ಮೊದಲ ಬಾರಿ ಆ ಅಚ್ಚರಿಯನ್ನು ಕಂಡಿದ್ದು ಒಂದನೇ ತರಗತಿಯಲ್ಲಿರುವಾಗ, ಪುಟ್ಟ ಹಾಳೆಯನ್ನು ಅಡ್ಡ ಉದ್ದ ಹೇಗೇಗೋ ಮಡುಚುತ್ತ ಚಂದದೊಂದು ವಿಮಾನ ಮಾಡಿ ಗಾಳಿಯಲ್ಲಿ ಹಾರಿ ಬಿಡುವುದು. ಈ ವಿಮಾನ ಮಾಡಲು ಬೇಕಾಗುವ ಹಾಳೆಗೆ ಅಳತೆಯ ಗೋಜಿಲ್ಲ, ಗಾಳಿಯಲ್ಲೊಮ್ಮೆ ಜುಂಯ ಎಂದು ಹಾರಿ ಭೂಮಿಗೆ ಇಳಿಯುವಾಗ ಮಟ್ಟಸವಾದ ನೆಲವೂ ಬೇಕಿಲ್ಲ, ಬಾನ ಮುಟ್ಟುವ ಆಸೆ ಹೊತ್ತು ಹಾರುವ ಈ ವಿಮಾನ ಒಂದಷ್ಟು ದೂರ ಹೋಗುತ್ತಲೇ ಕೈಕಾಲು ಕೊಡವಿಕೊಂಡು ನೆಲದಮೇಲೆ ಬಿದ್ದು ಮೈ ನೋಯಿಸಿಕೊಂಡಾಗ ಅಳುವುದಿಲ್ಲ, ಆದ ಅಪಘಾತದ ಸುಳಿವೂ ಕೊಡದಂತೆ ಮತ್ತೆ ಹಾರಲು ಸಿದ್ಧವಾಗುತ್ತದೆ. ಆಹಾ ಎಂಥ ಮಜವಾದ ಆಟ ಇದು,
ನಾ ಇದ್ದ ಊರಲ್ಲಿ ಆಕಾಶವೇನೋ ಇತ್ತು ಸ್ವಚಂದವಾಗಿ ಹಾರಾಡೋ ಹಕ್ಕಿಗಳೂ ಅಸಂಖ್ಯ, ಆದರೆ ನಿಜವಾದ ವಿಮಾನಗಳು ನೋಡ ಸಿಗುತ್ತಿದ್ದುದು ಮಾತ್ರ ಅಪರೂಪ, ಹಾಗೆ ಗುಡುಗಿನ ತಮ್ಮನಂತೆ ಭಾಸವಾಗುವ ಸದ್ದೊಂದು ಬಾನ ಒಡಲಿಂದ ಕೇಳಿಸತೊಡಗಿತೆಂದರೆ ಹೌದು ಅದು ವಿಮಾನವೇ, ಅದನ್ನ ನೋಡಲು ನಾವೆಲ್ಲಾ ಮಕ್ಕಳು ತರಗತಿಯ ಮಧ್ಯದಲ್ಲೇ ಅಕ್ಕವರ ಅನುಮತಿಗೂ ಕಾಯದೆ ತರಗತಿಯಿಂದ ಹೊರಗೆ ಹೋಗಿ ಆಕಾಶ ನೋಡುತ್ತಾ ನಿಲ್ಲುತ್ತಿದ್ದೆವು, ಆ ದಿನ ಮೋಡವಿದ್ದರೆ ಬರೀ ಆ ಗುಂಯ್ ಎಂಬ ಸದ್ದಲ್ಲೇ ಸಮಾಧಾನ ಮಾಡಿಕೊಳ್ಳುತ್ತ 'ಹ್ಯಾಪಮಾರಿ' ಹಾಕೊಂಡು ತರಗತಿಯೊಳಗೆ ಹೋಗಿ ಕೂತು ಒಂದಷ್ಟು ಬಯ್ಯಿಸಿಕೊಳ್ಳುತ್ತಿದ್ದೆವು. ಅದು ಎಲ್ಲ ವಿದ್ಯಾರ್ಥಿಗಳನ್ನೂ ಒಟ್ಟಿಗೆ ಬಯ್ಯುವ session ಆಗಿತ್ತಾದ್ದರಿಂದ ಯಾರಿಗೂ ಬೇಜಾರಾಗುತ್ತಿರಲಿಲ್ಲ ,ವಿಮಾನ ಕಾಣಿಸದೆ ಹೋಗಿದ್ದಕ್ಕಷ್ಟೇ ನಮ್ಮ ಮುಖದಮೇಲೆ ನಿರಾಸೆ ಇರುತ್ತಿತ್ತಾದರೂ ಅಕ್ಕವರಿಗೆ ತಾವು ಬೈದಿದ್ದಕ್ಕೆ ಮಕ್ಕಳು ಮೆತ್ತಗಾದರು ಅನ್ನುವ ಒಂದು ಭ್ರಮೆ ಹುಟ್ಟಿ ಅವರು ಮತ್ತಷ್ಟು ದನಿ ಏರಿಸುತ್ತಿದ್ದರು.
ಈ ಘಟನೆಯಾದ ಒಂದುವಾರ ಶಾಲೆಯ ಸುತ್ತಮುತ್ತ ಸಾಕಷ್ಟು ಹಳೆಯ ವಿಮಾನಗಳು ಕಾಣಸಿಗುತ್ತಿದ್ದವು, ಎಲ್ಲೆಂದರಲ್ಲಿ ಕೆಲವೊಮ್ಮೆ ತರಗತಿಯ ಮಧ್ಯವೇ ಏರೋಪ್ಲೇನ್ ಮಾಡುತ್ತಾ ಸಿಕ್ಕಿಬಿದ್ದು ಊಟಕ್ಕೆ ಬಿಟ್ಟಾಗ ಆಡಲು ಮಾಡಿಟ್ಟುಕೊಂಡಿದ್ದ ಅಷ್ಟೂ ವಿಮಾನಗಳು ಸೀಜ್ ಆಗಿ ಅಕ್ಕವರ ಟೇಬಲ್ ಡ್ರಾವರ್ ಸೇರಿ ಬಿಡುತ್ತಿದ್ದವು.
ಜೊತೆಗೆ ಈ ಹಾಳೆ ವಿಮಾನಗಳನ್ನು ಮಾಡುವ ಪ್ರತಿಭೆ ಮೆರೆಯುತ್ತಿದ್ದುದು ಮಾತ್ರ ಕೊನೆಯ ಬೆಂಚಿನ , ಅಕ್ಕವರಿಗಿಂತ ಉದ್ದ ಇದ್ದ ಹುಡುಗರು,ಇದೊಂದು ಕಾರಣಕ್ಕೆ ತರಗತಿಯ ಉಳಿದೆಲ್ಲ ಮಕ್ಕಳು ಆ ಕೊನೇ ಬೆಂಚಿನ ಸುತ್ತ ಮುತ್ತಿಕೊಳ್ಳುತ್ತಿದ್ದೆವು. ಆಗೆಲ್ಲ ಈ ಜಾಣ ಹುಡುಗರು ಪೆನ್ಸಿಲ್ ಶಾರ್ಪ್ ಮಾಡುತ ಇನ್ನಿಲ್ಲದಂತೆ ಗಣಿತದ ಸಮಸ್ಯೆಗಳನ್ನು ಬಿಡಿಸಿ ಬಿಡಿಸಿ ರಾಶಿ ಹಾಕುತ್ತಿದ್ದರು, ನಾವು ಮಾತ್ರ ಆ ಜೋರು ಹುಡುಗರು ಚೌಕಾಕಾರದ ಹಾಳೆಯನ್ನು ಮೂತಿ ರೆಕ್ಕೆ ಬಾಲ ಬರುವಂತೆ ಮಡಚಿ ಅದಕ್ಕೊಂಚೂರು ಫೂಅಂತ ಗಾಳಿ ಊದಿ ಹಾರಿಸಲು ಸಿದ್ಧ ಮಾಡಿ ನಮ್ಮ ಕೈಗೆ ಕಾಗದದ ವಿಮಾನ ಕೊಡುವುದನ್ನೇ ಕಾಯುತ್ತ ನಿಂತಿರುತ್ತಿದ್ದೆವು.
ಒಮ್ಮೊಮ್ಮೆ ಅಂತೂ ಜಾಣ ಹುಡುಗರಲ್ಲೊಬ್ಬ ಕೊನೆ ಬೆಂಚಿನ ಸುತ್ತ ಜಾತ್ರೆಪೇಟೆ ಮಾಡಿದವರ ಹೆಸರನ್ನು ಕಪ್ಪುಹಲಗೆಯಮೇಲೆ ಬರೆದು ಬಿಟ್ಟಿದ್ದ, ಅಕ್ಕವರು ಹುಣಸೆ ಅಡ್ಡರದಿಂದ ಕೈ ಮೇಲೆ ರಪರಪನೆ ಕೊಟ್ಟಿದ್ದರು,
ಹಾಗೆ ಹೊಡೆಯುವಾಗ ''ಛಡಿ ಛಮ್ ಛಮ್ ವಿದ್ಯಾ ಘಮ್ ಘಮ್'' ಅಂತ ಮಂತ್ರದಂತೆ ಹೇಳುತ್ತಾ ಪ್ರಸಾದ ಕೊಡುವ ಆ ಪ್ರಕ್ರಿಯೆ ನಮಗೆಲ್ಲರಿಗೂ ನೀರುಕುಡಿದಷ್ಟೇ ಅಭ್ಯಾಸವಾಗಿತ್ತು.
ಆ ಹಾಳೆ ವಿಮಾನದ ಕಥೆ ಇಷ್ಟಕ್ಕೆ ಮುಗಿದರೆ ಏನು ಮಜಾ ಹೇಳಿ?
ಆ ದಿನ ಉದ್ದ ಕೂದಲಿನ ದುಂಡುಕಣ್ಣಿನ ಹುಡುಗಿ ''ಪ್ರಕಾಶಾ ನಂಗೂ ಕಲಸ ಕೊಡ ವಿಮಾನ ಮಾಡೋದು'' ಎಂದಾಗ ಪ್ರಕಾಶ ಮತ್ತಷ್ಟು ಪ್ರಕಾಶಮಾನನಾಗಿ ಆಕೆಯನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ಪ್ರತಿ ಅಂಚನ್ನು ಮಡಚಿ ಮತ್ತೆ ಅದನ್ನು ಬಿಡಿಸಿ ಆಕೆಯಿಂದ ಮಾಡಿಸಿ ಅಂತೂ ಇಂತೂ ಆಕೆಗೆ ವಿಮಾನ ಮಾಡುವುದನ್ನ ಹೇಳಿಕೊಟ್ಟ. ಹಾಗೆ ಒಮ್ಮೆಗೆ ಬರಲು ಅದೇನು ಸರಳ ವಿಷಯವೇ? ಮರುದಿನ ಗುಲಾಬಿ ಹಾಳೆಯಲ್ಲಿ ಮುದ್ದಾದ ವಿಮಾನ ಆಕೆ ಕುಳಿತುಕೊಳ್ಳುತ್ತಿದ್ದ ಜಾಗೆಯಲ್ಲಿ ಇತ್ತು. ಆಕೆಯ ದುಂಡು ಕಣ್ಣು ಅರಳಿ ಮಲ್ಲಿಗೆಯಾಗುವುದನ್ನು ನೋಡಲು ಪ್ರಕಾಶ ಕಾದಿದ್ದ, ಇನ್ನೇನು ಆ ವಿಮಾನ ಆಕೆ ಎತ್ತಿಕೊಳ್ಳಬೇಕು ಅಷ್ಟರಲ್ಲಿ ಅಕ್ಕವರು ಬಂದು ಅದನ್ನು ಹರಿದು ಚೂರು ಮಾಡಿ ಕಸದ ಬುಟ್ಟಿಗೆಸದರು. ಆ ದಿನ ಪ್ರಕಾಶ ಮಂಕು ಮಂಕಾಗಿ ಸದ್ದಿಲ್ಲದೇ ಅತ್ತು ಕಣ್ಣೀರಾಗಿದ್ದ. ತನ್ನ ಮೊದಲ ಪ್ರೇಮಪತ್ರ ಹಾಗೆ ಹರಿದು ಚೂರು ಚೂರಾಗಿ ತಿಪ್ಪೆ ಸೇರಿದರೆ ಯಾವ ಮನಸುತಾನೇ ಸಹಿಸಿಕೊಂಡೀತು? ಹಾಗಂತ ಅವನ ಸ್ನೇಹಿತರು ಬೇಸರದಿಂದ ಹೇಳುತ್ತಿದ್ದನ್ನು ಕೇಳಿಸಿಕೊಂಡಾಗಲೇ ಅವನ ದುಃಖಕ್ಕೆ ಕಾರಣ ತಿಳಿದಿದ್ದು.
ಉದ್ದ ಕೂದಲಿನ ಹುಡುಗಿಗೆ ಇದು ಗೊತ್ತಾಯಿತೋ ಇಲ್ಲವೋ ನನಗಂತೂ ಗೊತ್ತಿಲ್ಲ , ಆ ದಿನದಿಂದ ನಾನು ಮಾತ್ರ ನನ್ನ ಹತ್ತಿರ ಹಾರಿ ಬಂದ, ಅಲ್ಲಿ ಇಲ್ಲಿ ಸಿಕ್ಕ ಎಲ್ಲ ಪೇಪರ್ ವಿಮಾನಗಳನ್ನ ಇಸ್ತ್ರಿಮಾಡಿಟ್ಟ ರೇಷ್ಮೆ ಸೀರೆಯ ಮಡಿಕೆ ಬಿಚ್ಚುವಂತೆ ಜಾಗ್ರತೆಯಾಗಿ ತೆಗೆದು ನೋಡುತ್ತಿದ್ದ್ದ, ಯಾರದೋ ಪ್ರೇಮ ನಿವೇದನೆಯ ಪರಿಯನ್ನು ಅನುಭವಿಸಲು, ನನಗೂ ಯಾರಾದರೂ ಹೀಗೆಯೇ ರಾಕೆಟ್ ಪತ್ರಗಳನ್ನು ಬರೆದು ಅದು ಇನ್ಯಾರದೋ ಕೈಗೆ ಸಿಕ್ಕಿಬಿಟ್ಟರೆ ಅನ್ನೋ ಒಂದು ಭಯವು ಇತ್ತು. ನನ್ನ ಪುಣ್ಯವೋ, ಯಾವ ಜನ್ಮದ ಶಾಪವೋ ನನಗೆ ಪ್ರೇಮಪತ್ರ ಬರೆಯುವ ಧೈರ್ಯ ಒಬ್ಬರೂ ಈ ತನಕವೂ ಮಾಡಲಿಲ್ಲ, ಹಾಗೊಂದು ಕನಸು ಉಳಿದೆ ಹೋಯಿತು.
ಈಗಲೂ ನನಗೆ ಈ ಪೇಪರ್ ವಿಮಾನ ಕಂಡಾಗಲೆಲ್ಲ ಅವನ್ನು ಬಿಡಿಸಿ ನೋಡಬೇಕು ಅನ್ನೋ ಬಯಕೆ ಹುಟ್ಟುವುದುಂಟು. ನಿಜವಾದ ವಿಮಾನದಲ್ಲಿ ಮೊದಲ ಬಾರಿ ಕುಳಿತಾಗಲೂ ಆಗದ ಖುಷಿ ಮೊತ್ತ ಮೊದಲ ಬಾರಿಗೆ ಸುದ್ದಿಪತ್ರಿಕೆಯಲ್ಲಿ ಮಾಡಿ ಹಾರಿಸಿದ ವಿಮಾನ ಕೊಟ್ಟಿತ್ತು. ಈ ವಿಮಾನಗಳು ಎಲ್ಲಿಂದ ಎಲ್ಲಿಗೂ ಹಾರಬಹುದು ಥೇಟ್ ಪಕ್ಷಿಗಳಂತೆ, ಯಾವ ಗಡಿಯ ಹಂಗಿಲ್ಲದೆ, ಚೆಕ್ಇನ್, ಸೆಕ್ಯೂರಿಟಿ, ಗೇಟ್ ಕ್ಲೋಸ್ , ಎಂಬ ಮಿತಿಗಳಿಲ್ಲದೆ, ಬರೀ ನಾಲ್ಕು ಮೂಲೆಯ ಹಾಳೆಯ ಮಡಿಕೆಗಳು ವಿಮಾನವಾಗಿ ಕನಸುಗಳಿಗೆ ರೆಕ್ಕೆಯಾಗಿ ಕ್ರಮಿಸುವ ದೂರ ಕಡಿಮೆಯಿರಬಹುದು, ಆದರೆ ಇವು ಮನಸಲ್ಲಿ ಮೂಡಿಸಿದ ಕಾಮನಬಿಲ್ಲು ಮಾತ್ರ ಸದಾ ರಂಗು ರಂಗು.
Picture credits:Google |
No comments:
Post a Comment