Sunday, June 3, 2012

ತರಲೆ ತಮ್ಮನ ಜನುಮದಿನಕ್ಕೆ...ಪ್ರೀತಿಯ ಆನ್ನು

೪/೦೬/೧೯೯೫ ,ರವಿವಾರ ಬೆಳಗಿನ ಜಾವ ನನಗೆ ಹಾಲ್ನಿದ್ದೆ ,,,ಕನಸಿನಲ್ಲಿ ಚಿಕನ್ ಬಂದಿತ್ತು ,ಏನೋ ಗಡಿಬಿಡಿ ಯಾರೋ ನನ್ನ ಎಬ್ಬಿಸಿ ಒಂದು ಚೀಲ ಕೈಗೆ ಕೊಟ್ಟು ಕಾರ್ ಮೇಲೆ ಕೂಡಿಸಿದದಷ್ಟೇ ಗೊತ್ತು .ಮಧ್ಯ ಅದೆಲ್ಲೋ ಒಂಚೂರು ಎಚ್ಹರ ಅಮ್ಮ ಪಕ್ಕದಲ್ಲಿ ಕುಳಿತಿದ್ದಳು ,ಪಪ್ಪ ಪದೇ ಪದೇ ಆರಾಮಿದ್ದೀಯಲ್ಲ ಅಂತ ಕೇಳುತ್ತಿದ್ದರು , ಆ ಮಾತು ಕೇಳಿ ನನ್ನ ನಿದ್ದೆ ಅದೆಲ್ಲೋ ಹಾರಿ ಹೋಗಿತ್ತು ,ನಾನೂ ಅಮ್ಮನೊಂದಿಗೆ ಆಸ್ಪತ್ರೆಗೆ ಹೊರಟಿದ್ದೆ ಅಮ್ಮನಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು ,ಕಾರು ಕುಂದಾಪುರದ ವಿನಯ ನರ್ಸಿಂಗ್ ಹೋಂ ಹತ್ತಿರ ನಿಲ್ಲುತ್ತಿದ್ದಂತೆ ಅಮ್ಮ ಮೆತ್ತಗೆ ಇಳಿದು  ಲೇಬರ್ ವಾರ್ಡ್ ತನಕ ಸುಮ್ಮನೆ ನಡೆದು ಹೋಗಿದ್ದಳು ಆಗ ಬೆಳಿಗ್ಗೆ ೫.೦೦ ಘಂಟೆ ,

ಪಪ್ಪ,ಆಚೀಚೇ ಓಡಾಡುತ್ತಿರೆ ನಾನೂ ದೊಡ್ಡ ಅನುಭವಸ್ತ ಹೆಂಗಸಿನಂತೆ ನನ್ನ ಕೈಗೆ ಕೊಟ್ಟ ಆ ಚೀಲದೊಂದಿಗೆ ಲೇಬರ್ ವಾರ್ಡಿನ ಬಾಗಿಲಲ್ಲೇ ನಿಂತಿದ್ದೆ.ನರ್ಸಮ್ಮ ಅಮ್ಮನ ಹೆಸರು ಕೂಗಿ ಬಟ್ಟೆ ಕೊಡಿ ಎಂದಾಗಲೆಲ್ಲ ನಾನು, ಹೊರಗೆಲ್ಲೋ ತಿರುಗಾಟಕ್ಕೆ ಹೋಗುವಾಗ ಬಟ್ಟೆ ಅಯ್ತ್ಕೆ ಮಾಡುವರಂತೆ ಅದೋ ಇದೋ ಎಂಬಂತೆ ನೋಡಿ ಅದರೊಲ್ಲೊಂದು ಸೆಲೆಕ್ಟ್ ಮಾಡಿ ಆಕೆ ಕೈಗೆ ಕೊಡುತಿದ್ದೆ,ಆಕೆಗೆ ಕೊನೆಗೊಮ್ಮೆ ರೇಗಿ ಯಾರು ದೊಡ್ಡೋರು ಬಂದಿಲ್ವಾ?ನೀನು ಯಾರು?? ಅಂದಾಗ ನಾನು ಅವರ ಮಗಳು ಎಂದಿದ್ದೆ ಅಷ್ಟೇ.ಯಾಕೋ ನನ್ನನ್ನು ಸಣ್ಣ ಹುಡುಗಿ ಎಂದಿದ್ದೇ  ನನ್ನ ಅಸಮಾಧಾನಕ್ಕೆ ಕಾರಣ ಆಗಿತ್ತು .

೫.೧೫ ಕ್ಕೆ ಅಮ್ಮನ ಹೆಸರನ್ನು ಮತ್ತೆ ಕೂಗಿದರು ನರ್ಸಮ್ಮ ,ಗಂಡು ಮಗು ಅಂದು ಆಕೆ ಒಂದು ನಗುವನ್ನು ಕೊಡದೆ ಮತ್ತೆ ಬಾಗಿಲು ಹಾಕಿಕೊಂಡಳು ,ನಗು ಕಾಣಬೇಕಿತ್ತು ನೀನು ಪಪ್ಪನ ಮುಖದಲ್ಲಿ ,ನನ್ನ ಮುಖದಲ್ಲಿ  ಅಮ್ಮನನ್ನು ಅಷ್ಟು ಬೇಗ ವಾರ್ಡಿಗೆ ತರುವಂತೆ ಇರಲಿಲ್ಲ ಆಕೆಯ ಸ್ಥಿತಿ ,ಶುಭ್ರ ಬಿಳಿ ಪಂಚೆ ತುಂಡನ್ನು ನಿನ್ನ ಸುತ್ತಲು ಕಟ್ಟಿ ಗೊಂಬೆಯಂತೆ ಮಾಡಿ ಪಪ್ಪನ ಕೈಗೆ ಕೊಟ್ಟಿದ್ದರು.ನಂತರ ಲೇಬರ್ ವಾರ್ಡಿನ ಎದುರಿಗಿದ್ದ ಒಂದು ಕೋಣೆಯ ತೊಟ್ಟಿಲಲ್ಲಿ ನಿನ್ನ ಮಲಗಿಸಿದ್ದರು.

ಅಮ್ಮನಿಗಿಂತ ಮೊದಲು ನಾನು ನಿನ್ನ ಎತ್ತಿ  ಕೊಂಡಿದ್ದೆ ,ನಿನ್ನ ತೊಟ್ಟಿಲ ಪಕ್ಕ ನಿಂತಿದ್ದೆ.ಇನ್ನು ಬೆಳಕು ಮೂಡಿರಲಿಲ್ಲ ,'ಅಜ್ಜಿ ರಾತ್ರಿ ಮಲಗುವಾಗ ಹೇಳುವ ಚೌಡಿ ಪಿಶಾಚಿಗಳ ಕಥೆಗಳು,ಅವು ನವಜಾತ ಶಿಶುವನ್ನು ತಿನ್ನಲು ಬರುವುದು ಅದೆಲ್ಲ ನೆನೆದು ನಿನ್ನ ತೊಟ್ಟಿಲ ಬಿಟ್ಟು ಆಚೀಚೆ ಸರಿದದಲಿಲ್ಲ..ಬಿಳಿ ಸೀರೆ ಉಟ್ಟ ಯಾವ ನರ್ಸಮ್ಮ ಬಂದರೂ ನಾನು ಅವರ ಕಾಲು ನೋಡುತಿದ್ದೆ..ಮನದಲ್ಲೇ ಮಂತ್ರ ಶುರು ವಾಗುತ್ತಿದ್ದವು,ನೀನು ನಗುತ್ತಿದ್ದಿ ಗೊತ್ತು ,,ಆದರೆ ಅಮ್ಮವಾರ್ಡಿಗೆ   ಬರುವ ತನಕ ನಿನ್ನ ಸಂಪೂರ್ಣ ಜವಾಬ್ದಾರಿ ನನ್ನಮೇಲಿತ್ತು,ಅಮ್ಮ ತಿಂದ ಎಲ್ಲಾ ಕಲ್ಲಂಗಡಿ ಹಣ್ಣುಗಳು ನಿನ್ನ ಗಲ್ಲ ಸೇರಿದ್ದವು ,ಅದೆಷ್ಟು ಕೆಂಪಗಿದ್ದೆ,,ನಮ್ಮ ಮನೆಯಲ್ಲಿ ಆ ವರೆಗೆ ಬೆಳ್ಳಗೆ ಎಂಬ ಕಾಪ್ಮ್ಲಿಮೆಂಟ್ ಸಿಗುತ್ತಿದ್ದುದು ನನಗೆ ಮಾತ್ರ, ಈಗ ನಿನ್ನ ಮುಂದೆ ನಾನು ಏನು ಅಲ್ಲ ,,ಸೇಬಿಸಂತೆ ಇದ್ದೆ ನೀನು,

ಬೆಳಕು ಹರಿಯುತ್ತಿದ್ದಂತೆ ,ಆ ಕೋಣೆಯಲ್ಲಿ ಆಚೀಚೇ ಓಡಾಡುವವರು ಜಾಸ್ತಿ ಆದರು,ನಿನ್ನನ್ನು ೨ ಘಂಟೆಗಳ  ಹಿಂದೆ ಜನಿಸಿದ ಕೂಸೆಂದು ಯಾರು ನಂಬುತ್ತಿರಲಿಲ್ಲ.ಅಷ್ಟು ಚಂದಗಿದ್ದೆ ನೀನು,ಅಮ್ಮ ವಾರ್ಡಿಗೆ ಬಂದಳು,ಅಮ್ಮನಿಗೆ ಪಕ್ಕದಲ್ಲಿದ್ದ ಉಷಾ ಹೋಟೆಲಿನ ಚಹಾ ,ಕಾಫಿ  ತಿಂಡಿ ತೀರ್ಥದ ಸಪ್ಲಾಯರ್ ನಾನೆ ಆದೆ,ನಿಜ ಹೇಳ್ತೀನಿ ಕೇಳು ಆ ಸಮಯವನ್ನು ಅದೆಷ್ಟು ಎಂಜಾಯ್ ಮಾಡಿದ್ದೆ ನಾನು,ಮೀನು ತಿನ್ನದ ಅಮ್ಮನಿಗಾಗಿ,ತರಕಾರಿ ಊಟ ಅಜ್ಜಿ ಕಳಿಸುತ್ತಿದ್ದರು ಸಾವಿರಾರು  ಪಥ್ಯ  ಬೇರೆ .ನಾನು ಪಕ್ಕದ ರೂಮಿನವರೊಂದಿಗೆ ಅದ್ಯಾವುದೇ ಮೀನು ಹೋಟೆಲಿನ ಊಟ ತಗೊಂಡು ಬಂದಿದ್ದೆ ಅದೇನೋ ಖುಷಿ ನೀನು ಹುಟ್ಟಿದ ಗಳಿಗೆಯಿಂದಲೇ ಆಸ್ಪತ್ರೆ ಅಂದರೆ ಪಿಕ್ನಿಕ್ ಸ್ಪಾಟ್ ಆಗಿತ್ತು. ಇನ್ನು ರಾಖಿ ಹಬ್ಬ ಬಂದಾಗ ನಾವು ಅನಾಥ    ಪ್ರಜ್ಞೆ ಅನುಭವಿಸಬೇಕಿಲ್ಲ  ನಮಗೂ ಪುಟ್ಟ ತಮ್ಮ ಬಂದಿದಾನೆ ಎಂಬ ಖುಷಿ ನಿನ್ನಿಬ್ಬರ ಅಕ್ಕಂದಿರದ್ದು ..

ನೀನು ಮನೆಗೆ ಬಂದೆ ,ಪಪ್ಪ ಕುಂದಾಪುರದ ಆ ವಿನಯ ನರ್ಸಿಂಗ್ ಹೋಂ ನಿಂದ ,ಹಳೆ ಬಸ್ ಸ್ಟ್ಯಾಂಡ್  ತನಕ ನಡೆಯುತ್ತಾ ನಡೆಯುತ್ತಾ ಚಂದದ ಹೆಸರೊಂದನ್ನು ಹುಡುಕಿದ್ದರು ''ಅಭಯ '' ನನ್ನ ನಾಲ್ಕು ಅಕಾರಾದಿ ನಾಮದ ಕುಟುಂಬಕ್ಕೆ ಪುಟ್ಟ ಸದಸ್ಯನ ಆಗಮನ,ನಿಜ ಹೇಳ್ತೀನಿ ಕೇಳು,,ಅಸ್ಪತೆಯಿಂದ ಮನೆಗೆ ಬಂದ ನಂತರ ನಿನ್ನೆಡೆಗೆ ದೃಷ್ಟಿ ಹೊರಳಿದ್ದೆ ಕಮ್ಮಿ ,ಕಾರಣ ನಮ್ಮ ಹತ್ತಿರವೇ ಬೆಳೆಯುತ್ತಲಿದ್ದ ಚಿಕ್ಕಮ್ಮನ ಮಗ ಚಂದೂ,,ಅವನಾಗ ತೊದಲು ನುಡಿಯುತ್ತಿದ್ದ ,ತೊಟ್ಟಿಲಲ್ಲಿ ಏನೊಂದು ಸದ್ದಿಲ್ಲದೇ ಸುಮ್ಮನೆ ಮಲಗುತ್ತಿದ್ದ ನಿನಗಿಂತ ನಮ್ಮ ಹಿಂದೆ ಅತ್ತಾ ಅತ್ತಾ (ಅಕ್ಕ ) ಅಂತ ಓಡಾಡುತ್ತಿದ್ದ ಅವನು ನಮ್ಮ ಕೈಗೊಂಬೆ ಆಗಿದ್ದ..

ಅದೆಷ್ಟು ದಿನ???? ,,ಚಿಕ್ಕಮ್ಮನಿಗೆ  ನೀ ಬಂದ ಮೇಲೆ ಚಂದುವನ್ನು ನಮ್ಮ ಹತ್ತಿರ ಬಿಡುವ ಮನಸಾಗಲಿಲ್ಲ ಆಕೆ ಅವನನ್ನು ಕರೆದುಕೊಂಡು ಹೊರಟೆ ಬಿಟ್ಟಳು..ಮತ್ತೆ ಅಳು..ಬೇಸರ,,ಆಗ ನೀನು ಆರೇಳು ತಿಂಗಳಿನವ,ಮತ್ತೆ ನಾನು ಅಕ್ಹಿಲಕ್ಕ,ನಿನ್ನ ಹಿಂದೆ ಮುಂದೆ ಓಡಾಡುವುದು ಶುರುವಾಗಿತ್ತು,ರಗಳೆಯಿಲ್ಲದ ಮಗು ನೀನು...ಎಪ್ರಿಲ್ ಮೇ  ಎಂದಿನಂತೆ ನಮ್ಮ ಅಜ್ಜಿ ಮನೇ ಟೆಂಟ್ ,,ನಿನ್ನನು ಎರಡು ತಿಂಗಳು ನೋಡಿರಲಿಲ್ಲ ಆ ದಿನ ಮೇ ೭-೧೯೯೬  ಅಮ್ಮ ನಿನ್ನ ಕರೆದುಕೊಂಡು ಅಜ್ಜಿಮನೆಗೆ ಬಂದಿದ್ದಳು ನೀನು ನಡೆಯ ತೊಡಗಿದ್ದೆ.ನನ್ನ ಬಾಯಿಂದ ಮಾತು ಹೊರಡಿರಲಿಲ್ಲ ,ಕಣ್ಣು ಖುಷಿಯಿಂದ ಹನಿಯಾಡಿತ್ತು,

ನಿನಗೆ ಅದೆಷ್ಟು ಬಾರಿ ಕೃಷ್ಣನ ವೇಷ ಹಾಕಿ ತೊಂದರೆ ಕೊಟ್ಟಿಲ್ಲ ಹೇಳು..??ನಿನಗೆ ಹುಡುಗಿ ಅಂಗಿ ಹಾಕಿ ಚಂದ ನೋಡುವುದು ,ಜುಟ್ಟು ಕಟ್ಟಿ ಹೂ ಮೂಡಿಸುವುದು ಎಂದರೆ   ನನಗೆ ಇನ್ನಿಲ್ಲದ ಉತ್ಸಾಹ , ಆದರೆ ನನಗೂ ನಿನಗೂ  ಧೀರ್ಘ ೧೨ ವರುಷಗಳ ಅಂತರವಿದೆಯಲ್ಲ ????ಅದೇ  ಕಾರಣದಿಂದ  ನಿನ್ನೊಂದಿಗೆ ನನಗಿಂತ ತಂಗಿಯೇ ಹೆಚ್ಹು ಆಪ್ತತೆ ಸಾಧಿಸಿದ್ದಳು,ನಿಮ್ಮಿಬ್ಬರ ಜಗಳವು ಅಷ್ಟೇ ಚಂದ,ಸಖ್ಯ ಇನ್ನು ಚಂದ .

ಅದು ನಿನ್ನ ಶಾಲಾ ಜೀವನದ ಮೊದಲದಿನ  ಅಖಿಳಕ್ಕನ ಜೊತೆಗೆ ಉಮೇದಿನಿಂದ  ಹೊರಡುತ್ತಿರುವಾಗಲೇ ಸರಗೊಲಿಗೆ ಎಡವಿ ಗಾಯ ಮಾಡಿಕೊಂಡಿದ್ದೆ..ಅಳುತ್ತ ಶಾಲೆಗೆ ಹೋಗಿದ್ದೆ ,ಆ ನಂತರ ದಿನ ಕಳೆಯುತ್ತಾ ಟೀಚರ್ ,ಸರ್ ಯಾರನ್ನೂ ನೀ ಅಳಿಸದೆ ಬಿಟ್ಟಿಲ್ಲ ಅನಿಸುತ್ತೆ ,ನನಗೆ ಮಗ ಹುಟ್ಟುವ ತನಕ ನಾವಿಬ್ಬರು ಒಂದು ಹಂತದಲ್ಲಿ ವೈರಿಗಳಂತೆ ಇದ್ದೆವು,ನೀ ನನ್ನ ರಾಕ್ಷಸಿ ಅಂತ ಕರೆದಿದ್ದೆ ನೆನಪಿದೆಯ ??
೨೦೦೮-೨೦೧೦ ಈ ಎರಡು ವರ್ಷಗಳು ನಮ್ಮಿಬ್ಬರ ಬಾಂಧವ್ಯದ ಇನ್ನೊಂದು ಪುಟವನ್ನು ತೆರೆದಿತ್ತವು.

ನೀನು ನನ್ನ ಬದುಕಲ್ಲಿ ನಾ ಕಂಡ ಆದ್ಭುತ ಟೀಚರ್ ಗಳಲ್ಲಿ ಒಬ್ಬ ,ನಿನ್ನಲ್ಲಿ ಅದೆಂಥ ನಿರಕ್ಷರಿಗೂ ಎಲ್ಲವನ್ನು ಕಲಿಸಿಬಿಡುವ ತಾಕತ್ತಿದೆ. ಪತಿದೇವನ ಯಾವುದೊ ಮಾತನ್ನು ಮನಸಿಗೆ ತಾಗಿಸಿಕೊಂಡು ನನ್ನ ಮಗು ಮೂರು ತಿಂಗಳಿರುವಾಗ ನನಗೆ ಸೈಕಲ್ ಕಲಿಯಬೇಕೆಂಬ ಹಠ ಬಂದಿತ್ತು ನೀನು ಕ್ವಿಂಟಾಲ್ ಗೆ  ಒಂದಷ್ಟು ಕಡಿಮೆ ಇದ್ದ ನನ್ನ ತೂಕವನ್ನು ಅದ್ಹೇಗೆ ಬ್ಯಾಲೆನ್ಸ್ ಮಾಡಿ ನನಗೆ ಸೈಕಲ್ ಕಲಿಸಿದ್ದೆ,
ಇವತ್ತು ನಾನಿಲ್ಲಿ ಕುಳಿತು ನಿನ್ನ ಕುರಿತು ಹೀಗೆ ಟೈಪ್ ಮಾಡುತ್ತಿದ್ದೀನಿ ಅಂದರೆ ಅದರ ಶ್ರೇಯ ನಿನಗೆ,ಕಂಪ್ಯೂಟರ್ ಚಿತ್ರದಲ್ಲಷ್ಟೇ  ನೋಡಿದ್ದ ನಂಗೆ ೯ ನೇ ಕ್ಲಾಸಿನಲ್ಲಿದ್ದ ನೀನು ಅದೆಷ್ಟು ಚಂದ ಮಾಡಿ ಕಲಿಸಿದ್ದೆ, ಅಚಾನಕ್ಕಾಗಿ ವಿದೇಶದ ದಾರಿ ಹಿಡಿದ ಇವರ ಮತ್ತು ನನ್ನ ಮೇಲ್ ಗಳ ಜಿಗಿದಾಟ ನಡೆದಿದ್ದು ನಿನ್ನಿಂದಲೇ ಅಲ್ಲವೇ??ನೀ ಸೃಷ್ಟಿಸಿ ಕೊಟ್ಟ   ಇಮೇಲ್ ವಿಳಾಸ ಎಂಬ ಸೆಂಟಿ ನನಗೆ.

ಇದೆಲ್ಲ ಬಿಡು..ಮೊನ್ನೆ ಮೊನ್ನೆ ಊರಿಗೆ ಬಂದಾಗ ಏನಾದರು ಎಂಜಾಯ್ ಮಾಡಿದ್ದೇನೆ ಎಂದಾದರೆ ಅದು ನಿನ್ನ ಮಾತುಗಳನ್ನ,ಅದೆಲ್ಲಿಂದ ಕಲಿತೆ ಇಷ್ಟು ಮಾತಾಡೋದನ್ನ??ಮಾತಾಡಿದರೆ ನಗು ಉಕ್ಕುತ್ತೆ, ಅಕ್ಕನ ಮದುವೆಯಲ್ಲಿ ಅದೆಷ್ಟು ಓಡಾಡಿದೆ ನೀನು..ಪಕ್ಕ ತಮ್ಮ  ಬಿಡು..(ನನ್ನ ಮದುವೆಯಲ್ಲಿ ನಿನಗೆ ಮದುಮಗಳ ತಮ್ಮ ಎಂಬ ಗೌರವ ಸಿಕ್ಕಿಲ್ಲ ಎಂಬ ಆಪಾದನೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿರಬೇಕಲ್ಲ??)..ನಿನ್ನ ಮತ್ತೊಂದಿಷ್ಟು ತರಲೆಗಳ ಬಗ್ಗೆ ಬರೋಯೋಣ ಅಂದು ಕೊಂಡೆ..ಬೇಡ ನಿನಗೂ ಒಂದು ಇಮೇಜಿದೆ ಕಾಲೇಜ್ ನಲ್ಲಿ ಸುಖಾ ಸುಮ್ಮನೆ ಯಾಕ ಅದನ್ನು ಹಾಳ್ ಮಾಡಲಿ???

ಮುಖ್ಯ ವಿಷಯ ಹೇಳುತ್ತೇನೆ ಕೇಳು.ಮೊನ್ನೆ ಮೊಪೆಡ್ಡಿನ ಮೇಲೆ ನಾನು ನೀನು ಹೋಗುವಾಗ ನೀನೊಂದು ಮಾತು ಹೇಳಿದಿಯಲ್ಲ,''ಅಮಿತಕ್ಕ ಇನ್ನು ೩ ವರ್ಷ  ನನ್ನ ಡಿಗ್ರಿ ಮುಗಿಯುತ್ತಲೇ ನನಗೆ ಜಾಬ್ ಸಿಕ್ಕ ಕಡೆ ಪಪ್ಪ ಅಮ್ಮ ನನ್ನು ನನ್ನೊಂದಿಗೆ ಕರೆದೊಯ್ಯುತ್ತೇನೆ ,ನೀನು ಬೇಜಾರ್ ಮಾಡಬೇಡ ಅಂತ ,ಯಾಕೋ ಕಣ್ಣು ತುಂಬಿ ಬಂತು ಮುಂದೆ ಏನೋ ಹೇಗೋ ದೇವರೇ ಬಲ್ಲ ಆ ಕ್ಷಣದ ಮಾತು ಇದೆಯಲ್ಲ ನನ್ನ ಎಷ್ಟೋ ಕಿರಿ ಕಿರಿ ,ಟೆನ್ಶನ್ ದೂರ ಮಾಡಿತ್ತು,ಅದೆಷ್ಟು ಬೇಗ ಬೆಳೆದೆ ನೀನು,,,ಅಡಿಕೆ ಮರದಂತೆ, ನಿನ್ನ ಬುದ್ದಿ ಕೂಡ..ಮನಸ್ಸು ಕೂಡ. ಸ್ವಸ್ಥ ಮನಸ್ಸು ಬುದ್ಧಿ ಹಾಗೆ ಇರಲಿ ಎಂಬುದೊಂದೇ ಆ ದೇವರಲ್ಲಿ ಪ್ರಾರ್ಥನೆ.

೧೬ ಮುಗಿಯಿತು..ಅಲ್ವೇ???ರಾತ್ರಿ ೧೨ ಕ್ಕೆ ಫೋನ್ ಮಾಡೋಣ ಅಂದುಕೊಂಡೆ.ಬೇಡ ಇದನ್ನೇ ಕಳಿಸಿದರಾಯಿತು ಅಂದು ಬರೆಯುತ್ತ ಕುಳಿತೆ..ನಿನ್ನ ಜನುಮದಿನಕ್ಕೆ ಬೇರೆನು ಗಿಫ್ಟ್ ಕೊಡಲಾಗುತ್ತಿಲ್ಲ ,ಹಾರೈಕೆಯ ಹೊರತು ,ನೆಕ್ಷ್ತ ಟೈಮ್ ಮೋಸ್ಟ್ಲಿ ನಿನ್ನ ಬರ್ತ್ ಡೇ ಗೆ ನಾನು ಅಲ್ಲಿರುತ್ತೆನೇ ಎಂಬ ಆಶಯ ನನ್ನದು..

ಹ್ಯಾಪಿ ಬರ್ತ್ ಡೇ .ಡಿಯರ್ ತಮ್ಮ ..
ನೀನು ಕಂಡ ಕನಸೆಲ್ಲ ನನಸಾಗಲಿ.
ಲವ್ ಯು 
ನಿನ್ನ 
ಅಮಿತಕ್ಕ 

2 comments:

  1. ಎಂತಹ ಸುಂದರ ಬಾಂಧವ್ಯ ಅಮಿತಾ ...ಇದನ್ನ ಓದ್ತಾ ಓದ್ತಾ ನಂಗೆ ನನ್ನ ತಮ್ಮ ತಂಗಿಯರೆಲ್ಲ ನೆನಪಿಗೆ ಬರ್ತಿದ್ದಾರೆ . ಈಗ್ಲೇ ಅವರಿಗೆ ಫೋನ್ ಮಾಡೋದಿಕ್ಕೆ ಹೊರಟೇ...

    ReplyDelete
  2. ಅಕ್ಕ ಅಂದ್ರೆ ಅಮ್ಮ ತಾನೆ? ಸುಂದರ ಬರಹ ಅಮಿತ. ತಮ್ಮನಿಗೆ ನನ್ನದೂ ಶುಭಾಶಯಗಳು-ಶುಭ ಹಾರೈಕೆಗಳು...
    ಮಾಲತಿ ಅಕ್ಕ

    ReplyDelete