Wednesday, June 24, 2020

ಖಿನ್ನತೆ


ಹೇಗಾದರೂ ಮನಸು ಬಂದೀತು

ಅನ್ನುತ್ತೀರಿ ನೀವು,

ಹಾಗೆ ಉಸಿರಾಡುವ ಇಡೀ ಜೀವವನ್ನ 

ಒಂದು ಯಕಃಶಿತ್ ಹಗ್ಗದ ಸರಗಂಟಿಗೆ 

ತೂಗಿಬಿಡುವುದು.. 


ಕಷ್ಟವಿದೆ, 

ಅನುಭವಿಸಿದವರಿಗಷ್ಟೇ ಗೊತ್ತು..

ಖಿನ್ನತೆಯನ್ನ ನಿಭಾಯಿಸಿ ಅದರೊಟ್ಟಿಗೆ ಬದುಕುವುದು. 

ಅದೇ ಬದುಕಾಗುವುದು.


ಮಲಗಿದರೆ ಏಳಲು ಮನಸಾಗದು.. 

ಮಲಗಬೇಕೆಂದರೆ ನಿದ್ದೆಯೇಬರದು

ಕೆಲವೊಮ್ಮೆ ಹುಳುವಿನಂತೆ 

ಸುತ್ತಲೊಂದು ಕೋಶಕಟ್ಟಿಕೊಂಡು 

ಅದರಲ್ಲಿ ಕಾಲು ತೊಡೆಗೆ ಮುಖ ಆನಿಸಿಕೊಂಡು

ಸುಮ್ಮನೆ ಇದ್ದು ಬಿಡಬೇಕು ಅನಿಸುತ್ತದೆ 

ಯಾರಿಗೂ ಕಾಣದೆ. ಹೊರಗೂ ಬಾರದೆ,


ಕಷ್ಟವಿದೆ,

ಸಾವಿರಾರು ಅಂಕಿಗಳು

ಐದರ ಜೋಡು ಸಂಖ್ಯೆಗಳು. 

ನೂರಾರು ರಿಂಗ್ ಟೋನಗಳು,

ಒಂದೇ ಒಂದು ಲಯ 

ನನಗಾಗಿ ಮಿಡಿಯುವುದಿಲ್ಲ, 

ಒಂದೇ ಒಂದು ದನಿ ನನ್ನ 

ಕೇಳುವುದಿಲ್ಲ, 

ಹೇಗಿದ್ದಿ ? ಏನನಿಸುತ್ತದೆ ?

ಹಾಗ್ಯಾಕೆ ಅನಿಸುತ್ತದೆ? 

ನಾನಿಲ್ಲವೇ ನಿನಗೆ ಎಂದು 

ಯಾರೂ ಹೇಳುವುದಿಲ್ಲ ಒಂದೊಮ್ಮೆಯೂ,


ಕಷ್ಟವಿದೆ,

ನಾನರಿಗೂ ಬೇಡದ ಜೀವ

ಇದ್ದೇನುಮಾಡಲಿ? 

ಎಂಬ ಹುಕಿ ...

ಸುಲಭವಲ್ಲ ಖಿನ್ನನಾಗಿಯೂ 

ನಗುವಿನ ಮುಖವಾಡ ಹೊತ್ತು

ಈ ಸ್ವಾರ್ಥಿ ಜಗದಲ್ಲಿ 

ನಮ್ಮಕಾಲು ಠರಾಯಿಸುವಿದು.


ಕಷ್ಟವಿದೆ ಖಿನ್ನತೆಯೊಂದಿಗೆ

ಬದುಕುವುದು..

ಆದರೆ…..

ಬದುಕಿಗೆ ವಿದಾಯ ಹೇಳಿ ಹೋಗುವಷ್ಟಲ್ಲ!!!







1 comment: