Monday, August 29, 2011

ಜನರ ಸಂತೆಯಲ್ಲಿ ಹಕ್ಕಿಗಳೊಂದಿಗೆ... ನಾನು


                                                                                               


ಇಂಥವೆಲ್ಲ ನನ್ನ ಕಣ್ಣಿಗೆ ಯಾಕೆ ಬಿಳುತ್ತವೆಯೋ ಗೊತ್ತಿಲ್ಲ, ದೇಶ ಬಿಟ್ಟು ನನ್ನದಲ್ಲದ ನಾಡಿಗೆ ಬಂದು ನೆಲೆಸಿದರು ಈ ನಂಟು ನನ್ನ ಬಿಡಲೊಲ್ಲದು, ಮದುವೆಯ ನಂತರ ಮೊದಲು ಸಂಸಾರದ ಬಂಡಿ ಹೂಡಿದ್ದು ಬೆಳಗಾವಿಯಲ್ಲಿ, ೨ ನೇ ಅಂತಸ್ತಿನಲ್ಲಿ ನನ್ನ ಪುಟ್ಟ ಗೂಡು , ಅಡಿಗೆ ಮನೆಯ ಕಿಟಕಿ ತೆರೆದ ಕೂಡಲೇ ಕಾಣುತ್ತಿತ್ತು ಅವರ ಬಳಗ. ಹತ್ತಿರದ ಅಂಗಡಿಯ ಬಾಗಿಲಲ್ಲಿ ಅವರು ಎಸೆಯುತ್ತಿದ್ದ ಅಕ್ಕಿಯ ಕಾಳ್ ಆಸೆ ಪಟ್ಟು ಎದುರಿನ ವಿದ್ಯುತ್ ತಂತಿಯ ಮೇಲೆ ಮದುವೆ ಉಟಕ್ಕೆ ಕುಳಿತ ಪಂಕ್ತಿಯಂತೆ ಕೂಡುತ್ತಿದ್ದ ಮುದ್ದು ಮುಖದ ಗುಬ್ಬಿಗಳು.

ನನ್ನ ಕೆಲಸ ಮುಗಿಯಿತೆಂದ ಕೂಡಲೇ, ನಾನು ಅವನ್ನು ನೋಡುತ್ತಾ ಕುಳಿತು ಬಿಡುತ್ತಿದ್ದೆ. ನೋಡಲು ಒಂದೇ ರೀತಿ ಕಂಡರೂ ಅವುಗಳ ಆಕಾರ, ಗಾತ್ರ,ಅವುಗಳ ಚರ್ಯೆ ಬೇರೆಯೇ ಆಗಿರುತ್ತದೆ. ಹತ್ತಿರದಿಂದ ನೋಡಲು ಸಿಗುತ್ತಿದ್ದರಿಂದ ನಾನು ಅವನ್ನು ಗುರುತಿಸ ತೊಡಗಿದ್ದೆ. ಹಾಗೊಂದ್ ದಿನ ನಾನೂ ಕಿಟಕಿಯ ಹೊರಗಿನ ಪುಟ್ಟ ಜಾಗೆಯಲ್ಲೇ ಒಂದಷ್ಟು ಅಕ್ಕಿ ನುಚ್ಚು ಎಸೆದು ಅವಕ್ಕಾಗಿ ಕಾಯುತ್ತ ಕುಳಿತೆ..ಹಾಗೆ ಬಂದೇ ಬಿಡುತ್ತವೆಯೇ ಅವು..?????ಕಾಯಿಸಿದವು..ನಾನೂ ಕಾದೆ ೧..೨..೩...೪...ಹೀಗೆ ದಿನ ಕಳೆದರು ಅವು ಬರಲಿಲ್ಲ. ಅದೊಂದು ದಿನ ಪುಟ್ಟ ಮರಿ ಗುಬ್ಬಿ ನನ್ನ ಕಿಟಕಿಯ ಮೇಲೆಸೆದ  ನುಚ್ಚಿನ ರುಚಿ ನೋಡಲು ಬಂದಿತ್ತು.

ಮೊದಲು ಅದಕ್ಕೂ ಹೆದರಿಕೆ! ಆಮೇಲೆ ಅದು ತನ್ನ ಪರಿವಾರದೊಂದಿಗೆ ಬರ ತೊಡಗಿತು. ಆಮೇಲೆ ದಿನಾಲೂ . ಸಂಖ್ಯೆ ಹೆಚ್ಹಾಗ ತೊಡಗಿದಂತೆ ಒಮ್ಮೆ ಹಾಕಿದರೆ ಸಾಕಾಗದು ಮತ್ತೆ ಮತ್ತೆ ಹಾಕು ಎಂಬಂತೆ ಜಗಳವಾಡುತ್ತಿದ್ದವು. ಅವುಗಳೊಂದಿಗೆ ಒಂದು ಘಟ್ಟಿ ಬಾಂಧವ್ಯ ಬೆಳೆಯತೊಡಗಿತ್ತು. ಇಲ್ಲಿ ಮಾತಾಡಿ ಹಾಳಾಗುವ,ಮಾತಿನ ಇನ್ನೊಂದು ಅರ್ಥ ಹುಡುಕುವ ಪ್ರಮೇಯ ಇರಲಿಲ್ಲ..ಚೀಕ್ ಚಿಕ್ ..ಚೆಂವ್ವ್...ಎಂಬುದನ್ನು ನಾನೂ ನನಗೆ ಬೇಕಾದಂತೆ ಅರ್ಥೈಸ ತೊಡಗಿದ್ದೆ..ಅವುಗಳೊಂದಿಗೆ ಮಾತಾಡುತ್ತಿದ್ದೆ. ಜಗಳ ಮಾಡುತ್ತಿದ್ದೆ   ವಿಚಿತ್ರ ಎಂದರೆ ಅವು ನನ್ನ ಮಾತಿಗೆ ಪ್ರತಿಕ್ರಿಯಿಸುತ್ತಿದ್ದವು ಇದನೆಲ್ಲಾ ನನ್ನ ಪಪ್ಪನಿಗೆ ಫೋನ್ ಮಾಡಿ ಸಂತಸ ಪಡುತ್ತಿದ್ದೆ..ಭಾವುಕ ಜೀವಿಗೆ ಇದೊಂದು ಅಪೂರ್ವ ಅನುಭವ. ವಾಸ್ತವ ವಾದಿ ನನ್ನ ಪತಿ ಕೂಡ ಇದನ್ನು ಆನಂದಿಸ  ತೊಡಗಿದ್ದರು.ಆದಿನ ಕಿಟಕಿಯ ಬಾಗಿಲು ತೆರೆದಿತ್ತು ನಾವು ನಮ್ಮ ಕೋಣೆಯಲ್ಲಿದ್ದೆವು, ಏನೋ ಸದ್ದು ಎರಡು ಗುಬ್ಬಿಗಳು!!!ಸೀದಾ ಒಳಬಂದು ಹಾರಡ ತೊಡಗಿದ್ದವು..ಆದಿನ ನಾ ಅನುಭವಿಸಿದ್ದ ಆ ಸಂತಸ ಅದೆಷ್ಟು ಮಧುರ...

ಅದೆಷ್ಟು ಬೇಗ ಸಮಯ ಸರಿಯಿತು ತಿಳಿಯಲೇ ಇಲ್ಲ. ನಾನೂ‌ ಬಾಣಂತನಕ್ಕೆ ಅಮ್ಮನ ಮನೆಗೆ ಹೊರಟು ನಿಂತೆ. ಅವಕ್ಕೂ ಟಾಟ ಹೇಳಿದ್ದೆ. ಆಮೇಲೆ ನಾ ಬಂದಿದ್ದು ೭ ತಿಂಗಳ ನಂತರ. ಅಲ್ಲಿ ತನಕ ಸ್ಥಗಿತ ವಾಗಿದ್ದ, ನಮ್ಮ ಮಾತುಕತೆ ಮತ್ತೆ ಪ್ರಾರಂಭವಾಗಿತ್ತು .
ನಮಗೂ ಗೊತ್ತಾಗದಷ್ಟು ವೇಗದಲ್ಲಿ ನಮ್ಮ ನೆಲೆ ಬದಲಿಸಬೇಕಾಗಿ ಬಂತು.‌ಮತ್ತೆ ಅವುಗಳಿಂದ ದೂರವಾಗಿದ್ದೆ. ಅಷ್ಟೊತ್ತಿಗಾಗಲೇ ಗುಬ್ಬಿಗಳೊಂದಿಗೆ ಕಾಡು ಪಾರಿವಾಳಗಳು ಜೊತೆಯಾಗಿದ್ದವು...ಅವುಗಳನ್ನು ಬಿಟ್ಟು ಬರುವಾಗ ಆದ ಸಂಕಟ ಯಾರೊಂದಿಗೂ ನಾ ಹಂಚಿ ಕೊಳ್ಳಲಿಲ್ಲ  ಹೇಳಲು ಏನಿತ್ತು???..ಸಾಕಿದ ಹಕ್ಕಿಗಳಲ್ಲ ನನ್ನ ನಂಬೇ ಬಂದವುಗಳಲ್ಲ ಆದರೂ ನನ್ನ ಏಕತಾನತೆಗೆ ಸಂಗಾತಿ ಯಾಗಿ ಒಲುಮೆಯ ಬಾಂಧವ್ಯ ಬೆಸೆದಿದ್ದವು. ಮಾತು ಬರುವ ಮನುಷ್ಯರಿಗಿಂತ ಮಾತು ಬರದ ಈ ಜೀವಿಗಳೇ ಸಾವಿರಪಾಲು ಲೇಸು ಎನಿಸಿದ್ದು ಸುಳ್ಳಲ್ಲ..

ನಂತರ ಮತ್ತೊಂದು ಹಕ್ಕಿಯ ಜೊತೆ ಒಡನಾಟ ಆಯ್ತು. ಆ ಹಕ್ಕಿಯ  ಹೆಸರು ನನಗೆ ಗೊತ್ತಿಲ್ಲ. ಕನ್ನಡಿಯಲ್ಲಿ ತನ್ನ ಬಿಂಬ ಕಂಡು ಅದನ್ನು ಕುಕ್ಕುತ್ತ ಕುಳಿತು ಕೊಳ್ಳುತಿತ್ತು.ಮನೆಯ ಜಗಲಿಯಲ್ಲಿ ನೇತು ಹಾಕಿದ ಒಂದು ಪ್ರಕೃತಿಯ         ಚಿತ್ರಕ್ಕೆ ಬಂದು ಏನೋ ಹುಡುಕುತಿತ್ತು...ಅದೇ ಹಕ್ಕಿ..ಗೊರಟ್ಟಿಗೆ ಗಿಡಕ್ಕೆ ಗೂಡು ಕಟ್ಟಿ ಸಂಸಾರ ಹೂಡಿತ್ತು(..ಅದರ ಕುರಿತು ಬರೆದ ಬರಹ http://bhavanaloka.blogspot.com/2010/12/blog-post_9354.ಹ್ತ್ಮ್ಲ್ ಇಲ್ಲಿ ಓದಬಹುದು..)

ನಂತರ ಈ ನಾಡಿನಲ್ಲಿ(Northern Ireland)
ನಾ ಬಂದ ದಿನದಿಂದಲೇ ಇಲ್ಲಿ ಸ್ನೌಫಾಲ್  ಮೆತ್ತಗೆ ಆರಂಭ ಗೊಂಡಿತ್ತು‌ ಆಗೆಲ್ಲ ಹಾರಾಡುತ್ತಿದ್ದ ಹಕ್ಕಿ ಕಂಡು ಅಂದು ಕೊಳ್ಳುತ್ತಿದ್ದೆ ಅದೆಷ್ಟು ಛಳಿ ಆಗುತ್ತಿರಬಹುದು ಇವಕ್ಕೆ..????ಈ ಸಮಯದಲ್ಲೇ ಅಲ್ಲವೇ ಅವು ಸಾವಿರಾರು ಮೈಲಿ..ವಲಸೆ ಹೋಗುವುದು..ನನ್ನೂರ ಹತ್ತಿರ ಇರುವ ಅತ್ತಿವೆರಿ  ಪಕ್ಷಿ ಧಾಮಕ್ಕೆ ಬಂದು ಗೂಡು ಕಟ್ಟಿ ಸಂಸಾರ ಮಾಡಿದ ಹಕ್ಕಿಗಳು ಇಲ್ಲೂ ಇರಬಹುದ????ಹಾಗೆ ಏನೇನೋ ಆಲೋಚನೆಗಳು.ಮತ್ತು ಇಲ್ಲಿ ಯಾವ ಪಕ್ಷಿಯೊಂದಿಗೆ ನನ್ನ ಬಂಧ ಬೆಳೆಯಲಿದೆಯೋ????ಮನಸ್ಸು ಯಾವಾಗಲಾದರೊಮ್ಮೆ ಕೇಳಿದ್ದು ಸುಳ್ಳಲ್ಲ...

ಹಾಗೆ ಕೇಳಿಕೊಂಡ ಕೊಂಚ ದಿನಕ್ಕೆ ಹಿತ್ತಲಲ್ಲಿ ಪಕ್ಷಿಗಳ ಇಂಚರ..ಆದರೂ ನಾ ಗಮನಿಸಲಿಲ್ಲ..ಗೂಡು ಕಟ್ಟಲು ಮರವು ಇಲ್ಲ‌ ಮತ್ಯಾವ ರೀತಿಯಲ್ಲೂ ಸೂಕ್ತವಲ್ಲದ ಯಮಗಾತ್ರದ  ಸಿಮೆಂಟು ಗೋಡೆಗಳು, ಅಲ್ಲಿ ಹೇಗೆ ಗೂಡು ಕಟ್ಟಿಯಾವು????
ನನ್ನ ಸಂದೇಹ ಮರುದಿನವೇ ಮಾಯಾ. ಅಲ್ಲೊಂದು ಗೂಡು ಅದೂ ಮಣ್ಣಿನ ಗೂಡು. ಹಕ್ಕಿಗಳು ಮಣ್ಣಿನಿಂದ ಗೂಡು ಕಟ್ಟುತ್ತವೆಯೇ????ನಾನು ಹಕ್ಕಿಗಳ ಬಗ್ಗೆ ಅಷ್ಟೇನೂ ಓದಿಕೊಂಡಿಲ್ಲ ಆಗ ಆ ಗೂಡ್ನಲ್ಲಿ ಪುಟ್ಟ ಪುಟ್ಟ ನಾಲ್ಕು ಮರಿಗಳು..ತುಂಬಾ ಆಯಕಟ್ಟಿನ ಸ್ಥಳದಲ್ಲಿ ಗೂಡು ಇದ್ದಿದ್ದ ರಿಂದ ಮರಿಗಳ ಫೋಟೋ ತೆಗೆಯಲು ಹೋಗಿ ಪ್ರತಿಬಾರಿ ಸೋತು ಹೋಗುತ್ತಿದ್ದೆ.ಹಕ್ಕಿಗಳು  ಹೆದರುತ್ತಿದ್ದವು..ಅಧ್ಯೇಗೋ ಮಾಡಿ ಒಂದು ಚಿತ್ರದಲ್ಲಿ ಈ ಹಕ್ಕಿ ಮರಿಗಳು ಸೆರೆಯಾದವು.

ಸ್ವಲ್ಪ ದಿನದ ನಂತರ ಹಾರಾಡಲು ಕಲಿಸುತ್ತಿದ್ದ ಅಮ್ಮ..ಕಲಿಯುತ್ತಿದ್ದ ವಿಧೇಯ ಮರಿಗಳು. ಅವು ಹಾರಿ ಹೋಗಲು ತಯಾರಿ ನಡೆಸಿದ್ದವು. ಯಾಕೋ ಆದಿನ ಭಾಳ ಬೇಜಾರಾಗಿತ್ತು.ಒಂದು ವಾರ ಕಳೆದಿತ್ತಷ್ಟೆ ಮತ್ತೆ ಗೋಡೆಗೆ ಗೂಡು. ಹಸಿ ಮಣ್ಣಿನ ಸುವಾಸನೆ, ಮತ್ತೊಂದು ಮಗದೊಂದು ಗೂಡು. ಮೊಟ್ಟೆ, ಆದರೆ ಆ ಹಕ್ಕಿ ಇನ್ನೂ ನನಗೆ ಅಪರಿಚಿತ ಗೂಡಿನ ಚಿತ್ರ ತೆಗೆದು ಫೆಸ್ಬುಕ್ ನಲ್ಲಿ ಹಾಕಿದೆ. ಬೆಂಗಳೂರಿನ  ಅಂಜಲಿ ರಾಮಣ್ಣ, ೨ ನಿಮಿಷಕ್ಕೆ  ಪ್ರತಿಕ್ರಿಯಿಸಿದರು..THE BARN SWALLOW. ಸರಿ ಕನ್ನಡದ ಹೆಸರೇನು???ಆಗ ಮತ್ತೊಂದು ಪ್ರತಿಕ್ರಿಯೆ. ಧಾರವಾಡದ ಹರ್ಷವರ್ಧನ್ ಶೀಲವಂತ್ ಅವರು ಆ ಹಕ್ಕಿಯ  ಕನ್ನಡದ ಅದೆಷ್ಟು ಚಂದದ ಹೆಸರು ಬರೆದಿದ್ದರು..''ಅಂಬರ ಗುಬ್ಬಿ''ಹೆಸರು ಕೇಳಿಯೇ ರೋಮಾಂಚನ ಆಗಿತ್ತು..ಗೆಳತಿ ಅಂಜಲಿ‌ ಬಾಣಂತನ ಕ್ಕೆ ಅಂಟಿನ್ಉಂಡೆ  ಕಳಿಸಲ ಅಂದ್ರು.

ಇಲ್ಲಿಯ ಹೆಣ್ಣುಮಕ್ಕಳು ಹೆರಿಗೆಯ ನಂತರ ಮಗುವನ್ನು ಬಾಸ್ಕೆಟ್ ನಲ್ಲಿ ಹಾಕಿಕೊಂಡು‌ ಡ್ರೈವ್ ಮಾಡುತ್ತಾರೆ ಹಕ್ಕಿಗಳ ಕತೆ ಏನೋ ಯಾರಿಗ್ಗೊತ್ತು ಅಂದೆ.ಆಗ ಹೇಳಿದ ಮಾತು ಮಾತ್ರ ಮನ ತಟ್ಟಿತ್ತು..''ಏನೇ ಹೇಳಿ ಅಮಿತಾ ಗೂಡು ಕಟ್ಟಿ ಮರಿ ಮಾಡಿ ಮಾತೃತ್ವ ಪಡೆಯುವ ಆ ಆನಂದದ ಮುಂದೆ ಬೇರೆಲ್ಲವನ್ನೂ ನಿವಾಳಿಸಿ ಎಸೆಯಬೇಕು..''ನಿಜ ಅಲ್ಲವೇ? ಬೇರೆಲ್ಲ ವಿಷಯದಲ್ಲಿ ಮನುಷ್ಯ ಸಾಕಷ್ಟು  ತನ್ನದನ್ನು ಸಾಧಿಸಿರಬಹುದು.ಆದರೆ ಮನೇ ,ಮಗು ಮತ್ತು ಅವುಗಳ ಆರೈಕೆ ಬೆಳವಣಿಗೆಯ ವಿಷಯದಲ್ಲಿ ಮಾತ್ರ ಹಕ್ಕಿಯ ಜಾಡನ್ನೇ ಹಿಡಿದ.‌ಆತ ಮಾಡಿದ ಒಂದೇ ಒಂದು ಹೆಚ್ಚುಗಾರಿಕೆ ಎಂದರೆ , ಮಕ್ಕಳನ್ನು ಬೆಳೆಸಿ ಅವುಗಳಿಂದಲೂ ಅದೇ ತೆರನಾದ ಪ್ರೀತಿ ಮಮತೆ ಬಯಸಿದ. ಆದರೆ ಹಕ್ಕಿ ಮಾತ್ರ ತನ್ನ ಕರ್ತವ್ಯ ಮಾಡಿ ತನ್ನಷ್ಟಕ್ಕೆ ಸುಮ್ಮನಾಯಿತು..

ಅದ್ಯಾಕೆ ಇಂತದ್ದೆಲ್ಲ ನನ್ನ ಕಣ್ಣಿಗೆ ಬೀಳುತ್ತೆ ????ಒಂದು ಪುಟ್ಟ ಹಕ್ಕಿ ಮನಸಿನಲ್ಲಿ ಮೂಡಿಸುವ ಭಾವಗಳು ಸಾವಿರ.ಭಾವಗಳನ್ನು ಬೆಳೆಸಲೆಂದೇ ಬಾಂಧವ್ಯ ಬೆಳೆಯುತ್ತವೆಯ???ಸಾವಿರ ಆಲೋಚನೆಗಳ ಇಂಚರ. ಸಧ್ಯಕ್ಕೆ ನಾನು ಅಂಬರ ಗುಬ್ಬಿಯ ಮರಿಗಳೊಂದಿಗೆ ಬ್ಯುಸಿಯೋ ಬ್ಯುಸಿ. ನೀವು ಒಮ್ಮೆ ನಿಮ್ಮ ಅಕ್ಕ ಪಕ್ಕ ಕಣ್ಣು  ಹೊರಳಿಸಿ..ಅಲ್ಲೊಂದು ಪುಟ್ಟ ಮೂಕ ಜೀವಿ ನಿಮ್ಮ ಒತ್ತಡಗಳಿಗೆ  ಮಾತಿಲ್ಲದೆ ಸಾವಿರ ಸಮಾಧಾನ ಹೇಳಬಹುದು. ಒಮ್ಮೆ ಪ್ರಯತ್ನಿಸಿರಿ..ನನ್ನ ಅಂಬರ ಗುಬ್ಬಿಗಳಿಗೆ ನಿಮ್ಮ ಒಲುಮೆ ಹಾರೈಸಿ...

( ೨೮/೦೮/೨೦೧೧ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆ ಪುರವಣಿಯಲ್ಲಿ ಪ್ರಕಟಿತ )

Monday, August 22, 2011

ಪೋಸ್ಟ್ ಕಾರ್ಡ್ ನಲ್ಲಿ ಉಳಿದು ಹೋದ ಬದುಕು


 ಪತ್ರವೊಂದನು ಬರೆಯದೆ ಎಷ್ಟು ದಿನ ಕಳೆಯಿತು???ಪ್ರಶ್ನೆ...ಹಳೆಯದು...ಇಮೇಲ್,,ಮೊಬೈಲ್ ಮೆಸೇಜ್ ,,,,ಟೆಲಿಫೋನ್ ಭರಾಟೆಯಲ್ಲಿ ಪೆನ್ನು ಕಾಗದಗಳು ಬರೀ ಸಾಂಕೇತಿಕವಾಗಿ ಉಳಿದಿವೆ...ಸಮಯ ಉಳಿತಾಯ..ತತ್ಪರ ಸೇವೆಯಿಂದ...ಈ ನವಯುಗದ ಸಂದೇಶ ಮಾಧ್ಯಮಗಳು ಒಳ್ಳೆಯದು ಹೌದು...ಪತ್ರ ಬರೆಯುವುದು ಹಳೆ ಸ್ಟೈಲು..ಎನ್ನುವುದು ಹಲವರ ಅಂಬೋಣ...ಮತ್ತೆ ಕೆಲವಷ್ಟು ಬಾರಿ ಪತ್ರ ಬರೆಸಿಕೊಂಡವರು ಅದಕ್ಕೆ ಜವಾಬು ಕೊಡದೆ....ಅಂಥ ಸುಂದರ ಅಕ್ಷರ ಬಾಂಧವ್ಯದ ಯೋಗ್ಯರಾಗುವುದೇ ಇಲ್ಲ.....ಪ್ರೇಮಪತ್ರಗಳ ಜಾಗವನ್ನು ಮುದ್ರಿತ ಗ್ರೀಟಿಂಗ್ ಕಾರ್ಡ್ ಗಳು ಆಕ್ರಮಿಸಿದವು....ಹೀಗೆ ಪತ್ರಗಳು....ಗತಕಾಲದ ವೈಭವ ವಾಗಿಬಿಟ್ಟವು......
ಸರಿ..ಪತ್ರ ಬರೆಯೋದು ಬೇಡ....ಹಳೆಯ ಪತ್ರಗಳನ್ನು ಓದದೆ ಎಷ್ಟ್ ದಿನ ಆಯಿತು...???????
ಪತ್ರಗಳಲ್ಲೂ ಹಲವು ವಿಧಗಳಿವೆ...ಶುದ್ಧ ವ್ಯವಹಾರಕ್ಕೆ ಬರೆದ ಪತ್ರಗಳು...ಪ್ರೇಮಕ್ಕೆ...ಮಮಕಾರಕ್ಕೆ  ಆಮಂತ್ರಣಕ್ಕೆ.ಆಯಾ ವಿಷಯಕ್ಕೆ ತಕ್ಕಂತೆ...ಪತ್ರದ ಅಳತೆಯು ನಿರ್ಧಾರವಾಗುತ್ತದೆ ಪುಟಗಟ್ಟಲೆ ಬರೆದ ಪತ್ರಗಳು ಕೆಲವೊಮ್ಮೆ ಬೋರು ಹೊಡೆಸಿರಬಹುದು..  ನೀಲಿ .ಅಂತರ್ದೆಶಿಯ ಪತ್ರದ ಮಡತೆಯಲ್ಲಿನಾಲ್ಕೇ ಸಾಲು ನೋಡಿ ನಿರಾಸೆಯೂ ಆಗಿರಬಹುದು...ಆದರೆ ಪೋಸ್ಟ್ ಕಾರ್ಡ್ ಆಕಾರದಲ್ಲಿ ಚಿಕ್ಕದಾದರೂ...ಅದು ಹೇಳಬೇಕಾದ್ದನ್ನು ಸರಳವಾಗಿ ಹೇಳಿ ಬಿಡುತ್ತದೆ....
ಅಂಥ ಪೋಸ್ಟ್ ಕಾರ್ಡುಗಳನ್ನು... ನಮ್ಮ ತಂದೆ  ಚಿನ್ನದ ಹಾಳೆಗಳೆನೋ..ಎನ್ನುವಷ್ಟು ಜಾಗ್ರತೆಯಿಂದ ಕೂಡಿತ್ತಿದ್ದಾರೆ ೧೯೪೧ ರಿಂದ ೨೦೧೦ ರತನಕದ ಕಾರ್ಡುಗಳಿವೆ.. ಸಮಯ ಸಿಕ್ಕಾಗ..ಮನೆಗೆ ಯಾರಾದರು ಬಂದಾಗ ಫೋಟೋ ಅಲ್ಬುಮ್ಗಳಂತೆ ಈ ಪೋಸ್ಟ್ ಕಾರ್ಡ್ ಗಳು ನೆನಪ ಬುತ್ತಿಯನ್ನು ಬಿಚ್ಚಿಡುತ್ತವೆ....
ಪೋಸ್ಟ್ ಕಾರ್ಡ್ಗಳಲ್ಲಿ ಬರೆದವರು ಪಾತ್ರಗಳಾದವರು........ಹಲವರು...ಕೆಲವರ ಬದುಕು ಸಂಪೂರ್ಣ ಬದಲಾಗಿದೆ...ಕೆಲವರು ಈಗ  ಬದುಕೇ ಇಲ್ಲ ...ಅವೆಲ್ಲ ಪತ್ರಗಳನ್ನು ಓದಿದ ನಂತರ ಹಲವು ಭಾವಗಳು ಮನದಲ್ಲಿ ಹಾದು ಹೋಗುತ್ತವೆ...ಅಂಥ ಮೂರು ದಶಕಗಳ ಪ್ರತಿನಿಧಿಗಳಂತೆ...ಮೂರು ಕಾರ್ಡ್ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ...ಹೆಚ್ಹು ಸೆಳೆದಿರುವ ...ಮತ್ತು ಕಾರ್ಡ್ ಓದಿದ ನಂತರ ನಡೆದ ಘಟನೆಯನ್ನು ಅರಿಯಲು ಪ್ರಯತ್ನಿಸಿ.. ಬದುಕನ್ನು...ಕೆಲ ಸಾಲುಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವೆ...ಕಾಲ ಸವೆದು ಹೋಗಿದೆ...ಬದುಕು ಈ ಕಾರ್ಡ್ ಗಳಲ್ಲಿ ಉಳಿದು ಹೋಗಿದೆ....



ಪೋಸ್ಟ್ ಕಾರ್ಡ್ -1

ಸಾಂಪ್ರತ                                                     ೧೭/೦೨/೧೯೭೦     
..............................................
................................................
ಮಂಜಗುಣಿಯಲ್ಲಿ ವರನೊಬ್ಬ ನಿರುವ ಬಗ್ಗೆ ಗೊತ್ತಾಗಿದೆ..ಅಮ್ಮ ಹೇಳುವಂತೆ
 ಸೌ.ಕಮಲಿನಿ ಗೆ  ಈ ಸಂಭಂಧ ಹೇಳಿ ಮಾಡಿಸಿದ್ದಂಥದ್ದು
ವರ ಪೋಸ್ಟ್ಮ್ ಮನ್ ನಾಗಿ ಕೆಲಸ ಮಾಡುತ್ತಿದ್ದು ತನ್ನದೇ ಸ್ವಂತ  ಜಮೀನು ಹೊಂದಿದ್ದಾನೆ.ತಂದೆ ಇಲ್ಲ
 ತಾಯಿಯು ವಯಸ್ಸದುದರಿಂದ ಆದಷ್ಟು ಬೇಗ ಮದುವೆ ಮಾಡಿಬಿಡಬೇಕು.ಎಂಬದು ಹುಡುಗನ ದೊಡ್ಡಪ್ಪನ 
ವಿಚಾರ.ಆದ ಕಾರಣ ತಾವು ಮತ್ತು ಅಕ್ಕ ಬಂದು ಅಮ್ಮನೊಂದಿಗೆ ಮಂಜುಗುಣಿ ಗೆ ಹೋಗಿ ಬನ್ನಿ..
ಮತ್ತೇನು ವಿಶೇಷ ವಿಲ್ಲ.ನಮ್ಮ ಮನೆಯ ಕೆಂಪಿ ಕಂದು ಹಾಕಿತು.ಇದು ಎರಡನೇ ಸಲ.ಮತ್ತೆ ಹೀಗೆ ಆದರೆ ಅದನ್ನು 
ಮಾರಾಟ ಮಾಡುವುದು ಎಂಬ ಆಲೋಚನೆ ಇದೆ......ಮಕ್ಕಳಿಗೆಲ್ಲ ಆಶಿರ್ವಾದ..ಮತ್ತು ಪ್ರೀತಿ....
ಮತ್ತೆಲ್ಲ ಆರಂ 
ಇಂತಿ ತಮ್ಮ 
ರಾಮದಾಸ.
...............................ಕಮಲಿನಿಗೆ  ಮದುವೆ ಗೊತ್ತಾಯಿತು ...ಅದು ಎರಡನೇ ಸಂಬಂಧ.ಮೊದಲೇ ೪ ಮಕ್ಕಳಿದ್ದವು...ಆಕೆ ಒಪ್ಪುವ ಮೊದಲೇ ತನ್ನ ಮನದಲ್ಲಿದ್ದದ್ದನ್ನು ಹೇಳಿ ಬಿಟ್ಟಿದ್ದಳು..೪ ಮಕ್ಕಳಿಗೆ ತಾಯಿ ಆಗಲೂ ನಾ ಸಿದ್ಧ..ಆದ್ದರೆ ವರನಿಗೆ ಕುಡಿತದ ಅಭ್ಯಸವೊಂದು ಇರದಿದ್ದರಷ್ಟೇ..ಸಾಕು.
..ಮನೆಯಲ್ಲಿ ತನ್ನ ಬೆನ್ನಿಗೆ ವಯಸ್ಸಿಗೆ ಬಂದ ತಂಗಿಯರು..ತಮ್ಮಂದಿರು...ತನ್ನನ್ನು ಮದುವೆ ಆಗುವವ ಒಳ್ಳೆ ಅನುಕೂಲಸ್ತ..ತನ್ನಿಂದ ತವರಿನ  ಪರಿಸ್ತಿತಿ ಸುಧಾರಿಸಿದರೆ ಅದೇ ಒಂದು ನೆಮ್ಮದಿ....ಮಕ್ಕಳೇನು ???ಇಲ್ಲಿ ಚಿಕ್ಕ ತಂಗಿ ತಮ್ಮಂದಿರನ್ನು ಸಾಕಿಲ್ಲವೇ??ಹಾಗೆ..ಮುದ್ದು ಪ್ರೀತಿಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ...
ಸಂಬಂಧ ತಂದವ ಹತ್ತಿರದ ಸಂಬಂಧಿ...ಎಲ್ಲಕ್ಕೂ ಹೂ ಅಂದು ಅದನ್ನು ಹೊಂದಿಸಿದ್ದ ..ಮದುವೆಯು ಆಯ್ತು...ಮೊದಲ ವಾರದಲ್ಲೇ..ಗೊತ್ತಾಯಿತು..ತಾನು ಏನು ಇರಬಾರದು ಅಂದು ಕೊಂಡಿದ್ದಲೋ..ಅದರ ನಷೆಯಲ್ಲೇ...ಮತ್ತ ....ತೂ..ರಾ..ಡು...ತ್ತ.....ನಾಲ್ಕು ವರ್ಷದಲ್ಲಿ ಎರಡು ಮಕ್ಕಳು...ಬದುಕು...ಹೇಗೋ ಸಾಗಿತ್ತು....
ತವರಿಗೆ ತನ್ನ ಮನೆಯ ಗುಟ್ಟು ಎಂದು ಬಿಟ್ಟು ಕೊಡಲಿಲ್ಲ...ಒತ್ತಡದಲ್ಲಿ ಒರಟು ಮಾತುಗಳು ಬರುತ್ತಿದ್ದವು....ಒಡಲಲ್ಲಿ ಎರಡು ಮಕ್ಕಳು...ಅಷ್ಟರಲ್ಲಿ ಆತ ಇಲ್ಲವಾದ ಅನುಕೂಲ ಗಳೆಲ್ಲ ಮರೆಯಾದವು..ಸಂಭಂಧಿಗಳು ಪರಿಚಯವಿಲ್ಲವೇನೋ...ಎಂಬಂತೆ ವರ್ತಿಸಿದರು..
ನಂತರ ????? ಕಲಿತ ಹೊಲಿಗೆ,ಕೈ ಹಿಡಿದಿತ್ತು...ಬಡತನ ಬಾಲ್ಯದಿಂದಲೇ ಸ್ವಾಭಿಮಾನ ಕಲಿಸಿತ್ತು...ಸಾಕೆ???ಅಂಗಡಿಗೆ ಸಾಮಾನು ಕಟ್ಟುವ ಕಾಗದದ ಪೊಟ್ಟಣ..ಶಾವಿಗೆ ಹಪ್ಪಳ..ಆಕೆ ಎಲ್ಲವನ್ನು ಮಾಡಿದಳು.............
ಕಷ್ಟ ,???ಹಾಗೆಂದರೇನು???ಊಹ್ಹ್ ಅದಾ???ನನ ಆತ್ಮೀಯ ಗೆಳತಿ...ಅನ್ನೋ ಮಟ್ಟಕ್ಕೆ ಘಟ್ಟಿ ಆಗಿತ್ತು ಮನಸು......................ಇಷ್ಟೆಲ್ಲಾ ಆದ ನಂತರ ನನಗನಿಸಿದ್ದು.....;-ಕಮಲಿನಿ ಮಂಜುಗುಣಿಯ ವರನೊಂದಿಗೆ ಮದುವೆ ಆಗಿದ್ದರೆ????ಆರಾಂ ಇರುತ್ತಿದ್ದಳೆನೋ.....ಯಾಕೆ ಆ ಸಂಭಂಧವನ್ನು ಮುಂದುವರಿಸಲಿಲ್ಲ..ಆಕೆಯ ಬದುಕು ಏನಾಗಿ ಹೋಯ್ತು ಛೇ...

ಪೋಸ್ಟ್ ಕಾರ್ಡ್ -೨
೧೩/೮/೧೯೫೬ 
ಆತ್ಮೀಯ ಭಾವ,
..................ಸೌ. ಇಂದಿರೆ ಗಂಡು ಮಗುವಿಗೆ ಜನ್ಮ ನೀಡಿದ್ದು ಮತ್ತು ಯಾವುದೊ ದೈಹಿಕ ತೊಂದರೆಯಿಂದ
 ಶಿಶು ತೀರಿಕೊಂಡಿದ್ದು ಕೇಳಿ ಅತೀವ ಕಷ್ಟ ಎನಿಸಿತು...ನಿಮಗಾದ ಬೇಸರಕ್ಕೆ ಹೇಗೆ ಸಮಾಧಾನ ಹೇಳಬೇಕು 
ಎಂಬುದು ತಿಳಿಯುತ್ತಿಲ್ಲ...
ನಿಮ್ಮ ಮನೆಯಲ್ಲಿ ಹಿಂಡುವ ಆಕಳೊಂದಿದೆ ಎಂಬುದನ್ನು ಮಾತು ಮಾತಲ್ಲಿ ಹೇಳಿದ ನೆನಪು..
.ಸಧ್ಯಕ್ಕೆ ಶಾರದೆಗೆ ಎದೆಹಾಲು ಸಾಕಾಗುತ್ತಿಲ್ಲ ಹೀಗೆ ಬಿಟ್ಟರೆ ಶಿಶು ದಿನದಿಂದ ದಿನಕ್ಕೆ ಕೃಷ ವಾಗುತ್ತ..ಜೀವಕ್ಕೆನಾದರು ಆದೀತು
ಎಂಬ ಹೆದರಿಕೆ ಕಾಡುತ್ತಿದೆ...ದಯಮಾಡಿ ಕೆಲದಿನಗಳ ಮಟ್ಟಿಗೆ..ಆಕಳನ್ನು ಇಲ್ಲಿ ಕಳಿಸಿದರೆ ಜೀವ ಉಳಿಸಿದ ಪುಣ್ಯ ನಿಮಗೇ ಬರುತ್ತದೆ...
ಅವಕಾಶವಾದಿ ಅಂದುಕೊಳ್ಳದೆ..ದಯಮಾಡಿ ನನ್ನ ಅಗತ್ಯತೆ ಮನಗೊಂಡು ತಾವು ನನಗೆ...ಉಪಕರಿಸುತೀರಿ ಎಂದು ನಂಬಿದ್ದೇನೆ..
ಇಂತಿ ತಮ್ಮ 
ದತ್ತಾತ್ರೇಯ...
........................................ಇಂದಿರೆಗೆ ಮನಸು ಒಪ್ಪುತ್ತಿಲ್ಲ ...ಜೀವನಾಧಾರಕ್ಕೆ ಅಂತ ಇರುವುದು..ಅದೊಂದೇ ಆಸ್ತಿ..ಹೊಲದಲ್ಲಿ ಈ ಬಾರಿ ಬೆಳೆಯೇ ಇಲ್ಲ...ಹೈನ ಮಾರಿ ಕೊಂಚ ಅನುಕೂಲ ಆಗಿತ್ತು........ಅದನ್ನು ಕೊಟ್ಟು ಬಿಟ್ಟರೆ?????..ವಾಪಸು ಕೊಡುತ್ತಾರೋ ಇಲ್ಲವೋ..ಸತ್ತ ಮಗುವಿನ ದುಃಖ ಒಂದೆಡೆ ಆದರೆ ಇದ್ದವರ ಬದುಕು ನಡೆಸಬೇಕಾದ ಅನಿವಾರ್ಯತೆ ಒಂದೆಡೆ...ಸಂಬಂಧದ ಮರ್ಯಾದೆ ಒಂದೆಡೆ...ಎಷ್ಟಾದರೂ ತಂಗಿಯದೆ ಮಗು.ವಿಕಲ್ಪಗಳಿಲ್ಲದ ಸಮಸ್ಯೆ ಇರುವುದೇ???ಮಾಡುವುದಾದರೂ ಏನು???
ಮರುದಿನ ನಸುಕಿಗೆ  ಪತಿ...ವೈದೆಹಿಯನ್ನು ಕರೆದು ಕೊಂಡು ತಂಗಿಮನೆಗೆ ಹೊರಟುಹೋದರು...ಹೋಗುವಾಗ ವೈದೇಹಿಗೆ ಕುಂಕುಮವಿಟ್ಟು ಎರಡು ಚಮಚ ಎಣ್ಣೆ ಕಿವಿಗೆ ಬಿಟ್ಟು..ಕಾಲ್ಮುಗಿದು..ಬೇಗ ಬಾ...ನಿನ್ನ ಅಗತ್ಯವಿದೆ ನನಗೆ...ನೀನು ನನ್ನ ಮನೇ ಲಕ್ಷ್ಮಿ...ಅಂದು ಕಣ್ಣೀರು  ಸುರಿಸಿದ್ದಳು...ಇಂದಿರೆ...
ಪತಿ..ಸುಸ್ತಾಗಿ ಬಂದು ಕಲ್ಲು ಮಂಚದ ಮೇಲೆ ಮಲಗಿದ್ದರು...ಆಸರೆಗೆ...ಮಜ್ಜಿಗೆ ಕೊಡುವಾಗ...ಮತ್ತೆಂದೋ ಹೀಗೆ ಮಜ್ಜಿಗೆ ಕೊಡುವುದು ಅನ್ನಿಸಿ ವೈದೇಹಿ ಮತ್ತೆ ಮತ್ತೆ ನೆನಪಾದಳು...ಜೊತೆಗೆ ಆಕೆಯ ಪುಟ್ಟ ಕಂದ ಸೋಮಿ..ಅಲ್ಲೊಂದು ಆಕಳು ವೈದೇಹಿಯ ಬಣ್ಣದ್ದೇ...ಅರೆ ವೈದೆಹಿಯೇ...ಕಣ್ಣಲ್ಲಿ ನೀರು'''''
............................. ಮತ್ತೆ ವೈದೇಹಿ..ಸಾಯುವ ವರೆಗೂ..ಇಂದಿರೆಯ ಮನೆಯಲ್ಲೇ ಇದ್ದಳು....ಅಲ್ಲಲ್ಲ ತನ್ನ ಮನೆಯಲ್ಲೇ ಇದ್ದಳು

(ನನಗನ್ನಿಸಿದ್ದು...;-ಮನುಷ್ಯರಿಗಿಂತ ಪ್ರಾಣಿಗಳಿಗೆ ಸಂವೇದನೆ ಜಾಸ್ತಿಯೇನೋ...ತನ್ನ ಅಗತ್ಯ ನಿಜವಾಗಿ ಯಾರಿಗಿದೆ ಎಂಬುದು...ವೈದೆಹಿಯೇ ನಿರ್ಧರಿಸಿದ್ದಳು
...ಸಂಭಂಧಗಳಿಗೆ ಇಗಿರುವ ಬೆಲೆ ಏನು???)

ಪೋಸ್ಟ್ ಕಾರ್ಡ್ -೩
೨೫/೮/೧೯೬೨ 
ತೀರ್ಥರೂಪ ತಂದೆಯವರಲ್ಲಿ...
ನಿಮ್ಮ ಮಗಳು ಬೇಡುವ ಆಶಿರ್ವಾದಗಳು...ನಾನು ಆರಾಂ ಇದ್ದೇನೆ..ನಿಮ್ಮ ಕುಶಲತೆಯ ಬಗ್ಗೆ ತಿಳಿಸುತ್ತಿರಿ..
ಇಲ್ಲಿ ಮಳೆ ಇನ್ನು ನಿಲ್ಲುವ ಸೂಚನೆ ತೋರಿಸಿಲ್ಲ..ಬಟ್ಟೆಗಳು ಒಣಗುತ್ತಿಲ್ಲ..ಮನೆಮಂದಿಯ ಅಷ್ಟು ಬಟ್ಟೆಗಳನ್ನು
 ತೊಳೆದು ಹಾಕುತ್ತೇನೆ ಆದ್ದರಿಂದ..ಒಣಗಿಸಲು ಜಾಗವಿಲ್ಲ...ನಾಳೆ ಬಿಸಿಲು ಬಂದರೆ ..ಮಗುವಿನ ಹೊದಿಕೆಗಳನ್ನು ತೊಳೆದು ಹಾಕಬೇಕು..
ಅತ್ತೆ..ಶ್ರೀಮತಕ್ಕ,ವಸಂತ ಎಲ್ಲರು ಗೋಕರ್ಣ ಮುರುಡೆಶ್ವರಕ್ಕೆ ಹೋಗಿ ಬಂದರು,ಕಾಯಿ ಕೀಳುವವರು ಬರುತ್ತಾರೆ ಎಂದು ನಾನೆ ಹೋಗಲಿಲ್ಲ..
ಮಸಾಲೆ ಕಲ್ಲು ತುಂಬಾ ಸಣ್ಣದಿದೆ..ದೊಡ್ಡ ಕಲ್ಲು ತಂದರೆ ಶೇರು ಅಕ್ಕಿಯ ದೋಸೆ ಹಿಟ್ಟು ರುಬ್ಬಬಹುದು..ಅದಕ್ಕೆ ದೊಡ್ಡ ಕಲ್ಲು ತರುತ್ತಾರಂತೆ
ಅತ್ತೆಯವರಿಗೆ ನಾನು ರುಬ್ಬಿದರೆ ಸಮಾಧಾನ..
ನಿನ್ನೆ ಬದನೇಕಾಯಿ ಬಜ್ಜಿ ಮಾಡಿ ಮಾವಿನ ಹಿಂಡಿಗೆ ಪುಡಿ ಕುಟ್ಟಿ ಇಟ್ಟಿದ್ದೆ..ಮತ್ತೆ ಎರಡು ರೀತಿಯ ಪಲ್ಯ ಮಾಡಬೇಕಿತ್ತು
..ಶೈಲು ಕೈ ಬಿಡಲಿಲ್ಲವಾದ್ದರಿಂದ ಅತ್ತೆಯವರೇ ಮಾಡಬೇಕಾಯಿತು..ರಾತ್ರಿಯಿಡಿ ಕೈ ನೋವು ಎಂದು ನರಳುತ್ತಿದ್ದರು..ಪಾಪ..!
ನಾನೆ ಬೀಸಿನೀರ ಶಾಖ ಕೊಟ್ಟು ಉಪ್ಪಿನ ಎಣ್ಣೆ ಹಚಿದೆ...ರಾತ್ರಿ ಇಡಿ ನಿದ್ದೆ ಮಾಡಲಿಲ್ಲ ಅವರು ಪಾಪ.!
ಹಂಡೆ ದೊಡ್ಡದಿದೆ ಒಮ್ಮೆ ನೀರು ಕಾಯಿಸಿದರೆ ಮನೆಮಂದಿಗೆಲ್ಲ ಆಗುತ್ತೆ ಅಂತ ಸಂಜೆಯೇ ನೀರು ಕೆಳ ತೋಟದ ಭಾವಿಯಿಂದ ನೀರು ಸೇದಿ..
ಕಾಯಿಸಿಪ್ಪೆ ಹಾಕಿ ಹುರಿ ಹಾಕಿ ಇಡುತ್ತೇನೆ ಆದ್ದರಿಂದ...ಎಲ್ಲರ ಸ್ನಾನ ಬೇಗ ವಾಗಿ..ಕೆಲಸಕ್ಕೆ ಅನುಕೂಲವಾಗುತ್ತದೆ..
ಇದನ್ನು ವಸಂತನ ಕೈಯ್ಯಲ್ಲಿ ಪೋಸ್ಟ್ ಮಾಡಲು ಕೊಡುತ್ತೇನೆ..ಪತ್ರವನ್ನು ತಾಯಿಯವರಿಗೂ ಓದಲು ಕೊಡಿ ಉತ್ತರ ಜರೂರ್ ಬರೆಯಿರಿ ..
ತಂಗಿ ತಮ್ಮಂದಿರಿಗೆ ಪ್ರೀತಿ...ನಿಮ್ಮ ಆರೋಗ್ಯದ ಕಡೆ ಗಮನವಿರಲಿ...ನನ್ನ ಬಗ್ಗೆ ಚಿಂತೆ ಮಾಡಬೇಡಿ..ನಾನು ಆರಾಂ ಇದ್ದೇನೆ..
ಇಂತಿ ನಿಮ್ಮ ಮಗಳು
ಉಮಾ 
(ನನಗನ್ನಿಸಿದ್ದು.;-ಈ ಪತ್ರವನ್ನು ಅದೆಷ್ಟು ಬಾರಿ ಓದಿದ್ದೇನೆ ನನಗೆ ಗೊತ್ತಿಲ್ಲ.....ಅದೆಷ್ಟು ಗೌಪ್ಯತೆಯಿಂದ ತನ್ನ ಪರಿಸ್ತಿತಿಯನ್ನು ತವರಿಗೆ ತಿಳಿಸಿದ್ದಾರೆ...ಪತ್ರದ ಕೊನೆಯಲ್ಲಿ ತಾಯಿಯವರಿಗೆ ಪತ್ರ ಓದಲು ಕೊಡಿ ಎಂಬುದನ್ನು ಒತ್ತಿ ಬರೆದಿದ್ದರ ಹಿಂದೆ ಅದೆಷ್ಟು ಅರ್ಥ ಅಡಗಿದೆ..??ತಂದೆ ಆದವಗೆ ..ತನ್ನ ಮಗಳು ಕೊಟ್ಟ ಮನೆಯಲ್ಲಿ ಎಲ್ಲರ ನ್ನು ಅರ್ಥ ಮಾಡಿಕೊಂಡು ಸಂಸಾರದ ಬಂಡಿಯನ್ನು ಸರಿದಾರಿಯಲ್ಲಿ ಒಯ್ಯುತ್ತಿದ್ದಾಳೆ ಎಂಬ ಹೆಮ್ಮೆ ಆದರೆ...ತಾಯಿಗೆ ತನ್ನ ಮದ್ದಿನ ಮಗಳು ತನ್ನ ವಯಸ್ಸಿಗಿಂತ ಮೀರಿದ ಜವಾಬ್ದಾರಿ ಹೊತ್ತು ಅದೆಷ್ಟು ಕಷ್ಟ ಪಡುತ್ತಿದ್ದಾಳೆ..ಎಂಬ ಸಂಕಟ...ಹೆಣ್ಣು ಜೀವ ಅದೆಷ್ಟು ಸಂವೇದನಾಶೀಲ, ಎಲ್ಲಿ ಏನು ಎಷ್ಟು ಇರಬೇಕೋ ಅಷ್ಟಷ್ಟೇ ಒದಗಿಸುವ....ಒಂದು ನಿಸ್ಪೃಹ ಜೀವ ...ಆದರೆ ಶ್ರೇಯಸ್ಸು ಮಾತ್ರ ಯಾವತ್ತು ಅವಳ ಪಾಲಿಗಿಲ್ಲ ....)

ಇನ್ನೂ ಇವೆ  ಪೋಸ್ಟ್ ಕಾರ್ಡ್ ಗಳು ಅದರಲ್ಲಿ ....ಸುಮಾರು ,,ಹಲವಾರು ಬದುಕುಗಳು ಅವನ್ನು ಹುಡುಕುತ್ತ ಅವರಲ್ಲಿ ನನ್ನ ಅನ್ವೇಷಿಸುವ ನಾನು......