Friday, October 22, 2021

ನಾರಾಯಣಿ

ನಾವು ದಿನಾಲು ಹಲವಾರು ಜನರನ್ನು ಭೇಟಿ ಆಗುತ್ತೇವೆ. ಕೆಲವು ತೀರಾ ವ್ಯವಹಾರಿಕ ಭೇಟಿಗಳು ಮತ್ತಷ್ಟು ನಗು ವಿನಿಮಯದ ಭೇಟಿಗಳಾದರೆ , ಒಂದಷ್ಟು ತಪ್ಪಿಸಿಕೊಳ್ಳಲು ನೆವ ಹುಡುಕುವಂತೆ ಮಾಡುವ ನೀರಸ ಭೇಟಿಗಳು. ಆದರೆ ಕೆಲವೊಂದು ಮಾತ್ರ ಜೀವನ ಪೂರ್ತಿ ನೆನಪುಳಿದು ಬದುಕಿಗೆ ಕನ್ನಡಿ ತೋರಿ ನಮ್ಮನ್ನು ತಿದ್ದಿ ತೀಡಲು ಅನುವು ಮಾಡುವ , ಬದುಕಿಗೆ ಹೊಸ ಹೊಳವನ್ನು ಕೊಡುವ ಭೇಟಿಗಳು. ಯಾರೂ ಯಾರನ್ನೂ ಸುಮ್ಮನೆ ಭೇಟಿ ಯಾಗುವುದಿಲ್ಲ ಎಲ್ಲದಕ್ಕೂ ಒಂದು ಅನೂಹ್ಯ ಕಾರಣ ಇದ್ದೆ ಇರುತ್ತದೆ. ನಮಗೆ ಸಿಗುವ ಕೆಲವರು ನಮ್ಮಿಂದ ಒಳ್ಳೆಯದನ್ನು ಕಲಿತರೆ , ಹಲವಾರು ಮಂದಿ ನಮಗೆ ಸಿಹಿ ಬುತ್ತಿಯನ್ನು ಕಳಿಸಿ ಉಣಿಸಿಯೂ ಹೋಗುತ್ತಾರೆ. ಸ್ವಲ್ಪ ಮಂದಿ ಕಹಿ ಕಾಡೆ ಕುಡುಸುವುದು ಉಂಟು. ಹೊಸದನ್ನೇನೋ ಹುಡುಕಾಡುವ ಚಿಕ್ಕ ಚಿಕ್ಕ ಘಟನೆಗಳಲ್ಲಿ ಜೀವನಪಾಠ ಹುಡುಕುವ ನನ್ನಂಥ ಅನೇಕರಿಗೆ ದೂರದ ಊರುಗಳಲ್ಲಿ ಅಥವಾ ಹೊರದೇಶದಲ್ಲಿ ಭೇಟಿಯಾಗುವ ವಿಲಕ್ಷಣ ವ್ಯಕ್ತಿಗಳು ಅವರ ಕಥೆಗಳು ಅವರು ನಡೆದು ಬಂದ ಹಾದಿ ನಮಗೆ ಅದೆಂಥದೋ ಹುರುಪು ಸಂಭ್ರಮ ಆಶ್ಚರ್ಯ ತರುತ್ತವೆ. ಅಂತಹದೇ ಒಂದು ಆಕಸ್ಮಿಕ ವಿಶೇಷ ಭೇಟಿಯ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಆ ದಿನ ಒಂದು ಮೆಸ್ಸೇಜ್ ಬಂತು , 'ನನ್ನ ಮಕ್ಕಳಿಗೆ ಜೊತೆಗೆ ನನಗೂ ಸಂಗೀತ ಕಲಿಯಬೇಕಿದೆ, ನೀವು ಕಲಿಸುತ್ತೀರಾ ?'' ಹೌದು, ಅಂತ ಅಂದಮೇಲೆ ಒಂದಷ್ಟು ಮೆಸೇಜ್ ವಿನಿಮಯವಾದವು, ಮತ್ತು ತರಗತಿಯ ದಿನಾಂಕ ಸಮಯ ನಿಗದಿಯಾದ ಮೇಲೆ , ಆಕೆಯ ಹೆಸರು ಕೇಳಿದೆ , ''ನಾರಾಯಣಿ'' ಎಂದಳು ಮನದಲ್ಲಿ ಈಕೆ ಆಂಧ್ರಮೂಲದ ಮಹಿಳೆ ಇರಬೇಕು ಅನ್ನುವ ಭಾವ ಬಿಟ್ಟರೆ ಇನ್ನಾವ ಕುತೂಹಲ ಇರಲಿಲ್ಲ ಆಕೆಯ ತರಗತಿ ನಿಗದಿ ಆದ ದಿನ ಸಂಜೆ ಕರೆಗಂಟೆ ಆದಾಗ, ಸಂಜೆ ನಸುಗತ್ತಲು ಆವರಿಸಿತ್ತು ಬಾಗಿಲಿನ ಗಾಜಿನ ಮೂಲಕ ಕಂಡಿದ್ದು ಎರಡು ಕೆಂಚುಗೂದಲ ಮಕ್ಕಳು ಮತ್ತವರ ಅಮ್ಮ. ''we are here here for music class'' ಎಂದರು. ನಾರಾಯಣಿ ?ಎಂದು ಪ್ರಶ್ನಾರ್ಥಕವಾಗಿ ಕೇಳಿದೆ , ಹೌದು ಎಂದು ನಗುತ್ತ ಉತ್ತರಿಸಿದಳು. ಒಳ ಬರುತ್ತಲೇ ಇಬ್ಬರೂ ಮಕ್ಕಳಿಗೆ ನನ್ನ ಕಾಲಿಗೆ ನಮಸ್ಕರಿಸಲು ತಿಳಿಸಿದಳು , ಆಕೆಯು ವಂದಿಸಿ ತರಗತಿ ಗೆ ನಾವು ಸಿದ್ಧ ಎಂದಳು. ಆದರೆ ನನಗೆ ಇದೆಲ್ಲ ಅಚ್ಚರಿ , ಕುತೂಹಲ ಮೂಡಿಸಿತ್ತು ಭಾರತೀಯ ಮೂಲದ ಮಕ್ಕಳು ಬಂದಾಗಲೂ ಚಪ್ಪಲಿ ಬಿಟ್ಟು ಒಳಬನ್ನಿ ಅನ್ನುವ ಮಾತನ್ನು ನಾನೇ ಹೇಳಬೇಕಾದ ಸಂಧರ್ಭಗಳನ್ನ ಎದುರಿಸಿದ್ದ ನನಗೆ , ತಲ ಬಾಗಿಲಲ್ಲೇ ಅವರು ಗುರು ಎಂದು ನಮಸ್ಕರಿಸಿ ಗೌರವಿಸಿದ ರೀತಿ ನನ್ನನು ಪೂರ್ತಿ ಆವರಿಸಿತ್ತು . ಅವರು ಸಿದ್ಧರಿದ್ದರು ಇದನ್ನು ನಿರೀಕ್ಷಿಸಿರದ ನಾನು ಇನ್ನು ಹಾಗೆ ಬೆಪ್ಪಾಗಿ ನಿಂತಿದ್ದೆ . ಹಾಗೆ ಆ ದಿನ ಶುರುವಾದ ನಮ್ಮ ಸಂಗೀತ ತರಗತಿ ಗಳು ಕೆಲ ತಿಂಗಳು ಸಾಗಿತು, ದಿನ ಕಳೆದಂತೆ ನಾರಾಯಣಿ ಮತ್ತು ಅವರ ಕುಟುಂಬದ ಬಗ್ಗೆ ತಿಳಿದು ಕೊಳ್ಳುವ ಸದವಾಕಾಶವು ದೊರೆಯಿತು. ಭಾರತದ ಬಗ್ಗೆ ಆಕೆಗಿರುವ ಭಕ್ತಿ ,ಪ್ರೀತಿ , ಅಕ್ಕರೆ ಅದನ್ನು ಆಕೆಯ ಮಾತಿನಲ್ಲೇ ಕೇಳಬೇಕು, ಭಾರತದಲ್ಲಿರುವ ಎಲ್ಲರೂ ಯಾವುದೋ ಒಂದು ಶಕ್ತಿಯನ್ನು ಪ್ರಾರ್ಥಿಸುತ್ತಾರೆ, ಆ ಪ್ರಾರ್ಥನೆಯ ಶಕ್ತಿಯ ನಿರಂತರತೆಯೇ ಆ ದೇಶಕ್ಕೆ ಅಷ್ಟು ವಿಶೇಷತೆ ಕೊಟ್ಟಿದೆ ಅಂದು ತನ್ಮಯಳಾಗುವ ನಾರಾಯಣಿ ಮೂಲತಃ ಅರ್ಜೆಂಟೀನಾ ದೇಶದವಳು. ಆಕೆಯ ಅಪ್ಪ ಅಮ್ಮನಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅತೀವ ಪ್ರೀತಿ ಭಾರತದ ಬಗ್ಗೆ ಬರೀ ಓದಿ ಗೊತ್ತಿದ್ದ ಅವರು ಅವರ ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಟ್ಟರು. ನಾರಾಯಣಿ ಸುಮಾರು ೧೦ ವರ್ಷದವಳಿರುವಾಗ ಆಕೆಗೆ ಹುಷಾರು ತಪ್ಪಿತು ಆ ಕಾರಣದಿಂದ ಆಕೆಯ ಶಾಲೆ ಅರ್ಧಕ್ಕೆ ನಿಂತಿತು , ಆದರೆ ಆಕೆಯ ತಾಯಿ ಶಾಲೆಯ ಅನುಮತಿ ಪಡೆದು ಆಕೆಗೆ ಮನೆಯಲ್ಲೇ ಪಾಠ ಕಲಿಸಲು ಆರಂಭಿಸಿದರು, ಜೊತೆಗೆ ಆಕೆಯ ಕಾಯಿಲೆಗೆ ಆಯುರ್ವೇದ ಮತ್ತು ಭಾರತೀಯ ಮನೆಮದ್ದುಗಳ ಮೊರೆ ಹೊಕ್ಕರು. ದಿನ ಕಳೆಯುತ್ತಾ ನಾರಾಯಣಿ ಅರೋಗ್ಯ ಸುಧಾರಿಸಿತು , ಶಾಲೆಯಲ್ಲಿ ಒಂದು ವರ್ಷದಲ್ಲಿ ಕಲಿಯುವ ಪಠ್ಯಕ್ರಮವನ್ನ ಆಕೆ ಆರೇ ತಿಂಗಳಲ್ಲಿ ಕಲಿತಿದ್ದಳು , ಇದನ್ನು ಗಮನಿಸಿದ ತಂದೆ ತಾಯಿ ಆಕೆಗೆ ಹೋಂ ಸ್ಕೂಲಿಂಗ್ ಮಾದರಿಯಲ್ಲೇ ಕಲಿಕೆಯನ್ನು ಮುಂದುವರಿಸಿ, ಆಗ ಅರ್ಜೆಂಟೀನಾದಲ್ಲಿ ಶುರುವಾದ ಗುರುಕುಲ ಮಾದರಿಯ ಶಾಲೆಯಲ್ಲಿ ವೇದ , ಯೋಗ , ಉಪಾಸನಾ ವಿಧಿಗಳನ್ನ , ಕೃಷಿ ತೋಟಗಾರಿಕೆಗಳಂಥ ಜೀವನಾವಶ್ಯಕ ಕಲಿಕೆಯನ್ನು ಕಲಿಯಲು ಅನುವು ಮಾಡಿಕೊಟ್ಟರು. ಕೆಲ ವರುಷಗಳಲ್ಲಿ ನಾರಾಯಣಿ ತನ್ನ ಆರ್ಕಿಟೆಕ್ಚರ್ ಪದವಿ ಮುಗಿಸಿ ಯುರೋಪ್ ಗೆ ಬಂದಳು , ಅಲ್ಲಿಯೇ ಆಕೆ ತನ್ನ ಜೀವನ ಸಂಗಾತಿಯನ್ನು ಭೆಟ್ಟಿಯಾದಳು. ಆತ ಸ್ಪ್ಯಾನಿಷ್ ಹುಡುಗ ಆದರೆ ಅವನೂ ಸನಾತನ ಧರ್ಮದ ಆರಾಧಕ, ಪೂಜಕ, ಅತಿ ಕಠಿಣ ಪಾವನ ಚಾರಣ ಎನಿಸಿರುವ ಗಂಡಕಿ ಯಾತ್ರೆ ಯನ್ನು ಮಾಡಿ ಬಂದಿದ್ದ ,ನಿತ್ಯ ಪೂಜೆ ಅನುಷ್ಠಾನ ಮಾಡುವ ಇವರನ್ನು ದೇವರೇ ನಿಂತು ಜೊತೆ ಮಾಡಿದ ಎಂದರೆ ಅದು ಉತ್ಪ್ರೇಕ್ಷೆಯಾಗದು ಭಾರತೀಯ ಸಂಪ್ರದಾಯದಂತೆ ಮದುವೆಯಾದ ಈ ಜೋಡಿ ,ಮೊದಲ ಮಗುವಿನ ಬಗ್ಗೆ ಆಲೋಚನೆ ಬರುತ್ತಲೇ ಚರಕ ಸಂಹಿತೆಯನ್ನು ಓದಲು ಶುರು ಮಾಡಿದ್ದರಂತೆ. ಅದೆಷ್ಟು ಶ್ರೀಮಂತ ದೇಶ ಭಾರತ ಬಗೆದಷ್ಟು ಜ್ಞಾನ ,ನಮ್ಮ ಮಗು ಭಾರತದಲ್ಲೇ ಹುಟ್ಟಬೇಕು ಎಂದು ನಮ್ಮ ಬಯಕೆಯನ್ನು ಶ್ರೀ ಹರಿ ಪೂರ್ಣ ಮಾಡಿದ ನಮ್ಮ ಮಗಳು ಮಥುರೆಯಲ್ಲೇ ಹುಟ್ಟಿದಳು ಅದಕ್ಕೆ ರಾಧಿಕಾ ಎಂದು ಹೆಸರಿಟ್ಟು, ನಂತರ ಹುಟ್ಟಿದ ಮಗನಿಗೆ ಗೋಪಿ ಹೆಸರಿಟ್ಟೆವು ಎಂದು ಧನ್ಯತೆಯಿಂದ ನೆನೆಯುತ್ತಾಳೆ. ಈ ಕುಟುಂಬದ ಇನ್ನೊಂದು ವಿಶಿಷ್ಟತೆ ಎಂದರೆ ಇವರು ಪೂಜಿಸುವ ಸಾಲಿಗ್ರಾಮಗಳು , ೨೭೫ !! ನಾನು ಈ ಅಷ್ಟು ಸಂಖ್ಯೆಯ ಒಟ್ಟಿಗೆ ಈ ವರೆಗೂ ನೋಡಿರಲಿಲ್ಲ, ಸಾಲಿಗ್ರಾಮಗಳನ್ನು ನಮ್ಮಲ್ಲಿ ಹಾಗೆ ಮನೆಗಳಲ್ಲಿ ಇಟ್ಟುಕೊಳ್ಳುವುದು ತೀರಾ ಅಪರೂಪ, ಅದಕ್ಕೆ ತುಂಬಾ ಕಟ್ಟುನಿಟ್ಟಿನ ಪೂಜೆ ಆಗಬೇಕಂತೆ ನೀವು ಹೇಗೆ ಧೈರ್ಯ ಮಾಡಿದಿರಿ ಎಂಬ ನನ್ನ ಪೆದ್ದು ಪ್ರಶ್ನೆಗೆ ನಸುನಗುತ್ತಾ '' ದೇವರ ಕುರಿತು ಭೀತಿಯ ಬದಲು ಪ್ರೀತಿ ಹುಟ್ಟಿದ ದಿನ ನಮ್ಮ ಇಡೀ ಪ್ರಪಂಚ ಸ್ವರ್ಗವಾಗುತ್ತದೆ, ಆತನ ಬಗ್ಗೆ ಭಯ ಯಾಕೆ ? ಆತನೇ ಅಲ್ಲವೇ ನಮ್ಮನ್ನ ಸೃಷ್ಟಿಸಿದವನು , ನಮ್ಮ ಕರ್ಮ ಕೈಂಕರ್ಯಗಳು ಸರಿಯಾಗಿದ್ದರೆ ಮುಗೀತು ಇನ್ನಾರಿಗೂ ನಾವು ಹೆದರುವ ಅಗತ್ಯವಿಲ್ಲ . ಮಗಳು ಹುಟ್ಟುವಾಗ ನಮ್ಮ ಹತ್ತಿರ ೫೦೦ ಸಾಲಿಗ್ರಾಮಗಳಿದ್ದವು , ನಾವು ಎಲ್ಲಿ ಹೋದರೂ ಎಲ್ಲೆಡೆ ಅವನ್ನು ಕರೆದುಕೊಂಡು ಹೋಗುತ್ತಿದ್ದೆವು . ಆಮೇಲೆ ಮತ್ತಷ್ಟು ಬಂದವು ಕೆಲವಷ್ಟನ್ನು ಸ್ನೇಹಿತರಿಗೆ ಕೊಟ್ಟೆವು , ಅದು ಸಾಲಿಗ್ರಾಮದ ಇಚ್ಛೆ "ತಾನು ಯಾರ ಮನೆಗೆ ಹೋಗಬೇಕು" ಅಂತ ಅದೇ ನಿರ್ಧರಿಸುತ್ತದೆ , ನಾವು ಅದರ ಸೇವಕರು ಅಷ್ಟೇ! ನಮ್ಮ ಮನೆಯಲ್ಲಿ ಎಲ್ಲ ಸಾಲಿಗ್ರಾಮಕ್ಕೆ ಮಕ್ಕಳು ಪೂಜೆ ಮಾಡ್ತಾರೆ ಅದಕ್ಕೆ ಲಾಲಿ ಹಾಡುತ್ತಾರೆ ಅವಗಳೊಂದಿಗೆ ಇಬ್ಬರೂ ಮಾತಾಡುತ್ತಾರೆ. ನಾವು ದಿನ ಮಾಡುವ ಅಡುಗೆಯನ್ನೇ ನೈವೇದ್ಯ ಮಾಡುತ್ತೇವೇ ಅಂದರೆ ದೊಡ್ಡಸ್ತಿಕೆ ಆಗುತ್ತದೆ ಅವು ನಮ್ಮಿಂದ ಸೇವೆ ಮಾಡಿಸಿಕೊಳ್ಳುತ್ತಿವೆ. ಅಷ್ಟಕ್ಕೂ ನಾನು ಅಂದರೆ ಯಾರು..ಅವನದೇ ಒಂದು ಅಂಶ ಅಲ್ಲವೇ ? ಎಂದು ನಾರಾಯಣಿ ಪ್ರಶ್ನಿಸುತ್ತಾಳೆ. ನಾರಾಯಣಿಯ ಇಬ್ಬರೂ ಮಕ್ಕಳು ಹೋಂ ಸ್ಕೂಲಿಂಗ್ ನಲ್ಲೆ ಕಲಿಯುತ್ತಾರೆ. ನಾನು ಶಾಲೆಗೆ ಕಲಿಸುವ ಪ್ರಯತ್ನ ಮಾಡಿದೆ, ಆದರೆ ಅವರಿಗೆ ಅದು ಇಷ್ಟವಾಗಲಿಲ್ಲ , ಮತ್ತೆ ನೊರ್ದರ್ನ್ ಐರ್ಲಾಂಡ್ ನ ಶಿಕ್ಷಣ ಇಲಾಖೆ ಹೋಮ್ ಸ್ಕೂಲಿಂಗ್ ಗೆ ತುಂಬಾ ಸಹಾಯ ಮಾಡುತ್ತದೆ , ಹೀಗಾಗಿ ಮಕ್ಕಳು ಯಾವುದೇ ಒತ್ತಡಕ್ಕೆ ಬೀಳದೆ ಕಲಿಯುವಿಕೆ ಜೊತೆಗೆ ಈಜು , ಇನ್ನಿತರ ಕಲಿಕೆಯನ್ನು , ಸಂಗೀತ ಭಾರತೀಯ ನೃತ್ಯವನ್ನ ಕೂಡ ಕಲಿಯುತ್ತಿದ್ದಾರೆ ಕಲಿಯುವಿಕೆಗೆ ಅಂತ್ಯವೆಲ್ಲಿ ನಿಮಗೆ ಆಸಕ್ತಿ ಇರಬೇಕು ಅಷ್ಟೇ ಮತ್ತೆ ಇಲ್ಲಿ ರಜೆ ಇರುವುದಿಲ್ಲ ಮಕ್ಕಳ ಕಲಿಕೆ ನಿರಂತರ ಒಂದಲ್ಲ ಒಂದು ಅವರ ಮೆಚ್ಚಿನ ವಿಷಯಗಳನ್ನು ಕಲಿಯುತ್ತಲೇ ಇರುತ್ತಾರೆ. ಸ್ಪ್ಯಾನಿಶ ನಮ್ಮ ಮಾತೃಭಾಷೆ , ಜೊತೆಗೆ ನಾವು ದೇವನಾಗರಿಯನ್ನು ಕಲಿಸುತ್ತಿದ್ದೇವೆ . ಇಂಗ್ಲಿಷ್ ಕೂಡ ಮಾತಾಡುತ್ತಾರೆ. ಭಾರತ ದಲ್ಲಿ ನಮಗೆ ರಕ್ತ ಸಂಬಂಧಿಗಳು ಯಾರು ಇಲ್ಲ , ಆದರೆ ಪ್ರತಿ ರಜೆಗೂ ನಾವು ಭಾರತಕ್ಕೆ ಹೋಗುತ್ತೇವೆ ವಸುಧೈವ ಕುಟುಂಬಕಂ ಎಂಬುದನ್ನ ನಂಬಿದ್ದೇನೆ , ಹಳ್ಳಿ ಗಳಲ್ಲಿ ತಿಂಗಳುಗಳ ಕಾಲ ಉಳಿಯುತ್ತೇವೆ, ನಾನು ಬಹಳಷ್ಟು ಅನಿವಾಸಿ ಭಾರತೀಯ ಮಕ್ಕಳೊಂದಿಗೆ ಪಾಲಕರೊಂದಿಗೆ ಮಾತಾಡಿದ್ದೇನೆ , ಅವರಿಗೆ ಭಾರತ ಎಂದರೆ ಪ್ರವಾಸಿ ತಾಣ , ಬಿಸಿಲು ಸೆಖೆ ಧಗೆ, ಸ್ವಚ್ಛತೆ ಇಲ್ಲದ ಊರು/ದೇಶ , ಎಂಬಂಥ ಭಾವನೆಗಳೇ, ನನ್ನ ಮಕ್ಕಳಿಗೆ ಭಾರತ ಎಂದರೆ ಪ್ರಾಣ ಪ್ರತಿ ಸಲ ವಾಪಸ ಬರುವಾಗ ಕಣ್ಣೀರು ಹಾಕುತ್ತ ಫ್ಲೈಟ್ ಹತ್ತುತ್ತಾರೆ. ಭಾರತದ ಮಹತ್ತನ್ನು ನೀವ್ಯಾಕೆ ನಿಮ್ಮ ಮಕ್ಕಳಿಗೆ ಸರಿಯಾಗಿ ತಿಳಿಸಿಕೊಡುತ್ತಿಲ್ಲ? ಎಂಬ ಪ್ರಶ್ನೆಯನ್ನ ವಿನಮ್ರವಾಗಿ ಕೇಳುತ್ತಾಳೆ. ವೃತ್ತಿ ಮತ್ತು ಮಕ್ಕಳ ಶಿಕ್ಷಣ ಜೊತೆಗೆ ಈ ವೃತನಿಷ್ಠ ಬದುಕನ್ನು ನಡೆಸುವುದು ಕಠಿಣ ಅನಿಸುವುದಿಲ್ಲವಾ ? ಎಂದು ಕೇಳಿದ್ದಕ್ಕೆ, ಕಷ್ಟ , ಹಾ ದೇಹಕ್ಕೆ ಅನಿಸುತ್ತದೆ ಕೆಲವೊಮ್ಮೆ! ಆದರೆ ಆತ್ಮಕ್ಕೆ ಸದಾ ನೆಮ್ಮದಿಯೇ. ಬೆಳಿಗ್ಗೆ ಮಕ್ಕಳ ಕಲಿಕೆಗೆ ನಾನು ಸಮಯ ವ್ಯಯಿಸಲೇ ಬೇಕು. ಆದ್ದರಿಂದ ನನ್ನ ವೃತ್ತಿ ಸಂಬಂಧಿ ಕೆಲಸಗಳನ್ನು ತಡರಾತ್ರಿ ಮಾಡುತ್ತೇನೆ ಕೆಲವರು ಸಿನಿಮಾ ಅಥವಾ ಸಿರೀಸ್ ನೋಡಲು ನಿದ್ದೆ ಗೆಡುವುದಿಲ್ಲವಾ ? ಹಾಗೆ ಅಂದುಕೊಳ್ಳಿ. ಮಕ್ಕಳಿಗೆ ಮುಂಜಾನೆ ಬೇಗನೆ ಏಳುವ ಅಭ್ಯಾಸವಾಗಿದೆ. ಅವರು ನಿತ್ಯದ ಪೂಜೆ , ಮಂತ್ರ , ಅವರ ಕಲಿಕೆಯ ಆಯಾ ದಿನದ ಅಭ್ಯಾಸ ಶುರು ಮಾಡುತ್ತಾರೆ. ಮತ್ತು ಇದೆಲ್ಲ ನಾವು ಖುಷಿ ಯಿಂದ ಮಾಡುತ್ತೇವೆ ಯಾರನ್ನೋ ಮೆಚ್ಚಿಸಲೋ, ಯಾವುದೋ ಕ್ರಾಂತಿ ಮಾಡಲೋಸುಗವಲ್ಲ ಇದು ನಾವು ಆಯ್ದುಕೊಂಡ ಪುರಾತನ ಭಾರತೀಯರು ಜೀವಿಸಿ ಸಿದ್ಧಿಸಿಕೊಂಡ ಜೀವನ ಪದ್ಧತಿ. ಆದರೆ ಆಧುನಿಕ ಜೀವನ ಕ್ಕೆ ತಕ್ಕಂತೆ ಕೆಲ ಬದಲಾವಣೆಗಳು ಬೇಕಾಗುತ್ತವೆ. ಆದರೆ ಎಲ್ಲದ್ದಕ್ಕೂ ಆ ಮೂಲ ಮತ್ತು ನಮಗೆ ದಾರಿ ದೀಪ ಎನ್ನುತ್ತಾಳೆ ನಮ್ಮ ನಾರಾಯಣಿ. ಒಮ್ಮೆ ನೃತ್ಯ ರೂಪಕದಲ್ಲಿ ಕೃಷ್ಣನ ವೇಷ ತೊಟ್ಟ ಆಕೆಯ ಕಪ್ಪು ಬಿಳುಪು ಚಿತ್ರವನ್ನ ತೆಗೆದಿದ್ದೆ. ನನಗೆ ಅಂದು ನಿಜಕ್ಕೂ ಕೃಷ್ಣ ಕಾಣಿಸಿದ್ದ. -ಅಮಿತಾ ರವಿಕಿರಣ್

No comments:

Post a Comment