Thursday, September 24, 2020

ಅಡುಗೆ ಎಂಬ ದಿವ್ಯ ಧ್ಯಾನ


ಅಲ್ಲೆಲ್ಲೋ ದೂರದಲ್ಲಿ ಕೇಳುವ ಹಕ್ಕಿ ಚಿಲಿಪಿಲಿ ಕಿಟಕಿಯಿಂದ ಕದ್ದುಮುಚ್ಚಿ ಇಣುಕುವ ಸೂರ್ಯ ರಶ್ಮಿ,  ಆ ಸಮಯದಲ್ಲೇ ಆರಂಭವಾಗುತ್ತದೆ ಅವಳ ಅಡುಗೆಮನೆ ಎಂಬ ಆರ್ಕೆಸ್ಟ್ರಾ , ಕುದಿಯುವ ನೀರಿನಲ್ಲಿ ಬೀಳುವ ಆ ಎರಡು ಚಮಚ ಚಾ ಹುಡಿ, ಅದರ ಹಿಂದೆ ಹಿತ್ತಲ ಮೂಲೆಯಿಂದ ತಂದ ಮಜ್ಜಿಗೆ ಹುಲ್ಲು, ಶುಂಠಿ ಏಲಕ್ಕಿಯನ್ನು ಕುಟ್ಟಾಣಿಯಲ್ಲಿ ಜಜ್ಜಿದ ಮೆತ್ತನೆಯ ಸದ್ದು, ಇನ್ನೇನು ಚಹಾ ಘಮಕ್ಕೆ ಮನಸು ಹಾತೊರೆದು ಕಾಯುತ್ತಿರುವಾಗಲೇ ಅತ್ತ ಇಡ್ಲಿ ತಟ್ಟೆಗೆ ಹಿಟ್ಟು ತುಂಬಿ ಬೇಯಲು ಬಿಡಬೇಕು. ಮತ್ತೆ ತುರಿಮಣೆಯಮೇಲೆ ಬಿಳಿಯೊಡಲ ತೆಂಗಿನ ತಿರುಳು ಹಾಗೆ ನಾದ ಹೊಮ್ಮಿಸುತ್ತ ಬೀಳುತ್ತಿರುವಾಗಲೇ ಮನಸ್ಸು ಮುಂದಿನ ಕೆಲಸಗಳಬಗ್ಗೆ ಒಂದು ನಕ್ಷೆ ತಯಾರಿಸಿಬಿಡುತ್ತದೆ ಅಟ್ಟೆ ಯಿಂದ ಬಿಸಿಬಿಸಿ ಉಗಿ ಅಕ್ಕಿ ಉದ್ದಿನ ಘಮಲಿನೊಂದಿಗೆ ಮನೆತುಂಬ ಹೊಮ್ಮುವಾಗಲೇ , ಆ ಪುಟ್ಟ ಕಬ್ಬಿಣದ ಕಾವಲಿಯಲ್ಲಿ ಬಿಸಿಯಾದ ತೆಂಗಿನ ಎಣ್ಣೆಯಲ್ಲಿ  ಬಿದ್ದ ಪುಟ್ಟ ಸಾಸಿವೆಕಾಳುಗಳು ಚಟಪಟ ಸದ್ದುಮಾಡಿ ಇಂಗು, ಕರೀಬೇವು ಒಣಮೆಣಸಿನೊಂದಿಗೆ ರುಬ್ಬಿದ ಚಟ್ನಿಯನ್ನು ಚುಂಯ್ ಎನ್ನುತ್ತಾ ಅಪ್ಪಿಕೊಳ್ಳುವಲ್ಲಿಗೆ ಮುಂಜಾವು ಅಡುಗೆಮನೆಯಲ್ಲಿ ತೆರೆದುಕೊಳ್ಳುತ್ತದೆ. 


 ದಿನನಿತ್ಯದ ಅಡುಗೆ ಎಂಬ ದಿನಚರಿಯನ್ನು ಮುಗಿಯದ ಕೆಲಸ, ವಿರಾಮ ಕೊಡದ ದುಡಿಮೆ ಎಂದು ಗೊಣುಗುವವರು ಇದ್ದಾರೆ , ಆದರೆ ಸ್ವಲ್ಪ ಮಟ್ಟಿಗಿನ ಪ್ರಯತ್ನ ಮತ್ತು ತಯಾರಿ, ನಿಮ್ಮ ಈ ನಿಲುಮೆಯನ್ನು ಖಂಡಿತ ಬದಲಾಯಿಸುತ್ತದೆ ಎಂಬುದು ಅಡುಗೆಮನೆಯ ಯಶಸ್ವೀ ಒಡತಿಯರ ಅಂಬೋಣ. 

ಮಗುವಿಗೆ ಸಪ್ಪೆ ಅಡುಗೆ , ಗಂಡನಿಗೆ ಖಾರ ಜಾಸ್ತಿ , ತನಗೆ ಅವೆರಡರ ಮಧ್ಯದ ಒಂದು ರುಚಿ, ಒಂದೇ ಅಡುಗೆಯನ್ನು ಈ ಮೂರು ಸ್ಥರದಲ್ಲಿ ಬದಲಾಯಿಸುವ ಕಲೆ ಆಕೆಗೆ ಕಲಿಸಿದವರ್ಯಾರು? ಮನೆಯಲ್ಲಿ ಹತ್ತು ಜನರಿರಲಿ ಅಥವಾ ಇಬ್ಬರೇ ಇರಲಿ ಅವರವರ ಆದ್ಯತೆಗೆ ತಕ್ಕಂತೆ ಅಡಿಗಡಿಗೆ ಅಡುಗೆ ಮಾಡಿ ಮುಂದಿಟ್ಟು ಅದನ್ನು ತಿಂದಾಗ ಎದುರಿನವರ ಕಣ್ಣಲ್ಲಿ ಮೂಡುವ ಆ ಬೆಳಕನ್ನೇ , ಮೊಗದಲ್ಲಿ ಅರಳುವ ನಗುವನ್ನೇ ತನ್ನ ಬಹುಮಾನ ಎಂದು ಬೀಗುವ ಆಕೆ ಅಲ್ಪತೃಪ್ತೆ ಎಂದೇ ಹೆಸರುವಾಸಿ!! 


ಒಂದು ಅಡುಗೆ ಮಾಡೋದಕ್ಕೆಷ್ಟು ಮಾತಾಡ್ತಾಳೆ ಅನ್ನೋ ಉಡಾಫೆ ಮಾತಾಡುವ ಮಂದಿಯನ್ನು ನಾವು ಆಗಾಗ್ಗೆ ಕಾಣುತ್ತೇವೆ , ಅಡುಗೆ ಮಾಡುವುದೆಂದರೆ ರಂಗೋಲಿಗೆ ಬಣ್ಣ ಹೊಂದಿಸಿದಂತೆ,  ಕೆಲವೊಮ್ಮೆ ಬಣ್ಣ ಸಿಗದಿದ್ದರೂ ಬಿಳಿ ಎಳೆಗಳೊಂದಿಗೆ ಚಂದದ ಚಿತ್ತಾರ ಬಿಡಿಸಿದಂತೆ , ದಿನ ನಿತ್ಯದ ಅಡುಗೆಗೆ ಎಣ್ಣೆ ಪಸೆ ಜಾಸ್ತಿ ಇರಬಾರದು, ಮಸಾಲೆ ನುಣ್ಣಗಾಗಬೇಕು , ಅನ್ನ ಉದುರಾಗಬೇಕು, ಚಪಾತಿ ಮಿದುವಾಗಬೇಕು ,    ಯಾವ ತರಕಾರಿಯನ್ನು ಹೇಗೆ ಕತ್ತರಿಸಬೇಕು ಹುಳಿಗೆ ಹೋಳು ಪಲ್ಯಕ್ಕೆ ,ಕೊಚ್ಚಲು , ಆಯಾ ಪದಾರ್ಥಕ್ಕೆ ಹಾಗೆ ಅಷ್ಹ್ತಷ್ಟೆ ಖಾರ ಉಪ್ಪು ಸಿಹಿ ಸೇರಿಸಿ ಪ್ರತಿಬಾರಿಯೂ ಅದನ್ನು ಒಂದೇರೀತಿ ಇರುವಂತೆ ನೋಡಿಕೊಳ್ಳುವ ಆಕೆಯ ಏಕಾಗ್ರತೆಯ ವೈಖರಿ ಧ್ಯಾನಸ್ಥ ಯೋಗಿನಿಯಂತೆ. 


ಬರೀ ಮೂರೊತ್ತಿನ ಊಟಕ್ಕಷ್ಟೇ ಅಲ್ಲ , ಮಧ್ಯ ಮಧ್ಯ ಮೆಲ್ಲಲು ಬೇಕಾಗುವ ಚಕ್ಕುಲಿ, ಚುಡಾ, ಚುರುಮುರಿ ನಿಪ್ಪಟ್ಟು ,ಕೋಡುಬಳೆ ಮಾಡಿಡುವ ಈ ಅಡುಗೆ ಮನೆ ಅಧ್ಯಕ್ಷಿಣಿಗೆ ದಣಿವೆ ಇಲ್ಲ. ಹಬ್ಬ ಹರಿದಿನದ ಅಡುಗೆಗಳು ಅಷ್ಟಿಷ್ಟಲ್ಲ , ಸಂಕ್ರಾಂತಿ ಗೆ ಎಳ್ಳು , ಯುಗಾದಿಗೆ ಹಣ್ಣು , ರಾಮನವಮಿಗೆ ಕೋಸಂಬರಿ , ಕೃಷ್ಣನಿಗೆ ಉಂಡೆ , ಎಲ್ಲವನ್ನು ತಪ್ಪದೆ ಒಪ್ಪಿಸಿ ಬಿಡುತ್ತಾಳಾಕೆ,  ಅಷ್ಟಕ್ಕೂ ಈ ಅಡುಗೆ ಆಕೆಗೆ ಕೊಡಮಾಡುವ ಖುಷಿ ಎಂಥದ್ದು? ಒಮ್ಮೆ ಅಡುಗೆ ಮನೆಯ ಗುಂಗು ಹತ್ತಿತೆಂದರೆ ಅದರಿಂದ ಬಿಡಿಸಿಕೊಳ್ಳುವ ಮಾತೆ ಇಲ್ಲ , 



 

ಕೆಲವರಿಗೆ ಅಡುಗೆ ಮನೆಯೆಂದರೆ ಶಿಕ್ಷೆ , ಹಲವರಿಗೆ ಎಲ್ಲವನ್ನು ಮರೆಸಿ ಹೊಸ ಲೋಕವನ್ನು ತೆರೆದಿಡುವ ಮಾಯಾಲೋಕ , ಅಡುಗೆಮನೆ ಎಂಬುದು ಜಗತ್ತಿನ ಅತಿ ಪುರಾತನ ವಿಶ್ವವಿದ್ಯಾಲಯ , ಅಲ್ಲಿ ಪ್ರತಿಯೊಬ್ಬರೂ ವಿದ್ಯಾರ್ಥಿಯು ಹೌದು ವಿದ್ವಾಂಸರೂ ಹೌದು. ಅಡುಗೆ ಮನೆ ಎಂಬುದು ಎಲ್ಲರ ಪಾಲಿಗೂ ದಕ್ಕುವ ಸುಸಜ್ಜಿತ ಪ್ರಯೋಗಾಲಯ ,ಅದನ್ನು ಹೇಗೆ ನಮ್ಮ ವಿಕಾಸನಕ್ಕಾಗಿ ನಾವು ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಕ್ರಿಯಾಶೀಲತೆಯ ಮೇಲೆ ನಿರ್ದಾರವಾಗುತ್ತದೆ .  ನಿಮ್ಮ ಅಡುಗೆ ಮನೆ ಯಾ ಅಳತೆ ಎಷ್ಟಾದರೂ ಇರಲಿ ಆದರೆ ನೀವಲ್ಲಿ ಕಳೆದಷ್ಟು ಹೊತ್ತು ನಿಮ್ಮನು ನೀವು ಕಂಡುಕೊಳ್ಳುತ್ತಾ ಹೋಗುತ್ತೀರಿ. 


ಆರೋಗ್ಯ ಮತ್ತು ಅಡುಗೆಮನೆಗೆ ನೇರಾನೇರ ಸಂಬಂಧ ಹಿರಿಯರು ಮಾಡಿಟ್ಟ ಮಸಾಲೆ ಮರಿಗೆ ನಮ್ಮ ಫಸ್ಟ್ ಏಡ್ ಕಿಟ್ ಎಂದರೆ ತಪ್ಪಲ್ಲ, ಅಜೀರ್ಣಕ್ಕೆ ಜೀರಿಗೆ , ಏಲಕ್ಕಿ. ಹಲ್ಲು ನೋವಿಗೆ ಲವಂಗ , ಶೀತ ಜ್ವರಕ್ಕೆ ಶುಂಠಿ ದಾಲಚೀನಿ ಕಾಳುಮೆಣಸ ಗಳು  ಅಮೃತಸಮ ನೈಸರ್ಗಿಕ ಪರಿಹಾರೋಪಾಯಗಳು. ಈಗ ಅಡುಗೆಮನೆ ಫಾರ್ಮಸಿಯಾಗಿಯೂ ಬದಲಾಯಿತು ಅಲ್ಲವೇ? ಅಡುಗೆ ಮಾಡುವ ಮನಸ್ಸಿದ್ದರೆ ಅಡುಗೆ ಮನೆಯೇ ನಿಮಗೆ ದಾರಿ ತೋರುತ್ತದೆ ಎಂಬ ನುಡಿಯೊಂದಿದೆ , ಅಂತೆಯೇ ಅಡುಗೆಮನೆಯನ್ನು ಸಂಭಾಳಿಸಲು ಬಂದರೆ ಸಾಕು ಬದುಕು ತಂತಾನೇ  ಸುಧಾರಿಸುತ್ತದೆ ಎಂಬ ಗಾದೆಮಾತು ನಿತ್ಯ ಸತ್ಯ . 



 ದಿನನಿತ್ಯದ ಈ ಅಡುಗೆಮಾಡುವ ದಿನಚರಿ  ಖಿನ್ನತೆ ಯಿಂದ ಹೊರಬರಲು ಥೆರಪಿಯಂತೆ ಕೆಲಸ ಮಾಡಿ ನಮ್ಮ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು  ಸಹಾಯಮಾಡುತ್ತದೆ . ನೀವು ಮಾಡುವ ಅಡುಗೆಯನ್ನು ಒಪ್ಪವಾಗಿ ಜೋಡಿಸಿ ಒಂದು ಚಿತ್ರ ತೆಗೆದಿಟ್ಟುಕೊಂಡು ಸಂಗ್ರಹಿಸಿ , ಅದನ್ನು ಮಾಡುವ ಮೊದಲು ಮಾಡಿದ ನಂತರ ನಿಮ್ಮ ಆಲೋಚನೆಗಳನ್ನು ಬರೆದಿಡಿ. ಸಾಂಪ್ರದಾಯಿಕ ಅಡುಗೆಗಳು ಅವನ್ನು ನೀವು ಕಲಿತ ರೀತಿ , ಅವುಗಳ ಹಿಂದಿನ ಕಥೆಯನ್ನು ಬಂಧು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಖುಷಿಯನ್ನು ಇನ್ನು ಹೆಚ್ಚಿಸುತ್ತದೆ. ಎಷ್ಟೇ ಕ್ಲಿಷ್ಟ ಪಾಕ ವಿಧಾನಗಳನ್ನು ತಯಾರಿಸಿದರೂ ಅದರಲಿ ಒಂಚೂರು ಪ್ರೀತಿ ಹಾಕಲು ಮರೆಯಬೇಡಿ. ನೀವು ಇಂದು ಮಾಡುವ ಅಡುಗೆ , ಉಣಿಸುವ ಊಟ , ಮುಂದೆಂದೋ ಯಾರದೋ ಸವಿ ನೆನಪಾಗುವುದರಲ್ಲಿ ಸಂಶಯವಿಲ್ಲ. 


ನೀವು ದಿನವಿಡೀ ಅದೆಷ್ಟೇ ವ್ಯಸ್ತ ರಾಗಿದ್ದರೂ ಸಂಜೆ ಒಂದಷ್ಟು ಹೊತ್ತು ನಿಮ್ಮ ಅಡುಗೆ ಮನೆಯಲ್ಲಿ ಕಳೆಯಿರಿ , ಮಸಾಲೆ , ತರಕಾರಿ, ಧಾನ್ಯಗಳೊಂದಿಗೆ ಸ್ನೇಹ ಮಾಡಿಕೊಳ್ಳಿ , ಈ ಸ್ನೇಹ ಎಂದಿಗೂ ಬಿಡದ ನಂಟಾಗುತ್ತದೆ. ಇಲ್ಲಿ ಮಾತು ಹೆಚ್ಚು ,ಕಡಿಮೆಯಾಗಿ ಅಪಾರ್ಥವಾಗುವ ಸಾಧ್ಯತೆಗಳೇ ಇಲ್ಲ ಏನಿದ್ದರೂ ಮೌನ ಮತ್ತು ನಿಮ್ಮ ಮನೋಲ್ಲಾಸ ಮಾತ್ರ!!