Sunday, July 19, 2020

ವಿಕ್ಷಿಪ್ತ ರಾಗ ರಂಜನಿ

ಹೇಗಿರುತ್ತಿ ಹೀಗೆ ?

ಹೇ ಏಕತಾರಿ….

ಒಂಟಿ ಒಂಟಿ,  

ಕಂಟಿಗೆ ಕೊರಳ ಕಟ್ಟಿ ಬಿಗಿದು

ಖಾಲಿ  ಒಣ ಬಿರಡೆಯೊಳು ಬದುಕ ಸವೆಸಿ

ಯಾವಗಲೂ ಅದೇ ನಾದ ಸ್ವಲ್ಪ ಹೆಚ್ಚು ಚೂರು ಕಡಿಮೆ...

ಅಲ್ಪ ತೃಪ್ತೆ ನೀ 

ಹೇ ಏಕತಾರಿ…


ನೊಡಲ್ಲಿ

ಬಗೆ ಬಗೆಯ ವಿಧ ವಿಧದ

ನೂರು ನೂರು ತಂತಿ ವಾದ್ಯಗಳು‌.

ಯಾರೂ ಒಂಟಿ ಅಲ್ಲಾ ನಿನ್ನಂತೆ…


ಸಪ್ತ ಸ್ವರ,  ಗಮಕ , ಖಟ್ಕಾ ಮುರ್ಕಿ ಗಳ ಗುಂಗಲ್ಲಿ….

ದನಿಗೆ ದನಿಯಂತೆ ಬೆರೆಯಲು ತವಕಿಸುವ 

ವೀಣೇ  ಸಂತೂರ್ ಸಿತಾರು…


ನಾಲ್ಕೇ ತಂತಿ

ಅದಾಗ್ಯೂ

ಜೀರ್ ಹಿಡಿದಾಗ ಜುಂಯ್ಯೆಂದು ಸಾತ್ ಕೊಡುವ ತಂಬೂರಿಯ ಖರಜ್ ಷಡಜಗಳು..

ಮನಸ್ಸಿದ್ದರೆ, ಮನಸೋತರೆ ಒಂದು ತಂತಿ ಮೀಟಿದರೆ ಇನ್ನೊಂದು ನುಡಿಯುತ್ತದೆ.


ಗಿಟಾರು!!!! ಎಲ್ಲದ್ದಕ್ಕೂ ,


ಖುಶಿಗೂ ದುಖಃಕ್ಕೂ, 

ನೊಡು ಆ ಹಾರ್ಪ್ ಎನ್ನುವ ಬಿನ್ನಾಣಗಿತ್ತಿ

ಬೂಜುಕಿ ಯ ಬಾಜು ನನ್ನಮುಂದ್ಯಾರು ಎನ್ನುತ್ತ ದನಿ ಹೊಮ್ಮಿಸಿ ಅಲೆ ಅಲೆ ನಾದವಾಗಿದ್ದು…


ಇನ್ನೂ ಇವೆ ಅದೆಷ್ಟೋ ಮೊಹನ, ರುದ್ರ ವೀಣೆಗಳು ಸಣ್ಣನೆ ತಂತಿ ಮನಮೀಟಿ ಮಿಡಿಯುವ ತರಂಗಾಂತರಗಳ ಯುಗಾಂತರಕ್ಕೂ ಹರಡುವ ನಾದರೂಪಿಗಳು..


ನೀನ್ಯಾಕೆ ಅಷ್ಟು ಒಂಟಿ ಒಂಟಿ 

ಓ ಏಕತಾರಿ

ತಳಕು ಬಳುಕಿನ ಈ ಭ್ರಮಾಲೋಕದ

ನಡುವೆಯೆ ಅವ್ಯಹಾತ್  ಮಿಡಿಯುವ

ವಿಕ್ಷಿಪ್ತ ರಾಗರಂಜಿನಿ…

No comments:

Post a Comment