Tuesday, February 8, 2022

ನೂಲಿನ ತೇರು - ೩


ಮಾರ್ಗರೇಟ್ ನನ್ನ ಮಗಳ ಮುಖವನ್ನ ಮೆತ್ತಗೆ ರಂಗೋಲಿಯ ಚಿಕ್ಕಿಗಳನ್ನು ಜೋಡಿಸುವಂತೆ ಕಣ್ಣು , ಗದ್ದ , ಕಿವಿ, ತುಟಿಯಮೇಲೆ ತನ್ನ ಬೆರಳನ್ನ ಅತ್ತಿಂದಿತ್ತ ಸರಿದಾಡಿಸುತ್ತಿದ್ದಳು , ಕಣ್ಣಿನ ಬಣ್ಣ ಏನು ? ಕೂದಲು? ಹುಬ್ಬು ಅಂದು ಮತ್ತೆ ಮುಟ್ಟಿ ನೋಡಿದಳು. ಕಣ್ಣೆವೆ ನೋಡು ಎಷ್ಟು ಚನ್ನಾಗಿದೆ ಎಂದು ಮುಖ ಅರಳಿಸಿದಳು.

ಆಕೆಯ ಸಂಭ್ರಮ ನೋಡುವುದೇ ನನಗೆ ಖುಷಿ.


 ಮಾರ್ಗರೆಟ್ ಆಗ ಅರವತ್ತರ ಆಸುಪಾಸಿನಲ್ಲಿದ್ದಳು , ಮಕ್ಕಳು ಎಂದರೆ ಅತೀ ಪ್ರೀತಿ ಆಕೆಗೆ .ನನಗೆ ಆಗಾಗ ಪೇರೆಂಟಿಂಗ್ ಟಿಪ್ ಕೊಡುತ್ತಿದ್ದಳು ಹುಟ್ಟುಗುರುಡಿಯಾದ ಆಕೆ , ಜಗತ್ತನ್ನು ಅದಮ್ಯ ಪ್ರೀತಿ ಅಕ್ಕರೆಯಿಂದ ನೋಡುವುದು ಆಕೆಯ ಮಾತುಗಳಲ್ಲೇ ತಿಳಿಯುತ್ತಿತ್ತು.  ಆಕೆ ಹೇಳುವ ವಿಷಯಗಳನ್ನು ಕಲ್ಪಿಸುವುದು, ನನಗೆ ತುಂಬಾ ಹಿತ ಕೊಡುವ ಕೆಲಸವಾಗಿತ್ತು. 


ಆಕೆ ತನ್ನ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ತುಂಬಾ ರಸವತ್ತಾಗಿ ವಿವರಿಸುತ್ತಿದ್ದಳು


'' ಒಂದು ದಿನ ನಮ್ಮ ಬ್ಲೈಂಡ್ ಆರ್ಟಿಸ್ಟ್ ಸಂಘದ ಕಾರ್ಯಕ್ರಮಕ್ಕೆ  ಸೆಲೆಬ್ರಿಟಿ ಆರ್ಟಿಸ್ಟ್ ನ ಕರೆಸಿದ್ವಿ ಆಕೆ ನೋಡೋಕೆ ತುಂಬಾ ಸುಂದರವಾಗಿದ್ದಾಳೆ ಅಂತ ಎಲ್ಲರೂ ಹೇಳಿತ್ತಿದ್ದರು, ಆದಿನ ಆಕೆ ಬರುತ್ತಾಳೆಂದೇ ಅದೆಷ್ಟೋ ಯುವಕರು ಕಾರ್ಯಕ್ರಮಕ್ಕೆ ಬಂದಿದ್ದರಂತೆ, ಆದರೆ ಅನಿವಾರ್ಯ ಕಾರಣದಿಂದ ಆಕೆಗೆ ಬರಲಾಗುತ್ತಿಲ್ಲ ಎಂಬುದು ಸಂಘಟಕರ ಮೂಲಕ ನನಗೆ ಮೊದಲೇ ತಿಳಿದಿತ್ತು. ನನ್ನ ಪಕ್ಕ ಕುಳಿತಿದ್ದ ಅಂಧ ಯುವಕ  ತನ್ನ ಪರಿಚಯ ಹೇಳಿಕೊಂಡು ತಾನು ಆ ಅತಿಥಿಯ ಅಭಿಮಾನಿ ಆಕೆಯನ್ನು ಇವತ್ತು ಮಾತಾಡಿಸಬಹುದು ಎನ್ನುವುದನ್ನು ನೆನೆದೆ ನನಗೆ ಖುಷಿ ಆಗುತ್ತಿದೆ ಅಂದು ಉತ್ಸಾಹದಲ್ಲಿ ಹೇಳುತ್ತಲೇ ಇದ್ದ , ನನಗೆ ಆ ಗಳಿಗೆಗೆ ಆ ಹುಡುಗನ ಬಗ್ಗೆ ತುಂಬಾ ಪಾಪ ಅನಿಸಿತು , ಮರುಕ್ಷಣವೇ ನನ್ನ ತರಲೇ ಬುದ್ಧಿ ಏನೋ ಆಲೋಚಿಸಿ'' "ನನಗೂ ನಿನ್ನಂಥ ಅಭಿಮಾನಿಯನ್ನು ನೋಡಿ ತುಂಬಾ ಖುಷಿ ಆಗುತ್ತಿದೆ, ನನ್ನ ಮೇಲೆ ಇಷ್ಟು ಪ್ರೀತಿ ಇಟ್ಟಿರುವುದಕ್ಕೆ ಧನ್ಯವಾದ ಅಂದೆ" ನನ್ನನ್ನೇ ಆ ನಟಿ ಎಂದುಕೊಂಡ  ಆತ ಈ ನೆಲದ ಮೇಲೆ ಇರ್ಲಿಲ್ಲ ಅಷ್ಟು ಖುಷಿಯಿಂದ ಉಬ್ಬಿ ಹೋದ. ನಾನು ಮೆತ್ತಗೆ ಅಲ್ಲಿಂದ ಜಾಗ ಖಾಲಿ ಮಾಡಿದೆ.ನಾನು ಮಾಡಿದ್ದು ತಪ್ಪು ಗೊತ್ತು ಆದರೇ ಆ ಹುಡುಗನ ಮಾತಿನಲ್ಲಿದ್ದ ಖುಷಿಯ ಮುಂದೆ ಎಲ್ಲವು ಗೌಣ ಅನ್ನಿಸ್ತು.'' ಆಕೆ ಹೀಗೆ ಕಥೆಯ ಸುರಳಿಯನ್ನು ಬಿಚ್ಚಿಡುತ್ತಿದ್ದರೆ ನನಗೆ ನನ್ನ ಅಜ್ಜಿ ಯನೆನಪು ಉಕ್ಕಿ ಉಕ್ಕಿ ಬರುತ್ತಿತ್ತು.     


ಮಾರ್ಗರೆಟ್ ಮತ್ತು ಅವಳಂಥ ಅನೇಕ ವಿಶೇಷ ವ್ಯಕ್ತಿತ್ವಗಳನ್ನ ನಾ ಭೇಟಿ ಆಗಿದ್ದು '' ಓಪನ್ ಆರ್ಟ್ಸ್ ಕಮ್ಮ್ಯುನಿಟಿ ಕ್ವಾಯರ್'' ಎಂಬ ಅನನ್ಯ ಸಂಗೀತ ಸಂಘಟನೆಯಲ್ಲಿ. ಇದು Northern Ireland ನ ಪ್ರಸಿದ್ಧ ಕ್ವಾಯರ್. ಇದು ಹಲವಾರು ಕಾರಣಗಳಿಂದ ಜನರ ಪ್ರೀತಿ ಮೆಚ್ಚುಗೆ, ಗೌರವಕ್ಕೆ ಪಾತ್ರವಾಗಿದೆ. ಕ್ವಾಯರ ಎಂದರೆ  ''ಸಮೂಹ ಸೃಷ್ಟಿಸುವ ಸಂಗೀತ'' ಎನ್ನಬಹುದೇನೋ , ಪ್ರತಿಯೊಬ್ಬ ಸದಸ್ಯನ ಧ್ವನಿಯ(ರೇಂಜ್) ಅನುಗುಣವಾಗಿ ಇಲ್ಲಿ ನಾಲ್ಕು ರೀತಿಯ ಗುಂಪು ಮಾಡಿರುತ್ತಾರೆ, ಬೇಸ್ (ಮಂದ್ರ ಸಪ್ತಕ ), ಆಲ್ಟೊ(ಮಧ್ಯ ಸಪ್ತಕ) , ಅಪ್ಪರ್ ಆಲ್ಟೊ (ಮಧ್ಯ/ ತಾರ ಸಪ್ತಕ), ಸಪ್ರಾನೋ (ತಾರ ಸಪ್ತಕ) ಈ ತೆರನಾಗಿ ಒಂದೇ ಹಾಡಿನ ವಿವಿಧ ಸಾಲುಗಳನ್ನು ವಿವಿಧ ಗಾಯಕರು ವೈವಿಧ್ಯಮಯವಾಗಿ ಆದರೆ ಒಟ್ಟಿಗೆ ಹಾಡುತ್ತಾರೆ. ಹೀಗೆ ಹೊಮ್ಮಿದ  ಒಂದು ಹಾಡು ಕೇಳುಗನನ್ನು ತಲುಪುವಾಗ ಅದರ ಸೌಂದರ್ಯ ಇಮ್ಮಡಿಯಾಗುತ್ತದೆ  ಅದನ್ನು ಕೇಳುವ ಆನಂದ ಬಲ್ಲವನೇ ಬಲ್ಲ. ಇಂಥ ನೂರಾರು ಕ್ವಾಯರಗಳು ಪ್ರತಿ ಊರಲ್ಲೂ ಸಿಗುತ್ತವೆ.


ಆದರೆ ಓಪನ್ ಆರ್ಟ್ಸ್ ಎಂಬುದು ವಿಶೇಷ ಏಕೆಂದರೆ ಇದು ಅಂಗವಿಕಲ ಕಲಾವಿದರ ಅಭಿವೃದ್ಧಿಗೆಂದು ೨೧ ವರ್ಷಗಳ ಹಿಂದೆ ಹುಟ್ಟಿಕೊಂಡ ಸಂಸ್ಥೆ  ಆದರೆ ಕಲೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಇದು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ ಚಿತ್ರಕಲೆ,ನಾಟಕ, ನೃತ್ಯ, ಸಂಗೀತ , ಗ್ಯಾಮಲಾನ್ ಎಂಬ ಸಂಗೀತೋಪಕರಣಗಳ ಆರ್ಕೆಸ್ಟ್ರಾ ಹೀಗೆ ವಿವಿಧ ರೀತಿಯ ಕಲಾಭಿವ್ಯಕ್ತಿಗೆ ವೇದಿಕೆಯಾಗಿ ಸಶಕ್ತವಾಗಿ ಬೆಳೆದಿರುವ ಸಂಸ್ಥೆ. ಈ Open Arts. 



ಬೆಲ್ಫಾಸ್ಟ್ ಗೆ ಬಂದ ಆರಂಭದಲ್ಲಿ ಒಂದು ಕಾರ್ಯಕ್ರಮದಲ್ಲಿ ಈ ಕ್ವಾಯರ್ ಗಾಯನ ಕೇಳಿದ್ದೆ ಕೇಳಿದ್ದು, ನನಗೆ ಒಮ್ಮೆಯಾದ್ರೂ ಇದರಲ್ಲಿ ಹಾಡಬೇಕು ಅನ್ನುವ ಹುಚ್ಚು ಹಿಡಿದಿತ್ತು, ಸ್ವಲ್ಪೇ ದಿನಕ್ಕೆ open arts community choir ಗೆ ಆಡಿಷನ್ ಕೊಡಲು ಹೋದೆ , ನನಗೆ ಇಂಗ್ಲಿಷ್ ರೈಮ್ ಬಿಟ್ಟರೆ ಇನ್ನಾವುದೇ ಆಂಗ್ಲ ಹಾಡುಗಳು ಬರುತ್ತಿರಲಿಲ್ಲ. ಅದ್ಯಾವ ಧೈರ್ಯದಲ್ಲಿ ಅಲ್ಲಿಗೆ ಹೋದೆ ಅನ್ನುವುದು ಈಗಲೂ ಸೋಜಿಗ ತರುತ್ತದೆ. ಒಂದು ಕನ್ನಡ  ಹಾಡನ್ನೇ ಹಾಡಿ ಧ್ವನಿ ಪರೀಕ್ಷೆಯಲ್ಲಿ ಆಯ್ಕೆ ಆಗಿದ್ದೆ . 

ಮರು ದಿನದಿಂದ ಅಭ್ಯಾಸಕ್ಕೆ ಕರೆದಿದ್ದರು ಕೇಳುವಾಗ ಎಷ್ಟು ಮಧುರ ಎನಿಸಿತ್ತೋ , ಕಲಿಕೆ ಅಷ್ಟು ಸುಲಭವಲ್ಲ ಅನ್ನುವುದು ಮೊದಲ ದಿನವೇ ಗೊತ್ತಾದರೂ ಕಲಿಯುವ ಹಸಿವೆ ಜಾಸ್ತಿ ಇತ್ತಾದ್ದರಿಂದ ಸುಮ್ಮನೆ ಹೋಗುತ್ತಿದ್ದೆ. 


ನಾನು ಈ ಮೊದಲೆಂದೂ ವಿದೇಶಿ ಭಾಷೆಯ ಹಾಡುಗಳನ್ನ ಕೇಳಿರಲಿಲ್ಲ , ಕಲಿಯುವ ಅವಕಾಶವಂತೂ ಇರಲೇ ಇಲ್ಲ. ಓಪನ್ ಆರ್ಟ್ಸ್ ನ ದೆಸೆಯಿಂದಾಗಿ ಇಂಗ್ಲಿಷ ಅಷ್ಟೇ ಅಲ್ಲದೆ ಐರಿಷ್  , ಫ್ರೆಂಚ್, ಹಂಗೇರಿಯನ್ , ಆಫ್ರಿಕನ್ , ರಷ್ಯನ್  ಹಾಡುಗಳನ್ನು ಕಲಿಯುವ ಅವಕಾಶ ದೊರೆಯಿತು.


ಆನ್(Anne) , ಬೆವರ್ಲಿ(Beverley) ,ಅಲನ್ (Alan)ಎಂಬ ಮೂರು ಸಂಗೀತಗಾರರು ನಮಗೆ ಗುರುಗಳು. ನಾವು ಒಮ್ಮೆ'' ಜಯ ನಾರಾಯಣಿ ನಮೋಸ್ತುತೇ '' ಎನ್ನುವ ಸ್ತುತಿಯನ್ನು ಕೂಡ ಅಭ್ಯಾಸ ಮಾಡಿ ವೇದಿಕೆಯಲ್ಲಿ ಹಾಡಿದ್ದೆವು. ಈ ತಂಡದ ವಿಶೇಷತೆಯೇ ಅದು ಜಗತ್ತಿನ ಮೂಲೆಮೂಲೆಯ ವಿವಿಧ ಭಾಷೆಯ ಹಾಡುಗಳನ್ನು ತಂದು ಕಲಿತು ಇತರರಿಗೂ ಕಲಿಸುತ್ತಾರೆ. ನಾವು ಈ ಹಾಡುಗಳನ್ನು ವೇದಿಕೆಮೇಲೆ ಹಾಡುವಾಗ ಸಂಜ್ಞಾ ಭಾಷೆಯಲ್ಲಿ ಮೂಗ ಮತ್ತು ಕಿವುಡರಿಗೆ ಅದರ ಅರ್ಥ ತಿಳಿಸುವ ಒಬ್ಬ sign language interpreter ಕೂಡ ಇರುತ್ತಾರೆ.  


ಇವರೊಂದಿಗೆ ನಾನು ಹಲವಾರು ಪ್ರವಾಸ ಮಾಡಿದ್ದೇನೆ , ಅವುಗಳಲ್ಲಿ ನನ್ನ ಮೆಚ್ಚಿನದು llangollen international music festival ಅದೊಂದು ಅವಿಸ್ಮರಣೀಯ ಪ್ರವಾಸ , ನಾನು ಆ ವರೆಗೆ ಪ್ರಪಂಚದ ಅಷ್ಟೊಂದು ದೇಶಗಳ ಕಲಾವಿದರನ್ನ ಒಟ್ಟಿಗೆ ಒಂದೇ ವೇದಿಕೆಯಡಿ ನೋಡೇ ಇರಲಿಲ್ಲ ,ಕೆಲವೊಂದು ದೇಶದ ಹೆಸರೂ ಈ ವರೆಗೆ ಕೇಳಿರಲಿಲ್ಲ. ಭಾರತ ಮೊದಲ್ಗೊಂಡು ಎಲ್ಲ ದೇಶಗಳ ನೃತ್ಯ /ಸಂಗೀತ ತಂಡಗಳು ಅಲ್ಲಿದ್ದವು. ದಿನವಿಡೀ ಹಾಡು ನೃತ್ಯ ಸಂಜೆ ಪ್ರಸಿದ್ಧ ಕಲಾವಿದರಿಂದ ಕಾರ್ಯಕ್ರಮಗಳು. 


  ಆಗಲೇ ಮಾರ್ಗರೇಟ್ ನ ತುಂಟತನ , ಮರೆಡ್ ನ ಅಡುಗೆ ಪ್ರೀತಿ, ಒಮ್ಮೆಯೂ ಅಡುಗೆ ಮಾಡದ ಸಾಂಡ್ರಾ , ಆಂಡ್ರಿಯಾ ಮತ್ತವಳ ಗೈಡ್ ಡಾಗ್ ಜೇಟಾ, ಕೇಟಿ ಎಂಬ ನೀಲಿ ಕಣ್ಣುಗಳ ಅಂಧ ಹುಡುಗಿ , ಅಲ್ಲಿದ್ದ ಹಲವರ ಪ್ರೇಮಕಥೆಗಳು, ಚಹಾ ಪ್ರೀತಿ, ಎಲ್ಲವನ್ನ ನಾನು ಬೆರಗು ಕಣ್ಣಲ್ಲಿ ನೋಡುತ್ತಾ , ಅವರೊಂದಿಗೆ ನಗುತ್ತ , ಅವರ ಅಂತರಂಗದ ಕಥೆಗಳಿಗೆ ಭಾವುಕಳಾಗಿ ಕಣ್ಣೀರಾಗುತ್ತಾ, ಸ್ಪರ್ಧೆ ಗೆದ್ದಾಗ ಪುಟ್ಟ ಮಕ್ಕಳಂತೆ ಖುಷಿ ಪಡುತ್ತಾ ಪ್ರತಿ ನಿಮಿಷವನ್ನ ಅನುಭವಿಸಿದ್ದೇನೆ. 


ಹಾಗೊಂದು ದಿನ ಕ್ವಾಯರ್ ಪ್ರಾಕ್ಟಿಸ್ ಮುಗಿದ ನಂತರ ನಮ್ಮ ಟೀಚರ್ ಆನ್ ಎಲ್ಲ ಸದಸ್ಯರಿಗೆ ಜಿಂಜರ್ ಬ್ರೆಡ್ಗಳನ್ನ ತಂದಿದ್ದಳು ಅವು ಗುಂಪಿನ ಪ್ರತಿಸದಸ್ಯರ ಪ್ರತಿಕೃತಿಗಳಂತಿದ್ದವು. ಒಂದು ಜಿಂಜೆರ್ ಬ್ರೆಡ್ ಗೆ ಬೊಟ್ಟು ಇಟ್ಟು ಉದ್ದ ಕೂದಲು ಮತ್ತು ಸೀರೆ ಉಡಿಸಿ ಅಲಂಕಾರ ಮಾಡಿದ್ದಳು. ಆ ಇಡೀ ಗುಂಪಿನಲ್ಲಿ ನಾನೊಬ್ಬಳೇ ವಿದೇಶಿ ಸದಸ್ಯೆ , ಆದರೆ ಅವರು ಅದನ್ನ ಸಂಭ್ರಮಿಸುವ ನನ್ನನ್ನು ಆದರಿಸುವ ರೀತಿ ಈ ಛಳಿಯ ನಾಡಲ್ಲೂ ನನ್ನ ಅಸ್ತಿತ್ವವನ್ನ ಬೆಚ್ಚಗೆ ಇಟ್ಟಿದೆ. 


 








ಗೆಳೆಯ - ಗೆಳತಿ

 ಆತ ಗೆಳೆಯ...

ಬಹು ದಿನದ ಗೆಳೆಯ...

ಆಕೆ ಚಲುವೆ ಆತನ ಗೆಳತಿ..


ಅವಳನ್ನು ನೋಡಿದೆ 

ಖುಷಿಯಾಗಿದ್ದಳು...

ಕಣ್ಣಗಳು ಪ್ರೇಮವಾಗಿದೆ 

ಎಂದು ಒತ್ತೊತ್ತಿ ಹೇಳುತ್ತಿದ್ದವು..


ಅವನನ್ನು ನೋಡಿದೆ...

ಅವ ತನ್ನ ಒಂದು ಮಂಡಿಯೂರಿ ಕುಳಿತು 

ತನ್ನ ವರಿಸುವಂತೆ 

ಆಕೆಯನ್ನು ಕೇಳುತ್ತಿದ್ದ...


ಆಕೆ ತನ್ನ ಕೈ ಆತನ 

ಕೈಗಿತ್ತಳು...

ಮರುಕ್ಷಣ ಅನಾಮಿಕೆಯ ಸುತ್ತ 

ವಜ್ರದುಂಗುರ...


ಆಕೆ..

ಜಗತ್ತಿನಚ್ಚರಿಯೆಲ್ಲ 

ಆಕೆಯ ಕಣ್ಣುಗಳಲ್ಲೇ ಇದೆ ಎಂಬುದನ್ನು 

ಸಾಬೀತು ಪಡಿಸುವಲ್ಲಿ 

ಬ್ಯುಸಿ 


ಈ ಚಲುವೆ ಗೆಳತಿ....

ತನ್ನ ಸೊತ್ತಾದ ಬಗ್ಗೆ ಅವನಿಗೊಂದು...

ದುಷ್ಟ ಅಹಂ..


ಪ್ರೀತಿ ಆದ ಮೇಲೆ ಗೆಳೆತನ 

ಮುಗಿದು ಹೋಗುತ್ತೆ...

ನಿಜ...


ಈಗ ಅವರು..ಜನರೆದುರು ಕಾಣುವುದೇ ಇಲ್ಲ 

ಬರಿ ಇಳಿ ಸಂಜೆಯಲ್ಲಿ 

ದೂರ ದೂರದ ಪಾರ್ಕುಗಳ ಇಕ್ಕೆಲುಗಳ ಕತ್ತಲಲ್ಲಿ..

ಸುಮ್ಮನೆ ಕುಳಿತಿರುತ್ತಾರೆ..


ಮುಂಚಿನಂತೆ ಇಗ ಆಕೆ ತನ್ನುಳಿದ

ಗೆಳೆಯರೊಡನೆ 

ದಿಲ್ ಖೋಲ್ ಕೆ ನಗುವುದಿಲ್ಲ...

ನಕ್ಕರೂ..ಅದೂ ಆತನ ಗಮನಕ್ಕೆ 

ಬರದಿರಲಿ ಎಂಬ ಪ್ರಾರ್ಥನೆ 

ಸದಾ ಇರುತ್ತದೆ...ಪೋಸ್ಸೆಸ್ಸಿವ್ ಅನ್ನುವುದು ಉಸಿರುಗಟ್ಟಿಸುವ ಪದ.


ಅಪ್ಪ ಅಮ್ಮನ ಕಣ್ಣುಗಳೊಂದಿಗೆ

ಬೆಸುಗೆ ಆಗಿ ಅದೆಷ್ಟು ದಿನವಾಯಿತೋ..

ಓದು ಎಂಬುದು ಎಲ್ಲದಕ್ಕೂ 

ಸಬೂಬು ..


ಅದೊಂದು 'ಹ್ಮ್ಮ್ ' yes!!!

ಅದೆಷ್ಟು ಸಂಬಂಧಗಳನ್ನು 

ಮುಗಿಸಿ ಹಾಕುತ್ತಿದೆ ..ಛೇ!

ಹಾಗೆ ಆಕೆ,

ಯೋಚಿಸುತ್ತಿರೆ 

ಆತ ಮತ್ತೊಂದು ಯುದ್ಧಕ್ಕೆ

ಹೊರಡುತ್ತಾನೆ..



ಗಂಡು ಜೀವಕ್ಕೆ ಪ್ರೇಮ..

ಅದು ಬರೀ

ಆಕೆಯನ್ನು ಗೆದ್ದ ಹಮ್ಮು...

ಆಕೆಗೆ ಮಾತ್ರ..ಅವನನ್ನು ಪಡೆದು..

ಎಲ್ಲವನ್ನು ತೊರೆದ

     ಹಮ್ಮು  ಮತ್ತು  गम ಗಳ ನಡುವಿನ ನಡುಗುವ ಸೇತು


ಈಗವರು ಮಾತಾಡುವುದಿಲ್ಲ

ದೇಹಗಳು ಮಾತಾಡುತ್ತವೆ.


ನಂತರ ಮೌನವಿರುತ್ತದೆ..ಅಷ್ಟೇ!

ಮೌನಕ್ಕೆ ನೂರು ಅರ್ಥ...

ರಂಗೋಲಿಯಂಥ ಹುಡುಗ

ರಂಗೋಲಿಯಂಥ ಹುಡುಗ, 


ಇಂದು ನಿನ್ನ ಆ ಮಾತಿನ

ಚಿಕ್ಕಿಯಿಂದ ಈ ಮಾತಿನ ಚಿಕ್ಕಿಗೆ

ಎಳೆಯುತ್ತಿದ್ದ ಸರಳ ವಕ್ರ ರೇಖೆಗಳನ್ನು 

ಮಿಸ್ ಮಾಡಿಕೊಳ್ಳುತ್ತಿದ್ದೇನೆ, 


ಯಾಕೆ ಹೀಗೆ..

ನಿನಗೀಗ ಬೆಳಗಿನ ಜಾವದ 

ಸಿಹಿ ನಿದ್ದೆ.. 

ಕನಸಲ್ಲಿ ನಗುತ್ತಿದ್ದೀಯಾ ? 

ಏನೋ ಕನವರಿಸುತ್ತಿದ್ದಿಯ? 


ನನಗೊಂದು ದಿವ್ಯ ಶಕ್ತಿ 

ಇದ್ದಿದ್ದೇ ಆದರೆ

ನಾ ಒಮ್ಮೆ ನಿನ್ನ ಕೋಣೆಯನ್ನೊಮ್ಮೆಹೊಕ್ಕಿ 

ನಿನ್ನ ಹಣೆ ನೇವರಿಸಿ

ಬರುತ್ತಿದ್ದೆ... 


ಹ್ಮ್ ಅಷ್ಟೇ!

ಹೆಚ್ಚು ಕಡಿಮೆ ಏನು ಇಲ್ಲ!

ನೀ ಕಾಡುವುದಿಲ್ಲ ಪ್ರೇಮಿಯಂತೆ, 

ನೀ ಬೇಡುವುದಿಲ್ಲ ಯಾಚಕನಂತೆ, 

ನೀ ನಿರ್ಲಿಪ್ತ , ನಿತ್ಯತೃಪ್ತ


ಹಾಗಂದು ಕೊಳ್ಳುತ್ತಲೇ

ಮತ್ತಷ್ಟು ತುಂಟತನ ಮಾಡುವ

ಪುಟ್ಟ ಪೋರನಾಗುತ್ತಿ| 


ಗದರಬೇಕು ಅನಿಸುತ್ತೆ, 

ನಿನಗೆ ನಾ , ನನಗೆ ನೀ ಕಾಡಿದಷ್ಟು 

ನೆನಪಾದಷ್ಟು ಆಗುವುದಿಲ್ಲ

ಗೊತ್ತು... 

ಅದು ನಿನ್ನ ಸಮಸ್ಯೆಯಲ್ಲಬಿಡು



ನೀನಿರುವುದಕ್ಕೇ,

ನಾನು ಮಾತ್ರ ಶ್ರಾವಣದ ನವಿಲು.. 

ಚೈತ್ರದ ಚಿಗುರು, ಒಗರು ಒಗರು

ನನ್ನದೊಂದು ಅವಸ್ಥೆ...

ನಾನೀಗ ನಿನ್ನ

ಧ್ಯಾನಸ್ಥೆ.. 

- ಸಖಿ

ಆತ್ಮ ಸಾಂಗತ್ಯ

ಶತ ಶತಮಾನಗಳಿಂದ, ಈ ಬಿಡುವಿರದ ಯಾವಾಗಲೂ ನಾಳೆಯಬಗ್ಗೆಯೇ ಯೋಚಿಸುವ ಪ್ರಸ್ತುತ ಕಾಲಘಟ್ಟದ ವರೆಗೂ, ಮನುಷ್ಯ ಅಂದು ಇಂದು ಮುಂದೂ ಎಂಬಂತೆ ಪ್ರೀತಿಯ ಹಂಬಲವನ್ನು ಎಗ್ಗಿಲ್ಲದೆ ಉಳಿಸಿಕೊಂಡು ಬಂದಿದ್ದಾನೆ, ಪ್ರೀತಿ ಎಂಬುದೇ ಹಾಗೆ ನಮ್ಮ ನೋವುಗಳಿಗೆ ಮುಲಾಮು ಜೊತೆಗೆ ಅಷ್ಟೇ ನೋವು ಕೊಡುವ ಅದೃಶ್ಯ ಆಯುಧವೂ ಕೂಡ.


ಪ್ರೀತಿಗೆ ಹಲವು ಮುಖ ಹೆತ್ತವರ ವಾತ್ಸಲ್ಯ ಭರಿತ ಪ್ರೀತಿ, ಒಡಹುಟ್ಟಿದವರ ಅಕ್ಕರೆಯ ಪ್ರೀತಿ, ಕಾಳಜಿ ಸ್ನೇಹದಿಂದ ಒಸರುವ ಗೆಳೆತನದ ಪ್ರೀತಿ, ನಮ್ಮ ಮೇಲೆ ನಂಬಿಕೆ ಇಟ್ಟವರು ಕೊಡುವ ಗೌರವ ಪೂರ್ವಕ ಪ್ರೀತಿ. ಜೀವನದುದ್ದಕ್ಕೂ ಜೊತೆಗಿರುತ್ತೇವೆ ಎಂದು ಸಪ್ತಪದಿ ತುಳಿದ ಗಂಡು ಹೆಣ್ಣಿನ ನಡುವಿನ ದಾಂಪತ್ಯ ಪ್ರೀತಿ, ಅಪ್ಪ ಅಮ್ಮನ ಮೇಲೆ ಮಕ್ಕಳಿಗಿರುವ ಹಕ್ಕಿನ ಪ್ರೀತಿ, ಗುರು ಶಿಷ್ಯರ ನಡುವಿನ ದಿವ್ಯ ಪ್ರೀತಿ, ದೇವರು ಎಂಬ ಪರಿಕಲ್ಪನೆಯ ಜೊತೆಗೇ ಹುಟ್ಟಿಕೊಳ್ಳುವ ಸಮರ್ಪಣಾ ಭಾವದ ಪ್ರೀತಿ, ಈ ಪಟ್ಟಿ ಮುಗಿಯುವಂಥದ್ದಲ್ಲ. 



ಆದರೂ ಎಲ್ಲಕ್ಕಿಂತ ಹೆಚ್ಚು ಚರ್ಚಿತವಾಗಿ, ಪುಸ್ತಕ ಗ್ರಂಥ , ಪುರಾಣಗಳನ್ನು ಬರೆಸಿಕೊಂಡದ್ದು ಮಾತ್ರ ಈ ಗಂಡು ಹೆಣ್ಣಿನ ನಡುವಿನ ಅದಮ್ಯ ಪ್ರೀತಿ. ಪ್ರೀತಿಯ ಪರಿಭಾಷೆಯನ್ನು ಒಂದೇ ವ್ಯಾಖ್ಯೆಯಲ್ಲಿ ಹಿಡಿದಿಡಲಾಗದಿದ್ದರೂ ಗಂಡು ಹೆಣ್ಣಿನ ನಡುವೆ ಹುಟ್ಟುವ ದೈಹಿಕ ಆಕರ್ಷಣೆ ಪ್ರೀತಿಯ ಬಹುಮುಖ್ಯ ಕಾರಣಗಳಲ್ಲೊಂದು.

ನೋಟ , ಮಾತುಗಳಿಂದ ಶುರುವಾದ ಪ್ರೀತಿ, ಮಿಲನದ  ಮಾಧುರ್ಯವನ್ನು ಮೇಳೈಸಿಕೊಂಡು ಪರಿಪೂರ್ಣವಾಗಲು ಹಾತೊರೆಯುತ್ತದೆ. ಹಲವಾರು ಬಾರಿ ದೈಹಿಕ ಕಾಂಕ್ಷೆಗಳಿಗೆ ಹುಟ್ಟಿಕೊಂಡ ನಾಯಿಕೊಡೆಯಂಥ ಪ್ರೀತಿಯ ಅಪಭ್ರಂಶಗಳು ಈ ಜಗದಲ್ಲಿ ಲೆಕ್ಕವಿಲ್ಲದಷ್ಟು. 


ಒಂದು ಪ್ರೇಮ ಏರ್ಪಟ್ಟಿದೆ ಎಂದರೆ ಅದಕ್ಕೊಂದು ಹೆಸರು ಬೇಕೇಬೇಕು, ಜಗತ್ತು ಕೇಳುತ್ತದೋ ಇಲ್ಲವೋ ಅದು ಕೇಳುವ ಮೊದಲು ನಾವೇ  ಆ ಬಾಂಧವ್ಯಕ್ಕೆ ಹೆಸರುಕೊಟ್ಟು ಜಗತ್ತಿಗೆ ಸಾರಿ ಹೇಳಬೇಕು ಅನ್ನುವ ತುಡಿತದಲ್ಲಿರುತ್ತೇವೆ. 

ಆದರೆ ಗಂಡು ಹೆಣ್ಣಿನ ಪ್ರೀತಿ ಬರೀ ದೈಹಿಕ ಆಕರ್ಷಣೆಯೇ?ಅಷ್ಟಕ್ಕೂ ಪ್ರೀತಿಸುವ ಮನಸುಗಳು ತಮ್ಮ ಸಂಗಾತಿಯಲ್ಲಿ ಹುಡುಕುವ ಬಯಸುವ ಗುಣಗಳೇನು? ಎಂಬುದಕ್ಕೆ ಇನ್ನು ಉತ್ತರ ಸಿಕ್ಕಿಲ್ಲ. ಇವೆಲ್ಲವನ್ನು ಮೀರಿದ ಬರೀ ಭಾವಬಂಧುರದಲ್ಲಿ ಹುಟ್ಟುಕೊಳ್ಳುವ ಸ್ವಾರ್ಥ ರಹಿತ ಪ್ರೀತಿ ಈ ಜಗದಲ್ಲಿದೆಯೇ ?


 ಹೀಗೆ ಯೋಚಿಸುವಾಗಲೆಲ್ಲ ನನ್ನ ಮನಸ್ಸಿನಲ್ಲಿ ಅಕ್ಕನ ವಚನಗಳಲ್ಲಿ ಬರುವ 'ಆತ್ಮ ಸಾಂಗತ್ಯ' ಎಂಬ ಪದ ಸಿಕ್ಕಿ ಹಾಕಿಕೊಳ್ಳುತ್ತದೆ.

ಎಷ್ಟು ಚಂದದ ಕಲ್ಪನೆ ಇದು.ನಾವು ದೇಹದ ಬಯಕೆಗೆ, ಇಹದ ಬೇಕು ಬೇಡಗಳಿಗೆ ನಮ್ಮ ನೋವು ನಲಿವುಗಳಿಗೆ ಸ್ಪಂದಿಸಲೆಂದೇ ಸಂಗಾತಿಯನ್ನು ಹುಡುಕುತ್ತೇವೆ, ಎಂಥ ಆದರ್ಶ ಪ್ರೇಮಿಗಳು, ಗಂಡ ಹೆಂಡತಿ, ಆದರೂ ಆ ಬಾಂಧವ್ಯದಲಿ ಪುಟ್ಟ ಸ್ವಾರ್ಥವಿದ್ದೆ ಇದೆ. ಆತ್ಮ ಸಾಂಗತ್ಯ ಎಂಬುದು ಇದೆಲ್ಲದಕ್ಕೆ ಮೀರಿದ್ದು. 


 ಆತ್ಮ ಸಾಂಗತ್ಯ ಭಿನ್ನವಾಗಿ ತೋರುವುದೇ ಇಲ್ಲಿ, ಈ ರೀತಿಯ ಪ್ರೀತಿಯಲ್ಲಿ ಎಂದಿಗೂ ದೈಹಿಕ ಕಾಂಕ್ಷೆಗಳು ಇರುವುದಿಲ್ಲ. ಅದು ಮಾನಸಿಕ ಸಾಂಗತ್ಯಕ್ಕೆ ಹಾತೊರೆಯುತ್ತಿರುವಾಗ ಸಿಕ್ಕ ಪ್ರೇಮದ ಸಿಹಿನೀರ ಝರಿ. ಇಂಥ ಬಾಂಧವ್ಯಗಳನ್ನು ನಮ್ಮಸುತ್ತಲಿನ ಜಗತ್ತಿಗೆ ವಿವರಿಸುವುದು ನಿಜಕ್ಕೂ ಕಷ್ಟ. ಅದರಲ್ಲೂ ಒಂದು ಹೆಣ್ಣು ಗಂಡಿನ ನಡುವೆ ಒಂದು ಚಂದದ ಮಾತಿನ ವಿನಿಮಯವಾದರೂ ಲೆಕ್ಕ ಕೇಳುವ ಈ ಜಗತ್ತಿಗೆ ಲಾಭ ನಷ್ಟ , ಬೇಕು ಬೇಡದ ಹಂಗಿಲ್ಲದೆ ಇರುವ ಸಂಬಂಧದ ಬಗ್ಗೆ ತಿಳಿಸಿ ಹೇಳಿದರೂ ಅರ್ಥವಾಗುವುದೇ?ಅಂಥ ಪರಿಪಕ್ವತೆ ನಮ್ಮ ಮನಸ್ಸುಗಳಿಗಿದೆಯೇ? 


ನೀವು ಮೊದಲ ಬಾರಿಗೆ ಯಾರನ್ನೋ ಭೇಟಿ ಆದಾಗಲೇ ಅವರನ್ನು ಅದೆಷ್ಟೋ ವರ್ಷದಿಂದ ಬಲ್ಲೆವು , ಅರೇ! ಇವರನ್ನೇ ಅಲ್ಲವೇ ನಾ ಇಷ್ಟು ದಿನದಿಂದ ಹುಡುಕುತ್ತಿದ್ದುದು, ನನ್ನ ಬದುಕಿನ ಚಿತ್ರದ ಬಣ್ಣ ಬಳಿಯದೆ ಬಿಟ್ಟ ಆ ಖಾಲಿಯನ್ನು ರಂಗಾಗಿಸಲು ,ನಮ್ಮನ್ನು  ಪರಿಪೂರ್ಣ ಮಾಡಲೆಂದೇ ನಮ್ಮೆಡೆಗೆ ನಡೆದು ಬಂದವರು ಅನ್ನಿಸಿ ಅವರೆಡೆಗೆ ಮನಸ್ಸು ವಾಲುತ್ತಲೇ ಹೋಗುತ್ತದೆ. ಹಾಗೆಂದು ನೀವು ದಿನ ಭೇಟಿ ಆಗಬೇಕು ಜೊತೆಯಲ್ಲಿ ಸಮಯ ಕಳೆಯಬೇಕು ಎಂಬ, ನಿಮ್ಮ ದಿನಚರಿಯನ್ನು ಒಪ್ಪಿಸಬೇಕು 

ಜನ್ಮದಿನವನ್ನು ನೆನಪಿಡಬೇಕು, ಉಡುಗೊರೆಗಳ ವಿನಿಮಯವಾಗಬೇಕೆಂಬ ಯಾವ ನಿಯಮಗಳಿಗೂ ಒಳಗಾಗದ ಅನನ್ಯ ಬಂಧವಿದು. 


ಆ ಸಂಗಾತಿಯು ಅಷ್ಟೇ, ನಮ್ಮನ್ನು ನಗಿಸುತ್ತಾರೆ ಅತ್ತಾಗ ಕಣ್ಣೊರೆಸುತ್ತಾರೆ,ನಮ್ಮ ಪಥದಿಂದ ಸ್ವಲ್ಪ ಅತ್ತಿತ್ತ ಸರಿದರು ಎಚ್ಚರಿಸುತ್ತಾರೆ, ಪ್ರೀತಿ ಗೌರವದಿಂದಲೇ ನಮ್ಮ ಅಂತರಂಗದ ಊನಗಳನ್ನೂ ಸ್ವೀಕರಿಸುತ್ತಾರೆ. 

ಆ ಜೀವದ ಎದುರು ಯಾವ ಗುಟ್ಟುಗಳು ಇರುವುದಿಲ್ಲ, ನಾನೇ ಸರಿ ಎಂಬ ವಾದ ವಿವಾದಗಳು ಇರುವುದಿಲ್ಲ. 

ಜೊತೆ ಜೊತೆಗೆ ಬೆಳೆಯುವ ಬೆಳೆಸುವ ಪ್ರೇಮದ ಪರಿಯದು.ಆ ಜೀವದ ಸಾಂಗತ್ಯದ ಹೊರತು ಇನ್ನೇನೂ  ಬಯಸುವುದಿಲ್ಲ ಆ ಜೀವ. 


ಮೊದಲೆಲ್ಲ ಪತ್ರ ಮೈತ್ರಿ ಎಂಬ ಸುಂದರ ಲೋಕವೊಂದಿತ್ತು 

ಅಲ್ಲಿ ಅಕ್ಷರಗಳಿಂದ ಮಾತ್ರವೇ ಮನಸ್ಸನ್ನು ಆವರಿಸಿ ಹೊಸತೊಂದು ಜಗತ್ತನ್ನು ಪರಿಚಯಿಸಿ ಪುಸ್ತಕ, ಗಜಲ್,ಜಗತ್ತಿನ ಕೌತುಕಗಳ ಬಗ್ಗೆ ಬರೆದು ಎಷ್ಟೆಲ್ಲ ಕಲಿಯಲು ಇದೆ ಎಂದು ತೋರಿಸಿಕೊಟ್ಟ ಆ ಪತ್ರಮಿತ್ರರು ಆ ಕಾಲದ ಆತ್ಮಸಂಗಾತಿಗಳು.


ಪತ್ರದ ಕಾಲ ಮುಗಿದು ಫೋನ್ ಬಂದಾಗ ಪ್ರೀತಿಯು ಅಕ್ಷರಗಳಿಂದ ಮಾತಿಗೆ ಹರಿಯಿತು. ನಂತರ orkut , facebook, twitter ಗಳ ಕಾಲದಲ್ಲಿ ನಮ್ಮಂತೆ ಯೋಚಿಸುತ್ತಾರೆ, ಎಷ್ಟು ಸಾಮ್ಯತೆ ನಮ್ಮ ಆಲೋಚನೆಗಳಲ್ಲಿ ಎಂಬ ಭಾವ ಮೂಡಿಸಿದ ಬಂಧಗಳು ಹಲವು. 


ಇತ್ತೀಚಿನ ದಿನಗಳಲ್ಲಿ, ಬರಹ ಫೋಟೋ ವಿಡಿಯೋ ಹಂಗಿಲ್ಲದೆ ಬರೀ ಧ್ವನಿಯ ಮೂಲಕ ಹಲವು ಮನಸುಗಳನ್ನು ಒಂದೆಡೆ ಸೇರಿಸಿ ಮನಸಿನಮಾತನ್ನು ಕೇಳಲು ಶ್ರೋತೃಗಳನ್ನು ಒದಗಿಸಿ ಕೊಟ್ಟಿದ್ದು ಕ್ಲಬ್ ಹೌಸ್ ಎನ್ನುವ ಜಾಲತಾಣ. ಇಲ್ಲಿ ನನಗೆ ಹಾಡು ಮಾತಿನ ಸಂತೆಯಲ್ಲಿ ಹಾಗೆ ಒಮ್ಮೆಲೇ ಸಿಕ್ಕು 

ಪ್ರೀತಿಯನ್ನಷ್ಟೇ ಕೊಡುತ್ತ, ಎಲ್ಲಿಯೂ ಸಭ್ಯತೆಯ ಚೌಕಟ್ಟು ಮೀರದ ಒಲವ ತುಂಬಿ, ಹೊಸ ಹೊಸ ಸವಾಲುಗಳನ್ನು ಕೊಟ್ಟು ಅದನ್ನು ಬಿಡಿಸಿ ಸಾಧಿಸಿ ಎದುರಿಗೆ ನಿಂತಾಗಲೊಮ್ಮೆ ಅಪ್ಪನಂತೆ ಹೆಮ್ಮೆ ಪಡುತ್ತ, ಅಣ್ಣನಂತೆ ನೆತ್ತಿ ನೇವರಿಸುವ, ಅಮ್ಮನಂತೆ ಪ್ರೀತಿಯ ಮಾಡಿಲಾಗುವ ತಿದ್ದಿ ಬುದ್ದಿ ಹೇಳಿ ಗುರುವಾಗುವ ವ್ಯಕ್ತಿತ್ವ ನನಗೆ ಆತ್ಮಸಂಗಾತಿ ಎನಿಸುತ್ತಾರೆ.


ಆತ್ಮ ಸಾಂಗತ್ಯ ಎಂಬುದು, ಭಾಷೆ, ಗಡಿ ,ವಯಸ್ಸು ಎಂಬ ಮೆರೆಯನ್ನು ಮೀರಿದ್ದು. ಮನದ ಭಾವಗಳನ್ನು ಬರಿದು ಮಾಡಿಕೊಳ್ಳುತ್ತಲೇ ಮತ್ತೆ ಮತ್ತೆ ತುಂಬಿಕೊಳ್ಳುವ ಈ

ಆತ್ಮಸಖ್ಯಕ್ಕೆ ಪ್ರತಿಯೊಬ್ಬರ ಪರಿಭಾಷೆ ಬೇರೆಯೇ ಇರಬಹುದು. 

ನಾವೆಲ್ಲರೂ ಮಾತಿನಲ್ಲಿ ಪ್ಲೇಟಾನಿಕ್ ಪ್ರೀತಿ ಎಂದು ಉಲ್ಲೇಖಿಸುತ್ತೇವೆ, ಅಂಥ ಪ್ರೀತಿಯನ್ನು ಎಲ್ಲರೂ ಬಯಸುತ್ತೇವೆ ಆದರೆ ಆ ಪ್ರೀತಿಗೆ ಬೇಕಾದ ಮನೋಸ್ಥೈರ್ಯವನ್ನು , ಭಾವನೆಗಳಲ್ಲಿ ಲಾಲಿತ್ಯ ವನ್ನು ಬೆಳೆಸಿಕೊಳ್ಳುವ ಅಗತ್ಯತೆ ಬಹುವಾಗಿ ಇದೆ. 

ಸಂಬಂಧಗಳಿಗೆ ಹೆಸರುಕೊಟ್ಟು ಅದರ ಸುತ್ತ ಬೇಲಿ ಹಾಕಿ ಅದನ್ನು ಜಗತ್ತಿಗೆ ಪರಿಚಯಿಸುವ ತುರ್ತುಗಳು ನಿಂತರೆ  ನಮ್ಮ ಸುತ್ತ  ಆತ್ಮ ಸಾಂಗತ್ಯ, ಪ್ಲೇಟಾನಿಕ್ ಪ್ರೇಮದ ಉದಾಹರಣೆಗಳು ಹೆಚ್ಚಾಗಬಹುದೇನೋ.