Tuesday, February 8, 2022

ಆತ್ಮ ಸಾಂಗತ್ಯ

ಶತ ಶತಮಾನಗಳಿಂದ, ಈ ಬಿಡುವಿರದ ಯಾವಾಗಲೂ ನಾಳೆಯಬಗ್ಗೆಯೇ ಯೋಚಿಸುವ ಪ್ರಸ್ತುತ ಕಾಲಘಟ್ಟದ ವರೆಗೂ, ಮನುಷ್ಯ ಅಂದು ಇಂದು ಮುಂದೂ ಎಂಬಂತೆ ಪ್ರೀತಿಯ ಹಂಬಲವನ್ನು ಎಗ್ಗಿಲ್ಲದೆ ಉಳಿಸಿಕೊಂಡು ಬಂದಿದ್ದಾನೆ, ಪ್ರೀತಿ ಎಂಬುದೇ ಹಾಗೆ ನಮ್ಮ ನೋವುಗಳಿಗೆ ಮುಲಾಮು ಜೊತೆಗೆ ಅಷ್ಟೇ ನೋವು ಕೊಡುವ ಅದೃಶ್ಯ ಆಯುಧವೂ ಕೂಡ.


ಪ್ರೀತಿಗೆ ಹಲವು ಮುಖ ಹೆತ್ತವರ ವಾತ್ಸಲ್ಯ ಭರಿತ ಪ್ರೀತಿ, ಒಡಹುಟ್ಟಿದವರ ಅಕ್ಕರೆಯ ಪ್ರೀತಿ, ಕಾಳಜಿ ಸ್ನೇಹದಿಂದ ಒಸರುವ ಗೆಳೆತನದ ಪ್ರೀತಿ, ನಮ್ಮ ಮೇಲೆ ನಂಬಿಕೆ ಇಟ್ಟವರು ಕೊಡುವ ಗೌರವ ಪೂರ್ವಕ ಪ್ರೀತಿ. ಜೀವನದುದ್ದಕ್ಕೂ ಜೊತೆಗಿರುತ್ತೇವೆ ಎಂದು ಸಪ್ತಪದಿ ತುಳಿದ ಗಂಡು ಹೆಣ್ಣಿನ ನಡುವಿನ ದಾಂಪತ್ಯ ಪ್ರೀತಿ, ಅಪ್ಪ ಅಮ್ಮನ ಮೇಲೆ ಮಕ್ಕಳಿಗಿರುವ ಹಕ್ಕಿನ ಪ್ರೀತಿ, ಗುರು ಶಿಷ್ಯರ ನಡುವಿನ ದಿವ್ಯ ಪ್ರೀತಿ, ದೇವರು ಎಂಬ ಪರಿಕಲ್ಪನೆಯ ಜೊತೆಗೇ ಹುಟ್ಟಿಕೊಳ್ಳುವ ಸಮರ್ಪಣಾ ಭಾವದ ಪ್ರೀತಿ, ಈ ಪಟ್ಟಿ ಮುಗಿಯುವಂಥದ್ದಲ್ಲ. 



ಆದರೂ ಎಲ್ಲಕ್ಕಿಂತ ಹೆಚ್ಚು ಚರ್ಚಿತವಾಗಿ, ಪುಸ್ತಕ ಗ್ರಂಥ , ಪುರಾಣಗಳನ್ನು ಬರೆಸಿಕೊಂಡದ್ದು ಮಾತ್ರ ಈ ಗಂಡು ಹೆಣ್ಣಿನ ನಡುವಿನ ಅದಮ್ಯ ಪ್ರೀತಿ. ಪ್ರೀತಿಯ ಪರಿಭಾಷೆಯನ್ನು ಒಂದೇ ವ್ಯಾಖ್ಯೆಯಲ್ಲಿ ಹಿಡಿದಿಡಲಾಗದಿದ್ದರೂ ಗಂಡು ಹೆಣ್ಣಿನ ನಡುವೆ ಹುಟ್ಟುವ ದೈಹಿಕ ಆಕರ್ಷಣೆ ಪ್ರೀತಿಯ ಬಹುಮುಖ್ಯ ಕಾರಣಗಳಲ್ಲೊಂದು.

ನೋಟ , ಮಾತುಗಳಿಂದ ಶುರುವಾದ ಪ್ರೀತಿ, ಮಿಲನದ  ಮಾಧುರ್ಯವನ್ನು ಮೇಳೈಸಿಕೊಂಡು ಪರಿಪೂರ್ಣವಾಗಲು ಹಾತೊರೆಯುತ್ತದೆ. ಹಲವಾರು ಬಾರಿ ದೈಹಿಕ ಕಾಂಕ್ಷೆಗಳಿಗೆ ಹುಟ್ಟಿಕೊಂಡ ನಾಯಿಕೊಡೆಯಂಥ ಪ್ರೀತಿಯ ಅಪಭ್ರಂಶಗಳು ಈ ಜಗದಲ್ಲಿ ಲೆಕ್ಕವಿಲ್ಲದಷ್ಟು. 


ಒಂದು ಪ್ರೇಮ ಏರ್ಪಟ್ಟಿದೆ ಎಂದರೆ ಅದಕ್ಕೊಂದು ಹೆಸರು ಬೇಕೇಬೇಕು, ಜಗತ್ತು ಕೇಳುತ್ತದೋ ಇಲ್ಲವೋ ಅದು ಕೇಳುವ ಮೊದಲು ನಾವೇ  ಆ ಬಾಂಧವ್ಯಕ್ಕೆ ಹೆಸರುಕೊಟ್ಟು ಜಗತ್ತಿಗೆ ಸಾರಿ ಹೇಳಬೇಕು ಅನ್ನುವ ತುಡಿತದಲ್ಲಿರುತ್ತೇವೆ. 

ಆದರೆ ಗಂಡು ಹೆಣ್ಣಿನ ಪ್ರೀತಿ ಬರೀ ದೈಹಿಕ ಆಕರ್ಷಣೆಯೇ?ಅಷ್ಟಕ್ಕೂ ಪ್ರೀತಿಸುವ ಮನಸುಗಳು ತಮ್ಮ ಸಂಗಾತಿಯಲ್ಲಿ ಹುಡುಕುವ ಬಯಸುವ ಗುಣಗಳೇನು? ಎಂಬುದಕ್ಕೆ ಇನ್ನು ಉತ್ತರ ಸಿಕ್ಕಿಲ್ಲ. ಇವೆಲ್ಲವನ್ನು ಮೀರಿದ ಬರೀ ಭಾವಬಂಧುರದಲ್ಲಿ ಹುಟ್ಟುಕೊಳ್ಳುವ ಸ್ವಾರ್ಥ ರಹಿತ ಪ್ರೀತಿ ಈ ಜಗದಲ್ಲಿದೆಯೇ ?


 ಹೀಗೆ ಯೋಚಿಸುವಾಗಲೆಲ್ಲ ನನ್ನ ಮನಸ್ಸಿನಲ್ಲಿ ಅಕ್ಕನ ವಚನಗಳಲ್ಲಿ ಬರುವ 'ಆತ್ಮ ಸಾಂಗತ್ಯ' ಎಂಬ ಪದ ಸಿಕ್ಕಿ ಹಾಕಿಕೊಳ್ಳುತ್ತದೆ.

ಎಷ್ಟು ಚಂದದ ಕಲ್ಪನೆ ಇದು.ನಾವು ದೇಹದ ಬಯಕೆಗೆ, ಇಹದ ಬೇಕು ಬೇಡಗಳಿಗೆ ನಮ್ಮ ನೋವು ನಲಿವುಗಳಿಗೆ ಸ್ಪಂದಿಸಲೆಂದೇ ಸಂಗಾತಿಯನ್ನು ಹುಡುಕುತ್ತೇವೆ, ಎಂಥ ಆದರ್ಶ ಪ್ರೇಮಿಗಳು, ಗಂಡ ಹೆಂಡತಿ, ಆದರೂ ಆ ಬಾಂಧವ್ಯದಲಿ ಪುಟ್ಟ ಸ್ವಾರ್ಥವಿದ್ದೆ ಇದೆ. ಆತ್ಮ ಸಾಂಗತ್ಯ ಎಂಬುದು ಇದೆಲ್ಲದಕ್ಕೆ ಮೀರಿದ್ದು. 


 ಆತ್ಮ ಸಾಂಗತ್ಯ ಭಿನ್ನವಾಗಿ ತೋರುವುದೇ ಇಲ್ಲಿ, ಈ ರೀತಿಯ ಪ್ರೀತಿಯಲ್ಲಿ ಎಂದಿಗೂ ದೈಹಿಕ ಕಾಂಕ್ಷೆಗಳು ಇರುವುದಿಲ್ಲ. ಅದು ಮಾನಸಿಕ ಸಾಂಗತ್ಯಕ್ಕೆ ಹಾತೊರೆಯುತ್ತಿರುವಾಗ ಸಿಕ್ಕ ಪ್ರೇಮದ ಸಿಹಿನೀರ ಝರಿ. ಇಂಥ ಬಾಂಧವ್ಯಗಳನ್ನು ನಮ್ಮಸುತ್ತಲಿನ ಜಗತ್ತಿಗೆ ವಿವರಿಸುವುದು ನಿಜಕ್ಕೂ ಕಷ್ಟ. ಅದರಲ್ಲೂ ಒಂದು ಹೆಣ್ಣು ಗಂಡಿನ ನಡುವೆ ಒಂದು ಚಂದದ ಮಾತಿನ ವಿನಿಮಯವಾದರೂ ಲೆಕ್ಕ ಕೇಳುವ ಈ ಜಗತ್ತಿಗೆ ಲಾಭ ನಷ್ಟ , ಬೇಕು ಬೇಡದ ಹಂಗಿಲ್ಲದೆ ಇರುವ ಸಂಬಂಧದ ಬಗ್ಗೆ ತಿಳಿಸಿ ಹೇಳಿದರೂ ಅರ್ಥವಾಗುವುದೇ?ಅಂಥ ಪರಿಪಕ್ವತೆ ನಮ್ಮ ಮನಸ್ಸುಗಳಿಗಿದೆಯೇ? 


ನೀವು ಮೊದಲ ಬಾರಿಗೆ ಯಾರನ್ನೋ ಭೇಟಿ ಆದಾಗಲೇ ಅವರನ್ನು ಅದೆಷ್ಟೋ ವರ್ಷದಿಂದ ಬಲ್ಲೆವು , ಅರೇ! ಇವರನ್ನೇ ಅಲ್ಲವೇ ನಾ ಇಷ್ಟು ದಿನದಿಂದ ಹುಡುಕುತ್ತಿದ್ದುದು, ನನ್ನ ಬದುಕಿನ ಚಿತ್ರದ ಬಣ್ಣ ಬಳಿಯದೆ ಬಿಟ್ಟ ಆ ಖಾಲಿಯನ್ನು ರಂಗಾಗಿಸಲು ,ನಮ್ಮನ್ನು  ಪರಿಪೂರ್ಣ ಮಾಡಲೆಂದೇ ನಮ್ಮೆಡೆಗೆ ನಡೆದು ಬಂದವರು ಅನ್ನಿಸಿ ಅವರೆಡೆಗೆ ಮನಸ್ಸು ವಾಲುತ್ತಲೇ ಹೋಗುತ್ತದೆ. ಹಾಗೆಂದು ನೀವು ದಿನ ಭೇಟಿ ಆಗಬೇಕು ಜೊತೆಯಲ್ಲಿ ಸಮಯ ಕಳೆಯಬೇಕು ಎಂಬ, ನಿಮ್ಮ ದಿನಚರಿಯನ್ನು ಒಪ್ಪಿಸಬೇಕು 

ಜನ್ಮದಿನವನ್ನು ನೆನಪಿಡಬೇಕು, ಉಡುಗೊರೆಗಳ ವಿನಿಮಯವಾಗಬೇಕೆಂಬ ಯಾವ ನಿಯಮಗಳಿಗೂ ಒಳಗಾಗದ ಅನನ್ಯ ಬಂಧವಿದು. 


ಆ ಸಂಗಾತಿಯು ಅಷ್ಟೇ, ನಮ್ಮನ್ನು ನಗಿಸುತ್ತಾರೆ ಅತ್ತಾಗ ಕಣ್ಣೊರೆಸುತ್ತಾರೆ,ನಮ್ಮ ಪಥದಿಂದ ಸ್ವಲ್ಪ ಅತ್ತಿತ್ತ ಸರಿದರು ಎಚ್ಚರಿಸುತ್ತಾರೆ, ಪ್ರೀತಿ ಗೌರವದಿಂದಲೇ ನಮ್ಮ ಅಂತರಂಗದ ಊನಗಳನ್ನೂ ಸ್ವೀಕರಿಸುತ್ತಾರೆ. 

ಆ ಜೀವದ ಎದುರು ಯಾವ ಗುಟ್ಟುಗಳು ಇರುವುದಿಲ್ಲ, ನಾನೇ ಸರಿ ಎಂಬ ವಾದ ವಿವಾದಗಳು ಇರುವುದಿಲ್ಲ. 

ಜೊತೆ ಜೊತೆಗೆ ಬೆಳೆಯುವ ಬೆಳೆಸುವ ಪ್ರೇಮದ ಪರಿಯದು.ಆ ಜೀವದ ಸಾಂಗತ್ಯದ ಹೊರತು ಇನ್ನೇನೂ  ಬಯಸುವುದಿಲ್ಲ ಆ ಜೀವ. 


ಮೊದಲೆಲ್ಲ ಪತ್ರ ಮೈತ್ರಿ ಎಂಬ ಸುಂದರ ಲೋಕವೊಂದಿತ್ತು 

ಅಲ್ಲಿ ಅಕ್ಷರಗಳಿಂದ ಮಾತ್ರವೇ ಮನಸ್ಸನ್ನು ಆವರಿಸಿ ಹೊಸತೊಂದು ಜಗತ್ತನ್ನು ಪರಿಚಯಿಸಿ ಪುಸ್ತಕ, ಗಜಲ್,ಜಗತ್ತಿನ ಕೌತುಕಗಳ ಬಗ್ಗೆ ಬರೆದು ಎಷ್ಟೆಲ್ಲ ಕಲಿಯಲು ಇದೆ ಎಂದು ತೋರಿಸಿಕೊಟ್ಟ ಆ ಪತ್ರಮಿತ್ರರು ಆ ಕಾಲದ ಆತ್ಮಸಂಗಾತಿಗಳು.


ಪತ್ರದ ಕಾಲ ಮುಗಿದು ಫೋನ್ ಬಂದಾಗ ಪ್ರೀತಿಯು ಅಕ್ಷರಗಳಿಂದ ಮಾತಿಗೆ ಹರಿಯಿತು. ನಂತರ orkut , facebook, twitter ಗಳ ಕಾಲದಲ್ಲಿ ನಮ್ಮಂತೆ ಯೋಚಿಸುತ್ತಾರೆ, ಎಷ್ಟು ಸಾಮ್ಯತೆ ನಮ್ಮ ಆಲೋಚನೆಗಳಲ್ಲಿ ಎಂಬ ಭಾವ ಮೂಡಿಸಿದ ಬಂಧಗಳು ಹಲವು. 


ಇತ್ತೀಚಿನ ದಿನಗಳಲ್ಲಿ, ಬರಹ ಫೋಟೋ ವಿಡಿಯೋ ಹಂಗಿಲ್ಲದೆ ಬರೀ ಧ್ವನಿಯ ಮೂಲಕ ಹಲವು ಮನಸುಗಳನ್ನು ಒಂದೆಡೆ ಸೇರಿಸಿ ಮನಸಿನಮಾತನ್ನು ಕೇಳಲು ಶ್ರೋತೃಗಳನ್ನು ಒದಗಿಸಿ ಕೊಟ್ಟಿದ್ದು ಕ್ಲಬ್ ಹೌಸ್ ಎನ್ನುವ ಜಾಲತಾಣ. ಇಲ್ಲಿ ನನಗೆ ಹಾಡು ಮಾತಿನ ಸಂತೆಯಲ್ಲಿ ಹಾಗೆ ಒಮ್ಮೆಲೇ ಸಿಕ್ಕು 

ಪ್ರೀತಿಯನ್ನಷ್ಟೇ ಕೊಡುತ್ತ, ಎಲ್ಲಿಯೂ ಸಭ್ಯತೆಯ ಚೌಕಟ್ಟು ಮೀರದ ಒಲವ ತುಂಬಿ, ಹೊಸ ಹೊಸ ಸವಾಲುಗಳನ್ನು ಕೊಟ್ಟು ಅದನ್ನು ಬಿಡಿಸಿ ಸಾಧಿಸಿ ಎದುರಿಗೆ ನಿಂತಾಗಲೊಮ್ಮೆ ಅಪ್ಪನಂತೆ ಹೆಮ್ಮೆ ಪಡುತ್ತ, ಅಣ್ಣನಂತೆ ನೆತ್ತಿ ನೇವರಿಸುವ, ಅಮ್ಮನಂತೆ ಪ್ರೀತಿಯ ಮಾಡಿಲಾಗುವ ತಿದ್ದಿ ಬುದ್ದಿ ಹೇಳಿ ಗುರುವಾಗುವ ವ್ಯಕ್ತಿತ್ವ ನನಗೆ ಆತ್ಮಸಂಗಾತಿ ಎನಿಸುತ್ತಾರೆ.


ಆತ್ಮ ಸಾಂಗತ್ಯ ಎಂಬುದು, ಭಾಷೆ, ಗಡಿ ,ವಯಸ್ಸು ಎಂಬ ಮೆರೆಯನ್ನು ಮೀರಿದ್ದು. ಮನದ ಭಾವಗಳನ್ನು ಬರಿದು ಮಾಡಿಕೊಳ್ಳುತ್ತಲೇ ಮತ್ತೆ ಮತ್ತೆ ತುಂಬಿಕೊಳ್ಳುವ ಈ

ಆತ್ಮಸಖ್ಯಕ್ಕೆ ಪ್ರತಿಯೊಬ್ಬರ ಪರಿಭಾಷೆ ಬೇರೆಯೇ ಇರಬಹುದು. 

ನಾವೆಲ್ಲರೂ ಮಾತಿನಲ್ಲಿ ಪ್ಲೇಟಾನಿಕ್ ಪ್ರೀತಿ ಎಂದು ಉಲ್ಲೇಖಿಸುತ್ತೇವೆ, ಅಂಥ ಪ್ರೀತಿಯನ್ನು ಎಲ್ಲರೂ ಬಯಸುತ್ತೇವೆ ಆದರೆ ಆ ಪ್ರೀತಿಗೆ ಬೇಕಾದ ಮನೋಸ್ಥೈರ್ಯವನ್ನು , ಭಾವನೆಗಳಲ್ಲಿ ಲಾಲಿತ್ಯ ವನ್ನು ಬೆಳೆಸಿಕೊಳ್ಳುವ ಅಗತ್ಯತೆ ಬಹುವಾಗಿ ಇದೆ. 

ಸಂಬಂಧಗಳಿಗೆ ಹೆಸರುಕೊಟ್ಟು ಅದರ ಸುತ್ತ ಬೇಲಿ ಹಾಕಿ ಅದನ್ನು ಜಗತ್ತಿಗೆ ಪರಿಚಯಿಸುವ ತುರ್ತುಗಳು ನಿಂತರೆ  ನಮ್ಮ ಸುತ್ತ  ಆತ್ಮ ಸಾಂಗತ್ಯ, ಪ್ಲೇಟಾನಿಕ್ ಪ್ರೇಮದ ಉದಾಹರಣೆಗಳು ಹೆಚ್ಚಾಗಬಹುದೇನೋ.

No comments:

Post a Comment