Wednesday, February 17, 2021

ಪ್ರೇಮಕ್ಕೊಂದು ಬೀಗ ಮುದ್ರೆ!




ನೀವು ವಿದೇಶ ಪ್ರಯಾಣ ಮಾಡಿದ್ದಾದರೆ , ಅಲ್ಲಿನ ಸೇತುವೆಗಳನ್ನ ಗಮನಿಸಿದ್ದೀರಾ ? ವಿಶೇಷ ವಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ , ಎಲ್ಲ ಸೇತುವೆಗಳಮೇಲೆ ತೂಗಿ ಬಿದ್ದ ಗೊಂಚು  ಗೊಂಚಲು ಬಣ್ಣ ಬಣ್ಣದ ವಿವಿಧ ಆಕಾರದ ಬೀಗಗಳು ? ಚಳಿ, ಮಳೆ, ಗಾಳಿ, ಹಿಮ, ಎಲ್ಲವನ್ನು ಸೇತುವೆ ಯೊಂದಿಗೆ ತಾವು ಭರಿಸಿ ಅಲ್ಲೇ ತುಕ್ಕು ಹಿಡಿದು ಯಾವುದೋ ವೃತ ತೊಟ್ಟ ಸಂಯಮಿಯಂತೆ , ಏನಿವು ? ಯಾಕೆ ಹೀಗೆ ? ಇವನ್ಯಾಕೆ ಲವ್ ಲಾಕ್ ಅಂತಾರೆ? ಹೀಗೊಂದಿಷ್ಟು ಪ್ರಶ್ನೆಗಳು ನನಗೂ ಹುಟ್ಟಿದ್ದವು , ಮೊದಲ ಬಾರಿ ನಾನು ಇಂಥದೇ ಒಂದು ಸೇತುವೆ ಮೇಲೆ ನಡೆದಾಡುತ್ತಾ ಆ ಕೀಲಿಗಳ ಮೇಲೆ ಬರೆದಿರುವ ಜೋಡು ಹೆಸರುಗಳನ್ನ ಓದುತ್ತ ಹೋದಾಗ. ಉತ್ತರ ಹುಡುಕುತ್ತ ಹೋದಾಗಲೇ ತಿಳಿದಿದ್ದು   ಆ ಸಣ್ಣ  ಯಕಶ್ಚಿತ್ ಬೀಗಗಳು ಪ್ರಾಚೀನ , ಬೃಹದ್, ಘಟ್ಟಿ  ಸೇತುವೆಗಳನ್ನು ಅಲುಗಿಸಿದ ಕಥೆ ಗಳು.  
 
ಅದು ೧೯೧೪ ರ ಸಮಯ ಜಗತ್ತು ಮೊದಲ ಮಹಾಯುದ್ಧದ ಬೇಗೆಯಲ್ಲಿ ನರಳುತಿತ್ತು, ಯುರೋಪಿನಾದ್ಯಂತ ಒಂದು ರೀತಿಯ ಅಸ್ಥಿರತೆ ಮನೆ ಮಾಡಿದ್ದ ಸಮಯವದು , 
ದ್ವೇಷದ ದಳ್ಳುರಿಯಲ್ಲಿ ರಾಷ್ಟ್ರ ರಾಷ್ಟ್ರಗಳು ಕಿತ್ತಾಡುತ್ತಿರೆ , ಅದೇ ಸಂದರ್ಭದಲ್ಲಿ ಪ್ರೀತಿಯ ಸಂಕೇತವೆಂಬಂತೆ , ಆಶಾವಾದಕ್ಕೆ ಸಾಕ್ಷಿಹೇಳುವಂಥ ಒಂದು ಸಂಪ್ರದಾಯ ಶುರುವಾಗಿದ್ದು ಮಾತ್ರ ಮೆತ್ತನೆ ಇತಿಹಾಸದ ಪುಟ ಸೇರಿಹೋಯಿತು , ಅದರ ಮೇಲಿದ್ದ ಯುದ್ಧದ ಕಹಿ ನೆನಪುಗಳ ಹಾಳೆಗಳು ಅದೆಷ್ಟು ಭಾರವಾಗಿದ್ದವೆಂದರೆ  ಈ ಮನ ಹಿಂಡುವ ಪ್ರೇಮಕಥೆ ಕಥೆ ಅದು ಹುಟ್ಟು ಹಾಕಿದ ವಿಲಕ್ಷಣ ಆಚರಣೆಯ ಹಿನ್ನೆಲೆ, ಐತಿಹ್ಯವಾಗಿ ಜಗತ್ತಿನೆಲ್ಲೆಡೆಯ ಜನರಿಗೆ ತಿಳಿಯಲು ಮತ್ತೆ ೫೦ ವರ್ಷಗಳೇ ಹಿಡಿದವು. 

ಸರ್ಬಿಯಾ ದೇಶದಲ್ಲಿ ಯುದ್ಧದ ಬಿಸಿ ಜೋರಾಗಿತ್ತು , ಆದರೆ ಯುವ ಹೃದಯಗಳು ಮಾತ್ರ ಇಹ ಪರಡಾ ದ ಪರಿವಿಲ್ಲದೆ  ಪ್ರೇಮದ ಗುಂಗಿನಲ್ಲಿ ಕಳೆದು ಹೋಗಿದ್ದವು ಅಂಥದೇ ಒಂದು ಜೋಡಿ ರೆಲ್ಯಾ ಎಂಬ ಸೈನಿಕ  ಮತ್ತು ನ್ಯಾಡಾ ಎಂಬ ಸುಂದರ ಸುಮನಸ್ಸಿನ ಹುಡುಗಿಯದು. ಇಬ್ಬರು ಮಾಡಿಕೊಳ್ಳದ ಆಣೆ ಪ್ರಮಾಣಗಳಿಲ್ಲ , ಕಾಣದ ಕನಸಿಲ್ಲ ದಿನಾಲು ಆ ಊರಿನಲ್ಲಿದ್ದ ಸೇತುವೆಯ ಬಳಿ ಭೆಟ್ಟಿ ಆಗಿ ತಮ್ಮ ಭಾವಿ ಜೀವನದ ಕನಸನ್ನು ಕಾಣುತ್ತಿದ್ದರು. ಅವರ ಪ್ರೇಮ ಸ್ವರಗಳು ರಾಗವಾಗಿ ಹೊಮ್ಮುವ ಮೊದಲೇ ರೇಲ್ಯಾ ನಿಗೆ ಸೈನ್ಯದ ಕರೆಬಂತು , ಯುದ್ಧಭೂಮಿಗೆ ಹೊರಡಲೇ ಬೇಕಾಯಿತು, ಈ ವಿಷಯ ಕೇಳಿ ತಪ್ತಳಾದ ನ್ಯಾಡಾ ಅವನನ್ನು ಯುದ್ಧಕ್ಕೆ ಹೋಗದಿರುವಂತೆ ವಿನಂತಿಸುತ್ತಾಳೆ , ಗೋಗರೆಯುತ್ತಾಳೆ ದುಃಖಿಸುತ್ತಾಳೆ, ತಾವು ಕಂಡ ಕನಸುಗಳೆಲ್ಲ ನನಸು ಮಾಡಲು ತಾನು ಯುದ್ಧದಿಂದ ಮರಳಿ ಬಂದು ಆಕೆಯೊಂದಿಗೆ ಬಾಳಿ ಬದುಕುವೆನೆಂದು ಭಾಷೆ ಕೊಟ್ಟ ರೇಲ್ಯಾ ಹೊರಟು  ಹೋಗುತ್ತಾನೆ. 

ಆತನ ಹಾದಿ ಕಾಯುತ್ತ ನ್ಯಾಡಾ ದಿನ ಆ ಸೇತುವೆ ಮೇಲೆ ಕುಳಿತು ತಾವು ಜೊತೆಯಾಗಿ ಕಳೆದ ಗಳಿಗೆಗಳನೆನೆದು ತಮ್ಮ ಮುಂದಿನ ದಿನಗಳ ಬಗ್ಗೆ ಕನಸ ಹೆಣೆಯುತ್ತಾ ದಿನ ದೂಡುತ್ತಾಳೆ, ಆದರೆ ರೆಲ್ಯಾ ಮಾತ್ರ ಮರಳುವುದಿಲ್ಲ , ಆಮೇಲೆ ಅವನ ಜೊತೆಗಾರರಿಂದ ರೇಲ್ಯಾ ಬೇರೆ ಒಂದು ಹುಡುಗಿಯನ್ನು ಮದುವೆಯಾಗಿ ಸಂಸಾರ ಹೂಡಿರುವುದು ನ್ಯಾಡಾ ಗೆ ತಿಳಿಯುತ್ತದೆ ಅದೇ ನೋವಿನಲ್ಲಿ ಆಕೆ ಕೊನೆಯುಸಿರೆಳೆಯುತ್ತಾಳೆ. ಊರಿನ ಎಲ್ಲ ಯುವತಿಯರು ಆ ಸಮಯದಲ್ಲಿ ನ್ಯಾಡಾ ಮತ್ತು ರೆಲ್ಯಾ ಭೇಟಿ ಆಗುತ್ತಿದ್ದ ಆ ಸೇತುವೆಗೆ , ಗೌರವ ಪೂರ್ವಕವಾಗಿ, ತಮ್ಮ ಪ್ರೇಮ ಬಾಂಧವ್ಯಗಳು ಸುಖಾಂತ್ಯ ಕಾಣುವಂತೆ ಪ್ರಾರ್ಥಿಸಿ , ಒಂದು ಬೀಗದ ಮೇಲೆ ಪ್ರೇಮಿಗಳ ಹೆಸರನ್ನು ಬರೆದು ಸೇತುವೆಗೆ ತೂಗಿಬಿಟ್ಟು ಬೀಗದ ಕೈಯ್ಯನ್ನು ನದಿನೀರಲ್ಲಿ ಎಸೆಯುವ ಸಂಪ್ರದಾಯ ಶುರು ಮಾಡಿದರು. ಆ ಸೇತುವೆಯನ್ನು ಪ್ರೇಮ ಸೇತುವೆ ''Bridge of hope'' ಎಂದು ಕರೆಯಲಾಯಿತು. 
 ಡೇಸಾಂಕ ಮಾಕ್ಸಿಮೋವಿಕ್ ಎಂಬ ಪ್ರಸಿದ್ಧ ಸರ್ಬಿಯನ್ ಕವಯಿತ್ರಿ  ''prayer of love'' ಎನ್ನುವ ತನ್ನ ಪದ್ಯದಲ್ಲಿ ಈ ಘಟನೆಯನ್ನು ವಿವರಿಸುವ ತನಕ ಬಹುಜನರಿಗೆ ಇದು ಅಜ್ಞಾತವಾಗಿಯೇ ಉಳಿದಿತ್ತು. ಆ ನಂತರ ಈ ರೂಡಿ ಯುರೋಪಿನಾದ್ಯಂತ ಹರಡುತ್ತಾ ಹೋಯಿತು, ಆದರೂ ಈ ರೂಡಿ ಹುಟ್ಟಿಕೊಂಡ ಮೂಲದ ಬಗ್ಗೆ ಹಲವು ಕಥೆಗಳಿವೆ.  ೫೦೦ ವರ್ಷದ ಹಿಂದಿನಕತೆಗಳನ್ನು ಕೂಡ ಉಲ್ಲೇಖಿಸುತ್ತಾರೆ.    ಕೆಲವೊಬ್ಬರು ಇದು ಯುರೋಪಿಗೆ ಪೌರಾತ್ಯ  ದೇಶಗಳಿಂದ ಬಂತು ಎಂತಲೂ ಹೇಳುತ್ತಾರೆ , ಮೂಲ ಏನೇ ಇರಲಿ ,ಆದರೆ ಈ ಪುಟ್ಟ ಬೀಗ ಮುದ್ರೆ ಸೇತುವೆಗೆ ಜೋತು ಬಿಡುವ, ಮೊದಲ ನೋಟಕ್ಕೆ ನಿರುಪದ್ರವಿ ಅನಿಸುವ ಈ ಸಂಪ್ರದಾಯ ಹಲವು ಸರಕಾರಗಳ, ಪಾಲಿಗೆ ದುಃಸ್ವಪ್ನ ವಾದದ್ದು ಮಾತ್ರ ಸತ್ಯ. 

ಇಟಲಿಯ ಫ್ಲಾರೆನ್ಸ್ ನಗರದಲ್ಲಿರುವ ೧೩೪೫ ರಲ್ಲಿ ಕಟ್ಟಲಾಗಿದೆ ಎನ್ನಲಾದ ponte veccio ಎಂಬ ಪ್ರಸಿದ್ಧ ಸೇತುವೆಗೆ ಪ್ರೇಮಿಗಳು ತೂಗಿ ಬಿಟ್ಟ ಬೀಗಗಳ ಸಂಖ್ಯೆ ಅದೆಷ್ಟಿತ್ತೆಂದರೆ ಆ ಭಾರಕ್ಕೆ ಸೇತುವೆ ಬಾಗಲು ಶುರುವಾಯಿತು, ನಂತರ ಸುಮಾರು ಐದುವರೆ ಸಾವಿರಗಳಷ್ಟು ಬೀಗಗಳನ್ನು ಸೇತುವೆಯಿಂದ  ತೆಗೆಸಲಾಯಿತು. ಐರ್ಲೆಂಡ್ ದೇಶದಲ್ಲಿರುವ ಡಬ್ಲಿನ್ ನಗರದ  ಹಾ'ಪೆನ್ನಿ ಸೇತುವೆಯ ಕತೆಯೂ ಹೀಗೆ , ೨೦೧೨ರಲ್ಲಿ ಈ ಬೀಗಗಳನ್ನು ನಗರ ಪಾಲಿಕೆಯವರು ತೆಗೆದು ಹಾಕಿದರು. 

ಎಲ್ಲಕ್ಕಿಂತ ಹೆಚ್ಚು ಬೀಗ ಬಿಗಿಸಿಕೊಂಡ ಸೇತುವೆ ಪ್ಯಾರಿಸ್ ನ The Pont des Arts ಎನ್ನುವ ಐತಿಹಾಸಿಕ , ವಿಶಿಷ್ಟ ವಿನ್ಯಾಸದ ಈ ಸೇತುವೆಗೆ ಪ್ರೇಮಿಗಳು ಜಡಿದದ್ದು  ಸುಮಾರು ೭೦,೦೦೦ ಬೀಗಗಳು. ಸೇತುವೆ ಈ ಭಾರ ಇನ್ನು ತಾಳದು ಎನಿಸಿದಾಗ ಅಲ್ಲಿನ ಸರಕಾರ ಅವನ್ನು ತೆಗೆಸುವ ಆದೇಶ ನೀಡಿತ್ತು. ೨೦೧೯ ರ ನಂತರ ಪ್ರೇಮಿಗಲು ಇಲ್ಲಿ ಬೀಗ ಮುದ್ರೆ ಹಾಕುವುದನ್ನು ಸರಕಾರ ನಿಷೇಧಿಸಿದೆ ಆದರೂ ನಿಮಗೆ ಅಲ್ಲಿ ಇಲ್ಲಿ ಪ್ರೇಮಿಗಳ ಹೆಸರಿನೊಂದಿಗೆ ಚಂದದ ಪ್ಯಾಡ್ ಲಾಕ್ ಗಳು ಕಾಣಸಿಗುತ್ತವೆ. 
ಈ ಸಮಸ್ಯೆಗೆ ಒಳ್ಳೆಯ ಪರಿಹಾರ ಕಂಡುಕೊಂಡಿದ್ದು ಮಾತ್ರ ಮಾಸ್ಕೋ ನಗರ, ಇಲ್ಲಿನ ಆಡಳಿತಮಂಡಳಿ ಸೇತುವೆಯ ಮುಂಭಾಗದಲ್ಲಿ ಕಬ್ಬಿಣದ ಮರದ ಆಕೃತಿಯನ್ನು ನಿಲ್ಲಿಸಿ ಅದಕ್ಕೆ ಬೀಗಗಳನ್ನು ಹಾಕಲು ವಿನಂತಿಸಿತ್ತು , ಈಗ ಅಂತಹ  ಮರಗಳ ಸಂಖ್ಯೆ ಹೆಚ್ಚಾಗಿದೆ. 

ಯಾರೋ ಶುರು ಮಾಡಿದ ಒಂದು ಆಚರಣೆಯನ್ನು ಅದರ ಹಿನ್ನೆಲೆಯೂ ಗೊತ್ತಿರದೆ ನಾವೂ ಪಾಲಿಸುತ್ತೇವೆ , ನಮಗೆ ಅದು ಟ್ರೆಂಡ್  ಆಗಿಯೂ ಮನ ಸೆಳೆದಿರಬಹುದು, ಅಥವಾ ಆಶಾವಾದ, ನಂಬಿಕೆ ಜೊತೆಗೆ ನಮ್ಮ ಪ್ರೀತಿಯು ಸದಾ ನಳ ನಳಿಸುತ್ತಿರಲಿ ಎಂಬ ಭಾವವೂ ಇರಬಹುದು. ಒಟ್ಟಿನಲ್ಲಿ ಪ್ರೀತಿ ಎಂಬ ಮಾಯೆಯನ್ನು ಪುಟ್ಟ ಬೀಗದಲ್ಲಿ ಬಂಧಿಸಿ ಕೀಲಿಕೈಯ್ಯನ್ನು ಚಲನಶೀಲ ನದಿಯ ಒಡಲಿಗೆ ಎಸೆದು ನಮ್ಮನು ಯಾರೂ ಅಗಲಿಸಲಾರರು ಎಂಬ ಮನದ ದನಿ ಒದಗಿಸುವ ಆ ನಿರಮ್ಮಳ ಭಾವವೇ ಇದರ ಒಳಗುಟ್ಟು. 

1 comment:

  1. ಚೆಂದದ ಲೇಖನ! ತುಂಬಾ ಮಾಹಿತಿ ಕಲೆಹಾಕಿದ್ದೀರಾ! ಅಮರ ಪ್ರೇಮ ಪ್ರತೀಕವಾದ ಬೀಗಗಳು ಅವು ತಂದಿಟ್ಟ ಫಜೀತಿಗಳು ಕಥೆಯನ್ನು ಸ್ವಾರಸ್ಯಗೊಳಿಸಿದವು. ಸಂತೋಷವಾಯಿತು.

    ಅಂದ ಹಾಗೆ ನಾನು ಸಹ ಹೊಸದಾಗಿ ಬ್ಲಾಗ್ ಬರೆಯಲು ಶುರು ಮಾಡಿರುವೆ... ದಯವಿಟ್ಟು ಒಮ್ಮೆ ಭೇಟಿ ನೀಡಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ. https://himapaata.blogspot.com/

    ReplyDelete