Wednesday, January 12, 2011

ಉತ್ಸಾಹದ ಮೂಟೆ ಹೊತ್ತು ತರುವ ಹಬ್ಬಗಳೆಲ್ಲಿ ಹೋದವು???

ನಾಳೆ ಅಲ್ಲ ನಾಡಿದ್ದು ಮಕರ ಸಂಕ್ರಮಣ....ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ ಅಂತ ಕುಸುರೆಳ್ಳನ್ನು ಕೊಟ್ಟು ಹಿರಿಯರಿಗೆ ಕಾಲಿಗೊಂದು ಉದ್ದಂಡ ನಮಸ್ಕಾರ ಹಾಕಿ ಹೊಸ ಬಟ್ಟೆ ಯಾ ಜರ ಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ  ಸಂಕ್ರಮಣಗಳು ,ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು...ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ...ಅವರಿವರ ವಿಷಯ ಯಾಕೆ ??ನಾನೆ  ಅಮ್ಮನ ರೇಷ್ಮೆ ಸೀರೆ ಹರಿದು ಅದನ್ನು ಲಂಗ ಮಾಡಿ   ಅದಕ್ಕೊಂದು ಪುಟ್ಟ ಸೀರೆ ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು...ಮನೆ ಮನೆಗೆ ಎಳ್ಳು ಹಂಚೋಕೆ ಹೋಗುವ ಸಂಭ್ರಮವನ್ನ ಮನಸ್ಪೂರ್ತಿ ಅನುಭವಿಸಿದ್ದೇನೆ...


ಸಂಕ್ರಾಂತಿ  ಹಬ್ಬ  ಬರುವ ೨ ತಿಂಗಳು ಮುಂಚಿನಿಂದಲೇ  ನಮ್ಮ ತಯಾರಿ ಶುರು ...ಅಂಥದ್ದೇನು  ತಯಾರಿ ಅಂದಿರಾ????ಆಗ ನಾವು ಮಾರುಕಟ್ಟೆಯಲ್ಲಿ ಸಿಗುವ  ಸಕ್ಕರೆ ಗುಳಿಗೆಗಳನ್ನು ತರುತ್ತಿರಲಿಲ್ಲ...ಮನೆಯಲ್ಲೇ  ಎಳ್ಳು ತಯಾರಿಸುತ್ತಿದ್ದೆವು...ಸಕ್ಕರೆಪಾಕ ವನ್ನು ೭ ಬಾರಿ ಸೋಸಿ -ಕಾಸಿ  ಅದಕ್ಕೆ ನಿಂಬೆ ಹಣ್ಣು ಹಿಂಡಿ ಸುಧಾರಸ ಎಂಬ ಪಾಕ ತಯಾರಿಸಿ...ಎಳ್ಳು,ಗೋಡಂಬಿ ಬೀಜ,ಕುಂಬಳ ಬೀಜದ ಒಳತಿರುಳು,ಜೀರಿಗೆ,ಬಡೆಸೋಪು,ಲವಂಗ ,ಶೇಂಗ,ಪುಟಾಣಿ.ಹೀಗೆ ಎಲ್ಲವನ್ನು ಒಂದು ಹರಿವಾಣದಲ್ಲಿ ಹಾಕಿ  ಕೆಂಡ ಹಾಕಿದ ಶೇಗಡಿ ಮೇಲೆ ಆ ಹರಿವಾಣ ಇಟ್ಟು,,,ಒಂದೆರಡು ಚಮಚ ಸುಧಾರಸ ಹಾಕಿ ...ಮೆತ್ತಗೆ ಕೈ ಆಡಿಸಬೇಕು...ಅದು ನಸುಕಿನಲ್ಲಿ ಎದ್ದು..ಏಕೆಂದರೆ ಛಳಿ ಬಿದ್ದಷ್ಟು ಎಳ್ಳಿನ ಮೇಲೆ ಸಕ್ಕರೆ ಮುಳ್ಳುಗಳು ಏಳುತ್ತವೆ...ಅದಕ್ಕೆ ಸೂರ್ಯನ ದರ್ಶನ ಆಗಬರದಂತೆ......


ಇನ್ನೇನು ಜನೆವರಿ ತಿಂಗಳ ೧೫ ಬಂದೆ ಬಿಡ್ತು ....ಅನ್ನೋ ಹೊತ್ತಿಗೆ ಈ ಎಳ್ಳುಗಳು ಬಿಳಿ ಬಿಳಿ ಅರಳು ಮಲ್ಲಿಗೆಯ ನಗುವನ್ನು ಶೆಗಡಿಯ ಬಿಸಿಯಲ್ಲೇ  ನಗುತ್ತವೆ...ನಂತರದ್ದು ಅದನ್ನು ಎಲ್ಲಾ ಬಂಧು ಬಾಂಧವರಿಗೆ  ಕಳಿಸುವ ಕಾರ್ಯಕ್ರಮ..ಕಾಮತ್ ಮಾಮನ ಅಂಗಡಿಗೆ ಹೋಗಿ...ಚಂದದ ಗ್ರೀಟಿಂಗ್ ತಂದು ಅಥವಾ ಎಷ್ಟೋ ದಿನಗಳಿಂದ ಪುಸ್ತಕದಲ್ಲಿ ಒಣಗಿಸಿಟ್ಟ ಗುಲ್ಮೊಹರ್ ,ಹೂವು ,ಎಳೆಗಳು ಗುಲಾಬಿ ಪಕಳೆಗಳನ್ನು ಬಳಸಿ ಆಸ್ಥೆ ಯಿಂದ ಗ್ರೀಟಿಂಗ್ ತಯಾರಿಸಿ...ಅಲ್ಲಿ  ಇಲ್ಲಿಂದ ಕದ್ದು ಕೆಲ ಸಾಲುಗಳನ್ನು ಬರೆದು...ತಯಾರಿಸಿದ ಎಳ್ಳು ಹಾಕಿ...ಅಂಚೆ ಪೆಟ್ಟಿಗೆಗೆ ಹಾಕಿದರೆ ಏನೋ ಒಂದು ದೊಡ್ಡ ಸಮಾಧಾನ...ಕೆಲವೊಮ್ಮೆ ಸ್ಟಾಂಪ್ ಮರೆತು ಗ್ರೀಟಿಂಗ್ಸ್ ನನಗೇ ವಾಪಾಸ್ ಸಿಕ್ಕಿದ್ದೂ ಉಂಟು...
ಸಂಕ್ರಾಂತಿಯದಿನ ಅದು ನಮ್ಮದೇ ದಿನ...ಆ ದಿನ ಆಬ್ಲಿಗೆ...ಅಂದರೆ ಕನಕಾಂಬರ ಹೂ ಮುಡಿಯಲೆಬೇಕಂತೆ,,,ಅದು ಆ ಹೊತ್ತಿಗೆ ಅರಳುವ ಹೂವು...ನಮ್ಮಕಡೆ ಪ್ರತಿ ಮನೆಯಲ್ಲೂ ಮಾರು..ಅಲ್ಲದಿದ್ದರೂ ಮೊಳ  ಅಬ್ಬಲಿಗೆ  ಸಿಕ್ಕೆಸಿಗುತ್ತೆ...ಅದಲ್ಲದಿದ್ದರು...ಆಡುಸೋಗೆ  ಹೂವು ಅಬ್ಬಲಿಗೆಯಂತೆ ಕಾಣುವ ಬಿಳಿ ಹೂ ..ಅದನ್ನು ನನ್ನ ಸೋದರತ್ತೆ ಅಕ್ಕರೆಯಿಂದ ದಂಡೆ ಕಟ್ಟಿ ನನ್ನ ನಾಗರ ಜಡೆಗೆ  ಮುಡಿಸಿ...ಸಿಂಗಾರ 
ಮಾಡುತ್ತಿದ್ದನ್ನು ಮರೆಯಲಾದೀತೇ..??ನಂತರ ಮನೆ ಮನೆ ತಿರುಗಾಡಿ ...ಪುಟ್ಟ ಸ್ಟೀಲ್ ಡಬ್ಬಿ ಖಾಲಿ ಆಗುತ್ತೇನೋ ಅನ್ನೋ ಭಯದಲ್ಲೇ..ನಾಲ್ಕೇ ಕಾಳು  ಕೊಟ್ಟು ನನ್ನ ಡಬ್ಬಿ ,ನಿನ್ನ ಡಬ್ಬಿ ಅಂತ ತಂಗಿ ನಾನೂ ಜಗಳ ಮಾಡುತ್ತ ..ರಸ್ತೆಲೇ ಮಾತು ಬಿಟ್ಟು...ಮತ್ತು ದೋಸ್ತಿ ನೂ ಆಗಿ ಮನೆಗೆ ಮರಳುತ್ತಿದ್ದ ದೃಶ್ಯ...ಇವತ್ತಿಗೂ ನಿಚ್ಚಳ .......
ಮತ್ತೊಂದು ವಿಶೇಷ  ಅಂದ್ರೆ ಸಂಕ್ರಾಂತಿಯ ಜಾತ್ರೆಗಳು....ನಮ್ಮೂರಿಂದ  ೫-೬ ಮೈಲಿ ದೂರ ಇರೋ ಸಾಲಗಾಂವಿ ಯಲ್ಲಿ ಬಾಣನ್ತೆವ್ವ ದೇವಿ ಯಾ ಜಾತ್ರೆ,ದನಗಳ ಸಂತೆ  ಆಗುತ್ತೆ ...ಅಲ್ಲಿ ಮಾವಿನ ತೋಪಿನ ನಡುವೆ  ಅಂಗಡಿ ಗಳು ...ಎಷ್ಟ್ ಚಂದ...ಅಲ್ಲೇ ಊಟ ಕಟ್ಟಿಕೊಂಡು ಹೆಗೆಡೆರ್ ಅಡಿಕೆ ತೋಟದಲ್ಲಿ  ಕೂತು ಊಟ ಮುಗಿಸಿ...ಜೋಕಾಲಿ..ಮಿರ್ಚಿ ಭಜಿ ,,,ಕಬ್ಬಿನಹಾಲು ,,,ಮಂಡಕ್ಕಿ ಖಾರದಾಣಿ. ತಂದು ಒಂದಷ್ಟನ್ನು ಕಟ್ಟಿಸಿ ಕೊಂಡು ಬಂದರೆ...ಇನ್ನೊಂದ್ ಜಾತ್ರೆ ಬರೋತನ್ಕ ಅದರ ಉಮೇದಿ ಜಾರಿಯಲ್ಲಿರುತ್ತೆ,,,,ಮತ್ತು ಎಷ್ಟೋ ''ಚಾಳಿ ಟೂ ''ಗಳು ಮತ್ತೆ ಗೆಳೆತನ ವಾಗಿ ಮಾರ್ಪಡುವ ಸದವಕಾಶ ಈ ಹಬ್ಬದಲ್ಲಿ  ಬಹಳ ....
ಹೈಸ್ಕೂಲು ಮುಗಿಯೋ ಹೊತ್ತಿಗೆ  ಈ ಜಾತ್ರೆ ಗೆ ಹೋಗೋ ಉತ್ಸಾಹ  ಕಡಿಮೆ ಆಗುತ್ತ  ಬಂತು ..ಅದಕ್ಕೆ ಕಾರಣ ..ಮತ್ತೆ ಯಾವತ್ತಾದ್ರು ವಿವರಿಸ್ತೀನಿ..........ಕಾಲೇಜ್ ಗಳಲ್ಲಂತು ಇಲ್ಲವೇ ಇಲ್ಲ ಅನ್ನೋಷ್ಟು ಕಡಿಮೆ ಎಳ್ಳು,ಕಡಿಮೆ ತಿರುಗಾಟ ,,ಅಬ್ಬಲಿಗೆ  ಮುಡಿದದ್ದು ಕಡಿಮೆಯೇ...
ಹಾ ಮರೆತೇ  ಬೆಳಗಾವಿ,,,ಸೋಲ್ಹಪುರ್  ಗಳಲ್ಲಿ ಮಕ್ಕಳಿಗೆ ಬೊರೆ ಹಣ್ಣು ಮಂಡಕ್ಕಿಯ ಸ್ನಾನ ಮಾಡಿಸಲಾಗುತ್ತೆ...ಸಂಜೆಗೆ ಆರತಿ ಮಾಡುವುದು ಇದೆಯಂತೆ...ಇದು ನನ್ನ ಅತ್ತೆಯ ತವರುಮನೆಯ ನೆನಪಿಂದ ಹೆಕ್ಕಿದ್ದು...
ಆದರೆ ಈಗ ಈ ಉತ್ಸಾಹ ಇಲ್ಲ....ನನಗೇ ಇಲ್ಲವೋ??ನನ್ನ ವಾರಗೆಯವರೆಲ್ಲರಿಗೆ ಹೀಗೆಯೋ??ಅಥವಾ ಈಗಿನ ದಿನಮಾನದ ಮಕ್ಕಳಲ್ಲಿ ಈ ಹಬ್ಬಗಳ ಬಗ್ಗೆ ಆಕರ್ಷಣೆ ಕಡಿಮೆ ಆಗಿದೆಯೋ ಗೊತ್ತಿಲ್ಲ...ಒಟ್ಟಿನಲ್ಲಿ ಸಂಕ್ರಮಣ ವೆ ಏಕೆ ಯಾವ ಹಬ್ಬಗಳಲ್ಲೂ ಮೊದಲಿನ ಸ್ವಾರಸ್ಯ ಇಲ್ಲ ಅನಿಸುತ್ತೆ ..ನಾವು ದೊಡ್ಡವರಾಗಿ ಬಿಟ್ವ???ಅಥವ ನಮ್ಮ ಮಕ್ಕಳಿಗೆ ಈ ಹಬ್ಬಗಳ  ನಿಜವಾದ ರುಚಿಯನ್ನು ಉಣಿಸಲು ವಿಫಲವಾದೆವ  ಗೊತ್ತಿಲ್ಲ...ಯಾಕೋ ನೀರಸ  ಅನ್ನೋ ವಂಥ ವಾತಾವರಣ...
ನನಗನಿಸಿದ ಮಟ್ಟಿಗೆ ..ಶಹರದ ಗಾಳಿ ಬಹು ಜೋರಾಗೆ ಬೀಸಿದೆ...ಮೊದಲಿನವರ ತಾಳ್ಮೆ,ಸಹನೆ ,ಇರದು ನಮ್ಮಲ್ಲಿಲ್ಲ...ಹಬ್ಬಗಳೆಂದರೆ ನಮ್ಮ ಮನಸಿಗೆ ಬರುವುದು ಎರಡೇ ವಿಷಯ,,,೧)ಹಬ್ಬ ಯಾವ ವಾರ ಬಂದಿದೆ...(ಇದು ಸರದಿ ರಜೆಗಾಗಿ )....೨)ಈ ಬಾರಿಯ ರಜೆಯಲ್ಲಿ ಯಾವ ಬಾಕಿ ಕೆಲಸ ಪೂರೈಸ ಬಹುದು ಅಥವಾ ಎಷ್ಟು ವಿರಮಿಸ ಬಹುದು...
ಹೀಗೆ  ಮುಂದುವರಿದರೆ...ಒಂದು ದಿನ  ನಮ್ಮ ಹಬ್ಬಗಳು ಕೇವಲ ಕ್ಯಾಲೆಂಡರ್  ನಲ್ಲಿ ಕೆಂಪು ಅಕ್ಷರವಾಗಿ ಉಳಿದು ಹೋಗುತ್ತೇನೋ...ಅಲ್ಲವೆ??.....ಹೊಸವರ್ಷದ ಮೊದಲ ಪೋಸ್ಟ್ ಇದು...೧೨ ದಿನಗಳ ನಂತರ ..ಈ ಬಾರಿಯಾದರೂ ಆಲಸ್ಯದ ಸೂತಕ ತೊಳೆದು ಹೋಗಿದೆ ಅನ್ಕೋತೀನಿ....
ಬ್ಲಾಗ್  ಸ್ನೇಹಿತರೆಲ್ಲರಿಗೂ ಸಂಕ್ರಮಣದ  ಶುಭಾಶಯಗಳು,,,, 

6 comments:

 1. ಒಳ್ಳೆಯ ಬರಹ ಅಮಿತಾ ಅವರೆ.. ನಿಜ ನಾವು ಪಟ್ಟಣದ ಝಳಕಿನಲ್ಲಿ ನಮ್ಮ ತನವನ್ನು ಕಳೆದುಕೊಂಡು ಬಿಟ್ಟಿದ್ದೆವೆ..ಮುಂಚಿತವಾಗಿ ನಿಮಗೆ ಸಂಕ್ರಾಂತಿಯ ಶುಭಾಶಯಗಳು..

  ReplyDelete
 2. ಅಮಿತಾ....
  ಮತ್ತೊಮ್ಮೆ ನಮ್ಮ ಬಾಲ್ಯದ ದಿನಗಳಿಗೆ ಕರೆದೊಯ್ದಿದ್ದೀರಿ...
  ಅಭಿನಂದನೆಗಳು
  ಪಾಶ್ಚ್ಯಾತ್ಯೀಕರಣ, ಬಹುರಾಷ್ಟ್ರೀಯತೆ, ವಾಣಿಜ್ಯೀಕರಣ ಮತ್ತು ಆಧುನಿಕತೆಯ ಸೋಗಿನಲ್ಲಿ ನಮ್ಮ ಸಂಸ್ಕೃತಿಯು ಹಳೆಯ ಕಾಲದ ಪಳೆಯುಳಿಕೆಯಂತೆ ಅಲ್ಲಿ-ಇಲ್ಲಿ ಉಳಿದಿದೆ. ಅತ್ಯಂತ ಸಮಯೋಚಿತವಾದ ಲೇಖನ

  ReplyDelete
 3. ಸಂಕ್ರಾಂತಿಯಾ ಶುಭಾಶಯಗಳು ..............

  ReplyDelete
 4. ತುಂಬಾ ಚೆನ್ನಾಗಿದೆ... ಈ ಜಂಜಾಟದಲ್ಲಿ ನಮಗೆ ಇದಕ್ಕೆಲ್ಲಾ ಸಮಯವೇ ಇಲ್ಲ... :(

  ReplyDelete
 5. ನನಗೆ ಈಗಲೂ ಕೂಡ ಸಂಕ್ರಮಣ ಎಂದರೆ ನೆನಪಾಗುವದು,ಸಾಲಗಾವಿ ಜಾತ್ರೆ ,ನೀವು ಹೇಳಿದಂಥ ಸಂಕ್ರಾಂತಿ ಹಬ್ಬ ಮುಂದಗೋದ್ ದಲ್ಲ್ಲಿಈಗಲೂ ಆಗುತ್ತದೆ ,ಆದರೆ ಅದರ ಸಂಖೆ ತುಂಬಾ ಕಡಿಮೆ ಆಗಿದೆ ....ಆಗಲೇಬೇಕು ..ನೀವು ನಿಮ್ಮ ಅಜ್ಜ ಅಜ್ಜಿ ಅಥವಾ ನಿಮ್ಮ ತಂದೆ ತಾಯಿ ,ಹೇಳುವದನ್ನು ಕೆಳೀರಭಹುದು ,ನಮ್ ಟೈಮ್ ನಲ್ಲಿ ನಾವು ಹೀಗೆ ಮಾಡುತ್ತಿದ್ದೆವು ಗೊತ್ತ ಹಬ್ಬ ಅಂದರೆ,, ಅವರ ಹೇಳುವ ಪಟ್ಟಿ ಹಾಗೆ ಹೀಗೆ ಬೆಳೆಯುತ್ತ ಹೋಗುತ್ತದೆ ,ಅದು ಅವರ ಕಾಲದಿಂದ ನಿಮ್ಮ ಕಾಲದಲ್ಲಿ ಆದಂಥ ಬದಲಾವಣೆ ,,ಈಗ ನೀವು ಹೇಳುತ್ತಿರುವುದು ನಿಮ್ಮ ಕಾಲದಿಂದ ಈಗ ಆಗುತ್ತಿರುವ ಬದಲಾವಣೆ ....ಇಂಥಹ ಬದಲಾವಣೆ ಮುಂದೆಯೂ ಆಗುತ್ತದೆ ,ಇದು ಪ್ರಕ್ರತಿ ನೀಯಮವೊ ಅಥವಾ ನಾವು ಪಾಶ್ಯತರ ಕಡೆಗೆ ನಡೆದು ಹೋಗುತ್ತಿರಿವ ಸೂಚನೆಯೋ ನನಗೆ ಗೊತ್ತಿಲ್ಲ ......ನಿಮಗೂ ಸಂಕ್ರಮಣ ಹಬ್ಬದ ಶುಭಾಶಯಗಳು

  ReplyDelete
 6. ನೀವು ಹೇಳಿದಿರುವುದು ಅಕ್ಷರಶಃ ನಿಜ ...ಈಗ ಆ ಸಂಭ್ರಮ ಇಲ್ಲ ...ಹಬ್ಬಗಳು ಕ್ಯಾಲೆಂಡರ್ ಗಳಲ್ಲಿ ಮಾತ್ರ .ಅದರೂ ನೆನಪಿನ ಪಯಣ ಮಧುರವಾಗಿತ್ತು .

  ReplyDelete