Tuesday, November 6, 2012

ಮತ್ತಿದು ಹೀಗೆ ನಡೆಯುತ್ತದೆ

ಪ್ರತಿ ಹೃದಯದಲ್ಲೊಂದು ಪುಟ್ಟ ಕೊಣೆ ,
ಅದೊಂದು ಧಾಮ ಸುಬಧ್ರ  ಸಶಕ್ತ 
ಭಗ್ನ ಪ್ರೇಮದಿಂದ ಘಾಸಿಗೊಂಡ 
ಹೃದಯಕ್ಕೊಂದಿಷ್ಟು ನೆಮ್ಮದಿ ಕೊಡಲು ,
ಕನಿಷ್ಠ ಪಕ್ಷ ಮತ್ತೊಬ್ಬರು ಆ ಸ್ಥಾನ ತುಂಬುವ ತನಕ 

ಪ್ರತಿಬಾರಿ ನಿನ್ನೊಂದಿಗೆ ಮಾತಾಡಿದೆ 
ಹಲವು ಸ್ಥಾಯಿಗಳಲಿ ನಿನ್ನ ಮೆಚ್ಚಿಸಲು ಯತ್ನಿಸಿದೆ ,
ನೀನು ನಟನೆ ಇಲ್ಲದೆಯೇ ಉತ್ತರಿಸಿದೆ ,
ನಾ ತುಂಬಾ ಮಾತನಾಡುತ್ತೇನೆ ಎಂದೆ ,
ಆದರೆ ನಾ ವಹಿಸಿದ  ಮೌನ
 ನನ್ನ ಸ್ವ-ರಕ್ಷಣೆಯ  ತಂತ್ರ ಎಂದು 
 ನೀ ತಿಳಿಯದೆ ಹೋದೆ 

ಪ್ರತಿಬಾರಿ ಗುಲಾಬಿಯನ್ನು ತಂದೆ ,
ಪ್ರತಿಬಾರಿ  ನನ್ನ ಗುಲಾಬಿಯೇ ಎಸೆಯಲ್ಪಟ್ಟಿದ್ದೇಕೆ ?
ಮತ್ತಿದು  ಹೀಗೆ  ನಡೆಯುತ್ತದೆ ಎಂದು ಗೊತ್ತಿದ್ದೂ ನಾನಿನ್ನ ಪ್ರೀತಿಸುತ್ತಿರುವುದಾದ್ರು ಏಕೆ ??

ಕೆಲವೊಮ್ಮೆ ಅನಿಸಿದ್ದು ಉಂಟು ,
ನನ್ನ ಮೌನ ವೆ ಎಲ್ಲಕ್ಕೂ ಕಾರಣವೇನೋ  ಎಂದು ,
ಅದಕ್ಕೆ ನನ್ನ ಹೃದಯದ ಆ ಪುಟ್ಟ ಕೋಣೆಯನ್ನು 
ನಿನ್ನೊಂದಿಗೆ ಹಂಚಿಕೊಳ್ಳುತ್ತಿರುವೆ ,
ಇದನ್ನು ಚೂರು ಮಾಡುವ ಸಂಪೂರ್ಣ ಹಕ್ಕು ನಿನ್ನದೇ .

ಈಗ ನನ್ನ ಕಣ್ಣುಗಳು ಸುಮ್ಮನೆ ಮುಚ್ಚಿಕೊಂಡಿವೆ 
ಅವು ನೋಡುವುದು ನೀ ನೋಡಿದ್ದನ್ನು , ನೀ ತೋರಿಸಿದ್ದನ್ನು 
ಮತ್ತಿದು ಹೀಗೆ ನಡೆಯುತ್ತದೆ ...ನಡೆಯುತ್ತಲೇ ಇರುತ್ತದೆ ....

ನನ್ನ ಆಯ್ಕೆ ಮಾತ್ರ ನೀನೇ 
ನಿನಗೂ ಕೊಟ್ಟಿದ್ದೇನೆ ನಿರ್ಧರಿಸುವ ಹಕ್ಕು 
ನನ್ನ ಆಯ್ಕೆ ಮಾತ್ರ ನೀನೆ....
ಮತ್ತೆ ನೀ  ಮತ್ತು ನನ್ನ ಹೃದಯ 
ಚೂರು ಚೂರು  ಮಾಡಿ ಅದರ ಮೇಲೇ  
ನಡೆದು ಮತ್ತೊಬ್ಬನ ತಕ್ಕೆ ಸೇರಲು..

ಮತ್ತಿದು ಹೀಗೆ ನಡೆಯುತ್ತದೆ ,
ಹೃದಯದ ಮೂಲೆಯಲ್ಲೊಂದು ಕೋಣೆ  ಇದೆ ..

ಮತ್ತಿದು ಹೀಗೆ ನಡೆಯುತ್ತದೆ 

 (ಇಂಗ್ಲಿಶ್  ಹಾಡೊಂದರ  ಭಾವಾನುವಾದ )


Thursday, September 27, 2012

ಚಕ್ಕುಲಿ ಚರಿತ್ರೆ .




ನನ್ನಿಂದ ಈ ಬರಹ ಬರೆಸ್ತಿರೋದು ವಿಜಯಕ್ಕನ ಬ್ಲಾಗ್ ಪೋಸ್ಟು , ಗರಿ ಗರಿ ಕರುಂ ಕುರುಂ ಚಕ್ಕುಲಿ ಬಗ್ಗೆ ಅವರು ಕೊಟ್ಟ ಚಂದದ ನಿರೂಪಣೆ. ಅದೆಷ್ಟು ಅಡುಗೆ ಫೋಟೋ ತೆಗೆದಿಟ್ಟಿದ್ದೇನೆ ಒಂದರ ಕುರಿತು ಹತ್ತು ಕತೆಗಳು ಆದರೆ  ಒಂದಕ್ಷರವನ್ನು ಇತ್ತೀಚಿಗೆ ಬರೆಯಲಾಗುತ್ತಿಲ್ಲ ,ಯಾಕೆ ಅನ್ನೋದು ಗೊತ್ತಿಲ್ಲ ಕಷ್ಟ ಪಟ್ಟು ಅವರಿವರು ಬರೆಯುತ್ತಿದ್ದಾರೆ  ಅನ್ನೋ ಹಪಹಪಿಗೆ  ಬರೆಯುವ ಮನಸ್ಸು ಕೂಡ ಇಲ್ಲ ,ಇವತ್ಯಾಕೋ ಈ ಚಕ್ಕುಲಿ ನನ್ನ ಮನಸ್ಸನ್ನು ಆವರಿಸಿದೆ.ವಿಜಯಕ್ಕನ ಚಕ್ಕುಲಿ ಗಳು ಅದೆಷ್ಟು ಶಕ್ತಿಶಾಲಿ ನೋಡಿ ???

ಚಕ್ಕುಲಿ ಮತ್ತು ಹೊಳಿಗೆ  (ಪೂರನ ಪೂಳಿ) ಇವೆರಡು ತಿಂಡಿಗಳಿಗೆ ನಾವು ಹಬ್ಬಗಳನ್ನೂ ಬ್ರಾಂಡ್ ಮಾಡಿದ್ದೇವೆ ,ಅಮ್ಮ ಚವತಿಗೆ ಚಕ್ಕುಲಿ ಯುಗಾದಿಗೆ ಹೊಳಿಗೇ ಮಾಡೋದು ವಾಡಿಕೆ ,ಆದರೆ ಆ ಚಕ್ಕುಲಿಯ ಕತೆಗಳು ಸಿಕ್ಕಾಪಟ್ಟೆ ರಸವತ್ತು ,ನಮ್ಮ ಹಳೆ ಮನೆ ಮುಂದೆ ಸಾರಸ್ವತ ಕುಟುಂಬವೊಂದು ನೆಲೆಸಿತ್ತು ಅವರ ಮನೆ ಯನ್ನ ನಾವು ಎದುರುಮನೆ ಅನ್ನೋದೇ ರೂಡಿ ,ಅವರ ಮಕ್ಕಳು ಕರೆದಂತೆ ಅವರನ್ನು ಆಯಿ ಪಪ್ಪಾ ಅಂತಲೇ ನಾವು ಕರೆಯೋದು ನಮ್ಮಲ್ಲಿ ಗಣಪತಿ ಇಲ್ಲದ ಕಾರಣ ಚವತಿಯ ಸಕಲ ಸಂಭ್ರಮ ನಾನು ಕಂಡಿದ್ದು ಅವರ ಮನೆಯಲ್ಲಿ ಚವತಿಗೆ ಚಕ್ಕುಲಿ ಮಾಡುತ್ತಿದ್ದಾಗ ಅವರು ಹರಕೆ ಹೊರುತಿದ್ದರು, ಅದು  ಸರಿಆಗದಿದ್ದರೆ ''ಯಾವಳ್  ಹಾಳಾದ ಕಣ್ಣೋ ......'' ಅಂತ ಬೈಯ್ಯೋಕ್ ಶುರು ಮಾಡಿದ್ರೆ ಕೂತ ಗಣಪ್ಪ ಎದ್ದು ಓಡಿಹೋಗಿ ಮತ್ತೆರಡು ವರ್ಷ ಬರಬಾರದು ಹ್ಯಾಂಗ್ ವಟ ವಟ ಮಾಡೋರು ,

ಇನ್ನೊಂದು ಚಕ್ಕುಲಿ ಕತೆ ನನ್ನ ಸಂಗೀತಕ್ಕೊರ್ ಮನೇದು ,ಅವರು ರುಚಿ ನೋಡೋಕಷ್ಟೇ ಚಕ್ಕುಲಿ  ಕೊಡೋದು.ಮತ್ತೆ ಆ ರುಚಿ ಕಾಣಬೇಕೆಂದರೆ ಒಂದ್ ವರ್ಷ ಕಾಯಬೇಕು..ಕಾಯುವಿಕೆಯ ಸುಖಕ್ಕೆಂದು ಸಿಗುವುದು ಮತ್ತೆರೆಡೆ ಚಕ್ಕುಲಿ ,

ನಾನು ತಿಂದ ಸುಪರ ಡ್ಯೂಪರ ಚಕ್ಕುಲಿ ಅಂದರೆ ನನ್ನ ಪಪ್ಪನ ಆತ್ಮೀಯ ಸ್ನೇಹಿತ ವಾಮನ್ ಮಾಮನ ಮನೇದು ಅದೇನು ಹಾಕ್ತಿದ್ರೋ, ಬಾಯಲ್ಲಿಟ್ಟರೆ ನೀರು ಆಗೋದು ಚವತಿಯಲ್ಲಿ ಗಣಪ್ಪನಿಗಿಂತ ನಾನು ತಂಗಿ ಅವರ ಮನೇ ಚಕ್ಕಲಿ ಬರೋದೆ ಕಾಯುತ್ತಿದ್ದೆವು ,
 ಮತ್ತೊಂದು ಚಕ್ಕುಲಿ ನೆನಪು ನನ್ನ ಮಮ್ಮಮ್ಮ (ಅಮ್ಮಮ್ಮ ) ನದು ಆಕೆ ಚಕ್ಕುಲಿಗಿಂತ ತಿನ್ಗೊಳಲು ಅನ್ನೋ ಚಕ್ಕುಲಿಯ ಸೋದರ ಸಂಬಂಧಿಯನ್ನು ಜಾಸ್ತಿ ತಯಾರಿಸೋಳು , ಅಕ್ಕಿ ನೆನೆಸಿಟ್ಟು ಮಾಡುವ ಈ ತಿಂಡಿಯನ್ನು ಆ ಬಾವಿ ಬಾಯಿಯ ಒರಳಲ್ಲಿ ರುಬ್ಬಿ ರುಬ್ಬಿಯೇ ಇರಬೇಕು ನನ್ನ ಮಮ್ಮಮ್ಮ ೧೨ ಹೆತ್ತರೂ  ಆಕೆಯ ಹೊಟ್ಟೆ ಸಪಾಟು ,

 ಈ ಚಕ್ಕುಲಿ ಬಗೆಗೆ ತೀರದ ಆಕರ್ಷಣೆ ಹುಟ್ಟಿಸಿದ್ದು ಅವರಿವರ ಬಯಕೆಊಟದ ಆರತಿಗೆಂದು ಮಾಡುತ್ತಿದ್ದ ೫/೭/೯ ಸುತ್ತಿನ ಚಕ್ಕುಲಿಗಳು ಒಮ್ಮೆ ಅಷ್ಟು ದೊಡ್ಡ ಚಕ್ಕುಲಿ ಮಾಡಿ ತಿನ್ನಬೇಕು ಅನ್ನೋ ಕನಸು ಇನ್ನು ನನಸಾಗಿಲ್ಲ 
ಇನ್ನು ನನ್ನ ಅಮ್ಮನ ಚಕ್ಕುಲಿ ತಯಾರಿಬಗ್ಗೆ ಹೇಳದಿದ್ದರೆ ನನ್ನ ಬರಹ ಅಪೂರ್ಣ ,ಅಮ್ಮ ಚವತಿಗೆ ಒಂದು ವಾರ ಮೊದಲು ಅಕ್ಕಿ ,ಹುರಿದ ಉದ್ದಿನಬೇಳೆ ಸ್ವಲ್ಪ ಪುಟಾಣಿ ಸೇರಿಸಿ ಸ್ಟೀಲಿನ ಡಬ್ಬಿಯಲ್ಲಿ ಹಾಕಿ ಗಿರಣಿಗೆ  ಒಯ್ಯಲು  ಆಜ್ಞೆ ಮಾಡುತ್ತಿದ್ದಳು ,  ಅದರೊಂದಿಗೆ ಇನ್ನು ಕೆಲವು ಕಂಡಿಶನ್ ಇರುತ್ತಿದ್ದವು 
  • ಆ ಡಬ್ಬಿಯನ್ನು ನಮ್ಮ ಪಟಾಲಂ ನ ಯಾರು ಮುಟ್ಟಬಾರದು ,
  • ಆ ಚಕ್ಕುಲಿ ಹಿಟ್ಟು ಬೀಸುವ ಮೊದಲು ನಮ್ಮದೇ ಮನೆಯ ಅಕ್ಕಿ ಅಥವಾ ಗೋದಿ ಬೀಸಬೇಕು ,
  • ತಪ್ಪಿಯೂ ಕೂಡ ಅದರಲ್ಲಿನ ಅಕ್ಕಿಗೂ ನಮ್ಮ ಬಾಯಿಗೂ ಯಾವುದೇ ಮುಖಾ ಮುಖಿ ಆಗಬಾರದು .
  • ಚಕ್ಕುಲಿ ಸರಿಯಾಗದಿದ್ದರೆ  ಸಿದ್ದ ಮಾಡಿದ ಹಿಟ್ತಾದರು ಸರಿ ಅದನ್ನ ಗಿರಣಿಯವನ  ತಲೆಗೆ ತಂದು ತಿಕ್ಕುತ್ತೇವೆ ಎಂದು ಹೇಳು! (ಹೇಳ ಗೀಳೀಯ ಜಾಗ್ರತೆ )
ಆ ಮೂರು ಆಜ್ಞೆಯಲ್ಲಿ ಒಂದನ್ನು ಮಾತ್ರ ನಾವು ಪಾಲಿಸುತ್ತಿದ್ದುದು , ಕೆಲ ವರ್ಷ ಅದು ತಪ್ಪಿದ್ದಿದೆ ಹುರಿದ ಅಕ್ಕಿಯೊಂದಿಗೆ ಹುರಿದ ಉದ್ದಿನಬೇಳೆ ಬರಿ ಬಾಯಲ್ಲಿ ಎಂದಾದರೂ ತಿಂದಿದ್ದೀರಾ ?? ಅದೊಂಥರ ಸಿನಿಮ ನೋಡ್ತಾ ಕಡಲೆ ಬೀಜ ತಿಂದಂತ ಅನುಭವ ಕೊಡುತ್ತೆ ,ಗಿರಣಿಯಲ್ಲಿ ನಮ್ಮ ಸರದಿ ಬರೊ ತನಕ ನಾವು ಅದನ್ನು ಅಷ್ಟೇ ಅಪ್ಯಾಯಮಾನವಾಗಿ ಸವಿಯುತ್ತಿದ್ದೆವು,ಕೊನೆಯದು ಅಮ್ಮನ ಬಾಯಲ್ಲಿ ಕೇಳಲಷ್ಟೇ ಚಂದ ,ಕೊನೆಯಲ್ಲಿ ಜಾಗ್ರತೆ ಅನ್ನೋದು ಇನ್ನು ಚಂದ ,,, ಈಗ ಪಾಪ ನನ್ನ ಪಪ್ಪಾ ಇದರ ಫಲಾನುಭವಿ ,
ಇದು ಚಕ್ಕುಲಿ ತಯಾರಾಗುವ ಕತೆ ತಯಾರಾದ ಮೇಲೆ ಅದರ ನಿಜವಾದ ಮಜ ಅಲ್ವೇ??

ಚಕ್ಕುಲಿ ಯಾವತ್ತು ಬಿಸಿ ಬಿಸಿ ತಿನ್ನಬಾರದು ,ರವೆ ಉಂಡೆ ಕಡಬು ಕರ್ಚಿ ಕಾಯಿ ,ಚಕ್ಕುಲಿ ಹಿಟ್ತಲ್ಲಿ ಮಾಡಿದ ಪೈಸ ವಡೆ ಎಲ್ಲವು ಖಾಲಿ ಆಗುತ್ತಿದ್ದಾಗ ,ಮಾತ್ರ ಆ ಚಕ್ಕುಲಿಯ ನಿಜ ರುಚಿ ಅರಿವಾಗೋದು ,ಡಬ್ಬಿ ತಳ, ಪಾತಾಳ ರಸಾತಳ ಅನ್ನೋ ಶಬ್ಧಗಳ ಮೂರ್ತ ರೂಪ ,
ಇನ್ನು ಚಕ್ಕುಲಿಯನ್ನು ಹೇಗೆ ತಿನ್ನಬಹುದು (''ಬಾಯಿಂದ'' ಅನ್ನೋ ಫನ್ನಿ ಉತ್ತರದ ನಂತರ ...ಇದನ್ನು ಓದಿಕೊಳ್ಳಿ ) ಹಸಿ ಕ್ಹೊಬ್ಬರಿ ತುರಿಯೊಂದಿಗೆ ಮೊದಲ ಪ್ರಯೋಗ ,ಅಮ್ಮ ಸಾರಿಗೆ ಅಂತ ತುರಿದಿಟ್ಟ ಕ್ಹೊಬ್ಬರಿ ಇಟ್ಟಲ್ಲೇ ಮಾಯಾ ,
ನಂತರ ಆ ದಿನದ ಸಾಂಬಾರ್ ಜೊತೆಗೆ ಅದ್ದಿ  ತಿನ್ನದಿದ್ದರೆ ಅದನ್ನು ಚಕ್ಕುಲಿ ಸೀಸನ್ ಅನ್ನೋದೇ ಇಲ್ಲ ಬಿಡಿ ,

ಚಕ್ಕುಲಿ ಘಟ್ಟಿ ಇದ್ದರು  ನುರಿ ನುರಿ ಆಗಿ ಬಾಯಲ್ಲೇ ನೀರಾಗುತ್ತಿದ್ದರೂ  ಯಾವುದೇ ಭೇದವಿಲ್ಲದೆ ಪ್ರಯೋಗಿಸಬಹುದಾದ ರುಚಿ ಚಹಾ ಕಪ್ಪಿನಲ್ಲಿ ಚಕ್ಕುಲಿ ಹಾಕಿ ೨ ನಿಮಿಷ ವಿರಮಿಸಲು ಬಿಟ್ಟು ಚಹಾ  ಕುಡಿಯುತ್ತಲೇ ಅದರಲ್ಲೇ ನೆನೆದ ಚಕ್ಕುಲಿ ತಿನ್ನುವುದು ,ವಿಚಿತ್ರ ಅನ್ನಿಸಿದರೂ ಇದರ ರುಚಿ ಸವಿದವನಿಗೆ ಈಗಾಗಲೇ ಚಕ್ಕುಲಿ ಚಹಾ ಕೈಬೀಸಿ ಕರೆದಿರುತ್ತದೆ ,
ಇನ್ನು ನನ್ನ ಅಜ್ಜಿಗೆ ಹಲ್ಲಿಲ್ಲ ಆದರವಳು ನನ್ನಜ್ಜಿ , ಅವಳ ನಾಲಿಗೆಗೂ ಅಮಿತ ರುಚಿಯ ಚಪಲ ,ಬಾವಿ ಮುಖದ ಅಷ್ಟೇ ಆಳದ ಆ ರುಬ್ಬುಗುಂಡಿನ  ಮೇಲೆ ಇಟ್ಟಿರುವ ಪುಟ್ಟ ಗುಂಡಕಲ್ಲನ್ನು   ಉರುಟುರೂಟು ಚಕ್ಕುಲಿಮೇಲೆ  ನಿರ್ದಯತೆಯಿಂದ ಜಜ್ಜಿ ಅದರ ಪುಡಿ ತಿಂದು ಆಸ್ವಾಧಿಸುತ್ತಾಳೆ  , ಮತ್ತೆ ಕಾಮೆಂಟ್ ಗೆ  ಕಡಿಮೆ ಇಲ್ಲ .

ಇನ್ನು ನಾನು ಚಕ್ಕುಲಿ ಮಾಡಿದ ಕಥೆ ಇಂತಿದೆ , ಹೋದ ಸಾರಿ ಚವತಿಗೆ ಒಂದಷ್ಟು ಜನರನ್ನು ಊಟಕ್ಕೆ ಕರೆದಿದ್ದೆವು ಚವತಿ ಅಂದ ಮೇಲೆ ಚಕ್ಕುಲಿ ಇಲ್ಲದಿದ್ದರೆ??? ಅಂದು ಏನೇನೋ ಮಾಡಿ ಚಕ್ಕುಲಿ ಹಿಟ್ಟು ರೆಡಿ ಮಾಡಿದೆ ,  ಚಕ್ಕುಲಿ ಅಚ್ಚು ,ಒತ್ತು ಎರಡು ಇರಲಿಲ್ಲ ಅದಕ್ಕೇನಂತೆ ಅನ್ನೋ ಉಡಾಫೆಯಲ್ಲಿ ಕೇಕ್ ಡೆಕೊರೆಟ ಮಾಡುವ ಪೈಪಿಂಗ್ ಬ್ಯಾಗ್ ನಲ್ಲಿ ಚಕ್ಕುಲಿ ಹಿಟ್ಟು ಹಾಕಿ ಕೊನೆಪಕ್ಷ ಚಕ್ಕುಲಿಯನ್ತದ್ದು ಏನಾದರೊಂದು ಮಾಡೋಣ ಅಂತ ಪ್ರಯತ್ನಿಸಿದೆ , ಅದೂ ಜಲೆಬಿಯಂತೆ ಕಾಣುತಿತ್ತು ,ಚಕ್ಕುಲಿ ಪ್ರಯೋಗ ಜಲೇಬಿ ಆಗಿದ್ದಕ್ಕೆ ಖೇದವಿತ್ತು ,
ಅದಕ್ಕೆ ಹೋದ ತಿಂಗಳು ಏನಾದರಾಗಲಿ ಅಂದು ಈ ಸಾರಿ ಭಾರತಕ್ಕೆ ಹೋದಾಗ ತಂದ ಚಕ್ಕುಲಿ ಅಚ್ಚಿನಲ್ಲಿ  ಬೋಣಿ ಮಾಡಿ ಬಿಡೋಣ ಅನ್ನಿಸಿತು ,ಆಗ ಮಾತ್ರ ಚಕ್ಕುಲಿ ಚಕ್ಕುಲಿಯಂತೆಯೇ ಕಂಡು ರುಚಿಯು ಅದರಂತೆ ಇತ್ತು. 

ನಮ್ಮ ನೀಲ ಸುಂದರಿ (ನಂ ಕಾರು )ಗೇರ್ ಸಂದಿಯಲ್ಲ್ಲಿ ಹೊಂದಿಕೊಳ್ಳುವಂತ ಡಬ್ಬದಲ್ಲಿ ಪೂರ್ತಿ ಚಕ್ಕುಲಿ ತುಂಬಿಕೊಂಡು ನನ್ನ ಕಾರ್ಯಕ್ರಮ ದ ಪೂರ್ವತಯಾರಿಗೆಂದು  ನಾನು ,ಪತಿದೇವ ಬೆಲ್ಫಾಸ್ಟ್  ಹೊರಟೆವು ಆದಿನ ಆ ಡಬ್ಬಿಯಲ್ಲಿ ಕೈಯ್ಯಾಡಿಸಿದಷ್ಟು ಮದುವೆ ದಿನ ಓಕುಳಿ ನೀರಿನಲ್ಲಿ ಚಿನ್ನದುಂಗುರಕ್ಕು ನಾವಿಬ್ಬರು ತಡಕಾಡಿರಲಿಲ್ಲ, ಶತಮಾನಗಳಿಂದ ಹಸಿದಿರುವರಂತೆ ವರ್ತಿಸುವ ನಮ್ಮಿಬ್ಬರ ಮುಖ ನೋಡುತ್ತಿದ್ದ ನನ್ನ ಮಗ '' R u really hungry ? shall we go to KFC ?'' ಅನ್ನೋ ಪ್ರಸ್ತಾಪ ಮುಂದಿಟ್ಟಿದ್ದ .
ಉಪಸಂಹಾರ 
ಇದೆಲ್ಲ ಸರಿ ನಾನು ಮಾಡಿದ ಆ ಅಧ್ಬುತ (?)ರುಚಿಯ ಚಕ್ಕುಲಿ ಯ ಸರಳ ಸರಳ ರೆಸಿಪಿ ಇಲ್ಲಿದೆ ನೋಡಿ , ಇದನ್ನು ಒಮ್ಮೆ ಟ್ರೈ ಮಾಡಿದ ಮೇಲೆ ಚಕ್ಕುಲಿ ಕೇವಲ ಹಬ್ಬದ ತಿಂಡಿಯಾಗಿ ಉಳಿಯಲ್ಲ ಅನ್ನೋದು ಗ್ಯಾರಂಟಿ .
೨ ಕಪ್  ಅಕ್ಕಿ  
೧ ೧/೨  ಉದ್ದಿನಬೇಳೆ 
೪ ಚಮಚ ಪುಟಾಣಿ (ಹುರಿಗಡಲೆ)
ಹಸಿಕ್ಹೊಬ್ಬರಿ ತುರಿ ಸ್ವಲ್ಪ 
ಬಿಳಿ ಎಳ್ಳು, ಜೀರಿಗೆ ಒಂದೊಂದು ಚಮಚ 
ತಿಂಗೊಳಲು  -ಚಕ್ಕಲಿ ಸೋದರ ಸಂಬಂಧಿ 
ಉಪ್ಪು ರುಚಿಗೆ ,
optional - ಶುಂಟಿ ಬೆಳ್ಳುಳ್ಳಿ ಕರಿಬೇವು ಹಸಿಮೆಣಸು ಜೀರಿಗೆ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಂಡ್ ಮಸಾಲೆ .
 ೧,ಅಕ್ಕಿಯನ್ನು ೪-೫ ಘಂಟೆಗಳ ಕಾಲ ನೆನೆಸಿ , ಮತ್ತು ಕ್ಹೊಬ್ಬರಿ ತುರಿಯೊಂದಿಗೆ  ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಕೊಳ್ಳಿ 
೨,ಉದ್ದಿನಬೇಳೆ  ಘಮ ಬರುವಂತೆ ಕೆಂಪಗೆ ಹುರಿದುಕೊಳ್ಳಿ 
೩.ಹುರಿದ ಉದ್ದಿನಬೇಳೆಯನ್ನು ಹುರಿಗಡಲೆಯೊಂದಿಗೆ ಮಿಕ್ಷಿಯಲ್ಲಿ ಪುಡಿಮಾಡಿಕೊಳ್ಳಿ 
೪ ,ರುಬ್ಬಿದ ಅಕ್ಕಿ ಹಿಟ್ಟಿಗೆ ಈ ಪುಡಿ ಸೇರಿಸಿ, ಇದೆ ಸಂದರ್ಭದಲ್ಲಿ ರುಬ್ಬಿಕೊಂಡ ಮಸಾಲೆ ,ಬಿಳಿ ಎಳ್ಳು  ಜೀರಿಗೆ ಉಪ್ಪು ಸೇರಿಸಿಕೊಳ್ಳಬೇಕು 
೫ ಚನ್ನಾಗಿ ಕಲಿಸಿಕೊಳ್ಳಿ ,ಈಗ ಮಿದುವಾದ ಹಿಟ್ಟು ಸಿದ್ಹವಾಗುತ್ತದೆ,ಅಷ್ಟು ಉದ್ದಿನ ಹಿಟ್ಟು ಬೇಕಾಗದೆಯೂ ಇರಬಹುದು ಅಕ್ಕಿ ಹಿಟ್ಟು ಎಷ್ಟು ನೀರು ಒಳಗೊಂಡಿದೆ ಅನ್ನೋದರ ಮೇಲೆ ಇದರ ಪ್ರಮಾಣ ನಿಶ್ಚಯ ವಾಗುತ್ತದೆ 
೬  ಈಗ ಚಕ್ಕುಲಿ ಒತ್ತಲ್ಲಿ  ಈ ಹಿಟ್ಟನ್ನು ಹಾಕಿ ಚಕ್ಕುಲಿ ಮಾಡಿ ಗರಿ ಗರಿಯಾಗಿ ಕರಿದು ಸವಿಯಿರಿ .

ಇದು ನನ್ನ ಅಮ್ಮಮ್ಮ ನ ರೆಸಿಪಿ , ಈ ಬರಹ ಓದಿದ ಮೇಲೆ ನಾನು ಅದೆಷ್ಟು ಭೂಕಿ ಪ್ಯಾಸಿ ,ಅನ್ನೋದು ನಿಮಗೇ ಗೊತ್ತಾಗಿರುತ್ತದೆ ಇನ್ನುಮೇಲೆ ಯಾರಾದರು ತಮ್ಮ ಮನೆಗೆ ಕರೆಯುವ ಮುನ್ನ ನೂರು ಬಾರಿ ಯೋಚಿಸೋದಂತು ಖಂಡಿತ ಆದರೂ ನನ್ನಂಥ ಮನಸವರು ಇರ್ತಾರೆ ಅನ್ನೋ ಭರವಸೆ ಮೇಲೆ ಈ ಬರಹ ಪೋಸ್ಟ್ ಮಾಡ್ತಿದ್ದೇನೆ ಮತ್ತೊಮ್ಮೆ ವಿಜಯೇಶ್ವರಿಗೆ ಧನ್ಯವಾದ ,ಕಮೆಂಟುಗಳಿಗೆ ಸ್ವಾಗತ 

Thursday, August 2, 2012

ಕಲಿಯಬೇಕಿದೆ.....



ಕಲಿಯಬೇಕಿದೆ.....
ನಾನು ಕಲಿಯಬೇಕಿದೆ ..ಇಂಥವರ ನಡುವೆ 
ಬೆಳೆಯಲು  ಬೆಳಗಲು
ಮುಂದೆ ನಗುತ್ತಲೇ ಇರುವುದು 
ಅವರು  ತೆರಳಿದ ಬೆನ್ನಿಗೆ 
ಉಫ್ಫ್ ಎಂದು ಉಸಿರುಬಿಡುವುದು

ನಾನು ಕಲಿಯಬೇಕಿದೆ 
ಗೊತ್ತಿಲ್ಲದ್ದನ್ನು ಗೊತ್ತಿದೆ ..
ಎಲ್ಲಾ ನನಗೇ ಗೊತ್ತಿದೆ 
ಮತ್ತೆ ನನಗಲ್ಲದೆ ಇದು ಯಾರಿಗೂ ಗೊತ್ತಿರಲು 
ಸಾಧ್ಯವೇ ಇಲ್ಲ ಎಂದು ವಾದಿಸುವ ಕಲೆಯನ್ನ....

ಕಲಿಯಬೇಕಿದೆ 
ಸುಳ್ಳು ಗಳ ಮೂಟೆಯಲ್ಲಿ ಸತ್ಯ ಹುಡುಕುವ 
ವ್ಯರ್ಥ ಪ್ರಯತ್ನ ಮಾಡುವುದನ್ನ 
ಮಿಥ್ಯೆ ಕನ್ನಡಿ ಮನೆಯಲ್ಲಿ ಸತ್ಯ ತೋರಲು ಒದ್ದಾಡಿ 
ಇಲ್ಲದ್ದನ್ನು ಇದೆ ಎಂದು ತೋರುವ ವಿದ್ಯೆ ಯನ್ನ 

ಕಲಿಯಬೇಕಿದೆ 
ಏಳಿಗೆ ಆದರೆ ಅದು ನನ್ನದೇ ಆಗಿರಬೇಕು 
ಜಗದಲ್ಲಿ ನನ್ನ ಹೊರತು ಏಳಿಗೆ ಗೆ ಅರ್ಹರ್ಯಾರು ?
ಎಂದು ಬೀಗುವುದನ್ನ...

ರೋಗವನ್ನು ಆರೊಗ್ಯ ಎನ್ನುವುದನ್ನ 
ಕಾಗೆ ಬಂಗಾರವನ್ನು ಚಿನ್ನ ಎನ್ನುವುದನ್ನ 
ಮತ್ಯಾರಿಗಾದರು ಸಿಕ್ಕೀತು .ಎನ್ನುವ ಹಪ ಹಪಿಯಲ್ಲಿ 
ಹಳಸಿದ್ದನ್ನು ಉಣ್ಣುವ ತೆವಲನ್ನ 

ಕಲಿಯಬೇಕಿದೆ,
ದುರ್ಗಂಧವನ್ನು ಸೌಗಂಧಿಕೆ ಎನ್ನುವ 
ಅನಿವಾರ್ಯತೆಯನ್ನ 
ನೀನೆ ನೀನೆ ನೀನೆ ಎಂಬ ಹೊಗಳಿಕೆಯಾ ನುಡಿಯನ್ನ 

ಕಲಿಯಬೇಕಿದೆ 
ಬೆಳೆಯಲು- ಬೆಳಗಲು ...
ಆದರೆ ಇಷೆಲ್ಲ ಕಲಿತ ದಿನ ನಾ 
ಬೆಳೆಯುವೆನೆ?? ಬೆಳಗುವೆನೆ?
ಕೊನೆಗೆ ನನ್ನ ನಾನು
ಗುರುತಿಸ ಬಲ್ಲೆನೇ???
ಬಿಡು ಹೀಗೆ ಇದ್ದು ಬಿಡುವೆ..
ಪೆದ್ದು ಪೆದ್ದಾಗಿ ,

Tuesday, June 5, 2012

ಊರ ಮಳೆ,,ಮತ್ತದರ ಸುತ್ತ...




ಈಗ ಅಲ್ಲಿ..
ಮಳೆ ಶುರುವಾಗಿದೆ .
ಇಲ್ಲಿ ನಾನು ನೆನಪುಗಳ ಕಂಬಳಿ ಹೊದ್ದು
ಮನಸ ಕಾಯುಸುತ್ತಿದ್ದೇನೆ 

ಸಂತೆಯಲ್ಲಿ  ೨೦ ರುಪಾಯಿಯ
ನೀಲಿ ಬೆಲ್ಟಿನ 
ಪ್ಯಾರಗನ್ ನಂತೆ ಕಾಣುತ್ತದೆಂದು ತೆಗೆದುಕೊಂಡ ಚಪ್ಪಲಿ
ಹಸಿರು ಬಣ್ಣದ ಯುನಿಫಾರ್ಮ್ ಮೇಲೆ 
ಫ್ರೀಯಾಗಿ ಇತ್ತ ಕೆಮ್ಮಣ್ಣಿನ ಸಂಡಿಗೆ..
ಮರೆಯಾಲಾದೀತೇ??

ಸೋಮವಾರಕ್ಕು ಈ ಮಳೆಗೂ ಅದೇನು ಅನ್ಯೋನ್ಯತೆ 
ಸಂತೆಯೆಲ್ಲ ಕಪ್ಪು ಬಣ್ಣದ ಪುಟ್ಟ ಪುಟ್ಟ ತೇರು
ಆ ತೇರ ಕೆಳಗೆ ಬದನೆ ,ಬಟಾಟೆ 
ಮಾರಲು ಕುಳಿತ ಆ ಯವ್ವನ ಗಲ್ಲದ ಮೇಲಿದ್ದ ಹನಿಗಳು 
ಮಳೆನೀರೋ ಕಣ್ಣೀರೋ ????
ಹಾಗೊಂದು ಪ್ರಶ್ನೆಗೆ ಉತ್ತರವಿರದು..

ಸಂತೆ ದಾರಿಯಲಿ  ಕುಳಿತ 
 ಬುಟ್ಟಿ ಯಿಂದ ಇಣುಕುವ 
ಮೆಣಸು,ಚವಳಿ ಅಗೆಗಳು..
ಕಬ್ಬಿಣ ಮಾರುವ ಹುಡುಗನ ಮೆತ್ತಗಿನ ನಜರು  ,
ಮಡಿಕೆ ಮಾರಲು ಕುಳಿತ ಆ ಪುಟ್ಟ ಹುಡುಗಿ ಮೇಲೆ

ಬೆನ್ನಿಗೆ ಹಾಕಿಪ ಪಾಟೀಚೀಲದಿಂದ
ಹೊಸ ಪಟ್ಟಿ ,ಪುಸ್ತಕ ತೊಯ್ದ ಘಮ ..
ಆಘ್ರಾನಿಸಿದಷ್ಟು ಹಿತ.

ಒಣಗದ ನೀರ್ಜೀವ ಬಟ್ಟೆಗಳ ಮೇಲೆ 
ಅಮ್ಮನ ಸಹಸ್ರಾರ್ಚನೆ..
ಅವು ನಮ್ಮಂತೆ..ಕೇಳಿ ಸುಮ್ಮನಿರುತ್ತವೆ..
ಒಣಗುವುದಿಲ್ಲ..

 ಡೇರೆ ಗಡ್ಡೆ  ಚಿಗುರದು,,,ಜವಳು ಬಂದಿದೆ ...
ಅರಶಿನ ಎಲೆಗಳು ಪಂಚಮಿ ಹಬ್ಬದೊಳಗೆ 
ಚಿಗುರಿದರೆ ಸಾಕು..
ಎದುರುಮನೆಯವರು ಅಣಬೆ ತಿಂದರೋ ಏನೋ..
ಈ ಬಾರಿ ಕಳಲೆ ಸಿಗುತ್ತೋ ಇಲ್ವೋ 
ಮರಕೆಸ ಹೋದಸಾರಿ ಇದ್ದ ಮರದಲ್ಲೇ ಚಿಗುರಿದ್ರೆ ಪುಣ್ಯ..
ಈ ಬಾರಿ ದಿನಸಿಗಿಂತ ಆಸ್ಪತ್ರೆ ಬಿಲ್ಲೆ ಹೆಚ್ಚು ಆಗುತ್ತೆ,,
ಈ ಥರ ಮಳೆಲಿ ನೆಂದು ಬಂದರೆ 
ಹಾಳಾದ್ ಮಳೆ..
ಮಕ್ಕಳು ಶಾಲೆಯಿಂದ ಬರೋವಾಗ್ಲೆ ಬರುತ್ತೆ..

ಯಾರೋ ಹೊಸ ಹುಡುಗಿ..
ಹಳದಿ ಬಣ್ಣದ ಲಂಗ 
ಮೇ ಫ್ಲವರ್ ಜೂನ್ ನಲ್ಲಿ ಅರಳಿದಂತಿದೆ.
ಇವಳೇ ಇರಬಹುದ ಆಕೆ??ನನ್ನ ಕನಸಿನ  ಹುಡುಗಿ ,,,
ಕಾಲೇಜ್ ಮೆಟ್ಟಿಲೇರಿದ 
ಜಸ್ಟ್ ಪಾಸು ಹುಡುಗನ ತಲೆಯಲ್ಲಿ 
ಹಳದಿ ಹಳದಿ..ಹೊರಗೆ ಹನಿಯುವ ಹೂ ಮಳೆ 

ಆಕೆ ,,
ಛೇ ಆ ಲೆಕ್ಚರರ್ರು ಅದ್ಯಾಕೆ ಅಷ್ಟು ಚಂದ..
ಬೇಕಂತಲೇ ಪೆನ್ನು ಮರೆತು ಬರ್ತಾಳೆ..
ಇರುವದ್ದಕ್ಕಿಂತ ಸ್ಮಾರ್ಟ್ ಆಗಲು ತುಡಿಯುತ್ತಾಳೆ
ಆಕೆ ಕೊಡೆ  ತರದ ದಿನ ,ಲೆಕ್ಚರರ್ ಕೊಡೆ ತಂದದಿನ 
ಅವ ತನ್ನ ಹಿಂದೆ ಬರುವಾಗ ಬರಬಾರದೇ ಈ ಮಳೆ ...
ಆ ದಿನ ..ಬರುತ್ತದೆ..ಮಳೆ..
ಆತ .. ಕರೆದು ಇರುತ್ತಾರೆ..
ಎಂದು ಇಲ್ಲದ ಮುದ್ದಿನಿಂದ ಅಪ್ಪ ಬೈಕ್ ತಂದು 
ಪಕ್ಕದಲ್ಲಿ ನಿಲ್ಲಿಸಿ , ಕೂತ್ಕೋ  ಅಂತಾರೆ..

ಹಸಿ ಮಣ್ಣ ವಾಸನೆ..
ಬಟ್ಟೆಗೂ ಹಸಿ ವಾಸನೆ..
ಬಾಡಿ ಸ್ಪ್ರೇ ಹೋಗಿ ರೂಂ ಪ್ರೆಷ್ನರ್,
ಹಾಕಿದರು ಹೋಗದು..
ದೇವರೇ ದಯವಿಟ್ಟು ಈ ತಿಂಗಳನ್ನು 
ಸ್ಕಿಪ್ಪ್ ಮಾಡು ಶಾಪ ಕೊಡಬೇಡ..
ಎಂದು ಬೇಡಿದಷ್ಟು 
ಬೇಗ ಬರುತ್ತದೆ ಅದು..ಅಭ್ಯಾಗತನಂತೆ...

...ನೆನಪು ಗಳು ನಿಲ್ಲುತ್ತಿಲ್ಲ..
ಇಲ್ಲಿನ ಮಳೆಗೆ ಊರಿನ ಮಳೆಯ ಚಲುವಿಲ್ಲ..
ಅಂದರೆ,, ಮಳೆಯಲ್ಲೂ ಎಂಥ ಚಲುವು ???
ಎಂದು ಕೀಟಲೆ  ಮಾಡಿ ನಗುವ ಇವರ 
ಕುರಿತು ಬರೆದ  ಅದೆಷ್ಟೋ ಪ್ರೇಮ ಪತ್ರಗಳು,
ಮಲ್ಹಾರ ರಾಗ ಬಳಗ 
ಹಳೆಮನೆಯ ಹಿತ್ತಲಲ್ಲಿ  ಕಹಿ ಕಂಚಿ ಹೂವಿನ ಕಂಪು
..ಬಚ್ಚಲ ಹಂಡೆಗೆ ಹಾಕಿದ ಹಸಿ ಸೌದೆ ..
ಗೆಣಸು,ಹಲಸ ಹಪ್ಪಳ ಸುಟ್ಟ ವಾಸನೆ..


ಹೀಗೇ ....
ನನ್ನ ನೆನಪುಗಳ ಪರಿಷೆ ಸಾಗುತ್ತಲೇ ಇರುತ್ತದೆ...


(ಚಿತ್ರ ಕೃಪೆ-ಇಂಟರ್ನೆಟ್ )

ಮದರಂಗಿಯಲ್ಲಿ .....




ಮದರಂಗಿ ಹೆಸರು ಕೇಳಿದ ತಕ್ಷಣವೆ ಹೆಂಗಳೆಯರ ಮೊಗದಲ್ಲೊಂದು ಕಿರುನಗೆ ಅರಳದೆ ಇರದು. ಕೈಗೆ ಮೆಹೆಂದಿ ಹಚ್ಹಿಕೊಂಡು ಮಲಗಿದ ರಾತ್ರಿ ಕನಸಿನಲ್ಲೆಲ್ಲ ಮದರಂಗಿಯ ಗುಂಗು..ಮದುಮಗಳ ಕೈಗೆ ಹಚ್ಚಿದ  ಮದರಂಗಿ ಬಣ್ಣ ಪಡೆದಷ್ಟು ಗಂಡನಿಗೆ ಹೆಂಡತಿಮೇಲೆ ಪ್ರೀತಿ ಹೆಚ್ಚಂತೆ ,ಅಕ್ಕ ಪಕ್ಕ ಕುಳಿತ ಗೆಳತಿಯರ ಈ ಮಾತು ಇನ್ನು ಟೆನ್ಶನ್ ಹೆಚ್ಚಿಸುತ್ತದೆ.ಬಣ್ಣ ಬರಲಿ ಅಂದು ಮನೆದೇವರಿಗೆ ಹರಕೆ ಹೊತ್ತ ವಧುಗಳು ಇದ್ದಾರೆ,ಅದ್ಹೇಗೆ ಹಾಕಿದರು ಸ್ವಲ್ಪವಾದರೂ ಸರಿ ತನ್ನ ಬಣ್ಣ ಬಿದಡದೆ ಉದುರದ ಮದರಂಗಿ ತನ್ನ ಒಣಗಿದ ಬದುಕಿನ ನಂತರವು ಬಣ್ಣ ಉಳಿಸಿಕೊಂಡು  ತಿಳಿಸುವ ಮೌಲ್ಯ ಅರಿತವರಿಗಷ್ಟೇ ಅರ್ಥ ವಾಗುತ್ತದೆ.ಅಂಥ ಮದರಂಗಿಯ ಕೆಂಪು ಕಂಪಿನೊಂದಿಗೆ ಕೆಲಕಾಲ ಕಳೆಯೋಣವೇ??

ನಮ್ಮದಲ್ಲ ಆದರೂ ನಮ್ಮದೇ..

ಲಾಸಾನಿಯ ಎನರ್ಮಿಸ್ ಎಂಬ  ಸಸ್ಯ  ಶಾಸ್ತ್ರೀಯ ಹೆಸರನ್ನು ಹೊಂದಿದ ಮದರಂಗಿ ಭಾರತದ ಕಲೆ ಎಂದೇ ಜಗತ್ತಿನಾದ್ಯಂತ ಹೆಸರು ಮಾಡಿದೆ,೫೦೦೦ ವರ್ಷ ಕ್ಕೂ ಹೆಚ್ಹಿನ ಇತಿಹಾಸ ಹೊಂದಿರುವ  ಮದರಂಗಿಯ ಮೂಲ ಆಫ್ರಿಕ ,ಮದರಂಗಿಯ ಬಳಕೆಯನ್ನು ಮೊದಲು ಮಾಡಿದ್ದು ಮಮ್ಮಿಗಳ ಮೇಲೆ,ಪುನರ್ಜನ್ಮ, ಮರಣ ನಂತರದ ಜೀವನದ ಬಗ್ಗೆ ಅತೀವ ವಿಶ್ವಾಸ ಹೊಂದಿದ್ದ ಎಜಿಪ್ತಿಯನ್ನರು ಮದರಂಗಿಯನ್ನು ಮಮ್ಮಿಗಳ ಉಗುರು ರಂಗಾಗಿ ಬಳಸುತ್ತಿದ್ದುದು ದಾಖಲೆಗಳಲ್ಲಿದೆ.

ಕಾಲಕ್ರಮೇಣ ಮದರಂಗಿ ಮಧ್ಯ ಪೂರ್ವ ಏಶಿಯ ,ಉತ್ತರ ಆಫ್ರಿಕ ದಂತಹ ಉಷ್ಣ ಹವಾಮಾನ ಹೊಂದಿದ ದೇಶಗಳಲ್ಲಿ ಪಸರಿಸಿತು ,ಕ್ರಿ ಶ ೭೧೨ ರ ಹೊತ್ತಿಗೆ ಫರ್ಶಿಯನ್ನರು ತಮ್ಮೊಂದಿಗೆ ಮದರಂಗಿಯನ್ನು ಹೊತ್ತು ತಂದು  ಭಾರತಕ್ಕೆ ಪರಿಚಯಿಸಿದರು .ಭಾರತದ ಶ್ರೇಷ್ಠ ಜ್ಞಾನ ಆಯುರ್ವೇದದಲ್ಲಿ ಮದರಂಗಿಯ ಔಷದೀಯ ಉಪಯೋಗಗಳನ್ನು ಹೇಳಲಾಗಿತ್ತಾದರೂ ಸೌಂದರ್ಯ ವರ್ಧಕವಾಗಿ  ಮದರಂಗಿ ನಮಗೆ ಪರಿಚಯಿಸಿದ್ದು ಪರ್ಷಿಯನ್ನರು .ಅದರ ಗುರುತಾಗಿ ಇಂದಿಗೂ ಮದರಂಗಿಯ ಚಿತ್ತಾರಗಳಲ್ಲಿ ಪಾಸ್ಲೆ ಎಂಬ ಪರ್ಷಿಯಾದ ಚಿತ್ತಾರ ಬಳಕೆಯಲ್ಲಿದೆ.. ಹೀಗೆ  ಜನಾನದಿಂದ  ಜನಸಾಮಾನ್ಯರ ತನಕ  ಮದರಂಗಿ ನಡೆದು ಬಂತು .
ಸುಮ್ಮನೆ  ಅಲ್ಲ ಎಲ್ಲದಕ್ಕೂ ಇದೆ ಅರ್ಥ

ಮೊದಲೆಲ್ಲ ಎಲ್ಲಿತ್ತು ಈ ಮೆಹೆಂದಿ ಕೊನ,ಮಾರ್ಕರ್ ಗಳು ?ಹಿಡಿಸೂಡಿಯ ತುದಿಯಲ್ಲಿ ಸವೆದು ಚೂಪಾದ ಕಡ್ಡಿಯೇ ಮದರಂಗಿ ಕುಂಚ,ನನ್ನ ಅಮ್ಮನ ಕಾಲದಲ್ಲಿ ಕೈಗೆ ಮದರಂಗಿ ಹಚ್ಚಿ  ಅದಕ್ಕೆ ಬಾಲೆ ಎಲೆ ಸುತ್ತಿ ಇಡುತ್ತಿದ್ದರು, ಎಂಬುದು ಅಜ್ಜಿಯ ಉವಾಚ ,ಆದರೆ ಮದರಂಗಿಯ ಚಿತ್ತಾರಗಳಿಗೂ   ಒಂದು ಆಶಯವಿದೆ.

ಮೊಗ್ಗು-ಹೊಸ ಬದುಕು,ಪ್ರೀತಿ
ಹೂವು - ಫಲವಂತಿಕೆಯ  ಸಂಕೇತ
ದೇವರು ಮತ್ತು ಧಾರ್ಮಿಕ ಚಿನ್ಹೆ ಸಂಕೇತಗಳು -ಆಯುರಾರೋಗ್ಯ ,ಕೆಟ್ಟ ದೃಷ್ಟಿಯಿಂದ ರಕ್ಷಣೆ  ಪಡೆಯಲು
ಮಂಡಲಗಳು -ಬುದ್ಧಿವಂತಿಕೆ ,ಅದ್ಯಾತ್ಮ,ತೆರೆದ ಮನದ ದ್ಯೋತಕ
ನವಿಲು ಮತ್ತಿತರ ಪ್ರಾಣಿ ಪಕ್ಷಿಗಳು - ನಿಸರ್ಗದೊಂದಿಗೆ ಮನುಷ್ಯನ ಸಾಮರಸ್ಯ ,ಮತ್ತು ಒಳಿತನ್ನು ಸೂಚಿಸುತ್ತವೆ.
ರಂಗಿನ ಗುಂಗು

ಮಳೆಗಾಲ ಶುರುಅಯ್ತು ಅಂದ ಕೂಡಲೇ ಚಿಗುರುವ ಕಡುಹಸಿರು ಎಲೆ ಗೆಂಪು ಮದರಂಗಿ ಚಿಗುರು ಎಲೆಗಳು ಉತ್ತಮ ಎಂಬುದು ಅನುಭವದ ಮಾತು,ಆ ಕಾರಣದಿಂದಲೇ ಅಷಾದ ಮಾಸದಲ್ಲಿ ,ಗೌರಿ ಹಬ್ಬದ ಸಂದರ್ಭದಲ್ಲಿ ಮದರಂಗಿಯನ್ನು ಹಾಕಿಕೊಳ್ಳುವ ಸಂಪ್ರದಾಯ ಇನ್ನು ಜಾರಿಯಲ್ಲಿರುವುದು,ಮದರಂಗಿ ವರ್ಷದಲ್ಲೆರಡು ಬಾರಿ ತನ್ನೆಲೆಗಳನ್ನು ಚಿಗುರಿಸಿಕೊಳ್ಳುತ್ತದೆ,ಇನ್ನು ಗೋರಂಟಿ ಎಲೆಗಳನ್ನು ಒಣಗಿಸಿ ಪುಡಿಮಾಡಿದ ನಂತರ ಅದಕ್ಕೆ ಕೆಲವು ವಸ್ತುಗಳನ್ನು ಜೊತೆ ಮಾಡಿದರೆ ಅದರ ಕೆಂಪು ಇನ್ನು ಉಜ್ವಲವಾಗುತ್ತದೆ,
ಸಾಮಾನ್ಯವಾಗಿ  ಚಹಾ ಪುಡಿ ,ನಿಂಬೆ ಹುಳಿ ,ಮಜ್ಜಿಗೆ ಮೊಸರು,ಹುಣಸೆಹಣ್ಣು,ದಾಳಿಂಬೆ ಸೀಪ್ಪೆಯ ಕಷಾಯ ಬೆಂಡೆಕಾಯಿ,ಗುಲಾಬಿ ಎಸಳು,ಕಿತ್ತಲೆಸಿಪ್ಪೆ ,ನೀಲಗಿರಿ ಎಣ್ಣೆ ,ಲವಂಗ ,ಸಾಸಿವೆ ಎಣ್ಣೆ,ಸಕ್ಕರೆ ನೀರು,ಮದರಂಗಿ ಸಂಗಾತಿಗಳು.

ಕೆಲ ಬುಡಕಟ್ಟಿನಲ್ಲಿ ಮದರಂಗಿ ರುಬ್ಬುವಾಗ ಎಂಬೆ ಎಂದು ಕರೆಯಲ್ಪಡುವ ಕೆಂಪು ಇರುವೆಯನ್ನು ಸೇರಿಸುತ್ತಾರೆ,ಆ ಇರುವೆಯಲ್ಲಿರುವ ರಾಸಾಯನಿಕ ಮದರಂಗಿಯ  ಬಣ್ಣವನ್ನು ಇನ್ನು ಹೆಚ್ಚಿಸುತ್ತದೆ,ಇದು ನೈಸರ್ಗಿಕ ನೆಲೆಯಲ್ಲಿ ಅವರು ಪ್ರಯೋಗಿಸಿದ ವಿಧಾನ ಆದರೆ ಇತ್ತೀಚಿಗೆ ಅದೇ ರಾಸಾಯನಿಕವನ್ನು ಮದರಂಗಿಯಲ್ಲಿ ಸೇರಿಸಿ ಕಡಿಮೆ ಸಮಯದಲ್ಲಿ ಹೆಚ್ಹು ರಂಗು ಬರುವಂತೆ ಸಿದ್ದ ಗೊಳಿಸಿದ ಕೊನ ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ
ಇದು ಭಾರತದ ರೀತಿ ಆದರೆ ಆಫ್ರಿಕ ಮತ್ತು ಮಧ್ಯ ಪೂರ್ವ ಎಷಿಯಗಳಲ್ಲಿ  ಯಾಕ ಅಥವಾ ಒಂಟೆಯ ಮೂತ್ರವನ್ನು ಸೇರಿಸುತ್ತಾರೆ.ಇದರಿಂದ ಮದರಂಗಿಯ ಬಣ್ಣ ಗಾಢ  ಗೊಳ್ಳುತ್ತದೆ ಎಂಬುದು ಅವರ ನಂಬಿಕೆ,ವೈಜ್ಞಾನಿಕ ನೆಲೆಯಲ್ಲಿ ಆಯಾ ವ್ಯಕ್ತಿಯ ದೇಹದ ತಾಪಮಾನಕ್ಕನುಗುನವಾಗಿ ಮದರಂಗಿ ತನ್ನ ಕಲೆಯನ್ನು ಉಳಿಸಿ ಬಿಡುತ್ತದೆ,ಉಷ್ಣ ದೇಹ ಪ್ರಕ್ರುತಿಯವರ ಕೈಯ್ಯಲ್ಲಿ ಮದರಂಗಿ ರಂಗು ರಂಗಾಗಿ ಕಂಗೊಳಿಸುತ್ತದೆ,
ಸಿಂಗಾರಕ್ಕಲ್ಲದೆ...

ಮದರಂಗಿ ಕೇವಲ ಪ್ರಸಾಧನ ವಾಗಿ  ಮಾತ್ರ ಹೆಚ್ಹು ಜನರಿಗೆ ಪರಿಚಿತ ,ಮದರಂಗಿಯನ್ನು ಚರ್ಮ ಉದ್ದಿಮೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ,ಜೊತೆಗೆ ಉಣ್ಣೆಗೆ ಬಣ್ಣ ಕೊಡಲು  ಬಳಸುವ ಕೆಲವೇ ನೈಸರ್ಗಿಕ ಬಣ್ಣಗಳಲ್ಲಿ ಮದರಂಗಿಯು ಒಂದು.
ಮದರಂಗಿ ಪ್ರತಿಯೊಬ್ಬರ ಹಿತ್ತಲಲ್ಲಿ ಇರಲೇಬೇಕಾದ ಔಷದೀಯ ಸಸ್ಯ , ಅಂಗೈ ,ಅಂಗಾಲು ಉರಿ ಇದ್ದಾಗ ಮದರಂಗಿಯ ಲೇಪವನ್ನು ಹಾಕಿ ಕೊಂಡರೆ ಬೇಗನೆ ಉಪಶಮನ ಕಾಣಬಹುದು,
ರಿಂಗ್ ವರ್ಮ ಎಂಬ ಚರ್ಮ ವ್ಯಾಧಿಯಲ್ಲೂ ಕೂಡ ಮದರಂಗಿಯ ಲೇಪ ಬಹುಪಯೋಗಿ,
ಕಣ್ಣುರಿ ಮತ್ತು ಬಿಸಿಲಿನಿಂದ ನೆತ್ತಿಯಲ್ಲಿ ಬಿಸಿ ಬಿಸಿ ಆದಂಥ ಅನುಭವ ಆದಾಗಲೂ  ಲೋಳೆಸರ ಮತ್ತು ಮದರಂಗಿಯನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಉಷ್ಣ ಕಡಿಮೆ ಆಗುವುದರೊಂದಿಗೆ ,ಕೂದಲು ಸೊಂಪಾಗಿ ಬೆಳೆಯುತ್ತದೆ.ಮತ್ತು ಇದು ನೈಸರ್ಗಿಕ ಕಂಡಿಷನರ್ ಕೂಡ, ಮಲೆನಾಡು ,ಕರಾವಳಿಯಲ್ಲಿ ಸಂಜೆ ಆಸರೆಗೆ ಮಾಡುವ ಕಶಾಯದಲ್ಲೂ ಸ್ವಲ್ಪ ಮದರಂಗಿ ಸೊಪ್ಪು ಸೇರಿಸುವುದುಂಟು.ತಿಂಗಳ ರಜೆ ಮುಂದೆ ಹೋಗಲು  ಇದರ ಕಷಾಯ ನೈಸರ್ಗಿಕ ಉಪಾಯ 

ಕವಿ ಮತ್ತು ಕೈಗೆಂಪು...

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..
ಹಾಗೆಂದು ಕವಿ ಸುಮ್ಮನೆ ಬರೆದಿಲ್ಲ...ಅದೆಷ್ಟು ಕವಿಗಳಿಗೆ ನಲ್ಲೆಯ ಕೈಗೆಂಪು ನಿದ್ದೆಗೆಡಿಸಿಲ್ಲ ಹೇಳಿ..ಪ್ರಿಯತಮೆಯ ಮದರಂಗಿಯ ಕೆಂಪಿನಲ್ಲಿ ಅದೆಷ್ಟು ಬಂದಿಶ್ ,ಗಜಲ  ಗಳು ಸ್ವರದಲ್ಲಿ ಬಂಧಿಯಾಗಿಲ್ಲ????
ಬಿಹಾಗ ರಾಗದಲ್ಲಿ ಹಾಡುವ ಬಂದಿಶ್ ಒಂದರ   ಶಬ್ಧಗಳು ಹೀಗಿವೆ 
.'' ಲಟ ಉಲಜೆ ಸುಲಜ ಜಾ ಬಾಲಮ
ಮೊರೆ ಹಾತ್ ಮೇ ಮೆಹೆಂದಿ ಲಾಗಿ ಹೈ..''
 ತನ್ನ ಮುಂಗುರುಳ ಸಿಕ್ಕು ಬಿಡಿಸುವ ನೆವದಲ್ಲಿ ನಲ್ಲನ ಸಾಂಗತ್ಯ ಬಯಸುವ  ಈಕೆಗೆ ಮೆಹೆಂದಿಯ ನೆವವೇ ಬೇಕಾಯಿತು..

ಚುರಾಕೆ ಮುಟ್ಟಿಮೆ ದಿಲ್ ಕೋ ಚುಪಾಕೆ ಬೈಟೆ ಹೈ 
ಬಹಾನ ಏ ಹೈ ಕಿ ಮೆಹೆಂದಿ ಲಗಕೆ ಬೈಟೆ  ಹೈ ..
 ಹೀಗೊಬ್ಬ ಶಾಯರ್ ಶಾಯರಿ ಮಾಡಿದರೆ..ಇನ್ನೊಬ್ಬ ತನ್ನ ಮಾಶುಕಳನ್ನು ನೆನಪಿಸಿದ ರೀತಿ ಯಾಕೋ ಭಾಳ ಇಷ್ಟವಾಗಿ ಬಿಡುತ್ತದೆ..

ನಾವ್ ಮೇ ಬೈಟಕೆ ಧೋಯೇಥೆ ಹಾತ್ ಕಭಿ ಉಸನೇ..
ಪೂರೇ ತಾಲಾಬ್ ಮೇ ಮೆಹೆಂದಿ ಕಿ ಮೆಹೆಕ್ ಆಜ್ ಭಿ ಹೈ ...

ಉದ್ಯೋಗವಾಗಿ ಮದರಂಗಿ 

ಮದರಂಗಿಯನ್ನು ಹಚ್ಚಲು ಯಾವುದೇ ಪ್ರಮಾಣಪತ್ರ ಪದವಿಗಳು ಬೇಕಿಲ್ಲ. ಕ್ರಿಯಾಶೀಲತೆ ಮತ್ತು ಸತತ ಅಭ್ಯಾಸ ಮದರಂಗಿ  ಕಲೆಯ ಮೂಲ ಮಂತ್ರಗಳು. ಚನ್ನೈ ನಲ್ಲಿ ನೆಲೆಸಿರುವ  ರಾಜೇಶ್ವರಿ ಮಹೇಶ್ ಎನ್ನುವ ಹೆನ್ನ ಕಲಾವಿದೆ ಹೇಳುವಂತೆ ,ಮದರಂಗಿ ಯ ಉದ್ಯೋಗ ಎಂಬುದು ಬಂಡವಾಳ ಇಲ್ಲದ ಸ್ವ ಉದ್ಯೋಗ ,ಪ್ರತಿ ಕೈಗೆ ಕನಿಷ್ಠ ೧೫೦ ರೂಪಾಯಿಗಳಿಂದ  ಮದುವೆ, ಪಾರ್ಟಿ ಮದರಂಗಿಗೆ  ೧೫,೦೦೦ ರೂಪಾಯಿಗಳ ತನಕ ಅವರು ಚಾರ್ಜ್ ಮಾಡುತ್ತಾರೆ.ಆರ್ಡರ್ ಇಲ್ಲದಾಗಲು ಮದರಂಗಿಯನ್ನು ಅಭ್ಯಾಸ ಮಾಡುತ್ತಿರಬೇಕು ಮತ್ತು ಹೊಸ ಹೊಸ ಆಲೋಚನೆಗಳನ್ನು ಮದರಂಗಿಯ ಮೂಲಕ ಕೈಗಳ ಮೇಲೆ ಚಿತ್ರಿಸಲು ಪ್ರಯತ್ನಿಸಬೇಕು ಎಂಬುದು ಅವರ ದೃಡವಾದ ಮಾತು.
ವಿದೇಶದಲ್ಲೂ ಈ ತಾತ್ಕಾಲಿಕ ಚಿತ್ತಾರ ಕಲೆ ಮದರಂಗಿಯನ್ನು ಬಹುವಾಗಿ ಮೆಚ್ಚುತ್ತಾರೆ ಆದರಿಂದ ,ಇದನ್ನು ಕಲಿತ ಹಲವು ಭಾರತೀಯ ಹೆಣ್ಣುಮಕ್ಕಳು ವಿದೇಶದಲ್ಲಿ ಸ್ವಾವಲಂಬಿ ಆಗಿ ತಮ್ಮ ಸ್ವ  ಉದ್ಯೋಗ  ಸ್ಥಾಪಿಸುವಲ್ಲಿ ಯಶಸ್ವೀ ಆಗಿದ್ದಾರೆ.

ಎಚ್ಚರಿಕೆ ,!!!!!!
ಮದರಂಗಿ ಎಂದಕೂಡಲೇ ಅದರ ಹಿಂದೆ  ಮತ್ತಷ್ಟು ಹೆಸರು ಕೇಳಿ ಬರುವುದುಂಟು,ಕಾಲಿ ಮೆಹೆಂದಿ,ಅನ್ನುವ  ತಲೆಕೂದಲಿಗೆ ಹಚ್ಚುವ ಬಣ್ಣ,ತತಕ್ಷಣ ಬಣ್ಣ ನೀಡುವ ಕೆಲವು ಮೆಹೆಂದಿಗಳು,ಆದರೆ ಇವನ್ನು ಬಳಸುವ ಮುನ್ನ ನೆನಪಿಡಲೇಬೇಕಾದ ಅಂಶವೆಂದರೆ ಮದರಂಗಿ ಎಂಬುದು ಕೇವಲ ಕೆಂಪು ಬಣ್ಣದ ಕಲೆಯನ್ನುಳಿಸುವ ಒಂದು ನೈಸರ್ಗಿಕ ಪ್ರಸಾಧನ , ಇದರಲ್ಲಿ ಬೇರ್ಯಾವ ಬಣ್ಣಗಳು ದೊರಕುವುದಿಲ್ಲ.ಕೃತಕವಾಗಿ ತಯಾರಿಸಲಾಗುವ ಕಾಲಿ ಮೆಹೆಂದಿ.ಬ್ಲಾಕ್ ಹೆನ್ನ ಎಂಬುವ ಪ್ರಸಾಧನದಲ್ಲಿ PPD ಎಂಬ  ರಾಸಾಯನಿಕ  ಇರುವದರಿಂದ ,ಇದರ ಬಳಕೆ ಚರ್ಮ ಸಂಬಂಧಿ ಖಾಯಿಲೆಗಳಿಗೆ ತೆರೆದ ಅಹ್ವಾನ ,ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಮದರಂಗಿಯನ್ನು ಆಯ್ಕೆ ಮಾಡಬೇಕಾದ್ದು ಅನಿವಾರ್ಯ,

ಬೇಲಿಯ ಬದಿಯಲ್ಲಿ ಸುಮ್ಮನೆ  ಹಸಿರು ಕೆಂಪು ಹೊದ್ದು ತನಗೀನು ಗೊತ್ತಿಲ್ಲ ಎಂಬಂತೆ ನಿಂತಿರುವ ಮದರಂಗಿಯ ತನ್ನ ಮುಟ್ಟಿದವರಿಗೆಲ್ಲ ತನ್ನ ಬಣ್ಣವನ್ನು ಕೊಡದೆ ಬಿಡದು.ನಿಸರ್ಗದಲ್ಲಿ ಅದೆಷ್ಟು ಮನಮೋಹಕ ಕೂತುಹಲದ ಸಂಗತಿಗಳಿವೆ..ಅದನ್ನು ಅರಿಯುವ ತವಕ ಹಂಬಲ ನಮಗೆ ಬೇಕಷ್ಟೇ.

Sunday, June 3, 2012

ತರಲೆ ತಮ್ಮನ ಜನುಮದಿನಕ್ಕೆ...



ಪ್ರೀತಿಯ ಆನ್ನು

೪/೦೬/೧೯೯೫ ,ರವಿವಾರ ಬೆಳಗಿನ ಜಾವ ನನಗೆ ಹಾಲ್ನಿದ್ದೆ ,,,ಕನಸಿನಲ್ಲಿ ಚಿಕನ್ ಬಂದಿತ್ತು ,ಏನೋ ಗಡಿಬಿಡಿ ಯಾರೋ ನನ್ನ ಎಬ್ಬಿಸಿ ಒಂದು ಚೀಲ ಕೈಗೆ ಕೊಟ್ಟು ಕಾರ್ ಮೇಲೆ ಕೂಡಿಸಿದದಷ್ಟೇ ಗೊತ್ತು .ಮಧ್ಯ ಅದೆಲ್ಲೋ ಒಂಚೂರು ಎಚ್ಹರ ಅಮ್ಮ ಪಕ್ಕದಲ್ಲಿ ಕುಳಿತಿದ್ದಳು ,ಪಪ್ಪ ಪದೇ ಪದೇ ಆರಾಮಿದ್ದೀಯಲ್ಲ ಅಂತ ಕೇಳುತ್ತಿದ್ದರು , ಆ ಮಾತು ಕೇಳಿ ನನ್ನ ನಿದ್ದೆ ಅದೆಲ್ಲೋ ಹಾರಿ ಹೋಗಿತ್ತು ,ನಾನೂ ಅಮ್ಮನೊಂದಿಗೆ ಆಸ್ಪತ್ರೆಗೆ ಹೊರಟಿದ್ದೆ ಅಮ್ಮನಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು ,ಕಾರು ಕುಂದಾಪುರದ ವಿನಯ ನರ್ಸಿಂಗ್ ಹೋಂ ಹತ್ತಿರ ನಿಲ್ಲುತ್ತಿದ್ದಂತೆ ಅಮ್ಮ ಮೆತ್ತಗೆ ಇಳಿದು  ಲೇಬರ್ ವಾರ್ಡ್ ತನಕ ಸುಮ್ಮನೆ ನಡೆದು ಹೋಗಿದ್ದಳು ಆಗ ಬೆಳಿಗ್ಗೆ ೫.೦೦ ಘಂಟೆ ,

ಪಪ್ಪ,ಆಚೀಚೇ ಓಡಾಡುತ್ತಿರೆ ನಾನೂ ದೊಡ್ಡ ಅನುಭವಸ್ತ ಹೆಂಗಸಿನಂತೆ ನನ್ನ ಕೈಗೆ ಕೊಟ್ಟ ಆ ಚೀಲದೊಂದಿಗೆ ಲೇಬರ್ ವಾರ್ಡಿನ ಬಾಗಿಲಲ್ಲೇ ನಿಂತಿದ್ದೆ.ನರ್ಸಮ್ಮ ಅಮ್ಮನ ಹೆಸರು ಕೂಗಿ ಬಟ್ಟೆ ಕೊಡಿ ಎಂದಾಗಲೆಲ್ಲ ನಾನು, ಹೊರಗೆಲ್ಲೋ ತಿರುಗಾಟಕ್ಕೆ ಹೋಗುವಾಗ ಬಟ್ಟೆ ಅಯ್ತ್ಕೆ ಮಾಡುವರಂತೆ ಅದೋ ಇದೋ ಎಂಬಂತೆ ನೋಡಿ ಅದರೊಲ್ಲೊಂದು ಸೆಲೆಕ್ಟ್ ಮಾಡಿ ಆಕೆ ಕೈಗೆ ಕೊಡುತಿದ್ದೆ,ಆಕೆಗೆ ಕೊನೆಗೊಮ್ಮೆ ರೇಗಿ ಯಾರು ದೊಡ್ಡೋರು ಬಂದಿಲ್ವಾ?ನೀನು ಯಾರು?? ಅಂದಾಗ ನಾನು ಅವರ ಮಗಳು ಎಂದಿದ್ದೆ ಅಷ್ಟೇ.ಯಾಕೋ ನನ್ನನ್ನು ಸಣ್ಣ ಹುಡುಗಿ ಎಂದಿದ್ದೇ  ನನ್ನ ಅಸಮಾಧಾನಕ್ಕೆ ಕಾರಣ ಆಗಿತ್ತು .

೫.೧೫ ಕ್ಕೆ ಅಮ್ಮನ ಹೆಸರನ್ನು ಮತ್ತೆ ಕೂಗಿದರು ನರ್ಸಮ್ಮ ,ಗಂಡು ಮಗು ಅಂದು ಆಕೆ ಒಂದು ನಗುವನ್ನು ಕೊಡದೆ ಮತ್ತೆ ಬಾಗಿಲು ಹಾಕಿಕೊಂಡಳು ,ನಗು ಕಾಣಬೇಕಿತ್ತು ನೀನು ಪಪ್ಪನ ಮುಖದಲ್ಲಿ ,ನನ್ನ ಮುಖದಲ್ಲಿ  ಅಮ್ಮನನ್ನು ಅಷ್ಟು ಬೇಗ ವಾರ್ಡಿಗೆ ತರುವಂತೆ ಇರಲಿಲ್ಲ ಆಕೆಯ ಸ್ಥಿತಿ ,ಶುಭ್ರ ಬಿಳಿ ಪಂಚೆ ತುಂಡನ್ನು ನಿನ್ನ ಸುತ್ತಲು ಕಟ್ಟಿ ಗೊಂಬೆಯಂತೆ ಮಾಡಿ ಪಪ್ಪನ ಕೈಗೆ ಕೊಟ್ಟಿದ್ದರು.ನಂತರ ಲೇಬರ್ ವಾರ್ಡಿನ ಎದುರಿಗಿದ್ದ ಒಂದು ಕೋಣೆಯ ತೊಟ್ಟಿಲಲ್ಲಿ ನಿನ್ನ ಮಲಗಿಸಿದ್ದರು.

ಅಮ್ಮನಿಗಿಂತ ಮೊದಲು ನಾನು ನಿನ್ನ ಎತ್ತಿ  ಕೊಂಡಿದ್ದೆ ,ನಿನ್ನ ತೊಟ್ಟಿಲ ಪಕ್ಕ ನಿಂತಿದ್ದೆ.ಇನ್ನು ಬೆಳಕು ಮೂಡಿರಲಿಲ್ಲ ,'ಅಜ್ಜಿ ರಾತ್ರಿ ಮಲಗುವಾಗ ಹೇಳುವ ಚೌಡಿ ಪಿಶಾಚಿಗಳ ಕಥೆಗಳು,ಅವು ನವಜಾತ ಶಿಶುವನ್ನು ತಿನ್ನಲು ಬರುವುದು ಅದೆಲ್ಲ ನೆನೆದು ನಿನ್ನ ತೊಟ್ಟಿಲ ಬಿಟ್ಟು ಆಚೀಚೆ ಸರಿದದಲಿಲ್ಲ..ಬಿಳಿ ಸೀರೆ ಉಟ್ಟ ಯಾವ ನರ್ಸಮ್ಮ ಬಂದರೂ ನಾನು ಅವರ ಕಾಲು ನೋಡುತಿದ್ದೆ..ಮನದಲ್ಲೇ ಮಂತ್ರ ಶುರು ವಾಗುತ್ತಿದ್ದವು,ನೀನು ನಗುತ್ತಿದ್ದಿ ಗೊತ್ತು ,,ಆದರೆ ಅಮ್ಮವಾರ್ಡಿಗೆ   ಬರುವ ತನಕ ನಿನ್ನ ಸಂಪೂರ್ಣ ಜವಾಬ್ದಾರಿ ನನ್ನಮೇಲಿತ್ತು,ಅಮ್ಮ ತಿಂದ ಎಲ್ಲಾ ಕಲ್ಲಂಗಡಿ ಹಣ್ಣುಗಳು ನಿನ್ನ ಗಲ್ಲ ಸೇರಿದ್ದವು ,ಅದೆಷ್ಟು ಕೆಂಪಗಿದ್ದೆ,,ನಮ್ಮ ಮನೆಯಲ್ಲಿ ಆ ವರೆಗೆ ಬೆಳ್ಳಗೆ ಎಂಬ ಕಾಪ್ಮ್ಲಿಮೆಂಟ್ ಸಿಗುತ್ತಿದ್ದುದು ನನಗೆ ಮಾತ್ರ, ಈಗ ನಿನ್ನ ಮುಂದೆ ನಾನು ಏನು ಅಲ್ಲ ,,ಸೇಬಿಸಂತೆ ಇದ್ದೆ ನೀನು,

ಬೆಳಕು ಹರಿಯುತ್ತಿದ್ದಂತೆ ,ಆ ಕೋಣೆಯಲ್ಲಿ ಆಚೀಚೇ ಓಡಾಡುವವರು ಜಾಸ್ತಿ ಆದರು,ನಿನ್ನನ್ನು ೨ ಘಂಟೆಗಳ  ಹಿಂದೆ ಜನಿಸಿದ ಕೂಸೆಂದು ಯಾರು ನಂಬುತ್ತಿರಲಿಲ್ಲ.ಅಷ್ಟು ಚಂದಗಿದ್ದೆ ನೀನು,ಅಮ್ಮ ವಾರ್ಡಿಗೆ ಬಂದಳು,ಅಮ್ಮನಿಗೆ ಪಕ್ಕದಲ್ಲಿದ್ದ ಉಷಾ ಹೋಟೆಲಿನ ಚಹಾ ,ಕಾಫಿ  ತಿಂಡಿ ತೀರ್ಥದ ಸಪ್ಲಾಯರ್ ನಾನೆ ಆದೆ,ನಿಜ ಹೇಳ್ತೀನಿ ಕೇಳು ಆ ಸಮಯವನ್ನು ಅದೆಷ್ಟು ಎಂಜಾಯ್ ಮಾಡಿದ್ದೆ ನಾನು,ಮೀನು ತಿನ್ನದ ಅಮ್ಮನಿಗಾಗಿ,ತರಕಾರಿ ಊಟ ಅಜ್ಜಿ ಕಳಿಸುತ್ತಿದ್ದರು ಸಾವಿರಾರು  ಪಥ್ಯ  ಬೇರೆ .ನಾನು ಪಕ್ಕದ ರೂಮಿನವರೊಂದಿಗೆ ಅದ್ಯಾವುದೇ ಮೀನು ಹೋಟೆಲಿನ ಊಟ ತಗೊಂಡು ಬಂದಿದ್ದೆ ಅದೇನೋ ಖುಷಿ ನೀನು ಹುಟ್ಟಿದ ಗಳಿಗೆಯಿಂದಲೇ ಆಸ್ಪತ್ರೆ ಅಂದರೆ ಪಿಕ್ನಿಕ್ ಸ್ಪಾಟ್ ಆಗಿತ್ತು. ಇನ್ನು ರಾಖಿ ಹಬ್ಬ ಬಂದಾಗ ನಾವು ಅನಾಥ    ಪ್ರಜ್ಞೆ ಅನುಭವಿಸಬೇಕಿಲ್ಲ  ನಮಗೂ ಪುಟ್ಟ ತಮ್ಮ ಬಂದಿದಾನೆ ಎಂಬ ಖುಷಿ ನಿನ್ನಿಬ್ಬರ ಅಕ್ಕಂದಿರದ್ದು ..

ನೀನು ಮನೆಗೆ ಬಂದೆ ,ಪಪ್ಪ ಕುಂದಾಪುರದ ಆ ವಿನಯ ನರ್ಸಿಂಗ್ ಹೋಂ ನಿಂದ ,ಹಳೆ ಬಸ್ ಸ್ಟ್ಯಾಂಡ್  ತನಕ ನಡೆಯುತ್ತಾ ನಡೆಯುತ್ತಾ ಚಂದದ ಹೆಸರೊಂದನ್ನು ಹುಡುಕಿದ್ದರು ''ಅಭಯ '' ನನ್ನ ನಾಲ್ಕು ಅಕಾರಾದಿ ನಾಮದ ಕುಟುಂಬಕ್ಕೆ ಪುಟ್ಟ ಸದಸ್ಯನ ಆಗಮನ,ನಿಜ ಹೇಳ್ತೀನಿ ಕೇಳು,,ಅಸ್ಪತೆಯಿಂದ ಮನೆಗೆ ಬಂದ ನಂತರ ನಿನ್ನೆಡೆಗೆ ದೃಷ್ಟಿ ಹೊರಳಿದ್ದೆ ಕಮ್ಮಿ ,ಕಾರಣ ನಮ್ಮ ಹತ್ತಿರವೇ ಬೆಳೆಯುತ್ತಲಿದ್ದ ಚಿಕ್ಕಮ್ಮನ ಮಗ ಚಂದೂ,,ಅವನಾಗ ತೊದಲು ನುಡಿಯುತ್ತಿದ್ದ ,ತೊಟ್ಟಿಲಲ್ಲಿ ಏನೊಂದು ಸದ್ದಿಲ್ಲದೇ ಸುಮ್ಮನೆ ಮಲಗುತ್ತಿದ್ದ ನಿನಗಿಂತ ನಮ್ಮ ಹಿಂದೆ ಅತ್ತಾ ಅತ್ತಾ (ಅಕ್ಕ ) ಅಂತ ಓಡಾಡುತ್ತಿದ್ದ ಅವನು ನಮ್ಮ ಕೈಗೊಂಬೆ ಆಗಿದ್ದ..

ಅದೆಷ್ಟು ದಿನ???? ,,ಚಿಕ್ಕಮ್ಮನಿಗೆ  ನೀ ಬಂದ ಮೇಲೆ ಚಂದುವನ್ನು ನಮ್ಮ ಹತ್ತಿರ ಬಿಡುವ ಮನಸಾಗಲಿಲ್ಲ ಆಕೆ ಅವನನ್ನು ಕರೆದುಕೊಂಡು ಹೊರಟೆ ಬಿಟ್ಟಳು..ಮತ್ತೆ ಅಳು..ಬೇಸರ,,ಆಗ ನೀನು ಆರೇಳು ತಿಂಗಳಿನವ,ಮತ್ತೆ ನಾನು ಅಕ್ಹಿಲಕ್ಕ,ನಿನ್ನ ಹಿಂದೆ ಮುಂದೆ ಓಡಾಡುವುದು ಶುರುವಾಗಿತ್ತು,ರಗಳೆಯಿಲ್ಲದ ಮಗು ನೀನು...ಎಪ್ರಿಲ್ ಮೇ  ಎಂದಿನಂತೆ ನಮ್ಮ ಅಜ್ಜಿ ಮನೇ ಟೆಂಟ್ ,,ನಿನ್ನನು ಎರಡು ತಿಂಗಳು ನೋಡಿರಲಿಲ್ಲ ಆ ದಿನ ಮೇ ೭-೧೯೯೬  ಅಮ್ಮ ನಿನ್ನ ಕರೆದುಕೊಂಡು ಅಜ್ಜಿಮನೆಗೆ ಬಂದಿದ್ದಳು ನೀನು ನಡೆಯ ತೊಡಗಿದ್ದೆ.ನನ್ನ ಬಾಯಿಂದ ಮಾತು ಹೊರಡಿರಲಿಲ್ಲ ,ಕಣ್ಣು ಖುಷಿಯಿಂದ ಹನಿಯಾಡಿತ್ತು,

ನಿನಗೆ ಅದೆಷ್ಟು ಬಾರಿ ಕೃಷ್ಣನ ವೇಷ ಹಾಕಿ ತೊಂದರೆ ಕೊಟ್ಟಿಲ್ಲ ಹೇಳು..??ನಿನಗೆ ಹುಡುಗಿ ಅಂಗಿ ಹಾಕಿ ಚಂದ ನೋಡುವುದು ,ಜುಟ್ಟು ಕಟ್ಟಿ ಹೂ ಮೂಡಿಸುವುದು ಎಂದರೆ   ನನಗೆ ಇನ್ನಿಲ್ಲದ ಉತ್ಸಾಹ , ಆದರೆ ನನಗೂ ನಿನಗೂ  ಧೀರ್ಘ ೧೨ ವರುಷಗಳ ಅಂತರವಿದೆಯಲ್ಲ ????ಅದೇ  ಕಾರಣದಿಂದ  ನಿನ್ನೊಂದಿಗೆ ನನಗಿಂತ ತಂಗಿಯೇ ಹೆಚ್ಹು ಆಪ್ತತೆ ಸಾಧಿಸಿದ್ದಳು,ನಿಮ್ಮಿಬ್ಬರ ಜಗಳವು ಅಷ್ಟೇ ಚಂದ,ಸಖ್ಯ ಇನ್ನು ಚಂದ .

ಅದು ನಿನ್ನ ಶಾಲಾ ಜೀವನದ ಮೊದಲದಿನ  ಅಖಿಳಕ್ಕನ ಜೊತೆಗೆ ಉಮೇದಿನಿಂದ  ಹೊರಡುತ್ತಿರುವಾಗಲೇ ಸರಗೊಲಿಗೆ ಎಡವಿ ಗಾಯ ಮಾಡಿಕೊಂಡಿದ್ದೆ..ಅಳುತ್ತ ಶಾಲೆಗೆ ಹೋಗಿದ್ದೆ ,ಆ ನಂತರ ದಿನ ಕಳೆಯುತ್ತಾ ಟೀಚರ್ ,ಸರ್ ಯಾರನ್ನೂ ನೀ ಅಳಿಸದೆ ಬಿಟ್ಟಿಲ್ಲ ಅನಿಸುತ್ತೆ ,ನನಗೆ ಮಗ ಹುಟ್ಟುವ ತನಕ ನಾವಿಬ್ಬರು ಒಂದು ಹಂತದಲ್ಲಿ ವೈರಿಗಳಂತೆ ಇದ್ದೆವು,ನೀ ನನ್ನ ರಾಕ್ಷಸಿ ಅಂತ ಕರೆದಿದ್ದೆ ನೆನಪಿದೆಯ ??
೨೦೦೮-೨೦೧೦ ಈ ಎರಡು ವರ್ಷಗಳು ನಮ್ಮಿಬ್ಬರ ಬಾಂಧವ್ಯದ ಇನ್ನೊಂದು ಪುಟವನ್ನು ತೆರೆದಿತ್ತವು.

ನೀನು ನನ್ನ ಬದುಕಲ್ಲಿ ನಾ ಕಂಡ ಆದ್ಭುತ ಟೀಚರ್ ಗಳಲ್ಲಿ ಒಬ್ಬ ,ನಿನ್ನಲ್ಲಿ ಅದೆಂಥ ನಿರಕ್ಷರಿಗೂ ಎಲ್ಲವನ್ನು ಕಲಿಸಿಬಿಡುವ ತಾಕತ್ತಿದೆ. ಪತಿದೇವನ ಯಾವುದೊ ಮಾತನ್ನು ಮನಸಿಗೆ ತಾಗಿಸಿಕೊಂಡು ನನ್ನ ಮಗು ಮೂರು ತಿಂಗಳಿರುವಾಗ ನನಗೆ ಸೈಕಲ್ ಕಲಿಯಬೇಕೆಂಬ ಹಠ ಬಂದಿತ್ತು ನೀನು ಕ್ವಿಂಟಾಲ್ ಗೆ  ಒಂದಷ್ಟು ಕಡಿಮೆ ಇದ್ದ ನನ್ನ ತೂಕವನ್ನು ಅದ್ಹೇಗೆ ಬ್ಯಾಲೆನ್ಸ್ ಮಾಡಿ ನನಗೆ ಸೈಕಲ್ ಕಲಿಸಿದ್ದೆ,
ಇವತ್ತು ನಾನಿಲ್ಲಿ ಕುಳಿತು ನಿನ್ನ ಕುರಿತು ಹೀಗೆ ಟೈಪ್ ಮಾಡುತ್ತಿದ್ದೀನಿ ಅಂದರೆ ಅದರ ಶ್ರೇಯ ನಿನಗೆ,ಕಂಪ್ಯೂಟರ್ ಚಿತ್ರದಲ್ಲಷ್ಟೇ  ನೋಡಿದ್ದ ನಂಗೆ ೯ ನೇ ಕ್ಲಾಸಿನಲ್ಲಿದ್ದ ನೀನು ಅದೆಷ್ಟು ಚಂದ ಮಾಡಿ ಕಲಿಸಿದ್ದೆ, ಅಚಾನಕ್ಕಾಗಿ ವಿದೇಶದ ದಾರಿ ಹಿಡಿದ ಇವರ ಮತ್ತು ನನ್ನ ಮೇಲ್ ಗಳ ಜಿಗಿದಾಟ ನಡೆದಿದ್ದು ನಿನ್ನಿಂದಲೇ ಅಲ್ಲವೇ??ನೀ ಸೃಷ್ಟಿಸಿ ಕೊಟ್ಟ   ಇಮೇಲ್ ವಿಳಾಸ ಎಂಬ ಸೆಂಟಿ ನನಗೆ.

ಇದೆಲ್ಲ ಬಿಡು..ಮೊನ್ನೆ ಮೊನ್ನೆ ಊರಿಗೆ ಬಂದಾಗ ಏನಾದರು ಎಂಜಾಯ್ ಮಾಡಿದ್ದೇನೆ ಎಂದಾದರೆ ಅದು ನಿನ್ನ ಮಾತುಗಳನ್ನ,ಅದೆಲ್ಲಿಂದ ಕಲಿತೆ ಇಷ್ಟು ಮಾತಾಡೋದನ್ನ??ಮಾತಾಡಿದರೆ ನಗು ಉಕ್ಕುತ್ತೆ, ಅಕ್ಕನ ಮದುವೆಯಲ್ಲಿ ಅದೆಷ್ಟು ಓಡಾಡಿದೆ ನೀನು..ಪಕ್ಕ ತಮ್ಮ  ಬಿಡು..(ನನ್ನ ಮದುವೆಯಲ್ಲಿ ನಿನಗೆ ಮದುಮಗಳ ತಮ್ಮ ಎಂಬ ಗೌರವ ಸಿಕ್ಕಿಲ್ಲ ಎಂಬ ಆಪಾದನೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿರಬೇಕಲ್ಲ??)..ನಿನ್ನ ಮತ್ತೊಂದಿಷ್ಟು ತರಲೆಗಳ ಬಗ್ಗೆ ಬರೋಯೋಣ ಅಂದು ಕೊಂಡೆ..ಬೇಡ ನಿನಗೂ ಒಂದು ಇಮೇಜಿದೆ ಕಾಲೇಜ್ ನಲ್ಲಿ ಸುಖಾ ಸುಮ್ಮನೆ ಯಾಕ ಅದನ್ನು ಹಾಳ್ ಮಾಡಲಿ???

ಮುಖ್ಯ ವಿಷಯ ಹೇಳುತ್ತೇನೆ ಕೇಳು.ಮೊನ್ನೆ ಮೊಪೆಡ್ಡಿನ ಮೇಲೆ ನಾನು ನೀನು ಹೋಗುವಾಗ ನೀನೊಂದು ಮಾತು ಹೇಳಿದಿಯಲ್ಲ,''ಅಮಿತಕ್ಕ ಇನ್ನು ೩ ವರ್ಷ  ನನ್ನ ಡಿಗ್ರಿ ಮುಗಿಯುತ್ತಲೇ ನನಗೆ ಜಾಬ್ ಸಿಕ್ಕ ಕಡೆ ಪಪ್ಪ ಅಮ್ಮ ನನ್ನು ನನ್ನೊಂದಿಗೆ ಕರೆದೊಯ್ಯುತ್ತೇನೆ ,ನೀನು ಬೇಜಾರ್ ಮಾಡಬೇಡ ಅಂತ ,ಯಾಕೋ ಕಣ್ಣು ತುಂಬಿ ಬಂತು ಮುಂದೆ ಏನೋ ಹೇಗೋ ದೇವರೇ ಬಲ್ಲ ಆ ಕ್ಷಣದ ಮಾತು ಇದೆಯಲ್ಲ ನನ್ನ ಎಷ್ಟೋ ಕಿರಿ ಕಿರಿ ,ಟೆನ್ಶನ್ ದೂರ ಮಾಡಿತ್ತು,ಅದೆಷ್ಟು ಬೇಗ ಬೆಳೆದೆ ನೀನು,,,ಅಡಿಕೆ ಮರದಂತೆ, ನಿನ್ನ ಬುದ್ದಿ ಕೂಡ..ಮನಸ್ಸು ಕೂಡ. ಸ್ವಸ್ಥ ಮನಸ್ಸು ಬುದ್ಧಿ ಹಾಗೆ ಇರಲಿ ಎಂಬುದೊಂದೇ ಆ ದೇವರಲ್ಲಿ ಪ್ರಾರ್ಥನೆ.

೧೬ ಮುಗಿಯಿತು..ಅಲ್ವೇ???ರಾತ್ರಿ ೧೨ ಕ್ಕೆ ಫೋನ್ ಮಾಡೋಣ ಅಂದುಕೊಂಡೆ.ಬೇಡ ಇದನ್ನೇ ಕಳಿಸಿದರಾಯಿತು ಅಂದು ಬರೆಯುತ್ತ ಕುಳಿತೆ..ನಿನ್ನ ಜನುಮದಿನಕ್ಕೆ ಬೇರೆನು ಗಿಫ್ಟ್ ಕೊಡಲಾಗುತ್ತಿಲ್ಲ ,ಹಾರೈಕೆಯ ಹೊರತು ,ನೆಕ್ಷ್ತ ಟೈಮ್ ಮೋಸ್ಟ್ಲಿ ನಿನ್ನ ಬರ್ತ್ ಡೇ ಗೆ ನಾನು ಅಲ್ಲಿರುತ್ತೆನೇ ಎಂಬ ಆಶಯ ನನ್ನದು..

ಹ್ಯಾಪಿ ಬರ್ತ್ ಡೇ .ಡಿಯರ್ ತಮ್ಮ ..
ನೀನು ಕಂಡ ಕನಸೆಲ್ಲ ನನಸಾಗಲಿ.
ಲವ್ ಯು 
ನಿನ್ನ 
ಅಮಿತಕ್ಕ 

Sunday, May 20, 2012

ಪಾತ್ರಾ ಪರಿಣಯ



ಜೋರ್ ನಗು ಬಂತು ಸೋದರತ್ತೆ, ಕಾರವಾರದಲ್ಲಿ ಕೆಸುವಿನೆಲೆಯನ್ನು ಮಾರುತ್ತಾರೆ ಅಂದಾಗ ,ಆಗ  ನಾನ್ ಅಂದುಕೊಂಡಿದ್ದೆ ಹಳ್ಳಿಯ ಜೀವನ ಅದೆಷ್ಟು ಸುಖ ಅದೂ ಮಲೆನಾಡ ಹಳ್ಳಿಗಳು  ಸಂತೆಗೆ ಹೋಗದಿದ್ದರೂ ೧೫ ದಿನಗಳತನಕ ರೀಪೀಟ್ ಆಗದಂತೆ ಸೊಪ್ಪು ಸದೆ, ಚಿಗುರು ದಂಟು ಏನಾದ್ರು ಒಂದು ಸಿಕ್ಕೆ ಸಿಗುತ್ತೆ..ಗೊಜ್ಜು ಹಸಿಗಳಿಗೆ ತರಕಾರಿ ಸಿಪ್ಪೆಗಳನ್ನು ಬಳಸಿದರಾಯಿತು ಅಂದಿನ ಅಡುಗೆ,ಊಟ ಮುಗಿದಂತೆ..
ನಾನೂ ಕೂಡ ಮುಂಡಗೋಡ ದಿಂದ ಕುಂದಾಪುರದ ತನಕವಷ್ಟೇ ಕನಸಿದ್ದು..ವೈದೇಹಿಯವರ ಅಡುಗೆಮನೆ ಹುಡುಗಿಯಂತೆ,!

ನನ್ನ ಬದುಕಲ್ಲಿ ಪದೇ ಪದೇ ಹೊಸ ಆರಂಭಗಳು ಅಂಥದೇ ಒಂದು ಆರಂಭ, ಮದುವೆಯ ನಂತರ ಪಶ್ಚಿಮದ ಈ ನಾಡಿಗೆ ವಲಸೆ ಬರುವದರೊಂದಿಗೆ ಮತ್ತೊಮ್ಮೆ ಮರುಕಳಿಸಿತು.ಅಡುಗೆ ಮನೇ ಅದು ನನ್ನ ಪ್ರಯೋಗಶಾಲೆ.ಇಲ್ಲಿಗೆ  ನಂತರ ನನ್ನ ಅಡುಗೆಮನೆಗೆ ತರಕಾರಿಗಳು ಅಂತ ಸಿಗುತ್ತಿದ್ದುದು ಹೂ ಕೋಸು ,ಕ್ಯಾಬೇಜು ,ಬಿಟ್ಟರೆ ಅಪರೂಪಕ್ಕೆ ಬದನೆಯಂಥ ಒಬರ್ಜಿನ್ , ಅವರಿವರು ಬೆಲ್ಫಾಸ್ಟ್ ಸಿಟಿ ಗೆ ಹೋದಾಗ ತಂದು ಕೊಡುತ್ತಿದ್ದ ಬೆಂಡೆ ಕಾಯಿ  ಇವತ್ತು ಬೇಡ ನಾಳೆ ನಾಳೆ ಬೇಡ ನಾಡಿದ್ದು ಅಂದು ಫ್ರಿಡ್ಜ್ ನಲ್ಲಿಟ್ಟು ಅರ್ಧ ಕೊಳೆಸಿ ಅರ್ಧ ಉಳಿಸಿ ಪೌಂಡುಗಳನ್ನು ರೂಪಾಯಿಗೆ ಕನ್ವರ್ಟ್ ಮಾಡಿ .ಅಯ್ಯೋ ಇಷ್ಟು ಹಣವನ್ನು ಬಿನ್ ಗೆ ಹಾಕಿದೆ ಅಂದು ಅನ್ನಪೂರ್ಣೆ ,ಮಾತೇ ಲಕ್ಶ್ಮಿ ಯರಲ್ಲಿ ಕ್ಷಮೆ ಬೇಡುತ್ತಾ ಮತ್ತೆ ಬ್ರೋಕೊಲಿ , ಬೆಲ್ ಪೆಪ್ಪರ್ ಗಳ ಮೊರೆ ಹೋಗುತ್ತಿದ್ದೆ.

ಊರ ತಿಂಡಿ ತಿನಿಸುಗಳ ಬಗ್ಗೆ ಖಯಾಲಿ ಇಲ್ಲದೇ ಹೋಗಿದ್ದರೆ ಇಲ್ಲಿನ ಬರ್ಗರ್ ಪಿಜ್ಜಾಗಳು ,ಪೀಟಾ ಬ್ರೆಡ್ಡು ಗಳು ಮನಸಿಗೆ ಹಿತ ಕೊಡುತ್ತಿದ್ದವೋ ಏನೋ..ನನ್ನದೋ ಪಂಡಿತರ ಮನೇ.ಜ್ವರ ಬಂದರೂ ಅಡುಗೆಯಲ್ಲೇ ಔಷದಿ ಕೊಟ್ಟು ಗುಣಮಾಡುವ ವಾತವರಣದಲ್ಲಿ ಬೆಳೆದ ನಾನು ನಮ್ಮೂರ ತರಕಾರಿಗಳಿಲ್ಲದೆ ಇಲ್ಲಿಯ ತರಕಾರಿಗಳಲ್ಲಿ ಅಲ್ಲಿನ ಅಡುಗೆ ಮಾಡಿ ಆ ರುಚಿ ಕಾಣಲು ತಹ ತಹಿಸಿದೆ..ಈ ಅಡುಗೆಮನೆ ನಂಟು ಒಮ್ಮೆ ಬೆಸೆಯಿತು ಅಂದ್ರೆ ಮುಗೀತು ಏನು ಇಲ್ಲ ಅಂತ ಗೊತ್ತಿದ್ದರು ಪದೇ ಪದೇ  ಫೇಸ್ ಬುಕ್ ಚೆಕ್ ಮಾಡಿದಂತೆ ,ಗುಡ್ ನೈಟ್  ಹೇಳಿದಮೇಲು ಮತ್ತೊಂದು ಎಸ್ಸೆಮ್ಮೆಸ್ಸು ಕಳಿಸಿದಂತೆ,ಯಾಕೋ ಸಮಾಧಾನ ಆಗಲ್ಲ..ಮತ್ತೇನಾದ್ರು ಹೊಸದು ,ಹಾಗಂತ ಮನಸು ಕೇಳುತ್ತಲೇ ಇರುತ್ತೆ.

ನಮ್ಮ ನೀಲ ಸುಂದರಿ(ನಮ್ಮ ಕಾರು ) ಬಂದಾಗಿನಿಂದ ನನ್ನ್ನ ಈ ರಗಳೆಗೆ ಅಲ್ಪವಿರಾಮ  ಸಿಕ್ಕಿದೆ ನನಗೆ ಶನಿವಾರ ಭಾನುವಾರಗಳಂದು ವರ್ಕ್ ಶಾಪ್ ,ಪ್ರೊಗ್ರಾಮ್ ಗಳು ಇರುತ್ತವೆ ಅದೇ ಕಾರಣಕ್ಕೆ ನಾವು ಬೆಲ್ಫಾಸ್ಟ್* ಗೆ ಪ್ರತಿವಾರ ಹೋಗುತ್ತೇವೆ ,ಹಾಗೊಂದು ದಿನ  ಒಮ್ಮೆ ಎಷಿಯನ್ ಫ್ಲೇವರ್ಸ್ ಗೆ ಹೋಗಿ ಬರೋಣ ಎಂದು ಪೋಸ್ಟ್ ಕೊಡ  ಹುಡುಕಿ  ಹೋದದ್ದಾಯಿತು , ಅಲ್ಲಿ ಪೂರ್ತಿ ಊರೇ ಇದೆ ಸುವರ್ಣ ಗಡ್ಡೆ ,ಅವರೆಕಾಯಿ ಮೂಲಂಗಿ,ತೊಂಡೆಕಾಯಿ ಅಯ್ಯೋ ಅಲ್ಲಿ ನೋಡಿ!! ಇದು ನೋಡಿ!! ಅನ್ನೋ ನನ್ನ ಸುಪರ್ ಉತ್ಸಾಹಕ್ಕೆ ಮನೆಯವರ ತಣ್ಣಗಿನ ನಗುವಷ್ಟೇ ಉತ್ತರ.ಸರಿ ಸುಮಾರು ೧ ವರ್ಷದ ನಂತರ  ಭಾರತದ ಅದು ಉರಾಲ್ಲಿ ಸಿಗುವ ತರಕಾರಿ ರಾಶಿ ಕಂಡು,ಪುಟ್ಟ ಹುಡುಗಿ ಚಾಕಲೇಟ್ ರಾಹಿ ನೋಡಿದ ಹಾಗೆ ಆಡುತ್ತಿದ್ದೆ...ಮಧ್ಯದಲ್ಲಿ   ಅಲ್ಲೇನೋ ಹಸಿರು ಬಣ್ಣದ ಕಟ್ಟು ಅದೇನು ಎಂದು ನೋಡುತ್ತಲೇ... ಅಯ್ಯೋ ಕೆಸುವಿನೆಲೆ...ಈಗೇನು ನಿನ್ನ ಮಾತು ಕಡಿಮೆನ ???ಕೆಸುವಿನೆಲೆ ಯಾಕೆ ಮಾರೈತಿ????ಅನ್ನೋ ಇವರ ಮಾತು ಕೇಳಿಸಿದರು ಕೇಳದಂತೆ..ಅದರ ಬೆಲೆ ಕೂಡ ನೋಡದೆ ತಗೊಂಡು ಬಂದೆ..ಕೆಸುವಿನೆಲೆ ಸಿಕ್ಕ ಖುಷಿ ಒಂದುಬದಿಯಾದರೆ ಅದರ ಪತ್ರೋಡೆಯನ್ನು,ಮಾಡಿ ಯಾರನ್ನ ಕರಿಬೇಕು ಅನ್ನೋ ಮಹದಾಲೋಚನೆ ಕೂಡ ತಲೆಯಲ್ಲಿ ,ಮತ್ತೆ  ನಾನೆಂದು ಮಾಡಿರದ ಮಾಡಲಾರೆ ಅಂದುಕೊಂಡ ''ಹಣ ಕೊಟ್ಟು ತಗೊಂಡ್ ಬಂದ ಕೆಸುವಿನೆಲೆ ಯ ಪತ್ರೊಡೆ.

ಲೆಕ್ಕಮಾಡಿ ೨೫ ಎಲೆಗಳು ,ಅದರಲ್ಲೂ ಇಲ್ಲದ ಆಸೆ ನನಗೆ  ಒಂದು ಗೊಜ್ಜು ,ಸ್ವಲ್ಪ ಅಳವತಿ ಮಾಡಿದರೆ ಹೀಗೆ ಅನ್ನೋ ಯೋಚನೆ..ಪತ್ರೊಡೆ ಮಾಡಲು ಸ್ವಲ್ಪ ಪೂರ್ವತಯಾರಿ ಬೇಕೇ ಬೇಕು ಅಕ್ಕಿ +ತೊಗರಿಬೇಳೆ ನೆನೆ ಹಾಕಬೇಕು ,ಮೆಣಸು ಕೊತ್ತಂಬರಿ ಇಂಗು ಹುರಿಯಬೇಕು ಕೊಬ್ಬರಿ ಮಸಾಲೆ ..ಇದು ಆಗಲು ಇನ್ನೊಂದು ದಿನ ಅದ್ರು ನಾನೂ ಕಾಯಲೇಬೇಕು..ಎದುರಿಗೆ ಎಲೆ ನೋಡಿ ನಾನು ಕಾಯೋದು ಅಂದ್ರೆ ..ಇಲ್ಲ ಅದೆಲ್ಲ ಆಗಲ್ಲ..ಪತ್ರೊಡೆ ಅಲ್ಲದಿದ್ದರೆ ಅದರ ತಂಗಿ ಪಾತ್ರ !!

ಪಾತ್ರ ಕೆಸುವಿನೆಲೆಯಿಂದ ಮಾಡುವ ಪದಾರ್ಥ ,ಪತ್ರೋಡೆಯದೆ ರೂಪ, ಅಂತರಂಗ ಮಾತ್ರ ಬೇರೆ, ಅಕ್ಕಿ, ಬೇಳೆ, ಮೆಣಸಿನ ಮಸಾಲೆ ಬದಲು ಕಡಲೆ ಹಿಟ್ಟು +ಬೆಳ್ಳುಳ್ಳಿ+ಶುಂಟಿ+ಕೊತ್ತಂಬರಿ ಸೊಪ್ಪು+ಮೆಣಸಿನ ಪುಡಿ +ಜೀರಿಗೆ +ಹುಳಿರಸ ಹಾಕಿ ಮಾಡುವ ಸರಳ ಅಡುಗೆ..ಮೂಲತ ಇದು ಗುಜರಾತಿಗಳ ಪಾಕವಿಧಾನ,ಅದಕ್ಕೆ ಮತ್ತಷ್ಟು ಸಾಮಗ್ರಿ ಗಳನ್ನು ಸೇರಿಸಿ ನಮ್ಮ ಕ್ರಿಯಾಶೀಲತೆಯ ಪ್ರದರ್ಶನಕ್ಕೂ ಅವಕಾಶ ಇರುವ ಅಡುಗೆ ಇದು.
ಆಲೋಚನೆ ಬಂದ ಮೇಲೆ ನನ್ನ ಮತ್ತು ಕೆಸುವಿನೆಲೆ ಮಧ್ಯ ಯಾರು ಬರಲಿಲ್ಲ..

ಕಡಲೆಹಿಟ್ಟಿನ ಮಸಾಲೆ ತಯಾರಾಯಿತು ,೧೫ ಎಲೆಗಳನ್ನು ಹಾಕಿ ಪಾತ್ರಾ ಸುತ್ತಿದ್ದು ಆಯಿತು ,ಅದನ್ನು ಚಂದ ಮಾಡಿ ಎತ್ತಿ ಬೇಯಿಸಲು ಹಾಕಿದ್ದು ಆಯಿತು.ಏನೋ ಒಂಥರಾ ಖುಷಿ.ಮಳೆಗಾಲದಲ್ಲಿ ಮೊದಲ ಬಾರಿ ಕಳಲೆ ತಿನ್ನುವ ಸಡಗರ,ಎಲ್ಳುರಿಗೆ  ಸೊಪ್ಪಿನ ತಂಬಳಿ,ಅಣಬೆ ಅದನ್ನೇಗೆ ಮರೆಯಲಿ..ಇವನ್ನೆಲ್ಲ ಪ್ರತಿವರ್ಷ ಸವಿದರೂ ಮತ್ತೊಂದು ವರ್ಷ ಮೊದಲು ಸವಿಯುವಾಗ ಅದೇನೋ ಖುಷಿ..ಅಪ್ಪೆ ಮಿಡಿ ಉಪ್ಪಿನಕಾಯಿಯಂತೆ, ಅಜ್ಜಿಮನೆ ಹಿತ್ತಲಿನ ಮಲಗೊವ ಮಾವಿನಂತೆ,,

ಓಹ್ ..ನನ್ನ ಪತ್ರಾ ಉಗಿಯಲ್ಲಿ ಬೆಂದು ಸಿದ್ಧವಾಗಿತ್ತು ,ಸ್ವಲ್ಪ ತಣಿದ ಮೇಲೆ ಗೊಲಕಾರಕ್ಕೆ ಕತ್ತರಿಸಿ ಬಿಳಿ ಎಳ್ಳು ಸಿಂಪಡಿಸಿ ಗರಿ ಗರಿ ಮಾಡಿ ಎಣ್ಣೆಯಲ್ಲಿ  ಕರಿದಿದ್ದು ಆಯ್ತು..ಅದೇ ಸಮಯಕ್ಕೆ ನನ್ನ ಗೆಳತಿ ಸುರ್ಯಪ್ರಭ ಹಾಜರಿ ಇತ್ತಳು, ಅಕೆನೆ ಪಾತ್ರಾ ದ ರುಚಿ ಮೊದಲು  ನೋಡಿ  ಆಹಾ ಅಂದಿದ್ದು..ನನಗೆ ಅದೇನೋ ಸಮಾಧಾನ.''ಅಮಿತಾ ನೀವು ನಿಸರ್ಗದೊಂದಿಗೆ ಅದೆಷ್ಟು ಹೊಂದಿಕೊಂಡಿದ್ದೀರಿ ಯಾವ ಸೊಪ್ಪು ,ಸಿಪ್ಪೆ ಚಿಗುರು ಅದನ್ನೆಲ್ಲ ಅಡುಗೆ ಮಾಡುವ ಆರ್ಟ್ ಅದೆಷ್ಟು ಚಂದ .ಅದಕ್ಕೆ ನಿಮಗೇ ದೇವರು ಇಷ್ಟು ಸಂವೇದನೆ ,ಸೂಕ್ಸ್ಮತೆ ಕೊಟ್ಟಿದಾನೆ.''ಅಂತೆಲ್ಲ ಆಕೆ ಮಾತಾಡುತ್ತಲೇ ಇದ್ದಳು,ಮನಸು ಮಲೆನಾಡು ,ಕರಾವಳಿ ಬಯಲುಸೀಮೆ ಯ ಹದವಾದ ಮಿಶ್ರಣದ ನನ್ನ ನಾಡನ್ನು ನೆನೆಸಿಕೊಂಡಿತ್ತು , ಕಣ್ಣು ಉಳಿದ ೧೦ ಕೆಸುವಿನೆಲೆಯ ಕರ್ಕಲಿ 
ಮಾಡುವ ಕನಸು ಕಾಣುತಿತ್ತು

Friday, February 3, 2012

ಆಡುತ ಹಾಡುತ ಬೆಳವಣಿಗೆ -ರೈಮ್ ಟೈಮ್

 
ನಿಮಗ ಬಾಲವಾಡಿ ಹಾಡುಗಳು ನೆನಪಿವೆಯೇ???  ಇ ಪ್ರಶ್ನೆಗೆ ಇಲ್ಲ ಅಂತ ಉತ್ತರ ಬರೋದಿಲ್ಲ ಎಂಬ ಪೂರ್ಣ ಭರವಸೆ ಇದೆ.ಯಾಕೆಂದರೆ ಆ ಹಾಡುಗಳಿಗೆ ಅಂತಹ ಒಂದು ಅಪೂರ್ವ ಶಕ್ತಿ ಇದೆ.ಜೀವದಷ್ಟು ಪ್ರೀತಿಸಿದ  ಕವಿಯ ಹಾಡುಗಳು ಕಾಲಕ್ರಮೇಣ ಮರೆತು ಹೋಗಬಹುದು..ಭಾಳ ಇಷ್ಟಾ ಆದ ಸಿನಿಮಾ ಹಾಡು ನೆನಪ ತಕ್ಕೆಯಿದ ಜಾರಿ ಹೋಗಿರಲು ಬಹುದು.ಆದರೆ ಈ ಬಾಲವಾಡಿ ಹಾಡುಗಳು ಹಾಗಲ್ಲ.ಎಷ್ಟು ವರ್ಷದ ನಂತರ ನಿದ್ದೆಯಲ್ಲಿ ಎಬ್ಬಿಸಿ ಕೇಳಿದರು ಪಟ ಪಟ ನೇ ತುಟಿಯಾಚೆ ಪರೇಡು ಹೊರಡುತ್ತವೆ,ಏಕೆಂದರೆ ನಾವು ಅಚ್ಚರಿಯಿಂದ ನೋಡುವ ಈ ಬಣ್ಣದ ಜಗತ್ತಿಗೆ ಮತ್ತು ನಮ್ಮ ಮನಸಿಗೆ ಒಂದು ಸುಗಮ ,ಕಲ್ಪನಾಶೀಲ ,ಸುಂದರ  ದಾರಿಯನ್ನು ಈ ಪುಟಾಣಿ ಪದ್ಯಗಳು ನಿರ್ಮಿಸುತ್ತವೆ.

ಉದಾಹರಣೆಗೆ ;-ಚುಕು ಬುಕು ಚುಕುಬುಕು ಉಗಿಯ ಬಂಡಿ
ಹೊಗೆಯ ತೆರೆಗಳು ಮೇಲೆ ಹೋಗಿ
 ಓಡುವ ಗಿಡಗಳ ನೋಡೋಣ` ಮಾವನ ಊರಿಗೆ ಹೋಗೋಣ ........

ಇಲ್ಲಿ ಮಗು ವಿನ ಮನಸು ಉಗಿಬಂಡಿ-ಅದೂ ಮಾಡುವ ಶಬ್ದ -ಅದೂ ಉಗುಳುವ ಹೊಗೆ -ಕಿಟಕಿಯಿಂದ ನೋಡಿದರೆ ಓಡುವ ಗಿಡ ಹೀಗೆ ಎಷ್ಟೊಂದು ಘಟನೆಯನ್ನು ತನ್ನ ಕಲ್ಪನೆಯಲ್ಲಿ ತಂದು ಕೊಳ್ಳುತ್ತದೆ ಮತ್ತು ಅದು ಮಗುವಿನ ಹಸಿ ಗೋಡೆಯಂತ ಮನಸಿನಲ್ಲಿ ಅಚ್ಚಾಗಿ ಉಳಿಯುತ್ತದೆ.
ಅದಕ್ಕೆ  ಏನು ಮರೆತರು ಈ ಹಾಡುಗಳು ನಮ್ಮ ಸ್ಮೃತಿಯಿಂದ ಅದಷ್ಟು ಸುಲಭವಾಗಿ ಮಾಸಲಾರವು.
ಆದ ಕಾರಣ ಮಕ್ಕಳ  ಕಲಿಕೆಯ ಆರಂಭಿಕ  ಹಂತದಲ್ಲಿ ಈ ಪುಟ್ಟ ಪುಟ್ಟ ಸರಳ ಧಾಟಿಯ ಪದ್ಯಗಳು ಕಲಿಕೆಯ ಬಹುಮುಖ್ಯ ಮಾಧ್ಯಮವಾಗಿ ಪರಿಣಮಿಸುತ್ತವೆ.

೫೦ ವರ್ಷ ಗಳ ಹಿಂದೆ ಕಲಿತ ಈ ಹಾಡುಗಳು ಈಗಲೂ ಅಷ್ಟೇ ಉಮೇದಿನಿಂದ ಹಾಡುವವರಿದ್ದಾರೆ ,ಸಮಸ್ಯೆ ಎಂದರೆ ಈಗಿನ ಮಕ್ಕಳಿಗೆ ಹಿಂದಿನ ತರಗತಿಯಲ್ಲಿ ಕಲಿತ ಪದ್ಯಗಳು ನೆನಪಿರುವುದಿಲ್ಲ.ಇದಕ್ಕೆ ಪುಷ್ಟಿಯಾಗಿ  ನ್ಯೂಯಾರ್ಕ್ ನ ಮುನ್ದೋ ಪಬ್ಲಿಕೇಶನ್ ನ  ಟೋನಿ ಸ್ಟೀಡ್ ಅವರು ಮಾಡಿದ ಸಂಶೋಧನೆಯ ಪ್ರಕಾರ ೧೯೪೫ ರ ಹೊತ್ತಿಗೆ ಪ್ರಾಥಮಿಕ ಶಾಲೆಯ ಮಕ್ಕಳ ಶಬ್ದ ಸಂಪತ್ತು ಸುಮಾರು ೧೦,೦೦೦  ಮತ್ತು ಈಗಿನ ಮಕ್ಕಳ  ಶಭ್ಧ ಕೋಶದಲ್ಲಿರುವುದು ಸರಿ ಸುಮಾರು ೨,೫೦೦ ಪದಗಳು.ಈ ಅನಾರೋಗ್ಯಕರ ಬೆಳವಣಿಗೆಗೆ ಟೋನಿ  ಕೊಡುವ ಮುಖ್ಯ ಕಾರಣ ಪಾಲಕರು ಮಕ್ಕಳೊಂದಿಗೆ ಮಾತಾಡುತ್ತಿಲ್ಲ ಮತ್ತು ಮಕ್ಕಳ ಮನಸ್ಸನು ಓದುವ ತಾಳ್ಮೆ ತೋರುತ್ತಿಲ್ಲ .ಮತ್ತು ಅವರಿಗೆ ರೈಮ್  ಗಳ ಪರಿಚಯ ಸರಿಯಾಗಿ ಮಾಡಿಕೊಡುತ್ತಿಲ್ಲ.ಎಂಬುದು
ಹಿಂದೆ ಕೂಡು ಕುಟುಂಬದಲ್ಲಿ ಪುಟ್ಟ ಮಕ್ಕಳು ಅಜ್ಜಿ ತಾತನೊಂದಿಗೆ ಬೆಳೆಯುತ್ತಿದ್ದವಾದ್ದರಿಂದ..ತಮ್ಮ ಬೆರಳುಗಳ ಚಲನೆಯಿಂದ ಶುರುಮಾಡಿ ನಡಿಗೆ, ಮಾತು ,ಆಟ, ಊಟ ಎಲ್ಲದಕ್ಕೂ ಅವರಿಗೊಂದು ಪದ್ಯ ,ಮತ್ತು ಹಿತವಾದ ಮಾತು ಆಧಾರ ವಾಗುತಿತ್ತು. ಮತ್ತು ಮಕ್ಕಳು ಹಿರಿಯರಿಂದ ಕೇಳಿದ ಪದ್ಯದ ಶಬ್ಧಗಳಿಗೂ ತಾವು ನೋಡುತ್ತಿರುವ ದೃಶ್ಯಕ್ಕೂ ತಾಳೆ ಹಾಕುತ್ತಿದ್ದವು.

ಒಂದು ಪಕ್ಷ ಪದ್ಯದಲ್ಲಿರುವ ವಸ್ತುಗಳು ಮಕ್ಕಳ  ಎದುರಿಗೆ ಇಲ್ಲವಾದಲ್ಲಿ ಅವುಗಳ ಕಲ್ಪನೆ ಮಾಡಿ ದೃಶ್ಯ ಚಿತ್ರಣವನ್ನು ತಮ್ಮ ಮನದ ಕೆನ್ವಾಸ್  ಮೇಲೆ ಬಿಡಿಸಿದುತ್ತಿದ್ದವು,ದಿನ ಕಳೆದಂತೆ ಹಾಡುಗಳು ಕಡಿಮೆ ಆದವು ಮಾತುಗಳು ನಿಂತು ಹೋದವು ಟೀವಿ ಎಂಬುದು ತಿಂಡಿ ಊಟ  ಮತ್ತು ನಿದ್ದೆಯನ್ನು ಆಳ ತೊಡಗಿತು .ಈಗ ಮಕ್ಕಳು ಯೋಚಿಸುತ್ತವೇನೋ ನಿಜ ಆದರೆ ಕಾರ್ಟೂನ್ ತೋರಿಸಿದ್ದನ್ನು.ಹಾಗೆಂದು ಕಾರ್ಟೂನ್ ಗಳು ಮಕ್ಕಳ ಸೃಜನಶೀಲತೆ ಹಾಳು ಮಾಡುತ್ತಿವೆ ಎಂಬರ್ಥವಲ್ಲ .ಆದರೆ ಎಲ್ಲೋ ಒಂದು ಕಡೆ ಅವರ ಬೆಳವಣಿಗೆ ಕುಂಟಿತ ಕೊಳ್ಳುತ್ತಿದೆ. ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಾವು ಪಾಲಕರೇ ಕಾರಣವಾಗುತ್ತಿದ್ದೇವೆ, ವೃತ್ತಿ ಮತ್ತು ಕುಟುಂಬದ ಸ್ವಾಸ್ಥದ ನಡುವೆ ಸಮಾನತೆ ಹಿಡಿತ ಸಾಧಿಸುವಲ್ಲಿ ಅದೆಷ್ಟು ಬ್ಯುಸಿ ಆಗಿಬಿಡುತ್ತೇವೆ .ಮತ್ತು ಗೊತ್ತಿಲ್ಲದೇ ಮಗುವಿನ ಭವಿಷ್ಯದ ಅಡಿಗಲ್ಲಗಬೇಕಾಗಿರುವ ಸಮಯವನ್ನು ನಿರ್ಲಕ್ಷಿಸಿ ,ಅವರ ಭವಿತವ್ಯದ ಬೃಹತ್ ಬಂಗಲೆಯ ಕಾಮಗಾರಿ ಶುರುಮಾಡಿ ಬಿಡುತ್ತೇವೆ.ಈ ಪುಟ್ಟ ತಪ್ಪು ಮಗುವಿನ ಸಂಪೂರ್ಣ ಬದುಕಿನ ಸ್ವಸ್ಥ ಕೆಡಿಸುತ್ತದೆ,ಎಂಬುದು ತಜ್ಞರ ಅಂಬೋಣ.

ಮಗುವಿನ ಮೊದಲ ಕೆಲವು ವರ್ಷಗಳು ನಮ್ಮ ಮಾತನ್ನು ಅವುಗಳು ಆಲಿಸುವಂತೆ ,ಪ್ರೇರೇಪಿಸಬೇಕು,ಇಲ್ಲಿ  ಮಾತಿಗಿಂತ ಮುಖ್ಯವಾದುದ್ದು ಅವೆ ಬಾಲ ಗೀತೆಗಳು. ಮಕ್ಕಳು ಅನುಭವಿಸಿ ಕುಣಿಯುವ  ರೈಮ್  ಎಂಬ ಪುಟ್ಟ ಹಾಡು ಅದೆಷ್ಟು ಪ್ರಯೋಜನಕಾರಿ  ಎಂಬುದನ್ನ ಈ ಕೆಳಗಿನ ಅಂಶಗಳಿಂದ ಮನಗಾಣ ಬಹುದು.

  •   ಬಾಲವಾಡಿ ಹಾಡುಗಳು ಮಗುವನ್ನು ಮಾತನಾಡಲು ಪ್ರೇರೇಪಿಸುತ್ತವೆ.

  •   ಧ್ವನಿಯ ಹಿತವಾದ ಬಳಕೆ ಮತ್ತು ಅದರ ಅಂದವನ್ನು  ಗ್ರಹಿಸುವಲ್ಲಿ ಮಗುವಿಗೆ  ಸಹಕರಿಸುತ್ತವೆ.
ಮಕ್ಕಳ ಉಚ್ಚಾರ ಸ್ಪಷ್ಟತೆಗೆ ಸಹಾಯಕ ,


  • ಕಲಿತ ಹೊಸ ಹಾಡನ್ನು ಮನೇ ಮಂದಿ ,ಸ್ನೇಹಿತರು , ಬಂಧುಗಳ ಮುಂದೆ ಹಾಡುವ ರೂಡಿಯಿಂದ ಮಕ್ಕಳು ಸಭಾ ಕಂಪನ ,ಭಯ,ಗಳಿಗೆ ಒಳಗಾಗುವುದಿಲ್ಲ ಅವರಲ್ಲಿ ಆತ್ಮವಿಶ್ವಾಸ ಹೆಚುತ್ತದೆ.
  • ಹಿಂದಿನ ಕಾಲದಲ್ಲಿ ಧಾರ್ಮಿಕ ,ಸಾಮಾಜಿಕ ಮೌಲ್ಯಗಳನ್ನು ಮತ್ತು ನಮ್ಮ ಆಚರಣೆಗಳನ್ನು ಮಗುವಿನ ಮನಸ್ಸಲ್ಲಿ ಬಿಂಬಿಸಲು ಹಿರಿಯರು ಈ ಹಾಡಿನ ಸಹಾಯ ಪಡೆಯುತ್ತಿದ್ದರು ,

ಉದಾ ;-ಗಣೇಶ ಬಂದ ಕಾಯಿ ಕಡಬು ತಿಂದ
            ಹೊಟ್ಟಿ ಮ್ಯಾಲೆ ಗಂಧ
            ಬಾವ್ಯಾಗ ಬಿದ್ದ  ಮುಳುಗಿ ಮುಳುಗಿ ಎದ್ದ ,ಈ ಹಾಡಿನಲ್ಲಿ ಗಣೇಶ ಚತುರ್ಥಿಯ ಸಂಪೂರ್ಣ ಕಥೆಯೇ ಇದೆ.ಇದಲ್ಲದೆ ಇಂಗ್ಲೀಷ್ ರೈಮ್ ಗಳಲ್ಲಿ ಕ್ರಿಸ್ಮಸ್ ,ಸಂತಾ,ಸ್ನೌ ಮನ್ ,ಹಲೋವಿನ್ ಗೆ ಸಂಬಂಧಿಸಿದ ಹಲವು ಗೀತೆಗಳಿವೆ.
  • ಮಕ್ಕಳ ಜ್ಞಾಪಕ ಶಕ್ತಿ ವೃದ್ಹಿಸುತ್ತದೆ.
  • ಸರಳ ವಾಖ್ಯಾ ಗಳು .ಮತ್ತು ವಾಕ್ಯವನ್ನು ರಚಿಸುವ ವಿಧಾನ ಈ  ಹಾಡುಗಳು ಮಕ್ಕಳಿಗೆ ಹೇಳಿಕೊಡುತ್ತವೆ
  • ಮಗುವಿನ ಶಭ್ದ ಸಂಪತ್ತು ಬೆಳೆಯುತ್ತದೆ.
  • ಮಗುವು ವಿವಿಧ ಧ್ವನಿಗಳನ್ನು ಗ್ರಹಿಸಿ,ಗುರುತಿಸಲು ಕಲಿಯುತ್ತದೆ.
  • ಈ ಸರಳ ಹಾಡುಗಳಲ್ಲೂ ಹಲವು ಟಂಗ್ ಟ್ವಿಸ್ಟೆರ್ ಗಳಿರುವುದರಿಂದ ಮಗುವಿನ ಮುಖ ಮತ್ತು ಗಂಟಲು ,ಬಾಯಿಗೆ ಅಗತ್ಯವಿರುವ ವ್ಯಾಯಾಮ  ಲಭಿಸುತ್ತದೆ 
  • ಅಭಿನಯ ಗೀತೆಗಳಲ್ಲಿ ಮಗುವಿನ ನಟನಾ ಸಮರ್ಥ ಅದರ ಅಭಿನಯ ಕೌಶಲ ಗಳನ್ನು ಗುರುತಿಸಿ ಅದರ ಆಸಕ್ತಿಯನ್ನು ಗುರುತಿಸಲು ಸುಲಭವಾಗುತ್ತದೆ.
  • ಈ ಗೀತೆಗಳು ಮಕ್ಕಳಲ್ಲಿ ಹಾಸ್ಯ  ಪ್ರಜ್ಞೆಯನ್ನು ಬೆಳೆಸುತ್ತವೆ.
  • ಹಾಡುವಾಗ ಪಾಲಕರೊಂದಿಗೆ ತಟ್ಟುವ ಚಪ್ಪಾಳೆ, ಅಪ್ಪುಗೆ ,ಮುದ್ದು ಮಗುವನ್ನು ಹೊಸದನ್ನು ಕಲಿಯಲು ,ಹುಮ್ಮಸ್ಸು ಕೊಡುತ್ತದೆ.
  • ಖುಷಿ, ದುಃಖ ,ಸಹಾಯ ದಯೆ,ಕರುಣೆ ಮಮತೆ ಗಳಂತ ಹಲವು ಭಾವನೆ ಗಳನ್ನು ರೈಮ್  ಗಳು ಹುಟ್ಟು ಹಾಕುತ್ತವೆ,ಅವು ಅನುಭವಿಸಿದ್ದನ್ನು ಶಬ್ದ ರೂಪದಲ್ಲಿ ವಿವರಿಸಲು ಕಲಿಯುತ್ತವೆ.

ಮಗು ೮ ವರ್ಷಗಳ ತನಕ ತನ್ನ ಸುತ್ತಮುತ್ತಲಿನ ಎಲ್ಲಾ ಕಲಿಯ ಬಲ್ಲ ವಿಷಯವನ್ನು ಸ್ಪಂಜಿನಂತೆ ಹೀರಿ ಕೊಳ್ಳುತ್ತದೆ ನಂತರದಲ್ಲಿ ಕಲಿತಿದ್ದನು  ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಲು ನೋಡುತ್ತವೆ.ಆ ಕಾರಣದಿಂದಲೇ ಮಗುವಿನ ಈ ಮೊದಲ ೮ ವರ್ಷಗಳನ್ನು ಗಂಟು ಕಾದಂತೆ ಕಾದು 
ಅದಕ್ಕೆ ಸುಭದ್ರ ಬುನಾದಿ ಹಾಕುವ ಜವಾಬ್ದಾರಿ ನಮ್ಮ ಮೇಲಿದೆ .

ಅಂತ ಜವಾಬ್ದಾರಿಯುತ ಕೆಲಸದಲ್ಲಿ ಪುಟ್ಟ ಪುಟ್ಟ ಪದ್ಯ ಗಳು ನಮ್ಮ ಅರ್ಧ ಕೆಲಸವನ್ನು ಸುಲಭ ಗೊಳಿಸುವುದೇ ಒಂದು ಅಚ್ಚರಿಯ ವಿಷಯ.
ಆ ಕಾರಣದಿಂದಲೇ ಪಶ್ಚಿಮದ ದೇಶಗಳಲ್ಲಿ ಹುಟ್ಟಿದ ೩ ವಾರದ ಮಗುವಿನಿಂದ ಹಿಡಿದು ಅವು ಒಂದನೇ ತರಗತಿಗೆ ಹೊಗುವ ತನಕ ರೈಮ್  ಟೈಮ್ ಎಂಬ ವಿಶೇಷ  ತರಗತಿಗಳನ್ನು ನಡೆಸಲಾಗುತ್ತದೆ. ನಮ್ಮ ನಾಡಿನಲ್ಲಿ ತರಗತಿಯ ಅಗತ್ಯವಿಲ್ಲವೇನೋ.ನಮ್ಮ ಅಮ್ಮ,ಅಜ್ಜಿ ಹೇಳಿಕೊಟ್ಟ ಹಾಡುಗಳನ್ನು ಅವರ ಮುಂದೆ ಹೇಳುತ್ತಾ ಹೋದರು ಸಾಕು.






ನಾವು ಮಾಡಬೇಕಾದ್ದೇನು ??
  • ಮಗುವಿನೊಂದಿಗೆ ಮಾತಾಡಿ. ಮತ್ತು ಪುಟ್ಟ ಪುಟ್ಟ ಹಾಡುಗಳನ್ನು ಕೇಳಿಸುವ ಅಭ್ಯಾಸ ಮಾಡಿಕೊಳ್ಳಿ,
  • ನಿಮ್ಮ ಆಡುನುಡಿಯೊಂದಿಗೆ,ಮಗು ಬೆಳೆಯುವ ಪರಿಸರದಲ್ಲಿ ಬಳಕೆಯಾಗುವ ಭಾಷೆಯ ಶಿಸು ಗೀತೆಗಳು ನಿಮ್ಮ ಸಂಗ್ರಹದಲ್ಲಿ ಸೇರಿರಲಿ.
  • ಎಣಿಕೆ,ಅಕ್ಷರಗಳನ್ನು ಆದಷ್ಟು ಹಾಡಿನೊಂದಿಗೆ ಪರಿಚಯಿಸಲು ಯತ್ನಿಸಿ.(ಉದಾಹರಣೆಗೆ ಕನ್ನಡದ ೧ ..೨....ಬಾಳೆ ಎಲೆ ಹರಡು ..೩..೪...ಅನ್ನ ಹಾಕು. ಇಂಗ್ಲೀಷ್  ನಾ ೧,,೨ ೩,,೪..೫..then i cought  a fish  alive..ಎಂಬಂತ ಎಣಿಕೆ ಹಾಡುಗಳು .)
  • ಕೇವಲ ಹಾಡುವುದಷ್ಟೇ ಅಲ್ಲ ,ಹಾಡಿನ ಸಾಹಿತ್ಯಕ್ಕನುಗುಣವಾಗಿ ಧ್ವನಿಯನ್ನು  ಬದಲಾಯಿಸಿ ,ಉದಾಹರಣೆಗೆ ,ಪ್ರಾಣಿ ಪಕ್ಷಿಗಳ ಪದ್ಯಗಲಿದ್ದರೆ ಅವುಗಳ ಧ್ವನಿಯನ್ನು ಅನುಕರಿಸಿ ಇದು ಮಗುವಿಗೆ ಮನರಂಜನೆ ನೀಡುತ್ತದೆ.
  • ಇಗ ಮೊದಲಿನಂತೆ ಹಾಡುಗಳನ್ನು ಬರೆದಿಡಬೇಕು ಬಾಯಿಪಾಠ ಮಾಡಬೇಕು ಎಂಬ ಅಗತ್ಯವಿಲ್ಲ.ನಿಮ್ಮ ಸಂಭಂಧಿಗಳಲ್ಲಿ,ಮನೆಯ ಹಿರಿಯರಲ್ಲಿ ಯಾರಿಗಾದರೂ ಇಂತಹ ಪದ್ಯಗಳು ಬಂದ್ರೆ ನಿಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡರು ಆದೀತು.
  • ಮಗುವನ್ನು ಮಲಗಿಸೋ ಮುಂಚೆ ಈ ಹಾಡುಗಳನ್ನು ಒಮ್ಮೆ ಹಾಡಿದರು ಸಾಕು,ಮತ್ತು ಇದು ದಿನದ ರೂಡಿಯಾಗಲಿ.
  • ಮಗು ತಾನು ಕೇಳಿದ್ದ\ನ್ನು ಕೆಲವೊಮ್ಮೆ ಬರೆಯಲು ಚಿತ್ರಿಸಲು ಯತ್ನಿಸುತ್ತದೆ.ಅದರ ಪ್ರಯತ್ನದಲ್ಲಿ ಎಂದು ನೀವು ಹಸ್ತಕ್ಷೇಪ ಮಾಡಬೇಡಿ.ಅದೂ ಬರೆದಿದ್ದನ್ನು ಶ್ಲಾಘಿಸಿ  ಮುದ್ದಿಸುವುದಷ್ಟೇ ಕೆಲಸ.
  • ದಿನ ಕಥೆ ಹೇಳುವ ರೂಡಿ ಇದ್ದರೆ ಕೆಲವೊಮ್ಮೆ ಮಗುವನ್ನು ಕಥೆ ಹೇಳಲು ಪ್ರೇರೇಪಿಸಿ.ಮತ್ತು ರೈಮ್ ಗಳನ್ನು ನೀನೆ ನನಗೆ ಹೇಳಿಕೊಡು ಎಂಬಂತೆ ಒತ್ತಾಯಿಸಿ.
ಇಂತಹ ಕೆಲವು ಪುಟ್ಟ ಪುಟ್ಟ ರೂಡಿಯಿಂದ ಮಗುವಿಗೆ ಕೇಳುವಿಕೆ ,ಆಲಿಸುವಿಕೆ ,ಅಭ್ಯಾಸವಾಗುತ್ತದೆ,ಅವು ನಿಮ್ಮ ಮಾತಿಗೆ ಕಿವಿ ಯಾಗುತ್ತವೆ .ಇದೊಂದು ರೀತಿಯ ವ್ರತ ವಿದ್ದಂತೆ ಮತ್ತು ಅದರ ಫಲವನ್ನು ನಾವು ಎದುರಿಗೆ ಕೂತು ಕಾಣಬಹುದು ,ಅನುಭವಿಸಬಹುದು ನಿಮ್ಮ  ಪ್ರಯತ್ನ  ದಲ್ಲಿ  ಸಹಕಾರಿಯಗುವಂಥ  ಕೆಲವು  ವೆಬ್ ಸೈಟ್ ಗಳು ಇಲ್ಲಿವೆ  .ಮತ್ತೇಕೆ ತಡ ಶುರುವಾಗಲಿ ನಿಮ್ಮ ರೈಮ್ ಟೈಮ್ .ಗುಡ್ ಲಕ್

Wednesday, January 11, 2012

ಅಮ್ಮ ಮಾಡಿದ ಕೇಕು




ಜಗತ್ತಿಗೆಲ್ಲ ಜನೆವರಿ ೧ ಹೊಸ ವರ್ಷದ ಆರಂಭ ಆದ್ರೆ..ನನಗೆ ಮಾತ್ರ ಜನೆವರಿ ೩ ಹೊಸ ವರ್ಷ ಅದ್ಯಾಕೆ ಅನ್ನೋ ಪ್ರಶ್ನೆ ಹುಟ್ಟೋ ಮೊದಲೇ ಉತ್ತರ ಹೇಳೋ ಕಾತರ ನನಗೆ...ಈ ದಿನವೇ ನನಗೆ ಜಗತ್ತಿನ ಅತ್ಯುನ್ನತ ಹುದ್ದೆ ಸಿಕ್ಕಿದ್ದು,ಹೊಸ ಬದುಕಿಗೆ ಹೊಸ ಜೀವನ ಶೈಲಿಗೆ ,ಹೊಸ ಪದವಿಗೆ ನನ್ನ ಪರಿಚಯ ಆದದ್ದು..ನಾ ಅಮ್ಮ ಎಂಬ ಟೈಟಲ್ ಪಡೆದಿದ್ದು...ಬದುಕಿನ ಪ್ರತಿ ಬದಲಾವಣೆಯನ್ನು ಮನಸ್ಪೂರ್ತಿ ಸ್ವಾಗತಿಸಿ ನೋವನ್ನು ಕೂಡ  ಒಂದು ಖುಷಿಯಿಂದ ಅನುಭವಿಸುವ ನನಗೆ ಇದು ಅವರ್ಣನೀಯ ಅನುಭವ.ಆಸ್ಪತ್ರೆಗೆ ದಾಖಲಾಗಿ,ಹೊಟ್ಟೆನೋವ ಭರದಲ್ಲಿ ನನ್ನ ತಲೆಯಲ್ಲಿ ಅಚ್ಚಾಗಿದ್ದ ಅಷ್ಟು ಹಾಡುಗಳನ್ನು ಹಾಡಿ  ಬರಿದು ಮಾಡಿ ಸಂಕಟದಲ್ಲೂ ಸಂತಸ ವನ್ನು ತುಂಬಿ ಕೊಟ್ಟ ರಾತ್ರಿಯದು...

ಮುಂಜಾನೆ ಮೊದಲ ಪ್ರಹರಕ್ಕೆ ಪ್ರಥಮ್ ನನ್ನ ಪಕ್ಕ ದಲ್ಲಿ .ಹಾಯಾಗಿ ನಿದ್ರಿಸುತ್ತಿದ್ದ. ಇದೆಲ್ಲ ಮೊನ್ನೆ ಮೊನ್ನೆಯಂತಿದೆ ಅದಾಗಲೇ ಪ್ರಥಮನಿಗೆ ೫ ತುಂಬಿತು .ಕಳೆದ ನಾಲ್ಕು ವರ್ಷದ ಜನುಮದಿನದ ಆಚರಣೆಯನ್ನು ನಮಗಿಷ್ಟ ಬಂದಂತೆ ಆಚರಿಸಿದ್ದು ಆಯ್ತು. ಇಗ ಅವನು ತನ್ನ ಅನಿಸಿಕೆ ಇಚ್ಹೆ ವ್ಯಕ್ತ ಪಡಿಸಲು ಶುರು ಮಾಡಿದಾನೆ ಅದಕ್ಕೆ ಅವನನ್ನೇ ಕೇಳಿದೆ ಹೇಗೆ ಆಚರಿಸೋಣ ನಿನ್ನ ಬರ್ತ್ ಡೇ???ಯಾರನ್ನ ಕರಿಬೇಕು ??ನಿನಗೇನು ಗಿಫ್ಟ್ ಬೇಕು?? 
                                                                                                                               
ಕೇಳೋದನ್ನೇ ಕಾಯುತ್ತಿದ್ದ ಅನಿಸುತ್ತೆ .''ಅಮ್ಮ ನನಗೆ ದೊಡ್ಡ ಕೇಕ್ ಬೇಕು''  ಮಗ ಅವನ ಇಚ್ಛೆ ಹೇಳಿದ ಕೂಡಲೇ ನನಗ್ಯಾಕೋ ಅಂಗಡಿಯಿಂದ ತರುವ ಮನಸ್ಸಾಗಲಿಲ್ಲ ,ನಾನೇ ಯಾಕೆ ಕೇಕ್ ಮಾಡಬಾರದು ಅನ್ನೋ ಉಮೇದು ತಲೆಯನ್ನು ಹೊಕ್ಕಿ ಇಂಟರ್ನೆಟ್ ತುಂಬಾ ಕೇಕ್ ರೆಸಿಪಿ ತಡಕಾಡಿದೆ.೨-೩ ಪ್ರಯೋಗಗಳನ್ನು ಮಾಡಿದೆ ,ಓಕೆ ಈಗೊಂದಿಷ್ಟು ಕಾನ್ಫಿಡೆನ್ಸು ಬಂದಿತ್ತು ನಾನೂ ಕೇಕ್ ಮಾಡಬಲ್ಲೆ...

ಇವರಿಗ್ಯಾಕೋ ನನ್ನ ಮೇಲೆ ನಂಬಿಕೆ ಇಲ್ಲ ಬೇರೆ ಎಲ್ಲಾ ಸರಿ ನಾಲ್ಕು ಮಂದಿ ಬರೊವಾಗ ನಿನ್ನ ಪ್ರಯೋಗಪಶು ಅವರಾಗೋದು ಬೇಡ..ನೀ ಕೇಕ್ ಮಾಡು ಆದ್ರೆ ಅದನ್ನ ನಾವು ಮನೆಮಟ್ಟಿಗೆ ಕಟ್  ಮಾಡೋಣ ಬರ್ತ್ ಡೇ  ಫಂಕ್ಷನ್  ಗೆ ಹೊರಗಿಂದ ನೇ ತಂದರಾಯಿತು.ಈಗ ಇದು ನನ್ನ ಮರ್ಯಾದೆ ಪ್ರಶ್ನೆ.೨ ನೇ ತಾರೀಖಿನ ಸಂಜೆ ನನ್ನ ಆಪರೇಶನ್ ಕೇಕ್ ಆರಂಭ ಆಯ್ತು ಇದು ಸರಿ ಆಗದಿದ್ದರೆ ಅವರು ಹೇಳಿದಂತೆ ಮರುದಿನ ಬೆಳಿಗ್ಗೆ ಹೋಗಿ ಕೇಕ್ ತಂದರಾಯಿತು ಅನ್ನೋ ಮುಂದಾಲೋಚನೆ ನನ್ನದು..

 ಬ್ಲ್ಯಾಕ್ ಫಾರೆಸ್ಟ್ ಕೇಕ್ ,ಕೇಕ್ ನ ಬೇಸ್ ಸರಿ ಆಯಿತು ಅಂದ್ರೆ ಉಳಿದಿದ್ದೆಲ್ಲ ಕರಗತ .ಆ ಸಮಯದಲ್ಲಿ ನಾ ಹರಕೆ ಹೊತ್ತಷ್ಟು ಚವತಿ ಚಕ್ಕುಲಿ ಮಾಡುವಾಗ ಎದುರುಮನೆ ಆಯಿ ಕೂಡ ಹೊತ್ತಿರಲಾರರು .ಒವ್ವೆನ್  ನ ಟೈಮರ್ ನನ್ನು ದಿಟ್ಟಿಸಿದಷ್ಟು ಇವರ ಮುಖವನ್ನು ದಿಟ್ಟಿಸಿರಲಿಕ್ಕಿಲ್ಲ ನಾ .ಬೇಕಿಂಗ್ ಟ್ರೇಯಿಂದ ಕೇಕ್ ತೆಗೆಯುವಾಗ ಮತ್ತೊಮ್ಮೆ ೨೦೦೭ ರ ಜನವರಿ ೩ ನೆನಪಾಗಿತ್ತು .ಆಹಾ ಆದಷ್ಟು ಚನ್ನಾಗಿ ಬಂದಿತ್ತು ಪತಿದೇವ ಮಧ್ಯ ಮಧ್ಯ ಬಂದು ಹಾಗ ಮಾಡು ಹೀಗ್ ಮಾಡು ಅನ್ನೋ ಫ್ರೀ ಸಲಹೆ ಕೊಡುತ್ತಿದ್ದರು ಮತ್ತೆರಡು ಘಂಟೆಯಲ್ಲಿ ನನ್ನ ಡ್ರೀಮ್ , ಬ್ಲಾಕ್ ಫಾರೆಸ್ಟ್ ಕೇಕ್ ತಯಾರಾಗಿತ್ತು ,

ಪತಿದೇವ ,ಮಗರಾಯ ಇಬ್ಬರೂ ಅದನ್ನು ನೋಡೋದ್ರಲ್ಲೇ ತಲ್ಲೀನ ,ಮಗ ''ಅಮ್ಮ ನೀ ಗುಡ್ ಗರ್ಲ್ ಅಮ್ಮ  ''ಅಂದು ನನ್ನ ಬೆರಳುಗಳಿಗೆ ಮುತ್ತು ಕೊಟ್ಟಿದ್ದ ...ಇನ್ನೇನು ಬೇಕು..ನಾನೂ ಹರುಷದ ಹೊಳೆಯಾಗಿದ್ದೆ. ಅವನ ಬರ್ತ್ ಡೇ ಗಿಫ್ಟು ನನಗೆ ಸಿಕ್ಕಂತಿತ್ತು ನನ್ನ ಖುಷಿ.ಮರುದಿನ ಮಾಡಿದ ಕ್ಯಾರೆಟ್ ಹಲ್ವಾ ,ಎಪ್ಪಲ್ ಖೀರು  ಎಲ್ಲವು ಸುಮ್ಮನೆ ಮುಚ್ಚಳ  ಹೊದ್ದು ಮಲಗಿದ್ದವು ಎಲ್ಲರು ಕೇಕ್ ಹೊಗಳಿ ಅದನ್ನೇ ಬಯಸಿದರು ಮಕ್ಕಳು ಅದರ ರೂಪ ಕಂಡು ತನ್ಮಯರಾಗಿದ್ದರು.ಕೆಲವರು ನನ್ನ ಮಗನ ಬರ್ತ್ ಡೇ ಗೆ ನೀನೆ ಕೇಕ್ ಮಾಡು ಅಂದ್ರು ,ಯಪ್ಪಾ...೨೦೧೨ ಕ್ಕೆ ಇಷ್ಟು ಸಾಕು ಅನ್ನೋಷ್ಟು ಮೆಚ್ಹುಗೆ..ಸಿಕ್ಕಿತ್ತು ನಾ ಮಾಡಿದ ಕೇಕ್ ಗೆ ...

ಇನ್ನು ನನ್ನ ಸರದಿ ನಾ ಮಾಡಿದ್ದನ್ನು  ಟೇಸ್ಟ್(ಟೆಸ್ಟ್ ) ಮಾಡಬೇಡವೆ...ಸುಮ್ಮನೆ ಒಂದು ಚೂರು ತೆಗೆದು ಬಾಯಲ್ಲಿಟ್ಟೆ,ಯಾಕೋ ಅಮ್ಮ ನೆನಪಾದಳು , ಅದರ ಹಿಂದೆ ನೆನಪುಗಳ ತೇರು..ನಮ್ಮ ಜನುಮದಿನಕ್ಕೆ ಅಮ್ಮ ತಯಾರಿಸುತ್ತಿದ್ದ ಕೇಕು ..ಅದರ ರುಚಿ ...ಯಾಕೋ ಗೊತ್ತಿಲ್ಲ ಅಷ್ಟರ ತನಕ ನಾ ಅನುಭವಿಸಿದ ಎಲ್ಲಾ ಹೆಮ್ಮೆ ,ಖುಷಿ  ,ಮಾಯ ,
ಅಮ್ಮನಿಗೆ ತನ್ನ ಮಕ್ಕಳ ಬರ್ತ್ ಡೇ ಕೂಡ ಇತರ ಮಕ್ಕಳಂತೆ ಕೇಕ್ ತಂದು ಹ್ಯಾಪಿ ಬರ್ತ್ ಡೇ ಅಂದು ಹಾಡಿ,ಅವರಿವರನ್ನು ಕರೆದು ಆಚರಿಸಬೇಕು ಅನ್ನೋ ಆಸೆ..ನನ್ನ ಪಪ್ಪ ..ಅದರ ಸರಿ ವಿರುಧ ದಿಕ್ಕು.ಅವರಿಗೆ ಬರ್ತ್ ಡೇ ಅನ್ನೋದು ಪಾಶ್ಚಿಮಾತ್ಯ ರ ಅನುಕರಣೆ ,ಶೋಕಿ ಮತ್ತಿನ್ನೇನೋ ......ಕೇಕು ತನ್ನಿ ಅಂದಾಗಲೇ ಅಲ್ಲೊಂದು ವಾಗ್ಯುದ್ಧ ಚಾಲು.

ಇದಕ್ಕೊಂದು ಬ್ರೇಕ್ ಹಾಕಲಿಕ್ಕೆ  ಅಮ್ಮ ಮನಸ್ಸಲ್ಲೇ ನಿರ್ಧರಿಸಿದಳು ಅನಿಸುತ್ತೆ,  ಅದು ನನ್ನ ೧೦ ನೇ ವರ್ಷ ದ ಜನುಮದಿನ ,ಅಮ್ಮ ಅದೆಲ್ಲಿಂದಲೋ ಸಿಮಂಟು ಚೀಲದ ತುಂಬಾ ಉಸುಕು ಹೊತ್ತು ತಂದಿದ್ದಳು ,  ಮೊದಲೆರಡು ವಾರದ ಬೆಣ್ಣೆಯನ್ನು ಜೋಪಾನ ಮಾಡಿಟ್ಟಿದ್ದಳು. ಸಾಮಾನ್ಯದಂತೆ ರವೆಲಾಡು ಮಾಡಿದ ನಂತರ ಮೈದಾ,ಮೊಟ್ಟೆ  ಮತ್ತಿನ್ನೇನೋ ಎಲ್ಲಾ ಸೇರಿಸಿ  ಒಂದು ಸಿಹಿ ಹಿಟ್ಟು ತಯಾರಿಸಿದ್ದಳು(ಆಕೆಯ ಎಲ್ಲಾ ಅಡಿಗೆ ಯನ್ನುಮೊದಲಿಗೆ  ಸವಿದು ಉಪ್ಪುಖಾರ ರುಚಿ   ಹೇಳುವುದು ನಾನೇ) ದೊಡ್ಡ ಪಾತ್ರೆಯಲ್ಲಿ ಉಸುಕು ಸುರಿದು ಕಟ್ಟಿಗೆ ಉರಿ ಮೇಲೆ ಇಟ್ಟು ಸಿಹಿ ಹಿಟ್ಟಿನ ಡಬ್ಬಿಗೆ ಮುಚ್ಚಳ ಬಿಗಿದು ಅದರ ಮೇಲಿತ್ತು ಮತ್ತೊಂದಿಷ್ಟು ಉಸುಕು ಅದರ ಮೇಲೆ ಸುರಿದಳು ,ನನಗೆ ಆಕೆಯ ಯೋಜನೆ ಏನು ಎಂಬುದೇ ಅರ್ಥ ಆಗಲಿಲ್ಲ..ರವೆ ಲಾಡು ರುಚಿಯಾಗಿತ್ತು ಸೊ ,ನಾನು ಅದರಲ್ಲೇ ಬ್ಯುಸಿ ಇದ್ದೆ , ಓಲೆ ಮುಂದೆ  ಕೂತು ಉರಿ 
ಒಂದೇ ರೀತಿ ಇರುವಂತೆ ಮೆಂಟೈನ್  ಮಾಡೋದ್ರಲ್ಲಿ ಮಗ್ನ ನನ್ನಮ್ಮ ,


ಅದೊಂದಿಷ್ಟು ಹೊತ್ತಿನ ನಂತರ ''ಅಮಿತಾ ಬಾ ಇಲ್ಲಿ  ನೋಡು ಅಂದು ಕರೆದಾಗ ನಾನು ರವೆಲಾಡು ಮೆದ್ದು ಮೆದ್ದು ಅಂಟು ಅಂಟು  ಮುಖ ಒರೆಸುತ್ತಾ  ಹೋಗಿದ್ದೆ ,ಅಲ್ಲಿ ಆಕೆ ಪಪ್ಪ ಊಟ ಮಾಡುವ ಅಗಲ ತಾಟಿನಲ್ಲಿ ಡಬ್ಬಿ ದಬ್ಬು ಹಾಕಿದ್ದಳು ,ಮತ್ತು ಮೆತ್ತಗೆ ಅದನ್ನು ಮೇಲೆತ್ತಿದಳು ,ಅಲ್ಲಿತ್ತು ನನ್ನ ಬರ್ತ್ ಡೇ ಗಿಫ್ಟು...ಅದು ಅಮ್ಮ ತನ್ನ ಕೈಯ್ಯಾರೆ ಮಾಡಿದ ಕೇಕು .ಹೆಸರು ಗಿಸರು ಬರೆಯೋಕಗಲ್ಲ ಹಾಗೆ ಚಾಕು ತಗೊಂಡು ಕತ್ತರಿಸು..ಅಂದು ತಂಗಿ ಮತ್ತು ನಾನು ಜೊತೆಗೆ ಆಕೆಯ ಮಾಸ್ಟರ್ ಪೀಸೆ ನ  ಪೀಸ್  ಮಾಡಿ ತಿಂದೆವು.ಅದೊಂಥರ ರುಚಿ...ಅದನ್ನು ವರ್ಣಿಸಲಾಗದು ,ತಳದಲ್ಲಿ ಸ್ವಲ್ಪ ಸೀದು ಹೋಗಿತ್ತು ಸೀದು ಹೋದ ಕೇಕು ಇನ್ನು ರುಚಿ..

ಕಣ್ಣು ತೊಯುತ್ತವೆ ಅದನ್ನು ನೆನೆಸಿಕೊಂಡರೆ ,ಅಮ್ಮ ಅಂದರೆ ಹಾಗೇ ...ಆಕೆ ಒಂದು ಅಧ್ಭುತ.ಆಕೆ ಮುಂದೆ ನಾವು ಏನು ಅಲ್ಲ . ನನ್ನ ಕೈಯ್ಯಲ್ಲಿ ಸೆಲ್ಫ್ ರೈಸಿಂಗ್ ಮೈದಾ ,ಓವೆನ್ . ಇವೆನ್ ತಾಪಮಾನ, ವೆನಿಲ್ಲಾ ಎಸ್ಸೇನ್ಸು ಎಲ್ಲವು  ಇದೆ.ಸ್ವಲ್ಪ ಗಮನ ಕೊಟ್ಟರೆ ಸಾಕು..ಆದರೆ ಆಕೆ ಆಕೆಗದೆಷ್ಟು ತಾಳ್ಮೆ..ಕಟ್ಟಿಗೆ ಉರಿಯಲ್ಲಿ ಆಕೆಯದೇ ತಂತ್ರಗಾರಿಕೆಯಲ್ಲಿ ಯಾಲಕ್ಕಿ ಹಾಕಿಯಾದರು ಸರಿ ಆಕೆ ಕೇಕ್ ಮಾಡಿದ್ದಳು.ಆಗ ಬೇಕರಿ ಇಲ್ಲವೇ???ಇತ್ತಲ್ಲ ೧೫ ರುಪಾಯಿಗೆ ೧/೪ ಕೆ ಜಿ ತೂಕದ ಕೇಕು ಆರಾಮಾಗಿ ಸಿಗುತಿತ್ತು,ಆದರೂ ಆಕೆ ನಮಗೆಂದು ಅದೆಷ್ಟು ಆಸ್ಥೆಯಿಂದ ಅದೆಲ್ಲ ಮಾಡಿದ್ದಳು..ನನಗೊಂದಿಷ್ಟು ಅಡಿಗೆ ಮೇಲೆ ಪ್ರೀತಿ ಬಂದಿದೆ ಅಂದ್ರೆ ಆಕೆಯ ಉಡುಗೊರೆ ಅದು ನನಗೆ ,ಈಗಲೂ ಆಕೆಗೊಂದು ಕನಸು ಆಕೆ ಒಮ್ಮೆ ಆದರೂ  ಆ ಅಡುಗೆ ಶೋ ಗಳಲ್ಲಿ ಭಾಗವಹಿಸಬೇಕು..ಅಂತಾನೆ ಇರ್ತಾಳೆ  ಚಂದ ಮಾಡಿ ರೆಸಿಪೆ ಬರೆದು ಕೊಡು ಅಮಿತಾ ಅಂದು..ನಾವು ಊರ ಸುದ್ದಿ ಎಲ್ಲಾ ಬರಿತೇವೆ  ಆಕೆಗೆ ಬರೆದು ಕೊಡಲು ಆಲಸ್ಯ ,ಈ ಬಾರಿ ಊರಿಗೆ ಹೋದಾಗ ಮಾತ್ರ ಆ ಕೆಲಸ ಮಾಡಲೇ ಬೇಕು ಅಂದು ಕೊಂಡೆ,


ಈ ಪಪ್ಪನಿಗೆ ಅಸಲಿಗಿಂತ ಬಡ್ಡಿ ಯ ಮೇಲೆ ಪ್ರೀತಿ  ಜಾಸ್ತಿ, ಮಕ್ಕಳ ಬರ್ತ್ ಡೇ ಗೆ ಯಾವತ್ತು ವಿರೋಧಿಸಿಯೇ ಗುರುತಿಸಿಕೊಂಡ ಪಪ್ಪ ನನ್ನ ಮಗನ ಮೊದಲ ಎರಡನೇ ಮೂರನೇ ಜನುಮದಿನಕ್ಕೆ ಓಡಾಡಿದ್ದೆ ಓಡಾಡಿದ್ದು ,,,,ನನ್ನದು ಸುಮ್ಮನಿರುವ ಬಾಯಲ್ಲ ನಾ ಹೇಳದೆ ಬಿಟ್ಟೆನೆಯೇ??ಪಪ್ಪ  ಆಗ ತನ್ನ ಮೂಗಿಗಿಳಿದ ಕನ್ನಡಕವನ್ನು ಮೇಲೇರಿಸಿ ಒಂದು ಸ್ಮೈಲ್ ಕೊಟ್ಟು '' ಅದು ಹಂಗವಾ ದಿನಮಾನ ಬದಲಿ ಆಗ್ಯಾವ  ನಾವು ಬದಲಿ ಆಗಬೇಕು ..''ಅಂತಾನೆ ಆದರೂ ಮಕ್ಕಳ ವಿಷಯಕ್ಕೆ ಬಂದರೆ ಮತ್ತೆ ಅದೇ ಕತೆ .

ಯಾಕೋ ಗೊತ್ತಿಲ್ಲ ಅಮ್ಮ ಮಾಡಿದ ಕೇಕು ಮತ್ತೆ ಮತ್ತೆ ನೆನಪಾಗುತ್ತಿದೆ..ಅಮ್ಮ ನಿನಗೊಂದು ಸಿಹಿ ಸಿಹಿ ಉಮ್ಮಾ ...