Monday, March 28, 2011

ಚಳಿಗಾಲ ಬೇಸಿಗೆಗಳ ನಡುವೆ ಪುಷ್ಪ ಸೇತುವೆ -spring
        ಚಳಿಗಾಲ ಮೆತ್ತಗೆ ನಡೆದು ಹೋಗಿದೆ..ಇನ್ನೀಗ ಬೇಸಿಗೆಯ ಬಿರುಸು ಶುರುವಾಯಿತು ,,,,,ಆದರೆ ಈ ನಡುವೆ ಇರುವ ಒಂದಷ್ಟು ದಿನಗಳ ಸುಂದರ ಸಮಯ'' ನನ್ನನ್ನೇಕೆ ಗಮನಿಸುತ್ತಿಲ್ಲ ???''ಎಂದು ತನ್ನ ಕಂಪಿನಿಂದಲೇ ಕೇಳುತ್ತಿದೆ...

ಅದೇ ಸ್ಪ್ರಿಂಗ್ ...ಪುಷ್ಪಕ ವಿಮಾನದಲ್ಲಿ ವಸುಧೆ ವಿಹರಿಸುವಂತೆ ,ಆಟಮ್ ತಿಂಗಳುಗಳಲ್ಲಿ ಬೆತ್ತಲಾದ ವೃಕ್ಷಗಳು ನಸು ನಾಚಿ ಮೆತ್ತಗೆ ಹೂವಿನ ಸೀರೆ ಉಟ್ಟಂತೆ.ಭಾರತದಲ್ಲಿ ಸ್ಪ್ರಿಂಗ್ ಎಂಬುದು ಮಕರ ಸಂಕ್ರಮಣದ ನಂತರ ಯುಗಾದಿ ಮುಗಿಯುವ ತನಕದ ಅವಧಿ....ಚಿಗುರು ಮೂಡುವ ಹೊತ್ತು....
ಪಶ್ಚಿಮ ದೇಶಗಳಲ್ಲಿ ಸ್ಪ್ರಿಂಗ್ ಎಂಬುದು ಸುಮ ಸೌರಭ ಹೊತ್ತು ತರುವ ಕಾಲ,ಹಿಮಪಾತ ಮಂಜು ಮುಸುಕಿದ ವಾತಾವರಣದಿಂದ ಏಕತಾನತೆಯಲ್ಲಿದ್ದ ಜನರಿಗೆ ಹೊಂಬಿಸಿಲಿನೊಂದಿಗೆ ಹೊಸ ಚಲನೆಯನ್ನು ಕೊಡುವ ಕಾಲ...ಅದಕ್ಕೆ ಸ್ಪ್ರಿಂಗ್ ಎಂಬುದು ಇಲ್ಲಿಯ ಜನರಿಗೆ ಚೈತನ್ಯ ಕಾಲ....ಆಂಗ್ಲರ ನಾಡಿಗೆ  ವಲಸೆ ಬಂದ ನಂತರ ಪ್ರತಿದಿನವೂ  ಒಂದು ಹೊಸ ಅನುಭವ ಬಣ್ಣವಿಲ್ಲದ ವಿಂಟರ್ ನಿಂದ ಬೇಸತ್ತು ಹೋಗಿದ್ದ ಮನಸಿಗೆ ಇಗಷ್ಟೆ  ಆಗಮಿಸಿರುವ ಸ್ಪ್ರಿಂಗ್ ಮನೆಯಂಗಳದಲ್ಲಿ ಹಬ್ಬಿದ ಮಲ್ಲಿಗೆಬಳ್ಳಿಗೆ ಹೂ ಬಿಟ್ಟು ಬೆಳದಿಂಗಳಲ್ಲಿ ಆ ಘಮವನ್ನು ಆಘ್ರಾನಿಸಿದಷ್ಟು ಹಿತ ಹಿತ...ನಮ್ಮ ನಾಡಿನಲ್ಲೂ ಹೂಗಳಿಗೆ ಬರವೇ..???.ಚಂದದ ಹೆಸರಿನೊಂದಿಗೆ ಅದಕ್ಕೂ ಚಂದದ ಘಮಗಳನ್ನು ನೆನಪ ಬುಟ್ಟಿಯಲ್ಲಿ ಉಳಿಸಿವೆ...ಆದರಿವು ಹೊಸ  ಹೂಗಳು...ದುಬಾರಿ ಹೂಗುಚ್ಹದಲ್ಲಿ ಕಾಣಸಿಗುವ ಜನಸಾಮಾನ್ಯರಿಗೆ ಅಪರೂಪದ ಹೂವುಗಳು.ಇಲ್ಲಿ ಎಲ್ಲ ದಿಕ್ಕಿನಲ್ಲೂ ಅರಳಿ ನಗುತ್ತಿವೆ..

ಇದಕ್ಕಿಂತ ಹಳದಿ ಮತ್ತೆ ಎಲ್ಲೂ ಸಿಗಲಾರದು ಎನ್ನುವಷ್ಟು ಗಾಢ ವರ್ಣದ ದಫ್ಫುಡಿಲ್ಸ್ ,,,ತಿಳುಗುಲಾಬಿ ಪೀಚ್ ಬ್ಲಾಸಂ ,ಬಿಳುಪಿನ ಮ್ಯಗ್ನೋಲಿಯ ..,ನಸು ನಾಚಿದ ಸುಂದರಿ ತಲೆತಗ್ಗಿಸಿ ನಿಂತಂತೆ ಇರುವ ಸ್ನೋಡ್ರಾಪ್ ಹೂವುಗಳು,ಅರಳಲೋ ಬೇಡವೋ???ಎಂಬ ಪ್ರಶ್ನೆ ಮುಂದಿಟ್ಟುಕೊಂಡೇ ನಮ್ಮ ನೋಡುವ ಟುಲಿಪ್ಸ್,ನಮ್ಮ ಅಂಗಳದಲ್ಲಿ ಅರಳುವ ಪನ್ನೀರ್ ಗುಲಾಬಿಯ ಸೋದರಿಯಂತೆ ಕಾಣುವ ಕೆಮೆಲಿಯ ,ಮಳೆಗಾಲದಲ್ಲಿ  ಅಲ್ಲೆಲ್ಲೋ ಮರದ ಮೇಲೆ ತೂಗಿ ನಲಿಯುವ ಸೀತದಂಡೆ ಯಂಥಹ ಚೆರ್ರಿ ಪ್ಲಾಂ ....ಹಸಿರು ಹಸಿರು ಹಾಸಿನಲ್ಲಿ ಸೇವಂಥಿಗೆಯಂಥ ಬಿಳಿ ಹಳದಿ ಹೂಗಳು....ಅದನ್ನು ವಿವರಿಸುವುದು ಶಬ್ಧಗಳಿಗೆ ದುಬಾರಿ ಎನಿಸುತ್ತದೇನೋ....

ರಸ್ತೆಯಲ್ಲಿ ನಡೆಯುತ್ತಿದ್ದರೆ ಅದೆಂಥದೋ ಆಹ್ಲಾದ .....ನಮಗಾಗಿ ಅರಳಿ ನಗುತ್ತಿವೆಯೇನೋ ಎಂಬ ಭಾವ ಸಹಜ...ಬಣ್ಣಗಳು ಕಣ್ಣಿಗೆ ಮುದವಿತ್ತರೆ,ಮೆತ್ತಗೆ ಬೀಸುವ ಗಾಳಿ ವಿಭಿನ್ನ ಕಂಪನ್ನು ಸೂಸುತ್ತವೆ...ಮೊದಲ ಬಾರಿ ಸ್ಪ್ರಿಂಗ್ ನೋಡುವ ಭಾವುಕ ಹೃದಯದ ಆನಂದ ವರ್ಣಿಸಲಸದಳ....ಹಾದಿಯ ಇಬ್ಬದಿಯಲ್ಲೂ ಗುಲ್ಮೊಹರ್ ಗಳು ಅರಳಿ ನಿಂತಾಗ ಮುಂಜಾನೆಯ ಮೊದಲ ಜಾವದಲ್ಲಿ ಹಾಡು ಗುನುಗುನಿಸುತ್ತ ಹೋಗುವಾಗಿನ ಸಾರ್ಥಕತೆ....
ಜನರು ಅಪರಿಚಿತರಿರಬಹುದು..ಆದರೆ ಹೂಗಳು ಅವು ಎಲ್ಲಿ ಇದ್ದರು ನಮ್ಮನ್ನು ಗುರುತಿಸುತ್ತವೆ...ನಮ್ಮನ್ನು ನೋಡಿ ನಗುತ್ತವೆ..
ಇದು ಕವಿ ಸಮಯ ....ಸ್ಪ್ರಿಂಗ್ ಎಂಬ ಈ ಮಧುರಾನುಭೂತಿ ಯಲ್ಲಿ ಕವಿತೆಯನ್ನು ಬರೆಯಲಾರದೆ ಇರಲಾರ ಕವಿ...ಆಂಗ್ಲ ಕವಿ ವರ್ಯರ ಹಲವು ರಚನೆಗಳಿಗೆ ಸ್ಫೂರ್ತಿ ಈ ಸದಾಬಹಾರ ಕಾಲ...
..
ಹಿಂದೂಸ್ತಾನಿ ಸಂಗೀತದ ಬಹಾರ್ ರಾಗವನ್ನು ಸೃಷ್ಟಿಸಿದ್ದು ಈ ಸಮಯದಲ್ಲೇ ಇರಬಹುದೇನೋ???ಯುರೋಪ್ ಪ್ರವಾಸಕ್ಕೂ ಇದು ಸಕಾಲ .ನನಗಿದುಮೊದಲ ಸ್ಪ್ರಿಂಗ್ ...ಬನ್ನಿ ನೀವು ನನ್ನೊಂದಿಗೆ ಈ ಅನುಭವವನ್ನು ಸವಿಯಿರಿ

(೨೭ ಮಾರ್ಚ್ ೨೦೧೧ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

1 comment:

  1. ಉತ್ತಮ ಬರವಣಿಗೆ.........

    ReplyDelete