Sunday, September 25, 2011

ಎಲ್ಲರಿಗೊಪ್ಪೋ ...ಹರಿವೆ ಸೊಪ್ಪು


ಈ ದಿನ ಅಡುಗೆಮನೆಯಿಂದ ಚರ ಚರ ಸಪ್ಪಳ ಅಮ್ಮ ಇಳಿಗೆಮಣೆ ಮೇಲೆ  ಕುಳಿತು ದಾಸರಪದ ಗುನುಗುನಿಸುತ್ತ ಹರಿವೆ ಸೊಪ್ಪು ಹೆಚ್ಚುತ್ತಿದ್ದಳು..ಹಿತ್ತಲಲ್ಲಿ ಬೇಕಾದಅಷ್ಟು ಜಾಗೆ ಅದರಲ್ಲಿ ಆಕೆಯೇ ನೆಟ್ಟು ಬೆಳೆಸಿದ ಹರಿವೆ ಸೊಪ್ಪು...ಇವತ್ತು ಮನೆಮಂದಿ ಎಲ್ಲರು ಎರಡು ತುತ್ತು ಹೆಚ್ಚು ತಿನ್ನುವುದಂತು  ಗ್ಯಾರಂಟಿ  ,,,ಹರಿವೆ ಸೊಪ್ಪಿನ ರುಚಿಯೇ ಅಂಥದ್ದು...
ಹರಿವೆ ಸೊಪ್ಪನ್ನು ನಮ್ಮ ನೆಲದಲ್ಲಿ ಆಹಾರವಾಗಿ ಬಳಸಲು ಯಾರು ಆರಂಭಿಸಿದರೋ ತಿಳಿಯದಾದರು..ಅವರಿಗೊಂದು ಫುಲ್ ನಮಸ್ಕಾರ ಹಾಕಲೇ ಬೇಕು..ಯಾಕಂದ್ರೆ ಮಧ್ಯನಕ್ಕೊಂದು ಪಲ್ಯ ರಾತ್ರಿಗೊಂದು ಸಾರು ,ಸಾಸಿವೆಅಂತೆಲ್ಲ ಬಳಸಲ್ಪಡುವ ಈ ಹರಿವೆ ಸೊಪ್ಪಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕಂಶಗಳಿವೆ ..ಹಲವಾರು ಬಾರಿ ನಮಗೆ ಗೊತ್ತಿಲ್ಲದೇ ಹರಿವೆ  ಆಹಾರ್ ರೂಪದ ವೈದ್ಯನಾಗುವುದು ಉಂಟು ,,

ಹರವಿ,ಹರ್ಗಿ,ದಂಟಿನ ಸೊಪ್ಪು ,ಕೀರೇ ಸೊಪ್ಪು,ರಾಜಗೀರ್,ಕಿರ್ಕಸಾಲಿ ಅಂತೆಲ್ಲ ಕರೆಯಲ್ಪಡುವ ಹರಿವೆ ಸೊಪ್ಪಿನ ವೈಜ್ಞಾನಿಕ  ಹೆಸರು amarantus gengetics.ಇದನ್ನು ಚೈನಾ ಸ್ಪಿನಾಶ್ .ಎಂದೂ ಕರೆಯುವುದುಂಟು ಭಾರತ,ಮಲೇಶಿಯಾ ,ತೈವಾನ್ ,ಸೌತ್ ಫೆಸಿಪಿಕ್ಗಳಲ್ಲಿ ಕಾಣಸಿಗುವ ಈ ಹಸಿರು ಕೆಂಪು  ಹರಿವೆಯ ಮೂಲ ಮಾತ್ರ ದಕ್ಷಿಣ ಅಮೇರಿಕ/ಮೆಕ್ಷಿಕೊ ದಲ್ಲಿದೆ ಇದನ್ನು ವಾರ್ಷಿಕ ಬೆಳೆಯಾಗಿಯು ಬೆಳೆಸಲಾಗುತ್ತದೆ.ಹಲವಾರು ಪ್ರಭೇದಗಳಿದ್ದರು  ಮುಖ್ಯವಾಗಿ ೬ ರೀತಿಯ ಹರಿವೆಸೋಪ್ಪಿನ ಪ್ರಭೇದಗಳನ್ನು ಗುರುತಿಸಬಹುದು.

ಔಷದಿಯಾಗಿ ಹರಿವೆ...
 
''ಹಿತ್ತಲದಾಗವರತ್ತಿ ಕರೆದು ಕಳ್ಳ ದನಿಲೆ ಕೇಳತಾಳ

ಹಚ್ಚನ್ನ ಹರವಿ ಸೊಪ್ಪು ತಿನ್ನಂಗಾಗೈತೆ ,ಬಾಲನ ಬವಕಿಯ ಬಯಸಂಗಗೈತೆ....'....''

ಹೀಗೆಂದು ಹಾಡಿದ್ದು ಜನಪದರು...ಗರ್ಭಿಣಿ ಮತ್ತು ಬಾಣಂತಿಯರಿಗೆ ಹರಿವೆಸೊಪ್ಪಿನ ಮಹತ್ವವನ್ನು ಅವರಿಗಿಂತ ಹೆಚ್ಚಿಗೆ ಬಲ್ಲವರ್ಯಾರು??ಗರ್ಭಿಣಿಯರು ಹರಿವೆ ಸೊಪ್ಪನ್ನು ಆಹಾರದಲ್ಲಿ ಬಳಸುವುದಲ್ಲದೆ ಬಟ್ಟಲು ಹರಿವೆ ರಸಕ್ಕೆ ಚಿಟಿಕೆ ಯಾಲಕ್ಕಿ ಪುಡಿ ಮತ್ತು ಜೇನು ಬೆರೆಸಿ ಕುಡಿಯುವುದರಿಂದ ಮಗುವಿನ ಬೆಳವಣಿಗೆಗೆ ಪೂರಕವಾಗುತ್ತದೆ.ಮತ್ತು ಬಾಣಂತಿಯರಿಗೆ ಇದನ್ನು ಕೊಡುವುದರಿಂದ ಎದೆಹಾಲು ವೃದ್ಹಿಸುತ್ತದೆ.ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಸಟ್ಟಿ ಪೂಜೆಯಂದೇ ಬಾಣಂತಿಯರಿಗೆ  ಹರಿವೆ ಸೊಪ್ಪಿನ ಪಲ್ಯವನ್ನು ನೀಡಲಾಗುತ್ತದೆ.

  • ಕುಂಟಿತ ಬೆಳವಣಿಗೆ ಹೊಂದಿರುವ ಮಕ್ಕಳಿಗೆ ಪ್ರತಿದಿನ ಚಮಚದಷ್ಟು ಹರಿವೆ ಸೊಪ್ಪಿನ ರಸ ಮತ್ತು ನಿಂಬೆರಸವನ್ನು ಬೆರೆಸಿ ಕೊಡುವುದರಿಂದ ಪುಷ್ಟಿ ದೊರಕುವುದು.
  • ಮಲಬದ್ಧತೆ ಬಾಧಿಸುವಾಗ ಹರಿವೆ ಸೊಪ್ಪನ್ನು ಆಹಾರ ರೂಪದಲ್ಲಿ ಸೇವಿಸಿದರೆ ಪರಿಹಾರ ದೊರಕುವುದು.
  • ಗಾಯ,ಮತ್ತು ಬಾವು ಗಳಲ್ಲೂ ಹರಿವೆ ಸೊಪ್ಪಿನ ಲೇಪನ ಮಾಡಿದರೆ ಗುಣ ಕಾಣುತ್ತದೆ 
  • ಹರಿವೆ ಸೊಪ್ಪಿನ ಬಳಕೆ ಹೆಚ್ಹು ಹೆಚ್ಹು ಮಾಡುವುದರಿಂದ ಡಯೇರಿಯ,ಮತ್ತು ಅಜೀರ್ಣಕಾರಕ ಭೆದಿಯನ್ನು ಬಹುಮಟ್ಟಿಗೆ ತಡೆಯಬಹುದು.
  • ಕೀರೇ ಸೊಪ್ಪಿನ ರಸ ನ್ಮತ್ತು ನಿಂಬೆ ರಸವನ್ನು ತಲ್ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ತಲೆಹೊತ್ತಿನ ಸಮಸ್ಯೆ ಕಡಿಮೆಯಾಗಿ ,ಕೂದಲು ಸೊಂಪಾಗಿ ಬೆಳೆಯುವುದು.
  • ಹರಿವೆಸೊಪ್ಪಿಗೆ ರಕ್ತ ಸ್ರಾವವನ್ನು ತಡೆಗಟ್ಟುವ ಶಕ್ತಿಯು ಇದೆ..
  • ಮುಳ್ಳುಹರಿವೆ ಗದ್ದೆ ಬದುಗಳಲ್ಲಿ ಸಾಕಷ್ಟು ಸಿಗುತ್ತದೆ ಇದನ್ನು ಆಹಾರದಲ್ಲಿ ಬಳಸುವುದರಿಂದ ಬೆನ್ನು ,ಕಾಲು ಸೆಳೆತದಿಂದ ಮುಕ್ತಿ ಪಡೆಯಬಹುದು.
  • ಬೇಸಿಗೆಯಲ್ಲಿ ಹರಿವೆ ಸೊಪ್ಪನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ.
  • ಬಾಯಿ ಹುಣ್ಣು ಮತ್ತು ಗಂಟಲ ಕಿರಿಕಿರಿಯಲ್ಲಿ ಹರಿವೆಸೋಪ್ಪನ್ನು ಬೇಯಿಸಿದ ನೀರಿನಿಂದ ಗಾರ್ಗಲ್ ಮಾಡಿದರೆ ಬೇಗ ಗುಣ ಕಾಣುವುದು .
  • ಇದರ ಬೀಜವನ್ನು ಧನ್ಯದನ್ತೆಯು ಬಳಸಲಾಗುತ್ತದೆ ಇದರ ಹಿಟ್ಟಿನಿಂದ ಮಾಡಿದ ಖಾದ್ಯವನ್ನು ಉಪವಾಸಗಳಳಲ್ಲಿ ಸೇವಿಸಲಾಗುತ್ತದೆ,ಇದರಿಂದ ಹಪ್ಪಳ,ರೊಟ್ಟಿಗಳನ್ನು ವಿಶೇಷವಾಗಿ ತಯಾರಿಸುತ್ತಾರೆ.
  •  ಅನಿಮಿಯ ,ರಕ್ತ ದೋಷ ಉಳ್ಳವರು ಅಗತ್ಯವಾಗಿ ಇದನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ .
ಹರಿವೆ ಸೊಪ್ಪಿನಲ್ಲಿ ವಿಟಮಿನ್ ,ಐರನ್.ಕ್ಯಾಲ್ಷಿಯಂ ಗಳು ಹೇರಳವಾಗಿರುವುದರಿಂದ ಪ್ರತಿಯೊಬ್ಬರೂ ಇದನ್ನು ಸೇವಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.ನಿಮ್ಮ ಹಿತ್ತಲಿನಲ್ಲಿ  ಸ್ವಲ್ಪ ಜಾಗೆ ಇದ್ದರು ನೀವೇ ಬೆಳೆಸಬಹುದು.ಮತ್ಯಾಕೆ ತಡ ಹರಿವೆಯಾ ಹಿರಿಮೆಯನ್ನು ನೀವು ಅನುಭವಿಸಿ..ಬಾಯಿ ರುಚಿಯೊಂದಿಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ..

Monday, September 12, 2011

ಪಾತ್ರ ಅದಲು- ಬದಲು

 ಮಳೆ ಜೋರಾಗುತ್ತಿದೆ...ಬೇಗ್ ಬೇಗ ಬಾ...ಹಾಗೆನ್ನುತ್ತ ಮಗುವಿನ ಕೈ ಹಿಡಿದುಕೊಂಡು ಓಟದ ನಡಿಗೆ ನಡೆಯುತ್ತಿದ್ದೆ....ಆತನೋ ಅಲ್ಲಿ ನಿಂತ ನೀರಲ್ಲಿ ಪಟ್ಟನೆ ಜಿಗಿದು ಪಚ್ಚ್ಹ್ ಅಂತ ಶಬ್ದ ಮಾಡಿ..ಮೈ ತುಂಬಾ ನೀರು ಮಾಡಿಕೊಳ್ಳುತ್ತಿದ್ದ....ಆತನೊಂದಿಗೆ ನಾನು ತೊಯ್ಯುತ್ತಿದ್ದೆ...ಹಾಗ ಮಾಡಬೇಡ...!ಸುಮ್ನೆ ಬರೋಕಗಲ್ವಾ????ಹಾಗಂತ ಮತ್ತೆ ನಾ ನಡೆಯುತ್ತಿದ್ದೆ...ಮತ್ತೆ ಅವನದು ಅದೇ ಕಥೆ...ತಲೆಯ ಮೇಲೊಂದು ಮೊಟಕಿದೆ...ಬೇಗ ಬಾ ಅಂದ್ರೆ ತರ್ಲೆ..ಅದು ಮಳೆಲಿ...ನಾಳೆ ನೆಗಡಿ ಆಗುತ್ತೆ ಆಗಲೋ ನಾನೆ ಬೈಸ್ಕೊಬೇಕು ನಿನ್ ಪಪ್ಪ ನಾ ಹತ್ರ...ಅಮ್ಮನ್ನಿಗೆ ಯಾಕ ಹೀಗ್ ತೊಂದ್ರೆ ಕೊಡ್ತೀಯ???ಹಾಗಂತ ಕೇಳಿದೆ...ಮಗು ತಲೆಕೆಳಹಾಕಿ ಸುಮ್ಮನೆ ನಡೆಯ ತೊಡಗಿತು.....
ಮಳೆ ಜೋರಾಯಿತು..ನಡೆಯೋಕೆ ಆಗ್ತಿಲ್ಲ..ಅಲ್ಲೇ ಒಂದು ಕಂಪೌಂಡಿನ ಪಕ್ಕದ ಮಾಡಿಗೆ ಆಸರೆಯಂತಿದ್ದ ಮರದ ಕೆಳಗೆ ನಿಂತು ಕೊಂಡ್ವಿ.....

ಮರದ ಮೇಲೆ ಬಿದ್ದ ಮಳೆಹನಿಗಳು...ಎಲೆಗಳ ತುದಿಯಿಂದ ಒಂದಂದಾಗಿ ಉದುರುತ್ತಿದ್ದವು..ಬೀಳು ವ ಮಳೆ ಹನಿಗಳತ್ತ ನಿರಾಯಾಸವಾಗಿ ಕೈ ಚಾಚಿದೆ...ಪ್ರತಿ ಹನಿಯು ಕೈಮೇಲೆ ಬಿದ್ದು ಸಿಡಿಯುತ್ತಿತ್ತು..ಅದನ್ನು ಅನಂದಿಸ ತೊಡಗಿದೆ...ಮನಸು ಹಿಂದೆ ಓಡಿತು...ಮುಂಚೆ ಮಳೆಗಾಲ..ಎಂಬುದು...ಚೈತನ್ಯ ದಾಯಿ.ಸಮಯ..ಆಗಲೇ ಅಲ್ವೇ ಶ್ರಾವಣದ ಸಂಭ್ರಮ..ಅರಿಶಿನ ಕುಂಕುಮ ಪೂಜೆ ಎಂದು ಅಮ್ಮಂದಿರೆಲ್ಲ ಬ್ಯುಸಿ ಯೋ ಬ್ಯುಸಿ..ನಾನೂ ಅವರೊಂದಿಗೆ ಹೋಗುತ್ತಿದ್ದೆ...ರಸ್ತೆಯ ಹೊಂಡಗಳಲ್ಲಿ  ಮಳೆ ನೀರಲ್ಲಿ ಮಾಡಿದ ಚಹಾ ಬಣ್ಣದ ನೀರು...ಕಾಲು ತಡೆಯುವುದೇ ಇಲ್ಲ.. ಒಮ್ಮೆ ಜಿಗಿದು ಬಿಡೋಣ ಅನಿಸಿ ಅದರಲ್ಲಿ ಆತ ಆಡಿದಾಗೆಲ್ಲ  ಅಮ್ಮ ತಲೆಗೊಂದು ಮೊಟಕುತ್ತಿದ್ದಳು...ಯಾವಾಗ್ ಬುದ್ಧಿ ಬರುತ್ತೋ...ಹುಶಾರಿಲ್ದೇ  ಮಲ್ಕೋ...ಶಾಲೆಗೆ  ಮತ್ತೆ ರಜೆ ಹಾಕು ..ಮತ್ತೆ ನೀ ನರಳೋದು...ಇರೋ ಕೆಲಸ ಏನ್ ಕಮ್ಮಿನ ಮತ್ತೆ ನೀ ಇದನ್ನೊಂದು ತಗಲಿಹಾಕಿಕೊಂಡು......ಅಪ್ಪನ ಹತ್ರ ನಾ ಬೈಸ್ಕೊಬೇಕು....''ಅಮ್ಮನ ಸಹಸ್ರಾರ್ಚನೆ ಮುಂದುವರಿಯುತ್ತದೆ......

ಆಗೆಲ್ಲ ನಾ ಅಂದುಕೊಳ್ಳೋದಿತ್ತು ನಾ ಅಮ್ಮ ಆದಾಗ ನನ್ ಮಗು ನಾನು ಇಬ್ಬರು ಮಳೆ ನೀರಲ್ಲಿ ಆಟ ಆಡ್ತೀವಿ..ನಾ ಯಾವತ್ತು ಅಮ್ಮನಂತೆ ನನ್ನ ಮಗುನ ಬೈಯ್ಯಲ್ಲ..ಬರೀ ಮುದ್ದು ಮುದ್ದು ಮುದ್ದು ಅಷ್ಟೇ.. ಇಷ್ಟಕ್ಕೂ ಅಮ್ಮ ಯಾಕೆ ಹೀಗ್ ಆಡ್ತಾಳೆ ಅಂತ ಆಲೋಚಿಸುವಷ್ಟು ಬುದ್ಧಿ  ಬಲಿತಿರಲಿಲ್ಲ....ಬಾಲ್ಯ ದಾಟಿತು...ಅಂದುಕೊಂಡ ಮಾತುಗಳು ಮಾತ್ರ ಮನಸಲ್ಲೇ ಉಳಿದಿದ್ದವು.
 
.ಈಗ ನಾನು ಅಮ್ಮ.... ನಾನೂ ಅಮ್ಮ ನಂತೆ ವರ್ತಿಸಿದೆ....ಪಾತ್ರಗಳು ಅದಲು- ಬದಲಾದಂತೆ ಮನುಷ್ಯನ ಬುದ್ಧಿ  ಮಾತು,ಆಲೋಚನೆ ಎಲ್ಲವು ಬದಲಾಗುತ್ತ????ನಾವ್ಯಾಕೆ ಅಷ್ಟು ಬೇಗ ಬದಲಾಗ್ತೀವಿ????ನಾವು ದೊಡ್ಡೋರು ಅನ್ನೋ ಒಂದು ಅಹಮ್ಮಿನಲ್ಲಿ ಮನಸಿನ ಒಂದು ಮೂಲೆಯಲ್ಲಿ ಅಡಗಿ ಕುಳಿತಿರೋ..ಪುಟ್ಟ ಮಗುವನ್ನು ಹೊರಬರಲು ಬಿಡುವುದೇ ಇಲ್ಲ...ಅಂತರಂಗದಲ್ಲಿ ಬಾಲ್ಯದ ಒರತೆ ಅದೆಲ್ಲೋ ಮುಚ್ಚಿ ಹಾಕಿಬಿಡುತ್ತೇವೆ..ನಮ್ಮ ಕನಸುಗಳು..ನಮ್ಮ ಆಲೋಚನೆಗಳು..ಮೆಟ್ಟಿದ ಮನೆಯ ಅಚ್ಚಲ್ಲಿ ಅಚ್ಹಾಗಿ ಬಿಡುತ್ತವೆ...ನಾವೂ ಅಮ್ಮ ಆಗಿಬಿಡುತ್ತೇವೆ....ಹೊರಗಿನ ಮಳೆಯೊಂದಿಗೆ ಮನಸು ಒದ್ದೆ ಒದ್ದೆ.......

ಅಮ್ಮನಿಗೆ ಒಮ್ಮೆ sorry ಹೇಳ್ಬೇಕು ಅನ್ಕೊಂಡೆ...ಮಳೆ ಕೊಂಚ್ ನಿಂತಂತಾಯಿತು...ಮಗ ಇನ್ನೂ ಗಲ್ಲ ಉಬ್ಬಿಸಿಕೊಂಡೆ ಇದ್ದ ...ಮನೆಗೆ ಬಂದೊಡನೆ ಪುಟ್ಟ  ಪುಟ್ಟ  ಕಾಗದದ ದೋಣಿಗಳೊಂದಿಗೆ ರಸ್ತೆಯಲ್ಲಿ ಹರಿದು ಬರುತ್ತಿದ್ದ ನೀರಲ್ಲಿ ನಮ್ಮ ದೋಣಿಯಾನ ಆರಂಭವಾಯಿತು.. ಮಗು ಸಿಟ್ಟು ಮರೆತು ಮನಸ್ಪೂರ್ತಿ ಆಡ ತೊಡಗಿತ್ತು......ಆಗ ನೆನಪಾದ ಹಾಡುಗಳೆಷ್ಟೋ...ಕವನಗಳೆಷ್ಟೋ.... ಮಗ ''ಅಮ್ಮ  ನೀನು ಗುಡ್ ಗರ್ಲ್ ''ಅಂತ ಸರ್ಟಿಫಿಕೆಟ್ ಬೇರೆ ಕೊಟ್ಟ. ಬಾಲ್ಯದುದ್ಯಾನದಲಿ ಹೂತು ಹೋಗಿದ್ದ.. ಕನಸ ಬೀಜಕ್ಕೆ.ಒಲವಿನೊರತೆಯ ಸಿಂಚನ... ಮನದಲ್ಲಿ ಮಾತ್ರ ಅವೆ ಪ್ರಶ್ನೆಗಳ ಮಹಾಪೂರ ..


(www.vijayanextepaper.com ವಿಜಯನೆಕ್ಷ್ತವಾರಪತ್ರಿಕೆಯ ಅವಳ ಡೈರಿ ಅಂಕಣದಲ್ಲಿ ಪ್ರಕಟಿತ )