ಇಂತಹ ಸಂಧರ್ಭದಲ್ಲೇ ನಾನು ಸುನಿತಾ ಜಾಧವ್ ಅವರನ್ನ ಭೇಟಿಯಾಗಿದ್ದು ರಾಷ್ಟ್ರೀಯ ಸ್ವಯಂ ಸೇವಿಕಾ ಸಮೀತಿಯ ಪ್ರಚಾರಕಿಯಾಗಿದ್ದ ಅವರು ಕೆಲವು ಭೇಟಿಯ ನಂತರ ನಮ್ಮ ಮನೆಗೆ ಬಂದಿದ್ದರು , ಅಮ್ಮನ ಎದುರು ನಿಮ್ಮ ಮಗಳ ನೋಡಿದ್ರ ನಂಗ ಭಾಳ ಖುಷಿ ಆಗ್ತದ ರೀ, ಎಷ್ಟು ಚಲೋ ಬೆಳಸೀರಿ ನೀವು ಅಂದು ಇನ್ನೇನೋ ಹೇಳೋಕೆ ಮುಂಚೆಯೇ ಅಮ್ಮ ಅವಳ ಎಂದಿನ ಅಸಮಾಧಾನ ಹೊರಗೆ ಹಾಕಿದಳು '' ಅಭಾಸ ಮಾಡಲ್ಲ ಕಾಲೇಜ್ ಪುಸ್ತಕ ಮುಟ್ಟಲ್ಲ ಬರೀ ಮರದಂಗಿ ಉಲನ್ ಸೂಜಿ ದಾರ ಅಂದು ದಿನ ಎಲ್ಲ ಕಳೀತಾಳೆ ಅಂತೆಲ್ಲ ಒಂದೇ ಸಮನೆ ಹೇಳೋಕೆ ಶುರು ಮಾಡಿದಳು. ಅಮ್ಮನ ಮಾತನ್ನು ಸಮಾಧಾನವಾಗಿ ಕೇಳಿದ ಅವರು '' ನನಗ್ ನಿಮ್ಮ ಮಾತು ಅರ್ಥ ಆಗ್ತದ ರೀ ನಾನು ಕಾಲೇಜು ಪ್ರೊಫೆಸ್ಸರ್ ಇದ್ದೀನಿ , ಓದಬೇಕು ಬರೀಬೇಕು ಅದನ್ನ ಎಲ್ಲಾರು ಮಾಡ್ತಾರ, ಆದ್ರ ಇಂಥ ವಿದ್ಯೆ ಎಲ್ಲಾರಿಗೂ ಒಲಿಯಾಂಗಿಲ್ಲ ರೀ. ಅಕಿ ಹಿಂಗ ಹಾಡ ಹೇಳ್ಕೋತ , ಮದರಂಗಿ ಹಾಕೋತ , ರಂಗೋಲಿ , ಕಸೂತಿ ಮಾಡ್ಕೊಂಡ್ ಇರ್ಲಿ ಬಿಡ್ರಿ . ಮುಂದ ಯಾವತ್ತೂ ಅಕಿಗೇ ಬೇಜಾರ್ ಅನ್ನೋದು ಬರುದಿಲ್ಲ ಯಾಕಂದರ ಯಾರ್ ಇಲ್ಲ ಅಂದ್ರೂ ಇವ ಆಕಿ ಜೋಡಿ ಇರ್ತಾವು'' ಅಂದು ಅಮ್ಮನಿಗೆ ಸಮಾಧಾನ ಮಾಡಿದ್ದರು. ಇದು ಅಮ್ಮನಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ ನನಗೆ ಮಾತ್ರ ಮನಸಲ್ಲಿ ಉಳಿದು ಹೋಯಿತು. ಆಮೇಲೆ ಒಂದೆರಡು ಸಲವೇ ನಾವು ಭೇಟಿ ಆಗಿದ್ದು.ಆದರೂ ಅವರು ಹೇಳಿದ ಆ ಮಾತುಗಳನ್ನ ಅದೆಷ್ಟು ಸಲ ಮನನ ಮಾಡಿಕೊಂಡಿದ್ದೇನೋ ಏನೋ ! ಈ ಹವ್ಯಾಸಗಳಿಂದ ನನ್ನ ಬದುಕು ಎಷ್ಟು ಸುಂದರ ಅನಿಸಿದಾಗೆಲ್ಲ ಸುನೀತಕ್ಕನ ಆ ಮಾತುಗಳು ಮನಃಪಟಲದ ಮೇಲೆ ಮೂಡಿ ಮಿಂಚುತ್ತಿತ್ತು. ೨೦೨೦ ರ ವರ್ಷ ಪೂರ್ತಿ ಮನೆಯಲ್ಲಿರಬೇಕಾದ ಅನಿವಾರ್ಯತೆ ತಂದಿಟ್ಟ ಈ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ನಾನು ಈ ಹವ್ಯಾಸಗಳಿಂದಾಗಿಯೇ ಒಮ್ಮೆಯೂ ''ಛೆ ಬೇಜಾರು! ಅಂತಾಗಲೋ,'' ಸಮಯ ಹೇಗೆ ಕಳೆಯಲಿ'' ಎಂತಾಗಲೋ ಅನಿಸದಿದ್ದಾಗ, ಅಂದು ಸುನೀತಕ್ಕ ಹೇಳಿದ ಮಾತುಗಳು ಮತ್ತೆ ಮತ್ತೆ ನೆನಪಾದವು.
ಇದಾಗಿ ಅದೆಷ್ಟೋ ವರ್ಷಗಳ ನಂತರ ನನಗೆ ಬೆಲ್ಫಾಸ್ಟ್ ನಲ್ಲಿ ನೆಲೆಸಿದ ಹೊರದೇಶದ ಕಲಾವಿದರ ಸೆಮಿನಾರ್ ಒಂದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು , ಬೆಳಿಗ್ಗೆಯಿಂದ ಸಂಜೆತನಕ ಇದ್ದ ಆ ಕಾರ್ಯಕ್ರಮಕ್ಕೆ ನೂರಾರು ಕಲಾವಿದರು ಆಗಮಿಸಿದ್ದರು, ಭಾಷಣಗಳ ಮೇಲೆ ಭಾಷಣಗಳು ನಡೆಯುತ್ತಿದ್ದವು , ನಾನು ಸುಮ್ಮನೆ ಒಂದು ಹಸಿರು ಬಣ್ಣದ ಹಾಳೆಯಲ್ಲಿ ಕಪ್ಪು ಶಾಯಿ ಪೆನ್ನಿನಿಂದ ವಾರ್ಲಿ ಚಿತ್ತಾರಗಳನ್ನು ಬಿಡಿಸುತ್ತ ಅವರ ಮಾತುಗಳನ್ನ ಕೇಳುತ್ತಿದ್ದೆ , ಊಟದ ವಿರಾಮ ಇದ್ದಾಗ ಭಾರತೀಯರಂತೆ ಕಾಣುತ್ತಿದ್ದ ಒಬ್ಬ ಮಹಿಳೆ ಬಂದು ನನ್ನನ್ನು ಮಾತನಾಡಿಸಿದರು '' ನೀನು ಮಹಾರಾಷ್ಟ್ರದವಳ ?'' ಎಂದರು ನಾನು ಅಲ್ಲ ಕನ್ನಡತಿ ಎಂದೆ ನೀ ಬಿಡಿಸುತ್ತಿರುವ ಆ ಚಿತ್ರ ಮಹಾರಾಷ್ಟ್ರ ಮೂಲದ್ದು , ನಾ ಇಲ್ಲಿಗೆ ಬಂದು ೧೮ ವರ್ಷ ಆದರೂ ಒಮ್ಮೆಯೂ ಯಾರು ಇದನ್ನ ಇಲ್ಲಿ ಪ್ರದರ್ಶಿಸಿದ್ದು ನೋಡಿಲ್ಲ, ನನಗೆ ತುಂಬಾ ಖುಷಿ ಆಯಿತು ಅಂದರು. ಒಂದು ಸರಳ ಚಿತ್ರಕಲೆ ನೋಡಿ ಅಷ್ಟು ಭಾವುಕರಾಗುವ ಅಗತ್ಯವಿದೆಯೇ ಎಂದು ಹಲವರಿಗೆ ಅನಿಸಬಹುದು, ಇದೊಂಥರಾ ವಿದೇಶದ ನೆಲದಲ್ಲಿ ನಮ್ಮ ಇಷ್ಟದ ಹಾಡು ಸ್ಪೀಕರ್ ನಲ್ಲಿ ಜೋರಾಗಿ ಕೇಳಿಸುತ್ತಿದ್ದರೆ , ಪಿಜ್ಜಾ , ಫ್ರೈ ಮೆನುವಿನಲ್ಲಿ ಬರಗೆಟ್ಟ ಕಂಗಳಿಗೆ ಬೆಣ್ಣೆ ದೋಸೆ , ಇಡ್ಲಿ ವಡೆ ಕಾಣಿಸಿದರೆ , ಕೆಂಪು ಇಟ್ಟಿಗೆಯ ಒಂದೇ ನಮೂನೆಯ ವಿಕ್ಟೋರಿಯನ್ ಶೈಲಿ ಮನೆಗಳ ಸಾಲಿನಲ್ಲಿ ಒಂದು ಮನೆಯ ಮುಂದೆ ತೋರಣ ವೊ ರಂಗೋಲಿಯೂ ಕಂಡರೆ ಆಗುವ ಖುಷಿ, ಸಂಭ್ರಮ ಅವರಿಗೂ ವರ್ಲಿ ಕಲೆ ಯನ್ನು ನೋಡಿ ಆಗಿತ್ತು.
ಅವರ ಹೆಸರು ವಸುಂಧರಾ ಕಾಂಬ್ಳೆ ಮುಂಬೈ ಮೂಲದವರು , ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಹಲವಾರು ವರ್ಷಗಳ ಕಾಲ ಇತಿಹಾಸ ಪಾಠ ಮಾಡುತ್ತಿದ್ದರು ಕಾರಣಾಂತರಗಳಿಂದ ೧೯೯೫ರಲ್ಲಿ ಬೆಲ್ಫಾಸ್ಟ್ ಗೆ ಬಂದು ನೆಲೆಸಿದರು, ಸ್ಥಳೀಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ವರು ೬ ವರ್ಷಗಳ ಕಾಲ ಸ್ಥಳೀಯ ಪಕ್ಷವೊಂದರ ಕೌನ್ಸಿಲರ್ ಕೂಡ ಆಗಿದ್ದರು. ರೇಸಿಸಂ ನ್ನು ತೀವ್ರವಾಗಿ ಖಂಡಿಸುತ್ತಾ ತಮಗೆ ಸಾಧ್ಯವಾದಾಗಲೆಲ್ಲ ಈ ನಾಡಿಗೆ ವಲಸೆಬಂದ ಹಲವು ದೇಶದ ಜನರಿಗೆ ಅವರು ಸಹಾಯ ಮಾಡುತ್ತಿದ್ದರು. ಇಷ್ಟಲ್ಲದೆ ಹೊಲಿಗೆ, ಕಸೂತಿ, ಸಮಾಜ ಸೇವೆ. ಸದಾ ಕಾಲ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುವ ಅವರನ್ನು ನೋಡಿದರೆ ಬಿಡುವಿರದ ದಣಿವಾಗದ ಜೀವನ್ಮುಖಿ ಇವರು ಅನಿಸುತ್ತಿತ್ತು . ಒಂದಷ್ಟು ಹಿರಿಯ ಜೀವಗಳನ್ನು ಸೇರಿಸಿ intercultural friendship club ಎಂದು ಶುರುಮಾಡಿ ಹಲವಾರು ಕಲೆ , ಸಂಗೀತ , ಕರಕುಶಲ ತರಗತಿಗಳನ್ನು ನಡೆಸುತ್ತ ಅದರ ಮೂಲಕ ನನಗೆ ಹಲವಾರು ವಾರ್ಲಿ ಕಲೆಯ ವರ್ಕಶಾಪ್ ಮಾಡಲು ಅವಕಾಶ ಮಾಡಿ ಕೊಟ್ಟರು. ತರಗತಿ ಉದ್ದಕ್ಕೂ ಇದು ನನ್ನ ಊರಿನ ಕಲೆ , ಅಂತ ಖುಷಿಯಿಂದ ಹೇಳುತ್ತಲೇ ಇದ್ದರು. ಮನಸು ಬಂದಾಗ ಬುದ್ಧಿ ಮಾತು ಹೇಳುತ್ತಿದ್ದರು , ''ಜನರನ್ನು ಒಮ್ಮೆಲೇ ನಂಬಬೇಡ , ಮನಸಿನ ನೋವುಗಳನ್ನು ಯಾರ ಮುಂದೆಯೂ ಹರವಬೇಡ,' ಅಂತ ಯಾವಾಗಲೂ ಹೇಳುತ್ತಿದ್ದರು.
ಒಮ್ಮೆ ಮನೆಗೆ ಬಂದಾಗ ವಾಲ್ನಟ್ ಬರ್ಫಿ ಮಾಡಿದ್ದೆ. ನಿಂಗೆ ಬೇಜಾರ್ ಇಲ್ಲ ಅಂದ್ರೆ ನಂಗೆ ಇದನ್ನ ಕಟ್ಟಿ ಕೊಡು ನಾನು ಮನೆಗೆ ಹೋಗಿ ಆರಂ ಆಗಿ ತಿಂತೇನೆ ಅಂದು ಕೊಟ್ಟಿಸಿಕೊಂಡು ಹೋಗಿದ್ದರು. ಗೀತಾ ದತ್ , ಲತಾ ಮಂಗೇಶ್ಕರ್ ಹಾಡುಗಳನ್ನ ಹಾಡು ಅಮಿತಾ ನನಗೆ ನಿನ್ನ ದನಿಯಲ್ಲಿ ಅವನ್ನ ಕೇಳಬೇಕು ಅಂತ ಭೇಟಿ ಆದಾಗಲೆಲ್ಲ ಹೇಳುತ್ತಿದ್ದರು. ನಾನು ಏನೇ ಚಿಕ್ಕ ಕಲೆ ಸಂಗೀತ, ಅಡುಗೆ ಬಗ್ಗೆ ಪೋಸ್ಟ್ ಮಾಡಿದರು ಅವರ ಉತ್ತರ , ಒಂದು ಶಾಭಾಷಗಿರಿ ನನ್ನ ತಲುಪುತ್ತಿತ್ತು. ಒಮ್ಮೆ '' ಎಷ್ಟು ಚನ್ನಾಗಿ ಇದನ್ನೆಲ್ಲಾ ರೂಡಿಸಿಕೊಂಡಿದೀಯ ಹೀಗೆ ಇರು ಇದರಿಂದ ನಿನ್ನ ಮನಸು ನಿರ್ಮಲವಾಗಿರುತ್ತದೆ ಆದರೆ ಯಾರಿಗೂ ಫ್ರೀ ಸರ್ವಿಸ್ ಮಾಡಬೇಡ'' ಮಕ್ಕಳಿಗೆ ಶಾಲೆಯಲ್ಲಿ ಕಲಾಸ್ವಾಧನೆಯನ್ನು ಮೊದಲು ಹೇಳಿಕೊಡಬೇಕು ನೋಡು. ಎನ್ನುತ್ತಿದ್ದರು
ವಸುಂಧರಾ ಅವರು ಹೇಳುವ ಮಾತುಗಳು ನನಗೆ ಸುನೀತಕ್ಕ ನ ನೆನಪಿಸುತ್ತಿತ್ತು. ಈ ಪೆಂಡಮಿಕ್ ಸಮಯದಲ್ಲಿ ನಾನು ವಸುಂಧರಾ ಅವರ ಪೋಸ್ಟ್ ಗಳಿಗಿಮೆ ಲೈಕ್ ಹಾಕುವುದನ್ನು ಬಿಟ್ಟರೆ ಒಮ್ಮೆಯೂ ಮಾತನಾಡುವ ಪ್ರಯತ್ನ ಮಾಡಲೇ ಇಲ್ಲ , ಹೋದವಾರ ಯಾವುದೋ ವಾಲೆಂಟಿಯರ್ ಗ್ರೂಪಿನೊಂದಿಗೆ ಶ್ರಮದಾನ ಮಾಡಿದ್ದರ ಬಗ್ಗೆ ಪೋಸ್ಟ್ ಹಾಕಿದ್ದರು ಅದಾದ ಎರಡೇ ದಿನಕ್ಕೆ ಇಹಲೋಕದ ಯಾತ್ರೆ ಮುಗಿಸುತ್ತಾರೆಂಬ ಸುಳಿವು ಯಾರಿಗೂ ಇರಲಿಲ್ಲವೇನೋ.
ಇತ್ತ ತಂಗಿ ಹುಬ್ಬಳ್ಳಿಯಿಂದ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಚಿತ್ರ ಕಳಿಸಿದ್ದಳು ಸುನೀತಕ್ಕ ಕೂಡ ಇದೆ ವಾರ ಹೃದಯಾಘಾತದಿಂದ ತೀರಿಕೊಂಡರು. ಮನಸಿಗೆ ಆದ ವಿವ್ಹಲತೆಯನ್ನು ದುಃಖಅನ್ನಲಾ, ಯಾತನೆ ಅನ್ನಲಾ ಗೊತ್ತಾಗುತ್ತಿಲ್ಲ. ನೆನೆದು ವಿದಾಯ ಹೇಳುವುದರ ಹೊರತಾಗಿ ಇನ್ನೇನೂ ಮಾಡಲಾರೆ ಅವರಿಬ್ಬರ ನೆನಪು ಸದಾ ಹಸಿರು