Tuesday, November 26, 2013

ಅಣ್ಣ...ನಿನಗೆ ಶುಭಾಶಯ

ಆಗ ನನಗೆ ಸರಿಯಾಗಿ ಇಂಟರ್ನೆಟ ಕಂಪ್ಯೂಟರ್ ಬಳಕೆ ಬರುತ್ತಿರಲಿಲ್ಲ ದೂರದೇಶದಲ್ಲಿದ್ದ ಇವರೊಂದಿಗೆ ಈಡಿ ದಿನ ಫೋನ್ ನಲ್ಲಿ ಮಾತಾಡಲು ಆಗುತ್ತಿರಲಿಲ್ಲ ಅದಕ್ಕೆ ಅನಿವಾರ್ಯತೆಯ ದೆಸೆಯಿಂದ ನಾನು ದಿನ ಕರ್ನಾಟಕ ವಿಶ್ವವಿದ್ಯಾಲಯದ ಕಂಪ್ಯೂಟರ್ ಲ್ಯಾಬಿಗೆ ಕನಿಷ್ಠ ಒಂದು ಘಂಟೆ ಹೋಗಿ ಅಕ್ಕ ಪಕ್ಕದವರನ್ನು ಕೇಳಿ ಸ್ವಲ್ಪ ಸ್ವಲ್ಪ  ಕಂಪ್ಯೂಟರ್ ಕಲಿಯತೊಡಗಿದ್ದೆ.

ಹಾಗೊಂದುದಿನ  ಯಾರೋ ಲಾಗ್ ಆಫ ಮಾಡದೆ ಬಿಟ್ಟು ಹೋದ ಸಿಸ್ಟಂ ಮುಂದೆ ಕುಳಿತಾಗ ಕನ್ನಡ ಅಕ್ಷರಗಳು ಕಂಡಿದ್ದವು
ಅದರಿಂದ ಇನ್ನೊಂದು ಮತ್ತೊಂದು ಪುಟ ತೆರೆಯುತ್ತಲೇ ಹೋದವು ಹಾಗೆ ಸಿಕ್ಕಿದ್ದು ಅವ ನಂಗೆ . ಆತ ನಗುವ ಚಂದಿರನ ಬಗ್ಗೆ ಬರೆದಿದ್ದ (ಆಗ ನಕ್ಷತ್ರ  ಗಳು ಚಂದ್ರನ ಕಣ್ಣುಗಳಂತೆ ಚಂದ್ರ ನಕ್ಕಂತೆ ಬಾಂದಳ ಚಿತ್ತಾರ ಬರೆದಿತ್ತು ) ಹಾಗೆ ಒಂದೊಂದೇ ಬರಹ ಓದುತ್ತ ಹೋಗಿ ಅಲ್ಲೇ ಇದ್ದ ಅವನ ಮಿಂಚಂಚೆ ವಿಳಾಸಕ್ಕೆ ಒಂದು ಪುಟ್ಟ ಪತ್ರ ಬರೆದಿದ್ದೆ  (ಈ ಬರಹಗಳಿದ್ದ ಇ-ಪುಟಗಳನ್ನ ಬ್ಲಾಗ್ ಅಂತಾರೆ ಅಂತ ತಿಳಿದಿದ್ದು ಸ್ವಲ್ಪ ತಡವಾಗಿ) ನಗುವ ಚಂದಿರನ ಉಳಿದ ಫೋಟೋ ಗಳನ್ನು ಕಳಿಸಲಾದೀತೇ ??? ಎಂದು . ಮರುದಿನ ಅವನ ಉತ್ತರ ಬಂದಿತ್ತು ಹಾಗಾಗಿತ್ತು ನಮ್ಮಿಬ್ಬರ ಪರಿಚಯ ಅವನ ಇಮೇಲ್ ವಿಳಾಸದಲಿದ್ದ ಸಂಖ್ಯೆ ಅವ ಜನಿಸಿದ ಇಸವಿ ಮತ್ತು ಅವ ನನಗಿಂತ ದೊಡ್ಡವನು ಅನ್ನೋದು ನನ್ನ  ಊಹೆ ನಿಜವಾಗಿತ್ತು.  ಅವನ ಬರಹಗಳನ್ನ ಓದುತ್ತ ಓದುತ್ತ ಪದೇ ಪದೇ ಮನಸಿಗೆ ಬರುತ್ತಿದ್ದ ಭಾವ ಎಂದರೆ ‘’ ಹಿಂದೊಮ್ಮೆ ನಾನು ಹೀಗೆ ಬರೆಯುತ್ತಿದ್ದೆ ಅದೇ ಧಾಟಿಯಲ್ಲಿ ‘’ ಈಗ್ಯಾಕೆ ಆಗ್ತಿಲ್ಲ ..... ಯಾಕೋ ಅವನ ಮೇಲೆ ಹೊಟ್ಟೆಕಿಚ್ಚು ಶುರುಆಗಿತ್ತು ...

ಹಾಗೆ ಒಂದು ದಿನ ಹುಬ್ಬಳ್ಳಿಯ ಹಳೆ  ಬಸ್ಸ ನಿಲ್ದಾಣದ  ಹತ್ತಿರ ಒಂದು ಪುಸ್ತಕದಂಗಡಿಯಲ್ಲಿ ಸಖಿ ಎಂಬ ಪತ್ರಿಕೆ ನೋಡಿದ್ದೆ  ಅದರಲ್ಲೂ ಈ ನಗುವ ಚಂದಿರ ಕಳುಹಿಸಿದವನ ಅನುವಾದಿತ ಕತೆ ಬರುತ್ತಿದ್ದವು. ಅವನ ಮೇಲೆ ಹೊಟ್ಟೆಕಿಚ್ಚು ಜಾಸ್ತಿ ಆಗಿತ್ತು
ಹಾಗೆ ನೋಡಿದರೆ ಅದೆಷ್ಟು ಲೇಖನಗಳು ಅದೆಷ್ಟು ಹೊಸ ವಿಚಾರಗಳು ,ಹೊಸ ಹೆಸರುಗಳು ಆದರೆ ನನಗೆ ಹೊಟ್ಟೆಕಿಚ್ಚು ಆಗುತ್ತಿದ್ದುದು ಇವನ ಮೇಲೆ ಯಾಕೋ ಗೊತ್ತಿಲ್ಲ , ಸ್ಪೂರ್ತಿ ಯೋ ಹಠವೋ ಒಟ್ಟಿನಲ್ಲಿ ೪ ವರುಷಗಳ ನಂತರ ನಾನು ಒಂದು ಪುಟ್ಟ ಬರಹವನ್ನ ಸಖಿಗೆ ಕಳಿಸಿದ್ದೆ , ಅದನ್ನು ಮೆಚ್ಚಿ ಅವರ ಕಡೆಯಿಂದ ನನಗೆ ಫೋನ್ ಬಂತು ಮತ್ತೆ ಬರೆಯುತ್ತೀರಾ ಎಂದು ?? ಮನಸ್ಸು ಹೊಸ ರೀತಿಯಲ್ಲಿ ಆಲೋಚಿಸ ತೊಡಗಿತ್ತು ಪ್ರತಿ ಘಟನೆಯನ್ನು ಭಿನ್ನ ದೃಷ್ಟಿಕೋನದಲ್ಲಿ ಅವಲೋಕಿಸತೊಡಗಿದ್ದೆ
ಸಖಿ ಪತ್ರಿಕೆಯ ದೆಸೆಯಿಂದ ನನಗೆ ಅದೆಷ್ಟು ಒಳ್ಳೆಯ ಸ್ನೇಹಿತರು ಮಾರ್ಗದರ್ಶಕರು ದೊರೆತರು ಅವರೆಲ್ಲರ ಕುರಿತು ಮತ್ತೊಮ್ಮೆ ಬರೆಯುತ್ತೇನೆ , ಹಾಗೆ ನನ್ನ ಬರವಣಿಗೆ ಮತ್ತೆ ನನ್ನ ಕೈಗೆ ದೊರಕಿದಾಗ ಅವನ ಮೇಲಿದ್ದ ಒಂಥರ ಹೊಟ್ಟೆಕಿಚ್ಚು, ಅದೆಂಥದೋ ಮಮಕಾರ , ಆರಾಧನೆಯಲ್ಲಿ ಬದಲಾಗಿತ್ತು. ಅದೊಂದು ಸಾರಿ ನಾನು ಅವನು ಬರೆದ ಲೇಖನ ಅಕ್ಕ ಪಕ್ಕದ ಪುಟಗಳಲ್ಲಿ ಪ್ರಕಟ ವಾಗಿತ್ತು   ಅದೆಷ್ಟು ಸಂಭ್ರಮ ಅನುಭವಿಸಿದ್ದೆ ನಾನು , ಆತ ಮಾತ್ರ ಯಾವತ್ತು ನನ್ನನ್ನ ಹೊಗಳಲಿಲ್ಲ  . ಎಲ್ಲವನ್ನೂ ಸುಮ್ಮನೆ ಗಮನಿಸುತ್ತಿದ್ದನೇನೋ!!!

ಆಮೇಲೆಲ್ಲ ಏನು ಬರೆದರೂ ಅವನಿಗೆ  ಇಮೇಲ್ ಮಾಡೋದು ರೂಡಿ , ಒಂದುಸಾರಿ ಇಮೇಲ್ ಮಾಡುವಾಗ ಸಬ್ಜೆಕ್ಟ್ ನಲ್ಲಿ ಕಾಮೆಂಟ್ಸ್ ಪ್ಲೀಸ್  ಅಂದು ಬರೆದಿದ್ದೆ  ಲೇಖನ ಓದುವ ಮುನ್ನ ಅವನ ಉತ್ತರ ಬಂದಿತ್ತು ‘’ ಬರಹಗಳನ್ನೂ ಓದೋಕೆ ಅಂತ ಬರೀ ಪ್ರಶಂಸೆ ಪಡೆಯೋಕೆ ಅಲ್ಲ !! ‘’ ಹೀಗೆ ಪ್ರತಿ ಘಟ್ಟದಲ್ಲೂ ಅವ ನನ್ನ ಕಿವಿ ಹಿಂಡಿದ ದೂರ ಇದ್ದೇ  ನನ್ನ ತಿದ್ದಿದ , ಅತಿ ಭಾವುಕಿ ನಾನು ತೀರ ಪ್ರಾಕ್ಟಿಕಲ್ ಅನ್ನಿಸುವ ಅವನು ...

ಆ ತನಕ ನಮ್ಮ ಬಾಂಧವ್ಯ ಇಮೇಲ್ ಮತ್ತು ಮೊಬೈಲ ಮೆಸೇಜ್ ಗಳಿಗೆ ಸೀಮಿತವಾಗಿತ್ತು, ಒಂದು ಭಾನುವಾರ ನಾ ಅವನಿಗೆ ಫೋನ್ ಮಾಡಿ ಮಾತಾಡಿದೆ. ಆಮೇಲೆ ಸಮಯ ಸಿಕ್ಕಾಗಲೆಲ್ಲ , ಅವನಿಗೆ ಪುರುಸೊತ್ತಿದ್ದಾಗ ಸುಮ್ಮನೆ ಅವನ ತಲೆ ತಿಂತಿದ್ದೆ ಇಷ್ಟಾದರೂ ಅವನ ನನ್ನ ಬಾಂಧವ್ಯಕ್ಕೆ ಸ್ನೇಹ ಅನ್ನುವ ಹೆಸರೇ ಇತ್ತು .

ಆ ವರುಷದ  ರಕ್ಷಾ ಬಂಧನದಂದು ಅವನ ಹತ್ತಿರ ಕಾಡಿ ಬೇಡಿ ಅವನ ವಿಳಾಸ ತಗೊಂಡು ಅವನಿಗೊಂದು ರಾಖಿ ಕಳಿಸಿದೆ.ಅವತ್ತಿಗಾಗಲೇ ನಾನು ಯಾರನ್ನು ಅಣ್ಣ ಅಂತ ಕರೆಯದೆ ವರುಷಗಳೇ ಕಳೆದಿದ್ದವು. ಬಾಲ್ಯದಿಂದಲೂ ನಾನು ಬಯಸಿದ್ದ ಅಣ್ಣ ಎಂಬ ಕಂಫರ್ಟ್ ಜೊನ ನನಗ್ಯಾವತ್ತು ಸಿಕ್ಕಿರಲಿಲ್ಲ , ಅತಿಯಾಗಿ  ಗೌರವಿಸಿದ್ದವರು ನನ್ನ ಸ್ವಾಭಿಮಾನ ಕ್ಕೆ ಪೆಟ್ಟು ಕೊಟ್ಟಿದ್ದರು , ಅವತ್ತಿಂದ ನಾನು ಯಾರನ್ನು ಅಣ್ಣ ಅಂತ ಕರೆಯುತ್ತಲೇ ಇರಲಿಲ್ಲ ಅಷ್ಟಕ್ಕೂ ಹುಡುಗಿ ಹುಡುಗ ಪ್ರೀತಿಯಿಂದ ಇರೋಕೆ ಅಕ್ಕರೆ ತೋರಿಸೋಕೆ ಒಂದು ನಿರ್ದಿಷ್ಟ ಸಂಬಂಧ ಅಗತ್ಯವಿದೆ ಎಂದು ಯಾವತ್ತು ನನಗೆ ಅನಿಸಿರಲಿಲ್ಲ ಅದನ್ನೆಲ್ಲ ಮೀರಿ ಇವನಿಗೆ ರಾಖಿ ಕಳಿಸುವ ಮನಸ್ಸಾಗಿತ್ತು ಅವ ಅದನ್ನು ಕಟ್ಟಿ ಕೊಂಡನೋ ಹಾಗೆ ಇಟ್ಟನೊ ಗೊತ್ತಿಲ್ಲ ಅವತ್ತಿಂದ ಅವ ನನಗೆ ಅಣ್ಣ ಆಗಿದ್ದ ಮೊದಲಿಂದಲೂ ಅಣ್ಣ ನೆ ಆಗಿದ್ದವನನ್ನ ಅವತ್ತು ಅಣ್ಣ ಅಂತ ಕರೆದಿದ್ದೆ  ಅಷ್ಟೇ !!
ನನ್ನ ಪಾಸ್ಪೋರ್ಟ್ ಕೆಲಸಕ್ಕೆ ಬೆಂಗಳೂರಿಗೆಹೋದಾಗ ಅವ ನನ್ನ ಭೇಟಿ ಆಗೋಗೆ ಬಂದಿದ್ದ ಜೋತೆಗೊಂದು ಡೈರಿ ಮಿಲ್ಕ್
ನನ್ನ ಬಸ್ಸ ಬಿಡುವವರೆಗೂ ನನ್ನ ಪಕ್ಕ ಕುಳಿತು ‘’ ಕೆರ್ಫುಲ್ಲಾಗಿ ಹೋಗು ಹುಷಾರು ‘’ ಅಂದು ಬಿಳ್ಕೊದುವಾಗ ಅದೆಷ್ಟು ಅಕ್ಕರೆ ಇತ್ತು ಅವನ ದನಿಯಲ್ಲಿ. ಎಷ್ಟೋ ವಿಘ್ನಗಳ ನಂತರ ನಾನು ಬಂದು ಯುಕೆ ಸೇರಿಕೊಂಡೆ ನಂತರವೂ ಅವ ಹಾಗೆ ಇದ್ದ ಯಾರು ಇಲ್ಲ ಅಂದು ಬಿಕ್ಕುವಾಗ ಯಾಕೆ ನಾನಿಲ್ಲವ ಅನ್ನುವ ದನಿಯಾಗಿ . ಈ ನಡುವೆ ಅವ ಒಮ್ಮೆ ಅಮೆರಿಕೆಗೆ ಹೋಗಿ ಬಂದ ಅಲ್ಲಿಯೂ ನಾವು ಸ್ಕೈಪ್ ನ ದಯೆಯಿಂದ ಮಾತಾಡುತ್ತಲೇ ಇದ್ದೆವು ...

ಬಂದು ಒಂದೂವರೆ ವರುಷಕ್ಕೆ ಊರಿಗೆ ಹೋಗಿದ್ದೆ  ವಾಪಾಸು ಬರುವ ಮೊದಲು ಅವನನು ನೋಡಬೇಕೆನಿಸಿತ್ತು. ಬಾ ಎಂದಿದ್ದೆ ನನಗಾಗಿ ೧.೦೦ ಘಂಟೆ ಕನ್ನಡಭವನದ ಮುಂದೆ ಕಾದಿದ್ದ , ಅದೆಷ್ಟು ಹೊತ್ತು ಮಾತಾಡಿದ್ದೆವು ಏನು ಅಂತ ಕೇಳಿದರೆ ಇಬ್ಬರಿಗೂ ನೆನಪಿಲ್ಲ !! ಮಾತಾಡಿ ಸುಸ್ತಾದ ಅವನಿಗೆ ಇರುವೆ ಹತ್ತಿದ ಪರಾಟ ತಿನ್ನಿಸಿದ್ದೆ  ಬೈದು ಬೈದು ತಿಂದಿದ್ದ . ವಾಪಸು  ಬರುವ ಮುನ್ನ ಅಲ್ಲೇ ಕ್ಯಾಂಟೀನಿನಲ್ಲಿ ಚಾ ಕುಡಿಯಲು ಹೋದೆವು ಖಾಲಿಯಾದ ಛಾಯಾ ಕಪ್ಪನ್ನು ಸೋರ್ರ್ರ್ ಎಂದು ಶಬ್ದ ಮಾಡುತ್ತ ಕುಡಿಯುತ್ತಲಿದ್ದ ಅವನನ್ನು ನೋಡಿ  ಅವ ಪಕ್ಕಾ ನನ್ನ ಅಣ್ಣನೆ ಎಂದು ಅನಿಸಿತ್ತು. ಯಾವುದೇ ತೋರಿಕೆ , ಗರ್ವ ಇಲ್ಲದ ಸರಳ ಜೀವಿ .

ನಾ ಅಷ್ಟು ಮೆಚ್ಚುವ ಅಣ್ಣನಿಂದ ಒಂದೇ ಒಂದು ಹೊಗಳಿಕೆ ಮೆಚ್ಚಿಗೆ ಪಡೆಯಲು  ನಾನು  ಹವಣಿಸಿದ್ದೇನೆ ಬಹಳ ಕಾದಿದ್ದೇನೆ ,
ತುಂಬಾ ಕಂಜೂಸು ಮನುಷ್ಯ , ಅಪ್ಪಿ ತಪ್ಪಿಯೂ ಒಳ್ಳೆ ಮಾತು ಹೇಳಲ್ಲ  ಏನೇ ಬರೆದರೂ ಏನೇ ಹೇಳಿದರು ಅದಕ್ಕೆ ಅವನ ತಕರಾರು ಇರುತ್ತೆ , ಏನಾದರು ಹೇಳಿಕೊಡು ಅಂದಾಗ ‘’ ನಾ ಯಾಕ ಹೇಳಿ ಕೊಡಲಿ ನೀ ಕಲಿ’’ ರಿಸರ್ಚ್ ಅಂಡ್ ಡೆವಲೋಪ್ಮೆಂಟ್’’ ಮಾಡು ಆಗಷ್ಟೇ ನೀ ಬೆಳಿತೀಯ ಅಂತಾನೆ . ನನ್ನ ಫೆಸ್ಬೂಕ್  ನ ಯಾವುದೇ ಸ್ಟೇಟಸ್ ಗೆ ಕಂಮೆಂಟ್ ಕೊಡಲು ನೆನಪಿರದಿದ್ದರು ನಾನು ಸ್ವಲ್ಪ ಜಾಸ್ತಿ ಆಕ್ಟಿವ್ ಆದಾಗ ‘’ ಭಾಳ ಆಯ್ತು ನಿಂದು’’ ಅಂತ ಒಂದು ಮೆಸೇಜ್ ನಿಂದ ಮೊಟಕುತ್ತಾನೆ.

ಅವನ ಬಗ್ಗೆ ಬರೆಯೋಕೆ ಸಾಕಷ್ಟಿದೆ........  ಎಂದು ಇಲ್ಲದ್ದು ಈವತ್ಯಾಕೆ ಅಂತೀರಾ? ನನ್ನ ಅಣ್ಣ ಮದುವೆ ಅಗ್ತಿದ್ದಾನೆ . ಅತ್ತಿಗೆ ಬಂದಮೇಲೆ ಹೇಗೋ ಏನೋ ? (ತಂಗಿಯ ಸಹಜ ಕಳವಳ ) ನಮ್ಮ ಮನೆಯ ಚಿಕ್ಕಪ್ಪಂದಿರು ಮದುವೆ ಆಗುವಾಗ ನಾನು ಅಳುತ್ತಿದ್ದೆ  ಇನ್ನು ಅವರು ನನಗೆ ಮುದ್ದು ಮಾಡುವುದಿಲ್ಲ ಎಂದು , ಈಗ ಹಾಗೆ ಮನಸು ಒಂದೆಡೆ ಖುಷಿ ಮತ್ತೊಂದೆಡೆ ದುಗುಡ ಅನುಭವಿಸ್ತಿದೆ , ಅಣ್ಣ ತಂಗಿ ಆಗಲು ಒಡಹುಟ್ಟಿದವರಾಗಬೇಕಿಲ್ಲ , ಒಡಹುಟ್ಟಿದ ಅಣ್ಣ ಇಷ್ಟು ಮುದ್ದಿಸಬೇಕೆನ್ನುವ ಕಾನೂನು ಇಲ್ಲ ಎಲ್ಲ ನಸೀಬಿನ ಮಾತು .
ಈ ಅಣ್ಣ ತಂಗಿ ಬಾಂಧವ್ಯದ ಬಗ್ಗೆ  ನಂಬಿಕೆಯೇ ಇಲ್ಲದ ಹೊತ್ತಲ್ಲಿ ನನಗೆ ದೇವರು ಕರುಣಿಸಿದ ವರ ಅವನು..
ಅವನ ಪ್ರೀತಿ ನನ್ನ ಮೇಲೆ ಯಾವತ್ತಿಗೂ ಹೀಗೆ ಇರಲಿ ಅತ್ತಿಗೆ ಬಂದ ಮೇಲೂ.



ಪ್ರೀತಿಯ ಅಣ್ಣ .
ಮದುವೆಯ ದಿನದ ಹಾರ್ದಿಕ ಶುಭಾಶಯಗಳು
 ಇಬ್ಬರೂ ಖುಷಿಯಾಗಿರಿ ಯಾವತ್ತು !!
ನಿನ್ನ ಮದುವೆಗೆ ಬರಲಾಗುತ್ತಿಲ್ಲ , ಅದಕ್ಕೆ ಮುಂದಿನ ಸಾರಿ ಬಂದಾಗ ನಾ ಹೇಳಿದ
ಹೋಟೆಲಿಗೆ ಉಟಕ್ಕೆ ಕರ್ಕೊಂಡು  ಹೋಗು ,
ನಿನ್ನ ಮದುವೆಗೆ ಎರಡು ದಿನ ಮೊದಲು ಬಂದು
ಮದುವೆ ಮುನ್ನಾದಿನ  ಸಂಗೀತ ಕಚೇರಿ ಮಾಡ್ತೀನಿ ಅಂತ ಹೇಳಿದ್ದೆ ನಿನಗೆ ನೆನಪಿದೆಯೋ ಇಲ್ಲವೋ
ಆದರೆ ಎಲ್ಲ ಮಿಸ್ ಮಾಡ್ತಾ ಇದ್ದೀನಿ.. ನನ್ನ ಲೆಕ್ಕದ ಸೀರೆ ತೆಗೆದಿಡು  ...
ಪ್ರೀತಿಯಿಂದ
ನಿನ್ನ

ಅಮಿತಿ 

8 comments: