Wednesday, June 24, 2020

ಪಯಣ

ಚಿತ್ರ -ಮೀರಾ ವಿನಯ್

ಪಯಣ

ಕಾಯುವುದಿಲ್ಲ ಸಮಯ 
ಕಾಯುತ್ತೇನೆ ನಾನು, 

ಬಿಳ್ಕೊಡುವ ಮುನ್ನವೇ
ಮತ್ತೆ ಸಿಗುವ ಕಾತರ , ಆತುರ

ನಾಲ್ಕು ಗಾಲಿಗಳು ಇನ್ನೊಂದೂ ಸುತ್ತು 
ತಿರುಗಿಲ್ಲ, 
ನಾಲ್ಕು ಯುಗಕ್ಕಿಂತ  ದೀರ್ಘ
 ಈ ಚಣಗಳು

ನಿನ್ನ ಕಣ್ಣನ್ನು ನೋಡಬೇಕೆಂದೇ ಹಣಕಿದೆ
ಹಿಂದಿನ ಗಾಜಿಗೆಲ್ಲ ಮಂಜು
ನಿನ್ನ ಕಣ್ಣೀರ ಊಗಿಯೇ ಇರಬೇಕು,

ಸರಿ ಹೊರಟು ಬಿಡು, 
ಮತ್ತೆ ನಿಲ್ಲಬೇಡ, 
ಈಗ ನೀ ಹೋದರೆ ತಾನೇ ಮತ್ತೆ ನಾವು ಸಿಗುವ 
ಲೆಕ್ಕ ಶುರುವಾಗುವುದು, 

ಮತ್ತೆ ಹಾಗೆ ಸಿಗೋಣ , 
ಅಪರಿಚಿತರಂತೆ, 
 ಅದ್ಯಾವುದೋ ಗೊತ್ತಿರದ ಓಣಿಯ ತಿರುವಿನಲ್ಲಿ.

ಮತ್ತೆ ನಗೋಣ , ಕೈ ಕೈ ಹಿಡಿದು 
ಕಳೆದು ಹೋಗೋಣ, 
ಮತ್ತೊಮ್ಮೆ ನೀ ಹೊರಟು ನಿಲ್ಲುವ ಮುನ್ನ,
ಈ ಬಾರಿ ಉಳಿದು ಹೋದ ಮಾತು, ಕಸಿವಿಸಿ ಕನವರಿಗೆ 
ಹಳದಿ ಹಾಳೆಯಲ್ಲಿ ಬರೆದು , ಒಣಗಿದ ಗುಲ್ಮೊಹರ್ ಅಂಟಿಸಿ 
ಸಂಚಿಯಲ್ಲಿ ತುಂಬಿ ಕೊಡುವೆ, 

ಈಗ ಹೊರಟು ಬಿಡು,
ಮತ್ತೆ ಸಿಗುವ

1 comment:

  1. ಈ ವರ್ಷದ ಬ್ಲಾಗ್ ಶುರು! ಬರೆಯುತ್ತಿರಿ... ಸತತವಾಗಿ.

    ReplyDelete