Tuesday, December 17, 2019

ಕೇಳು,



ನನಗೆ ಕನಸ ಮಾರಲು ಬರಬೇಡ,
ನಿನಗೆ ಬಿಟ್ಟಿಯಾಗಿ ಕೊಡುವಷ್ಟು ರಾಶಿ ಕನಸಿವೆ ನನ್ನ ಹತ್ತಿರ
ಬೇಕೆಂದರೆ ಹೇಳು ಕಳಿಸಿ ಕೊಡುವೆ||

ನನಗೆ ಒಲವ ಮಾರಲು ಬರಬೇಡ,
ಒಲವಒರತೆಯಲೇ ಹಿತ್ತಲ ಮಲ್ಲಿಗೆ ಅರಳಿವೆ,
ಬೇಕಿದ್ದರೆ ಹೇಳು 
ದಂಡೆ ಹೆಣೆದು ಕಳಿಸುವೆ||

ನನಗೆ ಅನ್ನದ ಆಮಿಷ ಒಡ್ಡಬೇಡ,
ಬದುಕಬುತ್ತಿ ಹದವಾಗಿ ಕಲಸಿ ,
ಹಸಿದವರಿಗೆ ಉಣಬಡಿಸಿದ್ದೇನೆ, ಬೇಕೆಂದರೆ ಹೇಳು 
ಕೈತುತ್ತು ಕೊಡುವೆ||

ನನಗೆ ನೆರಳ ಕೊಡುವ ಮಾತಾಡಬೇಡ,
ಹೊಂಗೆಯ ತಂಪಲ್ಲೆ ಗುಡಿಸಲ ಕಟ್ಟಿದ್ದೇನೆ,
ನೆರಳ ಮಾತಾಡಿ ದಣಿವಾದರೆ ಹೇಳು , 
ಚಾಪೆ ಹಾಸಿ ಲಾಲಿಯೂ ಹಾಡುವೆ||

ನನಗೆ ನಗುವ ಹಂಚಲು ಬರಬೇಡ,
ಬತ್ತದ ಚೈತನ್ಯವನು ಬಳುವಳಿಯಾಗಿ ಪಡೆದಿದ್ದೇನೆ,
ಬೇಕಾದರೆ ಹೇಳು ಕೊಡುವೆ
ನಿನಗೂ ಒಂದುಷ್ಟು ನಗುವ ಸಾಲ,ಬಡ್ಡಿಯಿಲ್ಲದೆ||

ನನಗೆ ಬದುಕ ಪಾಠ ಹೇಳಿಕೊಡಲು ಬರಬೇಡ,
ನಾನೇ ಕಲಿಯುತ್ತೇನೆ|
ಬದುಕು ಕಲಿಸುತ್ತದೆ, ಏಳುತ್ತೇನೆ, 
ಬೀಳುತ್ತೇನೆ ಮತ್ತೆ ಕಲಿಯುತ್ತೇನೆ, ಅವರರವರ ಬದುಕು ,ಅವರವರ ಪಾತ್ರ 
ಅವರಿಗೇ ಬಿಟ್ಟು  ಬಿಡು,

ಬೆಳಯಲು ಬಿಡು, ಬೆಳಗಲು ಬಿಡು.

No comments:

Post a Comment