Wednesday, June 24, 2020

ಹುಡುಕಾಟ


ಸಿಟ್ಟು ಬಂದಿತ್ತು 
ಅದ್ಯಾರದೋ ಮೇಲೆ 
ಕೂಗುತ್ತಿದ್ದೆ ಚೀರುತ್ತಿದ್ದೆ 
ಅದೇನೋ ಸಿಟ್ಟು ಅದೇನೋ ಅಸಹನೆ 
ನನ್ನ ಆರ್ಭಟ ,ಆಟಾಟೋಪ ನೋಡಿ 
ಅಪ್ಪ ಹೇಳಿದರೊಂದು ಬುದ್ಧಿ ಮಾತ,
ಮಗಳೇ 
ಅವರಿವರು ನಿನಗಿಷ್ಟ ಬಂದಂತೆ ಇರಬೇಕೆಂದರೆ,
 ಅದು ಆಗದ ಮಾತು 
ಏನಿವೆಯೋ ಅವರ ಕಷ್ಟಗಳು , 
ಹಂಚಿಕೊಳ್ಳಲಾಗದ ದುಃಖ ದುಮ್ಮಾನಗಳು 
ಸಾಧ್ಯವಾದರೆ ಯೋಚಿಸು ,
ಅವರ ಸ್ಥಾನದಲ್ಲಿ ನಿನ್ನರಿಸಿ ನೋಡು ,
ಒಮ್ಮೆ ಅವರ ಚಪ್ಪಲಿಯಲ್ಲಿ ಕಾಲಿಟ್ಟು ನಡೆ 
ಅವರ ಹಾದಿಯ ಕಲ್ಲು ಮುಳ್ಳು ನಿನಗೂ ಕಂಡಾವು ,
ಅವರ ಅಸಮಾಧಾನಕ್ಕೆ ಕಾರಣ ಹೊಳೆದೀತು,

ಓಹ್ ಹೌದಲ್ಲ ,
ಆ ಗಳಿಗೆಯಿಂದ ನಾ ಹಾಗೆ ಮಾಡತೊಡಗಿದೆ 
ನನಗೆ ನೋವಾದಾಗೆಲ್ಲ , 
ನೋಯಿಸಿದವರ ಮನಸ್ಥಿತಿಯ ಬಗ್ಗೆ ಆಲೋಚಿಸಿದೆ 
ಸಿಟ್ಟಿನ ಬದಲು ನಿಟ್ಟುಸಿರು 
ಅಸಮಾಧಾನ ಅನುಕಂಪವಾಗಿ 
ಚಿಂತೆ ಚಿಂತನೆಯಾಯಿತು 
ಈಗ ನನಗೆ ಮತ್ತೆ ಮರಳಬೇಕಿದೆ 
ಅವರಿವರ ಚಪ್ಪಲಿಯಲ್ಲಿ ಕಾಲು ತೂರಿಸಿ 
ನೋವು ನುಂಗುತ್ತ 
ಅದೆಷ್ಟು ದೂರ ಬಂದಿದ್ದೇನೆಂದರೆ 
ನನಗೀಗ ನನ್ನ ಚಪ್ಪಲಿ ಸಿಗುತ್ತಲೇ ಇಲ್ಲ ,
ಅದೆಲ್ಲಿ ಬಿಟ್ಟೆ 
ಮರೆತೇ ಹೋಗಿದೆ ...
ಹುಡುಕುತ್ತಿರುವೆ 
ಹುಡುಕುತ್ತಲೇ ಇದ್ದೇನೆ

No comments:

Post a Comment