Tuesday, December 17, 2019

ಕನಸುಗಳು,



 ಕನಸುಗಳು
ಬೀಳುತ್ತವೆ ನಿದ್ದೆಯಲ್ಲಿದ್ದಾಗ

ಎದ್ದು ಕುಳಿತಾಗ 
ಕದ್ದು ಓಡುತ್ತವೆ
ಗಾಳಿಗೆ ಎಲ್ಲೆಂದರಲ್ಲಿ 
ಹರಿದಾಡುವ ಬೂರುಗದ ಅರಳೆಯಂತೆ.

ಕನಸುಗಳು ಹಗುರ,
ನವಿರು
ಮುಟ್ಟ ಹೋದರೆ ಕಮರುತ್ತವೆ
ಹರಡಿ ಹದಗೆಡುತ್ತವೆ ಮನೆಯಂಗಳದ ರಂಗೋಲಿಯ ಹಾಗೆ,



ಕನಸುಗಳು..
ಒಳ್ಳೆಯವು ,ಕೆಟ್ಟವು , ಅನಿಷ್ಟ
ಒಂದಷ್ಟು ದುಷ್ಟ 

ಕನಸು
ಕೆಲವು ನನ್ನವು ಕೆಲವು ಅವನವು
ಕೆಲವು "ನಮ್ಮವು" ಎನ್ನುವ ಭ್ರಮೆ ಹುಟ್ಟಿಸುವ ಮಾಯಾಮೃಗ,
ಆಗ ಇತ್ತು ಈಗ ಇಲ್ಲ.

ಕನಸುಗಳು
ಇವನ ತಕ್ಕೆಯಲ್ಲಿ ಮಲಗಿ ಗಾಢ ನಿದ್ರೆಯಲ್ಲಿರುವಾಗ, 
ಅವನ ರಂಗು ರಂಗಿನ ಚಿತ್ರ ತೊರಿಸುವ ವ್ಯಭಿಚಾರಿ

ಕನಸುಗಳು 
ಬರುವುದಾದರೂ ಏಕೆ?
ಏಕತಾರಿಯ ಒಂಟಿ ನಾದದಂತೆ

ಕನಸುಗಳು
ಕಣ್ಜೀರಿಗೆ ಹುಳದಂತೆ,
ನಿಸ್ಸಾರ ಬದುಕಿಗೆ ಜೀರಂಗಿ ಮೆರಗು ಕೊಡುವ ಜೀವನ್ಮುಖಿ ಕಿರಣದಂತೆ.
ಆದರೂ 
ಕನಸುಗಳು 
ನನಗಿಷ್ಟ 

ಅಲ್ಲಿ ನೀನು ಪೂರ್ತಿ ನನ್ನವನು.

No comments:

Post a Comment