Monday, June 24, 2013

ನನ್ನದೆಂಬುವ ಹಮ್ಮು ಬೇಕು ದೇವಾ ...



ಬೆಳಿಗ್ಗೆ ಸ್ಯಾಂಡ್ವಿಚ್ ಮಾಡಿಕೊಟ್ಟೆ ,ಮೊದಲ ತುತ್ತಿಗೆ ಮುಖ ಹುಳ್ಳಗೆ ಮಾಡಿಕೊಂಡು '' ಏನಿದು ಈರುಳ್ಳಿ ಹಾಕಬೇಡ ಅಂದ್ರೆ ಅರ್ಥ ಆಗಲ್ವಾ?ಅದರಲ್ಲೂ ಈ ಸ್ವೀಟ್ ಚಿಲ್ಲಿ ಸಾಸ್ ಛೆ ರುಚಿ ನೆ ಕೆಡಿಸಿಬಿಟ್ಟೆ '' ಅಂದು ಕೋಳಿ  ನೆಲ ಕೆದರಿದಂತೆ ಅದನ್ನು ಚೂರು ಚೂರು ಮಾಡಿ ಹಾಗೆ ಬಿಟ್ಟು ಹೋದರು . ಮಗನ ಅಧ್ವಾನ ಕೇಳಬೇಡಿ ಲಿವಿಂಗ್ ರೂಮಿಗೆ ನೀರಿನ ಬಕೆಟ್ ಎತ್ತಿ ತಂದು ರೂಂ ಪೂರ್ತಿ ನೀರು ಮಾಡಿಟ್ಟ  , ಸಾರೀ ಅಂದು ಮತ್ತೆ ಅವನ ಕೆಲಸ ಮುಂದುವರಿಸಿದ. ಅಯ್ಯೋ ನಾ ನಿಲ್ಲಲು ರೆಡಿ ಆದರೆ ಗಡಿಯಾರ ನಿಲ್ಲಬೇಕಲ್ಲ ??? ಅದರಲ್ಲೂ ಬೆಳಗಿನ ಆ ಮೂರು ಘಂಟೆಗಳು ಮಿಕ್ಸಿ ಮೂರನೇ ಸುತ್ತಿಗೂ ಅಷ್ಟು ವೇಗ ಇರಲಿಕ್ಕಿಲ್ಲ . ಆಮೇಲೆ ನಿಧಾನವಾದರೂ ಪ್ರಾಧಾನ್ಯತೆ ಇರುವ ಎಲ್ಲ ಕೆಲಸ ಮಾಡಬೇಕು ಕಸ ಮುಸುರೆ , ಬಟ್ಟೆ , ಆದಿನದ ಅಡುಗೆ , ಮನೆಯ ಪ್ರತಿಸದಸ್ಯನ ನಾಲಿಗೆಯ ರುಚಿಗೆ ಹೊಂದಿಕೊಳ್ಳುವಂತೆ ಹೊಂದಿಸುವ ಹೊತ್ತಿಗೆ ಸಂಜೆ ಆಗಿರುತ್ತೆ ,ಮತ್ತೆ ಅವರು ಬರುವ ಮುನ್ನ ಮನೆಯ ಹಾಲ್  ಲಕಳಕಿಸುತ್ತ ಇರಬೇಕು ಇಲ್ಲವಾದಲ್ಲಿ '' ಬೆಳಿಗ್ಗಿಂದ ಏನು ಮಾಡಿದೆ ?? ಮನೆ ಎಷ್ಟ್ ಕೊಳಕಾಗಿದೆ ನೋಡು '' ಅಂದು ಅವರ ಲಂಚ್ ಬ್ಯಾಗು , ಮತ್ತೊಂದಿಷ್ಟು ಆಫಿಸ್ ಕಾಗದಪತ್ರಗಳನ್ನು ಸೋಫಾ ಮೇಲೆ ಎಸೆದು ಹಾಗಲಕಾಯಿ  ಮುಖ ಮಾಡಿಕೊಂಡು ಮೆತ್ತ ಸೇರಿಕೊಳ್ಳುತ್ತಾರೆ . 


                                    ************************************



  ಇವರು ''ದೊಡ್ಡ ''ಕೆಲಸದಲ್ಲಿದ್ದಾರೆ , ಎಲ್ಲ ಯೋಗ್ಯತೆ ಇದ್ದಾಗ್ಯೂ ಅವರ ಹುದ್ದೆಗೆ ಸರಿ ಹೊಂದುವಂತ ಕೆಲಸ ಮಾಡುವಷ್ಟು ವಿದ್ಯಾರ್ಹತೆ ನನಗಿಲ್ಲ , 
ಚಿಕ್ಕಪುಟ್ಟ ಕೆಲಸ ಮಾಡಲು ಅವರು ಅನುಮತಿ ಕೊಡಲ್ಲ ಹಲವು ಕಿರಿ ಕಿರಿ ಜಗಳು ಮುನಿಸುಗಳ ನಂತರ ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೇನೆ, ಹೊರಗೆ ಹೋಗಿ ದುಡಿಯುವ ಆಸೆ ಬಿಟ್ಟಿದ್ದೇನೆ  ಅವರನ್ನು ಖುಷಿಯಾಗಿತ್ತಾರೆ ನಾನು ಖುಷಿ ನನ್ನ ಮನೆಯು ಖುಷ ಖುಶಿ. ಇದೆಲ್ಲದರ ನಡುವೆ ಯಾವುದೇ ಪಾರ್ಟಿ ಗೆ ಹೋಗಲಿ ಸಭೆ ಸಮಾರಂಭಗಳಿಗೆ ಹೋಗಲಿ ''ನೀವು ಏನು ಮದ್ಕೊಂದಿದೀರ ಮೇಡಂ ''ಅನ್ನುವ ಪ್ರಶ್ನೆಗೆ ನಾನು  ''ಹೌಸ್ ವೈಫ್'' ಎನ್ನುವ ಮೊದಲೇ , ಅವಳು ಮನೆಯಲ್ಲಿ ಹಾಯಗಿದ್ದಾಳೆ .. ಅವಳಿಗ್ಯಾಕೆ ಕಷ್ಟ , ಸುಮ್ಮನೆ ಅಡುಗೆ , ಮನೆ ಕೆಲಸ ನೋಡಿಕೊಂಡು ಇರಲಿ ಅಂತ  ಅದೇ ಆರಂ ನೋಡಿ ''.... ಅನ್ನುವ ಇವರ ಮಾತುಗಳು ನನ್ನ ತುಂಬಾ ಘಾಸಿ ಮಾಡುತ್ತವೆ . ಅಷ್ಟು ಸುಲಭವ ಮನೆ ಕೆಲಸ  ನಿಜ ಎಲ್ಲರು ಮಾಡೋದೇ , ಆದರು ಮಾಡುವ ಪ್ರತಿಯೊಬ್ಬರಿಗೂ ಗೊತ್ತು ಅದು ಸುಲಭವಲ್ಲ ಹಾಗಂತ ನಿಭಾಯಿಸಲಾಗದ್ದು ಕೂಡ ಅಲ್ಲ . ಅವನ ಕಷ್ಟದ ದುಡ್ಡನ್ನು ಎಚ್ಚರಿಕೆಯಿಂದ  ಖರ್ಚು ಮಾಡಿ , ಕೂಡಿಟ್ಟು , ಎಲ್ಲವನ್ನು ಹಿತ ಮಿತವಾಗಿ ಇಟ್ಟಿರುವುದು ನಾನಲ್ಲವೇ ??? ಅದಕ್ಕೊಂದು ಮೆಚ್ಚಿಗೆಯ ನುಡಿ ಆಡಿದರೆ ಅದು ಮತ್ತೊಂದು ಯುಗಕ್ಕೆ ಸಾಕು. 
                                    *************************************



ನನಗೆ ಈ ಹೊರಗೆ ಕೆಲಸ ಮಾಡೋದು , ಹಣ ಸಂಪದಿಸೂದು ಯಾವತ್ತಿಗೂ ಇಷ್ಟವಿಲ್ಲದ ವಿಷಯ , ಅಮ್ಮ ಅಪ್ಪ ಇಬ್ಬರು ದುಡಿ ದುಡಿದು , ಕೊನೆಗೆ ನಮ್ಮ ಹತ್ತಿರ ಮಾತದೊಕು ಸಮಯ ಇರುತ್ತಿರಲಿಲ್ಲ , ಎಷ್ಟೋ ಸಾರಿ ತಾಳ್ಮೆಗೆಟ್ಟು ಎಲ್ಲ ಮಾಡೋದು ನಿಮಗೋಸ್ಕರ ಅಂತ ನಂಗು ತಮ್ಮನಿಗೂ ಅಪರಾಧಿ ಭಾವ ಮೊದಿಸಿದ್ದನ್ನು ನೆನಪಿಸಿ ಕೊಂಡರೆ ಈ ಕೆಲಸ ಮಾಡೋದರ ಸಹವಾಸ ಬೇಡ ಅನಿಸುತ್ತೆ ಽಅದರೆ ನ ಮೆಟ್ಟಿದ ಮನೆಯ ಎಲ್ಲರು ಗಾಣದೆತ್ತು ಗಳು . ಎಲ್ಲರು ದುಡಿಬೇಕು , ಮತ್ತು ಮನೆಯನ್ನು ನೋಡಬೇಕು . ಎಷ್ತೊಸಾರಿ ಎಲ್ಲಾದರೂ ಓಡಿ  ಹೋಗಬೇಕು ಅನಿಸುತ್ತೆ , ಅಸಾಹಯಕತೆ , ಭಯ ಎಲ್ಲವು ಒಟ್ಟೊಟ್ಟಿಗೆ ... ಇಷ್ಟು ಆದ ಮೇಲು ಒಂದೇ ಒಂದು ಒಳ್ಳೆ ಮಾತಿಲ್ಲ . 


                                     *************************************

ಇದು ನನ್ನ ಕತೆ  ಅವಳ ಕತೆ , ನಮ್ಮ ನಿಮ್ಮಂಥ ಎಲ್ಲ ಭಾವುಕ ಮನಸಿನ ಒಡತಿಯರ ಕತೆ . ಅಲ್ಲಿ ಕನಸುಗಳ ಉದ್ಯಾನೊಂದು ಪರದೆಯ ಹಿಂದೆ ಮರೆಯಾಗಿ ಹೋಗಿದೆ , ನಮ್ಮಲ್ಲಿರುವ ಪುಟ್ಟ ತುಂಟ ಹುಡುಗಿಯೊಬ್ಬಳು ಬಿಕ್ಕಳಿಸುತ್ತ ಅಲ್ಲೆಲ್ಲೋ ಮೂಲೆಯಲ್ಲಿ ಅವಿತಿದ್ದಾಳೆ . ಭವಿತವ್ಯದ ಬಗೆಗೆ ಸಂದೇಹಗಳಿವೆ ಭೂತ ಭೂತದಂತೆ ಆಗೀಗ ಬಂದು ಕಾಡುತ್ತದೆ , ಅವೆರಡರ  ಕಣ್ಣ ಮುಚ್ಚಾಲೆಗೆ  ವರ್ತಮಾನ ಪಡಸಾಲೆ ಯಾಗಿದೆ . ನಾವು ಜಗತ್ತಿನ ಅತ್ಯುನ್ನತ ಹುದ್ದೆಯಲ್ಲಿರುವವರು ,ಆದರೆ ಆ ಹುದ್ದೆಗೊಂದು ಹೆಸರು ಕೊಡಲು ಯಾರಿಗೂ ನೆನಪಿಲ್ಲ , ನಾವು ಹೌಸ್ ವೈಫ್ , ಹೋಂ ಮೇಕರ್ , ಅಮ್ಮ , ಹೆಂಡತಿ , ಅತ್ತಿಗೆ ಸೊಸೆ ಮತ್ತಿನ್ನೇನೇನೋ ಹೆಸರು ಹೊತ್ತುಕೊಂಡು ಬದುಕುತ್ತಿರುವ ಥಾಂಕ್ ಲೆಸ್ ಲೇಬರ್ಸ್ .

''ನಿನಗೆನ್ ಹೇಳು ಆರಾಮಾಗಿ ಟಿವಿ ನೋಡ್ಕೊಂಡ್  ಮನೇಲ್ ಇರ್ತೀಯ 
'' ಬೆಳಿಗ್ಗಿಂದ ಏನು ಮಾಡಿದೆ?''
''ನಿನ್ ಹಾಗೆ ನನಗೆನಾದ್ರು  ಫ್ರೀ ಟೈಮ್ ಇದ್ದಿದ್ದಿದ್ರೆ.....''
'' ನಿಂಗೇನು ಅರ್ಥ ಆಗಲ್ಲ ''
''ನೀನೋಬ್ಳೆನ  ಮನೆಕೆಲಸ ಆಫೀಸ್ ಕೆಲಸ ಮಾಡೋದು ? ನೋಡ್ ನಂ ಫ್ರೆಂಡ್ ಹೆಂಡತಿ ನಾ ''
''ಏನು ಅಡುಗೆ ಮಾಡ್ತಿಯೋ ... ''
''ಎಷ್ಟ್ ಸಾರಿ ಹೇಳಿದೀನಿ ನಾ ಬರೋ ಮೊದಲೇ ಆ ಮಕ್ಕಳ ಹೋಂ ವರ್ಕ್ ಮಾಡಿಸಿಬಿಡು  ಸುಮ್ಮನೆ ಕಿರಿ ಕಿರಿ.. ''
'' ಮಧ್ಯಾನ ಮಲಗಬೇಡ , ಸಂಜೆ ಮಾಡೋ ಕೆಲಸ ಮಧ್ಯಾನ ನೆ ಮಾಡಿ ಮುಗ್ಸು , ಸಂಜೆ ಹೋಗಿ ತರಕಾರಿ ತರಬಹುದು ಅಲ್ವಾ??
ಮಾತಿಗೇನು ಕಮ್ಮಿ ನಾ ??/??

ಹೀಗೆಲ್ಲ ಹೇಳಿದಮೇಲೆ ನಮಗೂ ಕೆಲವೊಮ್ಮೆ (ಬಹಳಷ್ಟು ಸಲ ) ಅನಿಸುವುದುಂಟು ನಿಜಕ್ಕೂ ನಾವೇನು ಮಾಡುತ್ತಿಲ್ಲವಾ ? . ದಿನದ ಬಹು ಸಮಯ ನಮಗೂ ಸಮಯ ಕೊಟ್ಟು ಕೊಳ್ಳದಷ್ಟು ಕೆಲಸ ಮಾಡುತ್ತೇವೆ ಯಾರಿಗಾಗಿ??ಹಾಗಿದ್ದರೆ ಇದೆಲ್ಲ ಕೆಲಸವೇ ಅಲ್ಲವ??ಎಲ್ಲ ಮಾಡಿದ ಮೇಲು ಛೆ ಇದರಲ್ಲಿ ನಾ  ಹಿಂದುಳಿದೆ  , ಅವರಿಗೆ ಖುಷಿ ಮಾಡಲು ಆಗಲಿಲ್ಲ , ಅವರನ್ನು ಖುಷಿಯಾಗಿ ಇಡಲಿಲ್ಲ ಅನ್ನೋ ಅಪರಾಧಿ ಪ್ರೆಜ್ನೆಯ ಹೊರತು ನಮಗೆ ಸಿಗುವ ಧನ್ಯತೆಯಾದರು  ಏನು ?? ಎಷ್ಟು ಮಾಡಿದರು ಸಮಾಧಾನ ಇಲ್ಲ ಅನ್ನುವ ಸಿಡಿ ಮಿಡಿ ಯನ್ನು ,ಧಾರಾವಾಹಿಯ ದುಷ್ಟ ಪಾತ್ರಗಳನ್ನು ಬಯ್ಯುತ್ತಲೋ , ಮಗು ಸುಮ್ಮನೆ ಕೇಳುತ್ತದೆ ಅನ್ನುವ ಕಾರಣಕ್ಕೆ ಗಂಟಲು ಜೋರು ಮಾಡಿಯೋ ಸಿಟ್ಟು ಹೊರ ಹಾಕಲು ಪ್ರಯತ್ನಿಸುತ್ತೇವೆ ,ಆಗೆಲ್ಲ ಮನೆಯ ಹಿರಿಯರು ಹೇಳುವ ''ನೀ ಈ ಮನೆ ನಂದಾದೀಪ, ಲಕ್ಷ್ಮಿ'' ಮುಂದಿನ ಮಾತುಗಳನ್ನು ಕೇಳುವ ತಾಳ್ಮೆ ಉಳಿದಿರುತ್ತದಾ ? ಸಹನೆ ಕಟ್ಟೆ  ಒಡೆದು ಕಣ್ಣು ಕಾವೇರಿ . 
ಗೃಹಲಕ್ಷ್ಮಿ  ಅನ್ನೋ ಹಣೇಪಟ್ಟಿ ಈಗೀಗ ಗ್ರಹಣ ದಂತೆ ಭಾಸವಾಗುತ್ತಿದೆ , ನಮ್ಮ ಚೈತನ್ಯಕ್ಕೆ ಸಮಾಜ ತೊಡಿಸಿರುವ ಕವಚವೇನೋ  , ಎಲ್ಲ ಕೆಲಸಕ್ಕೂ ಅದರದೇ ಆದ ಗೌರವ ಇದೆ ಅನ್ನುವ ಚಿಂತನಾ ಶೀಲರು ಕೂಡ ಮನೆಯ ಕೆಲಸದ ವಿಷಯ ಬಂದಾಗ ''ಅದು ಒಂದು ಕೆಲಸವ ?'' ಅಂದು ತಾತ್ಸಾರದ ನಗು ನಗುವುದುಂಟು,


ಹೀಗೆ ಸುಮ್ಮನೆ ಹೇಳೋ ಮಾತಲ್ಲ , ಒಂದಷ್ಟು ವರುಷಗಳ ಹಿಂದೆ ನಡೆದ ಜನಗಣತಿಯಲ್ಲಿ ನಮ್ಮನ್ನು ನಿರುದ್ಯೋಗಿ, ಆರ್ಥಿಕವಾಗಿ ನಿರುತ್ಪಾದಕರು ಎಂದು ಖೈದಿ/ ಭಿಕ್ಷುಕರ ಪಟ್ಟಿಯಲ್ಲಿ  ಸೇರಿಸಿದ್ದರ ಉಲ್ಲೇಖ ಓದಿ ನಗಬೇಕೋ ಅಳಬೇಲೋ ಅರ್ಥವಾಗಲಿಲ್ಲ ,
''ರಾಷ್ಟೀಯ ಕೌಟುಂಬಿಕ ಸ್ವಾಸ್ಥ್ಯ -III '' ಸರ್ವೇ ಪ್ರಕಾರ ಕೇವಲ ೧೮ .೬೫ ಪ್ರತಿಶತ ಹೆಣ್ಣುಮಕ್ಕಳಿಗೆ ಮಾತ್ರ ತಮ್ಮ ಮನೆಯ ಬಹುಪಾಲು ಅರ್ಥಿಕ ಆಗು ಹೋಗುಗಳನ್ನು ನಿರ್ವಹಿಸುವ ಸ್ವಾತಂತ್ರ ಇದೆ . 
೧೮.೨ ಪ್ರತಿಶತ ಸ್ತ್ರೀಯರಿಗೆ ತಮ್ಮ ಆರೋಗ್ಯ-ಅನಾರೋಗ್ಯ ಚಿಕಿತ್ಸೆ ಪಡೆಯುವ  ಅವಕಾಶ ಇದೆ . ಮಹಿಳೆಯೊಬ್ಬಳು ತನ್ನ ಕುಟುಂಬ  , ಸಂಬಂಧಿಕರನ್ನು , ಸಮಾರಂಭಗಳಲ್ಲಿ ಭಾಗವಹಿಸುವ ನಿರ್ಧಾರಗಳನ್ನು ಕೂಡ ೮೯ ಪ್ರತಿಶತ ಗಂಡಸರೇ ನಿರ್ಧರಿಸುತ್ತಾರೆ . ಎಂಬುದು ಅಂಕಿಅಂಶಗಳು ತಿಳಿಸುತ್ತವೆ . 

ಹಾಗೆಂದು ನಮ್ಮನ್ನು ನಾವೆ  ''ಥಾಂಕ್ ಲೆಸ್ ಲೆಬರ್ಸ್ '' ಅಂದುಕೊಂಡು ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಸುಮ್ಮನೆ ದಿನ ನೂಕುವುದು ಎಷ್ಟು ಸರಿ ???
ನಾವು ಹೆಚ್ಚು ಅವರು ಕಡಿಮೆ , ಎಂದು ಬೀಜವೃಕ್ಷ ನ್ಯಾಯ ಮಾಡುವ ಕಾಲ ಕಳೆದು ಹೋಗಿದೆ ಆದರೆ ಮಾನಸಿಕವಾಗಿ ನಮ್ಮ ಕೆಲಸವನ್ನು ಪ್ರೀತಿಸುವ , ಅದನ್ನರಿತು ಅದಕ್ಕೆ ಬೇಕಾದ ಮಾನಸಿಕ ಸ್ಥೈರ್ಯ ಬೆಳೆಸಿಕೊಳ್ಳಬೇಕಾದ  ಸಮಯ ಇದು . ಎಷ್ಟೋ ವರ್ಷಗಳಿಂದ ಕರ್ತವ್ಯ ಧರ್ಮ ಎಂದೆಲ್ಲ ನಡೆದು ಕೊಂದು ಬಂದಿರುವ ಈ ವಿಷಯಗಳು ಈಗ ಮೆತ್ತಗೆ ಮನಸ್ಸನ್ನು ಕೊರೆಯುವ ಸಂಗತಿಗಳಾಗಿ ಮಾರ್ಪಟ್ಟಿವೆ . 
'' ನಮ್ಮದು ಧನ್ಯತೆ ಇರದ ಯಾಂತ್ರಿಕ ಕೆಲಸ , ಅಲ್ಲಿ ನಿಜವಾದ ಹೊಗಳಿಕೆ ಇಲ್ಲ ಮೆಚ್ಚುಗೆ ಇದ್ದರು ಅಭಿವ್ಯಕ್ತಿ ಕಡಿಮೆ  ಸಂಬಳ ವಂತೂ ಇಲ್ಲವೇ ಇಲ್ಲ , ಪ್ರಮೋಶನ್ ಇಲ್ಲ , ಗಡಿಯಾರ ನಾವೇ ಆಯ್ದು ತರುತ್ತೇವೆ ಆದರೆ ಅದರ ಸಮಯದ ಹಂಗು ನಮಗಿಲ್ಲ , ಅಷ್ಟಕ್ಕೂ ನಾವು ಏನು ಮಾಡುತಿದ್ದಿವಿ  ಅನ್ನೋದೇ ನಮಗೆ ಗೊತ್ತಿಲ್ಲ . '' ಹೀಗೆಲ್ಲ ಅನಿಸುವುದು ಸಹಜವೇ ,,, ಆಗೆಲ್ಲ ನಮ್ಮಲ್ಲಿ ನಾವು ಪವಾರ್ ಬೂಸ್ಟರ್ ಗಳನ್ನ ತುಂಬಿಕೊಳ್ಳಬೇಕು, 

ಸಂಬಳ ವಿಲ್ಲದಿರೆ ಎನು?(ನಮಗೂ ಸಂಬಳ ಕೊಡಬೇಕು ಅನ್ನುವ ಯೊಜನೆ ಭಾರತ ದಂಥಹ ದೇಶದಲ್ಲಿ ಪ್ರಸ್ತಾಪವಾಗಿತ್ತು ಅನ್ನೋದೇ ಖುಷಿಯ ವಿಚಾರ) ನಮಗಿರುವ ಆತ್ಮ ತೃಪ್ತಿ ಎಲ್ಲ ಕೊರತೆಯನ್ನು ನೀಗಿಸಿ ಬಿದುತ್ತದೆ. ಬೆಳಿಗ್ಗೆ ಎದ್ದಾಗಲೇ ಕನ್ನಡಿಯಲ್ಲೊಮ್ಮೆ ನೋಡಿಕೊಂಡು ನಿಮಗೆ ನೀವು ಹೇಳಿಕೊಂಡು ಬಿಡಿ , '' ನಾವು ಥಾಂಕ್ ಲೆಸ್ ಲೆಬರ್ಸ್ ಏಕೆಂದರೆ ನಮಗೆ ಧನ್ಯವಾದ ಹೇಳುವ ಪದಗಳು ಇನ್ನು ಹುಟ್ಟಿಲ್ಲ , ನಮಗೆ ನಾವೇ ಸಾಟಿ , ವೆಲ್ ಡನ್ '' 
ಎಲ್ಲ ಅಪಸವ್ಯಗಳ ನಡುವೆಯೂ ನಿಮ್ಮನ್ನು ನೀವು ಮೆಚಿಕೊಳ್ಳಲು ಮರೆಯದಿರಿ ಯಾಕೆಂದರೆ ಎಲ್ಲರಿಗಿಂತ ಹೆಚ್ಚಾಗಿ ನಿಮ್ಮೊಂದಿಗೆ ಇರುವುದು ನೀವೇ . 
ಉದ್ಯೋಗಸ್ತೆ ಯಾಗಿರಲಿ , ಮನೆ ವಾಳ್ತೆ ನೋಡುವ ಮಹಿಳೆಯಾಗಲಿ  ನಿಮ್ಮ ಬಗ್ಗೆ  ಹೆಮ್ಮೆ , ಅಂತಕರಣ ಪ್ರೀತಿ ಹುಟ್ಟಿಸಿ ಕೊಳ್ಳಿ , ಆದರದು ಸ್ವಾನುಕಂಪ  ಅಹಂಕಾರ ಆಗದೆ ನೋಡಿಕೊಳ್ಳಿ ...