ನಮ್ಮನೆಯಲ್ಲಿ ಬಂದ , ತಂದ ,ಸೇರಿಕೊಂಡ ನಾಯಿಗಳು ಹಲವು ಅವುಗಳಲ್ಲಿ ಕೆಲವಂತೂ ನಮ್ಮ ಬದುಕಿನ ಭಾಗವೇ ಆಗಿಹೋದವು, ಅಂಥ ಒಂದು ಜೀವ ‘’ಸೋಮು “ .
ಆಗ ನಾನು ಏಳನೇ ತರಗತಿಯಲ್ಲಿದ್ದೆ ಬೇಬಿ ಶ್ಯಾಮಲಿ ಯ ಯಾವುದೋ ಸಿನಿಮ ನೋಡಿ ನನಗೂ ಕುದುರೆಯಂತೆ ಓಡುವ , ಅದರ ಸರಪಳಿಯನ್ನು ಹಿಡಿದು ನಾನು ಹೇಳಿದಾಗ ನಿಲ್ಲುವ ನಾಯಿಯೊಂದು ಬೇಕಿತ್ತು , ಹಾಗೆ ಸಿಕ್ಕ ಸಿಕ್ಕ ದಾರಿನಾಯಿ ಗಳ ಕೊರಳಿಗೆ ಕಾತಿ ಹಗ್ಗ ಕಟ್ಟಿ ಇದನ್ನು ಪ್ರಯತ್ನಿಸಿದ್ದು ಇದೆ ಆಗೆಲ್ಲ , ಆ ನಾಯಿಗಳು ಓಡುವುದಿರಲಿ ನಡೆಯುವುದೇ ಇಲ್ಲ ಎಂದು ನೆಲಕ್ಕೆ ಕಾಲು ಊರಿ ಹಟಕ್ಕೆ ಬೀಳುತ್ತಿದ್ದವು. ನೋಡುಗರಿಗೆ ಆ ದೃಶ್ಯ ಯಮ ಪಾಶ ಹಾಕಿ ನಾಯಿಯನ್ನ ಕರೆದೊಯ್ಯುತ್ತಿರುವಂತೆ ಕಾಣುತ್ತಿತ್ತೋ ಏನೋ ! ಎಲ್ಲರು ಬಯ್ಯೋದೆ, ಆಗ ಮಾತ್ರ ತುಂಬಾ ವಿಧೇಯ ವಾದ ಒಂದು ನಾಯಿ ಬೇಕು ಮತ್ತು ಅದು ಈಗಲೆಬೇಕು ಎನಿಸಿದ್ದು ಅದೆಷ್ಟ ಸಲವೋ.
ಹಾಗೊಂದು ಮುಂಜಾನೆ ಟಿಬೆಟಿಯನ್ ಕಾಲನಿಯಲ್ಲಿ ಕೇಸ್ ನೋಡಲು ಹೋಗಿದ್ದ ಪಪ್ಪಾ (ನನ್ನ ಪಪ್ಪಾ ಪಶುವೈದ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ) ಹತ್ತಿಯಂತೆ ಮೆತ್ತಮೆತ್ತನೆ ಇದ್ದ ಅಂಗೈ ಅಗಲದ ಪುಟ್ಟ ನಾಯಿಮರಿ ತಂದಿದ್ದರು, ಅದಕ್ಕಾಗ ೧೫ ದಿನವಷ್ಟೇ ! ಅದೆಷ್ಟು ಸಂಬ್ರಮ ನನಗು ತಂಗಿಗೂ, ಮನೆಯ ಮುಂದಿದ್ದ ನಮ್ಮ ಶಾಲೆಯಿಂದ ನೆವ ಹೇಳಿಕೊಂಡು ನಾಯಿಮರಿ ನೋಡಲು ಬರುತ್ತಿದ್ದೆವು. ನಮ್ಮ ಮನೆಯಲ್ಲೊಂದು ರೂಡಿ , ಸಾಕುಪ್ರಾಣಿ ಯಾವ ದಿನ ಬರುತ್ತದೆ ಅದೇ ವಾರದ ಮೊದಲ ಅಕ್ಷರದಿಂದ ಅದ್ರ ಹೆಸರು ಇಡುವುದು , ಈಗ ನಮ್ಮಲ್ಲಿ ಬಂದ ನಾಯಿ ಮರಿ ಸೋಮವಾರ ಮುಂಜಾನೆ ಬಂದಿತ್ತು ಅದಕ್ಕೆಂದೇ ಸರ್ವ ಸಮ್ಮತಿಯಿಂದ ಅದನ್ನು ಸೋಮು ಎಂದು ಕರೆಯಲಾಯಿತು. ಇನ್ನು ಕೇಳಿ ಈ ಸೋಮು ಯಾಕೆ ಇಷ್ಟು ವಿಶಿಷ್ಟ ವಿಶೇಷ ಎಂದು.
ಸೋಮು ಗೆ ನಮ್ಮಲ್ಲಿನ ಇತರ ನಾಯಿಗಳಿಗಿಂತ ಹೆಚ್ಚಿನ ಅಕ್ಕರೆ ಮುದ್ದು ದೊರೆತಿದ್ದು ಅದು ಜೂಲಿ ನಾಯಿ ಎಂದು, (ಪೋಮೆರಿಯನ್ ಕ್ರಾಸ್ ಬ್ರೀಡ) ಅದನ್ನು ಸೂಕ್ಷ್ಮವಾಗಿ ಸಾಕಬೇಕು ಸಿಕ್ಕ್ಸಿಕ್ಕಿದ್ದನ್ನ ತಿನ್ನೋಕೆ ಕೊಡಬಾರದು, ಅದಕ್ಕೆ ಹೊಸ ಉಟದ ಬಟ್ಟಲು ಏನೇನೋ ನಿಯಮಗಳನ್ನ ನಾನು ನನ್ನ ತಂಗಿ ಮಾಡಿಕೊಂಡಿದ್ದವು ಮತ್ತು ಅವು ಬರೀ ನಿಯಮಗಳಾಗೆ ಉಳಿದವು. ಅದು ಬಲು ಸ್ವತಂತ್ರ ಸ್ವಭಾವದ ನಾಯಿ ಅದಕ್ಕೆ ಸರಪಳಿ ಕಂಡರೆ ಆಗುತ್ತಿರಲಿಲ್ಲ. ಅದಕ್ಕೆ ಕೆಲವು ವಿಚಿತ್ರ ರೂಡಿಗಳಿದ್ದವು,
ಅದಕ್ಕೆ ತಿರುಗುವ ಹುಚ್ಚು, ಪಪ್ಪಾ ಸೈಕಲ್ ಸ್ಟಾಂಡ್ ತೆಗೆಯುತ್ತಲೇ ಅದಕ್ಕೆ ಹುಚ್ಚು ಖುಷಿಯಾಗುತ್ತಿತ್ತು ಸೈಕಲ್ ಗೆ ಬೆನ್ನತ್ತಿ ಓದಲು ಶುರು ಮಾಡುತ್ತಿತ್ತು ಪಪ್ಪಾ ಎಲ್ಲೆಲ್ಲಿ ನಿಲ್ಲಿಸುತ್ತಾರೋ ಯಾವ ಯಾವ ಅಂಗಡಿಗೆ ಹೋಗುತ್ತಾರೋ ಅಲ್ಲಲ್ಲಿ ಹೋಗಿ ನಿಂತು ಅವರ ಜೊತೆಗೆ ವಾಪಸ್ ಬರುತ್ತಿತ್ತು. ಕೆಲವೊಮ್ಮೆ ಅದನ್ನು ಇತರ ನಾಯಿಗಳ ಆಕ್ರಮಣದಿಂದ ಕಾಪಾಡುವುದೇ ಕೆಲಸವಾಗುತ್ತಿತ್ತು , ಜೊತೆಗೆ ನನ್ನ ಮನೆಮಂದಿ ಇದ್ದಾರೆ ಅನ್ನೋ ಹುರುಪಿನಲ್ಲಿ ತನ್ನ ತಾಕತ್ತಿಗೆ ಮೀರಿದ ಜಗಳದಲ್ಲಿ ಭಾಗಿ ಆಗಲು ಹೋಗ್ತಿತ್ತು, ಇವೆಲ್ಲ ಕಿರಿಕಿರಿ ನಿಲ್ಲಿಸಲು ಪಪ್ಪಾ ಒಂದು ಉಪಾಯ ಮಾಡಿದರು ಒಂದು ಪ್ಲಾಸ್ಟಿಕ್ ಕೈಚೀಲದಲ್ಲಿ ಅ ಸೋಮುವನ್ನು ಹಾಕಿದರು ಅದನ್ನ ಸೈಕಲ್ ಹಾಂಡಲ್ಗೆ ತೂಗು ಹಾಕಿದರು . ಸೋಮು ಆ ಚೀಲದಿಂದ ತನ್ನೆರಡು ಕಾಲು ಮತ್ತು ಕತ್ತು ಆಚೆ ಹಾಕಿ ಹೊರಗಿನ ದೃಶ್ಯ ಆಗು ಹೋಗು ನೋಡುತ್ತಿತ್ತು , ಇದು ದಿನದ ರೂಡಿ ಆಯಿತು ಆ ಚೀಲವನ್ನ ತನ್ನ ಆಸ್ತಿಯಂತೆ ನೋಡುತ್ತಿತ್ತು,
ಮನೆಗೆ ಯಾರೇ ನೆಂಟರು ಬರಲಿ ಸೋಮುವಿನ ಉತ್ಸಾಹ ಇಮ್ಮಡಿಸುತ್ತಿತ್ತು, ಅದರ ಖುಷಿ ಇರುವುದು ಅವರೊಂದಿಗೆ ಪೇಟೆ ಸುತ್ತಬಹುದು ಎನ್ನೋ ಆಲೋಚನೆಯಲ್ಲಿ. ಅವರು ವಾಪಸ್ ಹೋಗುವಾಗ ಬಸ ನಿಲ್ದಾಣಕ್ಕೆ ಇದು ಹೋಗುತಿತ್ತು ಬಸ್ ಬಂತು ಎಂದ ಕೂಡಲೇ ಎಲ್ಲರಿಗಿಂತ ಮೊದಲು ತಾನೇ ಹತ್ತಿ ಕೊನೆ ಸೀಟಿನ ಕೆಳಗೆ ಹೋಗಿ ಅಡಗಿ ಕೊಳ್ಳುತ್ತಿತ್ತು. ಮೊದೆಲೆರಡು ಸಲ ಮುದ್ದು ತಮಾಷೆ ಎನಿಸಿದ ಈ ಅಭ್ಯಾಸ ಆಮೇಲಾಮೇಲೆ ಕಿರಿಕಿರಿ ಆಗತೊಡಗಿತು. ನಂತರದಲ್ಲಿ ಮನೆಗೆ ಬಂದ ಸಂಬಂಧಿಕರು ಹೊರಟು ನಿಲ್ಲುವ ಮೊದಲೇ ಇದನ್ನು ಕಟ್ಟಿ ಹಾಕುತ್ತಿದ್ದೆವು. ಆಗ ಅದರ ಆಕ್ರೋಶ ನೋಡಬೇಕು.!
ಹಾಗೇ ಇನ್ನೊಮ್ಮೆ ಪಪ್ಪನ ಸಹೋದ್ಯೋಗಿ ಒಬ್ಬರ ಮದುವೆಗೆ ಬಾಳೆಹೊನ್ನೂರಿನ ಹತ್ತಿರದ ಹಳ್ಳಿಗೆ ಹೋಗುವುದಿತ್ತು, ಅವರು ಒಂದು ಮಿನಿ ಬಸ ವ್ಯವಸ್ಥೆ ಮಾಡಿದ್ದರು ಅದರಲ್ಲಿ ಎಲ್ಲಕ್ಕಿಂತ ಮೊದಲು ಹತ್ತಿ ಕೂತಿದ್ದು ಸೋಮು. ಅದನ್ನು ಎಲ್ಲರು ಗಮನಿಸಿದ್ದು ತುಂಬಾ ತಡವಾಗಿ .ತುಂಬಾ ದೂರ ಕ್ರಮಿಸಿದ್ದರಿಂದ ಅದನ್ನು ವಾಪಸ್ ಬಿಡುವ ಮಾತೇ ಇರಲಿಲ್ಲ. ಅವರ ಮದುವೆಯ ಬುಂದಿಉಂಡೆ ಊಟ ಮಾಡಿ ವಧುವರರನ್ನು ಭೇಟಿ ಮಾಡಿ ಅವರ ಮದುವೆ ವಿಡಿಯೋದಲ್ಲೂ ಕಾಣಿಸಿಕೊಂಡಿತು.
ಅದಕ್ಕೆ ಇನ್ನೊಂದು ಪ್ರೀತಿಯ ವಿಷಯ ಕುರುಕಲು ತಿಂಡಿ ಮತ್ತು ಮೀನು . ಪಪ್ಪಾ ಅವಕ್ಕೆಂದೇ ರಸ್ಕ ಟೋಸ್ಟ್ ಪ್ಯಾಕ್ಗಳನ್ನ ನಡುಬಾಗಿಲಿನ ಮೇಲಿದ್ದ ಮೊಳೆ ಗೆ ತೂಗು ಹಾಕುತ್ತಿದ್ದರು . ತನಗೆ ಬೇಕಾದಾಗೆಲ್ಲ ಅದು ಕತ್ತು ಮೇಲೆ ಮಾಡಿ ನೋಡುತ್ತಿತ್ತು.
ಸೆಖೆ ಅನಿಸಿದಾಗ ಸೀಲಿಂಗ್ ಫ್ಯಾನ್ ಸ್ವಿಚ್ ಕಡೆಗೆ ನೋಡಿ ಮಿದು ದನಿಯಲ್ಲಿ ಬೊಗಳುವುದನ್ನು ನೋಡಲೆಂದೇ ನಾವು ಫ್ಯಾನ್ ಹಾಕುತ್ತಿರಲಿಲ್ಲ.
ಸೋಮುವಿನ ಮತ್ತೊಂದು ವಿಲಕ್ಷಣ ಗುಣ ವರುಷಕ್ಕೆಮ್ಮೆ ಗುಳೇ ಹೋಗುತ್ತಿದ್ದುದು. ಶ್ರಾವಣ ಮಾಸದಲ್ಲಿ ನಮ್ಮಲ್ಲಿ ಕಪ್ಪು-ಕಡಿ (ಮೀನು ಇತ್ಯಾದಿ..) ತರುತ್ತಿರಲಿಲ್ಲ , ಪ್ರತಿವರುಷ ಈ ಸಮಯದಲ್ಲಿ ಸೋಮು ಮನೆಬಿಡುತ್ತಿದ್ದ ಅವ ಎಲ್ಲಿ ಹೋದ ಎಂಬುದರ ಸುಳಿವೇ ಇರುತ್ತಿರಲ್ಲ್ಲ ಮೊದಮೊದಲು ಹೆಂಡತಿ ಹುಡುಕಿಕೊಂಡು ಹೋಗಿರಬೇಕು ಎಂದು ತಮಾಷೆ ಮಾಡಿ ನಗುತ್ತಿದ್ದ ನಾವು ಎರಡು ತಿಂಗಳಾದರೂ ಬರದಿದ್ದಾಗ ಸಿಕ್ಕ ಸಿಕ್ಕವರಲ್ಲಿ ಕೇಳಿ ಅವನ ರೂಪವನ್ನು ವರ್ಣಿಸುತ್ತ ಎಲ್ಲಾದರೂ ಕಂಡರೆ ದಯಮಾಡಿ ತಿಳಿಸಿ ಎಂದು ವಿನಂತಿಸುತ್ತಿದ್ದೆವು.
ಆ ವರುಷ ವು ಹಾಗೆ ಹೋದವನು ಬಾರದಿದ್ದಾಗ , ಯಾರೋ ಪಪ್ಪನಿಗೆ ಹೇಳಿದರು ನಿಮ್ಮ ನಾಯಿ ಒಬ್ಬ ಡಾಕ್ಟರ್ ಮನೆಯಲ್ಲಿದೆ. ಕಟ್ಟಿಯೇ ಇಡುತ್ತಾರೆ , ಒಮ್ಮೆ ಕೇಳಿ ನೋಡಿ ಅಂದರು. ಪಪ್ಪಾ ಹೋಗಿ ಅವರನ್ನು ಕೇಳಿದರೆ ಅವರು ನಾನು ಇದನ್ನ ೩೦೦ ರುಪಾಯಿ ಕೊಟ್ಟು ಕೊಂಡುಕೊಂಡಿದ್ದೇನೆ ಅಂದರು , ನಿಮ್ಮದೇ ಅನ್ನಲಿಕ್ಕೆ ಸಾಕ್ಷಿ ಏನು ? ಪಪ್ಪನ ದನಿ ಕೇಳಿದ್ದೆ ಹಿತ್ತಲಿನಿಂದ ಸೋಮು ಜೋರು ದನಿಯಲ್ಲಿ ಕೂಗ ತೊಡಗಿದ್ದ . ಸುಮಾರು ಹೊತ್ತಿನ ವಾದ ವಿವಾದ ದ ನಂತರ ಸೋಮುವಿನ ಸರಪಳಿ ಬಿಚ್ಚಿ ಅವನನ್ನು ಮನೆಗೆ ಕಳಿಸಿಕೊಡಲಾಗಿತ್ತು.
ನಾನು ಕೆಲವೊಮ್ಮೆ ಬೆಳಗಿನ ಮೊದಲ ಬಸ್ಸಿಗೆ ಧಾರವಾಡ ಹೋಗಬೇಕಾದರೂ ಪ್ರತಿಬಾರಿ ಸೋಮು ನಾನು ಬಸ್ಸು ಹತ್ತುವ ತನಕ ಇದ್ದು ನನ್ನ ಕಳಿಸಿಕೊಟ್ಟೆ ಮನೆಗೆ ಮರಳುತ್ತಿದ್ದ .
ಹಾಗೆ ಒಮ್ಮೆ ಮನೆಯಿಂದ ಹೋದವನು ವಾಪಾಸ್ ಬರಲೇ ಇಲ್ಲ ಅವನ ಗುಣ ಗೊತ್ತಿದ್ದ ನಾವು ಜಾಸ್ತಿ ಚಿಂತೆ ಮಾಡಲೂ ಇಲ್ಲ ಸುಮಾರು ತಿಂಗಳ ಹತ್ತಿರ ಇಲ್ಲವಾದಾಗ ಚಿಂತೆ ಶುರುವಾಯಿತು, ಎಲ್ಲ ಕಡೆ ಹುಡುಕಿದರೂ ಸೋಮುವಿನ ಯಾವ ಸುಳಿವು ಸಿಗಲಿಲ್ಲ ಯಾರೋ ಕದ್ದುಕೊಂಡು ಹೋದರು ಎಂದೆ ಭಾವಿಸಿ ಕದ್ದವರಿಗೆ ಶಪಿಸುತ್ತಾ ಇದ್ದರು ಅಮ್ಮ .
ಹಾಗೊಂದು ದಿನ ತಂಗಿ ಹಿತ್ತಲ ಮೂಲೆಗೆ ಹೋದಾಗ , ಕಪ್ಪು ಬಿಳಿ ರೋಮದ ರಾಶಿ ಕಂಡಾಗಲೇ ಸೋಮು ಸತ್ತು ಹೋಗಿದ್ದು ನಮಗೆ ತಿಳಿದದ್ದು. ಅವ ಕಳದು ಹೋಗಿದ್ದರೆ ಚನ್ನಾಗಿತ್ತು ಕಡೆ ಪಕ್ಷ ಮತ್ತೆ ಮನೆಗೆ ಬರುತ್ತಾನೆ ಅನ್ನೋ ನಿರೀಕ್ಷೆ ಇರುತಿತ್ತು, ನಮ್ಮಲ್ಲಿ ಯಾವಾಗಲು ಹೇಳೋದಿದೆ ನಂಬಿಗಸ್ತ ನಾಯಿ ಮನೆಮಂದಿ ಮುಂದೆ ಪ್ರಾಣ ಬಿಡುವುದಿಲ್ಲ, ಯಜಮಾನನ ಮನಸ್ಸು ಎಂದಿಗೂ ನೋಯಬಾರದು ಎನ್ನುವ ಕಾರಣಕ್ಕೆ . ಸೋಮು ಹಾಗೆ ಹೇಳದೆ ಕೇಳದೆ ಹೋಗಿಬಿಟ್ಟ .
ಈಗ ಸೋಮು ಇದ್ದಿದ್ದರೆ ೨೧ ವರುಷದವನಾಗುತ್ತಿದ್ದ .ಇಂದಿಗೂ ಸೋಮು ಎಂದರೆ ಆ ತುಂಟ ಮುದ್ದು ನಾಯಿಮರಿಯ ಮುಖ ಕಣ್ಣು ಮುಂದೆ ಬರುತ್ತದೆ. ಅವ ನೆನಪುಗಳಲ್ಲಿ ಯಾವಾಗಲು ಜೀವಂತ .
omme yella nenapaagi kannalli neeru. miss you Somu.
ReplyDelete