ಮದರಂಗಿ ಹೆಸರು ಕೇಳಿದ ತಕ್ಷಣವೆ ಹೆಂಗಳೆಯರ ಮೊಗದಲ್ಲೊಂದು ಕಿರುನಗೆ ಅರಳದೆ ಇರದು. ಕೈಗೆ ಮೆಹೆಂದಿ ಹಚ್ಹಿಕೊಂಡು ಮಲಗಿದ ರಾತ್ರಿ ಕನಸಿನಲ್ಲೆಲ್ಲ ಮದರಂಗಿಯ ಗುಂಗು..ಮದುಮಗಳ ಕೈಗೆ ಹಚ್ಚಿದ ಮದರಂಗಿ ಬಣ್ಣ ಪಡೆದಷ್ಟು ಗಂಡನಿಗೆ ಹೆಂಡತಿಮೇಲೆ ಪ್ರೀತಿ ಹೆಚ್ಚಂತೆ ,ಅಕ್ಕ ಪಕ್ಕ ಕುಳಿತ ಗೆಳತಿಯರ ಈ ಮಾತು ಇನ್ನು ಟೆನ್ಶನ್ ಹೆಚ್ಚಿಸುತ್ತದೆ.ಬಣ್ಣ ಬರಲಿ ಅಂದು ಮನೆದೇವರಿಗೆ ಹರಕೆ ಹೊತ್ತ ವಧುಗಳು ಇದ್ದಾರೆ,ಅದ್ಹೇಗೆ ಹಾಕಿದರು ಸ್ವಲ್ಪವಾದರೂ ಸರಿ ತನ್ನ ಬಣ್ಣ ಬಿದಡದೆ ಉದುರದ ಮದರಂಗಿ ತನ್ನ ಒಣಗಿದ ಬದುಕಿನ ನಂತರವು ಬಣ್ಣ ಉಳಿಸಿಕೊಂಡು ತಿಳಿಸುವ ಮೌಲ್ಯ ಅರಿತವರಿಗಷ್ಟೇ ಅರ್ಥ ವಾಗುತ್ತದೆ.ಅಂಥ ಮದರಂಗಿಯ ಕೆಂಪು ಕಂಪಿನೊಂದಿಗೆ ಕೆಲಕಾಲ ಕಳೆಯೋಣವೇ??
ನಮ್ಮದಲ್ಲ ಆದರೂ ನಮ್ಮದೇ..
ಲಾಸಾನಿಯ ಎನರ್ಮಿಸ್ ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಹೊಂದಿದ ಮದರಂಗಿ ಭಾರತದ ಕಲೆ ಎಂದೇ ಜಗತ್ತಿನಾದ್ಯಂತ ಹೆಸರು ಮಾಡಿದೆ,೫೦೦೦ ವರ್ಷ ಕ್ಕೂ ಹೆಚ್ಹಿನ ಇತಿಹಾಸ ಹೊಂದಿರುವ ಮದರಂಗಿಯ ಮೂಲ ಆಫ್ರಿಕ ,ಮದರಂಗಿಯ ಬಳಕೆಯನ್ನು ಮೊದಲು ಮಾಡಿದ್ದು ಮಮ್ಮಿಗಳ ಮೇಲೆ,ಪುನರ್ಜನ್ಮ, ಮರಣ ನಂತರದ ಜೀವನದ ಬಗ್ಗೆ ಅತೀವ ವಿಶ್ವಾಸ ಹೊಂದಿದ್ದ ಎಜಿಪ್ತಿಯನ್ನರು ಮದರಂಗಿಯನ್ನು ಮಮ್ಮಿಗಳ ಉಗುರು ರಂಗಾಗಿ ಬಳಸುತ್ತಿದ್ದುದು ದಾಖಲೆಗಳಲ್ಲಿದೆ.
ಕಾಲಕ್ರಮೇಣ ಮದರಂಗಿ ಮಧ್ಯ ಪೂರ್ವ ಏಶಿಯ ,ಉತ್ತರ ಆಫ್ರಿಕ ದಂತಹ ಉಷ್ಣ ಹವಾಮಾನ ಹೊಂದಿದ ದೇಶಗಳಲ್ಲಿ ಪಸರಿಸಿತು ,ಕ್ರಿ ಶ ೭೧೨ ರ ಹೊತ್ತಿಗೆ ಫರ್ಶಿಯನ್ನರು ತಮ್ಮೊಂದಿಗೆ ಮದರಂಗಿಯನ್ನು ಹೊತ್ತು ತಂದು ಭಾರತಕ್ಕೆ ಪರಿಚಯಿಸಿದರು .ಭಾರತದ ಶ್ರೇಷ್ಠ ಜ್ಞಾನ ಆಯುರ್ವೇದದಲ್ಲಿ ಮದರಂಗಿಯ ಔಷದೀಯ ಉಪಯೋಗಗಳನ್ನು ಹೇಳಲಾಗಿತ್ತಾದರೂ ಸೌಂದರ್ಯ ವರ್ಧಕವಾಗಿ ಮದರಂಗಿ ನಮಗೆ ಪರಿಚಯಿಸಿದ್ದು ಪರ್ಷಿಯನ್ನರು .ಅದರ ಗುರುತಾಗಿ ಇಂದಿಗೂ ಮದರಂಗಿಯ ಚಿತ್ತಾರಗಳಲ್ಲಿ ಪಾಸ್ಲೆ ಎಂಬ ಪರ್ಷಿಯಾದ ಚಿತ್ತಾರ ಬಳಕೆಯಲ್ಲಿದೆ.. ಹೀಗೆ ಜನಾನದಿಂದ ಜನಸಾಮಾನ್ಯರ ತನಕ ಮದರಂಗಿ ನಡೆದು ಬಂತು .
ಸುಮ್ಮನೆ ಅಲ್ಲ ಎಲ್ಲದಕ್ಕೂ ಇದೆ ಅರ್ಥ
ಮೊದಲೆಲ್ಲ ಎಲ್ಲಿತ್ತು ಈ ಮೆಹೆಂದಿ ಕೊನ,ಮಾರ್ಕರ್ ಗಳು ?ಹಿಡಿಸೂಡಿಯ ತುದಿಯಲ್ಲಿ ಸವೆದು ಚೂಪಾದ ಕಡ್ಡಿಯೇ ಮದರಂಗಿ ಕುಂಚ,ನನ್ನ ಅಮ್ಮನ ಕಾಲದಲ್ಲಿ ಕೈಗೆ ಮದರಂಗಿ ಹಚ್ಚಿ ಅದಕ್ಕೆ ಬಾಲೆ ಎಲೆ ಸುತ್ತಿ ಇಡುತ್ತಿದ್ದರು, ಎಂಬುದು ಅಜ್ಜಿಯ ಉವಾಚ ,ಆದರೆ ಮದರಂಗಿಯ ಚಿತ್ತಾರಗಳಿಗೂ ಒಂದು ಆಶಯವಿದೆ.
ಮೊಗ್ಗು-ಹೊಸ ಬದುಕು,ಪ್ರೀತಿ
ಹೂವು - ಫಲವಂತಿಕೆಯ ಸಂಕೇತ
ದೇವರು ಮತ್ತು ಧಾರ್ಮಿಕ ಚಿನ್ಹೆ ಸಂಕೇತಗಳು -ಆಯುರಾರೋಗ್ಯ ,ಕೆಟ್ಟ ದೃಷ್ಟಿಯಿಂದ ರಕ್ಷಣೆ ಪಡೆಯಲು
ಮಂಡಲಗಳು -ಬುದ್ಧಿವಂತಿಕೆ ,ಅದ್ಯಾತ್ಮ,ತೆರೆದ ಮನದ ದ್ಯೋತಕ
ರಂಗಿನ ಗುಂಗು
ಮಳೆಗಾಲ ಶುರುಅಯ್ತು ಅಂದ ಕೂಡಲೇ ಚಿಗುರುವ ಕಡುಹಸಿರು ಎಲೆ ಗೆಂಪು ಮದರಂಗಿ ಚಿಗುರು ಎಲೆಗಳು ಉತ್ತಮ ಎಂಬುದು ಅನುಭವದ ಮಾತು,ಆ ಕಾರಣದಿಂದಲೇ ಅಷಾದ ಮಾಸದಲ್ಲಿ ,ಗೌರಿ ಹಬ್ಬದ ಸಂದರ್ಭದಲ್ಲಿ ಮದರಂಗಿಯನ್ನು ಹಾಕಿಕೊಳ್ಳುವ ಸಂಪ್ರದಾಯ ಇನ್ನು ಜಾರಿಯಲ್ಲಿರುವುದು,ಮದರಂಗಿ ವರ್ಷದಲ್ಲೆರಡು ಬಾರಿ ತನ್ನೆಲೆಗಳನ್ನು ಚಿಗುರಿಸಿಕೊಳ್ಳುತ್ತದೆ,ಇನ್ನು ಗೋರಂಟಿ ಎಲೆಗಳನ್ನು ಒಣಗಿಸಿ ಪುಡಿಮಾಡಿದ ನಂತರ ಅದಕ್ಕೆ ಕೆಲವು ವಸ್ತುಗಳನ್ನು ಜೊತೆ ಮಾಡಿದರೆ ಅದರ ಕೆಂಪು ಇನ್ನು ಉಜ್ವಲವಾಗುತ್ತದೆ,
ಸಾಮಾನ್ಯವಾಗಿ ಚಹಾ ಪುಡಿ ,ನಿಂಬೆ ಹುಳಿ ,ಮಜ್ಜಿಗೆ ಮೊಸರು,ಹುಣಸೆಹಣ್ಣು,ದಾಳಿಂಬೆ ಸೀಪ್ಪೆಯ ಕಷಾಯ ಬೆಂಡೆಕಾಯಿ,ಗುಲಾಬಿ ಎಸಳು,ಕಿತ್ತಲೆಸಿಪ್ಪೆ ,ನೀಲಗಿರಿ ಎಣ್ಣೆ ,ಲವಂಗ ,ಸಾಸಿವೆ ಎಣ್ಣೆ,ಸಕ್ಕರೆ ನೀರು,ಮದರಂಗಿ ಸಂಗಾತಿಗಳು.
ಕೆಲ ಬುಡಕಟ್ಟಿನಲ್ಲಿ ಮದರಂಗಿ ರುಬ್ಬುವಾಗ ಎಂಬೆ ಎಂದು ಕರೆಯಲ್ಪಡುವ ಕೆಂಪು ಇರುವೆಯನ್ನು ಸೇರಿಸುತ್ತಾರೆ,ಆ ಇರುವೆಯಲ್ಲಿರುವ ರಾಸಾಯನಿಕ ಮದರಂಗಿಯ ಬಣ್ಣವನ್ನು ಇನ್ನು ಹೆಚ್ಚಿಸುತ್ತದೆ,ಇದು ನೈಸರ್ಗಿಕ ನೆಲೆಯಲ್ಲಿ ಅವರು ಪ್ರಯೋಗಿಸಿದ ವಿಧಾನ ಆದರೆ ಇತ್ತೀಚಿಗೆ ಅದೇ ರಾಸಾಯನಿಕವನ್ನು ಮದರಂಗಿಯಲ್ಲಿ ಸೇರಿಸಿ ಕಡಿಮೆ ಸಮಯದಲ್ಲಿ ಹೆಚ್ಹು ರಂಗು ಬರುವಂತೆ ಸಿದ್ದ ಗೊಳಿಸಿದ ಕೊನ ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ
ಇದು ಭಾರತದ ರೀತಿ ಆದರೆ ಆಫ್ರಿಕ ಮತ್ತು ಮಧ್ಯ ಪೂರ್ವ ಎಷಿಯಗಳಲ್ಲಿ ಯಾಕ ಅಥವಾ ಒಂಟೆಯ ಮೂತ್ರವನ್ನು ಸೇರಿಸುತ್ತಾರೆ.ಇದರಿಂದ ಮದರಂಗಿಯ ಬಣ್ಣ ಗಾಢ ಗೊಳ್ಳುತ್ತದೆ ಎಂಬುದು ಅವರ ನಂಬಿಕೆ,ವೈಜ್ಞಾನಿಕ ನೆಲೆಯಲ್ಲಿ ಆಯಾ ವ್ಯಕ್ತಿಯ ದೇಹದ ತಾಪಮಾನಕ್ಕನುಗುನವಾಗಿ ಮದರಂಗಿ ತನ್ನ ಕಲೆಯನ್ನು ಉಳಿಸಿ ಬಿಡುತ್ತದೆ,ಉಷ್ಣ ದೇಹ ಪ್ರಕ್ರುತಿಯವರ ಕೈಯ್ಯಲ್ಲಿ ಮದರಂಗಿ ರಂಗು ರಂಗಾಗಿ ಕಂಗೊಳಿಸುತ್ತದೆ,
ಸಿಂಗಾರಕ್ಕಲ್ಲದೆ...
ಮದರಂಗಿ ಕೇವಲ ಪ್ರಸಾಧನ ವಾಗಿ ಮಾತ್ರ ಹೆಚ್ಹು ಜನರಿಗೆ ಪರಿಚಿತ ,ಮದರಂಗಿಯನ್ನು ಚರ್ಮ ಉದ್ದಿಮೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ,ಜೊತೆಗೆ ಉಣ್ಣೆಗೆ ಬಣ್ಣ ಕೊಡಲು ಬಳಸುವ ಕೆಲವೇ ನೈಸರ್ಗಿಕ ಬಣ್ಣಗಳಲ್ಲಿ ಮದರಂಗಿಯು ಒಂದು.
ಮದರಂಗಿ ಪ್ರತಿಯೊಬ್ಬರ ಹಿತ್ತಲಲ್ಲಿ ಇರಲೇಬೇಕಾದ ಔಷದೀಯ ಸಸ್ಯ , ಅಂಗೈ ,ಅಂಗಾಲು ಉರಿ ಇದ್ದಾಗ ಮದರಂಗಿಯ ಲೇಪವನ್ನು ಹಾಕಿ ಕೊಂಡರೆ ಬೇಗನೆ ಉಪಶಮನ ಕಾಣಬಹುದು,
ರಿಂಗ್ ವರ್ಮ ಎಂಬ ಚರ್ಮ ವ್ಯಾಧಿಯಲ್ಲೂ ಕೂಡ ಮದರಂಗಿಯ ಲೇಪ ಬಹುಪಯೋಗಿ,
ಕಣ್ಣುರಿ ಮತ್ತು ಬಿಸಿಲಿನಿಂದ ನೆತ್ತಿಯಲ್ಲಿ ಬಿಸಿ ಬಿಸಿ ಆದಂಥ ಅನುಭವ ಆದಾಗಲೂ ಲೋಳೆಸರ ಮತ್ತು ಮದರಂಗಿಯನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಉಷ್ಣ ಕಡಿಮೆ ಆಗುವುದರೊಂದಿಗೆ ,ಕೂದಲು ಸೊಂಪಾಗಿ ಬೆಳೆಯುತ್ತದೆ.ಮತ್ತು ಇದು ನೈಸರ್ಗಿಕ ಕಂಡಿಷನರ್ ಕೂಡ, ಮಲೆನಾಡು ,ಕರಾವಳಿಯಲ್ಲಿ ಸಂಜೆ ಆಸರೆಗೆ ಮಾಡುವ ಕಶಾಯದಲ್ಲೂ ಸ್ವಲ್ಪ ಮದರಂಗಿ ಸೊಪ್ಪು ಸೇರಿಸುವುದುಂಟು.ತಿಂಗಳ ರಜೆ ಮುಂದೆ ಹೋಗಲು ಇದರ ಕಷಾಯ ನೈಸರ್ಗಿಕ ಉಪಾಯ
ಕವಿ ಮತ್ತು ಕೈಗೆಂಪು...
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..
ಹಾಗೆಂದು ಕವಿ ಸುಮ್ಮನೆ ಬರೆದಿಲ್ಲ...ಅದೆಷ್ಟು ಕವಿಗಳಿಗೆ ನಲ್ಲೆಯ ಕೈಗೆಂಪು ನಿದ್ದೆಗೆಡಿಸಿಲ್ಲ ಹೇಳಿ..ಪ್ರಿಯತಮೆಯ ಮದರಂಗಿಯ ಕೆಂಪಿನಲ್ಲಿ ಅದೆಷ್ಟು ಬಂದಿಶ್ ,ಗಜಲ ಗಳು ಸ್ವರದಲ್ಲಿ ಬಂಧಿಯಾಗಿಲ್ಲ????
ಬಿಹಾಗ ರಾಗದಲ್ಲಿ ಹಾಡುವ ಬಂದಿಶ್ ಒಂದರ ಶಬ್ಧಗಳು ಹೀಗಿವೆ
.'' ಲಟ ಉಲಜೆ ಸುಲಜ ಜಾ ಬಾಲಮ
ಮೊರೆ ಹಾತ್ ಮೇ ಮೆಹೆಂದಿ ಲಾಗಿ ಹೈ..''
ತನ್ನ ಮುಂಗುರುಳ ಸಿಕ್ಕು ಬಿಡಿಸುವ ನೆವದಲ್ಲಿ ನಲ್ಲನ ಸಾಂಗತ್ಯ ಬಯಸುವ ಈಕೆಗೆ ಮೆಹೆಂದಿಯ ನೆವವೇ ಬೇಕಾಯಿತು..
ಚುರಾಕೆ ಮುಟ್ಟಿಮೆ ದಿಲ್ ಕೋ ಚುಪಾಕೆ ಬೈಟೆ ಹೈ
ಬಹಾನ ಏ ಹೈ ಕಿ ಮೆಹೆಂದಿ ಲಗಕೆ ಬೈಟೆ ಹೈ ..
ಹೀಗೊಬ್ಬ ಶಾಯರ್ ಶಾಯರಿ ಮಾಡಿದರೆ..ಇನ್ನೊಬ್ಬ ತನ್ನ ಮಾಶುಕಳನ್ನು ನೆನಪಿಸಿದ ರೀತಿ ಯಾಕೋ ಭಾಳ ಇಷ್ಟವಾಗಿ ಬಿಡುತ್ತದೆ..
ನಾವ್ ಮೇ ಬೈಟಕೆ ಧೋಯೇಥೆ ಹಾತ್ ಕಭಿ ಉಸನೇ..
ಪೂರೇ ತಾಲಾಬ್ ಮೇ ಮೆಹೆಂದಿ ಕಿ ಮೆಹೆಕ್ ಆಜ್ ಭಿ ಹೈ ...
ಉದ್ಯೋಗವಾಗಿ ಮದರಂಗಿ
ಮದರಂಗಿಯನ್ನು ಹಚ್ಚಲು ಯಾವುದೇ ಪ್ರಮಾಣಪತ್ರ ಪದವಿಗಳು ಬೇಕಿಲ್ಲ. ಕ್ರಿಯಾಶೀಲತೆ ಮತ್ತು ಸತತ ಅಭ್ಯಾಸ ಮದರಂಗಿ ಕಲೆಯ ಮೂಲ ಮಂತ್ರಗಳು. ಚನ್ನೈ ನಲ್ಲಿ ನೆಲೆಸಿರುವ ರಾಜೇಶ್ವರಿ ಮಹೇಶ್ ಎನ್ನುವ ಹೆನ್ನ ಕಲಾವಿದೆ ಹೇಳುವಂತೆ ,ಮದರಂಗಿ ಯ ಉದ್ಯೋಗ ಎಂಬುದು ಬಂಡವಾಳ ಇಲ್ಲದ ಸ್ವ ಉದ್ಯೋಗ ,ಪ್ರತಿ ಕೈಗೆ ಕನಿಷ್ಠ ೧೫೦ ರೂಪಾಯಿಗಳಿಂದ ಮದುವೆ, ಪಾರ್ಟಿ ಮದರಂಗಿಗೆ ೧೫,೦೦೦ ರೂಪಾಯಿಗಳ ತನಕ ಅವರು ಚಾರ್ಜ್ ಮಾಡುತ್ತಾರೆ.ಆರ್ಡರ್ ಇಲ್ಲದಾಗಲು ಮದರಂಗಿಯನ್ನು ಅಭ್ಯಾಸ ಮಾಡುತ್ತಿರಬೇಕು ಮತ್ತು ಹೊಸ ಹೊಸ ಆಲೋಚನೆಗಳನ್ನು ಮದರಂಗಿಯ ಮೂಲಕ ಕೈಗಳ ಮೇಲೆ ಚಿತ್ರಿಸಲು ಪ್ರಯತ್ನಿಸಬೇಕು ಎಂಬುದು ಅವರ ದೃಡವಾದ ಮಾತು.
ವಿದೇಶದಲ್ಲೂ ಈ ತಾತ್ಕಾಲಿಕ ಚಿತ್ತಾರ ಕಲೆ ಮದರಂಗಿಯನ್ನು ಬಹುವಾಗಿ ಮೆಚ್ಚುತ್ತಾರೆ ಆದರಿಂದ ,ಇದನ್ನು ಕಲಿತ ಹಲವು ಭಾರತೀಯ ಹೆಣ್ಣುಮಕ್ಕಳು ವಿದೇಶದಲ್ಲಿ ಸ್ವಾವಲಂಬಿ ಆಗಿ ತಮ್ಮ ಸ್ವ ಉದ್ಯೋಗ ಸ್ಥಾಪಿಸುವಲ್ಲಿ ಯಶಸ್ವೀ ಆಗಿದ್ದಾರೆ.
ಎಚ್ಚರಿಕೆ ,!!!!!!
ಮದರಂಗಿ ಎಂದಕೂಡಲೇ ಅದರ ಹಿಂದೆ ಮತ್ತಷ್ಟು ಹೆಸರು ಕೇಳಿ ಬರುವುದುಂಟು,ಕಾಲಿ ಮೆಹೆಂದಿ,ಅನ್ನುವ ತಲೆಕೂದಲಿಗೆ ಹಚ್ಚುವ ಬಣ್ಣ,ತತಕ್ಷಣ ಬಣ್ಣ ನೀಡುವ ಕೆಲವು ಮೆಹೆಂದಿಗಳು,ಆದರೆ ಇವನ್ನು ಬಳಸುವ ಮುನ್ನ ನೆನಪಿಡಲೇಬೇಕಾದ ಅಂಶವೆಂದರೆ ಮದರಂಗಿ ಎಂಬುದು ಕೇವಲ ಕೆಂಪು ಬಣ್ಣದ ಕಲೆಯನ್ನುಳಿಸುವ ಒಂದು ನೈಸರ್ಗಿಕ ಪ್ರಸಾಧನ , ಇದರಲ್ಲಿ ಬೇರ್ಯಾವ ಬಣ್ಣಗಳು ದೊರಕುವುದಿಲ್ಲ.ಕೃತಕವಾಗಿ ತಯಾರಿಸಲಾಗುವ ಕಾಲಿ ಮೆಹೆಂದಿ.ಬ್ಲಾಕ್ ಹೆನ್ನ ಎಂಬುವ ಪ್ರಸಾಧನದಲ್ಲಿ PPD ಎಂಬ ರಾಸಾಯನಿಕ ಇರುವದರಿಂದ ,ಇದರ ಬಳಕೆ ಚರ್ಮ ಸಂಬಂಧಿ ಖಾಯಿಲೆಗಳಿಗೆ ತೆರೆದ ಅಹ್ವಾನ ,ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಮದರಂಗಿಯನ್ನು ಆಯ್ಕೆ ಮಾಡಬೇಕಾದ್ದು ಅನಿವಾರ್ಯ,
ಬೇಲಿಯ ಬದಿಯಲ್ಲಿ ಸುಮ್ಮನೆ ಹಸಿರು ಕೆಂಪು ಹೊದ್ದು ತನಗೀನು ಗೊತ್ತಿಲ್ಲ ಎಂಬಂತೆ ನಿಂತಿರುವ ಮದರಂಗಿಯ ತನ್ನ ಮುಟ್ಟಿದವರಿಗೆಲ್ಲ ತನ್ನ ಬಣ್ಣವನ್ನು ಕೊಡದೆ ಬಿಡದು.ನಿಸರ್ಗದಲ್ಲಿ ಅದೆಷ್ಟು ಮನಮೋಹಕ ಕೂತುಹಲದ ಸಂಗತಿಗಳಿವೆ..ಅದನ್ನು ಅರಿಯುವ ತವಕ ಹಂಬಲ ನಮಗೆ ಬೇಕಷ್ಟೇ.
wow.. beautiful explanation amita thanks a lot..
ReplyDeleteThank you..MANASU...
Deleteಅಮಿತಾ ..ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ .ಮದರಂಗಿಯ ಬಗ್ಗೆ ಇಷ್ಟೆಲ್ಲಾ ಹಿನ್ನೆಲೆ ಗೊತ್ತೇ ಇರಲಿಲ್ಲ ..ನಮ್ಮ ಊರಿನಲ್ಲಿ ನಾಗರ ಪಂಚಮಿಯಲ್ಲಿ ಮದರಂಗಿ ಸೊಪ್ಪನ್ನು ಸಕ್ಕರೆ ಸೇರಿಸಿ ಒರಳು ಕಲ್ಲಲ್ಲಿ ರುಬ್ಬಿ ,ಕೈಗೆ ಹಚ್ಚಿಕೊಳ್ಳುತ್ತಿದ್ದೆವು ..ಬೆಳಿಗ್ಗೆ ಎದ್ದು ಯಾರ ಕೈ ಹೆಚ್ಚು ರಂಗಾಗಿದೆ ..ಎಂದು ನೋಡುವುದೇ ಒಂದು ಖುಷಿ ..
ReplyDeleteಈಗ ಮೆಹಂದಿ ಮದುವೆಯ ಕಾರ್ಯಕ್ರಮದ ಒಂದು ಅಂಗವಾಗಿದೆ .ಮೆಹಂದಿ ,ಹಾಡು ,ಕುಣಿತ ಇರಲೇ ಬೇಕು .ಮದರಂಗಿಯ ಬಗ್ಗೆ ಎಳೆ ಎಳೆಯಾಗಿ ,ಸ್ವಾರಸ್ಯಕರವಾಗಿ ,ಎಲ್ಲಾ ಸೂಕ್ಷ್ಮಗಳನ್ನು ಬಿಡಿಸಿಟ್ಟಿ ದ್ದೀರಿ ..ನೀವು ಪ್ರೀತಿಸುವ ಮದರಂಗಿ ಯ ಬಣ್ಣ ತುಂಬಾ ಚೆನ್ನಾಗಿ ನಮ್ಮ ಕೈಗೂ ಬಂದಿದೆ ..ಅಭಿನಂದನೆಗಳು .
ಅಮ್ಮ ಎಂದು ಸುಮ್ಮನೆ ಕರೆದಿಲ್ಲ ನಿಮ್ಮನ್ನು,ಯಾವ ಪುಟ್ಟ ಪ್ರಯತ್ನವಾದರೂ ನೀವು ಬೆನ್ನು ತಟ್ಟಿ ಪ್ರೋತ್ಶಾಹಿಸುತ್ತಿರಿ.ನಾಲ್ಕು ಸಾಲು ಬರೆದು ನಮ್ಮ ಉತ್ಸಾಹ ಹೆಚ್ಚುಸುತ್ತೀರಿ.ನಿಮ್ಮ ಪ್ರೀತಿಗೆ ಮೂಕಳಾಗಿದ್ದೇನೆ
Deleteಅಬ್ಬಬ್ಬಾ ಬರಿಯ ಕೆಂಪಲ್ಲ... ಇನ್ನೂ ಏನೇನೆಲ್ಲ ಅಡಗಿದೆ ಈ ಮೆಹಂದಿಯಲ್ಲಿ... (ಅಮಿತಕ್ಕನಲ್ಲೂ)....
ReplyDeleteThank you shama..
Deletegood oneeee.akka.
ReplyDeleteಈ ಲೇಖನ ತುಂಬಾ ಇಷ್ಟವಾಯಿತು.
ReplyDeleteನನ್ನ 'ದೊಡ್ಡಪ್ಪ' ನಾಟಕದಲ್ಲಿ ಒಂದು ಹಾಡಿನ ಸಾಲು :
ಮದರಂಗಿ ಬಣ್ಣದ ಹುಡಗಿ
ನದರಿಗೆ ಬಿದ್ದಾಳೋ...!