕದ ಹಾಡುಗಳು.ಮತ್ತು ಕುಂದಾಪುರದ ಕೋಣಿಯಲ್ಲಿ ಅಜ್ಜಿ ಕೊದ್ದೆಲ್ ಮತ್ತು ಬಟಾಟೆ ಪದಾರ್ಥಕ್ಕೆ ಹಾಕುತ್ತಿದ್ದ ಬೆಳ್ಳುಳ್ಳಿ ಒಗ್ಗರಣೆ ಘಮ...ಈಗಲೂ ಆ ಹಾಡುಗಳನ್ನು ಕೇಳಿದಾಗ ಆ ಹಿತವಾದ ಘಮ ಅಜ್ಜಿ ಮನೆ ..ನನ್ನ ಮುದ್ದಿಸಿ ಅಟ್ಟಕ್ಕೇರಿಸಿ ಇಟ್ಟಿರುವ ಅಜ್ಜಿ ನೆನೆಪಾಗಿ ಬಿಡುತ್ತಾರೆ....
  • ದುಂಡುಮಲ್ಲಿಗೆ...ಅದು ಯಾವಕಾಲದಲ್ಲೂ ನನಗೆ ನೆನೆಪಾಗಿ ಕಾಡುವುದು ಹಳೆಮನೆಯ ಹಿತ್ತಲಲ್ಲಿ ಹಬ್ಬಿದ್ದ ಹಂದರದ ಬಿಳಿ ಚಿಕ್ಕೆಗಳಂತೆ...ಬೇಸಿಗೆಯ ಬಿಸಿಗಾಳಿ ಅದರೊಂದಿಗೆ ದುಂಡು ಮಲ್ಲಿಗೆಯ  ಘಮ...ತುಳಸಿ ಕಟ್ಟೆಯಮೇಲೆ ಕುಳಿತು ಬೆಳದಿಂಗಳ ಬೆಳಕಲ್ಲಿ ನನ್ನ ಉದ್ದ ಕೂದಲ ನೆರಳು ನೋಡಿ ಖುಷಿ ಪಡುವ ಕ್ಷಣ ...ಅಂಗಳದಲ್ಲಿ ಕೂತು ಬೆಳದಿಂಗಳೂಟ ಮಾಡುವ ಆ ಉಮೇದಿಯ ದಿನಗಳು...ಈಗ ಹಳೆಮನೆಯು ಇಲ್ಲ ಮಲ್ಲಿಗೆ ಹನ್ದರವು ಇಲ್ಲ ಘಮ ಮಾತ್ರ ಹಾಗೆ ಉಳಿದು ಹೋಗಿದೆ..
  • ಆಕೆಯ ಹೆಸರು ಡೀನಾ ಉತ್ತರಕನ್ನಡದ ಕೊಂಕಣಿಗರ ಸಂಸ್ಕೃತಿ ಯಾ ಬಗ್ಗೆ PHD ಅಧ್ಯಯನ ಮಾಡುತ್ತಿದ್ದಳು..ನಾನಿನ್ನು ಆಗ ೩ ನೆ ತರಗತಿ..ಆಕೆ ನಂಗೆ ನೆನಪಾಗೋದೆ ಆಕೆ ಹಾಕಿಕೊnaಳ್ಳುತ್ತಿದ್ದ ಒಂದು ಸುಗಂಧದಿಂದ...
  • ಮಗುವಿನ ಘಮ ...ನಾ ನನ್ನ ಬದುಕಲ್ಲಿ ಮೊದಲು neನೋಡಿದ ಮಗು ಅದು ನನ್ನ ರಾಣಿ ಅಂತ ಕರೆಯುವ ಸುಲೋಚನ ಅತ್ತೆ ..ಆಕೆಯ ಮಗು ...ಅದರ ಮುದ್ದು ಕೈಗಳು ಕೆಂಪು ಕಟ್ಟಿದ ಕಾಲು ,ಮಗು ಒಂದು ವಿಸ್ಮಯದ ಲೋಕ ...ಅನಿಸಿತ್ತು ನನಗೆ.ಎಲ್ಲಕ್ಕಿಂತ ಹೆಚ್ಹಾಗಿ ಅದರ ಹತ್ತಿರ ಬರುತ್ತಿದ್ದ ಬೇಬಿ ಪೌಡರ್ ಘಮ,ಮೈಗೆ ಹಚ್ಹುವ ಕೆಂಪು ಬೇರಿನ ಎಣ್ಣೆ......ಸ್ನಾನ ಮಾಡಿ ಬಂದ ನಂತರ ಹಾಕುವ ಲೋಭಾನ ....ಗಂಧ ದ ಸಾಣೆಯಲ್ಲಿ ತೇಯುವ ಬಜೆ ಬೇರಿನ ಪರಿಮಳ...ಎಳೆಮಗು ನನಗೆ ನೆನಪಾಗೋದೆ ಹಾಗೆ.
  • ಮಾವಿನಕಾಯಿ..ಹ್ಮ್ಮ್ಮ್ ನೆನಪು ಬಂತೆಂದರೆ ಹಿಂದೆ ನೆನಪಾಗೋದು ವಾರ್ಷಿಕ ಪರೀಕ್ಷೆಗಳು ..ಯುಗಾದಿ ಹಬ್ಬ....ಗೆಳೆಯರೊಂದಿಗೆ  ನೀರು ಇಂಗುತ್ತಿರುವ ಹೊಂಡ ,ಕೆರೆಗಳಿಗೆ ಮೀನು ಹಿಡಿಯಲು ಹೋಗುವುದು...ಆ ಸಮಯದಲ್ಲಿ ಉದುರುವ ಬೂರುಗದ ಬೀಜಗಳು...ಮನೆಯಲ್ಲಿ ಪ್ರತಿದಿನ ಕಡ್ಡಾಯ ಎಂಬಂತೆ ಮಾಡುವ ಮಾವಿನಕಾಯಿ ಅಡುಗೆಗಳು..ಇನ್ನು ಏನೇನೋ...
ಈ ಘಮಗಳ ಕಥೆ ಮುಗಿಯುವಂಥದ್ದಲ್ಲ ....ಹೇಳಿದರೆ ಹಾಗೆ ಹೇಳ್ತಾನೆ ಹೋಗಬಹುದು.....ಮನೆಗೊಂದು ಘಮ ...ಒಲಿದ ಮನಸಿಗೊಂದು ,ಮುನಿದ ಮನಸಿಗೆ ಮತ್ತೊಂದು ಘಮ ಓಲೈಕೆಗೆ ಇನ್ನೊಂದು ಘಮ ...ಹೀಗೆ ಬದುಕೆಲ್ಲ ಘಮದ ಸೆರಗಲ್ಲಿ .....ನೆನಪಿನ ಘಮದಲ್ಲ್ಲಿ ........

Monday, December 13, 2010

ಕಾಡುವ ಘಮಗಳು ......1

ಮನುಷ್ಯನಿಗೆ ದೇವರು ಕೊಟ್ಟ ಮಹತ್ತರ ಉಡುಗೊರೆ ಮೂಗು..ಅದಿಲ್ಲದಿದ್ದರೆ ಪ್ರಕೃತಿಯ ಅದೆಷ್ಟೋ ಸ್ವಾರಸ್ಯ ನಮ್ಮ ಅರಿವಿಗೆ ಬರುತ್ತಿರಲಿಲ್ಲವೇನೋ...ಅದಕ್ಕಂತ ದೇವರಿಗೆ special thanks ಹೇಳಲೇ ಬೇಕು ....ಈ ಮೂಗಿರುವುದರಿಂದಲೇ..ಅಲ್ವೇ ಪ್ರತಿಯೊಂದು ಘಟನೆ ಪ್ರತಿಯೊಂದು ವ್ಯಕ್ತಿ ,ಹೂವು ,ಪ್ರಾಣಿ,ಒಂದೊಂದು ಘಮ ದಿಂದ ನಮ್ಮ ಸ್ಮರಣೆಯಲ್ಲಿ ಉಳಿದು ಬಿಡುತ್ತಾರೆ ....
ನನ್ನ ಬಾಲ್ಯ ದಿಂದಲೂ ನನಗದು ಅಭ್ಯಾಸ..ಪ್ರಾಯಶಃ ಪ್ರತಿಯೊಬ್ಬರಿಗೂ ಇರುತ್ತದೋ ಏನೋ ಗೊತ್ತಿಲ್ಲ....ಹೊಸ ಸ್ಥಳಗಳು .ಹೊಸ ಜನರು ,ಕೆಲವೊಮ್ಮೆ ಘಟನೆಗಳು ಘಮಗಳೊಂದಿಗೆ ಬೆಸೆದು ನನ್ನ್ನ ಮನಸಿನಲ್ಲಿ ಅಚ್ಚಾಗಿ ಬಿಡುತ್ತದೆ...ಅಂಥದ್ದೇ ಕೆಲವನ್ನು ಬರೆದಿಡುವ ಉಮೇದಿನಲ್ಲಿದ್ದೇನೆ .......

  • ಇದು ಎಲ್ಲರಿಗು ಆಗಿರೋ ಅನುಭವ...ಮೊದಲ ಮಳೆ ಬಂದಾಗ ಬರೊ ಹಸಿಮಣ್ಣ ವಾಸನೆ...ವಾಸನೆಯೊಂದಿಗೆ ನೆನಪುಗಳು..ನಾವು ಸಿರಸಿ ರಸ್ತೆಯ ಮನೆಯಲ್ಲಿರುವಾಗ ...ಸೋರುತ್ತಿದ್ದ ಮಾಳಿಗೆ,ಅಲ್ಲಲ್ಲಿ ಪಾತ್ರೆಗಳನ್ನಿಡುತ್ತಿದ್ದುದು,ಅದೇ ಸಮಯಕ್ಕೆ ಅಮ್ಮ ಮಾಡಿ ಕೊಡುತ್ತಿದ್ದ ಸಬ್ಬಸಿಗೆ ಪಲ್ಯ ಅಕ್ಕಿ ರೊಟ್ಟಿ..ಕೆಲವೊಮ್ಮೆ ಕದ್ದು ಮುಚ್ಹಿ ಮಾಡುತ್ತಿದ್ದ ಕೆರೆಮೀನಿನ ಸಾರು,ಅಕ್ಕಿ ಹಪ್ಪಳ...ಮಳೆ ನಿಂತ ಮೇಲೆ ಹಿತ್ತಲಲ್ಲಿ ಬರುತ್ತಿದ್ದ ಕಂಚಿ ಮರದ ಎರಡನೇ ಬೆಳೆಗೆ ಬಂದ ಹೂವಿನ ವಿಲಕ್ಷಣ ಘಮ ....ನೀರಲ್ಲಿ ಹಾಕಿಟ್ಟ ಕಳಿಲೆ...ಹಲಸಿನ ತೊಳೆ,ಮಾವಿನಕಾಯಿ ,ಅಡಿಗೆಗಳು.....ಹ್ಮ್ಮ್ಮ್ !!!!!!
  • ದೇವಿಮನೆ ಘಟ್ಟ...ಅದು ನೆನಪಾಗೋದೆ ಅದರ ಕಾಡು  ಹೂಗಳ  ಘಮದಿಂದ...ಅದು ಶಿರಸಿ ಮತ್ತು ಕುಮಟೆ ಪೇಟೆ ಗಳನ್ನೂ ಸೇರಿಸುವ ಪುಟ್ಟ ಕಾಡಿನ ಹಾದಿ ಅಂದುಕೊಂಡು ನಾ ಆ ೬೬ ಮೈಲು ಗಳನ್ನೂ ಬರಿ ಕಾಡು ನೋಡುತ್ತಾ  ಕಳೆದು ಬಿಡುತ್ತಿದ್ದೆ ,ಇನ್ನೇನು ಅಘನಾಶಿನಿ ಬಂದೆ ಬಿಡ್ತಾಳೆ ....ಆಕೆಯ ಹೆಸರನ್ನು ಕೇಳಿದ ಕೊಡಲೇ ನೆನಪಾಗೋದು ಹಸಿ.ತಾಜಾ ಮೀನಿನ ಘಮ...ಜೊತೆಗೆ ಕೆಂಪು ಮಣ್ಣು ...(ಮೀನು ತಿನ್ನದವರಿಗೆ ಈ ಘಮದ ಭಾಗ್ಯ ಇಲ್ಲ ..ಮೂಗಿಗೆ ಕರವಸ್ತ್ರ)
  • ಮಂಗಳೂರು ಮಲ್ಲಿಗೆ.....ಈ ಘಮ ಎಂದಕೂಡಲೇ ನೆನೆಪಗೋದು south canara ಮದುವೆಗಳು ...ಬೇಸಿಗೆಯ ಬೆವರಿನಲ್ಲು ಜಗಮಗಿಸುವ ಸೀರೆ ಉಟ್ಟು ..ಬಸ್ಸಿಗೆ ಕಾದು ಜನ ಜಂಗುಳಿಯಲ್ಲಿ ಭೋಜನ ಮುಗಿಸಿ ಅಲ್ಲೇ ಕಾಮೆಂಟ್ ಒಗೆದು ಬರುವ ನಾರೀಮಣಿಗಳು.ಮತ್ತು ಚಿಕ್ಕವರಿದ್ದಾಗ ತಲೆತುಂಬ ಮಲ್ಲಿಗೆ ಮುಡಿಸಿ ಕನ್ನಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದು ..ಒಣಗಿ ಹೋದರೂ ಘಮ ಬಿಡದ ಆ ಮಲ್ಲಿಗೆಯ ಸಾರ್ಥಕತೆ 
  • ಉದಬತ್ತಿ (ಅಗರಬತ್ತಿ)........ಕೆಲವು ಅಗರಬತ್ತಿಗಳು ಎಷ್ಟು ಮರೆತರು ಆ ಘಟನೆ ಯೊಂದಿಗೆ ನೆನೆಪಿನಲ್ಲೇ ಘಮಘಮಿಸುತ್ತವೆ...ಚವತಿ ಹಬ್ಬದಂದು.ಪಪ್ಪ್ ಯಾವುದೊ ಸಿಟ್ಟಿನಲ್ಲಿ ನಮಗೆ ಹೊಡೆದದ್ದು...ಪರೀಖ್ಸೆ ಹೊತ್ತಿಗೆ ವಾಂತಿ ಭೇದಿ ಶುರುವಾಗಿ ಆಸ್ಪತ್ರೆಯ ಅತಿಥಿ ಆಗಿದ್ದು ...ಆ ಸಮಯದಲ್ಲಿ ಹಚ್ಹುತ್ತಿದ್ದ ಬತ್ತಿಯ ಘಮ ಈಗ ಆಘ್ರಾನಿಸಿದರು ಮತ್ತೆ ವಾಕರಿಕೆ ಬರುವುದಂತೂ ನಿಜ...
  • ಬೆಂಗಳೂರಿನ ಬೀದಿಗಳಲ್ಲಿ ಕಾಫಿ ಘಮ ...ಅವನೊಂದಿಗೆ ಹಸಿದ ಹೊಟ್ಟೆಯಲ್ಲಿ ಲಾಲಬಾಗ್ ಸುತ್ತಾಡಿ ..ಕೊನೆಯಲ್ಲಿ ನಾಚಿ ನಾಚಿ ಹಸಿದ ವಿಷಯ ಹೇಳಿ ಅಕ್ಕಿರೊಟ್ಟಿ ತಿಂದಿದ್ದು .ಬೈಸಿ ಕೊಂಡಿದ್ದು...ಎದೆತುಂಬಿ ಹಾಡುವೆನು..,ಎಂದು ಮರೆಯದ ಹಾಡು,ಮನತುಂಬಿ ಹಾಡುವೆನು ಕಾರ್ಯಕ್ರಮಗಳ  ಚಿತ್ರೀಕರಣ...(ಮುಂದುವರಿಯುವುದು.....)

Friday, December 10, 2010

ಗೆಳೆಯನ ಕವಿತೆಗಳು...

ಭಾವ ಜೀವಿಗಳಿಗೆ..ಉಡುಗೊರೆ ಅಂದ್ರೆ ಏನಾದ್ರೂ ಆದೀತು ...ನವಿಲುಗರಿ ,ಮಲ್ಲಿಗೆ ದಂಡೆ,ಹೊಳೆಯಲ್ಲಿ ನೆನೆಯುತ್ತ ಕುಳಿತ  ಸಪಾಟು ಕರಿಕಲ್ಲು,ಚಿತ್ರವಿದ್ದ ಕಪ್ಪೆಚಿಪ್ಪು,ಇವುಗಳಲ್ಲೂ ಬಹುಪಾಲು ಪುಸ್ತಕಗಳು ,ಪತ್ರಗಳು ....ನಾನಿಲ್ಲಿ ಬರುವ ಮುಂಚೆ ನನಗೆ ಬಂದ ಅಂತ ಭಾವನಾತ್ಮಕ ಉಡುಗೊರೆಗಳಲ್ಲಿ ಗೆಳೆಯ ಬರೆದ ಕೆಲ ಕವಿತೆಗಳನ್ನು ನಿಮ್ಮೊಂದಿಗೂ ಹಂಚಿಕೊಳ್ಳೋಣ ಅನ್ನೋ ಯೋಚನೆ ಓದಿ ಹೆಂಗಿವೆ ಹೇಳಿ...

ಒಲವ ಚಾದರಿನೊಳಗೆ
ಒಲವ ಚಾದರಿನೊಳಗೆ
ಚಲುವ ಕನಸುಗಳು
ಕಾಲುಚಾಚಿ ಕನವರಿಸುತಿದೆ
ಎಲ್ಲೋ ಇರುವ ನಿನ್ನ ನೆನೆದು........

ಹೊಂಟ ಹಕ್ಕಿಸಾಲ
 ಹಿಂದಿಂದೆ ಕಣ್ಣ ಕೀಲಿಸಿ
ನಡೆದರೂ...
ಬಲಿಯದ,ಪ್ರೀತಿ ರೆಕ್ಕೆಗೆ ;
ನಿನ್ನ ಪ್ರೀತಿ ಶಕ್ತಿಯದೆ ನೆನೆಪು...!

ಭಾವನಾ....
ಲೋಕದ ಭಾವ -ಬಂಧುರದಿ
ಒಲವೆನ್ನಲಾರದ ದ್ವಂದ್ವದ
ಮೌನಕ್ಕೂ....
ಮಾತಿನ ಚಡಪಡಿಕೆ ..

ಹಾಡೊಮ್ಮೆ,ನಗುವೊಮ್ಮೆ ..
ಸುಮ್ಮನೆ ಮಾತೊಮ್ಮೆ
ನಿನ್ನ ಪರಿಗಿದೋ ಎದೆತಾಳ ಗಪ್ ಚಿಪ್ ..
ನೀ ಮಾತ್ರ ಸರಾಗ ....

ಒಲವ ಚಾದರ ಹೊದ್ದಾಗಿದೆ..
ಆಸೆ ನಿದ್ದೆ ಹತ್ತಾಗಿದೆ..
ಕನಸ ಕುದುರೆ ಏರಿ ಬರೊ ನಿನ್ನ ಕನವರಿಕೆಯೊಂದೆ ..
ನನ್ನ ಮುಂದಿರೋ ಚಿತ್ರ...
 
 ೨.
ಯಾರೋ ಸಿಕ್ಕರು
ಚಂದ್ರ ಮುಖಿಯಂತೆ ,
ಮತ್ಯಾರೋ ಸಿಕ್ಕರು
ಕಥೆಒಳಗಿನ ಅಪ್ಸರೆಯಂತೆ
ಯಾರನ್ನ ಕಣ್ಣ ರೆಪ್ಪೆಯೋಲು ಕಾದಿದ್ದೆವೋ ..ಅವರೆ
ಕಣ್ಣೀರ ಹನಿಯಂತೆ ಹೊರ ನಡೆದರು
.೩

ಕಣ್ಣೇರು ಇರದಿದ್ದರೆ
ಕಂಗಳು ಇಷ್ಟು ಸುಂದರ ಅನಿಸುತ್ತಿರಲಿಲ್ಲ ..
ನೋವೆ ಇರದಿದ್ರೆ ..
ಖುಷಿಗೆ ಬೆಲೆಯೇ ಇರ್ತಿರ್ಲಿಲ್ಲ
ಬೇಡದೆ ದೇವರು ಕೊಟ್ಟರೆ ಪ್ರಾರ್ಥನೆ ಭಕ್ತಿಗೆ ಗೆ ಅರ್ಥವೇ ಇರುತ್ತಿರಲಿಲ್ಲ...

        -೪
ಕಣ್ಣ ದಾರಿಯ ತುಂಬಾ ,
ನಿನ್ನ ನೆನಪ ಮೈಲುಗಲ್ಲು,,,,
ಹಳೆ ಹಾಡುಗಳ ನಿಲ್ದಾಣಗಳು..
ಪ್ರೀತಿ ಮಾತ್ ಸಾಲು ಮರಗಳು
..................ಎಲ್ಲಾ..........
ನೆನಪಾಗುತ್ತಿವೆ ...
ಹೇಳು ಕವಿತೆಯಂಥ ಹುಡುಗಿಯೇ
ಬದುಕಿನ ಯಾವ ತಿರುವಿನಲ್ಲಿ
ನನಗಾಗಿ ಕಾದು ನಿಂತಿರುವೆ ...
ದಣಿದರೂ...
ದೂರದೂರಿನವರೆಗೂ
ನಡೆದೇ ಬರುವೆ ಕಾಯುವೆಯಾ//????
        -ಸಂತೇಬೆನ್ನೂರು ಫೈಜ್ನಟ್ರಾಜ್

Wednesday, December 8, 2010

ಹೊಸ ಯುಗದ ಮಕ್ಕಳು ....

ನನ್ನ ತಂದೆ ಮಾಡಿದ ಅಭ್ಯಾಸ ಅದು ದಿನ ಕಥೆ ಹೇಳೋದು.ನನ್ನಿಂದ ಶುರು ಆದ ಈ ರೂಡಿ ನನ್ನ ಮಗನಿಗೂ ಬಂತು...ಭಾರತ ದಲ್ಲಿದ್ದಾಗ ನನಗೆ ಯಾವುದೇ ತಕರಾರು ಗಳಿರಲಿಲ್ಲ ...ಆದ್ರೆ ಈಗ ಈ ಕಥೆ ಹೇಳೋ ಪ್ರವರ ನನಗೆ ಬಹಳ ಕಿರಿ ಕಿರಿ ತರ್ತಿದೆ ....
ಯಾವುದೊ ಕಾಲದಲ್ಲಿ ನೋಡಿದ ಫಿಲ್ಮ್ಒಂದರ ಕಥೆ ಕೇಳಿ ನಾ ಒಂದು ಸೀನ್ ಬಿಡದೆ ಕಣ್ಣಿಗೆ ಕಟ್ಟಿದಂತೆ ಹೇಳಬಲ್ಲೆ ಆದ್ರೆ ಮಕ್ಕಳ ಕಥೆಗಳು ಹಾಗಲ್ಲ ಅದಕ್ಕೆ ಬೇರೇನೆ ಶಕ್ತಿ ಬೇಕು ಕಥೆಯ ಮಧ್ಯ ಅವರು ಕೇಳೋ ಮುಗ್ಧ ,ಉದ್ಧಟ,ಪ್ರಶ್ನೆ ಗೆ ಉತ್ತರ ಕೊಡ್ಬೇಕು...ಅದು ನಿಜಕ್ಕೂ ಕಷ್ಟದ ಕೆಲಸ...ಕೆಲವೊಮ್ಮೆ ಹೇಳಿದ ಕಥೆಯನ್ನೇ ಹತ್ತುಬಾರಿ ಹೇಳ್ಬೇಕು.  ಒಂದು ಪದ ತಪ್ಪಾದರೂ ' ನೀ ಆಗ ಹೇಳಬೇಕಾದರೆ ಅದನ್ನ ಹೇಳಿರಲಿಲ್ಲ ಸುಳ್ಳ್ ಕಥೆ ಹೇಳ್ತೀಯ.ನನಗೆ' ಅನ್ನೋ ಪದವಿ ಬೇರೆ ...ಅಷ್ಟು ಕಥೆ ಗಳನ್ನ ಹುಡುಕಿ ತರಬೇಕಲ್ಲ...?????

ಹಾಗೆ ನಾನು ನನ್ನ ಶಾಲಾ ದಿನಗಳಲ್ಲಿ  ಅಕ್ಕವರಿಂದ ಕೇಳಿದ ಒಂದು ಕಥೆಯನ್ನು ನನ್ನ ಮಗನಿಗೆ ಹೇಳಿದೆ.........ಆ ಕಥೆ ಹೀಗಿದೆ
ರಾಮಪ್ಪ ಮತ್ತು ಭೀಮಪ್ಪ ಒಬ್ಬ ಗುರುಗಳ ಹತ್ತಿರ ವಿದ್ಯಾಭ್ಯಾಸಕ್ಕಾಗಿ ನಿಂತಿರುತ್ತಾರೆ ..ಅವರ ವಿದ್ಯಾರ್ಜನೆ  ಮುಗಿದ ದಿನ ಗುರುಗಳು ಅವರಿಬ್ಬರನ್ನು ಕರೆದು ಪುಟ್ಟ ಚೀಲದ ತುಂಬಾ ಕಡಲೆ ಬೀಜವನ್ನು ಕೊಟ್ಟು ನಿಮಗೆ ಒಳ್ಳೆದಾಗಲಿ ಇದರೊಂದಿಗೆ ನನ್ನ ಆಶಿರ್ವಾದ ವಿದೆ..೫ ವರ್ಷಗಳ ನಂತರ ನೀವು  ಮತ್ತೆ ಬಂದು ನನ್ನ ಭೇಟಿ ಮಾಡಿ  ಎಂದು ಹೇಳಿ ಬಿಳ್ಕೊಡುತ್ತಾರೆ   
ಹೀಗೆ ಹೊರಟ ಗೆಳೆಯರು ತಮ್ಮ ತಮ್ಮ ಊರು ತಲಪಿಕೊಳ್ತಾರೆ .ರಾಮಪ್ಪ ಗುರುಗಳು ಕೊಟ್ಟ ಕಡಲೆ ಬೀಜಗಳನ್ನ ದೇವರ ಮುಂದಿಟ್ಟು ಶೃದ್ಧೆ ಯಿಂದ  ದಿನ ಪೂಜಿಸುತ್ತಾನೆ..ಮತ್ತೆ ತನಗೆ ಒಳ್ಳೆದಾಗಲಿ ಅಂತ ಬೇಡಿಕೊಳ್ಳುತ್ತಾನೆ..................
ಇತ್ತ ಭೀಮಪ್ಪ  ಗುರುಗಳು ಕೊಟ್ಟ ಕಡಲೆ ಬೀಜ ಗಳನ್ನ ಬಿತ್ತಿ ಬೆಳೆತೆಗೆದು ವ್ಯಾಪಾರ ವ್ಯವಹಾರ ದಲ್ಲಿ ಪಳಗುತ್ತಾನೆ ೫ ವರ್ಷಗಳಲ್ಲಿ ದೊಡ್ಡ ವ್ಯಾಪಾರೀ ಎನಿಸಿಕೊಳ್ಳುತ್ತಾನೆ...
ಆ ದಿನ ಅವರು ಗುರುಗಳನ್ನು ಭೇಟಿ ಮಾಡುವ ದಿನ ..ಇಬ್ಬರೂ ಶಿಷ್ಯರನ್ನು ಗುರುಗಳು ಸ್ವಾಗತಿಸುತ್ತಾರೆ..ರಾಮಪ್ಪ ಗುರುಗಳ ಬಗ್ಗೆ ಅಸಮಧಾನ  ತೋರಿಸುತ್ತಾನೆ ಎಷ್ಟು ಪೂಜೆ ಮಾಡಿದರು ತನಗೆ ಒಳ್ಳೆಯದಗಲಿಲ್ಲ ದರಿದ್ರ ಹೋಗಲಿಲ್ಲ ಅಂತೆಲ್ಲ ದೂರುತ್ತಾನೆ...
ಭೀಮಪ್ಪ ತಾನು  ಆ ಕಡಲೆ ಯನ್ನೇ ತನ್ನ ಬಂಡವಾಳ ಮಾಡಿಕೊಂಡು  ಧನವಂತನಾದದ್ದನ್ನು  ವಿವರಿಸುತ್ತಾನೆ...
ಗುರುಗಳು ಒಬ್ಬ ಶಿಷ್ಯನಿಗೆ ತಮ್ಮ ಮೆಚ್ಹುಗೆ ಸೂಚಿಸಿ ಆಶೀರ್ವದಿಸುತ್ತಾರೆ ಆ ಶಿಷ್ಯ ಯಾರು????

ಈ ಪ್ರಶ್ನೆಯನ್ನು ನಮಗೆ ಕೇಳಿದಾಗ  ನಾವು ರಾಮಪ್ಪ ಎಂದು ..ಅವನು ಗುರುಗಳ ಉಡುಗೊರೆ ಯನ್ನ ಅಷ್ಟು ವರ್ಷ ಕಾದುಕೊಂದು ಪೂಜಿಸಿದ್ದಾನೆ ಗುರುಗಳು ಅವನಿಗೆ ಪ್ರಸನ್ನರಾಗಿ ವರ ಕೊಡುತ್ತಾರೆ ...ಎಂದು ಹೇಳಿದ್ದೆವು...ಆಮೇಲೆ ಅಕ್ಕವರು ಅದು ತಪ್ಪು ಕಲಿತ ವಿದ್ಯೆ ಯನ್ನು ಜೀವನಕ್ಕೆ ಅನ್ವಯಿಸಿಕೊಂಡು ಮುಂದೆ ಬರುವವನೆ ನಿಜವಾದ  ಶಿಷ್ಯ.....ಅಂದ್ರು ನಮಗೆ ಮನಸಲ್ಲೇ...ಆಲೋಚನೆ ''ಛೆ ನಾನ್ ಯಾಕೆ ಇ ಉತ್ತರ ಆಲೋಚನೆ ಮಾಡಲಿಲ್ಲ...ಅಕ್ಕವರನ್ನು ಪ್ರಸನ್ನ ಮಾಡಲು ಹೋಗಿ ತಪ್ಪು ಉತ್ತರ ಹೊಳೆಯಿತಲ್ಲ  ಛೆ....'' ಅಂತೆಲ್ಲ ............



ನಿನ್ನೆ  ಇದೆ ಕಥೆಯನ್ನ ನನ್ನ ಮಗನಿಗೆ ಹೇಳಿದೆ ..ಮತ್ತು ಅಕ್ಕವರ ಸ್ಟೈಲ್ ನಲ್ಲೆ ಕೊನೆಗೆ ಪ್ರಶ್ನೆ ಕೇಳಿದೆ......ನನ್ನ ಮಗ ಹೇಳಿದ''ಭೀಮಪ್ಪ ಒಳ್ಳೆಯ ಶಿಷ್ಯ'' ನನಗೆ  ಅಕ್ಕವರು ಹೇಳಿದಂತೆ ಇವನಿಗೆ ವಿವರಣೆ ಕೊಟ್ಟು ಹೇಳಿ  ತಿಳಿದವಳು ಅನಿಸಿಕೊಳ್ಳುವ  ಹಂಬಲ  ಆದ್ರೆ ಇವನ ಉತ್ತರ ಕೇಳಿ ಮತ್ತೆ ಇರುಸು ಮುರುಸು... 


....ಯಾಕೆ? ಮತ್ತೆ ನನ್ನ ಪ್ರಶ್ನೆ...ಅಮ್ಮ ಅವನ ಹತ್ತಿರ ದುಡ್ಡು ಇದೆ ..ಅದಕ್ಕೆ.......  ಅವ ಹೇಳಿದ್ದು ಕೇಳಿ ಸ್ವಲ್ಪ ಹೊತ್ತು ಮಾತು ಹೊರಡಲಿಲ್ಲ.........ಅವತ್ತು ನಾವು  ೧ ನೆ ಕ್ಲಾಸ್ನಲ್ಲಿದ್ದೆವು  ನನ್ನ ಮಗನಿಗೆ ೪ ವರ್ಷ...
ಛೇ ನಾ ಅಷ್ಟು ಯೋಚಿಸ್ಲಿಲ್ವಲ್ಲ  ಅಂತ ಅನಿಸ್ತು..
ಬದಲಾದದ್ದು ಕಾಲವಾ? ಮಕ್ಕಳ ?ಯೋಚಿಸುವ ರೀತಿಯ?....ತಿಳಿತೀಲ್ಲ..ಹೊಸಯುಗ ಜನಿಸುವ ಮಗುವಿನ ತಲೆಯಲ್ಲೂ  ಏನೋ ನಮಗಿಲ್ಲದ  ಒಂದು ತಂತ್ರಾಂಶ  ಅಳವಡಿಸುತ್ತಿದೆ ಅನಿಸುತ್ತಿದೆ,,,,ಇರಲಿ ಮಕ್ಕಳು ನಮ್ಮವೇ  ಅಲ್ವಾ???

Friday, December 3, 2010

ಬೆಕ್ಕಿನ ಬಾಣಂತನ

ಆಕೆಯ ಹೆಸರು ಐಶ್ವರ್ಯ ,,,ಮನೆಯ ಹತ್ತಿರವಿದ್ದ ಫಾರೆಸ್ಟ್ ಡಿಪೋ ದಿಂದ ಹಾಡು ಬರುತ್ತಿದ್ದಾಗ..ನನ್ನ ಗೆಳತಿ ಮಂಗಳ ಕರೆದು.'ಅಮಿತಾ ನಿನಗೆ ಬೆಕ್ಕಿನ ಮರಿ ಬೆಕ??'ಅಂದ್ಲು...ಬೆಕ್ಕು ,ನಾಯಿ ಅಂದ್ರೆ ನಮ್ಮ ಜನ್ಮದ ಬಂಧುಗಳು ....ಮನೆಯಲ್ಲಿ ಬೆಕ್ಕಿನ ಮರಿ ಇತ್ತಾದರೂ ಅದನ್ನ ನೋಡಿದ ಮೇಲೆ ಇಲ್ಲವೆನ್ನಲು ಆಗಲೇ ಇಲ್ಲ ದಪ್ಪ ಬಾಲದ ಉದ್ದ ರೋಮದ ಆ ಬೆಕ್ಕಿನ ಮರಿಯನ್ನ ಎತ್ತ್ಕೊಂಡ್ ಬಂದೆ...ಆದ್ರೆ ನನ್ನ ಅಮ್ಮನಿಗೆ ಸಂಭಾಳಿಸೋದು ದೊಡ್ಡ ಕಷ್ಟ,,,ಅಮ್ಮನಿಗೆ ಅಡಿಗೆಕೊಣೆಯಲ್ಲಿ ಓಡಾಡೋ ಆ ಜೀವಿಯನ್ನ ಕಂಡರೆ ಅಷ್ಟಕ್ಕಷ್ಟೇ,,,ಅದಕ್ಕೆ ನಮ್ಮದೊಂದು ಪುಟ್ಟ ಡ್ರಾಮಾ ಟೀಂ ಇದೆ...ಬೆಕ್ಕಿನ ವಿಷಯ ಬಂದಾಗ ......ಹಿತ್ತಲ ಬಾಗಲಲ್ಲಿ ಬೆಕ್ಕನ್ನ ಬಿಟ್ಟು..ಮುಂದಿನ ಪಡಸಾಲೆಯಲ್ಲಿ ಏನು ಗೊತ್ತಿಲ್ಲದವರಂತೆ ಬಂದು ಕೂತು ಬಿಡ್ತೀವಿ..ಬೆಕ್ಕು ಮನೆಗೆ ಬಂದು ಸೇರಿದರೆ ಒಳ್ಳೇದು ಅನ್ನೋ ಒಂದು ನಂಬಿಕೆಯಲ್ಲೇ...ಅಮ್ಮ ಪಾಪ ಅದನ್ನ ಒಲ್ಲದ ಮನಸಲ್ಲೇ ಒಳಗೆ ಸೇರಿಸುತ್ತಾಳೆ ....

ಆಮೇಲೆ ಬೆಕ್ಕಿನ ತಲೆಗೆ ಎಣ್ಣೆ ಸವರಿ ಅಡಿಗೆ ಒಲೆಯ ಸುತ್ತ ೩ ಬಾರಿ ತಿರುಗಿಸಿದರೆ ಆ ದಿನದಿಂದ ಅದು ನಮ್ಮ ಬೆಕ್ಕು...ಹಾಗೆ ಬಂದನಂತರ ಅದಕ್ಕೆ ನಾಮಕರಣ ಸಾಮಾನ್ಯವಾಗಿ ಯಾವ ದಿನ ತಂದಿದ್ದೆವೋ ಆ ವಾರದ ಹೆಸರಿನ ಆರಂಭದ ಅಕ್ಷರ ದಲ್ಲೇ ಹೆಸರಿಡೋದು ನಮ್ಮ ಅಲಿಖಿತ ನಿಯಮ..ಆದ್ರೆ ಈ ಬಾರಿ ಆ ಬೆಕ್ಕಿನ ಮರಿಯ ಅದಾ,ನಜಾಕತ್, ನೋಡಿ ಅದಕ್ಕೆ ಐಶ್ವರ್ಯ  ಅನ್ನೋ ಹೆಸರಿಟ್ವಿ...

ಹಾಗೆ ಬಂದು ಸೇರಿದ ಬಿಲ್ಲಿ ನಮ್ಮ ಮನೆಯ ಎಲ್ಲರ ಮುದ್ದು...ಆಕೆಯನ್ನ ಹೇಗೆ ಮುದ್ದೆ ಮಡಿ ಹೇಗೆ ತಿರುಚಿ ಮಲಗಿಸಿದರು ಆಕೆ ಅದೇ ಆಕಾರ ದಲ್ಲಿ ಮಲಗಿರುತ್ತಿದ್ದಳು..ಮೈ ಶಾಖ್,ಅಡುಗೆ ಒಲೆಯ ಹಿಂದಿನ ಬಿಸಿಗೆ ಮಲಗುವುದೆಂದ್ರೆ ಅದಕ್ಕೆ ಪ್ರಾಣ...
ದಿನಕಳೆದಂತೆ ಇನ್ನು ಚಂದ ಇನ್ನು ಆಕರ್ಷಣೀಯವಾಗಿ ಕಾಣೋ ಆಕೆಯ ಹೊಟ್ಟೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಬಂತು...ನಮಗೆಲ್ಲ ಖುಷಿ ,,,,,ಮುದ್ದಿನ ಮಗಳು ಬಾಣಂತನಕ್ಕೆ ಬಂದಂತೆ..
ಬೆಕ್ಕುಗಳು ಕತ್ತಲಲ್ಲೇ ಮರಿ ಹಾಕುತ್ತವೆ..ಹಾಕಿದ ಮೊದಲಮರಿ ತಿಂದುಹಾಕುತ್ತವೆ,೭ ಜಾಗೆ ಬದಲಿಸುತ್ತವೆ...ಹೀಗೆ ಏನೇನೋ ನಂಬಿಕೆಗಳಿವೆ...ಬೆಕ್ಕಿನ ಬಗ್ಗೆ .....ಆದರೆ ಅದೆಲ್ಲ ಸುಳ್ಳು..ಅನ್ನೋದು ನಂಗೆ ಮನವರಿಕೆ ಮಾಡಿಕೊಟ್ಟಿದ್ದೆ ಐಶ್ವರ್ಯ ...

ಆದಿನ ನಮ್ಮ ಹಳೆಮನೆ ಮೂಲೆ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ...ಐಶು ಬಂದು ನನ್ ಕಾಲ್ ಮೇಲೆ ಮಲಗಿತು ಅದು ಯಾವತ್ತಿನ ರೂಡಿ..ಆದರೆ ಇವತ್ತು ಪ್ರತಿದಿನದಂತಲ್ಲ ಏನೋ  ಹೇಳೋರ್ ಥರ ಪುಸ್ತಕ ವನ್ನ ಪರಚೋದು ..ಕಾಲುಒಮ್ಮೆಲೇ ನೆಟ್ಟಗೆ ಮಾಡಿಒದರೋದು..ಹಾಗೆಲ್ಲ ಮಾಡೋಕೆ ಶುರು ಮಾಡಿತು..

ಅದು ಮಾಡ್ತಿರೋದ್ ನೋಡಿದ್ರೆ ಅನಿಸ್ತಿತ್ತು ಅದಕ್ಕೆ ಹೊಟ್ಟೆನೋವು ಬಂದಿದೆ ....ಮರಿ ಹಾಕಲು ಅದಕೆ ಕತ್ತಲೆ ಬೇಕಲ್ಲ ??ನ ಎದ್ದು ಹೋಗಿ ಬಿಡಲ..ಅನ್ನೋ ಯೋಚನೆ ಬಂತಾದರೂ..ನನ್ನ ಮೈ ಮೇಲಂತೂ ಮರಿ ಹಾಕಲ್ಲ ಅನ್ನೋ ಒಂದು ವಿಶ್ವಾಸ ದೊಂದಿಗೆ ಅದನ್ನ ತೊಡೆಯಮೇಲೆ
ಮಲಗಿಸಿ ಕೊಂಡು ಸುಮ್ಮನೆ ಅದರ ತಲೆ ಹೊಟ್ಟೆ ಕೊರಳನ್ನ ಸವರುತ್ತ ಕುಳಿತೆ ....
ನನ್ನ ಅರಿವಿಗೆ  ಬರೋ ಮುಂಚೆಯೇ  ನನ್ನ ತೊಡೆಮೇಲೆ ಬಿಲ್ಲಿ ಮರಿ ಹಾಕಿಬಿಟ್ಟಿತ್ತು...ಆ ಅನುಭವ ಎಲ್ಲರಿಗು ಸಿಗಲ್ಲ...ಕೆಲವರಿಗೆ ಹೇಸಿಗೆ ,ಕೆಲವರಿಗೆ ಅಯ್ಯೋ ರಾಮ್ ರಾಮನ ನೆನಪು....ಕೆಲವರಿಗೆ ನನ್ ಡ್ರೆಸ್ ಚಿಂತೆ ,,,,,ಆದ್ರೆ ನನಗೆ ಆ ಅನುಭವ ಎಷ್ಟು ರೋಮಾಂಚನ ತಂದಿತ್ತು ಅಂದ್ರೆ ಮುಂದಿನ ೩ ಮರಿಗಳು ಅದು ನನ್ ತೊಡೆಮೇಲೆ ಹಾಕಿ..ಕೆಳಗೆ ನಿಂತು ಹೊಕ್ಕಳಬಳ್ಳಿ ತನ್ನ ಹಲ್ಲಿನಿಂದ ತುಂಡು ಮಾಡಿ ಮತ್ತೆ     ತೊಡೆಮೇಲೆ ಬಂದು ಮಲಗ್ತಿತ್ತಾದ್ರು ..ನಾನು ಬಾರಿ ಅದು ಹುಡುಗಿ ಯಿಂದ ಅಮ್ಮ ಆಗಿ ಪರಿವರ್ತನೆ ಗೊಂಡ ರೀತಿ...ಅದನ್ನ ನಿರ್ವ್ಹಹಿಸೋ ಪರಿ ಕಂಡು ಮಾತೆ ನಿಂತು ಹೋದಂತಾಗಿದ್ದೆ ......

ಅದಕ್ಕೆ ಯಾರು ಹೇಳಿಕೊಟ್ಟರು??ಕಣ್ಣು ಬಿಡದ ಆ ಮರಿಗಳನ್ನು ತನ್ನ ಮೊಲೆಗೆ ಅಂಟಿಸಿಕೊಂಡು ಹಾಲುಣಿಸುವ ಪರಿ..ಮರಿಯ ಮಯ್ಯಸುತ್ತ ಇರೋ ಜಿಡ್ಡು ನೆಕ್ಕಿ ಅದನ್ನ ಶುಭ್ರ ಗೊಳಿಸೋ ರೀತಿ...ಪ್ರಕೃತಿ ಎಷ್ಟು ಅಧ್ಭುತ ಅಲ್ವಾ??ನನಗನಿಸಿದ ಮಟ್ಟಿಗೆ ಬೆಕ್ಕಿನ ಬಾಣಂತನ ದಷ್ಟು ಸ್ವಚ್ಹ ಶುಭ್ರ   ಮತ್ತ್ಯಾವ ಜೀವಿಯೂ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೋ......
ಏನೇ ಹೇಳಿ..ಇದೊಂದು ಜೀವಿತ ಕಾಲದ ಅಮೂಲ್ಯ ಅನುಭವ ...ಅದಕ್ಕೆ ಅಕ್ಷರ ರೂಪ ಕೊಡುವುದು ಕಷ್ಟ್ ಅನಿಸುತ್ತೆ ಆದ್ರೂ..ನೀವು ನನ್ನನ್ನ ಎಂದಾದರು ಭೇಟಿ ಆದ್ರೆ ಅದನ್ನ ಮಾತಲ್ಲಿ ವಿವರಿಸೋ ಪ್ರಯತ್ನ ಖಂಡಿತ ಮಾಡೇನು....
ಅಲ್ಲಾದ್ರೂ ನಾನೆ ಸೋಲ್ತೇನೆ...
ಐಶು ಈಗಿಲ್ಲ...ಆದ್ರೆ ಅವಳ ನೆನೆಪು ನನಗೇ ಹೆರಿಗೆ ನೋವು ಬಂದಾಗ..ತೀವ್ರವಾಗಿ ಕಾಡಿತ್ತು...ಹೀಗಿತ್ತು ನನ್  ಬೆಕ್ಕಿನ ಬಾಣಂತನದ ಕಥೆ..

Thursday, December 2, 2010

ಐರಿಶ್ ನಾಡಿನಲ್ಲಿ ನಾ..ಭಾರತದ ಕುವರಿ

ನೋಡನೋಡುತ್ತಲೇ ತಿಂಗಳು ಕಳೆಯಿತು ...ನಾ ಬರುವಾಗ ಇಲ್ಲಿನ ಮರಗಳು ಹಸಿರೆಂದೆರೇನು ಅನ್ನೋದು ನಮಗೆ ಗೊತ್ತೇ ಇಲ್ಲ ಅನ್ನೋ ಹಾಗೆ ಕೆಂಪು ಎಲೆಗಳನ್ನ ಹೊತ್ತು ಮಡಿ ಸೀರೆ ಉಟ್ಟು ಮದುವೆಗೆ ಹೊರತು ನಿಂತ ನೀರೆಯರಂತೆ   ಕಾಣುತ್ತಿದ್ದವು .ಆಗ ಇಲ್ಲಿ ಆಟೊಮ್ ತಿಂಗಳು ....
ಇಗ ಮರದ ಬಣ್ಣ ಬಿಡಿ ನೆಲವು  ಕಾಣದಷ್ಟು ಹಿಮ ಹೊದ್ದುಕೊಂಡಿದೆ...

ಇದೆಲ್ಲ ಹೊಸ ಅನುಭವಗಳು..ಮೊದಲ ಅನುಭವಗಳು..ಬದುಕಿನಲ್ಲಿ ಬರುವ ಪ್ರತಿ ಮೊದಲುಗಳು ಅವರ್ಣನೀಯ..ಹಾಗೆ ಇದುಕೂಡ...
ಮೊದಮೊದಲಂತೂ ಬಿಳಿಯರನ್ನು ನೋಡಿದರೆ ಹೆಂಗೋ ಅನಿಸೋದು .ಭಾರತ ದಲ್ಲಿ ಅವರನ್ನು ಕಂಡರೆ ಮಾತಾಡಿಸಿ ಗೆಳೆತನ ಮಾಡಿಕೊಂಡು ಅವರನ್ನು ಮನೆಗೆ ಕರೆದುಕೊಂಡು ಹೋಗಿ ಅಥಿತಿ ಸತ್ಕಾರ್   ಮಾಡುತ್ತಿದ್ದವಳು ನಾನೇನಾ ಅಂತ ನನಗೆ ಅನುಮಾನ .....

ಆದಿನ ಮಾರ್ಕೆಟ್ ಗೆ ಹೋದಾಗ ಇವರ ಹತ್ತಿರ ಅಂದೆ ಎಲ್ಲ ಹೋದರು ಈ ಬಿಳಿಯರೇ  ಕಾನಿಸುತ್ತಾರೆ.. ಸ್ವಲ್ಪ ದಿನ ಹೋದರೆ  ಕಣ್ಣು ಬಿಳಿ ಆಗುತ್ತೆ ಇವರನ್ನ ನೋಡಿ...ಅದಕ್ಕೆ ಇವರು 'ನೀ ಇರೋದು   ಅವರ ದೇಶದಲ್ಲೇ ಅನ್ನೋದು ನೆನಪಿಡಬೇಕು ನೀನು ಅಂದ್ರು...ಅದು ಹೌದಲ್ಲವೇ..ಅವರ ಮನೆಗೆ ಬಂದು ಅವರನ್ನ್ ನೋಡಿದರೆ ಕಷ್ಟ ಆಗುತ್ತೆ ಅಂತ ಹೇಳಿದ್ರೆ???

ಆದ್ರೆ ಒಂದ್ ವಿಷ್ಯ ವಿಚಿತ್ರ ಅನಿಸಿದ್ದು ....ಸೂರ್ಯ ಮುಳುಗದ ನಾಡು ಅಂತೆಲ್ಲ ಹೊಗಳಿಸಿಕೊಳ್ಳುವ ಇಂಗ್ಲೆಂಡ್ ದೇಶದಲ್ಲಿ ಸೂರ್ಯ ಬರೋದೆ ಅಪರೂಪ...ಪಾಪ ಅವನಿಗೂ ಛಳಿ. ಸ್ನೌ ಫಾಲ್ ,ನೋಡಿ ಬೇಜಾರ್ ಬಂದಿರಬೇಕು..
ಬಿಸಿಲು ಬಂದರೂ ಅದು ಮೈಗೆ ತಾಗಲ್ಲ....

ನನ್ನ ಅಜ್ಜಿ ಯಾವಾಗಲು ಹೇಳೋ ಗಾದೆ ಒಂದಿದೆ,'ಹೊಸ ಮಡಿಕೆ ಕೊಣ್ ಕೊಣ್ ' ಅಂತ ನನ್ನದು ಹಾಗೆ ಮಗುವಿನಂತೆ.ಅಚ್ಹರಿ ತವಕ ಕುತೂಹಲ ದಿಂದ ಹೊಸತನ ಬದುಕಲ್ಲಿ ಬಂದ ಬದಲಾವಣೆ ಸ್ವಾಗತಿಸುತ್ತಿದ್ದಿನಿ ..ಅದಕ್ಕೆ ಇಷ್ಟೆಲ್ಲಾ ವಿವರಣೆ...
ಸ್ವಲ್ಪ ದಿನದ ನಂತರ ಅದೇ ಜೀವನ ಅಭ್ಯಾಸ ಆಗಿ ಹೋಗುತ್ತೆ .....
ಪೌಂಡ್  ಗಳನ್ನ  ರೂಪಾಯಿ ಗೆ ಬದಲಾಯಿಸಿ...ಯಪ್ಪಾ ಇಷ್ಟಾ?ಅಂತ ಬಾಯಿ ಮೇಲೆ ಪೂರ್ತಿ ಕೈ ಇತ್ತು ಕಣ್ಣು ಅರಳಿಸೋದು ಇನ್ನು ಬಿಟ್ಟಿಲ್ಲ...ಅದು ಕಡಿಮೆ ಅದಾಗ ಮತ್ತೊಂದ್ ಪೋಸ್ಟ್ ...till than bye

Wednesday, October 6, 2010

Fwd: kalasige





ಪ್ರತಿ ರಜೆಯಲ್ಲೂ ಅಜ್ಜಿ ಮನೆಯಲ್ಲಿ ಕ್ಯಾಂಪ್ ಹಾಕಿದರೂ ಈ ಬಾರಿ ಅಜ್ಜಿ ಇಂದ ಉಪಯುಕ್ತ ಮಾಹಿತಿ ಪಡೆದ ಹೆಮ್ಮೆ ನನಗೆ..ಗೆಣಸಿನ ಹಪ್ಪಳ ಗಳನ್ನ ಮೆಲ್ಲುತ್ತ ಅಜ್ಜಿ ಜೊತೆ ಹರಟೆ ಹೊಡೆಯುತ್ತಿದ್ದಾಗ  ಪಕ್ಕದ ಮನೆಯಾಕೆ  ಕೊಡದಂತೆ ಹೊತ್ತು ತಂದ ಕಟ್ಟಿಗೆಯ ವಸ್ತುವೊಂದು ನನ್ನ  ಗಮನ ಸೆಳೆಯಿತು ,ಅಜ್ಜಿಯನ್ನ ಕೇಳಲು ಅವರು ಅದನ್ನ ಕಳಸಿಗೆ ಅಂತ ಹೇಳಿ  ಅದರ ವಿವರ ಕೊಡೋದಿಕ್ಕೆ ಪ್ರಾರಂಭಿಸಿದರು.
ಸೇರು,ಪಾವು, ಕಾಲುಪಾವು ಹೀಗೆ ಅನೇಕ ಅಳತೆ ಗಳನ್ನ ನಾವು ಕೇಳಿಯೇ ಇರ್ತೀವಿ ಕಳಸಿಗೆ ಕೂಡ ಭತ್ತವನ್ನ ಅಳೆಯಲು ಇರುವ ಮಾಪು 
೩ ಕಳಸಿಗೆ ಬತ್ತ ಹಾಕಿದರೆ ಒಂದು ಅಕ್ಕಿ ಮೂಟೆ ಆಗುತ್ತೆ ಅನ್ನೋದು ಇವರ ಲೆಕ್ಕಾಚಾರ. 
digital ಯುಗದಲ್ಲೂ ಕುಂದಾಪುರದ  ಪುಟ್ಟ ಹಳ್ಳಿ ಕೋಣಿ ಯಲ್ಲಿ  ಈ ಕ್ರಮದಲ್ಲೇ  ಜನಪದರು ಇನ್ನು ತಮ್ಮ ಕೃಷಿ ಕಾಯಕಕ್ಕೆ,ಮೆರಗು ನೀಡುತ್ತಿದ್ದಾರೆ
ಮತ್ತು ಸುತ್ತ ಮುತ್ತಲ ಜನರೆಲ್ಲಾ ಕಳಸಿಗೆ  ಒಯ್ಯಲು ಬರುವುದು  ನನ್ನ ಅಜ್ಜಿ ತಾರಮ್ಮನ ಮನೆಗೆ.
ಹಳೆಯ ವಸ್ತು ಗಳೆಲ್ಲ ಅಟ್ಟ ಸೇರಿ ಕಾಲ ವಾದರೂ ಈ ಕಳಸಿಗೆ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು  ಸಾಹಸ ವಲ್ಲದೆ ಮತ್ತೇನು ????


Monday, September 27, 2010

ಹಕ್ಕಿ ಗೂಡಿನ ಹುಡುಕಾಟ




ಮುಂಚೆ ಎಲ್ಲ ಭಾನುವಾರ ಬಂದ್ರೆ ಸಾಕು ಅಂತ ಕಾಯುತ್ತಿದ್ದ ದಿನಗಳಿದ್ದವು...ಯಾಕಂದ್ರೆ ಊಟ ಕಟ್ಟಿಕೊಂಡು ಹೊಲಕ್ಕೆ ಹೋಗಿ ಕೆರೆಯ ದಡ ದಲ್ಲಿ ಗುಬ್ಬಿ ಗೂಡು (ಗೀಜಗನ ಗೂಡು)ನೋಡುತ್ತಾ ಖುಷಿ ಪಡುತ್ತಿದ್ದ ದಿನಗಳವು......ಕಲಿತವರಿಗೆ ಬುಧ್ದಿ ಮಂದ ಅಂತ ಅಜ್ಜಿ ಹೇಳೋವಂತೆ...ದಿನ ಕಳೆದಂತೆ ಈ ಆಸಕ್ತಿ ಗಳು ಎಲ್ಲೋ ಕಳೆದು ಹೋದವು....
ಯಾಕೋ ಈ ಭಾನುವಾರ ಇದನ್ನ ಮತ್ತೆ ಅನುಭವಿಸಬೇಕು ಅನ್ನೋ ಆಸೆ.....ಸರಿ ನಾನು ಮತ್ತು ತಮ್ಮ ತೋಟದಲ್ಲಿ ಇರುವ ಪುಟ್ಟ ಹೊಂಡಕ್ಕೆ ಬಾಗಿ ಕೊಂಡಿರೋ ಖದಿರ ವೃಕ್ಷ ಕ್ಕೆ ಯಾವಾಗಲು ಕಟ್ಟೋ ಆ ಗುಬ್ಬಿ ಗೂಡನ್ನ ನೋಡೋಕೆ ಹೊರಟೆವು .....ಕೈಲಿ ಕ್ಯಾಮೆರಾ
ಹೋಗೋ ಹಾದಿಯಲ್ಲೇ ಅಪರೂಪದ ಅಥಿತಿಗಳ ಭೇಟಿ ...ಮಳೆಗಾಲದ ಅಣಬೆ...ಜೋಡಿ ಗುಮ್ಮಕ್ಕಿ , ಕೆರೆ ಹಾವು, ಬಣ್ಣದ ಜೇಡ ......ಕೊನೆಯಲ್ಲಿ ಗೀಜಗನ ಗೂಡು...
ಖಧಿರ ದ ಮರದಲ್ಲಿ ಗೂಡುಗಳೇ ಇಲ್ಲ....ಛೇ! ಬಂದಿದ್ದೆ ವ್ಯರ್ಥ ಅನ್ಕೊಳ್ತಿದ್ದಂತೆ ತಮ್ಮ ಕೂಗಿದ..".ನೋಡಲ್ಲಿ ಮೇಲೆ...!!!"
ನಮ್ಮ ತಾರಸಿ ಮನೆ ನೋಡಿ ನೋಡಿ ಅವಕ್ಕೂ ಆಸೆ ಆಯಿತು ಅನಿಸುತ್ತೆ...ಬಾನೆತ್ತರದ ಅಡಿಕೆ ಮರದ ತುದಿಗೆ ಇಳಿಬಿದ್ದ ಗೂಡುಗಳು ......ಅಂತೂ ಸಿಕ್ಕೆ ಬಿಡ್ತು ......ನೋಡಿ ಕಣ್ಣ ತಂಪು ಮಾಡ್ಕೊಂಡ್ ವಾಪಾಸ್ ಬರೋವಾಗ ಜೋರ್ ಮಳೆ...ಕೆಸರಲ್ಲಿ ಚಪ್ಪಲಿ ಹೂತು ಹೋಗಿ ಬರಿಗಾಲಲ್ಲೇ ಮನೆ ಸೇರಿದೆವು...
ಹೀಗಿತ್ತು ಈ ಬಾರಿಯ ಅಕ್ಕ ತಮ್ಮನ ದಿವ್ಯ ಭಾನುವಾರ...

Thursday, September 23, 2010



ನವರಾತ್ರಿಗೆ ಗುಜರಾತಿ ,ಬಂಗಾಳಿಗಳು ಎದುರು ನೋಡುವಂತೆ ಸಾರಸ್ವತರು ಎದುರು ನೋಡೋದು ಶ್ರಾವಣದ ಚೂಡಿ ಎಂಬ ಪೂಜೆಯನ್ನ....ಶ್ರಾವಣದ ಪ್ರತಿ ಶುಕ್ರವಾರ ಮತ್ತು ಭಾನುವಾರಗಳಂದು ಈ ಪೂಜೆ ತುಳಸಿಯಾ ಮುಂದೆ ವಿಶಿಷ್ಟ್ ರೀತಿಯಲ್ಲಿ ಆಚರಿಸಲಾಗುತ್ತದೆ ....


ಬರಿಪೂಜೆ ಅಂದ್ರೆ ಅದರಲ್ಲೇನು ವಿಶೇಷ ಅಂದ್ರಾ????ಆ ಪೂಜೆಯಲ್ಲಿ ಬಳಸುವ ವಸ್ತುಗಳು ವಿಶೇಷ.....ಶ್ರಾವಣದ ಲ್ಲಿ ಭೂಮಾತೆ ಹಸುರುಟ್ಟು ನಗುವಾಗ ...avallalli ದೊರೆಯುವ ಪುಟ್ಟ ಪುಟ್ಟ ಸಸ್ಯ ಗಳನ್ನ ಅಪರೂಪದ ಪುಟ್ಟ ಹೂಗಳನ್ನ ತಂದು ಕೂಡಿಸಿ ಗುಚ್ಛ ಕಟ್ಟಿ ಅವನ್ನು ವೀಳ್ಯದೆಲೆ ಯೊಂದಿಗೆ ತುಳಸಿ ಮುಂದೆ ಇಟ್ಟು ವಿಧಿವತ್ತಾಗಿ ಪೂಜಿಸುತ್ತಾರೆ ....ಸೌಭಾಗ್ಯ ವೃದ್ಹಿಸುವಂತೆ ಪ್ರಾರ್ಥಿಸುತ್ತಾರೆ ...ಭತ್ತದ ಅರಳು ಮತ್ತು ಬೆಲ್ಲವನ್ನ ನೇವೇದ್ಯ ಮಾಡಿ....ಅರಿಶಿನ ಕುಂಕುಮ ದೊಂದಿಗೆ ಚೂಡಿ ಯನ್ನ ಪರಸ್ಪರ kotkoltare




ಶ್ರಾವಣದಲ್ಲಿ ಹೂವುಗಳೆಲ್ಲ ತವರಿಗೆ ಹೋಗುತ್ತವೆ ಅನ್ನೋದು ನಮ್ಮಕಡೆ ನಂಬಿಕೆ.. ಆದರೂ.ಸುರಿಯುತ್ತಿರುವ ಮಳೆಯಲ್ಲಿ ಪ್ರಕೃತಿಗೆ ಮುತ್ತಿನ ತೋರಣ ಎಂಬಂತೆ ಕೆಲ ಸಸ್ಯ ಗಳು ಸೌಂದರ್ಯ ತೊನೆಯುತ್ತವೆ ಅಂಥಹ ಹಲವು ಸಸ್ಯಗಳನ್ನ ಮಲೆನಾಡಿನದ್ಯಂತಾ ನಾವು ಕಾಣಬಹುದು...ಆ ಸಮಯದಲ್ಲಿ ಬರುವ ಹಲವು ಪೂಜೆಗಳಿಗೆ ಈ ಮುತ್ತಿನ ತೆನೆಯಂತ ಸಸ್ಯ ಗಳನ್ನ ಬಳಸುತ್ತಾರೆ ಕೊಂಕಣಿಗರ ವಿಶೇಷ ಆಚರಣೆ ಚೂಡಿ ಯಲ್ಲಂತೂ ಗೌರಿಮುತ್ತು ಎಂಬ ಸಸ್ಯ ತೋರಣ ಇರಲೇಬೇಕು.......ಒಟ್ಟಿನಲ್ಲಿ ಈ ಸಸ್ಯ ಗಳು ಪ್ರಕೃತಿ ಯನ್ನು ನಿತ್ಯ ಮುತ್ತೈದೆ ಯಾಗಿಸಿವೆ ...


Wednesday, September 22, 2010

ಅಮಿತರುಚಿ .....ಎರಡಿಂಚು ನಾಲಿಗೆಗೆ


ಮಳೆಗಾಲ ಶುರು ಆದ ಕೂಡಲೇನೆಟ್ಟ ಹೀರೆ ಬಳ್ಳಿ ತುಂಬಈಗ ಕಾಯಿ ತುಂಬಿ ಕೊಂಡಿವೆ ......ಬರೀ ಸಾರು ಬಜ್ಜಿ ಪಲ್ಯ ತಿಂದು ಬೇಜಾರೈತು ಅಂತ ಹೊಸ ರುಚಿ ತಯಾರಿಸೋ ಉಮೇದು ಬಂದು ee ಕೋಸಂಬರಿ ತಯಾರಿಸಿದೆ...ನೀವು ಮನೇಲಿ ಒಮ್ಮೆ ಪ್ರಯೋಗಿಸಿ ಖಂಡಿತ ಇಷ್ಟ ಆಗುತ್ತೆ ಅನ್ನೋದು ನನ್ನ ನಂಬಿಕೆ....ಆದ್ರೆ ಇದಕ್ಕೆ ಹೀರೆಕಾಯಿ ಸಿಪ್ಪೆ ಬಳಸಿದೀನಿ ...ಮೊಸರನ್ನ ಮತ್ತು ಹೀರೆಕಾಯಿ ಸಿಪ್ಪೆ ಕೋಸಂಬರಿ ಒಳ್ಳೆ ಫ್ರೆಂಡ್ಸ್ ....
ಏನೇನು ಬೇಕು ???.
: ಹೀರೆಕಾಯಿ ಗೀರು(ಸಿಪ್ಪೆ),೩ ಈರುಳ್ಳಿ ,ಸ್ವಲ್ಪ ಹಸಿ ಕೊಬ್ಬರಿ ,ಹುಣಸೆ ರಸ ,ಮೆಣಸಿನ ಪುಡಿ,ಉಪ್ಪು,ಸ್ವಲ್ಪ ಎಣ್ಣೆ
ಮಾಡುವ ವಿಧಾನ:
ಹೀರೆಕಾಯಿ ಸಿಪ್ಪೆಯನ್ನ ಚಿಕ್ಕದಾಗಿ ಕತ್ತರಿಸಿ ಇಟ್ಕೊಳ್ಳಿ.ಈರುಳ್ಳಿ ಯನ್ನು ಸಣ್ಣಗೆ ಹೆಚ್ಚಿ.ಸ್ವಲ್ಪ ಎಣ್ಣೆ ಹಾಕಿ ಹೀರೆಕಾಯಿ ಸಿಪ್ಪೆಯನ್ನು ಪರಿಮಳ ಬರೋತನ್ಕ ಹುರಿಬೇಕು .ನಂತರ ಈರುಳ್ಳಿ ಕೆಂಪಗೆ ಹುರೀಬೇಕು.. ಹಸಿ ಕೊಬ್ಬರಿ ತುರಿ ಸೇರಿಸಿ ಮತ್ತೆ ಕೈಯಾಡಿಸಿ ಮೆಣಸಿನ ಪುಡಿ ಹುಣಸೆರಸ ಉಪ್ಪು ಸೇರಿಸಿ ಘಮ ಬರುವ ತನಕ ಕೈಯಾಡಿಸಿ ಕೊನೆಯಲ್ಲಿ ಹುರಿದ ಹೀರೆಕಾಯಿ ಸಿಪ್ಪೆ ಸೇರಿಸಿ...
ಇಲ್ಲೇ ಓದಿ ಕಾಯಿ ತೋಳ್ಕೊಬಾರದು.ಮೆಲೋಗರವನ್ನ ತಿಂದು ರುಚಿ ನೋಡಿ ನನಗೆ ಹೇಳಿ ಹೆಂಗಿದೆ ಅಂತ???