Sunday, August 18, 2024
ನನಸಾಗದ ಕನಸನ್ನು ನೆನೆಯುತ್ತಾ...
ಹಾಗೊಂದು ಈಡೇರದ ಕನಸನ್ನು ನೆನೆಯುತ್ತ!
ಬಾಲ್ಯದಲ್ಲಿ ನಮ್ಮ ಮನಸಲ್ಲಿ ಸಾವಿರ ಕನಸುಗಳಿರುತ್ತವೆ ವರುಷಗಳು ಕಳೆದಂತೆ ಅವುಗಳಲ್ಲಿ ಎಲ್ಲವನ್ನು ಅಲ್ಲದಿದ್ದರೂ ಬಹಳಷ್ಟನ್ನು ನಾವು ಸಾಕಾರ ಮಾಡಿಕೊಳ್ಳುತ್ತೇವೆ. ನಾನು ಕೂಡ ಅದಕ್ಕೆ ಹೊರತಲ್ಲ, ನಾನು ಕಂಡ ಹಲವಾರು ಕನಸುಗಳು ನನಸಾಗಿವೆ,ಆದರೆ ಮನಷ್ಯನ ಸಹಜ ಸ್ವಭಾವ ಎಂಬಂತೆ ಲಭ್ಯವಾದ ಖುಷಿಗಿಂತ, ಆಗದೆ ಉಳಿದು ಹೋದ ಚಿಕ್ಕ ವಿಷಯಗಳ ಬಗ್ಗೆ ನಾವು ಮರುಗುವುದು ಹೆಚ್ಚು. ಅಂಥದ್ದೇ ಒಂದು ಈಡೇರದ ಬಾಲ್ಯ ಕಾಲದ ವಿಲಕ್ಷಣ ಆಸೆಯ ಬಗ್ಗೆ ಇಂದು ಬರೆಯುವ ಉಮೇದಿ ನನ್ನದು, ತಮಾಷೆಯಾಗಿ ತೆಗೆದುಕೊಳ್ಳುವಿರೆಂಬ ನಂಬಿಕೆಯಲ್ಲಿ ಬರೆಯುತ್ತಿರುವೆ,
ನನ್ನೂರು ಉತ್ತರಕನ್ನಡ ಜಿಲ್ಲೆಯ ಮುಂಡಗೋಡ, ಈ ಊರು ಒಂದು ಮಿನಿ ಭಾರತದಂತೆ, ಊರಿನ ಅಕ್ಕ ಪಕ್ಕ ಹಲವು ಬುಡಕಟ್ಟುಗಳು ತಮ್ಮ ನೆಲೆ ಕಂಡುಕೊಂಡಿವೆ , ನಿರಾಶ್ರಿತರಾಗಿ ಬಂದು ನಮ್ಮ ಊರನ್ನು ಪುಟ್ಟ ಟಿಬೆಟ್ ನಂತೆ ಪರಿವರ್ತಿಸಿರುವ ಟಿಬೆಟಿಯನ್ನರು. ಮಲೆಯಾಳಿ ಜನರು, ಒಂದಷ್ಟು ತೆಲುಗಿನವರು, ಬೇಕರಿ ಉದ್ಯಮಕ್ಕೆ ಬಂದ ತಮಿಳಿಗರು, ಮತ್ತೊಂದೆಡೆ ಗೌಳಿಗರ ದೊಡ್ಡಿ, ಹಾಗೆ ಸ್ವಲ್ಪ ಮುಂದೆ ನೋಡಿದರೆ ಸಿದ್ದಿ ಜನರು. ಇಷ್ಟು ವಿಭಿನ್ನ ಜನ ,ಭಾಷೆ ,ಮತ್ತವರ ಆಚರಣೆಗಳ ಮಧ್ಯ ಬೆಳೆದ ಯಾವುದೇ ಮಗುವಿಗೆ ದೊರಕಬಹುದಾದ ಅನನ್ಯ ಅನುಭವಗಳು ನನಗೂ ದೊರೆತಿವೆ. ಜನರನ್ನು ಇತರಿಗಿಂತ ಬೇಗನೆ ಅರ್ಥ ಮಾಡಿಕೊಳ್ಳುವ ಕಲೆ ನನಗೆ ನಮ್ಮ ಊರಿನ ಗಾಳಿಯೇ ಕಲಿಸಿದೆ.
ನನ್ನ ಪ್ರಾಥಮಿಕ ಶಾಲೆಗೆ ಚಂದದೊಂದು ಹೆಸರಿದ್ದರೂ ಎರಡು ಬುಡುಕಟ್ಟು ಸಮುದಾಯದ ನಡುವೆ ಆ ಶಾಲೆ ಇದ್ದಿದ್ದರಿಂದ ಅದನ್ನು ತಾಂಡೆ ಶಾಲೆ ಅಂತಲೇ ಕರೆಯುತ್ತಿದ್ದರು. ಪ್ರತಿ ತರಗತಿಯಲ್ಲೂ ಟಿಬೆಟಿಯನ್ನರು ಬಿಟ್ಟು ಬೇರೆಲ್ಲ ರೀತಿಯ /ಭಾಷೆ ಮಾತಾಡುವ ಜನರು ಇದ್ದರು. ಹೆಚ್ಚಿನ ವಿದ್ಯಾರ್ಥಿಗಳಿಗೆ ಶಾಲೆ, ಸ್ವಚ್ಛತೆ, ಸೌಜನ್ಯದ ಗಂಧಗಾಳಿಯೂ ಇರಲಿಲ್ಲ. ತಮಗಿಂತ ಹಿರಿಯರಿಗೆ ಗೌರವ ಕೊಡುವುದು ಬಹುವಚನದಲ್ಲಿ ಮಾತಾಡುವ ಅಭ್ಯಾಸವೇ ಆ ಮಕ್ಕಳಿಗೆ ಇರಲಿಲ್ಲ. ಘಟ್ಟದ ಕೆಳಗಿನ ಶಿಕ್ಷಕರು ನಮ್ಮ ಶಾಲೆಗೆ ಬಂದರೆ ಹೊಂದಿಕೊಳ್ಳಲು ಬಹುಸಮಯ ಬೇಕಾಗುತ್ತಿತ್ತು. ಅಪ್ಪಿ ತಪ್ಪಿ ಟೀಚರ್ ಮಕ್ಕಳಿಗೆ ಬೈದರು, ಕೈತಪ್ಪಿ ಹೊಡೆದರು ಅಂದುಕೊಳ್ಳಿ ಆ ಮಕ್ಕಳ ಅಪ್ಪ ಅಮ್ಮ ಜಗಳಕ್ಕೆ ಬಂದು ದೊಡ್ಡ ದನಿಯಲ್ಲಿ ಒಪ್ಪತ್ತು ಜಗಳ ಮಾಡುತ್ತಿದ್ದರು , ಆದಿನ ಯಾವುದೇ ಪಾಠಗಳು ಆಗುವ ಸಂಭವ ತೀರಾ ಕಡಿಮೆ.
ನಾನಂತೂ ಇಂಥ ದಿನಗಳನ್ನೇ ಎದುರು ನೋಡುತ್ತಿದ್ದೆ , ಯಾಕೆಂದರೆ ದೊಡ್ಡ ದನಿಯಲ್ಲಿ ಮಾತಾಡುವುದೇ ನಮ್ಮ ಮನೆಯಲ್ಲಿ ನಿಷಿದ್ಧ ಇನ್ನು ಜಗಳ ಎದುರು ಮಾತಾಡುವುದು ಕೇಳಲೇ ಬೇಡಿ, ಬೈಗುಳಗಳನ್ನ ಕೇಳಿದರೂ ಸ್ನಾನ ಮಾಡಿ ಬರಬೇಕು ಎನ್ನುವಂಥಹ ಮಡಿವಂತಿಕೆ ಇತ್ತು. ಕತ್ತೆ , ಮಂಗಾ ಹೆಚ್ಚು ಎಂದರೆ ನಾಯಿ... ಎನ್ನುವಲ್ಲಿಗೆ ನಮ್ಮ ಬೈಗಳ ಸಂಗ್ರಹ ಖಾಲಿಯಾಗುತ್ತಿತ್ತು, ಆದರೆ ನನ್ನ ಸಹಪಾಠಿಗಳಿಗೆ, ಅವರ ಅಪ್ಪ ಅಮ್ಮನಿಗೆ ಅದೆಷ್ಟು ರೀತಿಯ ಬೈಗುಳಗಳು ಬರುತ್ತಿದ್ದವು.!! ನಾನು ಅವರ ಫ್ಯಾನ್ ಆಗಿಬಿಟ್ಟಿದ್ದೆ.
ಆ ವಯಸ್ಸಿನಲ್ಲಿ ಅವರು ಉದುರಿಸುವ ಯಾವ ಬೈಗುಳದ ಅರ್ಥವೂ ಗೊತ್ತಿರಲಿಲ್ಲ. ಆದರೆ ಹಾಗೆ ಬಯ್ಯುತ್ತ ಜಗಳಾಡುವುದುವುದು ಧೈರ್ಯದ ಸಂಕೇತ. ಹಾಗೆ ಮಾಡಿದರೆ ಎದುರಿನವರು ಸುಮ್ಮನಾಗುತ್ತಾರೆ ಎಂಬುದಷ್ಟೇ ನನ್ನ ಅರಿವಿಗೆ ನಿಲುಕಿದ ವಿಷಯವಾಗಿತ್ತು. ಅದೊಂಥರಾ ಮನೋರಂಜನೆಯ ವಿಷಯವೂ ಹೌದು.
ನಾವೆಲ್ಲರೂ ಒಂದೇ ನ್ಯಾಯ ವ್ಯವಸ್ಥೆಯ ಅಡಿಯಲ್ಲಿ ಇದ್ದರೂ, ಬುಡಕಟ್ಟಿನವರಿಗೆ ಅವರದೇ ಆದ ಒಂದು ಪಂಚಾಯತಿ ವ್ಯವಸ್ಥೆ ಇದೆ ವಾರಕ್ಕೊಮ್ಮೆಯೋ ಹುಣ್ಣಿಮೆ ಅಮಾವಾಸ್ಯೆಗೋ ಒಂದು ಜಗಳ, ಒಂದು ಪಂಚಾಯಿತಿ ಇದ್ದೇ ಇರುತ್ತಿತ್ತು. ಅದನ್ನು ನೋಡಲು ನಾನು ಓಡೋಡಿ ಹೋಗಿ ನಿಲ್ಲುತ್ತಿದ್ದೆ. ಅದೊಂಥರಾ ಮಾಯಾಲೋಕ ಅನಿಸುತ್ತಿತ್ತು. ಕೆಲವೊಮ್ಮೆ ವಾದಿ ಪ್ರತಿವಾದಿಗಳು ಸೇರಿ ಪಂಚರ ತಲೆ ಒಡೆದದ್ದೂ ಇದೆ. ಹಾಗೆ ಜಗಳ ನೋಡಿ ಖುಷಿಯಲ್ಲಿ ಮನೆಗೆ ಮರಳಿದರೆ ಅಜ್ಜಿಯೋ ಅಮ್ಮನೋ, ಮಂಗಳಾರತಿ ಎತ್ತಿ ಪ್ರಸಾದ ಕೊಟ್ಟೆ ಮನೆಯೊಳಗೇ ಬಿಡುತ್ತಿದ್ದರು. ಅಮ್ಮ ಅಂತೂ ಇಂಥ ಜಾಗೆಯಲ್ಲಿ ಮನೆ ಕಟ್ಟಿದ್ದಕ್ಕೆ ಅಪ್ಪ ಅಜ್ಜ ಅವರ ಅಜ್ಜನ ಮೇಲೂ ತನ್ನ ಸಿಟ್ಟನ್ನು ಪಾತ್ರೆ ಕುಟ್ಟುತ್ತ ವ್ಯಕ್ತ ಮಾಡುತ್ತಿದ್ದಳು.
ಶಾಲೆ ಬದಲಿಸಿ ಎಂಬ ಇನ್ನೊಂದು ಮಾತು ಪ್ರತಿಬಾರಿ ಅಮ್ಮ ತಪ್ಪದೆ ಹೇಳುತ್ತಿದ್ದಳು.
ಹೀಗೆ ಈ ಬೈಗುಳಗಳ ಮೇಲೆ ಆಕರ್ಷಣೆ ಹೆಚ್ಚಾಗುತ್ತಲೇ ಒಮ್ಮೆ ಅದನ್ನು ಉಚ್ಚರಿಸಬೇಕು ಯಾರಿಗಾದರೂ ಅದನ್ನು ಹೇಳಬೇಕು ಅನ್ನುವ ಭಾವ ತೀವ್ರವಾಗತೊಡಗಿತು , ಮನೆಯಲ್ಲಿ ಬೈಗುಳು ಬಿಡಿ ಇಂಥ ಆಲೋಚನೆಗಳಿವೆ ಅನ್ನುವ ವಿಷಯ ಗೊತ್ತಾಗಿದ್ದರೂ ಅಮ್ಮ ಪಪ್ಪಾ ಇಬ್ಬರೂ ಏನು ಮಾಡಬಹುದು ಎಂಬ ಯೋಚನೆ ಬರುತ್ತಲೇ, ನನ್ನ ಬೈಗುಳಗಳ ಫೇರೀ ದಿಕ್ಕು ತಪ್ಪಿ ಓಡಿ ಮನಸಿನ ಮೂಲೆಯಲ್ಲಿ ಅಡಗಿ ಕೊಳ್ಳುತ್ತಿದ್ದವು.
ಒಮ್ಮೊಮ್ಮೆ ಅವು ಬಂದು ನನಗೆ ಅಣಗಿಸಿದಂತೆ ಭಾಸವಾಗುತ್ತಿತ್ತು. ಹಾಗೆ ಒಂದು ದಿನ ನಿರ್ಧಾರ ಮಾಡಿದೆ,ನಾಳೆ ಹೆಂಗಾದರೂ ಮಾಡಿ ಒಂದಾದರು ಬೈಗುಳ ಬಯ್ಯಲೇಬೇಕು, ಯಾರಿಗೆ ಬಯ್ಯೋದು?? ನನ್ನದೇ ವಾರಗೆಯ ನನ್ನ ಜೊತೆ ಯಾವಾಗಲೂ ಆಡುತ್ತಿದ್ದ ಇಂಥ ಎಲ್ಲ ಬೈಗುಳಗಳನ್ನು ಯಾವ ಹಮ್ಮು ಬಿಮ್ಮಿಲ್ಲದೆ ಬಳಸುತ್ತಿದ್ದ ೩ ಮಕ್ಕಳ ಜೊತೆ ಒಂದು ಟೀಮ್ ಮಾಡಿಕೊಂಡೆ.
ಅವರಿಗೊಂದು ಕಥೆ ಹೇಳಿದೆ , ''ನಾನು, ಅಜ್ಜಿ , ನೀವೆಲ್ಲ ನನ್ನ ಮೊಮ್ಮಕ್ಕಳು, ಸಂಜೆ ಆದರೂ ಆಟಕ್ಕೆ ಹೋದ ಮಕ್ಕಳು ಮನೆಗೆ ಬಂದಿಲ್ಲ ಎಂದು ನಾನು ನಿಮ್ಮನ್ನು ಬೈಯ್ಯುತ್ತಾ ಹುಡುಕುತ್ತೇನೆ ನೀವು ಆಗ ಹೆದರಿ ನನ್ನ ಮುಂದೆ ಬಂದು ನಿಲ್ಲಬೇಕು ..'' ಇಷ್ಟು ನಮ್ಮ ಆಟದ ಸ್ಕ್ರಿಪ್ಟ್ ಆಗಿತ್ತು.
ನಾನು ಚಿಕ್ಕಪ್ಪನ ಲುಂಗಿಯನ್ನು ಸೀರೆಯಂತೆ ಸುತ್ತಿ ಅಲ್ಲೇ ಒಲೆಯುರಿಗೆ ತಂದು ಒಟ್ಟಿದ್ದ ಹತ್ತಿ ಕಟ್ಟಿಗೆಯ ಉದ್ದದ ಕೋಲನ್ನು ಹಿಡಿದೆ. ಜಗತ್ತಿನ ಅತೀ ಕೆಟ್ಟ ಅಜ್ಜಿ! ಬೈಗುಳ ಬಯ್ಯುವ ಅಜ್ಜಿಯನ್ನು ಆವಾಹಿಸಿಕೊಂಡೆ. ತೀರಾ ಕ್ಲಿಷ್ಠ ಮತ್ತು ಭಯಂಕರ ಇರಬಹುದೇನೋ ಅನ್ನುವ ಬೈಗುಳಗಳ ಗೋಜಿಗೆ ಹೋಗದೆ, ಸರಳವಾದ ಮೂರಕ್ಷರದ ಬೈಗುಳನ್ನು ಆರಿಸಿಕೊಂಡೆ. ಅಂದರೂ ಅನ್ನದಂತಿರಬೇಕು ಅಂಥದ್ದು!
ಇನ್ನು ಆ ಮೂರು ಮಕ್ಕಳು ಅವರಿಗಂತೂ ಇದೊಂದು ಕೆಟ್ಟ ಪದವೇ ಅಲ್ಲ! ಹೀಗಾಗಿ ಎಲ್ಲವೂ ಸುಗಮ ಅನಿಸಿತು. ನನಗೆ ನನ್ನ ಕನಸು ನನಸಾಗುವ ಗಳಿಗೆ ಬರುತ್ತಲೇ ಖುಷಿ ಉತ್ಸಾಹ ಹೆಚ್ಚಾಗುತ್ತಲೇ ಹೋಯಿತು. ಮಧ್ಯಾಹ್ನ ಅಮ್ಮ, ಅಜ್ಜಿ ಸ್ವಲ್ಪ ಹೊತ್ತು ಮಲಗುತ್ತಿದ್ದರು ಆ ಇಪ್ಪತ್ತು ನಿಮಿಷದೊಳಗೆ ನನ್ನ ಕನಸು ನನಸು ಮಾಡಬೇಕು ಎಂಬ ಭೂತ ಹೊಕ್ಕಿದ್ದೇ, ಹತ್ತಿಕಟ್ಟಿಗೆ ಹಿಡಿದು ಹೊರಟೆ. ಸಂಜೆ ದೇವೇರಿಗೆ ದೀಪ ಹಚ್ಚುವಾಗ ಅಪರಾಧ ಕ್ಷಮಾಪಣ ಮಂತ್ರ ಹೇಳಿಕೊಂಡರಾಯಿತು ಅನ್ನುವ ಪರಿಹಾರ ನನ್ನ ಮನಸ್ಸೇ ಕೊಟ್ಟಿದ್ದರಿಂದ ನನಗೆ ನಾನು ಭೇಷ್ ಅಂದುಕೊಂಡೆ.
ನನ್ನ ಮನೆಯ ಮುಂದೆ ಒಂದು ಪೇರಳೆಮರ, ಎರಡು ಕರವೀರ ಮರಗಳಿದ್ದವು. ಅದರ ಸಂದಿಯಲ್ಲಿ ನಿಂತರೆ ಯಾರಿಗೂ ಕಾಣುವುದಿಲ್ಲ ಅಲ್ಲಿ ಅಜ್ಜಿಯಂತೆ ಸೊಂಟ ಡೊಂಕು ಮಾಡಿ ಕೋಲು ಹಿಡಿದು ನಿಂತೆ ಎರಡು ಬಾರಿ ಅವರ ಹೆಸರಿಂದಲೇ ಕರೆದೆ, ಮೂರನೇಬಾರಿ ಇದ್ದ ಶಕ್ತಿಯನ್ನೆಲ್ಲ ಸೇರಿಸಿ ಆ ಮೂರಕ್ಷರದ ಪದವನು ಜೋರಾಗಿ ಕೂಗಿದೆ. ಮೂರನೇ ಅಕ್ಷರ ಇನ್ನೂ ಮುಗಿದಿರಲಿಲ್ಲ ಬೆನ್ನಮೇಲೆ ರಪ್ಪನೆ ಏನೋ ಬಿದ್ದಂತಾಯಿತು , ಒಮ್ಮೆ ಕಣ್ಣು ಕತ್ತಲೆಯು ಬಂದು ಹೋಯಿತು, ಹಿಂತಿರುಗಿ ನೋಡುವ ಧೈರ್ಯ ಆಗಲಿಲ್ಲವಾದರೂ ಮರುಕ್ಷಣ ನನ್ನ ಹೆಸರನ್ನು ಕರೆದ ರೀತಿಯಿಂದಲೇ, ಕಡಬು ಕೊಟ್ಟವರು ಅಜ್ಜಿ ಮತ್ತು ಇನ್ನು ನನಗೆ ಉಳಿಗಾಲವಿಲ್ಲ ಅನ್ನೋದು ನೆನೆದು ಅಜ್ಜಿಯ ಕಾಲ ಮೇಲೆ ಬಿದ್ದು ಅಪರಾಧ ಕ್ಷಮಾಪಣ ಸ್ತೋತ್ರ ಅಳುತ್ತಲೇ ಒದರಿಬಿಟ್ಟೆ. ಪಪ್ಪನಿಗೆ ಹೇಳ್ಬೇಡ ಅಜ್ಜಿ, ಪಪ್ಪನಿಗೆ ಹೇಳ್ಬೇಡ ಅನ್ನುತ್ತಾ ಅಳುತ್ತಲೇ ಅಜ್ಜಿಯೊಂದಿಗೆ ಮನೆಗೆ ಹೋದೆ.
ಮನೆಯ ಬೇರೆ ಯಾರಿಗೂ ನಾ ಯಾಕೆ ಅಳುತ್ತಿದ್ದೇನೆ ಅಂತ ಅರ್ಥವೇ ಆಗಲಿಲ್ಲ. ಅಜ್ಜಿಯೂ ಅದನ್ನು ದೊಡ್ಡದು ಮಾಡದೆ, ಅಂಥ ಪದಗಳನ್ನು ನಾವು ಯಾಕೆ ಹೇಳಬಾರದು! ಅದರ ಹಿಂದೆ ಎಷ್ಟು ಕೆಟ್ಟ ಅರ್ಥಗಳಿವೆ ಎಂದು ಹೇಳುತ್ತ, ಇದೆಲ್ಲ ಬೈಗುಳಗಳು ಅರ್ಥವಾದ ದಿನ ನಿನಗೆ ಇನ್ನೂ ಕೂಡ ಬೈಗುಳ ಹೇಳಬೇಕೆನಿಸಿದರೆ ಖಂಡಿತ ಬಯ್ಯಿ, ಬೇಕಿದ್ದರೆ ನಿನಗೆ ರಿಕ್ಷಾ ಮೇಲೆ ಮೈಕ್ ಹಾಕಿಸಿ ಕೊಡುತ್ತೇವೆ ಊರ ತುಂಬಾ ಬೈಕೊಂಡ್ ಬಾ ಅಂದು ಹೇಳಿದರು.
ಅದೇ ಕೊನೆ ಮತ್ತೆಂದೂ ನಂಗೆ ಬೈಗುಳಗಳ ಮೇಲೆ ಪ್ರೀತಿ ಹುಟ್ಟಲಿಲ್ಲ. ಜಾನಪದ ಅಧ್ಯಯನ ಮಾಡುವಾಗ ಮೂರನೇ ಸೆಮಿಸ್ಟರ್ ನಲ್ಲಿ ಬೈಗುಳಗಳ ಬಗ್ಗೆಯೇ ಒಂದು ಪಾಠವಿತ್ತು , ಅದರ ಮೊದಲ ಸಾಲಿನಲ್ಲಿ ''ಬೈಗುಳಗಳು ನಮ್ಮ ಜನಪದದ ನಿಗಿ ಭಾಗಗಳು '' ಎಂಬುದನ್ನು ಓದಿ ಅದೆಷ್ಟು ನಕ್ಕಿದ್ದೆ .. ,,ಇಂತಹ ನಿಗಿ ಕೆಂಡವನ್ನು ಉರಿಸುವ ಭಾಗ್ಯ ನನಗೆ ಬರಲೇ ಇಲ್ಲ ನೋಡ್ರಿ '' ಎಂದು ನಾಟಕೀಯವಾಗಿ ಅಂದು ಈ ಕತೆಯನ್ನು ನನ್ನ ಸಹಪಾಠಿಗಳೊಂದಿಗೆ ಹಂಚಿಕೊಂಡಿದ್ದೆ,
ಬರಹದುದ್ದಕ್ಕೂ ನಿಮ್ಮಿಂದ ಬೈಗುಳ ಎಂಬ ಪದವನ್ನು ಅದೆಷ್ಟು ಬಾರಿ ಓದಿಸಿಬಿಟ್ಟೆ, ಕ್ಷಮೆ ಇರಲಿ.. ಮತ್ತೆ ಈಗ ನೀವು ನನ್ನ ಬೈಯ್ಯಬ್ಯಾಡ್ರಿ ಅಷ್ಟೇ !!!!!!
ಅಮಿತಾ ರವಿಕಿರಣ್
ಬೆಲ್ಫಾಸ್ಟ್
ಚಿತ್ರ: Ln Gudur
ನನ್ನ ಹೆಸರು ಅಮಿತಾ ,ಹುಟ್ಟಿ ಬೆಳದಿದ್ದು ಉತ್ತರಕನ್ನಡದ ಮುಂಡಗೋಡ,ಮೆಟ್ಟಿದ್ದು ಉಡುಪಿಯ ಸಾಲಿಗ್ರಾಮ ,ಹಿಂದುಸ್ತಾನಿ ಸಂಗೀತದಲ್ಲಿ ಪದವಿ,ಮತ್ತು ಜಾನಪದ ಸ್ನಾತಕೋತ್ತರ ಪದವಿ ಪಡೆದಿದ್ದು ನನ್ನ ಮತ್ತೊಂದು ತವರು ಧಾರವಾಡದಲ್ಲಿ ,ಹಾಡುವುದು ,ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು ನನ್ನ ಆತ್ಮೀಯ ಸ್ನೇಹಿತರು ,ಅವೊಂಥರ ಭಾರವಲ್ಲದ ನಾ ಹೋದಲ್ಲೆಲ್ಲ ಬರುವ ನನ್ನ ಲಗ್ಗೇಜುಗಳು.ಬರವಣಿಗೆ ನನಗೆ ಇಷ್ಟಾ ಯಾಕಂದ್ರೆ ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ. ಭಾವುಕಿ.ಹೊಸದನ್ನು ಕಲಿಯುವ ಉಮೇದು, ಹಾಗೆ ನನಗೆ ಜೊತೆಯಾದದ್ದು ಅಡಿಗೆ ಮನೆಯೆಂಬ ಲ್ಯಾಬು, ಅಡಿಗೆಯನ್ನು ಬರೆಯೋದಕ್ಕಿಂತ ಮಾಡೋದು ಇಷ್ಟಾ ..ಅದಾಗ್ಯೂ ನನ್ನದೊಂದು ಫುಡ್ ಬ್ಲಾಗ್ ಇದೆhttp://tastytwist4all.blogspot.com/ .ಜೀವನದ ಪ್ರತಿನಿಮಿಷವನ್ನು ಮನಸ್ಪೂರ್ತಿ ಬದುಕಬೇಕು ಅನ್ನುವ ಹಂಬಲ ನಂಗೆ...ಇಷ್ಟೆಲ್ಲಾ ..ಮತ್ತಷ್ಟು ಸೇರಿ..ನಾನು
Subscribe to:
Post Comments (Atom)
No comments:
Post a Comment