Wednesday, January 11, 2012

ಅಮ್ಮ ಮಾಡಿದ ಕೇಕು




ಜಗತ್ತಿಗೆಲ್ಲ ಜನೆವರಿ ೧ ಹೊಸ ವರ್ಷದ ಆರಂಭ ಆದ್ರೆ..ನನಗೆ ಮಾತ್ರ ಜನೆವರಿ ೩ ಹೊಸ ವರ್ಷ ಅದ್ಯಾಕೆ ಅನ್ನೋ ಪ್ರಶ್ನೆ ಹುಟ್ಟೋ ಮೊದಲೇ ಉತ್ತರ ಹೇಳೋ ಕಾತರ ನನಗೆ...ಈ ದಿನವೇ ನನಗೆ ಜಗತ್ತಿನ ಅತ್ಯುನ್ನತ ಹುದ್ದೆ ಸಿಕ್ಕಿದ್ದು,ಹೊಸ ಬದುಕಿಗೆ ಹೊಸ ಜೀವನ ಶೈಲಿಗೆ ,ಹೊಸ ಪದವಿಗೆ ನನ್ನ ಪರಿಚಯ ಆದದ್ದು..ನಾ ಅಮ್ಮ ಎಂಬ ಟೈಟಲ್ ಪಡೆದಿದ್ದು...ಬದುಕಿನ ಪ್ರತಿ ಬದಲಾವಣೆಯನ್ನು ಮನಸ್ಪೂರ್ತಿ ಸ್ವಾಗತಿಸಿ ನೋವನ್ನು ಕೂಡ  ಒಂದು ಖುಷಿಯಿಂದ ಅನುಭವಿಸುವ ನನಗೆ ಇದು ಅವರ್ಣನೀಯ ಅನುಭವ.ಆಸ್ಪತ್ರೆಗೆ ದಾಖಲಾಗಿ,ಹೊಟ್ಟೆನೋವ ಭರದಲ್ಲಿ ನನ್ನ ತಲೆಯಲ್ಲಿ ಅಚ್ಚಾಗಿದ್ದ ಅಷ್ಟು ಹಾಡುಗಳನ್ನು ಹಾಡಿ  ಬರಿದು ಮಾಡಿ ಸಂಕಟದಲ್ಲೂ ಸಂತಸ ವನ್ನು ತುಂಬಿ ಕೊಟ್ಟ ರಾತ್ರಿಯದು...

ಮುಂಜಾನೆ ಮೊದಲ ಪ್ರಹರಕ್ಕೆ ಪ್ರಥಮ್ ನನ್ನ ಪಕ್ಕ ದಲ್ಲಿ .ಹಾಯಾಗಿ ನಿದ್ರಿಸುತ್ತಿದ್ದ. ಇದೆಲ್ಲ ಮೊನ್ನೆ ಮೊನ್ನೆಯಂತಿದೆ ಅದಾಗಲೇ ಪ್ರಥಮನಿಗೆ ೫ ತುಂಬಿತು .ಕಳೆದ ನಾಲ್ಕು ವರ್ಷದ ಜನುಮದಿನದ ಆಚರಣೆಯನ್ನು ನಮಗಿಷ್ಟ ಬಂದಂತೆ ಆಚರಿಸಿದ್ದು ಆಯ್ತು. ಇಗ ಅವನು ತನ್ನ ಅನಿಸಿಕೆ ಇಚ್ಹೆ ವ್ಯಕ್ತ ಪಡಿಸಲು ಶುರು ಮಾಡಿದಾನೆ ಅದಕ್ಕೆ ಅವನನ್ನೇ ಕೇಳಿದೆ ಹೇಗೆ ಆಚರಿಸೋಣ ನಿನ್ನ ಬರ್ತ್ ಡೇ???ಯಾರನ್ನ ಕರಿಬೇಕು ??ನಿನಗೇನು ಗಿಫ್ಟ್ ಬೇಕು?? 
                                                                                                                               
ಕೇಳೋದನ್ನೇ ಕಾಯುತ್ತಿದ್ದ ಅನಿಸುತ್ತೆ .''ಅಮ್ಮ ನನಗೆ ದೊಡ್ಡ ಕೇಕ್ ಬೇಕು''  ಮಗ ಅವನ ಇಚ್ಛೆ ಹೇಳಿದ ಕೂಡಲೇ ನನಗ್ಯಾಕೋ ಅಂಗಡಿಯಿಂದ ತರುವ ಮನಸ್ಸಾಗಲಿಲ್ಲ ,ನಾನೇ ಯಾಕೆ ಕೇಕ್ ಮಾಡಬಾರದು ಅನ್ನೋ ಉಮೇದು ತಲೆಯನ್ನು ಹೊಕ್ಕಿ ಇಂಟರ್ನೆಟ್ ತುಂಬಾ ಕೇಕ್ ರೆಸಿಪಿ ತಡಕಾಡಿದೆ.೨-೩ ಪ್ರಯೋಗಗಳನ್ನು ಮಾಡಿದೆ ,ಓಕೆ ಈಗೊಂದಿಷ್ಟು ಕಾನ್ಫಿಡೆನ್ಸು ಬಂದಿತ್ತು ನಾನೂ ಕೇಕ್ ಮಾಡಬಲ್ಲೆ...

ಇವರಿಗ್ಯಾಕೋ ನನ್ನ ಮೇಲೆ ನಂಬಿಕೆ ಇಲ್ಲ ಬೇರೆ ಎಲ್ಲಾ ಸರಿ ನಾಲ್ಕು ಮಂದಿ ಬರೊವಾಗ ನಿನ್ನ ಪ್ರಯೋಗಪಶು ಅವರಾಗೋದು ಬೇಡ..ನೀ ಕೇಕ್ ಮಾಡು ಆದ್ರೆ ಅದನ್ನ ನಾವು ಮನೆಮಟ್ಟಿಗೆ ಕಟ್  ಮಾಡೋಣ ಬರ್ತ್ ಡೇ  ಫಂಕ್ಷನ್  ಗೆ ಹೊರಗಿಂದ ನೇ ತಂದರಾಯಿತು.ಈಗ ಇದು ನನ್ನ ಮರ್ಯಾದೆ ಪ್ರಶ್ನೆ.೨ ನೇ ತಾರೀಖಿನ ಸಂಜೆ ನನ್ನ ಆಪರೇಶನ್ ಕೇಕ್ ಆರಂಭ ಆಯ್ತು ಇದು ಸರಿ ಆಗದಿದ್ದರೆ ಅವರು ಹೇಳಿದಂತೆ ಮರುದಿನ ಬೆಳಿಗ್ಗೆ ಹೋಗಿ ಕೇಕ್ ತಂದರಾಯಿತು ಅನ್ನೋ ಮುಂದಾಲೋಚನೆ ನನ್ನದು..

 ಬ್ಲ್ಯಾಕ್ ಫಾರೆಸ್ಟ್ ಕೇಕ್ ,ಕೇಕ್ ನ ಬೇಸ್ ಸರಿ ಆಯಿತು ಅಂದ್ರೆ ಉಳಿದಿದ್ದೆಲ್ಲ ಕರಗತ .ಆ ಸಮಯದಲ್ಲಿ ನಾ ಹರಕೆ ಹೊತ್ತಷ್ಟು ಚವತಿ ಚಕ್ಕುಲಿ ಮಾಡುವಾಗ ಎದುರುಮನೆ ಆಯಿ ಕೂಡ ಹೊತ್ತಿರಲಾರರು .ಒವ್ವೆನ್  ನ ಟೈಮರ್ ನನ್ನು ದಿಟ್ಟಿಸಿದಷ್ಟು ಇವರ ಮುಖವನ್ನು ದಿಟ್ಟಿಸಿರಲಿಕ್ಕಿಲ್ಲ ನಾ .ಬೇಕಿಂಗ್ ಟ್ರೇಯಿಂದ ಕೇಕ್ ತೆಗೆಯುವಾಗ ಮತ್ತೊಮ್ಮೆ ೨೦೦೭ ರ ಜನವರಿ ೩ ನೆನಪಾಗಿತ್ತು .ಆಹಾ ಆದಷ್ಟು ಚನ್ನಾಗಿ ಬಂದಿತ್ತು ಪತಿದೇವ ಮಧ್ಯ ಮಧ್ಯ ಬಂದು ಹಾಗ ಮಾಡು ಹೀಗ್ ಮಾಡು ಅನ್ನೋ ಫ್ರೀ ಸಲಹೆ ಕೊಡುತ್ತಿದ್ದರು ಮತ್ತೆರಡು ಘಂಟೆಯಲ್ಲಿ ನನ್ನ ಡ್ರೀಮ್ , ಬ್ಲಾಕ್ ಫಾರೆಸ್ಟ್ ಕೇಕ್ ತಯಾರಾಗಿತ್ತು ,

ಪತಿದೇವ ,ಮಗರಾಯ ಇಬ್ಬರೂ ಅದನ್ನು ನೋಡೋದ್ರಲ್ಲೇ ತಲ್ಲೀನ ,ಮಗ ''ಅಮ್ಮ ನೀ ಗುಡ್ ಗರ್ಲ್ ಅಮ್ಮ  ''ಅಂದು ನನ್ನ ಬೆರಳುಗಳಿಗೆ ಮುತ್ತು ಕೊಟ್ಟಿದ್ದ ...ಇನ್ನೇನು ಬೇಕು..ನಾನೂ ಹರುಷದ ಹೊಳೆಯಾಗಿದ್ದೆ. ಅವನ ಬರ್ತ್ ಡೇ ಗಿಫ್ಟು ನನಗೆ ಸಿಕ್ಕಂತಿತ್ತು ನನ್ನ ಖುಷಿ.ಮರುದಿನ ಮಾಡಿದ ಕ್ಯಾರೆಟ್ ಹಲ್ವಾ ,ಎಪ್ಪಲ್ ಖೀರು  ಎಲ್ಲವು ಸುಮ್ಮನೆ ಮುಚ್ಚಳ  ಹೊದ್ದು ಮಲಗಿದ್ದವು ಎಲ್ಲರು ಕೇಕ್ ಹೊಗಳಿ ಅದನ್ನೇ ಬಯಸಿದರು ಮಕ್ಕಳು ಅದರ ರೂಪ ಕಂಡು ತನ್ಮಯರಾಗಿದ್ದರು.ಕೆಲವರು ನನ್ನ ಮಗನ ಬರ್ತ್ ಡೇ ಗೆ ನೀನೆ ಕೇಕ್ ಮಾಡು ಅಂದ್ರು ,ಯಪ್ಪಾ...೨೦೧೨ ಕ್ಕೆ ಇಷ್ಟು ಸಾಕು ಅನ್ನೋಷ್ಟು ಮೆಚ್ಹುಗೆ..ಸಿಕ್ಕಿತ್ತು ನಾ ಮಾಡಿದ ಕೇಕ್ ಗೆ ...

ಇನ್ನು ನನ್ನ ಸರದಿ ನಾ ಮಾಡಿದ್ದನ್ನು  ಟೇಸ್ಟ್(ಟೆಸ್ಟ್ ) ಮಾಡಬೇಡವೆ...ಸುಮ್ಮನೆ ಒಂದು ಚೂರು ತೆಗೆದು ಬಾಯಲ್ಲಿಟ್ಟೆ,ಯಾಕೋ ಅಮ್ಮ ನೆನಪಾದಳು , ಅದರ ಹಿಂದೆ ನೆನಪುಗಳ ತೇರು..ನಮ್ಮ ಜನುಮದಿನಕ್ಕೆ ಅಮ್ಮ ತಯಾರಿಸುತ್ತಿದ್ದ ಕೇಕು ..ಅದರ ರುಚಿ ...ಯಾಕೋ ಗೊತ್ತಿಲ್ಲ ಅಷ್ಟರ ತನಕ ನಾ ಅನುಭವಿಸಿದ ಎಲ್ಲಾ ಹೆಮ್ಮೆ ,ಖುಷಿ  ,ಮಾಯ ,
ಅಮ್ಮನಿಗೆ ತನ್ನ ಮಕ್ಕಳ ಬರ್ತ್ ಡೇ ಕೂಡ ಇತರ ಮಕ್ಕಳಂತೆ ಕೇಕ್ ತಂದು ಹ್ಯಾಪಿ ಬರ್ತ್ ಡೇ ಅಂದು ಹಾಡಿ,ಅವರಿವರನ್ನು ಕರೆದು ಆಚರಿಸಬೇಕು ಅನ್ನೋ ಆಸೆ..ನನ್ನ ಪಪ್ಪ ..ಅದರ ಸರಿ ವಿರುಧ ದಿಕ್ಕು.ಅವರಿಗೆ ಬರ್ತ್ ಡೇ ಅನ್ನೋದು ಪಾಶ್ಚಿಮಾತ್ಯ ರ ಅನುಕರಣೆ ,ಶೋಕಿ ಮತ್ತಿನ್ನೇನೋ ......ಕೇಕು ತನ್ನಿ ಅಂದಾಗಲೇ ಅಲ್ಲೊಂದು ವಾಗ್ಯುದ್ಧ ಚಾಲು.

ಇದಕ್ಕೊಂದು ಬ್ರೇಕ್ ಹಾಕಲಿಕ್ಕೆ  ಅಮ್ಮ ಮನಸ್ಸಲ್ಲೇ ನಿರ್ಧರಿಸಿದಳು ಅನಿಸುತ್ತೆ,  ಅದು ನನ್ನ ೧೦ ನೇ ವರ್ಷ ದ ಜನುಮದಿನ ,ಅಮ್ಮ ಅದೆಲ್ಲಿಂದಲೋ ಸಿಮಂಟು ಚೀಲದ ತುಂಬಾ ಉಸುಕು ಹೊತ್ತು ತಂದಿದ್ದಳು ,  ಮೊದಲೆರಡು ವಾರದ ಬೆಣ್ಣೆಯನ್ನು ಜೋಪಾನ ಮಾಡಿಟ್ಟಿದ್ದಳು. ಸಾಮಾನ್ಯದಂತೆ ರವೆಲಾಡು ಮಾಡಿದ ನಂತರ ಮೈದಾ,ಮೊಟ್ಟೆ  ಮತ್ತಿನ್ನೇನೋ ಎಲ್ಲಾ ಸೇರಿಸಿ  ಒಂದು ಸಿಹಿ ಹಿಟ್ಟು ತಯಾರಿಸಿದ್ದಳು(ಆಕೆಯ ಎಲ್ಲಾ ಅಡಿಗೆ ಯನ್ನುಮೊದಲಿಗೆ  ಸವಿದು ಉಪ್ಪುಖಾರ ರುಚಿ   ಹೇಳುವುದು ನಾನೇ) ದೊಡ್ಡ ಪಾತ್ರೆಯಲ್ಲಿ ಉಸುಕು ಸುರಿದು ಕಟ್ಟಿಗೆ ಉರಿ ಮೇಲೆ ಇಟ್ಟು ಸಿಹಿ ಹಿಟ್ಟಿನ ಡಬ್ಬಿಗೆ ಮುಚ್ಚಳ ಬಿಗಿದು ಅದರ ಮೇಲಿತ್ತು ಮತ್ತೊಂದಿಷ್ಟು ಉಸುಕು ಅದರ ಮೇಲೆ ಸುರಿದಳು ,ನನಗೆ ಆಕೆಯ ಯೋಜನೆ ಏನು ಎಂಬುದೇ ಅರ್ಥ ಆಗಲಿಲ್ಲ..ರವೆ ಲಾಡು ರುಚಿಯಾಗಿತ್ತು ಸೊ ,ನಾನು ಅದರಲ್ಲೇ ಬ್ಯುಸಿ ಇದ್ದೆ , ಓಲೆ ಮುಂದೆ  ಕೂತು ಉರಿ 
ಒಂದೇ ರೀತಿ ಇರುವಂತೆ ಮೆಂಟೈನ್  ಮಾಡೋದ್ರಲ್ಲಿ ಮಗ್ನ ನನ್ನಮ್ಮ ,


ಅದೊಂದಿಷ್ಟು ಹೊತ್ತಿನ ನಂತರ ''ಅಮಿತಾ ಬಾ ಇಲ್ಲಿ  ನೋಡು ಅಂದು ಕರೆದಾಗ ನಾನು ರವೆಲಾಡು ಮೆದ್ದು ಮೆದ್ದು ಅಂಟು ಅಂಟು  ಮುಖ ಒರೆಸುತ್ತಾ  ಹೋಗಿದ್ದೆ ,ಅಲ್ಲಿ ಆಕೆ ಪಪ್ಪ ಊಟ ಮಾಡುವ ಅಗಲ ತಾಟಿನಲ್ಲಿ ಡಬ್ಬಿ ದಬ್ಬು ಹಾಕಿದ್ದಳು ,ಮತ್ತು ಮೆತ್ತಗೆ ಅದನ್ನು ಮೇಲೆತ್ತಿದಳು ,ಅಲ್ಲಿತ್ತು ನನ್ನ ಬರ್ತ್ ಡೇ ಗಿಫ್ಟು...ಅದು ಅಮ್ಮ ತನ್ನ ಕೈಯ್ಯಾರೆ ಮಾಡಿದ ಕೇಕು .ಹೆಸರು ಗಿಸರು ಬರೆಯೋಕಗಲ್ಲ ಹಾಗೆ ಚಾಕು ತಗೊಂಡು ಕತ್ತರಿಸು..ಅಂದು ತಂಗಿ ಮತ್ತು ನಾನು ಜೊತೆಗೆ ಆಕೆಯ ಮಾಸ್ಟರ್ ಪೀಸೆ ನ  ಪೀಸ್  ಮಾಡಿ ತಿಂದೆವು.ಅದೊಂಥರ ರುಚಿ...ಅದನ್ನು ವರ್ಣಿಸಲಾಗದು ,ತಳದಲ್ಲಿ ಸ್ವಲ್ಪ ಸೀದು ಹೋಗಿತ್ತು ಸೀದು ಹೋದ ಕೇಕು ಇನ್ನು ರುಚಿ..

ಕಣ್ಣು ತೊಯುತ್ತವೆ ಅದನ್ನು ನೆನೆಸಿಕೊಂಡರೆ ,ಅಮ್ಮ ಅಂದರೆ ಹಾಗೇ ...ಆಕೆ ಒಂದು ಅಧ್ಭುತ.ಆಕೆ ಮುಂದೆ ನಾವು ಏನು ಅಲ್ಲ . ನನ್ನ ಕೈಯ್ಯಲ್ಲಿ ಸೆಲ್ಫ್ ರೈಸಿಂಗ್ ಮೈದಾ ,ಓವೆನ್ . ಇವೆನ್ ತಾಪಮಾನ, ವೆನಿಲ್ಲಾ ಎಸ್ಸೇನ್ಸು ಎಲ್ಲವು  ಇದೆ.ಸ್ವಲ್ಪ ಗಮನ ಕೊಟ್ಟರೆ ಸಾಕು..ಆದರೆ ಆಕೆ ಆಕೆಗದೆಷ್ಟು ತಾಳ್ಮೆ..ಕಟ್ಟಿಗೆ ಉರಿಯಲ್ಲಿ ಆಕೆಯದೇ ತಂತ್ರಗಾರಿಕೆಯಲ್ಲಿ ಯಾಲಕ್ಕಿ ಹಾಕಿಯಾದರು ಸರಿ ಆಕೆ ಕೇಕ್ ಮಾಡಿದ್ದಳು.ಆಗ ಬೇಕರಿ ಇಲ್ಲವೇ???ಇತ್ತಲ್ಲ ೧೫ ರುಪಾಯಿಗೆ ೧/೪ ಕೆ ಜಿ ತೂಕದ ಕೇಕು ಆರಾಮಾಗಿ ಸಿಗುತಿತ್ತು,ಆದರೂ ಆಕೆ ನಮಗೆಂದು ಅದೆಷ್ಟು ಆಸ್ಥೆಯಿಂದ ಅದೆಲ್ಲ ಮಾಡಿದ್ದಳು..ನನಗೊಂದಿಷ್ಟು ಅಡಿಗೆ ಮೇಲೆ ಪ್ರೀತಿ ಬಂದಿದೆ ಅಂದ್ರೆ ಆಕೆಯ ಉಡುಗೊರೆ ಅದು ನನಗೆ ,ಈಗಲೂ ಆಕೆಗೊಂದು ಕನಸು ಆಕೆ ಒಮ್ಮೆ ಆದರೂ  ಆ ಅಡುಗೆ ಶೋ ಗಳಲ್ಲಿ ಭಾಗವಹಿಸಬೇಕು..ಅಂತಾನೆ ಇರ್ತಾಳೆ  ಚಂದ ಮಾಡಿ ರೆಸಿಪೆ ಬರೆದು ಕೊಡು ಅಮಿತಾ ಅಂದು..ನಾವು ಊರ ಸುದ್ದಿ ಎಲ್ಲಾ ಬರಿತೇವೆ  ಆಕೆಗೆ ಬರೆದು ಕೊಡಲು ಆಲಸ್ಯ ,ಈ ಬಾರಿ ಊರಿಗೆ ಹೋದಾಗ ಮಾತ್ರ ಆ ಕೆಲಸ ಮಾಡಲೇ ಬೇಕು ಅಂದು ಕೊಂಡೆ,


ಈ ಪಪ್ಪನಿಗೆ ಅಸಲಿಗಿಂತ ಬಡ್ಡಿ ಯ ಮೇಲೆ ಪ್ರೀತಿ  ಜಾಸ್ತಿ, ಮಕ್ಕಳ ಬರ್ತ್ ಡೇ ಗೆ ಯಾವತ್ತು ವಿರೋಧಿಸಿಯೇ ಗುರುತಿಸಿಕೊಂಡ ಪಪ್ಪ ನನ್ನ ಮಗನ ಮೊದಲ ಎರಡನೇ ಮೂರನೇ ಜನುಮದಿನಕ್ಕೆ ಓಡಾಡಿದ್ದೆ ಓಡಾಡಿದ್ದು ,,,,ನನ್ನದು ಸುಮ್ಮನಿರುವ ಬಾಯಲ್ಲ ನಾ ಹೇಳದೆ ಬಿಟ್ಟೆನೆಯೇ??ಪಪ್ಪ  ಆಗ ತನ್ನ ಮೂಗಿಗಿಳಿದ ಕನ್ನಡಕವನ್ನು ಮೇಲೇರಿಸಿ ಒಂದು ಸ್ಮೈಲ್ ಕೊಟ್ಟು '' ಅದು ಹಂಗವಾ ದಿನಮಾನ ಬದಲಿ ಆಗ್ಯಾವ  ನಾವು ಬದಲಿ ಆಗಬೇಕು ..''ಅಂತಾನೆ ಆದರೂ ಮಕ್ಕಳ ವಿಷಯಕ್ಕೆ ಬಂದರೆ ಮತ್ತೆ ಅದೇ ಕತೆ .

ಯಾಕೋ ಗೊತ್ತಿಲ್ಲ ಅಮ್ಮ ಮಾಡಿದ ಕೇಕು ಮತ್ತೆ ಮತ್ತೆ ನೆನಪಾಗುತ್ತಿದೆ..ಅಮ್ಮ ನಿನಗೊಂದು ಸಿಹಿ ಸಿಹಿ ಉಮ್ಮಾ ...