ನಿಮಗ ಬಾಲವಾಡಿ ಹಾಡುಗಳು ನೆನಪಿವೆಯೇ??? ಇ ಪ್ರಶ್ನೆಗೆ ಇಲ್ಲ ಅಂತ ಉತ್ತರ ಬರೋದಿಲ್ಲ ಎಂಬ ಪೂರ್ಣ ಭರವಸೆ ಇದೆ.ಯಾಕೆಂದರೆ ಆ ಹಾಡುಗಳಿಗೆ ಅಂತಹ ಒಂದು ಅಪೂರ್ವ ಶಕ್ತಿ ಇದೆ.ಜೀವದಷ್ಟು ಪ್ರೀತಿಸಿದ ಕವಿಯ ಹಾಡುಗಳು ಕಾಲಕ್ರಮೇಣ ಮರೆತು ಹೋಗಬಹುದು..ಭಾಳ ಇಷ್ಟಾ ಆದ ಸಿನಿಮಾ ಹಾಡು ನೆನಪ ತಕ್ಕೆಯಿದ ಜಾರಿ ಹೋಗಿರಲು ಬಹುದು.ಆದರೆ ಈ ಬಾಲವಾಡಿ ಹಾಡುಗಳು ಹಾಗಲ್ಲ.ಎಷ್ಟು ವರ್ಷದ ನಂತರ ನಿದ್ದೆಯಲ್ಲಿ ಎಬ್ಬಿಸಿ ಕೇಳಿದರು ಪಟ ಪಟ ನೇ ತುಟಿಯಾಚೆ ಪರೇಡು ಹೊರಡುತ್ತವೆ,ಏಕೆಂದರೆ ನಾವು ಅಚ್ಚರಿಯಿಂದ ನೋಡುವ ಈ ಬಣ್ಣದ ಜಗತ್ತಿಗೆ ಮತ್ತು ನಮ್ಮ ಮನಸಿಗೆ ಒಂದು ಸುಗಮ ,ಕಲ್ಪನಾಶೀಲ ,ಸುಂದರ ದಾರಿಯನ್ನು ಈ ಪುಟಾಣಿ ಪದ್ಯಗಳು ನಿರ್ಮಿಸುತ್ತವೆ.
ಉದಾಹರಣೆಗೆ ;-ಚುಕು ಬುಕು ಚುಕುಬುಕು ಉಗಿಯ ಬಂಡಿ
ಹೊಗೆಯ ತೆರೆಗಳು ಮೇಲೆ ಹೋಗಿ
ಓಡುವ ಗಿಡಗಳ ನೋಡೋಣ` ಮಾವನ ಊರಿಗೆ ಹೋಗೋಣ ........
ಇಲ್ಲಿ ಮಗು ವಿನ ಮನಸು ಉಗಿಬಂಡಿ-ಅದೂ ಮಾಡುವ ಶಬ್ದ -ಅದೂ ಉಗುಳುವ ಹೊಗೆ -ಕಿಟಕಿಯಿಂದ ನೋಡಿದರೆ ಓಡುವ ಗಿಡ ಹೀಗೆ ಎಷ್ಟೊಂದು ಘಟನೆಯನ್ನು ತನ್ನ ಕಲ್ಪನೆಯಲ್ಲಿ ತಂದು ಕೊಳ್ಳುತ್ತದೆ ಮತ್ತು ಅದು ಮಗುವಿನ ಹಸಿ ಗೋಡೆಯಂತ ಮನಸಿನಲ್ಲಿ ಅಚ್ಚಾಗಿ ಉಳಿಯುತ್ತದೆ.
ಅದಕ್ಕೆ ಏನು ಮರೆತರು ಈ ಹಾಡುಗಳು ನಮ್ಮ ಸ್ಮೃತಿಯಿಂದ ಅದಷ್ಟು ಸುಲಭವಾಗಿ ಮಾಸಲಾರವು.
ಆದ ಕಾರಣ ಮಕ್ಕಳ ಕಲಿಕೆಯ ಆರಂಭಿಕ ಹಂತದಲ್ಲಿ ಈ ಪುಟ್ಟ ಪುಟ್ಟ ಸರಳ ಧಾಟಿಯ ಪದ್ಯಗಳು ಕಲಿಕೆಯ ಬಹುಮುಖ್ಯ ಮಾಧ್ಯಮವಾಗಿ ಪರಿಣಮಿಸುತ್ತವೆ.
೫೦ ವರ್ಷ ಗಳ ಹಿಂದೆ ಕಲಿತ ಈ ಹಾಡುಗಳು ಈಗಲೂ ಅಷ್ಟೇ ಉಮೇದಿನಿಂದ ಹಾಡುವವರಿದ್ದಾರೆ ,ಸಮಸ್ಯೆ ಎಂದರೆ ಈಗಿನ ಮಕ್ಕಳಿಗೆ ಹಿಂದಿನ ತರಗತಿಯಲ್ಲಿ ಕಲಿತ ಪದ್ಯಗಳು ನೆನಪಿರುವುದಿಲ್ಲ.ಇದಕ್ಕೆ ಪುಷ್ಟಿಯಾಗಿ ನ್ಯೂಯಾರ್ಕ್ ನ ಮುನ್ದೋ ಪಬ್ಲಿಕೇಶನ್ ನ ಟೋನಿ ಸ್ಟೀಡ್ ಅವರು ಮಾಡಿದ ಸಂಶೋಧನೆಯ ಪ್ರಕಾರ ೧೯೪೫ ರ ಹೊತ್ತಿಗೆ ಪ್ರಾಥಮಿಕ ಶಾಲೆಯ ಮಕ್ಕಳ ಶಬ್ದ ಸಂಪತ್ತು ಸುಮಾರು ೧೦,೦೦೦ ಮತ್ತು ಈಗಿನ ಮಕ್ಕಳ ಶಭ್ಧ ಕೋಶದಲ್ಲಿರುವುದು ಸರಿ ಸುಮಾರು ೨,೫೦೦ ಪದಗಳು.ಈ ಅನಾರೋಗ್ಯಕರ ಬೆಳವಣಿಗೆಗೆ ಟೋನಿ ಕೊಡುವ ಮುಖ್ಯ ಕಾರಣ ಪಾಲಕರು ಮಕ್ಕಳೊಂದಿಗೆ ಮಾತಾಡುತ್ತಿಲ್ಲ ಮತ್ತು ಮಕ್ಕಳ ಮನಸ್ಸನು ಓದುವ ತಾಳ್ಮೆ ತೋರುತ್ತಿಲ್ಲ .ಮತ್ತು ಅವರಿಗೆ ರೈಮ್ ಗಳ ಪರಿಚಯ ಸರಿಯಾಗಿ ಮಾಡಿಕೊಡುತ್ತಿಲ್ಲ.ಎಂಬುದು
ಹಿಂದೆ ಕೂಡು ಕುಟುಂಬದಲ್ಲಿ ಪುಟ್ಟ ಮಕ್ಕಳು ಅಜ್ಜಿ ತಾತನೊಂದಿಗೆ ಬೆಳೆಯುತ್ತಿದ್ದವಾದ್ದರಿಂದ..ತಮ್ಮ ಬೆರಳುಗಳ ಚಲನೆಯಿಂದ ಶುರುಮಾಡಿ ನಡಿಗೆ, ಮಾತು ,ಆಟ, ಊಟ ಎಲ್ಲದಕ್ಕೂ ಅವರಿಗೊಂದು ಪದ್ಯ ,ಮತ್ತು ಹಿತವಾದ ಮಾತು ಆಧಾರ ವಾಗುತಿತ್ತು. ಮತ್ತು ಮಕ್ಕಳು ಹಿರಿಯರಿಂದ ಕೇಳಿದ ಪದ್ಯದ ಶಬ್ಧಗಳಿಗೂ ತಾವು ನೋಡುತ್ತಿರುವ ದೃಶ್ಯಕ್ಕೂ ತಾಳೆ ಹಾಕುತ್ತಿದ್ದವು.
ಒಂದು ಪಕ್ಷ ಪದ್ಯದಲ್ಲಿರುವ ವಸ್ತುಗಳು ಮಕ್ಕಳ ಎದುರಿಗೆ ಇಲ್ಲವಾದಲ್ಲಿ ಅವುಗಳ ಕಲ್ಪನೆ ಮಾಡಿ ದೃಶ್ಯ ಚಿತ್ರಣವನ್ನು ತಮ್ಮ ಮನದ ಕೆನ್ವಾಸ್ ಮೇಲೆ ಬಿಡಿಸಿದುತ್ತಿದ್ದವು,ದಿನ ಕಳೆದಂತೆ ಹಾಡುಗಳು ಕಡಿಮೆ ಆದವು ಮಾತುಗಳು ನಿಂತು ಹೋದವು ಟೀವಿ ಎಂಬುದು ತಿಂಡಿ ಊಟ ಮತ್ತು ನಿದ್ದೆಯನ್ನು ಆಳ ತೊಡಗಿತು .ಈಗ ಮಕ್ಕಳು ಯೋಚಿಸುತ್ತವೇನೋ ನಿಜ ಆದರೆ ಕಾರ್ಟೂನ್ ತೋರಿಸಿದ್ದನ್ನು.ಹಾಗೆಂದು ಕಾರ್ಟೂನ್ ಗಳು ಮಕ್ಕಳ ಸೃಜನಶೀಲತೆ ಹಾಳು ಮಾಡುತ್ತಿವೆ ಎಂಬರ್ಥವಲ್ಲ .ಆದರೆ ಎಲ್ಲೋ ಒಂದು ಕಡೆ ಅವರ ಬೆಳವಣಿಗೆ ಕುಂಟಿತ ಕೊಳ್ಳುತ್ತಿದೆ. ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಾವು ಪಾಲಕರೇ ಕಾರಣವಾಗುತ್ತಿದ್ದೇವೆ, ವೃತ್ತಿ ಮತ್ತು ಕುಟುಂಬದ ಸ್ವಾಸ್ಥದ ನಡುವೆ ಸಮಾನತೆ ಹಿಡಿತ ಸಾಧಿಸುವಲ್ಲಿ ಅದೆಷ್ಟು ಬ್ಯುಸಿ ಆಗಿಬಿಡುತ್ತೇವೆ .ಮತ್ತು ಗೊತ್ತಿಲ್ಲದೇ ಮಗುವಿನ ಭವಿಷ್ಯದ ಅಡಿಗಲ್ಲಗಬೇಕಾಗಿರುವ ಸಮಯವನ್ನು ನಿರ್ಲಕ್ಷಿಸಿ ,ಅವರ ಭವಿತವ್ಯದ ಬೃಹತ್ ಬಂಗಲೆಯ ಕಾಮಗಾರಿ ಶುರುಮಾಡಿ ಬಿಡುತ್ತೇವೆ.ಈ ಪುಟ್ಟ ತಪ್ಪು ಮಗುವಿನ ಸಂಪೂರ್ಣ ಬದುಕಿನ ಸ್ವಸ್ಥ ಕೆಡಿಸುತ್ತದೆ,ಎಂಬುದು ತಜ್ಞರ ಅಂಬೋಣ.
ಮಗುವಿನ ಮೊದಲ ಕೆಲವು ವರ್ಷಗಳು ನಮ್ಮ ಮಾತನ್ನು ಅವುಗಳು ಆಲಿಸುವಂತೆ ,ಪ್ರೇರೇಪಿಸಬೇಕು,ಇಲ್ಲಿ ಮಾತಿಗಿಂತ ಮುಖ್ಯವಾದುದ್ದು ಅವೆ ಬಾಲ ಗೀತೆಗಳು. ಮಕ್ಕಳು ಅನುಭವಿಸಿ ಕುಣಿಯುವ ರೈಮ್ ಎಂಬ ಪುಟ್ಟ ಹಾಡು ಅದೆಷ್ಟು ಪ್ರಯೋಜನಕಾರಿ ಎಂಬುದನ್ನ ಈ ಕೆಳಗಿನ ಅಂಶಗಳಿಂದ ಮನಗಾಣ ಬಹುದು.
- ಬಾಲವಾಡಿ ಹಾಡುಗಳು ಮಗುವನ್ನು ಮಾತನಾಡಲು ಪ್ರೇರೇಪಿಸುತ್ತವೆ.
- ಧ್ವನಿಯ ಹಿತವಾದ ಬಳಕೆ ಮತ್ತು ಅದರ ಅಂದವನ್ನು ಗ್ರಹಿಸುವಲ್ಲಿ ಮಗುವಿಗೆ ಸಹಕರಿಸುತ್ತವೆ.
ಮಕ್ಕಳ ಉಚ್ಚಾರ ಸ್ಪಷ್ಟತೆಗೆ ಸಹಾಯಕ ,
- ಕಲಿತ ಹೊಸ ಹಾಡನ್ನು ಮನೇ ಮಂದಿ ,ಸ್ನೇಹಿತರು , ಬಂಧುಗಳ ಮುಂದೆ ಹಾಡುವ ರೂಡಿಯಿಂದ ಮಕ್ಕಳು ಸಭಾ ಕಂಪನ ,ಭಯ,ಗಳಿಗೆ ಒಳಗಾಗುವುದಿಲ್ಲ ಅವರಲ್ಲಿ ಆತ್ಮವಿಶ್ವಾಸ ಹೆಚುತ್ತದೆ.
- ಹಿಂದಿನ ಕಾಲದಲ್ಲಿ ಧಾರ್ಮಿಕ ,ಸಾಮಾಜಿಕ ಮೌಲ್ಯಗಳನ್ನು ಮತ್ತು ನಮ್ಮ ಆಚರಣೆಗಳನ್ನು ಮಗುವಿನ ಮನಸ್ಸಲ್ಲಿ ಬಿಂಬಿಸಲು ಹಿರಿಯರು ಈ ಹಾಡಿನ ಸಹಾಯ ಪಡೆಯುತ್ತಿದ್ದರು ,
ಉದಾ ;-ಗಣೇಶ ಬಂದ ಕಾಯಿ ಕಡಬು ತಿಂದ
ಹೊಟ್ಟಿ ಮ್ಯಾಲೆ ಗಂಧ
ಬಾವ್ಯಾಗ ಬಿದ್ದ ಮುಳುಗಿ ಮುಳುಗಿ ಎದ್ದ ,ಈ ಹಾಡಿನಲ್ಲಿ ಗಣೇಶ ಚತುರ್ಥಿಯ ಸಂಪೂರ್ಣ ಕಥೆಯೇ ಇದೆ.ಇದಲ್ಲದೆ ಇಂಗ್ಲೀಷ್ ರೈಮ್ ಗಳಲ್ಲಿ ಕ್ರಿಸ್ಮಸ್ ,ಸಂತಾ,ಸ್ನೌ ಮನ್ ,ಹಲೋವಿನ್ ಗೆ ಸಂಬಂಧಿಸಿದ ಹಲವು ಗೀತೆಗಳಿವೆ.
- ಮಕ್ಕಳ ಜ್ಞಾಪಕ ಶಕ್ತಿ ವೃದ್ಹಿಸುತ್ತದೆ.
- ಸರಳ ವಾಖ್ಯಾ ಗಳು .ಮತ್ತು ವಾಕ್ಯವನ್ನು ರಚಿಸುವ ವಿಧಾನ ಈ ಹಾಡುಗಳು ಮಕ್ಕಳಿಗೆ ಹೇಳಿಕೊಡುತ್ತವೆ
- ಮಗುವಿನ ಶಭ್ದ ಸಂಪತ್ತು ಬೆಳೆಯುತ್ತದೆ.
- ಮಗುವು ವಿವಿಧ ಧ್ವನಿಗಳನ್ನು ಗ್ರಹಿಸಿ,ಗುರುತಿಸಲು ಕಲಿಯುತ್ತದೆ.
- ಈ ಸರಳ ಹಾಡುಗಳಲ್ಲೂ ಹಲವು ಟಂಗ್ ಟ್ವಿಸ್ಟೆರ್ ಗಳಿರುವುದರಿಂದ ಮಗುವಿನ ಮುಖ ಮತ್ತು ಗಂಟಲು ,ಬಾಯಿಗೆ ಅಗತ್ಯವಿರುವ ವ್ಯಾಯಾಮ ಲಭಿಸುತ್ತದೆ
- ಅಭಿನಯ ಗೀತೆಗಳಲ್ಲಿ ಮಗುವಿನ ನಟನಾ ಸಮರ್ಥ ಅದರ ಅಭಿನಯ ಕೌಶಲ ಗಳನ್ನು ಗುರುತಿಸಿ ಅದರ ಆಸಕ್ತಿಯನ್ನು ಗುರುತಿಸಲು ಸುಲಭವಾಗುತ್ತದೆ.
- ಈ ಗೀತೆಗಳು ಮಕ್ಕಳಲ್ಲಿ ಹಾಸ್ಯ ಪ್ರಜ್ಞೆಯನ್ನು ಬೆಳೆಸುತ್ತವೆ.
- ಹಾಡುವಾಗ ಪಾಲಕರೊಂದಿಗೆ ತಟ್ಟುವ ಚಪ್ಪಾಳೆ, ಅಪ್ಪುಗೆ ,ಮುದ್ದು ಮಗುವನ್ನು ಹೊಸದನ್ನು ಕಲಿಯಲು ,ಹುಮ್ಮಸ್ಸು ಕೊಡುತ್ತದೆ.
- ಖುಷಿ, ದುಃಖ ,ಸಹಾಯ ದಯೆ,ಕರುಣೆ ಮಮತೆ ಗಳಂತ ಹಲವು ಭಾವನೆ ಗಳನ್ನು ರೈಮ್ ಗಳು ಹುಟ್ಟು ಹಾಕುತ್ತವೆ,ಅವು ಅನುಭವಿಸಿದ್ದನ್ನು ಶಬ್ದ ರೂಪದಲ್ಲಿ ವಿವರಿಸಲು ಕಲಿಯುತ್ತವೆ.
ಮಗು ೮ ವರ್ಷಗಳ ತನಕ ತನ್ನ ಸುತ್ತಮುತ್ತಲಿನ ಎಲ್ಲಾ ಕಲಿಯ ಬಲ್ಲ ವಿಷಯವನ್ನು ಸ್ಪಂಜಿನಂತೆ ಹೀರಿ ಕೊಳ್ಳುತ್ತದೆ ನಂತರದಲ್ಲಿ ಕಲಿತಿದ್ದನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಲು ನೋಡುತ್ತವೆ.ಆ ಕಾರಣದಿಂದಲೇ ಮಗುವಿನ ಈ ಮೊದಲ ೮ ವರ್ಷಗಳನ್ನು ಗಂಟು ಕಾದಂತೆ ಕಾದು
ಅದಕ್ಕೆ ಸುಭದ್ರ ಬುನಾದಿ ಹಾಕುವ ಜವಾಬ್ದಾರಿ ನಮ್ಮ ಮೇಲಿದೆ .
ಅಂತ ಜವಾಬ್ದಾರಿಯುತ ಕೆಲಸದಲ್ಲಿ ಪುಟ್ಟ ಪುಟ್ಟ ಪದ್ಯ ಗಳು ನಮ್ಮ ಅರ್ಧ ಕೆಲಸವನ್ನು ಸುಲಭ ಗೊಳಿಸುವುದೇ ಒಂದು ಅಚ್ಚರಿಯ ವಿಷಯ.
ನಾವು ಮಾಡಬೇಕಾದ್ದೇನು ??
- ಮಗುವಿನೊಂದಿಗೆ ಮಾತಾಡಿ. ಮತ್ತು ಪುಟ್ಟ ಪುಟ್ಟ ಹಾಡುಗಳನ್ನು ಕೇಳಿಸುವ ಅಭ್ಯಾಸ ಮಾಡಿಕೊಳ್ಳಿ,
- ನಿಮ್ಮ ಆಡುನುಡಿಯೊಂದಿಗೆ,ಮಗು ಬೆಳೆಯುವ ಪರಿಸರದಲ್ಲಿ ಬಳಕೆಯಾಗುವ ಭಾಷೆಯ ಶಿಸು ಗೀತೆಗಳು ನಿಮ್ಮ ಸಂಗ್ರಹದಲ್ಲಿ ಸೇರಿರಲಿ.
- ಎಣಿಕೆ,ಅಕ್ಷರಗಳನ್ನು ಆದಷ್ಟು ಹಾಡಿನೊಂದಿಗೆ ಪರಿಚಯಿಸಲು ಯತ್ನಿಸಿ.(ಉದಾಹರಣೆಗೆ ಕನ್ನಡದ ೧ ..೨....ಬಾಳೆ ಎಲೆ ಹರಡು ..೩..೪...ಅನ್ನ ಹಾಕು. ಇಂಗ್ಲೀಷ್ ನಾ ೧,,೨ ೩,,೪..೫..then i cought a fish alive..ಎಂಬಂತ ಎಣಿಕೆ ಹಾಡುಗಳು .)
- ಕೇವಲ ಹಾಡುವುದಷ್ಟೇ ಅಲ್ಲ ,ಹಾಡಿನ ಸಾಹಿತ್ಯಕ್ಕನುಗುಣವಾಗಿ ಧ್ವನಿಯನ್ನು ಬದಲಾಯಿಸಿ ,ಉದಾಹರಣೆಗೆ ,ಪ್ರಾಣಿ ಪಕ್ಷಿಗಳ ಪದ್ಯಗಲಿದ್ದರೆ ಅವುಗಳ ಧ್ವನಿಯನ್ನು ಅನುಕರಿಸಿ ಇದು ಮಗುವಿಗೆ ಮನರಂಜನೆ ನೀಡುತ್ತದೆ.
- ಇಗ ಮೊದಲಿನಂತೆ ಹಾಡುಗಳನ್ನು ಬರೆದಿಡಬೇಕು ಬಾಯಿಪಾಠ ಮಾಡಬೇಕು ಎಂಬ ಅಗತ್ಯವಿಲ್ಲ.ನಿಮ್ಮ ಸಂಭಂಧಿಗಳಲ್ಲಿ,ಮನೆಯ ಹಿರಿಯರಲ್ಲಿ ಯಾರಿಗಾದರೂ ಇಂತಹ ಪದ್ಯಗಳು ಬಂದ್ರೆ ನಿಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡರು ಆದೀತು.
- ಮಗುವನ್ನು ಮಲಗಿಸೋ ಮುಂಚೆ ಈ ಹಾಡುಗಳನ್ನು ಒಮ್ಮೆ ಹಾಡಿದರು ಸಾಕು,ಮತ್ತು ಇದು ದಿನದ ರೂಡಿಯಾಗಲಿ.
- ಮಗು ತಾನು ಕೇಳಿದ್ದ\ನ್ನು ಕೆಲವೊಮ್ಮೆ ಬರೆಯಲು ಚಿತ್ರಿಸಲು ಯತ್ನಿಸುತ್ತದೆ.ಅದರ ಪ್ರಯತ್ನದಲ್ಲಿ ಎಂದು ನೀವು ಹಸ್ತಕ್ಷೇಪ ಮಾಡಬೇಡಿ.ಅದೂ ಬರೆದಿದ್ದನ್ನು ಶ್ಲಾಘಿಸಿ ಮುದ್ದಿಸುವುದಷ್ಟೇ ಕೆಲಸ.
- ದಿನ ಕಥೆ ಹೇಳುವ ರೂಡಿ ಇದ್ದರೆ ಕೆಲವೊಮ್ಮೆ ಮಗುವನ್ನು ಕಥೆ ಹೇಳಲು ಪ್ರೇರೇಪಿಸಿ.ಮತ್ತು ರೈಮ್ ಗಳನ್ನು ನೀನೆ ನನಗೆ ಹೇಳಿಕೊಡು ಎಂಬಂತೆ ಒತ್ತಾಯಿಸಿ.