Sunday, January 21, 2018

ಮೊಗ್ಗಿನ ಜಡೆ ಇಂದಿರಾ

ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡಿ ಮೆಚ್ಚಿದ್ದಾಯ್ತು , ಹಿರಿಯರು ಮದುವೆಯ ಮಾತುಕತೆ ಶಾಸ್ತ್ರವನ್ನೂ ಪೂರೈಸಿದ್ದು ಆಯಿತು , ಬದುಕಿನ ಹೊಸ ಆರಂಭದ ಮುನ್ನುಡಿ ಬರೆಯುವ ದಿನ  ಮದುವೆಯ ದಿನ. ಈ ಒಂದು ದಿನಕ್ಕೆ ಬೇಕಾಗುವ ಪೂರ್ವತಯಾರಿ ಮಾಡಿದವರಿಗೇ ಗೊತ್ತು, ಛತ್ರ ದಿಂದ ಹಿಡಿದು ಅಡುಗೆಯವರ ತನಕ , ವಾಲಗದವರಿಂದ ಹಿಡಿದು ಪುರೋಹಿತರತನಕ  ಎಲ್ಲವನ್ನ ನಿಭಾಯಿಸುವಾಗ ಮನಸಲ್ಲಿರುವುದು ಅದೊಂದೇ ಭಾವ ‘’ಮದುವೆ ಒಂದು ಚನ್ನಾಗಿ ಆಗಿಬಿಟ್ಟರೆ ಅಷ್ಟೇ ಸಾಕು’’
ಅಪ್ಪ ಅಮ್ಮ ಮದುವೆಯ ಇತರ ಗಡಿಬಿಡಿಯಲ್ಲಿ ಮಗ್ನರಾಗಿರುವಾಗ ಮದುಮಗಳ ಕಸಿವಿಸಿ ಕೇಳಬೇಕೆ ? ಮದುವೆಯ ಕೇಂದ್ರ ಬಿಂದುವೇ ಆಕೆ , ಆಕೆ ಚನ್ನಾಗಿ ಕಾಣಬೇಕು , ಇನ್ನು ಶುರು ಬ್ಯೂಟಿಶಿಯನ್ ಹುಡುಕಾಟ, ಅತ್ತೆ ಮಗಳ ಮದುವೆಗೆ ಬಂದವಳನ್ನ ಕರೆಯೋದೇ? ದೊಡ್ಡಮ್ಮನ ಮಗಳ ಮದುವೆಗೆ ಬಂದಿದ್ದಳಲ್ಲ ಅವಳನ್ನ ಕರೆಯೋದೇ? ಹಾಗೊಮ್ಮೆ ಯಾರನ್ನ ಕರೆಯೋದು ಅನ್ನೋದು ನಿರ್ದಾರವಾದರೂ ಬಜೆಟ್ ಭೂತ ದಿಗ್ಗನೆ ಎದುರಿಗೆಬಂದು ನಿಲ್ಲುತ್ತದೆ ,
ಇತ್ತೀಚಿನ ದಿನಗಳಲ್ಲಿ ಮದುಮಗಳ ಸಿಂಗಾರಕ್ಕೆ ಹತ್ತು ಸಾವಿರದಿಂದ  ಒಂದು ಲಕ್ಷದವರೆಗೂ ಚಾರ್ಜ್ ಮಾಡುವ ಬ್ಯೂಟಿಶಿಯನ್ ಇದ್ದಾರೆ , ತರಹೇವಾರಿ ಪ್ಯಾಕೇಜ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಆದರೆ ಕೆಲವೊಂದು ಸಮುದಾಯದ ವಿಶಿಷ್ಟ ಮದುವೆ ಧಿರಿಸು ಮತ್ತು ವಧುವನ್ನು ಸಿಂಗರಿಸುವ ರೀತಿ ಎಲ್ಲ ಬ್ಯೂಟಿಶಿಯನ್ ಗಳಿಗೆ ತಿಳಿದಿರುವುದಿಲ್ಲ, ಅಂಥವರನ್ನೇ ಹುಡುಕಿ ಅವರು ಹೇಳಿದಷ್ಟು ಮೊತ್ತವನ್ನು ಕೊಟ್ಟು ಕರೆಯುವುದು ಅನಿವಾರ್ಯತೆಯೂ ಹೌದು , ಮೊದಲೆಲ್ಲ ಈ ಮದುಮಗಳನ್ನು ಸಿಂಗರಿಸುವ ಕೆಲಸ ಅವಳದೇ ಸಂಬಂಧಿಗಳಲ್ಲಿ ಯಾರೋ ಒಬ್ಬರು ಮಾಡಿ ಬಿಡುತ್ತಿದ್ದರು, ಆದರೆ ಈಗ ದಿನಮಾನ ಹಾಗಿಲ್ಲ ಹಣ ಕೊಟ್ಟರೂ ನೀರಿಕ್ಷಿಸಿದ ಸೇವೆ ಲಬ್ಯವಾಗುವುದು ಅಪರೂಪ.
ಇಂಥಹ ವ್ಯಾವಹಾರಿಕ ಪ್ರಪಂಚದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ ೨೫ ವರುಷಗಳ ಕಾಲ ಮದುವೆ ಹೆಣ್ಣನ್ನು ಸಿಂಗರಿಸಿ ಆಕೆಯ ಆ ವಿಶೇಷ ದಿನಕ್ಕೆ ಮೆರಗನ್ನು ತರುವ ಕಾರ್ಯವನ್ನು ತಮ್ಮ ಜವಾಬ್ದಾರಿಎಂಬಂತೆ ಮಾಡಿ ಎಲೆಮರೆಯಲ್ಲೇ ಮಾಗಿದ ಹಿರಿಯ ಜೀವದ ಪರಿಚಯ ಇಲ್ಲಿದೆ .
ಶ್ರೀಮತಿ ಇಂದಿರಾ ನರಸಿಂಹ ಶಾನಭಾಗ್ ಉಡುಪಿ ಜಿಲ್ಹೆಯ ಸಾಲಿಗ್ರಾಮದವರು. ಪ್ರಸ್ತುತ ಕೋಟ ಗ್ರಾಮ ನಿವಾಸಿ.
ತಮ್ಮ  ಹದಿನಾಲ್ಕನೇ ವಯಸ್ಸಿಗೆ ಹಸೆಮಣೆ ಏರಿದ ಇಂದಿರಾ ಅವರ ಅನುಭವಗಳನ್ನು ಅವರ ಮಾತಲ್ಲೇ ಕೇಳಿ,
‘’ ಅದು ೧೯೫೫ ರ ಸಮಯ , ಆಗಿನ ಮದುವೆಗಳು ಈಗಿನಂಥಲ್ಲ ಅದರ ಚಂದವೇ ಬೇರೆ , ಮದುವೆಯೆಂದರೆ ಸುಮ್ಮನೆಯೇ ? ಅದರ ಸುತ್ತ ಇರುವ ತಯಾರಿ ಸಂಭ್ರಮ, ಊಟತಿಂಡಿಯ ತಯಾರಿಗಳು ,ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡು ನಾಲ್ಕೈದು ದಿನದ ಮದುವೆಗಳು, ಬಂದವರಿಗೆ ಬೆಲ್ಲದ ನೀರು ಬಾಳೆಹಣ್ಣು , ವೀಳ್ಯ ಕೊಟ್ಟು ಉಪಚರಿಸಿದರೆ ಅದು ದೊಡ್ಡ ಮರ್ಯಾದೆ ಕೊಟ್ಟಂತೆ . ಬಂದವರು ಕುಳಿತುಕೊಳ್ಳಲು ಈಗಿನಂತೆ ತರಹೇವಾರಿ ಖುರ್ಚಿ ಗಳಿರಲಿಲ್ಲ ಒಣಹುಲ್ಲು ಹಾಸಿನಮೇಲೆ ಗೋಣಿಚೀಲ ಅದರ ಮೇಲೊಂದು ಪಂಚೆ ಹಾಸಿದರೆ ಅದೇ ಸುಖಾಸನ. ಅದೆಷ್ಟೇ ಅನುಕೂಲಸ್ತರಾಗಿದ್ದರೂ ಮದುವೆಗೆ ಗಂಜಿ ಊಟ ಹಾಕಿಸಲೇಬೇಕು. ವಧುವರರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ಕರೆತಂದರೆ ಅದು ವಿಜೃಂಭಣೆಯ ಮದುವೆ ,
ಇದೆಲ್ಲದರ ನಡುವೆ ವಧುವನ್ನು ಸಿಂಗರಿಸುವ ಗಮನ ಯಾರಿಗಿರುತ್ತಿತ್ತು , ಚಿಕ್ಕ ಪ್ರಾಯದ ಹುಡುಗಿಯರಿಗೆ ಸೀರೆ ಸುತ್ತಿ ನಿಲ್ಲಿಸುವುದೇ ದೊಡ್ಡ ಕೆಲಸವಾಗಿತ್ತೇನೋ.! ನನ್ನ ಮದುವೆಯಾದಾಗ ನನಗೆ ಹದಿನಾಲ್ಕು ವರ್ಷ, ಎಲ್ಲರಿಗೂ  ಗಡಿಬಿಡಿ, ಅವರಲ್ಲೇ ಒಬ್ಬರು ಅದ್ಹೇಗೋ ನನಗೆ ಸೀರೆ ಸುತ್ತಿ, ಮಂಟಪದಲ್ಲಿ ನಿಲ್ಲಿಸಿದ್ದರು. ಆಗ, ಆ ನಂತರ ಅದೆಷ್ಟೋ ಸಲ ಅನ್ನಿಸುತ್ತಿತ್ತು ಮದುವೆ ಬದುಕಿನ ಅತಿ ಸುಂದರ ಗಳಿಗೆ ಹುಡುಗಿಯೊಬ್ಬಳು  ಮದುಮಗಳರೂಪದಲ್ಲಿ ರೂಪಂತರವಾಗುವ ಆ ಗಳಿಗೆ, ಯಾವುದೇ ತಯಾರಿ ಇಲ್ಲದೆ  ಅದ್ಹೇಗೆ  ಮುಗಿಸಿಬಿಡುವುದು? ಈ ಸುಸಂದರ್ಭವನ್ನು ಅವಳನ್ನು ಇನ್ನು ಚಂದ ಮಾಡಿ ಆ ದಿನವನ್ನು ಇನ್ನೂ ವಿಶೇಷ ಮಾಡಬೇಕು , ನೆನಪಲ್ಲಿರುವಂತೆ ಮಾಡಬೇಕು ಎಂಬ ಕನಸಿನ ಬೀಜ ನನ್ನ ಮನದಲಿ ಮೊಳೆಯಿತು.
ಹದಿನಾಲ್ಕಕ್ಕೆ ಮದುವೆ ಹದಿನೈದು ಮುಗಿಯುವ ಮುನ್ನ ಮಗು ಹುಟ್ಟಿದ ಸಂಬ್ರಮ ಜೊತೆಗೆ ನನ್ನ ಕನಸುಗಳು ಆಗಾಗ ನನ್ನ ಕೈ ಎಳೆದು ಕರೆಯುತ್ತಲೇ ಇದ್ದವು, ಆದರೆ ಯಾರಲ್ಲೂ ಹೇಳುವ ಧೈರ್ಯ ಬರಲಿಲ್ಲ. ಅದೆಷ್ಟೋ ವರುಷಗಳ ನಂತರ ಪತಿಯೊಂದಿಗೆ ಇದನ್ನು ಹಂಚಿಕೊಂಡಾಗ ಅವರು ಸಂತಸದಿಂದ ಒಪ್ಪಿಕೊಂಡು ಪ್ರೋತ್ಸಾಹಿಸಿದರು ಆದರೆ ಈ ಕೆಲಸವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕು ಅನ್ನುವುದು ಅವರ ಆಶಯವಾಗಿತ್ತು , ಇಷ್ಟರಲ್ಲಿ  ಮಕ್ಕಳ ಮದುವೆಯೂ ಆಗಿತ್ತು, ಮಕ್ಕಳು ಸೊಸೆಯಂದಿರು ಕೂಡ ನನ್ನ ಈ ಬಹುದಿನದ ಆಸೆಗೆ ಒತ್ತಾಸೆ ಕೊಟ್ಟು ಸಹಕರಿಸಿದರು.  
ಹಾಗೆ ಶುರುವಾಯಿತು ನನ್ನ ಈ ನನಸಿನ ಪಯಣ,
ತಮ್ಮ ಮದರಾಸಿನಿಂದ ಆಭರಣದ ಸೆಟ್ಗಳನ್ನ ಒಳ್ಳೆಯ ಚವರಿಗಳನ್ನು ತಂದು ಉಡುಗೊರೆಯಾಗಿತ್ತು ನನ್ನ ಕೆಲಸಕ್ಕೆ ಮತ್ತಷ್ಟು ಸಕಾರಾತ್ಮಕ ಬೆಂಬಲ ನೀಡಿದ , ಸಾರಸ್ವತ ಸಮಾಜದ ಮದುವೆಗಳಲ್ಲಿ  ವಧುವಿಗೆ ಕಚ್ಚೆ ಸೀರೆ ಉಡಿಸುವ ಪದ್ಧತಿ ಇದೆ ಜೊತೆಗೆ ಧಾರೆಯ ಸಮಯದಲ್ಲಿ ಸೆರಗಿನ ಬದಲು ಬಿಳಿಯ ಪಟ್ಟಿಯನ್ನು ಬಳಸುತ್ತಾರೆ ಈ ಶೈಲಿಯ ಸೀರೆ ಉಡಿಸುವುದು ಎಲ್ಲರಿಗೂ ಬರುತ್ತಿರಲಿಲ್ಲ , ನನ್ನ ತಣಿಯದ ಕುತೂಹಲ ಆಸಕ್ತಿ ಯಿಂದ ನಾನು ಈ ವಿಧಾನವನ್ನು ಕರಗತ ಮಾಡಿಕೊಂಡಿದ್ದೆ , ಜೊತೆಗೆ ಮಂಗಳೂರು ಮಲ್ಲಿಗೆಯ ಜಡೆ ಹಾಕುವುದು ನನಗೆ ಸಿದ್ದಿಸಿತ್ತು , ಅದರೊಂದಿಗೆ ಸಿಂಗಾರ ಮಾಡಲು, ಬೇಕಾಗುವ ಎಲ್ಲ ಪೂರಕ ತಯಾರಿ, ಕೌಶಲ್ಯವು ಇತ್ತು , ಅದಕ್ಕೆ ನನ್ನಲ್ಲಿ ಆತ್ಮ ವಿಶ್ವಾಸಕ್ಕೆ ಕೊರತೆ ಇರಲಿಲ್ಲ ,  
ಒಳ್ಳೆಯ ಉದ್ದೇಶದಿಂದ ಶುರುಮಾಡಿದ ಕೆಲಸಕ್ಕೆ ದೈವಬಲ ಸಿಗದೇ ಇರುತ್ತದೆಯೇ.?ದಿನ ಕಳೆದಂತೆ ಸಿಂಗರಿಸುವ ಕೈಂಕರ್ಯಕ್ಕೆ ಕರೆಯುವವರ ಸಂಖ್ಯೆ ಹೆಚ್ಚಿತು ,   ಕೆಲವೊಮ್ಮೆ ಒಂದೇ ದಿನ ಎರಡೆರಡು ಮದುವೆಗೆ ನಿಮಂತ್ರಣ ಬಂದಿದ್ದೂ ಇದೆ ಹಾಗಾದಾಗ ಇಲ್ಲ ಅನ್ನಲು ಮನಸು ಬಾರದೇ ಮಗಳು, ಸೊಸೆ ಇಬ್ಬರಿಗೂ ತರಬೇತಿ ಕೊಟ್ಟು ಅವರನ್ನು ಕಳಿಸುತ್ತಿದ್ದೆ. ವರುಷಕ್ಕೊಮ್ಮೆ ಮನೆಯಲ್ಲೊಂದು ಚವಲ , ಉಪನಯನ, ಮದುವೆ ಇದ್ದೇ ಇರುತ್ತಿತ್ತು ಆಗಂತೂ ನನಗೆ ಇನ್ನು ಖುಷಿ.
ಕೆಲವೊಮ್ಮೆ ದೂರದೂರಿನಲ್ಲಿ ಮದುವೆಗಳು ಇರುತ್ತಿದ್ದವು. ಮೈಸೂರ , ಗೋವ , ಮುಂಬೈ ಬೆಂಗಳೂರು ಎಲ್ಲ ಕಡೆ ಮನೆಯ  ಜವಾಬ್ದಾರಿಯ ನಡುವೆಯೂ  ಆ ಮದುವೆಗೆ ಹೋಗಿ ನನ್ನ ಪಾಲಿಗೆ ಬಂದ ಸೇವಾಭಾಗ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೆ .

ಆಸಕ್ತಿ ಇರುವ ಹಲವರಿಗೆ ನಾನು ತರಬೇತಿ ಕೊಟ್ಟಿದ್ದೇನೆ . ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಹೊಸ ವಿಧಾನಗಳನ್ನು ಕಲಿಯಲು ನಾನು ಸದಾ ಉತ್ಸಾಹ ತೋರುತ್ತಿದ್ದೆ, ಕಲಿಕೆಗೆ ವಯಸ್ಸಿನ ಮಿತಿ ಇಲ್ಲವಲ್ಲ!! ಈ ಇಪ್ಪತೈದು ವರುಷಗಳ
(೧೯೮೩-೨೦೦೯)ಅನುಭವದಲ್ಲಿ  ನನ್ನ ಸಂಗ್ರಹದಿಂದ ಕಳೆದುಹೋದ ವಸ್ತುಗಳ ಪಟ್ಟಿ ದೊಡ್ಡದಿದೇ ಆದರೆ ಪಡೆದ ಆತ್ಮ ಸಂತೃಪ್ತಿಯಮುಂದೆ ಅದು ತೃಣ ಸಮಾನ.
ನಮ್ಮಲ್ಲಿ ಹಿರಿಯರು ಯಾವಾಗಲು ಹೇಳುತ್ತಿದ್ದರು ‘’ವಧುವರರು ಸಾಕ್ಷಾತ್ ಲಕ್ಷ್ಮಿ ನಾರಾಯಣನ ರೂಪ’’ ಎಂದು ಅದನ್ನೇ ನಾನು ಕೂಡ  ನಂಬುತ್ತೇನೆ ಶ್ರದ್ಧೆ ನಿಷ್ಠೆಯಿಂದ ನನ್ನ ಈ ಸೇವೆಯನ್ನು ಭಗವಂತನ ಕೆಲಸವೆಂದೇ ಮಾಡಿದ್ದೇನೆ ಅದಕ್ಕಿಂತ ಹೆಚ್ಚು ಏನು ಬೇಕು?
ಹೀಗೆಂದು ಕೇಳುವ ಇಂದಿರಾ ಅವರಿಗೆ ೭೫ ರ ಹರೆಯ , ಈಗಲೂ ಅವರು ಉತ್ಸಾಹದ ಬುಗ್ಗೆ , ಕಾದಂಬರಿಗಳನ್ನು ಓದುವುದು ಅವರಿಗೆ ಅಚ್ಚು ಮೆಚ್ಚು, ತಾವು ಓದಿದ್ದನ್ನ ಕಣ್ಣಿಗೆ ಕಟ್ಟುವಂತೆ ಇತರರಿಗೆ ಹೇಳುವ ಅಪ್ರತಿಮ ಅಭಿವ್ಯಕ್ತಿ  ಇವರಲ್ಲಿದೆ , ಕಲಾತ್ಮಕವಾಗಿ ಹೂಮಾಲೆ ಕಟ್ಟುವುದು , ಸಾಂಪ್ರದಾಯಿಕ ಅಡುಗೆ ಮಾಡುವುದು ಇವರ ಹವ್ಯಾಸ.
ಅದಲ್ಲದೆ ಹಲವು ಮರೆತೇ ಹೋದವು ಅನ್ನುವ ಜನಪದ ಕಥನ ಗೀತೆಗಳು ಇವರ ಸ್ಮ್ರುತಿಯಲ್ಲಿವೆ.  ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಅನುಭವಿಸಿ ಪ್ರೀತಿಯಿಂದ ಮಾಡುವುದು ಇವರ ಹೆಗ್ಗಳಿಕೆ . ಇಂಥಹ ಅಪರೂಪದ ಮನೋಭಾವದ ವ್ಯಕ್ತಿತ್ವ ಕಾಣಸಿಗುವುದು ವಿರಳ

No comments:

Post a Comment