Thursday, September 27, 2012

ಚಕ್ಕುಲಿ ಚರಿತ್ರೆ .




ನನ್ನಿಂದ ಈ ಬರಹ ಬರೆಸ್ತಿರೋದು ವಿಜಯಕ್ಕನ ಬ್ಲಾಗ್ ಪೋಸ್ಟು , ಗರಿ ಗರಿ ಕರುಂ ಕುರುಂ ಚಕ್ಕುಲಿ ಬಗ್ಗೆ ಅವರು ಕೊಟ್ಟ ಚಂದದ ನಿರೂಪಣೆ. ಅದೆಷ್ಟು ಅಡುಗೆ ಫೋಟೋ ತೆಗೆದಿಟ್ಟಿದ್ದೇನೆ ಒಂದರ ಕುರಿತು ಹತ್ತು ಕತೆಗಳು ಆದರೆ  ಒಂದಕ್ಷರವನ್ನು ಇತ್ತೀಚಿಗೆ ಬರೆಯಲಾಗುತ್ತಿಲ್ಲ ,ಯಾಕೆ ಅನ್ನೋದು ಗೊತ್ತಿಲ್ಲ ಕಷ್ಟ ಪಟ್ಟು ಅವರಿವರು ಬರೆಯುತ್ತಿದ್ದಾರೆ  ಅನ್ನೋ ಹಪಹಪಿಗೆ  ಬರೆಯುವ ಮನಸ್ಸು ಕೂಡ ಇಲ್ಲ ,ಇವತ್ಯಾಕೋ ಈ ಚಕ್ಕುಲಿ ನನ್ನ ಮನಸ್ಸನ್ನು ಆವರಿಸಿದೆ.ವಿಜಯಕ್ಕನ ಚಕ್ಕುಲಿ ಗಳು ಅದೆಷ್ಟು ಶಕ್ತಿಶಾಲಿ ನೋಡಿ ???

ಚಕ್ಕುಲಿ ಮತ್ತು ಹೊಳಿಗೆ  (ಪೂರನ ಪೂಳಿ) ಇವೆರಡು ತಿಂಡಿಗಳಿಗೆ ನಾವು ಹಬ್ಬಗಳನ್ನೂ ಬ್ರಾಂಡ್ ಮಾಡಿದ್ದೇವೆ ,ಅಮ್ಮ ಚವತಿಗೆ ಚಕ್ಕುಲಿ ಯುಗಾದಿಗೆ ಹೊಳಿಗೇ ಮಾಡೋದು ವಾಡಿಕೆ ,ಆದರೆ ಆ ಚಕ್ಕುಲಿಯ ಕತೆಗಳು ಸಿಕ್ಕಾಪಟ್ಟೆ ರಸವತ್ತು ,ನಮ್ಮ ಹಳೆ ಮನೆ ಮುಂದೆ ಸಾರಸ್ವತ ಕುಟುಂಬವೊಂದು ನೆಲೆಸಿತ್ತು ಅವರ ಮನೆ ಯನ್ನ ನಾವು ಎದುರುಮನೆ ಅನ್ನೋದೇ ರೂಡಿ ,ಅವರ ಮಕ್ಕಳು ಕರೆದಂತೆ ಅವರನ್ನು ಆಯಿ ಪಪ್ಪಾ ಅಂತಲೇ ನಾವು ಕರೆಯೋದು ನಮ್ಮಲ್ಲಿ ಗಣಪತಿ ಇಲ್ಲದ ಕಾರಣ ಚವತಿಯ ಸಕಲ ಸಂಭ್ರಮ ನಾನು ಕಂಡಿದ್ದು ಅವರ ಮನೆಯಲ್ಲಿ ಚವತಿಗೆ ಚಕ್ಕುಲಿ ಮಾಡುತ್ತಿದ್ದಾಗ ಅವರು ಹರಕೆ ಹೊರುತಿದ್ದರು, ಅದು  ಸರಿಆಗದಿದ್ದರೆ ''ಯಾವಳ್  ಹಾಳಾದ ಕಣ್ಣೋ ......'' ಅಂತ ಬೈಯ್ಯೋಕ್ ಶುರು ಮಾಡಿದ್ರೆ ಕೂತ ಗಣಪ್ಪ ಎದ್ದು ಓಡಿಹೋಗಿ ಮತ್ತೆರಡು ವರ್ಷ ಬರಬಾರದು ಹ್ಯಾಂಗ್ ವಟ ವಟ ಮಾಡೋರು ,

ಇನ್ನೊಂದು ಚಕ್ಕುಲಿ ಕತೆ ನನ್ನ ಸಂಗೀತಕ್ಕೊರ್ ಮನೇದು ,ಅವರು ರುಚಿ ನೋಡೋಕಷ್ಟೇ ಚಕ್ಕುಲಿ  ಕೊಡೋದು.ಮತ್ತೆ ಆ ರುಚಿ ಕಾಣಬೇಕೆಂದರೆ ಒಂದ್ ವರ್ಷ ಕಾಯಬೇಕು..ಕಾಯುವಿಕೆಯ ಸುಖಕ್ಕೆಂದು ಸಿಗುವುದು ಮತ್ತೆರೆಡೆ ಚಕ್ಕುಲಿ ,

ನಾನು ತಿಂದ ಸುಪರ ಡ್ಯೂಪರ ಚಕ್ಕುಲಿ ಅಂದರೆ ನನ್ನ ಪಪ್ಪನ ಆತ್ಮೀಯ ಸ್ನೇಹಿತ ವಾಮನ್ ಮಾಮನ ಮನೇದು ಅದೇನು ಹಾಕ್ತಿದ್ರೋ, ಬಾಯಲ್ಲಿಟ್ಟರೆ ನೀರು ಆಗೋದು ಚವತಿಯಲ್ಲಿ ಗಣಪ್ಪನಿಗಿಂತ ನಾನು ತಂಗಿ ಅವರ ಮನೇ ಚಕ್ಕಲಿ ಬರೋದೆ ಕಾಯುತ್ತಿದ್ದೆವು ,
 ಮತ್ತೊಂದು ಚಕ್ಕುಲಿ ನೆನಪು ನನ್ನ ಮಮ್ಮಮ್ಮ (ಅಮ್ಮಮ್ಮ ) ನದು ಆಕೆ ಚಕ್ಕುಲಿಗಿಂತ ತಿನ್ಗೊಳಲು ಅನ್ನೋ ಚಕ್ಕುಲಿಯ ಸೋದರ ಸಂಬಂಧಿಯನ್ನು ಜಾಸ್ತಿ ತಯಾರಿಸೋಳು , ಅಕ್ಕಿ ನೆನೆಸಿಟ್ಟು ಮಾಡುವ ಈ ತಿಂಡಿಯನ್ನು ಆ ಬಾವಿ ಬಾಯಿಯ ಒರಳಲ್ಲಿ ರುಬ್ಬಿ ರುಬ್ಬಿಯೇ ಇರಬೇಕು ನನ್ನ ಮಮ್ಮಮ್ಮ ೧೨ ಹೆತ್ತರೂ  ಆಕೆಯ ಹೊಟ್ಟೆ ಸಪಾಟು ,

 ಈ ಚಕ್ಕುಲಿ ಬಗೆಗೆ ತೀರದ ಆಕರ್ಷಣೆ ಹುಟ್ಟಿಸಿದ್ದು ಅವರಿವರ ಬಯಕೆಊಟದ ಆರತಿಗೆಂದು ಮಾಡುತ್ತಿದ್ದ ೫/೭/೯ ಸುತ್ತಿನ ಚಕ್ಕುಲಿಗಳು ಒಮ್ಮೆ ಅಷ್ಟು ದೊಡ್ಡ ಚಕ್ಕುಲಿ ಮಾಡಿ ತಿನ್ನಬೇಕು ಅನ್ನೋ ಕನಸು ಇನ್ನು ನನಸಾಗಿಲ್ಲ 
ಇನ್ನು ನನ್ನ ಅಮ್ಮನ ಚಕ್ಕುಲಿ ತಯಾರಿಬಗ್ಗೆ ಹೇಳದಿದ್ದರೆ ನನ್ನ ಬರಹ ಅಪೂರ್ಣ ,ಅಮ್ಮ ಚವತಿಗೆ ಒಂದು ವಾರ ಮೊದಲು ಅಕ್ಕಿ ,ಹುರಿದ ಉದ್ದಿನಬೇಳೆ ಸ್ವಲ್ಪ ಪುಟಾಣಿ ಸೇರಿಸಿ ಸ್ಟೀಲಿನ ಡಬ್ಬಿಯಲ್ಲಿ ಹಾಕಿ ಗಿರಣಿಗೆ  ಒಯ್ಯಲು  ಆಜ್ಞೆ ಮಾಡುತ್ತಿದ್ದಳು ,  ಅದರೊಂದಿಗೆ ಇನ್ನು ಕೆಲವು ಕಂಡಿಶನ್ ಇರುತ್ತಿದ್ದವು 
  • ಆ ಡಬ್ಬಿಯನ್ನು ನಮ್ಮ ಪಟಾಲಂ ನ ಯಾರು ಮುಟ್ಟಬಾರದು ,
  • ಆ ಚಕ್ಕುಲಿ ಹಿಟ್ಟು ಬೀಸುವ ಮೊದಲು ನಮ್ಮದೇ ಮನೆಯ ಅಕ್ಕಿ ಅಥವಾ ಗೋದಿ ಬೀಸಬೇಕು ,
  • ತಪ್ಪಿಯೂ ಕೂಡ ಅದರಲ್ಲಿನ ಅಕ್ಕಿಗೂ ನಮ್ಮ ಬಾಯಿಗೂ ಯಾವುದೇ ಮುಖಾ ಮುಖಿ ಆಗಬಾರದು .
  • ಚಕ್ಕುಲಿ ಸರಿಯಾಗದಿದ್ದರೆ  ಸಿದ್ದ ಮಾಡಿದ ಹಿಟ್ತಾದರು ಸರಿ ಅದನ್ನ ಗಿರಣಿಯವನ  ತಲೆಗೆ ತಂದು ತಿಕ್ಕುತ್ತೇವೆ ಎಂದು ಹೇಳು! (ಹೇಳ ಗೀಳೀಯ ಜಾಗ್ರತೆ )
ಆ ಮೂರು ಆಜ್ಞೆಯಲ್ಲಿ ಒಂದನ್ನು ಮಾತ್ರ ನಾವು ಪಾಲಿಸುತ್ತಿದ್ದುದು , ಕೆಲ ವರ್ಷ ಅದು ತಪ್ಪಿದ್ದಿದೆ ಹುರಿದ ಅಕ್ಕಿಯೊಂದಿಗೆ ಹುರಿದ ಉದ್ದಿನಬೇಳೆ ಬರಿ ಬಾಯಲ್ಲಿ ಎಂದಾದರೂ ತಿಂದಿದ್ದೀರಾ ?? ಅದೊಂಥರ ಸಿನಿಮ ನೋಡ್ತಾ ಕಡಲೆ ಬೀಜ ತಿಂದಂತ ಅನುಭವ ಕೊಡುತ್ತೆ ,ಗಿರಣಿಯಲ್ಲಿ ನಮ್ಮ ಸರದಿ ಬರೊ ತನಕ ನಾವು ಅದನ್ನು ಅಷ್ಟೇ ಅಪ್ಯಾಯಮಾನವಾಗಿ ಸವಿಯುತ್ತಿದ್ದೆವು,ಕೊನೆಯದು ಅಮ್ಮನ ಬಾಯಲ್ಲಿ ಕೇಳಲಷ್ಟೇ ಚಂದ ,ಕೊನೆಯಲ್ಲಿ ಜಾಗ್ರತೆ ಅನ್ನೋದು ಇನ್ನು ಚಂದ ,,, ಈಗ ಪಾಪ ನನ್ನ ಪಪ್ಪಾ ಇದರ ಫಲಾನುಭವಿ ,
ಇದು ಚಕ್ಕುಲಿ ತಯಾರಾಗುವ ಕತೆ ತಯಾರಾದ ಮೇಲೆ ಅದರ ನಿಜವಾದ ಮಜ ಅಲ್ವೇ??

ಚಕ್ಕುಲಿ ಯಾವತ್ತು ಬಿಸಿ ಬಿಸಿ ತಿನ್ನಬಾರದು ,ರವೆ ಉಂಡೆ ಕಡಬು ಕರ್ಚಿ ಕಾಯಿ ,ಚಕ್ಕುಲಿ ಹಿಟ್ತಲ್ಲಿ ಮಾಡಿದ ಪೈಸ ವಡೆ ಎಲ್ಲವು ಖಾಲಿ ಆಗುತ್ತಿದ್ದಾಗ ,ಮಾತ್ರ ಆ ಚಕ್ಕುಲಿಯ ನಿಜ ರುಚಿ ಅರಿವಾಗೋದು ,ಡಬ್ಬಿ ತಳ, ಪಾತಾಳ ರಸಾತಳ ಅನ್ನೋ ಶಬ್ಧಗಳ ಮೂರ್ತ ರೂಪ ,
ಇನ್ನು ಚಕ್ಕುಲಿಯನ್ನು ಹೇಗೆ ತಿನ್ನಬಹುದು (''ಬಾಯಿಂದ'' ಅನ್ನೋ ಫನ್ನಿ ಉತ್ತರದ ನಂತರ ...ಇದನ್ನು ಓದಿಕೊಳ್ಳಿ ) ಹಸಿ ಕ್ಹೊಬ್ಬರಿ ತುರಿಯೊಂದಿಗೆ ಮೊದಲ ಪ್ರಯೋಗ ,ಅಮ್ಮ ಸಾರಿಗೆ ಅಂತ ತುರಿದಿಟ್ಟ ಕ್ಹೊಬ್ಬರಿ ಇಟ್ಟಲ್ಲೇ ಮಾಯಾ ,
ನಂತರ ಆ ದಿನದ ಸಾಂಬಾರ್ ಜೊತೆಗೆ ಅದ್ದಿ  ತಿನ್ನದಿದ್ದರೆ ಅದನ್ನು ಚಕ್ಕುಲಿ ಸೀಸನ್ ಅನ್ನೋದೇ ಇಲ್ಲ ಬಿಡಿ ,

ಚಕ್ಕುಲಿ ಘಟ್ಟಿ ಇದ್ದರು  ನುರಿ ನುರಿ ಆಗಿ ಬಾಯಲ್ಲೇ ನೀರಾಗುತ್ತಿದ್ದರೂ  ಯಾವುದೇ ಭೇದವಿಲ್ಲದೆ ಪ್ರಯೋಗಿಸಬಹುದಾದ ರುಚಿ ಚಹಾ ಕಪ್ಪಿನಲ್ಲಿ ಚಕ್ಕುಲಿ ಹಾಕಿ ೨ ನಿಮಿಷ ವಿರಮಿಸಲು ಬಿಟ್ಟು ಚಹಾ  ಕುಡಿಯುತ್ತಲೇ ಅದರಲ್ಲೇ ನೆನೆದ ಚಕ್ಕುಲಿ ತಿನ್ನುವುದು ,ವಿಚಿತ್ರ ಅನ್ನಿಸಿದರೂ ಇದರ ರುಚಿ ಸವಿದವನಿಗೆ ಈಗಾಗಲೇ ಚಕ್ಕುಲಿ ಚಹಾ ಕೈಬೀಸಿ ಕರೆದಿರುತ್ತದೆ ,
ಇನ್ನು ನನ್ನ ಅಜ್ಜಿಗೆ ಹಲ್ಲಿಲ್ಲ ಆದರವಳು ನನ್ನಜ್ಜಿ , ಅವಳ ನಾಲಿಗೆಗೂ ಅಮಿತ ರುಚಿಯ ಚಪಲ ,ಬಾವಿ ಮುಖದ ಅಷ್ಟೇ ಆಳದ ಆ ರುಬ್ಬುಗುಂಡಿನ  ಮೇಲೆ ಇಟ್ಟಿರುವ ಪುಟ್ಟ ಗುಂಡಕಲ್ಲನ್ನು   ಉರುಟುರೂಟು ಚಕ್ಕುಲಿಮೇಲೆ  ನಿರ್ದಯತೆಯಿಂದ ಜಜ್ಜಿ ಅದರ ಪುಡಿ ತಿಂದು ಆಸ್ವಾಧಿಸುತ್ತಾಳೆ  , ಮತ್ತೆ ಕಾಮೆಂಟ್ ಗೆ  ಕಡಿಮೆ ಇಲ್ಲ .

ಇನ್ನು ನಾನು ಚಕ್ಕುಲಿ ಮಾಡಿದ ಕಥೆ ಇಂತಿದೆ , ಹೋದ ಸಾರಿ ಚವತಿಗೆ ಒಂದಷ್ಟು ಜನರನ್ನು ಊಟಕ್ಕೆ ಕರೆದಿದ್ದೆವು ಚವತಿ ಅಂದ ಮೇಲೆ ಚಕ್ಕುಲಿ ಇಲ್ಲದಿದ್ದರೆ??? ಅಂದು ಏನೇನೋ ಮಾಡಿ ಚಕ್ಕುಲಿ ಹಿಟ್ಟು ರೆಡಿ ಮಾಡಿದೆ ,  ಚಕ್ಕುಲಿ ಅಚ್ಚು ,ಒತ್ತು ಎರಡು ಇರಲಿಲ್ಲ ಅದಕ್ಕೇನಂತೆ ಅನ್ನೋ ಉಡಾಫೆಯಲ್ಲಿ ಕೇಕ್ ಡೆಕೊರೆಟ ಮಾಡುವ ಪೈಪಿಂಗ್ ಬ್ಯಾಗ್ ನಲ್ಲಿ ಚಕ್ಕುಲಿ ಹಿಟ್ಟು ಹಾಕಿ ಕೊನೆಪಕ್ಷ ಚಕ್ಕುಲಿಯನ್ತದ್ದು ಏನಾದರೊಂದು ಮಾಡೋಣ ಅಂತ ಪ್ರಯತ್ನಿಸಿದೆ , ಅದೂ ಜಲೆಬಿಯಂತೆ ಕಾಣುತಿತ್ತು ,ಚಕ್ಕುಲಿ ಪ್ರಯೋಗ ಜಲೇಬಿ ಆಗಿದ್ದಕ್ಕೆ ಖೇದವಿತ್ತು ,
ಅದಕ್ಕೆ ಹೋದ ತಿಂಗಳು ಏನಾದರಾಗಲಿ ಅಂದು ಈ ಸಾರಿ ಭಾರತಕ್ಕೆ ಹೋದಾಗ ತಂದ ಚಕ್ಕುಲಿ ಅಚ್ಚಿನಲ್ಲಿ  ಬೋಣಿ ಮಾಡಿ ಬಿಡೋಣ ಅನ್ನಿಸಿತು ,ಆಗ ಮಾತ್ರ ಚಕ್ಕುಲಿ ಚಕ್ಕುಲಿಯಂತೆಯೇ ಕಂಡು ರುಚಿಯು ಅದರಂತೆ ಇತ್ತು. 

ನಮ್ಮ ನೀಲ ಸುಂದರಿ (ನಂ ಕಾರು )ಗೇರ್ ಸಂದಿಯಲ್ಲ್ಲಿ ಹೊಂದಿಕೊಳ್ಳುವಂತ ಡಬ್ಬದಲ್ಲಿ ಪೂರ್ತಿ ಚಕ್ಕುಲಿ ತುಂಬಿಕೊಂಡು ನನ್ನ ಕಾರ್ಯಕ್ರಮ ದ ಪೂರ್ವತಯಾರಿಗೆಂದು  ನಾನು ,ಪತಿದೇವ ಬೆಲ್ಫಾಸ್ಟ್  ಹೊರಟೆವು ಆದಿನ ಆ ಡಬ್ಬಿಯಲ್ಲಿ ಕೈಯ್ಯಾಡಿಸಿದಷ್ಟು ಮದುವೆ ದಿನ ಓಕುಳಿ ನೀರಿನಲ್ಲಿ ಚಿನ್ನದುಂಗುರಕ್ಕು ನಾವಿಬ್ಬರು ತಡಕಾಡಿರಲಿಲ್ಲ, ಶತಮಾನಗಳಿಂದ ಹಸಿದಿರುವರಂತೆ ವರ್ತಿಸುವ ನಮ್ಮಿಬ್ಬರ ಮುಖ ನೋಡುತ್ತಿದ್ದ ನನ್ನ ಮಗ '' R u really hungry ? shall we go to KFC ?'' ಅನ್ನೋ ಪ್ರಸ್ತಾಪ ಮುಂದಿಟ್ಟಿದ್ದ .
ಉಪಸಂಹಾರ 
ಇದೆಲ್ಲ ಸರಿ ನಾನು ಮಾಡಿದ ಆ ಅಧ್ಬುತ (?)ರುಚಿಯ ಚಕ್ಕುಲಿ ಯ ಸರಳ ಸರಳ ರೆಸಿಪಿ ಇಲ್ಲಿದೆ ನೋಡಿ , ಇದನ್ನು ಒಮ್ಮೆ ಟ್ರೈ ಮಾಡಿದ ಮೇಲೆ ಚಕ್ಕುಲಿ ಕೇವಲ ಹಬ್ಬದ ತಿಂಡಿಯಾಗಿ ಉಳಿಯಲ್ಲ ಅನ್ನೋದು ಗ್ಯಾರಂಟಿ .
೨ ಕಪ್  ಅಕ್ಕಿ  
೧ ೧/೨  ಉದ್ದಿನಬೇಳೆ 
೪ ಚಮಚ ಪುಟಾಣಿ (ಹುರಿಗಡಲೆ)
ಹಸಿಕ್ಹೊಬ್ಬರಿ ತುರಿ ಸ್ವಲ್ಪ 
ಬಿಳಿ ಎಳ್ಳು, ಜೀರಿಗೆ ಒಂದೊಂದು ಚಮಚ 
ತಿಂಗೊಳಲು  -ಚಕ್ಕಲಿ ಸೋದರ ಸಂಬಂಧಿ 
ಉಪ್ಪು ರುಚಿಗೆ ,
optional - ಶುಂಟಿ ಬೆಳ್ಳುಳ್ಳಿ ಕರಿಬೇವು ಹಸಿಮೆಣಸು ಜೀರಿಗೆ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಂಡ್ ಮಸಾಲೆ .
 ೧,ಅಕ್ಕಿಯನ್ನು ೪-೫ ಘಂಟೆಗಳ ಕಾಲ ನೆನೆಸಿ , ಮತ್ತು ಕ್ಹೊಬ್ಬರಿ ತುರಿಯೊಂದಿಗೆ  ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಕೊಳ್ಳಿ 
೨,ಉದ್ದಿನಬೇಳೆ  ಘಮ ಬರುವಂತೆ ಕೆಂಪಗೆ ಹುರಿದುಕೊಳ್ಳಿ 
೩.ಹುರಿದ ಉದ್ದಿನಬೇಳೆಯನ್ನು ಹುರಿಗಡಲೆಯೊಂದಿಗೆ ಮಿಕ್ಷಿಯಲ್ಲಿ ಪುಡಿಮಾಡಿಕೊಳ್ಳಿ 
೪ ,ರುಬ್ಬಿದ ಅಕ್ಕಿ ಹಿಟ್ಟಿಗೆ ಈ ಪುಡಿ ಸೇರಿಸಿ, ಇದೆ ಸಂದರ್ಭದಲ್ಲಿ ರುಬ್ಬಿಕೊಂಡ ಮಸಾಲೆ ,ಬಿಳಿ ಎಳ್ಳು  ಜೀರಿಗೆ ಉಪ್ಪು ಸೇರಿಸಿಕೊಳ್ಳಬೇಕು 
೫ ಚನ್ನಾಗಿ ಕಲಿಸಿಕೊಳ್ಳಿ ,ಈಗ ಮಿದುವಾದ ಹಿಟ್ಟು ಸಿದ್ಹವಾಗುತ್ತದೆ,ಅಷ್ಟು ಉದ್ದಿನ ಹಿಟ್ಟು ಬೇಕಾಗದೆಯೂ ಇರಬಹುದು ಅಕ್ಕಿ ಹಿಟ್ಟು ಎಷ್ಟು ನೀರು ಒಳಗೊಂಡಿದೆ ಅನ್ನೋದರ ಮೇಲೆ ಇದರ ಪ್ರಮಾಣ ನಿಶ್ಚಯ ವಾಗುತ್ತದೆ 
೬  ಈಗ ಚಕ್ಕುಲಿ ಒತ್ತಲ್ಲಿ  ಈ ಹಿಟ್ಟನ್ನು ಹಾಕಿ ಚಕ್ಕುಲಿ ಮಾಡಿ ಗರಿ ಗರಿಯಾಗಿ ಕರಿದು ಸವಿಯಿರಿ .

ಇದು ನನ್ನ ಅಮ್ಮಮ್ಮ ನ ರೆಸಿಪಿ , ಈ ಬರಹ ಓದಿದ ಮೇಲೆ ನಾನು ಅದೆಷ್ಟು ಭೂಕಿ ಪ್ಯಾಸಿ ,ಅನ್ನೋದು ನಿಮಗೇ ಗೊತ್ತಾಗಿರುತ್ತದೆ ಇನ್ನುಮೇಲೆ ಯಾರಾದರು ತಮ್ಮ ಮನೆಗೆ ಕರೆಯುವ ಮುನ್ನ ನೂರು ಬಾರಿ ಯೋಚಿಸೋದಂತು ಖಂಡಿತ ಆದರೂ ನನ್ನಂಥ ಮನಸವರು ಇರ್ತಾರೆ ಅನ್ನೋ ಭರವಸೆ ಮೇಲೆ ಈ ಬರಹ ಪೋಸ್ಟ್ ಮಾಡ್ತಿದ್ದೇನೆ ಮತ್ತೊಮ್ಮೆ ವಿಜಯೇಶ್ವರಿಗೆ ಧನ್ಯವಾದ ,ಕಮೆಂಟುಗಳಿಗೆ ಸ್ವಾಗತ