ನಾನು ಇದ್ದದ್ದೇ ಹಾಗೆ ವೈದೇಹಿಯವರ ಕವನದ "ಅಡುಗೆ ಮನೆ ಹುಡುಗಿಯಂತೆ" , ನನ್ನ ಊರಿನಲ್ಲಿ ಅಪರೂಪಕ್ಕೆ ಆಕಾಶದಲ್ಲಿ ವಿಮಾನದ ಸದ್ದು ಮೋಡದೊಳಗಿಂದ ಕೇಳಿಸಿದರೆ ಸಾಕು ಅದನ್ನು ನೋಡಲು ಅಂಗಳಕ್ಕೆ ಓಡಿಬಂದು ಅದಕ್ಕೆ ಕೈಬೀಸಿ ಅದು ಮರೆಯಾಗುವವರೆಗೂ ಕಣ್ಣು ತುಟಿ ಅರಳಿಸಿ ಬಾನಿಗೆ ಮೊಗಮಾಡಿ ನಿಲ್ಲುವ ಖುಷಿ, ಮೊದಲ ಬಾರಿ ವಿಮಾನ ಹತ್ತಿ ಈ ದೇಶಕ್ಕೆ ಬರುವಾಗ ಇರಲೇ ಇಲ್ಲ ಎಂದರೆ ನೀವು ನಂಬಲೇ ಬೇಕು.
ನೆಲದ ಪ್ರೀತಿ ಹಚ್ಚಿಕೊಂಡ ನನ್ನಂಥ ಅದೆಷ್ಟೋ ಅನಿವಾಸಿ ಭಾರತೀಯರು ಪ್ರತಿಬಾರಿ ಭಾರತಕ್ಕೆ ಬಂದು ಮರಳುವಾಗ ವರುಷಕ್ಕಾಗುವಷ್ಟು ಭಾವತಂತುಗಳನ್ನ ಹೊತ್ತು ತರುತ್ತಾರೆ , ನಾನು ನನ್ನ ಸ್ನೇಹಿತೆಯರು ಸೇರಿ ಇದಕ್ಕೆ 'ಇಂಧನ/fuel" ಎಂದು ಕರೆಯುವುದುಂಟು. ಯಾಕೆಂದರೆ ಇಲ್ಲಿ, ನಮ್ಮದಲ್ಲದ ನೆಲದಲ್ಲಿ ಬದುಕಬಂಡಿ ನಡೆಸಲು ಈ ಇಂಧನ ವೇ ಜೀವಾಳ.
ಆದರೂ ಒಮ್ಮೊಮ್ಮೆ ತಾಯಿನಾಡು ಅದೆಷ್ಟು ನೆನಪಾಗುತ್ತದೆಂದರೆ ಮನಸು ಪುಟ್ಟ ಮಗುವಿನಂತಾಗಿ ಅಮ್ಮನ ಮಡಿಲನ್ನು ಬಯಸುತ್ತದೆ. ಇಲ್ಲಿ ಇರುವ ಎಷ್ಟೋ ಅಪರಿಚಿತ ಮುಖಗಳಲ್ಲಿ , ನಮ್ಮ ಆಪ್ತರ , ಮನಸಿಗೆ ಹತ್ತಿರದವರ ಛಾಯೆ ಅರಸುತ್ತದೆ, ಕೆಲವೊಮ್ಮೆ ಅಂಥ ಚಿಕ್ಕ ಖುಷಿ ದಕ್ಕಿಯೂ ಬಿಡುತ್ತದೆ.
ಬೆಲ್ಫಾಸ್ಟ್ ಅನ್ನುವ ಈ ಪುಟ್ಟ, ಸುಂದರ ನಗರಿಯಲ್ಲಿ ನನಗೆ ನನ್ನೂರಿನ ಯಾರನ್ನೋ ನೆನಪಿಸುವ ಹಲವಾರು ಮುಖ ಮನಸುಗಳಿವೆ, ಅಂಥವರಲ್ಲಿ ಒಬ್ಬ ಈ ಯೊಹಾನ್ ,
ಯುರೋಪಿಯನ್ ದೇಶಗಳಲ್ಲಿ ರಸ್ತೆಗಳ ಅಕ್ಕ ಪಕ್ಕ ಹಾಡು ಹೇಳುತ್ತಾ , ಗಿಟಾರ್ ನುಡಿಸುತ್ತ ,ಕಲಾಪ್ರದರ್ಶನ ಮಾಡುತ್ತಾ ಕೆಲವರು ನಿಂತಿರುತ್ತಾರೆ ಇಂಥವರನ್ನ ''ಬಸ್ಕರ್'' ಎಂದು ಕರೆಯುತ್ತಾರೆ, ಇವರು ಹಾಡುವುದನ್ನ ನಿಂತು ಕೇಳಿ ಚಪ್ಪಾಳೆ ತಟ್ಟಿ ಹಣ ಕೊಡುವ ಮಂದಿಯೂ ಇದ್ದಾರೆ,
ಒಮ್ಮೆ ಇರುವ ಕಲಾವಿದ ಮತ್ತೊಮ್ಮೆ ಅದೇ ಜಾಗೆಯಲ್ಲಿ ನಿಮಗೆ ಕಾಣ ಸಿಗುವುದಿಲ್ಲ, ಹಣ ಬಯಸುತ್ತಾರಾದರೂ ಇವರು ಭಿಕ್ಷುಕರಲ್ಲ, ಭಿಕ್ಷೆ ಬೇಡುವುದು ಇಲ್ಲಿ ಅಪರಾಧ ಆದರೆ "ಬಸ್ಕಿಂಗ್" ಮಾನ್ಯ! ಹದಿಹರೆಯದ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೂ ಬಸ್ಕಿಂಗ್ ಮಾಡುವುದು ಇಲ್ಲಿ ಸರ್ವೇ ಸಾಮಾನ್ಯ , ಕ್ರಿಸ್ಮಸ್ , ಈಸ್ಟರ್ , ಬೇಸಿಗೆ ರಜಗಳಲ್ಲಿ ಇದು ಇನ್ನೂ ಜಾಸ್ತಿ. ಸಂಗೀತಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇದು ಒಳ್ಳೆ ವೇದಿಕೆಯನ್ನೂ ಕಲ್ಪಿಸಿಕೊಡುತ್ತದೆ.
ಆಗ ನಾನು ಬೆಲ್ಫಾಸ್ಟ್ ಗೆ ಬಂದ ಹೊಸತು ನನಗೆ ಈ ಬಸ್ಕಿಂಗ್ ಮಾಡುವವರನ್ನ ನೋಡುವುದೆಂದರೆ ಅತೀ ಖುಷಿಯ ಸಂಗತಿಯಾಗಿತ್ತು, ಆ ದಿನ ಮಗುವನ್ನು ಶಾಲೆಗೆ ಬಿಟ್ಟು ಅಂಗಡಿಗೆ ಏನೋ ತರಲು ಹೋದವಳಿಗೆ ಕಣ್ಣಿಗೆ ಬಿದ್ದವನೇ ಈ ಯೊಹಾನ್ , ಕೈಯ್ಯಲ್ಲಿ ಅದೆಂಥದೋ ವಿಚಿತ್ರ ಇನ್ಸ್ಟ್ರುಮೆಂಟ್ ಹಿಡಿದು ಕೊಂಡು ಒಂದೇ ಸಮ ಅದೇನೋ ಟ್ಯೂನ್ ನುಡಿಸುತ್ತಿದ್ದ ,
ನನ್ನ ಅಜ್ಜನ ವಯಸ್ಸಿರಬಹುದು , ಎದುರಿಗೊಂದು ಗೊಂಬೆ ಮತ್ತು ಚಿಕ್ಕ ಪ್ಲಾಸ್ಟಿಕ್ ಬುಟ್ಟಿ ಇಟ್ಟುಕೊಂಡು ಹೋಗು ಬರುವವರಿಗೆಲ್ಲ ಚಂದದ ನಗು ಒಂದನ್ನ ಕೊಡುತ್ತಿದ್ದ , ಅವನ ಆ ಬುಟ್ಟಿಗೆ ನಾಣ್ಯ ಎಸೆದವರಿಗೆ hornviolin ನಾದ ಹೊಮ್ಮಿಸುತ್ತಲೇ ತಲೆಬಾಗಿ ಗೌರವ ಸಲ್ಲಿಸುತ್ತಿದ್ದ , ಅದ್ಯಾಕೋ ಯೋಹಾನ್ ನಗು ನನಗೆ ತುಂಬಾ ಹಿತವೆನಿಸಿತು , ತುಂಬು ನಗು, ನಿಷ್ಕಲ್ಮಶ ನಗು,
ಆ ದಿನದಿಂದ ನಾನು ಸಿಟಿ ಸೆಂಟರ್ ಹೋದಾಗಲೆಲ್ಲ, ಯೊಹಾನ್ ಇದ್ದಲ್ಲಿ ಹೋಗಿ ಅವನ ನಗುಮುಖ ನೋಡಿ ಅವನು ಆ "ವಾಯಲಿನಪಿಟ್" (ವಾಯಲೀನ್+ಟ್ರಂಪೆಟ್) ಲ್ಲಿ ನುಡಿಸುವ ರಷ್ಯನ್ ಹೇಂಗೇರಿಯನ್ ಜನಪದ ಸಂಗೀತದ ತುಣುಕು ಕೇಳಿ ಬಂದರೆ ಅದೇನೋ ಹಿತ , ಕೋಟ್ ಕಿಸೆಯಲಿ ಸಂಗ್ರಹವಾದ ಪೆನ್ನಿಗಳನ್ನು ಅವನ ಬುಟ್ಟಿಗೆ ಹಾಕಿ ಅವನಿಂದ ಆ ಮುಗುಳ್ನಗೆ ಪಡೆಯುವುದೆಂದರೆ ನನಗೆ ಅತೀ ಇಷ್ಟದ ಕೆಲಸವಾಗಿಬಿಟ್ಟಿದೆ.
ಯೊಹಾನ್ ಕಳೆದ ೮ ವರ್ಷಗಳಿಂದ ಒಂದೇ ಜಾಗೆಯಲ್ಲಿ ನಿಂತು ಬಸ್ಕಿಂಗ್ ಮಾಡುತ್ತಿದ್ದಾನೆ , ತನ್ನನು ಅಂತಾರಾಷ್ಟ್ರೀಯ ಸಂಗೀತ ಕಲಾವಿದ ಎಂದು ಕರೆದುಕೊಳ್ಳುವ ಇವನು ಅದಕ್ಕೆ ಹೇಳುವ ಕಥೆಯೂ ಸ್ವಾರಸ್ಯಕರ, ನಾನು ಮೂಲತಃ ರುಮೇನಿಯಾದವನು ಇಲ್ಲಿಗೆ ಬರುವ ಮೊದಲು ಯುಗೋಸ್ಲಾವಾಕಿಯ , ಹಂಗೇರಿ , ರಷ್ಯಾ ಗಳಲ್ಲಿ ಹೀಗೆ ಕಳೆದ ೩೦ ವರುಷಗಳಿಂದ ನಾನೇ ಸೃಷ್ಟಿಸಿದ ಈ ವಾದ್ಯ ನುಡಿಸಿದ್ದೇನೆ , ಜನರನ್ನ ರಂಜಿಸಿದ್ದೇನೆ, ಅದಕ್ಕೆ ನಾನು ವಿಶ್ವಕಲಾವಿದ ಎಂದು ತನ್ನ ಆ ನಗುವಿನಿಂದ ಎದುರಿನವರ ಮುಖದಲ್ಲೂ ನಗು ಹೊಮ್ಮಿಸುತ್ತಾನೆ .
ಬೆಳಿಗ್ಗೆ ಒಂಬತ್ತಕ್ಕೆ ಬಂದು ತನ್ನ ಕೆಲಸ ಶುರು ಮಾಡಿ ಸಂಜೆ ಆರಕ್ಕೆ ಮನೆಗೆ ಮರಳುತ್ತಾನೆ , ಇತ್ತೀಚಿಗೆ ಜನ ಸಾಮಾನ್ಯರೇ ಅವನನ್ನ '' Belfast music icon'' ಎಂದು ಕರೆಯುವದನ್ನ ನೋಡಿದರೆ ಅವನು ಅದೆಷ್ಟು ಜನರ ಪ್ರೀತಿ ಪಡೆದಿದ್ದಾನೆ ಎಂಬುದನ್ನ ವಿವರಿಸಿ ಹೇಳಬೇಕಿಲ್ಲ. ಒಂದು ದಿನ ಅವ ಆ ಜಾಗೆಯಲ್ಲಿ ಇಲ್ಲ ಎಂದರೆ ಮನಸಿಗೆ ಕಸಿವಿಸಿ ಆಗುವುದು ಸುಳ್ಳಲ್ಲ.
ಅವನನ್ನು ನೋಡಿದಾಗಲೆಲ್ಲ ನನಗೆ ನೆನಪಾಗುವುದು ಧಾರವಾಡ ದ ಗಜಾನನ ಮಹಾಲೆ (ಮಹಾಲೆ ಮಾಮ್) ಅವರ ನಗುವು ಹೀಗೆ ಇತ್ತು , ನನ್ನಂಥ ಅದೆಷ್ಟು ಚಿಕ್ಕ ಪುಟ್ಟ ಕಲಾವಿದರಿಗೆ ಸಹಾಯ ಮಾಡಿಲ್ಲ ಅವರು, ಹಾರ್ಮೋನಿಯಂ ಸಾಥಿಗೆ ಬಂದರೂ ಒಮ್ಮೆಯೂ ಸಂಭಾವನೆ ಸ್ವೀಕರಿಸಿದವರಲ್ಲ , ''ಮುಂದ ನೀ ದೊಡ್ಡ ಹೆಸರು ಮಾಡ್ತಿಯಲ್ಲ ಆವಾಗ ಕೊಡು ಈಗ ಬ್ಯಾಡ '' ಅಂತ ಹೇಳಿ ತಲೆ ನೇವರಿಸಿ ಆಶೀರ್ವಾದ ಮಾಡುತ್ತಿದ್ದರು. ಗಾಯನದಲ್ಲಿ ತಪ್ಪುಗಳಾದರೆ ಕಾರ್ಯಕ್ರಮದ ನಂತರ ಬಂದು ಮೆತ್ತಗಿನ ಧ್ವನಿಯಲ್ಲಿ ಅದನ್ನು ತಿದ್ದಿ ಹೇಳಿಕೊಡುತ್ತಿದ್ದರು. ಎದುರು ಬದುರು ಸಿಕ್ಕಾಗ "ಆರಾಮ್ ಅದೀರಲ್ಲ" ಎಂದು ಮೆತ್ತಗೆ ಕೇಳಿ.. "ಆರಂ ಇರ್ರಿ" ಅನ್ನುವಾಗಿನ ಆ ಮಂದಸ್ಮಿತ ಇನ್ನೂ ಕಣ್ಣ ಮುಂದೇ ಇದೆ.
ಯೊಹಾನ್ ಬೆಲ್ಫಾಸ್ಟ್ ಎಂದು ಹುಡುಕಿದರೆ ಅವನ ಹೆಸರಿನಲ್ಲಿ ಗೂಗಲ್ ಪೇಜ್ ತೆರೆದುಕೊಳ್ಳುತ್ತದೆ , ಮಹಾಲೆ ಮಾಮ ನನ್ನ ಮನಸಿನ ಪುಟಗಳಲ್ಲಿ....
No comments:
Post a Comment