ನಮ್ಮ ಭೂಮಿತಾಯಿ ಬಯಕೀ ಊಟ ಉಣಿಸ ಬೇಕ ಬಂದೈತಿ ಶೀಗಿ ಹುಣ್ಣಿಮಿ'' ಹೀಗೆಂದು ಅಪ್ಪಟ ಜನಪದಮಿಡಿತದ ಗೀತೆ ಬರೆದವರು ಆನಂದ ಕಂದರು..... ಭೂಮಿಯು ತನ್ನ ಗರ್ಭದಲ್ಲಿ ಅನ್ನ ಕುಮಾರನನ್ನು ಹೊತ್ತುಕೊಂಡು ಮೂಡುಗಾಳಿಗೆ ತೊನೆಯುತ್ತಿದ್ದರೆ, ಬಸುರಿ ಹೆಣ್ಣುಮಗಳು ಸೆರಗಿನಿಂದ ಬೆವರೊರೆಸಿಕೊಳ್ಳುತ್ತ ಉಸ್ಸಪ್ಪ ಅನ್ನುತ್ತಿದ್ದರೂ ಆಕೆಯ ಮನದ ಅವೇದ್ಯ ಸಂವೇದನೆಗಳು ಸುಖದ ಭಾವಗಳು ಅನಾವರಣಗೊಂಡಂತೆ ಅನಿಸುತ್ತದೆ. ದಸರೆಯ ನಂತರ ಬರುವ ಹುಣ್ಣಿಮೆಯೇ ಈ ಬಸುರಿ ಭೂಮಿತಾಯಿಗೆ ಮಡಿಲು ತುಂಬುವ ದಿನ ಅದೇ ಶೀಗಿ ಹುಣ್ಣಿಮೆ. ''ಹತ್ತಿಯ ಎಳಿಬೆಳಿ ಹಚ್ಚ ಹಸುರಿನ ಪತ್ತಲ ನೇಯ್ದಾವ ಎಳ್ಳುಪುಂಡಿ ಹೂ ಮಗ್ಗಿ ಹೆಣೆದಾ ಕಸೂತಿ ತೆಗೆದಾದ ಕುಸುಬಿ ಗೋದಿ ಸಸಿ ಬಸರಿಗೊಪ್ಪವಾಕುಪ್ಪಸ ಹೆಣದಾವ ಸುತ್ತನ ಬನದಾಗ ಹಕ್ಕಿ ಹಸೆಯ ಹಾಡ್ಯಾವ ಟೂವಿ ಟುವಿ'' ಇದು ಪ್ರಕೃತಿಮಾತೆ ತನ್ನ ಮಗಳಿಗೆ ಉಡಿ ತುಂಬುವ ಸಂಭ್ರಮಕ್ಕೆ ಅಣಿಯಾಗುವ ರೀತಿ ಇದಾದರೆ ಬಸುರಿ ಹುಡುಗಿಗೆ ಮಡಿಲು ತುಂಬುವಂತೆಯೇ ಜನಪದರು ಹಸಿರು ಸೀರೆ ಕುಪ್ಪಸತಂದು ಆಕೆಗೆ ಉಡಿಸಿ ನಂತರ ಅ ಸೀರೆಯನ್ನು ಮನೆ ಮಗಳಿಗೆ ಕೊಡುವ ಪದ್ದತಿ ಇದೆ. ಪಾಂಡವರ ಪೂಜೆ:- ಶಮೀ ವೃಕ್ಷದಲ್ಲಿ ಆಯುಧಗಳನ್ನು ಪಡೆದು ಯುದ್ಧಕ್ಕೆ ಸನ್ನದ್ಧರಾದ ಪಾಂಡವರನ್ನ ನೆನೆದು ಅವರ ಪ್ರತೀಕವಾಗಿ ಐದುಕಲ್ಲುಗಳನ್ನಿಟ್ಟು ಅವಕ್ಕೆ ಗಂಧ ಕುಂಕುಮ ಧೂಪ ದೀಪದೊಂದಿಗೆಪೂಜಿಸಿ. ಎಡೆ ತೋರಿಸಲಗುತ್ತದೆ. ಈ ಎಡೆಯನ್ನು ಪುರುಷರು ಯಾರೊಂದಿಗೂ ಮಾತನಾಡದೆ ಉಣುವ ಪದ್ದತಿ ಇದೆ. ಇಲ್ಲಿ ಇನ್ನೊಂದು ವಿಶೇಷ ಎಂದರೆ ಪಾಂಡವರರ ಪೂಜೆಯೊಂದಿಗೆ,ಕಳ್ಳಪೂಜೆ ಎಂಬುದೊಂದು ವಿಚಿತ್ರ ಆಚರಣೆ ಇದೆ ಕುಡುಗೋಲು ಒಂದಕ್ಕೆ ಪುಜೆ ಮಾಡಿ ಅದಕ್ಕೆ ತೋರಿಸಿದ ನೈವೇದ್ಯವನ್ನು ಅದೇ ಕುಡುಗೋಲಿನಿಂದ ಭೂಮಿಯನ್ನು ಅಗೆದು ಅದನ್ನು ಅಲ್ಲೇ ಮುಚ್ಚಬಿಡುತ್ತಾರೆ. ''ಮುಂಗಾರಿನ ನೆಲೆ ಹೊಂದೆಂನಿಟಿನ ಹಂದರ ಹಾಕಯ್ತೆ ಹೆಸರು ಹುರುಳಿ ಅಲಸಂದಿ ಅವರಿಬಳ್ಳಿ ತ್ಪಾರಣ ಬಿಗಿದೈತೆ ಹುಚ್ಚೆಳ್ಳಿನ ಹೊಲ ಹೂಗಳ ಅರೆಳಸಿ ಕುಚ್ಚನು ಕಟ್ಟೈತೆ ಉಡಿಯ ತುಂಬಾಲಕ ಮಾಗಿ ನಿಂತಾವ ನೋಡ ನವಣಿ ಸಾವಿ!'' ಇಷ್ಟು ಸಿಂಗಾರದ ನಡುವೆ ಕುಳಿತ ಭೂಮಿ ತಾಯಿಗೆ ವಿಧವಿಧದ ಅಡುಗೆಯನ್ನು ಮಾಡೀ ಬಡಿಸಿ ಬಯಕೀ ಊಟದ ಸಂಭ್ರಮವನ್ನು ಜನಪದರೂ ಅಸ್ಪಾದಿಸುತ್ತಾರೆ... ಹೀರಿಕಯಿ ಬದನಿಕಾಯಿ ಕುಂಳಕಾಯಿ ಮಡ್ಕಿ ಹೆಸ್ರುಕಾಳು ಕಡತಿ ಕಾಳುಗಳ ಪ್ರತ್ಯೇಕ ಪಲ್ಯ ಕುಚ್ಚದ ಕಾಯಿ, ಉಂಡ್ಡಡುಬು ಕಸುಬಿ ಹುಗ್ಗಿ ಗರಿಗೆ ಪುಂಡಿಪಲ್ಯೆ ಅಗಸೀ ಎಳ್ಳು ಕರೆಳ್ಳು ಶೇಂಗ ಪುಠಾಣಿ ಚಟ್ನಿಗಳು ರೊಟ್ಟಿ ಚಪಾತಿ ಕಟ್ಟಿನ ಸಾರು. ಶೇಂಗಾ ಹೋಳಿಗೆ,ಎಳ್ಳುಹೋಳಿಗೆ ಸುರಳಿಹೋಳಿಗೆ.....ಈ ಪಟ್ಟಿ ಮುಗಿಯುವಂಥದ್ದಲ್ಲ ಗರ್ಭಿಣಿಗೆ ಪೌಷ್ಟಿಕ ಮತ್ತು ನಾಲಿಗೆಯ ರುಚಿ ಹೆಚ್ಚಿಸುವ ಆಹಾರವನ್ನು ತಯಾರಿಸಿ, ಅದರೊಂದಿಗೆ, ಚಿಗಳಿ, ಉಪ್ಪಿನಕಾಯಿ, ಕರಿಂಡಿಯನ್ನು ಎಡೆ ಇಡುತ್ತಾರೆ. ಎಳೆ ಸವತೆ ಹೆಸುರಬೇಳೆ ಉಳ್ಳಾಗಡ್ಡಿಯ ಕೊಸಂಬರಿಯೊಂದಿಗೆ ಹೊಲದ ಮರದೊಂದರ ನೆರಳಿನಲ್ಲಿ ಕುಳಿತು ತೊನೆಯುವ ಭತ್ತದ ಹಾಲ್ತೆನೆಯನ್ನು ನೋಡುತ್ತ,ಉಣ್ಣುವ ಸುಖ ಉಂಡವನೇ ಬಲ್ಲ.... ಮುಂಗಾರಿನ ಆರಂಭದಿಂದಲೂ ಬೆವರನ್ನು ಕಾಳಿಯೊಂದಿಗೆ ಬಿತ್ತಿದ ರೈತನು ಫಸಲನ್ನು ನೋಡುತ್ತಾ, ಬಂದ ಬೆಳೆ ಕ್ಷೇಮವಾಗಿ ಮನೆಗೆ ಬರಲಿ ಎಂದು ಆಶಿಸಿ ಆ ತಾಯಿಯನ್ನು ಬೇಡುವಾಗ ಚೊಚ್ಚಲ ಬಸುರಿಯ ಬಾಣಂತನ ಸುಗಮವಾಗಿ ಮುಗಿದು ಕ್ಷೇಮಕರವಾಗಿ ಗಂಡನ ಮನೆಗೆ ಸೇರಿದರೆ ಸಾಕು. ಎಂದು ದೇವರಲ್ಲಿ ಹರಕೆಯಲ್ಲಿ ಕಟ್ಟಿ ಹಾಕುವ ಬಸುರಿಯ ತಾಯಿಯನ್ನು ಕಂಡಂತೆ ಆಗುವುದಂತೂ ನಿಜ.... |
Thursday, October 13, 2011
ಬಂದೈತಿ ಶೀಗಿ ಹುಣ್ನಿಮಿ........

Subscribe to:
Post Comments (Atom)
ನಾವು ಪ್ರಕೃತಿ ಪ್ರೀಯರು..
ReplyDeleteಪ್ರಕೃತಿಯನ್ನು ಸಹಜವಾಗಿ ಪೂಜಿಸುತ್ತೇವೆ...
ಅದಕ್ಕೊಂದು ನೆಪಗಳು ಈ ಹಬ್ಬಗಳು...
ನಮ್ಮೂರಲ್ಲಿ ಈ ಹಬ್ಬಕ್ಕೆ "ಭೂಮಿ ಹುಣ್ಣಿಮೆ" ಅಂತ ಆಚರಿಸ್ತಾರೆ..
ಅಂದು ಭೂಮಿಯನ್ನು ಅಗೆಯೋದು ಏನೂ ಮಾಡೊಲ್ಲ..
ಉಳಿದಂತೆ ಗೋವೆ ಕಾಯಿ ಕಡುಬು...
ಹಳ್ಳಿ ಹಾಡುಗಳು.. ಸಿಹಿಯೂಟ ಯಥೇಚ್ಛ... !!
ನೀವು ಬರೆದ ಹಾಡುಗಳನ್ನು ನೀವೊಮ್ಮೆ ಹಾಡಿರಲ್ಲ...
ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು..
ಮೇಡಂ;ನಿಮ್ಮ ಬ್ಲಾಗ್ ಫಾಲೋಯರ್ ಹೇಗೆ ಆಗ ಬೇಕೋ ತಿಳಿಯುತ್ತಿಲ್ಲಾ.ನನ್ನ ಬ್ಲಾಗಿನಲ್ಲಿ ನಿಮ್ಮ ಕಾಮೆಂಟಿಗೆ ಧನ್ಯವಾದಗಳು.ನೀವೂ ನನ್ನ ಬ್ಲಾಗಿನ ಫಾಲೋಯರ್ ಆಗಿ.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.
ReplyDelete