Sunday, May 20, 2012

ಪಾತ್ರಾ ಪರಿಣಯ



ಜೋರ್ ನಗು ಬಂತು ಸೋದರತ್ತೆ, ಕಾರವಾರದಲ್ಲಿ ಕೆಸುವಿನೆಲೆಯನ್ನು ಮಾರುತ್ತಾರೆ ಅಂದಾಗ ,ಆಗ  ನಾನ್ ಅಂದುಕೊಂಡಿದ್ದೆ ಹಳ್ಳಿಯ ಜೀವನ ಅದೆಷ್ಟು ಸುಖ ಅದೂ ಮಲೆನಾಡ ಹಳ್ಳಿಗಳು  ಸಂತೆಗೆ ಹೋಗದಿದ್ದರೂ ೧೫ ದಿನಗಳತನಕ ರೀಪೀಟ್ ಆಗದಂತೆ ಸೊಪ್ಪು ಸದೆ, ಚಿಗುರು ದಂಟು ಏನಾದ್ರು ಒಂದು ಸಿಕ್ಕೆ ಸಿಗುತ್ತೆ..ಗೊಜ್ಜು ಹಸಿಗಳಿಗೆ ತರಕಾರಿ ಸಿಪ್ಪೆಗಳನ್ನು ಬಳಸಿದರಾಯಿತು ಅಂದಿನ ಅಡುಗೆ,ಊಟ ಮುಗಿದಂತೆ..
ನಾನೂ ಕೂಡ ಮುಂಡಗೋಡ ದಿಂದ ಕುಂದಾಪುರದ ತನಕವಷ್ಟೇ ಕನಸಿದ್ದು..ವೈದೇಹಿಯವರ ಅಡುಗೆಮನೆ ಹುಡುಗಿಯಂತೆ,!

ನನ್ನ ಬದುಕಲ್ಲಿ ಪದೇ ಪದೇ ಹೊಸ ಆರಂಭಗಳು ಅಂಥದೇ ಒಂದು ಆರಂಭ, ಮದುವೆಯ ನಂತರ ಪಶ್ಚಿಮದ ಈ ನಾಡಿಗೆ ವಲಸೆ ಬರುವದರೊಂದಿಗೆ ಮತ್ತೊಮ್ಮೆ ಮರುಕಳಿಸಿತು.ಅಡುಗೆ ಮನೇ ಅದು ನನ್ನ ಪ್ರಯೋಗಶಾಲೆ.ಇಲ್ಲಿಗೆ  ನಂತರ ನನ್ನ ಅಡುಗೆಮನೆಗೆ ತರಕಾರಿಗಳು ಅಂತ ಸಿಗುತ್ತಿದ್ದುದು ಹೂ ಕೋಸು ,ಕ್ಯಾಬೇಜು ,ಬಿಟ್ಟರೆ ಅಪರೂಪಕ್ಕೆ ಬದನೆಯಂಥ ಒಬರ್ಜಿನ್ , ಅವರಿವರು ಬೆಲ್ಫಾಸ್ಟ್ ಸಿಟಿ ಗೆ ಹೋದಾಗ ತಂದು ಕೊಡುತ್ತಿದ್ದ ಬೆಂಡೆ ಕಾಯಿ  ಇವತ್ತು ಬೇಡ ನಾಳೆ ನಾಳೆ ಬೇಡ ನಾಡಿದ್ದು ಅಂದು ಫ್ರಿಡ್ಜ್ ನಲ್ಲಿಟ್ಟು ಅರ್ಧ ಕೊಳೆಸಿ ಅರ್ಧ ಉಳಿಸಿ ಪೌಂಡುಗಳನ್ನು ರೂಪಾಯಿಗೆ ಕನ್ವರ್ಟ್ ಮಾಡಿ .ಅಯ್ಯೋ ಇಷ್ಟು ಹಣವನ್ನು ಬಿನ್ ಗೆ ಹಾಕಿದೆ ಅಂದು ಅನ್ನಪೂರ್ಣೆ ,ಮಾತೇ ಲಕ್ಶ್ಮಿ ಯರಲ್ಲಿ ಕ್ಷಮೆ ಬೇಡುತ್ತಾ ಮತ್ತೆ ಬ್ರೋಕೊಲಿ , ಬೆಲ್ ಪೆಪ್ಪರ್ ಗಳ ಮೊರೆ ಹೋಗುತ್ತಿದ್ದೆ.

ಊರ ತಿಂಡಿ ತಿನಿಸುಗಳ ಬಗ್ಗೆ ಖಯಾಲಿ ಇಲ್ಲದೇ ಹೋಗಿದ್ದರೆ ಇಲ್ಲಿನ ಬರ್ಗರ್ ಪಿಜ್ಜಾಗಳು ,ಪೀಟಾ ಬ್ರೆಡ್ಡು ಗಳು ಮನಸಿಗೆ ಹಿತ ಕೊಡುತ್ತಿದ್ದವೋ ಏನೋ..ನನ್ನದೋ ಪಂಡಿತರ ಮನೇ.ಜ್ವರ ಬಂದರೂ ಅಡುಗೆಯಲ್ಲೇ ಔಷದಿ ಕೊಟ್ಟು ಗುಣಮಾಡುವ ವಾತವರಣದಲ್ಲಿ ಬೆಳೆದ ನಾನು ನಮ್ಮೂರ ತರಕಾರಿಗಳಿಲ್ಲದೆ ಇಲ್ಲಿಯ ತರಕಾರಿಗಳಲ್ಲಿ ಅಲ್ಲಿನ ಅಡುಗೆ ಮಾಡಿ ಆ ರುಚಿ ಕಾಣಲು ತಹ ತಹಿಸಿದೆ..ಈ ಅಡುಗೆಮನೆ ನಂಟು ಒಮ್ಮೆ ಬೆಸೆಯಿತು ಅಂದ್ರೆ ಮುಗೀತು ಏನು ಇಲ್ಲ ಅಂತ ಗೊತ್ತಿದ್ದರು ಪದೇ ಪದೇ  ಫೇಸ್ ಬುಕ್ ಚೆಕ್ ಮಾಡಿದಂತೆ ,ಗುಡ್ ನೈಟ್  ಹೇಳಿದಮೇಲು ಮತ್ತೊಂದು ಎಸ್ಸೆಮ್ಮೆಸ್ಸು ಕಳಿಸಿದಂತೆ,ಯಾಕೋ ಸಮಾಧಾನ ಆಗಲ್ಲ..ಮತ್ತೇನಾದ್ರು ಹೊಸದು ,ಹಾಗಂತ ಮನಸು ಕೇಳುತ್ತಲೇ ಇರುತ್ತೆ.

ನಮ್ಮ ನೀಲ ಸುಂದರಿ(ನಮ್ಮ ಕಾರು ) ಬಂದಾಗಿನಿಂದ ನನ್ನ್ನ ಈ ರಗಳೆಗೆ ಅಲ್ಪವಿರಾಮ  ಸಿಕ್ಕಿದೆ ನನಗೆ ಶನಿವಾರ ಭಾನುವಾರಗಳಂದು ವರ್ಕ್ ಶಾಪ್ ,ಪ್ರೊಗ್ರಾಮ್ ಗಳು ಇರುತ್ತವೆ ಅದೇ ಕಾರಣಕ್ಕೆ ನಾವು ಬೆಲ್ಫಾಸ್ಟ್* ಗೆ ಪ್ರತಿವಾರ ಹೋಗುತ್ತೇವೆ ,ಹಾಗೊಂದು ದಿನ  ಒಮ್ಮೆ ಎಷಿಯನ್ ಫ್ಲೇವರ್ಸ್ ಗೆ ಹೋಗಿ ಬರೋಣ ಎಂದು ಪೋಸ್ಟ್ ಕೊಡ  ಹುಡುಕಿ  ಹೋದದ್ದಾಯಿತು , ಅಲ್ಲಿ ಪೂರ್ತಿ ಊರೇ ಇದೆ ಸುವರ್ಣ ಗಡ್ಡೆ ,ಅವರೆಕಾಯಿ ಮೂಲಂಗಿ,ತೊಂಡೆಕಾಯಿ ಅಯ್ಯೋ ಅಲ್ಲಿ ನೋಡಿ!! ಇದು ನೋಡಿ!! ಅನ್ನೋ ನನ್ನ ಸುಪರ್ ಉತ್ಸಾಹಕ್ಕೆ ಮನೆಯವರ ತಣ್ಣಗಿನ ನಗುವಷ್ಟೇ ಉತ್ತರ.ಸರಿ ಸುಮಾರು ೧ ವರ್ಷದ ನಂತರ  ಭಾರತದ ಅದು ಉರಾಲ್ಲಿ ಸಿಗುವ ತರಕಾರಿ ರಾಶಿ ಕಂಡು,ಪುಟ್ಟ ಹುಡುಗಿ ಚಾಕಲೇಟ್ ರಾಹಿ ನೋಡಿದ ಹಾಗೆ ಆಡುತ್ತಿದ್ದೆ...ಮಧ್ಯದಲ್ಲಿ   ಅಲ್ಲೇನೋ ಹಸಿರು ಬಣ್ಣದ ಕಟ್ಟು ಅದೇನು ಎಂದು ನೋಡುತ್ತಲೇ... ಅಯ್ಯೋ ಕೆಸುವಿನೆಲೆ...ಈಗೇನು ನಿನ್ನ ಮಾತು ಕಡಿಮೆನ ???ಕೆಸುವಿನೆಲೆ ಯಾಕೆ ಮಾರೈತಿ????ಅನ್ನೋ ಇವರ ಮಾತು ಕೇಳಿಸಿದರು ಕೇಳದಂತೆ..ಅದರ ಬೆಲೆ ಕೂಡ ನೋಡದೆ ತಗೊಂಡು ಬಂದೆ..ಕೆಸುವಿನೆಲೆ ಸಿಕ್ಕ ಖುಷಿ ಒಂದುಬದಿಯಾದರೆ ಅದರ ಪತ್ರೋಡೆಯನ್ನು,ಮಾಡಿ ಯಾರನ್ನ ಕರಿಬೇಕು ಅನ್ನೋ ಮಹದಾಲೋಚನೆ ಕೂಡ ತಲೆಯಲ್ಲಿ ,ಮತ್ತೆ  ನಾನೆಂದು ಮಾಡಿರದ ಮಾಡಲಾರೆ ಅಂದುಕೊಂಡ ''ಹಣ ಕೊಟ್ಟು ತಗೊಂಡ್ ಬಂದ ಕೆಸುವಿನೆಲೆ ಯ ಪತ್ರೊಡೆ.

ಲೆಕ್ಕಮಾಡಿ ೨೫ ಎಲೆಗಳು ,ಅದರಲ್ಲೂ ಇಲ್ಲದ ಆಸೆ ನನಗೆ  ಒಂದು ಗೊಜ್ಜು ,ಸ್ವಲ್ಪ ಅಳವತಿ ಮಾಡಿದರೆ ಹೀಗೆ ಅನ್ನೋ ಯೋಚನೆ..ಪತ್ರೊಡೆ ಮಾಡಲು ಸ್ವಲ್ಪ ಪೂರ್ವತಯಾರಿ ಬೇಕೇ ಬೇಕು ಅಕ್ಕಿ +ತೊಗರಿಬೇಳೆ ನೆನೆ ಹಾಕಬೇಕು ,ಮೆಣಸು ಕೊತ್ತಂಬರಿ ಇಂಗು ಹುರಿಯಬೇಕು ಕೊಬ್ಬರಿ ಮಸಾಲೆ ..ಇದು ಆಗಲು ಇನ್ನೊಂದು ದಿನ ಅದ್ರು ನಾನೂ ಕಾಯಲೇಬೇಕು..ಎದುರಿಗೆ ಎಲೆ ನೋಡಿ ನಾನು ಕಾಯೋದು ಅಂದ್ರೆ ..ಇಲ್ಲ ಅದೆಲ್ಲ ಆಗಲ್ಲ..ಪತ್ರೊಡೆ ಅಲ್ಲದಿದ್ದರೆ ಅದರ ತಂಗಿ ಪಾತ್ರ !!

ಪಾತ್ರ ಕೆಸುವಿನೆಲೆಯಿಂದ ಮಾಡುವ ಪದಾರ್ಥ ,ಪತ್ರೋಡೆಯದೆ ರೂಪ, ಅಂತರಂಗ ಮಾತ್ರ ಬೇರೆ, ಅಕ್ಕಿ, ಬೇಳೆ, ಮೆಣಸಿನ ಮಸಾಲೆ ಬದಲು ಕಡಲೆ ಹಿಟ್ಟು +ಬೆಳ್ಳುಳ್ಳಿ+ಶುಂಟಿ+ಕೊತ್ತಂಬರಿ ಸೊಪ್ಪು+ಮೆಣಸಿನ ಪುಡಿ +ಜೀರಿಗೆ +ಹುಳಿರಸ ಹಾಕಿ ಮಾಡುವ ಸರಳ ಅಡುಗೆ..ಮೂಲತ ಇದು ಗುಜರಾತಿಗಳ ಪಾಕವಿಧಾನ,ಅದಕ್ಕೆ ಮತ್ತಷ್ಟು ಸಾಮಗ್ರಿ ಗಳನ್ನು ಸೇರಿಸಿ ನಮ್ಮ ಕ್ರಿಯಾಶೀಲತೆಯ ಪ್ರದರ್ಶನಕ್ಕೂ ಅವಕಾಶ ಇರುವ ಅಡುಗೆ ಇದು.
ಆಲೋಚನೆ ಬಂದ ಮೇಲೆ ನನ್ನ ಮತ್ತು ಕೆಸುವಿನೆಲೆ ಮಧ್ಯ ಯಾರು ಬರಲಿಲ್ಲ..

ಕಡಲೆಹಿಟ್ಟಿನ ಮಸಾಲೆ ತಯಾರಾಯಿತು ,೧೫ ಎಲೆಗಳನ್ನು ಹಾಕಿ ಪಾತ್ರಾ ಸುತ್ತಿದ್ದು ಆಯಿತು ,ಅದನ್ನು ಚಂದ ಮಾಡಿ ಎತ್ತಿ ಬೇಯಿಸಲು ಹಾಕಿದ್ದು ಆಯಿತು.ಏನೋ ಒಂಥರಾ ಖುಷಿ.ಮಳೆಗಾಲದಲ್ಲಿ ಮೊದಲ ಬಾರಿ ಕಳಲೆ ತಿನ್ನುವ ಸಡಗರ,ಎಲ್ಳುರಿಗೆ  ಸೊಪ್ಪಿನ ತಂಬಳಿ,ಅಣಬೆ ಅದನ್ನೇಗೆ ಮರೆಯಲಿ..ಇವನ್ನೆಲ್ಲ ಪ್ರತಿವರ್ಷ ಸವಿದರೂ ಮತ್ತೊಂದು ವರ್ಷ ಮೊದಲು ಸವಿಯುವಾಗ ಅದೇನೋ ಖುಷಿ..ಅಪ್ಪೆ ಮಿಡಿ ಉಪ್ಪಿನಕಾಯಿಯಂತೆ, ಅಜ್ಜಿಮನೆ ಹಿತ್ತಲಿನ ಮಲಗೊವ ಮಾವಿನಂತೆ,,

ಓಹ್ ..ನನ್ನ ಪತ್ರಾ ಉಗಿಯಲ್ಲಿ ಬೆಂದು ಸಿದ್ಧವಾಗಿತ್ತು ,ಸ್ವಲ್ಪ ತಣಿದ ಮೇಲೆ ಗೊಲಕಾರಕ್ಕೆ ಕತ್ತರಿಸಿ ಬಿಳಿ ಎಳ್ಳು ಸಿಂಪಡಿಸಿ ಗರಿ ಗರಿ ಮಾಡಿ ಎಣ್ಣೆಯಲ್ಲಿ  ಕರಿದಿದ್ದು ಆಯ್ತು..ಅದೇ ಸಮಯಕ್ಕೆ ನನ್ನ ಗೆಳತಿ ಸುರ್ಯಪ್ರಭ ಹಾಜರಿ ಇತ್ತಳು, ಅಕೆನೆ ಪಾತ್ರಾ ದ ರುಚಿ ಮೊದಲು  ನೋಡಿ  ಆಹಾ ಅಂದಿದ್ದು..ನನಗೆ ಅದೇನೋ ಸಮಾಧಾನ.''ಅಮಿತಾ ನೀವು ನಿಸರ್ಗದೊಂದಿಗೆ ಅದೆಷ್ಟು ಹೊಂದಿಕೊಂಡಿದ್ದೀರಿ ಯಾವ ಸೊಪ್ಪು ,ಸಿಪ್ಪೆ ಚಿಗುರು ಅದನ್ನೆಲ್ಲ ಅಡುಗೆ ಮಾಡುವ ಆರ್ಟ್ ಅದೆಷ್ಟು ಚಂದ .ಅದಕ್ಕೆ ನಿಮಗೇ ದೇವರು ಇಷ್ಟು ಸಂವೇದನೆ ,ಸೂಕ್ಸ್ಮತೆ ಕೊಟ್ಟಿದಾನೆ.''ಅಂತೆಲ್ಲ ಆಕೆ ಮಾತಾಡುತ್ತಲೇ ಇದ್ದಳು,ಮನಸು ಮಲೆನಾಡು ,ಕರಾವಳಿ ಬಯಲುಸೀಮೆ ಯ ಹದವಾದ ಮಿಶ್ರಣದ ನನ್ನ ನಾಡನ್ನು ನೆನೆಸಿಕೊಂಡಿತ್ತು , ಕಣ್ಣು ಉಳಿದ ೧೦ ಕೆಸುವಿನೆಲೆಯ ಕರ್ಕಲಿ 
ಮಾಡುವ ಕನಸು ಕಾಣುತಿತ್ತು